‘ಒಳ್ಳೇದನ್ನು ಮಾಡುತ್ತಾ ಇರಿ’
1 ನೀವು ಯೆಹೋವ ದೇವರ ಸೇವಕರಾದಾಗ ಒಂದು ಒಳ್ಳೆಯ ಕೆಲಸವನ್ನು ಮಾಡಿದಿರಿ. ಆದರೆ ಈಗ, ಈ ಕಠಿನ ಕಾಲಗಳಲ್ಲಿ ‘ಒಳ್ಳೇದನ್ನು ಮಾಡುತ್ತಾ ಇರುವುದು’ ಒಂದು ಪಂಥಾಹ್ವಾನವಾಗಿದೆ. (ಗಲಾ. 6:9) ಇದು ಗಂಭೀರವಾದ ಪ್ರಯತ್ನವನ್ನು ಅಗತ್ಯಪಡಿಸುವುದಾದರೂ, ನೀವು ಅದನ್ನು ಮಾಡಬಲ್ಲಿರಿ. ಹೇಗೆ?
2 ಯೇಸುವಿನ ಮನಸ್ಸನ್ನು ಬೆಳೆಸಿಕೊಳ್ಳಿ: ನಿಮ್ಮ ಗಮನವು ರಾಜ್ಯ ನಿರೀಕ್ಷೆಯ ಮೇಲೆ ಕೇಂದ್ರೀಕೃತವಾಗಿದ್ದರೆ, ಯೇಸುವಿನಂತೆಯೇ ನೀವು ಸಹ ಶೋಧನೆಗಳನ್ನು ತಾಳಿಕೊಳ್ಳಲು ಸಾಧ್ಯವಾಗುವುದು. (ಇಬ್ರಿ. 12:2, 3) ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನೀವು ಯಶಸ್ವಿಕರವಾಗಿ ಮುಂದುವರಿಯುವಂತೆ ಬಯಸುತ್ತಾನೆ ಎಂಬುದರ ಕುರಿತು ನಿಶ್ಚಯದಿಂದಿರಿ. (2 ಪೇತ್ರ 3:9) ಆತನು ನಿಮಗೆ ಸಹಾಯಮಾಡುವನು ಎಂಬ ದೃಢನಂಬಿಕೆಯಿಂದ, ಆತನಲ್ಲಿ ನಿಮ್ಮ ಪೂರ್ಣ ಭರವಸೆಯನ್ನು ಇಡಿರಿ. (1 ಕೊರಿಂ. 10:13) ನೀವು ತಾಳಿಕೊಳ್ಳಲು ಸಹಾಯಮಾಡುವಂತೆ ಯೆಹೋವನನ್ನು ಕೇಳಿಕೊಳ್ಳುತ್ತಾ, ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಿರಿ. (ರೋಮಾ. 12:12, NW) ನಿಮ್ಮ ತಾಳ್ಮೆಯು ದೇವರ ದೃಷ್ಟಿಯಲ್ಲಿ ಅಂಗೀಕೃತ ಸ್ಥಿತಿಗೆ ನಡೆಸುತ್ತದೆ ಎಂಬ ದೃಢಸಂಕಲ್ಪದಲ್ಲಿ ಆನಂದಿಸಿರಿ. (ರೋಮಾ. 5:3-5, NW) “ಕ್ರಿಸ್ತ ಯೇಸುವಿಗಿದ್ದ ಅದೇ ಮನಸ್ಸನ್ನು” ಬೆಳೆಸಿಕೊಳ್ಳುವುದರಲ್ಲಿ ನೀವು ತೋರಿಸುವ ನಂಬಿಗಸ್ತಿಕೆಯು, ನಿಮಗೆ ವೈಯಕ್ತಿಕ ಸಂತೃಪ್ತಿಯನ್ನು ನೀಡುವುದು ಮತ್ತು ಯೆಹೋವನ ಮನಸ್ಸನ್ನು ಸಂತೋಷಪಡಿಸುವುದು.—ರೋಮಾ. 15:5, NW; ಜ್ಞಾನೋ. 27:11.
3 ಉತ್ತಮವಾದದ್ದನ್ನು ಮಾಡುತ್ತಾ ಇರ್ರಿ: ತನ್ನ ಜನರು ಒಳ್ಳೇದನ್ನು ಮಾಡುತ್ತಾ ಇರಲು ಅವರಿಗೆ ಸಹಾಯಮಾಡಲಿಕ್ಕಾಗಿ ಯೆಹೋವನು ಮಾಡಿರುವ ಒದಗಿಸುವಿಕೆಗಳ ಪೂರ್ಣ ಲಾಭವನ್ನು ಪಡೆದುಕೊಳ್ಳಿ. ದೇವರ ವಾಕ್ಯವನ್ನು ಓದುವ ಮತ್ತು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಬೈಬಲ್-ಆಧಾರಿತ ಪ್ರಕಾಶನಗಳನ್ನು ಅಭ್ಯಾಸಮಾಡುವ ಒಳ್ಳೆಯ ವೈಯಕ್ತಿಕ ರೂಢಿಯನ್ನು ಇಟ್ಟುಕೊಳ್ಳಿರಿ. ಸಭೆಯ ಎಲ್ಲಾ ಕೂಟಗಳಿಗಾಗಿ ನಿಷ್ಠೆಯಿಂದ ತಯಾರಿಸಿ, ಹಾಜರಾಗಿ ಮತ್ತು ಭಾಗವಹಿಸಿ. ಕ್ರೈಸ್ತ ಕೂಟಗಳಿಗೆ ಮುಂಚೆ ಮತ್ತು ನಂತರ, ನಿಮ್ಮ ಆತ್ಮಿಕ ಸಹೋದರ ಸಹೋದರಿಯರೊಂದಿಗೆ ನಿಕಟವಾಗಿ ಸಹವಾಸಮಾಡಿರಿ. ಕ್ಷೇತ್ರ ಸೇವೆಯಲ್ಲಿ ಅರ್ಥಭರಿತವಾಗಿ ಪಾಲ್ಗೊಳ್ಳಲು ಮತ್ತು ಸುವಾರ್ತೆಯನ್ನು ಇತರರಿಗೆ ಸಾರುವುದರಲ್ಲಿನ ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸಲು, ನಿಮ್ಮ ಶುಶ್ರೂಷೆಯಲ್ಲಿ ನೈಜವಾದ ಗುರಿಗಳನ್ನು ಇಡಿರಿ.
4 ಈ ರೀತಿಯಲ್ಲೇ ನೀವು ಒಳ್ಳೇದನ್ನು ಮಾಡುತ್ತಾ ಇರಬಹುದು ಮತ್ತು ಅದೇ ಸಮಯದಲ್ಲಿ ಹೆಚ್ಚಿನ ಸಂತೋಷವನ್ನು ಅನುಭವಿಸಬಹುದು. ಈ ಸಂಬಂಧದಲ್ಲಿ, ಇಟಲಿಯ ಒಬ್ಬ ಸಹೋದರನು ಹೇಳಿದ್ದು: “ಸಾಯಂಕಾಲ, ನಾನು ದೇವರ ಸೇವೆಯಲ್ಲಿ ಒಂದು ದಿನವನ್ನು ಕಳೆದ ನಂತರ ಮನೆಗೆ ಹಿಂದಿರುಗುವಾಗ, ನನಗೆ ಆಯಾಸವಾಗುತ್ತದೆ ನಿಜ. ಆದರೆ ನಾನು ಸಂತೋಷಿತನಾಗಿದ್ದೇನೆ, ಮತ್ತು ನನ್ನಿಂದ ಯಾರೂ ಕಸಿದುಕೊಳ್ಳಲಾರದಂಥ ಆನಂದವನ್ನು ನನಗೆ ಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ.” ಆದುದರಿಂದ, ಒಳ್ಳೇದನ್ನು ಮಾಡುತ್ತಾ ಇರ್ರಿ. ಆಗ ನೀವೂ ಮಹಾ ಆನಂದವನ್ನು ಅನುಭವಿಸುವಿರಿ.