‘ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆ ಉತ್ತಮವಾಗಿರಲಿ’
1. ಮುಂಬರಲಿರುವ ಅಧಿವೇಶನಗಳಲ್ಲಿ ನಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಪ್ರಾಮುಖ್ಯವೇಕೆ?
1 ಪ್ರತಿ ವರ್ಷ ನಮ್ಮ ಅಧಿವೇಶನಗಳು ನಡೆಯುವಾಗ ಸ್ಥಳೀಯ ಜನರು ನಮ್ಮನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ನಮ್ಮ ನಡತೆ ಯೆಹೋವ ದೇವರಿಗೆ ಘನತೆ ತರುವಂತಿರಬೇಕು. (ಯಾಜ. 20:26) ನಮ್ಮ ವರ್ತನೆ, ನಮ್ಮ ಉಡುಪು, ನಮ್ಮನ್ನು ಕ್ರಿಸ್ತನ ನಿಜ ಹಿಂಬಾಲಕರೆಂದು ಗುರುತಿಸುವಂತಿರಬೇಕು. ಮುಂಬರಲಿರುವ ಪ್ರಾದೇಶಿಕ ಅಥವಾ ಅಂತರರಾಷ್ಟ್ರೀಯ ಅಧಿವೇಶನಗಳಿಗೆ ಹಾಜರಾಗುವಾಗ ನಾವು ಹೇಗೆ ‘ಅನ್ಯಜನಾಂಗಗಳ ಮಧ್ಯೆ ನಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಂಡು’ ನಮ್ಮ ಸ್ವರ್ಗೀಯ ತಂದೆಯನ್ನು ಮಹಿಮೆಪಡಿಸಬಹುದು?—1 ಪೇತ್ರ 2:12.
2. ಅಧಿವೇಶನದ ಸಮಯದಲ್ಲಿ ಕ್ರೈಸ್ತ ಗುಣಗಳನ್ನು ತೋರಿಸಲು ಯಾವ ಅವಕಾಶಗಳಿವೆ?
2 ಕ್ರೈಸ್ತ ಗುಣಗಳನ್ನು ತೋರಿಸಿ: ನಮ್ಮ ಸಹೋದರರಿಗೆ ನಾವು ತೋರಿಸುವ ಪ್ರೀತಿ ಮತ್ತು ಹೊರಗಿನವರೊಂದಿಗೆ ನಾವು ನಡೆದುಕೊಳ್ಳುವ ರೀತಿಗೂ ಈ ಲೋಕದ ಜನರಲ್ಲಿ ಎದ್ದು ಕಾಣುವ ಮನೋಭಾವಕ್ಕೂ ಸಾಕಷ್ಟು ವ್ಯತ್ಯಾಸವಿದೆ. (ಕೊಲೊ. 3:10; 4:5; 2 ತಿಮೊ. 3:1-5) ಲಾಡ್ಜ್ನಲ್ಲಿನ ಸಿಬ್ಬಂದಿ ವರ್ಗ ಮತ್ತು ರೆಸ್ಟೋರೆಂಟ್ನಲ್ಲಿ ಕೆಲಸಮಾಡುವವರ ಸೇವೆಯಲ್ಲಿ ಕುಂದುಕೊರತೆಗಳು ಕಂಡುಬಂದರೂ ಅವರೊಂದಿಗೆ ದಯೆಯಿಂದ ವರ್ತಿಸಬೇಕು ಮತ್ತು ತಾಳ್ಮೆ ತೋರಿಸಬೇಕು. ಟಿಪ್ಸ್ ಕೊಡುವುದು ಸಹ ಒಂದು ಉತ್ತಮ ರೂಢಿ. ಸೀಟುಗಳನ್ನು ಹಿಡಿಯುವಾಗ ಅಥವಾ ಅಧಿವೇಶನದಲ್ಲಿ ಬಿಡುಗಡೆಯಾದ ಸಾಹಿತ್ಯಗಳನ್ನು ಪಡೆದುಕೊಳ್ಳಲು ಕ್ಯೂ ನಿಂತಾಗ ನಾವು ಸ್ವಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಬೇಕು (1 ಕೊರಿಂ. 10:23, 24) ಮೊದಲ ಬಾರಿ ಅಧಿವೇಶನಕ್ಕೆ ಹಾಜರಾದ ಒಬ್ಬ ಆಸಕ್ತ ವ್ಯಕ್ತಿ ಹೇಳಿದ್ದು, “ಅಲ್ಲಿ ಕೊಡಲಾದ ಯಾವ ಭಾಷಣವೂ ನನಗೆ ನೆನಪಿಲ್ಲ. ಆದರೆ ಸಾಕ್ಷಿಗಳ ನಡತೆ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು.”
3. ಹೆತ್ತವರಿಗೆ ಯಾವ ಮರುಜ್ಞಾಪನ ಕೊಡಲಾಗಿದೆ ಮತ್ತು ಏಕೆ?
3 ಹೆತ್ತವರು ಅಧಿವೇಶನ ನಡೆಯುವ ಸ್ಥಳದಲ್ಲಿ, ರೆಸ್ಟೋರೆಂಟ್ ಅಥವಾ ಹೋಟೆಲ್ನಲ್ಲಿ ತಮ್ಮ ಮಕ್ಕಳ ನಿಗಾವಹಿಸಬೇಕು. (ಜ್ಞಾನೋ. 29:15) ಹೋಟೆಲ್ನ ಮ್ಯಾನೆಜರ್ ಒಬ್ಬಳು ಸಾಕ್ಷಿ ದಂಪತಿಗೆ, “ನಿಮ್ಮ ಜನರೆಂದರೆ ನಮಗೆ ತುಂಬ ಇಷ್ಟ, ಮಕ್ಕಳಿಂದ ಹಿಡಿದು ಇಡೀ ಕುಟುಂಬ ತುಂಬ ಒಳ್ಳೆಯದಾಗಿ ನಡೆದುಕೊಳ್ಳುತ್ತೀರಿ, ಎಷ್ಟೊಂದು ನಯ ವಿನಯ! ನಮ್ಮ ಹೋಟೆಲ್ನವರೆಲ್ಲ ನಿಮ್ಮ ಬಗ್ಗೆನೇ ಮಾತಾಡಿಕೊಳ್ಳುತ್ತಿದ್ದರು, ಪ್ರತಿ ವಾರಾಂತ್ಯದಲ್ಲೂ ನಮ್ಮ ಹೋಟೆಲ್ನಲ್ಲಿ ಉಳಿದುಕೊಳ್ಳುವುದಕ್ಕೆ ನೀವು ಬಂದಿದ್ದರೆ ಚೆನ್ನಾಗಿರುತ್ತಿತ್ತು” ಎಂದು ಹೇಳಿದಳು.
4. ಅಧಿವೇಶನ ನಡೆಯುವ ನಗರದಲ್ಲಿ ನಮ್ಮ ಹೊರತೋರಿಕೆ ಹೇಗಿರಬೇಕು?
4 ಸಭ್ಯ ಉಡುಪು: ಅಧಿವೇಶನದಲ್ಲಿ ಸೂಕ್ತವಾದ ಮತ್ತು ಸಭ್ಯವಾದ ಉಡುಪನ್ನು ಧರಿಸಬೇಕು. ಲೋಕದಲ್ಲಿ ಸಾಮಾನ್ಯವಾಗಿರುವ ಫ್ಯಾಶನ್ ಉಡುಪುಗಳನ್ನು ಧರಿಸಬಾರದು. (1 ತಿಮೊ. 2:9) ಅಧಿವೇಶನ ನಡೆಯುವ ನಗರಕ್ಕೆ ಪ್ರಯಾಣಿಸುವಾಗ, ಅಲ್ಲಿಂದ ಹಿಂದಿರುಗುವಾಗ ಮತ್ತು ಬಿಡುವಿನ ಸಮಯದಲ್ಲಿ ಸಹ ನಮ್ಮ ಉಡುಪು ತೀರ ಮಾಮೂಲಿಯದ್ದಾಗಿರಬಾರದು. ಸಭ್ಯವಾದ ಉಡುಪನ್ನು ಧರಿಸಿದರೆ ಅಧಿವೇಶನದ ಬ್ಯಾಜನ್ನು ಯಾವಾಗಲೂ ಧರಿಸಿಕೊಳ್ಳಲು ಮತ್ತು ಅವಕಾಶ ಸಿಕ್ಕಾಗೆಲ್ಲ ಹಿಂಜರಿಯದೆ ಸಾಕ್ಷಿ ಕೊಡಲು ಸಾಧ್ಯವಾಗುತ್ತದೆ. ಮುಂಬರುವ ಅಧಿವೇಶನಗಳಲ್ಲಿ ನಮ್ಮ ಹೊರತೋರಿಕೆ ಮತ್ತು ಉತ್ತಮ ನಡತೆ ಬೈಬಲಿನ ಜೀವ ರಕ್ಷಕ ಸಂದೇಶಕ್ಕೆ ಕಿವಿಗೊಡುವಂತೆ ಪ್ರಾಮಾಣಿಕ ಹೃದಯದ ವ್ಯಕ್ತಿಗಳನ್ನು ಆಕರ್ಷಿಸುತ್ತದೆ ಮಾತ್ರವಲ್ಲ ಯೆಹೋವನಿಗೂ ಸಂತೋಷ ತರುತ್ತದೆ.—ಚೆಫ. 3:17.
[ಪುಟ 5-6ರಲ್ಲಿರುವ ಚೌಕ]
2014ರ ಅಧಿವೇಶನದ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯ: ಸಭಾಂಗಣದ ಬಾಗಿಲು ಬೆಳಿಗ್ಗೆ 8:00 ಗಂಟೆಗೆ ತೆರೆಯುತ್ತದೆ. ಮೂರೂ ದಿನ ರಾಜ್ಯ ಸಂಗೀತ ಬೆಳಿಗ್ಗೆ 9:20ಕ್ಕೆ ಆರಂಭವಾಗುತ್ತದೆ. ಆಗ ಎಲ್ಲರೂ ತಮ್ಮ ತಮ್ಮ ಸೀಟುಗಳಲ್ಲಿ ಕೂತುಕೊಳ್ಳಬೇಕು. ಇದು ಕಾರ್ಯಕ್ರಮ ಗೌರವಾನ್ವಿತ ರೀತಿಯಲ್ಲಿ ಆರಂಭವಾಗಲು ನೆರವಾಗುತ್ತದೆ. ಕಾರ್ಯಕ್ರಮ ಶುಕ್ರವಾರ, ಶನಿವಾರದಂದು ಸಂಜೆ 4:55ಕ್ಕೆ ಹಾಗೂ ಭಾನುವಾರದಂದು ಸಂಜೆ 3:50ಕ್ಕೆ ಕೊನೆಗೊಳ್ಳುತ್ತದೆ.
◼ ಅಂತರರಾಷ್ಟ್ರೀಯ ಅಧಿವೇಶನಗಳು: ಕೆಲವೊಂದು ಪ್ರದೇಶಗಳಲ್ಲಿ ಅಂತರರಾಷ್ಟ್ರೀಯ ಅಧಿವೇಶನಗಳು ನಡೆಯಲಿವೆ. ಅಲ್ಲಿನ ಬ್ರಾಂಚ್ ಆಫೀಸ್ ಅಧಿವೇಶನ ನಡೆಯುವ ಸಭಾಂಗಣದಲ್ಲಿ ಎಷ್ಟು ಸೀಟುಗಳಿವೆ ಎಂದು ಲೆಕ್ಕಮಾಡಿ, ಪಾರ್ಕಿಂಗ್ ಸ್ಥಳ, ಲಭ್ಯವಿರುವ ಹೋಟೆಲ್ಗಳ ಮಾಹಿತಿ ಕಲೆಹಾಕಿದ ನಂತರವೇ ನಿರ್ದಿಷ್ಟ ಸಭೆಗಳನ್ನು ಮತ್ತು ವಿದೇಶೀ ಪ್ರತಿನಿಧಿಗಳನ್ನು ಆಮಂತ್ರಿಸಿರುತ್ತದೆ ಎನ್ನುವುದನ್ನು ಮರೆಯದಿರಿ. ಹಾಗಾಗಿ ಅಂಥ ಅಧಿವೇಶನಗಳಿಗೆ ಆಮಂತ್ರಣವಿಲ್ಲದವರು ಹೋಗದಿದ್ದರೆ ಒಳ್ಳೆಯದು. ಏಕೆಂದರೆ ಹಾಗೆ ಹೋಗುವಲ್ಲಿ ಸಭಾಂಗಣ ಜನರಿಂದ ಕಿಕ್ಕಿರಿದು ಹೆಚ್ಚಿನವರಿಗೆ ಸೀಟು ಸಿಗದೇ ಹೋಗಬಹುದು. ನಿಮ್ಮ ಸಭೆಗೆ ನೇಮಿತವಾಗಿರುವ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗದೆ ಬೇರೆ ಅಧಿವೇಶನಕ್ಕೆ ಹೋಗಬೇಕಾದಲ್ಲಿ ದಯವಿಟ್ಟು ಅಂತರರಾಷ್ಟ್ರೀಯ ಅಧಿವೇಶನಕ್ಕೆ ಹೋಗಬೇಡಿ.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳಿರುವ ಎಲ್ಲ ಅಧಿವೇಶನ ಸ್ಥಳಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಗನುಸಾರ ವಾಹನಗಳಿಗೆ ಫ್ರೀ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ. ಪಾರ್ಕಿಂಗ್ ಸ್ಥಳ ಸೀಮಿತ. ಹಾಗಾಗಿ ಒಂದು ಕಾರಿನವರು ಇನ್ನೊಂದು ಕಾರಿನವರನ್ನು ತಮ್ಮೊಂದಿಗೆ ಕರೆದುಕೊಂಡು ಬರಬಹುದು. ವಿಕಲಚೇತನರ ವಾಹನಗಳಿಗೆಂದು ಕಾದಿರಿಸಲಾದ ಜಾಗದಲ್ಲಿ ಬೇರೆಯವರು ಪಾರ್ಕಿಂಗ್ ಮಾಡಬಾರದು.
◼ ಸೀಟು ಹಿಡಿಯುವುದು: ಪ್ರತಿದಿನ ಬೆಳಿಗ್ಗೆ ಸಭಾಂಗಣದ ಬಾಗಿಲು ತೆರೆದಾಗ ನಿಮಗೆ ಇಷ್ಟವಾಗುವಂಥ ಸೀಟು ಹಿಡಿಯಲು ಹಾಜರಾದ ಇತರರೊಂದಿಗೆ ಸ್ಪರ್ಧೆಗಿಳಿಯದಿರಿ. ನಮ್ಮಲ್ಲಿ ಸ್ವತ್ಯಾಗ ಮನೋಭಾವ ಇರುವುದಾದರೆ ಇತರರಿಗೆ ಒಳ್ಳೆಯದನ್ನು ಮಾಡುತ್ತೇವೆ. ಇದರಿಂದ ನಾವು ನಿಜ ಕ್ರೈಸ್ತರೆಂದು ಗುರುತಿಸಲ್ಪಡುತ್ತೇವೆ ಜೊತೆಗೆ ಇದನ್ನು ಗಮನಿಸಿದ ಇತರರು ದೇವರನ್ನು ಮಹಿಮೆ ಪಡಿಸುತ್ತಾರೆ. (ಯೋಹಾ. 13:34, 35; 1 ಕೊರಿಂ. 13:4, 5; 1 ಪೇತ್ರ 2:12) ನಿಮ್ಮ ಮನೆಯವರಿಗೆ ಅಥವಾ ಕಾರಿನಲ್ಲಿ ನಿಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ ಅಥವಾ ನಿಮ್ಮ ಈಗಿನ ಬೈಬಲ್ ವಿದ್ಯಾರ್ಥಿಗಳಿಗೆ ಮಾತ್ರ ಸೀಟುಗಳನ್ನು ಹಿಡಿದಿಡಬಹುದು. ವಯಸ್ಸಾದವರಿಗಾಗಿ ಸೀಟುಗಳನ್ನು ಕಾದಿರಿಸಲಾಗುತ್ತದೆ. ಅಂಥ ಸೀಟುಗಳು ಸೀಮಿತವಾಗಿರುವುದರಿಂದ ಕುಟುಂಬದವರೆಲ್ಲರೂ ಅವರೊಂದಿಗೆ ಕೂತುಕೊಳ್ಳಬಾರದು. ಆ ಸೀಟುಗಳಲ್ಲಿ ವಯಸ್ಸಾದವರು ಮತ್ತು ಅವರ ಸಹಾಯಕ್ಕಾಗಿ ಒಬ್ಬಿಬ್ಬರು ಮಾತ್ರ ಕೂತುಕೊಳ್ಳಬಹುದು.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ಊಟಕ್ಕಾಗಿ ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲು ಲಘು ಉಪಹಾರ ತೆಗೆದುಕೊಂಡು ಬನ್ನಿ. ಊಟದ ಬ್ಯಾಗ್ ಸೀಟಿನ ಕೆಳಗೆ ಇಡುವಷ್ಟು ಚಿಕ್ಕದಿರಲಿ. ದೊಡ್ಡ ದೊಡ್ಡ ಟಿಫಿನ್ಗಳು, ಗಾಜಿನ ಪಾತ್ರೆಗಳನ್ನು ತರಬಾರದು.
◼ ದಾನಗಳು: ಲೋಕವ್ಯಾಪಕ ಕೆಲಸಕ್ಕಾಗಿ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ಅಧಿವೇಶನ ಏರ್ಪಾಡುಗಳಿಗಾಗಿ ಕೃತಜ್ಞತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಕೊಡುವ ಯಾವುದೇ ಚೆಕ್ಗಳಲ್ಲಿ “ದ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ”ಗೆ ಸಂದಾಯವಾಗಬೇಕೆಂದು ಗುರುತಿಸಬೇಕು.
◼ ಔಷಧ: ವೈದ್ಯರು ಬರೆದುಕೊಟ್ಟ ಔಷಧವನ್ನೇ ನೀವು ತೆಗೆದುಕೊಳ್ಳಬೇಕಾದಲ್ಲಿ ಅದನ್ನು ದಯವಿಟ್ಟು ಸಾಕಷ್ಟು ಪ್ರಮಾಣದಲ್ಲಿ ತನ್ನಿ. ಅಧಿವೇಶನದ ಸ್ಥಳದಲ್ಲಿ ಅವು ಲಭ್ಯವಿರುವುದಿಲ್ಲ. ಮಧುಮೇಹದ ಸಿರಿಂಜು, ಸೂಜಿಗಳನ್ನು ಅಧಿವೇಶನ ಸ್ಥಳದಲ್ಲಿ ಮತ್ತು ಹೋಟೆಲಿನಲ್ಲಿರುವ ಕಸದ ಬುಟ್ಟಿಗಳಲ್ಲಿ ಎಸೆಯದೆ ಸೂಕ್ತ ಸ್ಥಳದಲ್ಲಿ ಬಿಸಾಡಿ.
◼ ಸುರಕ್ಷಾ ಕ್ರಮಗಳು: ಜಾರಿ ಅಥವಾ ಎಡವಿಬಿದ್ದು ಗಾಯಮಾಡಿಕೊಳ್ಳದಿರಲು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಿ. ಪ್ರತೀ ವರ್ಷ ಅಧಿವೇಶನಗಳಲ್ಲಿ ಪಾದರಕ್ಷೆಗಳಿಂದಾಗಿ ಅನೇಕರು ಗಾಯಗೊಳ್ಳುತ್ತಿದ್ದಾರೆ. ಕಾಲಿನ ಗಾತ್ರಕ್ಕೆ ಸರಿಹೊಂದುವ ಸಭ್ಯ ಪಾದರಕ್ಷೆ ಧರಿಸಿದರೆ ಇಳಿಜಾರಿನಲ್ಲಿ, ಮೆಟ್ಟಿಲುಗಳಲ್ಲಿ, ಇನ್ನಿತರ ಸ್ಥಳಗಳಲ್ಲಿ ಸುರಕ್ಷಿತವಾಗಿ ನಡೆಯಲು ಸಾಧ್ಯ.
◼ ಮಕ್ಕಳ ತಳ್ಳುಕುರ್ಚಿ ಮತ್ತು ವಿಹಾರಕುರ್ಚಿಗಳು: ಮಕ್ಕಳ ತಳ್ಳುಕುರ್ಚಿ, ವಿಹಾರಕುರ್ಚಿಗಳನ್ನು ಅಧಿವೇಶನ ಸ್ಥಳಕ್ಕೆ ತರಬಾರದು. ಆದರೆ ಹೆತ್ತವರು ತಮ್ಮ ಸೀಟಿನ ಪಕ್ಕದಲ್ಲಿ ಇಡಬಹುದಾದ ಬೇಬಿ ಸೀಟನ್ನು ತರಬಹುದು.
◼ ಸುಗಂಧ ದ್ರವ್ಯಗಳು: ಹೆಚ್ಚಿನ ಅಧಿವೇಶನಗಳು ಹವಾನಿಯಂತ್ರಿತ ಸಭಾಂಗಣಗಳಲ್ಲಿ ನಡೆಯುತ್ತವೆ. ಆದುದರಿಂದ, ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿರುವವರ ಆರೋಗ್ಯಕ್ಕೆ ಹಾನಿಯಾಗದಂತೆ ತೀಕ್ಷ್ಣ ಸುವಾಸನೆಯ ಸೆಂಟ್ಗಳನ್ನು ಮಿತವಾಗಿ ಬಳಸಿ. ಹೀಗೆ ಸಹೋದರರ ಕಡೆಗೆ ಪ್ರೀತಿ ತೋರಿಸಿ.—1 ಕೊರಿಂ. 10:24.
◼ ಪ್ಲೀಸ್ ಫಾಲೋ-ಅಪ್ (S-43) ಫಾರ್ಮ್ಗಳು: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದಾಗ ಸಿಕ್ಕಿದ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿ ಒದಗಿಸಲು ಪ್ಲೀಸ್ ಫಾಲೋ ಅಪ್ ಫಾರ್ಮ್ ಬಳಸಬೇಕು. ಅವನ್ನು ತುಂಬಿಸಿದ ಮೇಲೆ ಅಧಿವೇಶನದ ಬುಕ್ರೂಮ್ಗೆ ಅಥವಾ ನಿಮ್ಮ ಸಭೆಯ ಸೆಕ್ರೆಟರಿಗೆ ಕೊಡಬೇಕು.
◼ ರೆಸ್ಟೋರೆಂಟ್: ರೆಸ್ಟೋರೆಂಟ್ಗಳಲ್ಲಿ ಉತ್ತಮ ನಡತೆ ಮೂಲಕ ಯೆಹೋವನ ಹೆಸರನ್ನು ಮಹಿಮೆಪಡಿಸಿ. ಸಾಕ್ಷಿಗಳಿಗೆ ತಕ್ಕಂಥ ಬಟ್ಟೆ ಧರಿಸಿ. ಅಲ್ಲಿನ ಕೆಲಸಗಾರರಿಗೆ ಟಿಪ್ಸ್ ಕೊಡಿ.
◼ ಹೋಟೆಲ್ಗಳು:
(1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್ಗಳನ್ನು ಬುಕ್ ಮಾಡಬೇಡಿ. ಹೋಟೆಲ್ ಅನುಮತಿಸುವುದಕ್ಕಿಂತ ಹೆಚ್ಚು ಮಂದಿ ರೂಮ್ನಲ್ಲಿ ಉಳಿದುಕೊಳ್ಳಬಾರದು.
(2) ತುರ್ತು ಪರಿಸ್ಥಿತಿ ಬಿಟ್ಟು ಬೇರಾವ ಕಾರಣಕ್ಕೂ ಬುಕ್ಕಿಂಗ್ ರದ್ದುಮಾಡಬಾರದು. ಒಂದುವೇಳೆ ರದ್ದುಗೊಳಿಸಬೇಕಾದಲ್ಲಿ ಕೂಡಲೆ ಹೋಟೆಲ್ನವರಿಗೆ ತಿಳಿಸಿರಿ. (ಮತ್ತಾ. 5:37) ರದ್ದುಗೊಳಿಸಿದ್ದಲ್ಲಿ ಕ್ಯಾನ್ಸಲೇಷನ್ ನಂಬರನ್ನು ಪಡೆದುಕೊಳ್ಳಲು ಮರೆಯದಿರಿ. 48 ತಾಸುಗಳ ಮುಂಚಿತವಾಗಿ ರೂಮನ್ನು ರದ್ದುಗೊಳಿಸದಿದ್ದರೆ ನೀವು ಪಾವತಿಸಿದ ಹಣ ನಿಮಗೆ ವಾಪಸ್ ಸಿಗುವುದಿಲ್ಲ.
(3) ದಯವಿಟ್ಟು ನೆನಪಿಡಿ: ಹೋಟೆಲಿಗೆ ದಾಖಲಾಗುವಾಗ ನೀವು ಡೆಬಿಟ್ ಯಾ ಕ್ರೆಡಿಟ್ ಕಾರ್ಡ್ ಬಳಸುವಲ್ಲಿ, ರೂಮ್ ಬಾಡಿಗೆಯ ಜತೆಗೆ ಸಂಭಾವ್ಯ ಹಾನಿಗೆಂದು ಹೆಚ್ಚುವರಿ ಹಣವನ್ನು ಹೋಟೆಲಿನವರು ಹಿಡಿದಿಟ್ಟುಕೊಳ್ಳುವುದು ರೂಢಿ. ನೀವಲ್ಲಿಂದ ಹೊರಟು ಲೆಕ್ಕ ಚುಕ್ತಾ ಆಗುವ ತನಕ ಅಂದರೆ ಕೆಲವು ದಿನ ನೀವು ಆ ಹಣ ಬಳಸಲು ಸಾಧ್ಯವಿಲ್ಲ.
(4) ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ಟ್ರಾಲಿ ತೆಗೆದುಕೊಳ್ಳಿ. ಉಪಯೋಗಿಸಿದ ನಂತರ ಕೂಡಲೆ ಹಿಂದಿರುಗಿಸಿ.
(5) ನಿಮ್ಮ ಸಾಮಾನನ್ನು ಹೊರುವ, ಕೋಣೆ ಶುಚಿ ಮಾಡುವ ಕೆಲಸಗಾರರಿಗೆ ಟಿಪ್ಸ್ ಕೊಡಿ.
(6) ಅಪ್ಪಣೆ ಇಲ್ಲದೆ ರೂಮಿನಲ್ಲಿ ಅಡುಗೆ ಮಾಡಬಾರದು.
(7) ಅತಿಥಿಗಳಿಗೆ ಹೋಟೆಲ್ನಲ್ಲಿರುವಾಗ ಉಚಿತವಾಗಿ ಸಿಗುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳನ್ನು ಅಧಿವೇಶನಕ್ಕೆ ತೆಗೆದುಕೊಂಡು ಹೋಗಬೇಡಿ.
(8) ಹೋಟೆಲ್ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗೆಲ್ಲಾ ದೇವರಾತ್ಮದ ಫಲವನ್ನು ತೋರಿಸಿ. ಅವರು ಅನೇಕ ಅತಿಥಿಗಳನ್ನು ನೋಡಿಕೊಳ್ಳಬೇಕಾಗಿರುತ್ತದೆ. ಆದ್ದರಿಂದ ಅವರೊಂದಿಗೆ ದಯೆ, ತಾಳ್ಮೆ, ವಿವೇಚನೆಯಿಂದ ನಡೆದುಕೊಂಡರೆ ಅವರದನ್ನು ಮಾನ್ಯ ಮಾಡುವರು.
(9) ಹೋಟೆಲಿನಲ್ಲಿ ಎಲ್ಲ ಸಮಯ ಹೆತ್ತವರು ಮಕ್ಕಳ ನಿಗಾ ವಹಿಸಬೇಕು. ಈಜುಕೊಳ, ಲಿಫ್ಟ್, ಲಾಬಿ ಸೇರಿದಂತೆ ಮತ್ತಿತರ ಕಡೆಗಳಲ್ಲೂ ನಿಗಾ ವಹಿಸಬೇಕು.
(10) ಶಿಫಾರಸು ಮಾಡಲಾದ ಲಾಡ್ಜಿ೦ಗ್ ಲಿಸ್ಟ್ನಲ್ಲಿರುವ ರೂಮ್ ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆಯಾಗಿವೆ. ಇದರಲ್ಲಿ ತೆರಿಗೆ ಸೇರಿಲ್ಲ. ಅದನ್ನೂ ನೀವು ಕೊಡಬೇಕಾಗುತ್ತದೆ. ಆದರೆ ನೀವು ವಿನಂತಿಸದ ಅಥವಾ ಬಳಸದ ಯಾವುದಕ್ಕಾದರೂ ಹೆಚ್ಚು ಹಣವನ್ನು ನಿಮ್ಮ ಬಿಲ್ಗೆ ಹಾಕಿದ್ದಲ್ಲಿ ಅದನ್ನು ಕೊಡಬೇಡಿ ಮತ್ತು ಈ ವಿಷಯವನ್ನು ಅಧಿವೇಶನದ ರೂಮಿಂಗ್ ಡಿಪಾರ್ಟ್ಮೆಂಟ್ಗೆ ಆದಷ್ಟು ಬೇಗ ತಿಳಿಸಿ.
(11) ಹೋಟೆಲ್ ರೂಮ್ ಸಂಬಂಧದಲ್ಲಿ ಸಮಸ್ಯೆ ಏಳುವಲ್ಲಿ ಅಧಿವೇಶನದಲ್ಲೇ ರೂಮಿಂಗ್ ಇಲಾಖೆಗೆ ತಿಳಿಸಿದರೆ ಅವರು ನಿಮಗೆ ಸಹಾಯ ಮಾಡುತ್ತಾರೆ.
◼ ಸ್ವಯಂ ಸೇವೆ: ಸ್ವಯಂ ಸೇವಕರಾಗಲು ಬಯಸುವವರು ಸ್ವಯಂ ಸೇವಾ ಇಲಾಖೆಯನ್ನು ಸಂಪರ್ಕಿಸಬೇಕು. 16 ವರ್ಷಕ್ಕಿಂತ ಚಿಕ್ಕವರು ತಮ್ಮ ಹೆತ್ತವರ, ಪೋಷಕರ ಇಲ್ಲವೆ ಅವರ ಒಪ್ಪಿಗೆಯಿರುವ ಒಬ್ಬ ಪ್ರೌಢ ವ್ಯಕ್ತಿಯ ನಿರ್ದೇಶನದಡಿ ಸ್ವಯಂ ಸೇವಕರಾಗಿ ಕೆಲಸಮಾಡಬಹುದು.