ಒಳ್ಳೇದನ್ನು ಮಾಡಿ, ಶ್ಲಾಘನೆಯನ್ನು ಪಡೆದುಕೊಳ್ಳಿ!
1 “ನಾನು ಬೇರೆ ಜನರಲ್ಲಿ ಕಂಡಿರದಂಥ ಪ್ರಶಾಂತತೆ ಅವರಲ್ಲಿದೆ.” “ಈ ಗುಂಪು ನಮ್ಮೊಂದಿಗಿರುವುದು ಸಂತೋಷದ ಸಂಗತಿಯಾಗಿದೆ.” ಒಂದು ಸಂಸ್ಥೆಯೋಪಾದಿ ನಮಗಿರುವ ಒಳ್ಳೇ ಹೆಸರನ್ನು ಒತ್ತಿಹೇಳುತ್ತಾ, ಕಳೆದ ವರ್ಷದ ಜಿಲ್ಲಾ ಅಧಿವೇಶನಗಳ ನಂತರ ಪ್ರೇಕ್ಷಕರಿಂದ ಪಡೆಯಲಾದ ಅನೇಕ ಸಕಾರಾತ್ಮಕ ಹೇಳಿಕೆಗಳಲ್ಲಿ ಇವು ಉದಾಹರಣೆಗಳಾಗಿವೆ. (ಜ್ಞಾನೋ. 27:2; 1 ಕೊರಿಂ. 4:9) ಅಂತಿಮವಾಗಿ, ಇಂತಹ ಸ್ತುತಿಯು ಯೆಹೋವನಿಗೆ ಸಲ್ಲುತ್ತದೆ. (ಮತ್ತಾ. 5:16) ದೇವರನ್ನು ಸ್ತುತಿಸಲಿಕ್ಕಾಗಿರುವ ಇನ್ನೊಂದು ಅತ್ಯುತ್ತಮವಾದ ಅವಕಾಶವು, ಈ ವರ್ಷದ “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನದಲ್ಲಿ ನಮ್ಮ ಮುಂದೆ ಇದೆ.
2 ಅಧಿವೇಶನಗಳಲ್ಲಿ ಯೋಗ್ಯವಾದ ನಡತೆಯ ಕುರಿತಾದ ಪ್ರೀತಿಯ ಮರುಜ್ಞಾಪನಗಳನ್ನು ನಾವು ಪ್ರತಿ ವರ್ಷ ಪಡೆದುಕೊಳ್ಳುತ್ತೇವೆ. ಏಕೆ? ಏಕೆಂದರೆ, ಈ ಲೋಕದ ಮನೋಭಾವ, ಉಡುಪು, ಮತ್ತು ವರ್ತನೆಯು ಹದಗೆಡುತ್ತಿರುವಾಗ, ನಾವಾದರೋ ಅದನ್ನು ಹಿಂಬಾಲಿಸಲು ನಿರಾಕರಿಸುತ್ತೇವೆ. ನಾವು ನಮ್ಮ ಒಳ್ಳೇ ಹೆಸರನ್ನು ಕೆಡಿಸಲು ಬಯಸುವುದಿಲ್ಲ. (ಎಫೆ. 2:2; 4:17) ಈ ಮುಂದಿನ ಎಚ್ಚರಿಕೆಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳೋಣ.
3 ಹೋಟೆಲ್ಗಳಲ್ಲಿ ಒಳ್ಳೇದನ್ನು ಮಾಡಿರಿ: ನಾವು ಪ್ರಾಮಾಣಿಕ ಜನರೆಂದು ಪ್ರಖ್ಯಾತರಾಗಿದ್ದೇವೆ. (ಇಬ್ರಿ. 13:18) ಹಾಗಾಗಿ, ನಮ್ಮ ಹೋಟೆಲ್ ರೂಮ್ನಲ್ಲಿ ಎಷ್ಟು ಜನರು ಉಳಿಯುತ್ತಾರೆ ಎಂಬುದನ್ನು ನಾವು ಮುಚ್ಚುಮರೆಯಿಲ್ಲದೆ ತಿಳಿಸಬೇಕು. ರೂಮ್ನಲ್ಲಿ ಅಡಿಗೆಮಾಡಲು ಅನುಮತಿಯಿಲ್ಲದಿರುವಲ್ಲಿ, ನಾವು ಅಡಿಗೆಮಾಡಬಾರದು. ಕಳೆದುಹೋದ ಟವಲ್ಗಳಿಗಾಗಿ ಹೊಸತಾದದ್ದನ್ನು ಇಡುವ ಆವಶ್ಯಕತೆಯು ಎಂದೂ ಎದ್ದಿರದ ಕಾರಣ, ಯೆಹೋವನ ಸಾಕ್ಷಿಗಳಿಗಾಗಿ ರೂಮ್ಗಳ ಬೆಲೆಯನ್ನು ಕಡಿಮೆಯಾಗಿಡಲು ಸಾಧ್ಯವಾಯಿತು ಎಂದು ಒಬ್ಬ ಮ್ಯಾನೇಜರ್ ಹೇಳಿದರು. ಹೋಟೆಲ್ ಸ್ವತ್ತನ್ನು ಒಳ್ಳೇ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆಂಬುದು ಅವರಿಗೆ ಗೊತ್ತಿದೆ. ಖಂಡಿತವಾಗಿಯೂ ನಾವು ಹೋಟೆಲ್ಗಳಿಂದ “ನೆನಪಿಗಾಗಿ” ಯಾವುದೇ ವಸ್ತುಗಳನ್ನು ತೆಗೆದುಕೊಂಡುಹೋಗುವುದಿಲ್ಲ. ಬದಲಾಗಿ, ಎಲ್ಲಿ ಬಕ್ಷೀಸನ್ನು ಕೊಡುವ ರೂಢಿಯಿದೆಯೋ ಅಲ್ಲಿ, ನೀಡಲ್ಪಟ್ಟ ಸೇವೆಗಳಿಗಾಗಿ ಗಣ್ಯತೆಯನ್ನು ತೋರಿಸಲಿಕ್ಕಾಗಿ ತಕ್ಕಷ್ಟು ಬಕ್ಷೀಸನ್ನು ಕೊಟ್ಟುಹೋಗಿ. ಮತ್ತು ಹೋಟೆಲ್ ಸಿಬ್ಬಂದಿಯೊಂದಿಗೆ ಯಾವಾಗಲೂ ವಿನಯದಿಂದ ಹಾಗೂ ತಾಳ್ಮೆಯಿಂದ ವ್ಯವಹರಿಸಿ.
4 ನಮ್ಮ ಮಕ್ಕಳು ನಯವಾಗಿ ಮತ್ತು ವಿಧೇಯ ರೀತಿಯಲ್ಲಿ ವರ್ತಿಸುತ್ತಿರುವುದನ್ನು ನೋಡುವಾಗ, ಅದನ್ನು ಗಮನಿಸುವವರು ವಿಸ್ಮಯಗೊಳ್ಳುತ್ತಾರೆ. (ಎಫೆ. 6:1, 2) ಹೆತ್ತವರೇ, ನಿಮ್ಮ ಮಕ್ಕಳು ಇತರರಿಗೆ ತೊಂದರೆ ಕೊಡದಂತೆ ಅವರ ಮೇಲೆ ಗಮನವಿಡಿ. ಅವರು ಈಜು ಕೊಳವನ್ನು ಅಥವಾ ಇನ್ನಿತರ ಮನೋರಂಜನೆಯ ವ್ಯವಸ್ಥೆಗಳನ್ನು ಉಪಯೋಗಿಸುವಾಗಲೂ ಇದು ಅನ್ವಯವಾಗುತ್ತದೆ. ಬಾಗಿಲುಗಳನ್ನು ದಢಾರೆಂದು ಮುಚ್ಚಬಾರದು ಮತ್ತು ಗಟ್ಟಿಯಾಗಿ ಶಬ್ದಮಾಡಬಾರದು. ಇದನ್ನು ವಿಶೇಷವಾಗಿ ರಾತ್ರಿ ಸಮಯದಲ್ಲಿ ಮಾಡಬಾರದು.
5 ಸೌಕರ್ಯವನ್ನು ಉಪಯೋಗಿಸುತ್ತಿರುವ ಸಾಕ್ಷ್ಯೇತರ ಹೋಟೆಲ್ ಅತಿಥಿಗಳಿಗೆ ಪರಿಗಣನೆ ತೋರಿಸುವ ಮೂಲಕ ನಾವು ಒಳ್ಳೇದನ್ನು ಮಾಡಬಹುದು. ಕೆಲವು ಹೋಟೆಲ್ಗಳು, ಅಧಿವೇಶನದ ಪ್ರತಿನಿಧಿಗಳು ಐಸ್ ಮೆಷಿನ್ಗಳಲ್ಲಿರುವ ಎಲ್ಲಾ ಐಸನ್ನು ತಮ್ಮ ಕೂಲರ್ಗಳನ್ನು ತುಂಬಿಸಲಿಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ ಎಂದು ದೂರುಕೊಡುತ್ತವೆ. ತದ್ರೀತಿಯಲ್ಲಿ, ಕೊಡುಗೆಯ ರೂಪದಲ್ಲಿ ಕೊಡಲ್ಪಡುವ ಆಹಾರವನ್ನು ನಂತರದ ಉಪಯೋಗಕ್ಕಾಗಿ ತೆಗೆದುಕೊಂಡು ಹೋಗುವುದು ಅಥವಾ ನಮ್ಮ ಕಂಟೇನರ್ಗಳಲ್ಲಿ ಕಾಫಿಯನ್ನು ತುಂಬಿಸಿಕೊಳ್ಳುವುದು ಯೋಗ್ಯವಾಗಿರುವುದಿಲ್ಲ. ಹೋಟೆಲ್ ನಿಯಮಗಳ ಸಂಬಂಧದಲ್ಲಿ ನಮಗೆ ಮಾತ್ರ ವಿನಾಯಿತಿ ಇದೆ ಎಂದು ನಾವೆಂದೂ ಭಾವಿಸಬಾರದು.
6 ಅಧಿವೇಶನದ ಸ್ಥಳದಲ್ಲಿ ಒಳ್ಳೇದನ್ನು ಮಾಡಿರಿ: ಕೆಲವು ಪ್ರತಿನಿಧಿಗಳು ಅಟೆಂಡೆಂಟರೊಂದಿಗೆ ಸಹಕರಿಸಲು ನಿರಾಕರಿಸುವುದನ್ನು, ಮಾತ್ರವಲ್ಲದೆ ಅವರೊಂದಿಗೆ ಅಕ್ರೈಸ್ತ ರೀತಿಯಲ್ಲಿ ಮಾತಾಡುವುದನ್ನೂ ಗಮನಿಸಲಾಗಿದೆ. ನಮ್ಮ ಸಹೋದರರು ಕೊಟ್ಟ ಸಲಹೆಗಳನ್ನು ಅನುಸರಿಸಲು ತಪ್ಪಿಹೋಗಿದ್ದರಿಂದ ಮತ್ತು ಕಾನೂನಿನ ಅನುಮತಿಯಿಲ್ಲದಂತಹ ಜಾಗದಲ್ಲಿ ಪಾರ್ಕಿಂಗ್ ಮಾಡಿದ್ದರಿಂದ, ಕೆಲವು ಪ್ರತಿನಿಧಿಗಳ ಕಾರ್ಗಳನ್ನು ಪೊಲೀಸರು ಎಳೆದುಕೊಂಡುಹೋಗಬೇಕಾಗಿ ಬಂತು. ನಿಶ್ಚಯವಾಗಿಯೂ, ನಾ-ಮೊದಲು ಎಂಬ ಮನೋಭಾವವು ಒಬ್ಬನನ್ನು ಒಳ್ಳೇದನ್ನು ಮಾಡುವವನಾಗಿ ಗುರುತಿಸುವುದಿಲ್ಲ, ಮಾತ್ರವಲ್ಲದೆ ಯೆಹೋವ ದೇವರಿಗೆ ಸ್ತುತಿಯನ್ನೂ ತರುವುದಿಲ್ಲ. ಆದುದರಿಂದ, ನಾವು ಪ್ರೀತಿಯಿಂದ, ತಾಳ್ಮೆಯಿಂದ, ಮತ್ತು ಸಹಕಾರ ಮನೋಭಾವದಿಂದ ನಡೆದುಕೊಳ್ಳೋಣ.—ಗಲಾ. 5:22, 23, 25.
7 ಬೆಳಗ್ಗೆ 8:00 ಗಂಟೆಗೆ ಅಧಿವೇಶನ ಸ್ಥಳದ ಪ್ರವೇಶದ್ವಾರಗಳು ತೆರೆಯಲ್ಪಡುವಾಗ, ಕೆಲವು ಸಹೋದರ ಸಹೋದರಿಯರು “ಅತ್ಯುತ್ತಮವಾದ” ಸೀಟ್ಗಳನ್ನು ಪಡೆದುಕೊಳ್ಳಲಿಕ್ಕಾಗಿ ಓಡುವುದನ್ನು, ನುಗ್ಗುವುದನ್ನು ಮತ್ತು ತಳ್ಳುವುದನ್ನು ನೋಡಬಹುದು. ಈ ರೀತಿಯ ವರ್ತನೆಯಿಂದಾಗಿ ಕೆಲವರಿಗೆ ಗಾಯಗಳಾಗಿವೆ. ಮಧ್ಯಾಹ್ನ ತಿನ್ನಲಿಕ್ಕಾಗಿ ಲಘುವಾದ ಊಟವನ್ನು ತರಬೇಕೆಂದು ಸಲಹೆ ಕೊಡಲ್ಪಟ್ಟಿರುವಾಗ, ಒಂದು ದೊಡ್ಡ ಊಟದ ಏರ್ಪಾಡನ್ನು ಮಾಡುವುದು ಯೋಗ್ಯವಾಗಿರುವುದಿಲ್ಲ. ಇದು ಒಂದು ಚಿಕ್ಕ ಪ್ರವಾಸದಲ್ಲಿ ಅಥವಾ ತದ್ರೀತಿಯ ಒಟ್ಟುಗೂಡುವಿಕೆಗಳಲ್ಲಿ ಸಾಮಾನ್ಯವಾಗಿರುವಂತೆ, ಒಂದು ಪಿಕ್ನಿಕ್ ಅಥವಾ ಪಾರ್ಟಿಯ ಭಾವನೆಯನ್ನು ಉಂಟುಮಾಡಬಹುದು.
8 ಉಡುಪು ಮತ್ತು ಕೇಶಾಲಂಕಾರದ ಮೂಲಕ ಒಳ್ಳೇದನ್ನು ಮಾಡಿರಿ: ಕಳೆದ ವರ್ಷದ ಜಿಲ್ಲಾ ಅಧಿವೇಶನದ ನಂತರ, ಒಂದು ದೊಡ್ಡ ಮಹಾನಗರ ವಾರ್ತಾಪತ್ರದ ಸಂಪಾದಕನು ಬರೆದದ್ದು: “ಎಲ್ಲಕ್ಕಿಂತಲೂ ಮಿಗಿಲಾಗಿ, ಸಾಕ್ಷಿಗಳ ನಡವಳಿಕೆಯೇ ಹೆಚ್ಚು ಮನತಟ್ಟುವಂಥದ್ದಾಗಿತ್ತು. ಇಷ್ಟು ಜನರು ಈ ರೀತಿಯ ಘನತೆ ಮತ್ತು ಗೌರವದಿಂದ ನಡೆದುಕೊಳ್ಳುತ್ತಿರುವುದನ್ನು ನೋಡುವುದು ಎಷ್ಟು ಚೈತನ್ಯದಾಯಕವಾಗಿತ್ತು. ಅತ್ಯುತ್ತಮ ಉಡುಗೆಯನ್ನು ತೊಟ್ಟುಕೊಂಡವರಾಗಿದ್ದು, ಬೇರೆ ಬೇರೆ ಕುಲ ಮತ್ತು ವಂಶಗಳ ಹಿನ್ನೆಲೆಗಳನ್ನು ಪ್ರತಿನಿಧಿಸುವಂತಹ ನೂರಾರು ಕುಟುಂಬಗಳು ಗದ್ದಲವಿಲ್ಲದೆ ಸಭಾಂಗಣವನ್ನು ಪ್ರವೇಶಿಸಿದವು. ಇವರ ವರ್ತನೆ, ಸಭಾಂಗಣದಲ್ಲಿ ಒಟ್ಟುಗೂಡುವ ಅಧಿಕಾಂಶ ಸಮೂಹಗಳಿಗಿಂತ ತೀರ ವ್ಯತಿರಿಕ್ತವಾಗಿತ್ತು. ಸಾಮಾನ್ಯವಾಗಿ ಅಧಿಕಾಂಶ ಸಮೂಹಗಳಿಗಿಂತ ಸಾಕ್ಷಿಗಳು ಅತಿ ಹೆಚ್ಚು ಭಿನ್ನರಾಗಿದ್ದಾರೆ ಎಂಬುದು ವಾಸ್ತವಾಂಶವಾಗಿದೆ. ಒರಟಾದ ಸಾರ್ವಜನಿಕ ವರ್ತನೆಯನ್ನು ನೋಡುವುದು ತೀರ ಸಾಮಾನ್ಯವಾಗಿ ಬಿಟ್ಟಿದೆ. . . . ನಿಜವಾಗಿಯೂ, ಸಾಕ್ಷಿಗಳ ಸಮೂಹವು ಚೈತನ್ಯದಾಯಕವಾಗಿದೆ.” ಯಾವುದೇ ರೀತಿಯಲ್ಲಿ ನಮ್ಮ ಉಡುಪು ಮತ್ತು ಕೇಶಾಲಂಕಾರ ಅಥವಾ ನಡತೆಯು, ಅಧಿವೇಶನದ ಆತ್ಮಿಕ ವಾತಾವರಣವನ್ನು ಕೆಡಿಸುವಂತೆ ನಾವು ಎಂದಿಗೂ ಅನುಮತಿಸದಿರೋಣ.—ಫಿಲಿ. 1:10, NW; 1 ತಿಮೊ. 2:9, 10.
9 ದೀಕ್ಷಾಸ್ನಾನದ ಸಮಯದಲ್ಲಿ ಒಳ್ಳೇದನ್ನು ಮಾಡಿರಿ: ದೀಕ್ಷಾಸ್ನಾನದ ಅಭ್ಯರ್ಥಿಗಳು ಈ ಸಂದರ್ಭಕ್ಕೆ ಅತ್ಯಧಿಕವಾದ ಘನತೆಯನ್ನು ತೋರಿಸಲು ಬಯಸುವರು. ಯೋಗ್ಯವಾದ ಸ್ನಾನದ ವಸ್ತ್ರವನ್ನು ಧರಿಸುವುದು, ಈ ಸಂದರ್ಭದ ಪವಿತ್ರತೆಗೆ ಗಣ್ಯತೆಯನ್ನು ತೋರಿಸುತ್ತದೆ. ಬೈಬಲ್ ಅಭ್ಯಾಸಗಳನ್ನು ನಡೆಸುವವರು, ತಮ್ಮ ವಿದ್ಯಾರ್ಥಿಗಳೊಂದಿಗೆ, 1995, ಏಪ್ರಿಲ್ 1ರ ಕಾವಲಿನಬುರುಜು ಪತ್ರಿಕೆಯಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಎಂಬ ಭಾಗವನ್ನು ಅಧಿವೇಶನಕ್ಕೆ ಹಾಜರಾಗುವ ಮುಂಚೆ ಪರಿಶೀಲಿಸುವುದು ಹೆಚ್ಚು ಉಪಯುಕ್ತವಾಗಿರುವುದು.
10 ನಮ್ಮ ಸಭ್ಯತೆ ಮತ್ತು ದೈವಿಕ ನಡತೆಯು, ನಮ್ಮ ಕ್ರೈಸ್ತ ನಂಬಿಕೆಗಳಿಗೆ ಸಾಕ್ಷ್ಯವನ್ನು ಕೊಡುತ್ತದೆ ಮತ್ತು ಸಹೃದಯಿಗಳಾದ ಜನರು ಸತ್ಯವನ್ನು ಸುಲಭವಾಗಿ ಗುರುತಿಸುವಂತೆ ಮಾಡುತ್ತದೆ. ಆದುದರಿಂದ, “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನಕ್ಕೆ ನಾವು ಹಾಜರಾಗುವಾಗ, ‘ಒಳ್ಳೇದನ್ನು ಮಾಡುತ್ತಿರೋಣ’ ಮತ್ತು ಶ್ಲಾಘನೆಯನ್ನು ಪಡೆಯೋಣ.—ರೋಮಾ. 13:3.