ಸತ್ಯಕ್ಕೆ ಪ್ರಬಲ ಸಾಕ್ಷಿಕೊಡುವ ನಮ್ಮ ಜಿಲ್ಲಾ ಅಧಿವೇಶನಗಳು
1. ನಿಯಮಿತವಾಗಿ ನಡೆಯುತ್ತಿದ್ದ ಹಬ್ಬಗಳು ಇಸ್ರಾಯೇಲ್ಯರಿಗೆ ಯಾವ ಪ್ರಾಮುಖ್ಯ ಆಧ್ಯಾತ್ಮಿಕ ಸತ್ಯಗಳ ಕುರಿತು ಧ್ಯಾನಿಸಿ, ಚರ್ಚಿಸಲು ಅವಕಾಶ ಕೊಟ್ಟವು?
1 ಪ್ರಾಚೀನ ಇಸ್ರಾಯೇಲ್ಯರು ನಿಯಮಿತವಾಗಿ ವರ್ಷಕ್ಕೆ ಮೂರು ಹಬ್ಬಗಳನ್ನು ಆಚರಿಸಲು ಯೆರೂಸಲೇಮಿನಲ್ಲಿ ಸೇರಿಬರುತ್ತಿದ್ದರು. ಇದಕ್ಕೆ ಹೋಗಲು ಗಂಡಸರಿಗೆ ಆಜ್ಞಾಪಿಸಲಾಗಿದ್ದರೂ ಹೆಚ್ಚಾಗಿ ಇಡೀ ಕುಟುಂಬಗಳೇ ಈ ಸಂತೋಷಭರಿತ ಅಧಿವೇಶನಗಳಿಗೆ ಹೋಗುತ್ತಿದ್ದವು. (ಧರ್ಮೋ. 16:15, 16) ಈ ಹಬ್ಬಗಳು ಅವರಿಗೆ ಪ್ರಾಮುಖ್ಯ ಸತ್ಯಗಳ ಕುರಿತು ಧ್ಯಾನಿಸಲು, ಚರ್ಚಿಸಲು ಅವಕಾಶ ಕೊಡುತ್ತಿದ್ದವು. ಆ ಸತ್ಯಗಳಲ್ಲಿ ಕೆಲವು ಯಾವುವು? ಒಂದು, ಯೆಹೋವನು ಉದಾರಭಾವದಿಂದ, ಪ್ರೀತಿಯಿಂದ ಅಗತ್ಯಗಳನ್ನು ಪೂರೈಸುವಾತ. (ಧರ್ಮೋ. 15:4, 5) ಇನ್ನೊಂದು, ಆತನು ಮಾರ್ಗದರ್ಶನ ಹಾಗೂ ಸಂರಕ್ಷಣೆ ಕೊಡುವಾತ. (ಧರ್ಮೋ. 32:9, 10) ಮತ್ತೊಂದು, ಇಸ್ರಾಯೇಲ್ಯರು ಯೆಹೋವನ ಹೆಸರಿಗಾಗಿದ್ದ ಜನಾಂಗವಾದ ಕಾರಣ ಆತನ ನೀತಿಯ ಮಾರ್ಗಗಳನ್ನು ಜೀವನದಲ್ಲಿ ಅಳವಡಿಸಬೇಕು. (ಧರ್ಮೋ. 7:6, 11) ಇಂದು ನಮ್ಮ ವಾರ್ಷಿಕ ಜಿಲ್ಲಾ ಅಧಿವೇಶನಗಳಿಂದ ನಮಗೆ ಅಂಥದ್ದೇ ಪ್ರಯೋಜನ ಸಿಗುತ್ತದೆ.
2. ಬರಲಿರುವ ಜಿಲ್ಲಾ ಅಧಿವೇಶನದ ಕಾರ್ಯಕ್ರಮ ಹೇಗೆ ಸತ್ಯದ ಮೇಲೆ ಬೆಳಕು ಚೆಲ್ಲಲಿದೆ?
2 ಸತ್ಯದ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ: ನಮ್ಮ ಜಿಲ್ಲಾ ಅಧಿವೇಶನಗಳಲ್ಲಿ ಭಾಷಣಗಳು, ನಾಟಕಗಳು, ಪ್ರಾತ್ಯಕ್ಷಿಕೆಗಳು, ಸಂದರ್ಶನಗಳು ಪ್ರಾಮುಖ್ಯ ಬೈಬಲ್ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತವೆ. (ಯೋಹಾ. 17:17) ಬರಲಿರುವ ಅಧಿವೇಶನಕ್ಕಾಗಿ ಈಗಾಗಲೇ ಬಹಳಷ್ಟು ಕೆಲಸ ಮಾಡಲಾಗಿದೆ. ಜಗತ್ತಿನಾದ್ಯಂತವಿರುವ ಜನರ ಪ್ರಸಕ್ತ ಅಗತ್ಯಗಳನ್ನು ಪೂರೈಸುವಂಥ ಕಾರ್ಯಕ್ರಮವನ್ನು ಯೆಹೋವನ ಸಂಘಟನೆ ತಯಾರಿಸಿಟ್ಟಿದೆ. (ಮತ್ತಾ. 24:45-47) ಅಲ್ಲಿ ಏನನ್ನು ಪ್ರಸ್ತುತಪಡಿಸಲಾಗುವುದೆಂದು ನೋಡಲು, ಕೇಳಲು ಕಾತುರರಾಗಿದ್ದೀರಾ?
3. ಕಾರ್ಯಕ್ರಮದಿಂದ ಪ್ರಯೋಜನ ಪಡೆಯಲು ನಾವೇನು ಮಾಡಬೇಕು?
3 ಅಧಿವೇಶನದ ಮೂರೂ ದಿನ ಹಾಜರಿದ್ದು ಗಮನಕೊಟ್ಟು ಕೇಳಿದರೆ ಅತ್ಯಧಿಕ ಪ್ರಯೋಜನ ಪಡೆಯುವೆವು. ನೀವೀಗಾಗಲೇ ಧಣಿ ಹತ್ತಿರ ರಜೆ ಕೇಳಿರದಿದ್ದರೆ ಇನ್ನು ತಡಮಾಡಬೇಡಿ. ಕಾರ್ಯಕ್ರಮವನ್ನು ಏಕಾಗ್ರತೆಯಿಂದ ಕೇಳಲು ಸಾಧ್ಯವಾಗುವಂತೆ ರಾತ್ರಿ ಸಾಕಷ್ಟು ವಿಶ್ರಾಂತಿ ಪಡೆಯಿರಿ. ಭಾಷಣಕರ್ತನ ಮೇಲೆ ದೃಷ್ಟಿ ನೆಡುವುದು, ಚುಟುಕಾದ ಟಿಪ್ಪಣಿ ಬರೆಯುವುದು ಏಕಾಗ್ರಚಿತ್ತದಿಂದ ಕೇಳಲು ಅನೇಕರಿಗೆ ನೆರವಾಗಿದೆ. ನಿಮ್ಮ ಮೊಬೈಲ್ ಇಲ್ಲವೇ ಪೇಜರ್ನಿಂದ ಬೇರೆಯವರ ಗಮನಭಂಗ ಆಗದಂತೆ ನೋಡಿಕೊಳ್ಳಿ. ಕಾರ್ಯಕ್ರಮ ನಡೆಯುತ್ತಿರುವಾಗ ಪಕ್ಕದವರೊಂದಿಗೆ ಮಾತಾಡುವುದು, ಎಸ್ಸೆಮ್ಮೆಸ್ ಕಳುಹಿಸುವುದು, ತಿನ್ನುವುದು ಇವೆಲ್ಲ ಮಾಡಬೇಡಿ.
4. ಅಧಿವೇಶನದಿಂದ ಪ್ರಯೋಜನ ಪಡೆಯುವಂತೆ ಹೆತ್ತವರು ಮಕ್ಕಳಿಗೆ ಹೇಗೆ ನೆರವಾಗಬಲ್ಲರು?
4 ಸಬ್ಬತ್ ವರ್ಷಗಳಲ್ಲಿನ ಪರ್ಣಶಾಲೆಗಳ ಹಬ್ಬದಂದು ಧರ್ಮಶಾಸ್ತ್ರದ ವಾಚನ ನಡೆಯುತ್ತಿತ್ತು. ಅದನ್ನು ಆಲಿಸಲು ಇಸ್ರಾಯೇಲ್ಯ ಕುಟುಂಬಗಳು ಸೇರಿಬರುತ್ತಿದ್ದಾಗ ತಮ್ಮ ಮಕ್ಕಳನ್ನೂ ಕರಕೊಂಡು ಬರುತ್ತಿದ್ದರು. ಹೀಗೆ ಮಕ್ಕಳೂ “ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ” ಸಾಧ್ಯವಾಗುತ್ತಿತ್ತು. (ಧರ್ಮೋ. 31:12) ನಮ್ಮ ಅಧಿವೇಶನಗಳಲ್ಲೂ ಹೆತ್ತವರು-ಮಕ್ಕಳು ಒಟ್ಟಿಗೆ ಕೂತಿರುವುದು, ಎಳೆಯರು ನಿದ್ದೆಮಾಡದೆ ಏಕಾಗ್ರತೆಯಿಂದ ಕಿವಿಗೊಡುವುದು ಸಂತೋಷದ ವಿಷಯ! ಪ್ರತಿ ಸಾಯಂಕಾಲ ನೀವು ಆಯಾ ದಿನ ಬರೆದ ಟಿಪ್ಪಣಿಗಳನ್ನು ನೋಡಿ, ನಿಮಗಿಷ್ಟವಾದ ಅಂಶಗಳ ಕುರಿತು ಚರ್ಚಿಸಬಾರದೇಕೆ? “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ.” ಹಾಗಾಗಿ ಮಧ್ಯಾಹ್ನದ ವಿರಾಮದ ವೇಳೆ ಹಾಗೂ ಹೋಟೆಲಿನಲ್ಲೂ ಹೆತ್ತವರು ತಮ್ಮ ಮಕ್ಕಳ ಮೇಲೆ (ಹದಿವಯಸ್ಸಿನವರಾಗಿದ್ದರೂ) ನಿಗಾ ಇಡುವುದು ಉತ್ತಮ. ಅವರನ್ನು ಅವರ ಪಾಡಿಗೇ ಬಿಟ್ಟುಬಿಡಬೇಡಿ.—ಜ್ಞಾನೋ. 22:15.
5. ಹೋಟೆಲಿನಲ್ಲಿ ನಮ್ಮ ಒಳ್ಳೇ ನಡತೆ ಹೇಗೆ ಸತ್ಯವನ್ನು ಅಲಂಕರಿಸುತ್ತದೆ?
5 ನಮ್ಮ ಒಳ್ಳೇ ನಡತೆ ಸತ್ಯಕ್ಕೆ ಅಲಂಕಾರ: ನಮ್ಮ ಒಳ್ಳೇ ನಡತೆ ಸತ್ಯವನ್ನು ಅಲಂಕರಿಸುತ್ತದೆ. ಇದು ಅಧಿವೇಶನದ ನಗರದಲ್ಲಿರುವಾಗಲೂ ಸತ್ಯ. (ತೀತ 2:10) ಹೋಟೆಲಿನಲ್ಲಿ ತಂಗಿರುವ ಎಲ್ಲ ಸಹೋದರ ಸಹೋದರಿಯರು ಅಲ್ಲಿನ ನಿಯಮಗಳನ್ನು ಪಾಲಿಸುವಾಗ, ಸಿಬ್ಬಂದಿ ಜತೆ ತಾಳ್ಮೆ, ವಿನಯದಿಂದ ನಡೆದುಕೊಳ್ಳುವಾಗ ಅದು ಹೋಟೆಲಿನವರ ಗಮನಕ್ಕೆ ಬರುತ್ತದೆ. (ಕೊಲೊ. 4:6) ಕಳೆದ ವರ್ಷ ಬ್ರಾಂಚ್ ಆಫೀಸೊಂದರ ಪ್ರತಿನಿಧಿಗಳು ರೂಮ್ ಕಾದಿರಿಸುವ ಬಗ್ಗೆ ಹೋಟೆಲಿನ ಸಿಬ್ಬಂದಿಯೊಂದಿಗೆ ಮಾತಾಡುತ್ತಿದ್ದಾಗ ಅಲ್ಲಿನ ಸೇಲ್ಸ್ ಡೈರೆಕ್ಟರ್ ಹೇಳಿದ್ದು: “ನಿಮ್ಮ ಜನರಿಗೆ ರೂಮ್ ಕೊಡಲು ನಮ್ಗೆ ತುಂಬ ಸಂತೋಷ. ಅವರು ಸಭ್ಯ ಜನರು. ದಯೆಯಿಂದ ನಡ್ಕೊಳ್ತಾರೆ. ನಮ್ಮ ಸಿಬ್ಬಂದಿಯನ್ನು ಗೌರವಿಸ್ತಾರೆ. ರೂಮ್ಗಳನ್ನಾಗಲಿ, ವಸ್ತುಗಳನ್ನಾಗಲಿ ಹಾಳ್ಮಾಡಲ್ಲ.”
6. ಅಧಿವೇಶನ ನಗರದಲ್ಲಿರುವಾಗ ನಾವು ಧರಿಸುವ ಬಟ್ಟೆ ಸತ್ಯಕ್ಕೆ ಹೇಗೆ ಅಲಂಕಾರವಾಗಿರಬಲ್ಲದು?
6 ನಾವು ಧರಿಸುವ ಅಧಿವೇಶನ-ಬ್ಯಾಜ್ ಅಧಿವೇಶನಕ್ಕೆ ಜಾಹೀರಾತು ಕೊಡುತ್ತದೆ. ಅಲ್ಲದೆ, ಅಧಿವೇಶನಕ್ಕೆ ಬಂದಿರುವ ಇತರರು ನಮ್ಮನ್ನು ಗುರುತಿಸಲು ನೆರವಾಗುತ್ತದೆ. ಅಷ್ಟುಮಾತ್ರವಲ್ಲ ಜನರಿಗೆ ಸಾಕ್ಷಿಯನ್ನೂ ಕೊಡುತ್ತದೆ. ಲೈಂಗಿಕವಾಗಿ ಉದ್ರೇಕಿಸುವಂಥ, ಕೊಳಕಾದ, ಅಸ್ತವ್ಯಸ್ತ ಉಡುಪಿನ ಶೈಲಿಗಳು ಇಂದು ಸರ್ವೇಸಾಮಾನ್ಯ. ಆದರೆ ಬ್ಯಾಜ್ ಹಾಕಿಕೊಂಡಿರುವ ನಾವು ನೀಟಾದ, ಸಭ್ಯ ಉಡುಪು ಧರಿಸಿರುವಾಗ ಜನರ ಗಮನಕ್ಕೆ ಬರುತ್ತೇವೆ. (1 ತಿಮೊ. 2:9, 10) ಆದ್ದರಿಂದಲೇ ನಾವು ಅಧಿವೇಶನ ನಗರದಲ್ಲಿರುವಾಗ ನಮ್ಮ ಉಡುಪು, ಹೊರತೋರಿಕೆಗೆ ಗಮನಕೊಡತಕ್ಕದ್ದು. ಅಧಿವೇಶನ ನಗರದಲ್ಲಿ ಹೋಟೆಲಿಗೆ ಆಗಮಿಸುವಾಗಲೂ ಈ ಮಾತು ಅನ್ವಯ. ಅಲ್ಲಿಗೆ ಬರುವಾಗ ಶಾರ್ಟ್ಸ್ ಹಾಗೂ ಸ್ಲೋಗನ್ಗಳಿರುವ ಟಿ-ಶರ್ಟ್ ಹಾಕಿಬಂದರೆ ಅದು ಘನತೆಯದ್ದಾಗಿರುವುದಿಲ್ಲ. ಅಧಿವೇಶನ ತೆರೆದ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದರೂ ನಮ್ಮ ಉಡುಪು ಘನತೆಗೆ ತಕ್ಕದ್ದಾಗಿರಬೇಕು. ಕಾರ್ಯಕ್ರಮ ಮುಗಿದ ನಂತರ ಬಟ್ಟೆ ಬದಲಾಯಿಸಿ ರೆಸ್ಟಾರೆಂಟ್ಗೆ ಹೋಗಬೇಕೆಂದಿದ್ದರೂ ನಾವು ತೀರ ಮಾಮೂಲು ಉಡುಪನ್ನು ಧರಿಸಿ ಹೋಗಬಾರದು. ಏಕೆಂದರೆ ನಾವು ಆಗಲೂ ಅಧಿವೇಶನದ ಪ್ರತಿನಿಧಿಗಳು.
7. ಅಧಿವೇಶನದ ಸಮಯದಲ್ಲಿ ನಮ್ಮ ಕ್ರೈಸ್ತ ಐಕ್ಯವನ್ನು ಆನಂದಿಸುವ ಒಂದು ವಿಧ ಯಾವುದು?
7 ವರ್ಷದ ಮೂರು ಹಬ್ಬಗಳಲ್ಲಿ ಇಸ್ರಾಯೇಲ್ಯರು ತಮ್ಮ ದೇಶದ ಹಾಗೂ ಲೋಕದ ಇತರ ಭಾಗಗಳಿಂದ ಬಂದ ಜೊತೆ ಆರಾಧಕರೊಂದಿಗೆ ಭಕ್ತಿವರ್ಧಕ ಸಹವಾಸ ಆನಂದಿಸುತ್ತಿದ್ದರು. ಇದು ಅವರ ಐಕ್ಯವನ್ನು ಹೆಚ್ಚಿಸುತ್ತಿತ್ತು. (ಅ. ಕಾ. 2:1, 5) ಅದೇ ರೀತಿ, ಜಿಲ್ಲಾ ಅಧಿವೇಶನಗಳಲ್ಲಿ ನಮ್ಮ ಅಪೂರ್ವ ಕ್ರೈಸ್ತ ಸಹೋದರತ್ವ ತೋರಿಬರುತ್ತದೆ. ಆಧ್ಯಾತ್ಮಿಕ ಪರದೈಸಿನ ಈ ಮನೋಹರ ಅಂಶ ಹೊರಗಿನವರನ್ನು ತುಂಬ ಪ್ರಭಾವಿಸುತ್ತದೆ. (ಕೀರ್ತ. 133:1) ಮಧ್ಯಾಹ್ನ ಅಧಿವೇಶನ ಸ್ಥಳ ಬಿಟ್ಟು ರೆಸ್ಟಾರೆಂಟ್ಗೆ ಹೋಗಿ ಊಟಮಾಡುವ ಬದಲು, ಬೆಳಗ್ಗೆ ಬರುವಾಗಲೇ ಲಘು ಆಹಾರ ತರುವುದು ಉತ್ತಮ. ಆಗ ಊಟದ ಸಮಯದಲ್ಲಿ ನಮ್ಮ ಅಕ್ಕಪಕ್ಕ ಕೂತಿರುವ ಸಹೋದರ ಸಹೋದರಿಯರನ್ನು ಮಾತಾಡಿಸಲು ಅವಕಾಶ ಸಿಗುತ್ತದೆ.
8. ನಮ್ಮ ಪರಿಸ್ಥಿತಿ ಅನುಮತಿಸುವಲ್ಲಿ ಸ್ವಯಂಸೇವಕರಾಗಿ ಕೆಲಸಮಾಡಿದರೆ ಸಿಗುವ ಪ್ರಯೋಜನಗಳೇನು?
8 ಹೊರಗಿನವರು ನಮ್ಮ ಸುಸಂಘಟಿತ ಹಾಗೂ ಸುವ್ಯವಸ್ಥಿತ ಅಧಿವೇಶನಗಳನ್ನು ನೋಡಿ ಪ್ರಭಾವಿತರಾಗುತ್ತಾರೆ. ವಿಶೇಷವಾಗಿ ಎಲ್ಲ ಕೆಲಸವನ್ನು ಸ್ವಯಂಸೇವಕರೇ ಮಾಡುತ್ತಾರೆಂದು ತಿಳಿದಾಗಲಂತೂ ಅವರಿಗೆ ಆಶ್ಚರ್ಯ. ಅಧಿವೇಶನ ಸ್ಥಳದಲ್ಲಿ ‘ಸಂತೋಷದಿಂದ ನೀವಾಗಿ’ ಕೆಲಸಕ್ಕೆ ಕೈಜೋಡಿಸಬಲ್ಲಿರೊ? (ಕೀರ್ತ. 110:3) ಎಷ್ಟೋ ಸಲ ಇಡೀ ಕುಟುಂಬ ಕೆಲಸಮಾಡಲು ಮುಂದೆ ಬರುತ್ತದೆ. ಹೀಗೆ ಇತರರಿಗೆ ಸಹಾಯಮಾಡಲು ಮಕ್ಕಳಿಗೂ ತರಬೇತಿ ಸಿಗುತ್ತದೆ. ಒಂದುವೇಳೆ ನೀವು ನಾಚಿಕೆ ಸ್ವಭಾವದವರಾಗಿದ್ದರೆ, ಅಧಿವೇಶನಕ್ಕೆ ಬಂದಿರುವ ಇತರರ ಪರಿಚಯಮಾಡಿಕೊಳ್ಳಲು ಇದೊಂದು ಉತ್ತಮ ವಿಧಾನ. ಒಬ್ಬ ಸಹೋದರಿ ಹೀಗಂದರು: “ನನ್ನ ಕುಟುಂಬ ಸದಸ್ಯರು ಹಾಗೂ ಬೆರಳೆಣಿಕೆಯಷ್ಟು ಸ್ನೇಹಿತರನ್ನು ಬಿಟ್ಟರೆ ಅಧಿವೇಶನಕ್ಕೆ ಬಂದವರಲ್ಲಿ ಯಾರ ಪರಿಚಯವೂ ನನಗಿರಲಿಲ್ಲ. ಆದರೆ ಶುಚಿಗೊಳಿಸುವ ಕೆಲಸದಲ್ಲಿ ಸಹಾಯ ಮಾಡಿದಾಗ ನನಗೆ ಅನೇಕ ಸೋದರ ಸೋದರಿಯರ ಪರಿಚಯವಾಯಿತು. ತುಂಬ ಖುಷಿಯಾಯಿತು!” ಸ್ವಯಂಸೇವಕರಾಗಿ ಕೆಲಸ ಮಾಡುವುದರಿಂದ ನಮಗೆ ಸ್ನೇಹಿತರು ಹೆಚ್ಚಾಗುತ್ತಾರೆ. ಇದು ತುಂಬ ಆನಂದ ತರುವುದು. (2 ಕೊರಿಂ. 6:12, 13) ನೀವು ಈ ವರೆಗೆ ಸ್ವಯಂಸೇವಕರಾಗಿ ಕೆಲಸ ಮಾಡಿರದಿದ್ದರೂ ಈಗ ಆ ಆಸೆ ಇರುವಲ್ಲಿ, ಏನು ಮಾಡಬೇಕೆಂದು ಹಿರಿಯರ ಬಳಿ ಕೇಳಿ ತಿಳಿದುಕೊಳ್ಳಿ.
9. ಅಧಿವೇಶನಕ್ಕೆ ಹಾಜರಾಗಲು ಇತರರನ್ನು ಹೇಗೆ ಆಮಂತ್ರಿಸುವೆವು?
9 ಬೈಬಲ್ ಸತ್ಯ ತಿಳಿಯಲು ಇತರರನ್ನು ಆಮಂತ್ರಿಸಿ: ನಾವು ಹಿಂದಿನ ವರ್ಷಗಳಲ್ಲಿ ಮಾಡಿರುವಂತೆ ಅಧಿವೇಶನಕ್ಕೆ ಮೂರು ವಾರಗಳಿರುವಾಗ ಇತರರನ್ನು ಆಮಂತ್ರಿಸುವ ಅಭಿಯಾನದಲ್ಲಿ ತೊಡಗಲಿದ್ದೇವೆ. ಸಭೆಗಳು ತಮ್ಮ ಸೇವಾಕ್ಷೇತ್ರದಲ್ಲಿ ಸಾಧ್ಯವಾದಷ್ಟು ಹೆಚ್ಚು ಮನೆಗಳಿಗೆ ಆಮಂತ್ರಣ ಪತ್ರ ವಿತರಿಸಬೇಕು. (“ಆಮಂತ್ರಣ ಪತ್ರ ನೀಡುವುದು ಹೇಗೆ?” ಚೌಕ ನೋಡಿ) ಬಾಕಿ ಉಳಿದಿರುವ ಆಮಂತ್ರಣ ಪತ್ರಗಳನ್ನು ಅಧಿವೇಶನಕ್ಕೆ ತನ್ನಿ. ಇವುಗಳನ್ನು ಅಧಿವೇಶನ ನಗರದಲ್ಲಿ ಅನೌಪಚಾರಿಕ ಸಾಕ್ಷಿಕೊಡಲು ಬಳಸಲಾಗುವುದು.
10. ಆಮಂತ್ರಣ ಪತ್ರ ವಿತರಣೆಯ ವಾರ್ಷಿಕ ಅಭಿಯಾನ ಫಲಿತಾಂಶ ತರುತ್ತದೆಂದು ತೋರಿಸುವ ಅನುಭವಗಳನ್ನು ತಿಳಿಸಿ.
10 ಈ ವಾರ್ಷಿಕ ಅಭಿಯಾನಕ್ಕೆ ಜನರು ಸ್ಪಂದಿಸುತ್ತಾರೊ? ಒಂದು ಅಧಿವೇಶನದಲ್ಲಿ ಒಬ್ಬ ಅಟೆಂಡೆಂಟ್ ಒಂದು ದಂಪತಿಗೆ ಆಸನ ಕಂಡುಕೊಳ್ಳಲು ಸಹಾಯಮಾಡಿದನು. ಆ ದಂಪತಿ ‘ನಮಗೆ ಒಂದು ಆಮಂತ್ರಣ ಪತ್ರ ಸಿಕ್ಕಿತ್ತು. ಅದು ತುಂಬ ಆಸಕ್ತಿಕರವಾಗಿ ತೋರಿತು’ ಎಂದು ಹೇಳಿದರು. ಅವರು ಅಧಿವೇಶನಕ್ಕೆ ಹಾಜರಾಗಲು ತಮ್ಮ ವಾಹನದಲ್ಲಿ ಸುಮಾರು 320 ಕಿ.ಮೀ. ದೂರ ಪ್ರಯಾಣಿಸಿ ಬಂದಿದ್ದರು! ಇನ್ನೊಂದು ಕಡೆ, ಸಹೋದರಿಯೊಬ್ಬಳು ಮನೆಮನೆ ಸೇವೆಯಲ್ಲಿ ಒಬ್ಬ ವ್ಯಕ್ತಿಗೆ ಆಮಂತ್ರಣ ಪತ್ರ ಕೊಟ್ಟಾಗ ಅದರ ಬಗ್ಗೆ ಅವನಲ್ಲಿ ಕುತೂಹಲವಿದ್ದಂತೆ ಕಂಡಿತು. ಆಗ ಸಹೋದರಿ ಸ್ವಲ್ಪ ಹೊತ್ತು ಅವನೊಟ್ಟಿಗೆ ಆ ಆಮಂತ್ರಣ ಪತ್ರದ ವಿಷಯ ಚರ್ಚಿಸಿದಳು. ಕೆಲವು ದಿನ ಬಳಿಕ ಆಕೆ ಅಧಿವೇಶನದಲ್ಲಿ ಆ ವ್ಯಕ್ತಿಯನ್ನು ಅವನ ಸ್ನೇಹಿತನ ಜತೆ ನೋಡಿದಳು. ಅವನ ಕೈಯಲ್ಲಿ ಹೊಸದಾಗಿ ಬಿಡುಗಡೆಯಾಗಿದ್ದ ಪ್ರಕಾಶನವೂ ಇತ್ತು!
11. ವಾರ್ಷಿಕ ಜಿಲ್ಲಾ ಅಧಿವೇಶನಗಳಿಗೆ ಹಾಜರಾಗುವುದು ಏಕೆ ಪ್ರಾಮುಖ್ಯ?
11 ಇಸ್ರಾಯೇಲ್ಯರು ಆಚರಿಸುತ್ತಿದ್ದ ವರ್ಷದ ಮೂರು ಹಬ್ಬಗಳು ಯೆಹೋವನ ಪ್ರೀತಿಪರ ಏರ್ಪಾಡಾಗಿತ್ತು. ಅದರಿಂದ ಅವರಿಗೆ ‘ಆತನನ್ನು ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ ಸೇವಿಸಲು’ ಸಹಾಯ ಸಿಗುತ್ತಿತ್ತು. (ಯೆಹೋ. 24:14) ಅದೇ ರೀತಿ ವಾರ್ಷಿಕ ಜಿಲ್ಲಾ ಅಧಿವೇಶನಗಳನ್ನು ನಾವು ಹಾಜರಾದರೆ “ಸತ್ಯದಲ್ಲಿ ನಡೆಯುತ್ತಾ ಇರು”ವಂತೆ ನಮಗೆ ಸಹಾಯ ಸಿಗುತ್ತದೆ. ಅಲ್ಲದೆ ಅದು ನಮ್ಮ ಆರಾಧನೆಯ ಒಂದು ಮುಖ್ಯ ಭಾಗ. (3 ಯೋಹಾ. 3) ಅಧಿವೇಶನಕ್ಕೆ ಹಾಜರಾಗಿ ಪೂರ್ಣ ಪ್ರಯೋಜನ ಪಡೆಯಲು ಸತ್ಯದ ಪ್ರೇಮಿಗಳೆಲ್ಲರೂ ಮಾಡುವ ಯತ್ನವನ್ನು ಯೆಹೋವನು ಹರಸಲಿ!
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅಧಿವೇಶನ ನಗರದಲ್ಲಿರುವಾಗ ನಮ್ಮ ಒಳ್ಳೇ ನಡತೆ ಸತ್ಯವನ್ನು ಅಲಂಕರಿಸುತ್ತದೆ
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅಧಿವೇಶನಕ್ಕೆ ಮೂರು ವಾರಗಳಿರುವಾಗ ಇತರರನ್ನು ಆಮಂತ್ರಿಸುವ ಅಭಿಯಾನ ಆರಂಭವಾಗಲಿದೆ
[ಪುಟ 6, 7ರಲ್ಲಿರುವ ಚೌಕ]
2012ರ ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯ: ಮೂರೂ ದಿನ ಕಾರ್ಯಕ್ರಮ ಬೆಳಿಗ್ಗೆ 9:20ಕ್ಕೆ ಆರಂಭವಾಗುವುದು. ಸಭಾಂಗಣದ ಬಾಗಿಲುಗಳನ್ನು ಬೆಳಿಗ್ಗೆ 8:00 ಗಂಟೆಗೆ ತೆರೆಯಲಾಗುವುದು. ರಾಜ್ಯ ಸಂಗೀತ ಆರಂಭವಾಗಲಿದೆ ಎಂಬ ಪ್ರಕಟನೆಯಾದಾಗ ನಾವೆಲ್ಲರೂ ನಮ್ಮ ಸೀಟುಗಳಲ್ಲಿ ಕುಳಿತುಕೊಳ್ಳಬೇಕು. ಕಾರ್ಯಕ್ರಮ ವ್ಯವಸ್ಥಿತ ರೀತಿಯಲ್ಲಿ ಆರಂಭವಾಗಲು ಇದು ನೆರವಾಗುತ್ತದೆ. ಕಾರ್ಯಕ್ರಮ ಶುಕ್ರವಾರ, ಶನಿವಾರ ಸಂಜೆ 4:55ಕ್ಕೆ ಹಾಗೂ ಭಾನುವಾರ ಸಂಜೆ 3:40ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳಿರುವ ಎಲ್ಲ ಅಧಿವೇಶನ ಸ್ಥಳಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಗನುಸಾರ ವಾಹನಗಳಿಗೆ ಫ್ರೀ ಪಾರ್ಕಿಂಗ್ ವ್ಯವಸ್ಥೆ ಇರುವುದು. ಪಾರ್ಕಿಂಗ್ ಸ್ಥಳ ಸೀಮಿತವಾಗಿರುವುದರಿಂದ ಒಂದು ಕಾರಿನವರು ಇನ್ನೊಂದು ಕಾರಿನವರನ್ನು ತಮ್ಮೊಂದಿಗೆ ಪ್ರಯಾಣಿಸಲು ಏರ್ಪಾಡು ಮಾಡಬಹುದು.
◼ ಸೀಟು ಹಿಡಿಯುವುದು: ನಮ್ಮ ಮನೆಯವರಿಗೆ ಅಥವಾ ಕಾರ್ನಲ್ಲಿ ನಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ ಅಥವಾ ನಮ್ಮ ಸದ್ಯದ ಬೈಬಲ್ ವಿದ್ಯಾರ್ಥಿಗಳಿಗೆ ಮಾತ್ರ ಸೀಟುಗಳನ್ನು ಹಿಡಿದಿಡಬಹುದು.—1 ಕೊರಿಂ. 13:5.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮದಲ್ಲಿ ಊಟಕ್ಕಾಗಿ ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲು ದಯವಿಟ್ಟು ಲಘು ಆಹಾರ ತೆಗೆದುಕೊಂಡು ಬನ್ನಿ. ಲಂಚ್ ಬ್ಯಾಗ್ ಸೀಟಿನಡಿ ಇಡುವಷ್ಟು ಚಿಕ್ಕದಿರಲಿ. ದೊಡ್ಡ ದೊಡ್ಡ ಟಿಫಿನ್ಗಳು, ಗಾಜಿನ ಪಾತ್ರೆಗಳನ್ನು ತರಬಾರದು.
◼ ದಾನಗಳು: ಲೋಕವ್ಯಾಪಕ ಕೆಲಸಕ್ಕಾಗಿ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ಅಧಿವೇಶನ ಏರ್ಪಾಡುಗಳಿಗಾಗಿ ಗಣ್ಯತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಕೊಡುವ ಯಾವುದೇ ಚೆಕ್ಗಳಲ್ಲಿ “The Watch Tower Bible and Tract Society of India” ಇದಕ್ಕೆ ಹಣಸಂದಾಯವಾಗಬೇಕೆಂದು ಗುರುತಿಸಬೇಕು.
◼ ಅಪಘಾತಗಳು ಮತ್ತು ತುರ್ತು ಪರಿಸ್ಥಿತಿಗಳು: ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಾಗ ದಯವಿಟ್ಟು ಹತ್ತಿರದಲ್ಲಿರುವ ಅಟೆಂಡೆಂಟ್ಗೆ ತಿಳಿಸಿ. ಅವನು ಕೂಡಲೇ ಪ್ರಥಮ ಚಿಕಿತ್ಸೆಯ ಇಲಾಖೆಗೆ ಅದನ್ನು ತಿಳಿಸುವನು. ಆಗ ಪ್ರಥಮ ಚಿಕಿತ್ಸೆ ನೀಡಲು ಅರ್ಹರಾದ ನಮ್ಮ ಸಿಬ್ಬಂದಿ ಅಸ್ವಸ್ಥನ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಪರೀಕ್ಷಿಸಿ ಬೇಕಾದ ಸಹಾಯ ನೀಡುವರು. ಅವಶ್ಯಬೀಳುವಲ್ಲಿ ಅವರೇ ಆ್ಯಂಬುಲೆನ್ಸ್ ಕರೆಸುವರು. ಏಕೆಂದರೆ ಹಲವಾರು ಮಂದಿ ಕರೆಗಳನ್ನು ಮಾಡಿದರೆ ಅಂಥ ಸೇವೆಯನ್ನು ಒದಗಿಸುವವರಿಗೆ ಅಡಚಣೆಯಾಗುವುದು.
◼ ಔಷಧ: ವೈದ್ಯರ ಸಲಹೆ ಮೇರೆಗೆ ನೀವು ನಿಯಮಿತವಾಗಿ ಯಾವುದಾದರೂ ಔಷಧ ಸೇವಿಸುತ್ತಿರುವಲ್ಲಿ ದಯವಿಟ್ಟು ಅದನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ಬನ್ನಿ. ಏಕೆಂದರೆ ಅಧಿವೇಶನದ ಸ್ಥಳದಲ್ಲಿ ಅವು ಲಭ್ಯವಿರುವುದಿಲ್ಲ. ಮಧುಮೇಹದ ಸಿರಿಂಜು, ಸೂಜಿಗಳನ್ನು ಕಾಗದ, ಕಸಗಳ ಜತೆ ಎಸೆಯದೆ ಅದಕ್ಕೆಂದೇ ಇರುವ ‘ಅಪಾಯಕಾರಿ ತ್ಯಾಜ್ಯ’ ತೊಟ್ಟಿಗೆ ಎಸೆಯಿರಿ.
◼ ಪಾದರಕ್ಷೆ: ಪ್ರತಿವರ್ಷ ಅನೇಕರಿಗೆ ಪಾದರಕ್ಷೆಗಳಿಂದಾಗಿ ಗಾಯ-ನೋವು ಆಗುತ್ತದೆ. ಆದ್ದರಿಂದ ಕಾಲಿನ ಗಾತ್ರಕ್ಕೆ ಸರಿಹೊಂದುವ ಸಭ್ಯ ಪಾದರಕ್ಷೆಗಳನ್ನು ಧರಿಸಿದರೆ ಇಳಿಜಾರಿನಲ್ಲಿ, ಮೆಟ್ಟಿಲುಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಸುರಕ್ಷಿತವಾಗಿ ನಡೆಯಲು ಸಾಧ್ಯ.
◼ ಶ್ರವಣ ವೈಕಲ್ಯ: ಕೆಲವು ಆಯ್ದ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಸನ್ನೆ ಭಾಷೆಯಲ್ಲೂ ಪ್ರಸ್ತುತಪಡಿಸಲಾಗುತ್ತದೆ.
◼ ದೀಕ್ಷಾಸ್ನಾನ: ಶನಿವಾರ ಬೆಳಿಗ್ಗೆ ಕೊಡಲಾಗುವ ದೀಕ್ಷಾಸ್ನಾನ ಭಾಷಣದ ಮುಂಚೆಯೇ, ದೀಕ್ಷಾಸ್ನಾನ ಅಭ್ಯರ್ಥಿಗಳು ತಮಗೆಂದು ಕಾದಿರಿಸಲಾದ ಸೀಟುಗಳಲ್ಲಿ ಕುಳಿತಿರಬೇಕು. ದೀಕ್ಷಾಸ್ನಾನಕ್ಕಾಗಿ ಸಭ್ಯ ಉಡುಪು, ಟವಲ್ ತರಬೇಕು. ಅಭ್ಯರ್ಥಿಗಳಿಗೆ ವೇದಿಕೆಯ ಮುಂಭಾಗದಲ್ಲೇ ಸೀಟುಗಳನ್ನು ಕಾದಿರಿಸಲಾಗಿರುತ್ತದೆ. ಇದರಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ಮೊದಲೇ ಪ್ರಕಟಿಸಲಾಗುವುದು. ಇದು ಅಟೆಂಡೆಂಟ್ಗಳಿಗೆ ಮತ್ತು ಮಾಹಿತಿ ಇಲಾಖೆಗೆ ಗೊತ್ತಿರುತ್ತದೆ.
◼ ಸುಗಂಧ ದ್ರವ್ಯಗಳು: ಹೆಚ್ಚಿನ ಅಧಿವೇಶನಗಳು ಹವಾನಿಯಂತ್ರಿತ ಸಭಾಂಗಣಗಳಲ್ಲಿ ನಡೆಯುತ್ತವೆ. ಆದುದರಿಂದ, ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿರುವವರ ಆರೋಗ್ಯಕ್ಕೆ ಹಾನಿಯಾಗದಂತೆ ತೀಕ್ಷ್ಣ ಸುವಾಸನೆಯ ಸೆಂಟ್ಗಳನ್ನು ಮಿತವಾಗಿ ಬಳಸಿ. ಹೀಗೆ ಸಹೋದರರ ಕಡೆಗೆ ಪ್ರೀತಿ ತೋರಿಸಿ.—1 ಕೊರಿಂ. 10:24.
◼ ಪ್ಲೀಸ್ ಫಾಲೋ-ಅಪ್ (S-43) ಫಾರ್ಮ್ಗಳು: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದಾಗ ಸಿಕ್ಕಿದ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿ ಒದಗಿಸಲು ಪ್ಲೀಸ್ ಫಾಲೋ ಅಪ್ ಫಾರ್ಮ್ ಬಳಸಬೇಕು. ಅಧಿವೇಶನಕ್ಕೆ ಬರುವಾಗ ಪ್ರಚಾರಕರು ಒಂದೆರಡು ಫಾರ್ಮ್ಗಳನ್ನು ತರಬೇಕು. ಅವನ್ನು ತುಂಬಿಸಿದ ಮೇಲೆ ಅಧಿವೇಶನದ ಬುಕ್ರೂಮ್ಗೆ ಕೊಡಬೇಕು ಅಥವಾ ಸಭೆಗೆ ಹಿಂದೆ ಬಂದ ಮೇಲೆ ಸಭಾ ಸೆಕ್ರಿಟರಿಗೆ ಕೊಡಬೇಕು.—ಮೇ 2011ರ ನಮ್ಮ ರಾಜ್ಯ ಸೇವೆಯ ಪುಟ 3 ನೋಡಿ.
◼ ರೆಸ್ಟಾರೆಂಟ್ಗಳು: ರೆಸ್ಟಾರೆಂಟ್ಗಳಲ್ಲಿ ಉತ್ತಮ ನಡತೆಯ ಮೂಲಕ ಯೆಹೋವನ ಹೆಸರನ್ನು ಮಹಿಮೆಪಡಿಸಿ. ಅಲ್ಲಿ ಟಿಪ್ಸ್ ಕೊಡುವ ರೂಢಿಯಿದ್ದರೆ ಕೊಡಿ.
◼ ಹೋಟೆಲ್ಗಳು:
(1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್ಗಳನ್ನು ಬುಕ್ ಮಾಡಬೇಡಿ. ಹೋಟೆಲ್ ಅನುಮತಿಸುವುದಕ್ಕಿಂತ ಹೆಚ್ಚು ಮಂದಿ ರೂಮ್ನಲ್ಲಿ ಉಳುಕೊಳ್ಳಬಾರದು.
(2) ತುರ್ತು ಪರಿಸ್ಥಿತಿ ಬಿಟ್ಟು ಬೇರಾವ ಕಾರಣಕ್ಕೂ ಬುಕ್ಕಿಂಗ್ ರದ್ದುಮಾಡಬಾರದು. ಹೀಗೆ ರದ್ದುಗೊಳಿಸಬೇಕಾದಲ್ಲಿ ಕೂಡಲೆ ಹೋಟೆಲ್ನವರಿಗೆ ತಿಳಿಸಿ.—ಮತ್ತಾ. 5:37.
(3) ದಯವಿಟ್ಟು ನೆನಪಿಡಿ: ಹೋಟೆಲಿಗೆ ದಾಖಲಾಗುವಾಗ ನೀವು ಡೆಬಿಟ್ ಯಾ ಕ್ರೆಡಿಟ್ ಕಾರ್ಡ್ ಬಳಸುವಲ್ಲಿ, ರೂಮ್ ಬಾಡಿಗೆಯ ಜೊತೆಗೆ ಸಂಭಾವ್ಯ ಹಾನಿಗೆಂದು ಹೆಚ್ಚುವರಿ ಹಣವನ್ನು ಹೋಟೆಲಿನವರು ಹಿಡಿದಿಟ್ಟುಕೊಳ್ಳುವುದು ರೂಢಿ. ನೀವಲ್ಲಿಂದ ಹೊರಟು ಲೆಕ್ಕ ಚುಕ್ತಾ ಆಗುವ ತನಕ ಅಂದರೆ ಕೆಲವು ದಿನ ನೀವು ಆ ಹಣವನ್ನು ಬಳಸಲು ಸಾಧ್ಯವಿಲ್ಲ.
(4) ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ಟ್ರಾಲಿ ತೆಗೆದುಕೊಳ್ಳಿ ಮತ್ತು ಇತರರ ಉಪಯೋಗಕ್ಕಾಗಿ ಕೂಡಲೆ ಹಿಂದಿರುಗಿಸಿ.
(5) ನಿಮ್ಮ ಸಾಮಾನನ್ನು ಹೊರುವ ಹೋಟೆಲ್ ಕೆಲಸಗಾರರಿಗೆ ಟಿಪ್ಸ್ ಕೊಡಿ ಮತ್ತು ಕೋಣೆ ಶುಚಿ ಮಾಡುವವನಿಗೆ ಪ್ರತಿದಿನ ಟಿಪ್ಸ್ ಕೊಡಿ.
(6) ರೂಮಿನಲ್ಲಿ ಅಪ್ಪಣೆ ವಿನಃ ಅಡಿಗೆ ಮಾಡಬಾರದು.
(7) ಅತಿಥಿಗಳಿಗೆ ಹೋಟೆಲ್ನಲ್ಲಿರುವಾಗ ಉಚಿತವಾಗಿ ಸಿಗುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳನ್ನು ದುರುಪಯೋಗಿಸಬೇಡಿ.
(8) ಹೋಟೆಲ್ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗಲೆಲ್ಲಾ ದೇವರಾತ್ಮದ ಫಲವನ್ನು ತೋರಿಸಿ. ಅವರಿಗೆ ಅನೇಕ ಅತಿಥಿಗಳನ್ನು ನೋಡಿಕೊಳ್ಳಲಿಕ್ಕಿದೆ. ಆದ್ದರಿಂದ ನಾವು ಅವರೊಂದಿಗೆ ದಯೆ, ತಾಳ್ಮೆ, ವಿವೇಚನೆಯಿಂದ ನಡಕೊಂಡರೆ ಅವರದನ್ನು ಗಣ್ಯಮಾಡುವರು.
(9) ಹೋಟೆಲಿನಲ್ಲಿ ಎಲ್ಲ ಸಮಯ ಹೆತ್ತವರು ಮಕ್ಕಳ ನಿಗಾ ವಹಿಸಬೇಕು. ಈಜುಕೊಳ, ಲಿಫ್ಟ್, ಲಾಬಿ ಸೇರಿದಂತೆ ಮತ್ತಿತ್ತರ ಕಡೆಗಳಲ್ಲೂ ನಿಗಾ ವಹಿಸಬೇಕು.
(10) ಶಿಫಾರಸ್ಸು ಮಾಡಲಾದ ಲಾಡ್ಜಿಂಗ್ ಲಿಸ್ಟ್ನಲ್ಲಿರುವ ರೂಮ್ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆಯಾಗಿವೆ. ಇದರಲ್ಲಿ ತೆರಿಗೆ ಸೇರಿಲ್ಲ. ಅದನ್ನು ನೀವು ಕೊಡಬೇಕಾದೀತು. ಆದರೆ ಅದಕ್ಕಿಂತ ಹೆಚ್ಚು ಹಣವನ್ನು ನಿಮ್ಮ ಬಿಲ್ಗೆ ಹಾಕಿದ್ದಲ್ಲಿ ಕೊಡಬೇಡಿ. ಈ ವಿಷಯವನ್ನು ಅಧಿವೇಶನದ ರೂಮಿಂಗ್ ಇಲಾಖೆಗೆ ಆದಷ್ಟು ಬೇಗ ತಿಳಿಸಿ.
(11) ಹೋಟೆಲ್ ರೂಮ್ ಸಂಬಂಧದಲ್ಲಿ ಸಮಸ್ಯೆ ಏಳುವಲ್ಲಿ ಅಧಿವೇಶನದಲ್ಲಿರುವಾಗಲೇ ರೂಮಿಂಗ್ ಇಲಾಖೆಗೆ ತಿಳಿಸಿದರೆ ಅವರು ನಿಮಗೆ ಸಹಾಯ ಮಾಡುವರು.
◼ ಸ್ವಯಂಸೇವೆ: ಸ್ವಯಂಸೇವಕರಾಗಲು ನೀವು ಬಯಸುವಲ್ಲಿ ಸ್ವಯಂಸೇವಾ ಇಲಾಖೆಯನ್ನು ಸಂಪರ್ಕಿಸಿ. 16 ವರ್ಷಕ್ಕಿಂತ ಚಿಕ್ಕವರು ತಮ್ಮ ಹೆತ್ತವರ, ಪೋಷಕರ ಇಲ್ಲವೆ ಅವರ ಒಪ್ಪಿಗೆಯಿರುವ ಒಬ್ಬ ಪ್ರೌಢ ವ್ಯಕ್ತಿಯ ನಿರ್ದೇಶನದಡಿ ಸ್ವಯಂಸೇವಕರಾಗಿ ಕೆಲಸಮಾಡಬಹುದು.
[ಪುಟ 6ರಲ್ಲಿರುವ ಚೌಕ]
ಆಮಂತ್ರಣ ಪತ್ರ ನೀಡುವುದು ಹೇಗೆ?
ನಮ್ಮ ಸೇವಾಕ್ಷೇತ್ರವನ್ನು ಸಾಧ್ಯವಾದಷ್ಟು ಹೆಚ್ಚು ಆವರಿಸಲಿರುವುದರಿಂದ ನಮ್ಮ ಮಾತು ಚುಟುಕಾಗಿರಬೇಕು. ನಾವು ಹೀಗನ್ನಬಹುದು: “ನಮಸ್ಕಾರ. ಲೋಕದಾದ್ಯಂತ ಈ ಆಮಂತ್ರಣ ಪತ್ರವನ್ನು ವಿತರಿಸಲಾಗುತ್ತಿದೆ. ಇದು ನಿಮಗೆ. ಹೆಚ್ಚಿನ ವಿವರಗಳು ಇದರಲ್ಲಿವೆ.” ಹುರುಪಿನಿಂದ ಮಾತಾಡಿ. ವಾರಾಂತ್ಯಗಳಲ್ಲಿ ವಿತರಿಸುವಾಗ ಸೂಕ್ತವಿರುವಲ್ಲೆಲ್ಲ ಪತ್ರಿಕೆಗಳನ್ನೂ ನೀಡಿ.