“ನಾನು ದೃಢವಾಗಿ ನಿಲ್ಲುತ್ತೇನೆ! ನಾನು ದೃಢವಾಗಿ ನಿಲ್ಲುತ್ತೇನೆ! ನಾನು ದೃಢವಾಗಿ ನಿಲ್ಲುತ್ತೇನೆ!”
1 ಈ ಮಾತುಗಳು ಸಾಮೂಹಿಕ ಹತ್ಯಾಕಾಂಡದಿಂದ ಪಾರಾಗಿ ಉಳಿದ ಒಬ್ಬ ನಂಬಿಗಸ್ತ ಸಾಕ್ಷಿಯದ್ದಾಗಿವೆ. ಅವು, ನಾಸಿ ಕ್ರೌರ್ಯದ ಹೊರತೂ ತಮ್ಮ ನಂಬಿಕೆಯಲ್ಲಿ ನಿಶ್ಚಿತಭಾವದಿಂದಿದ್ದ ಸಾವಿರಾರು ಸಾಕ್ಷಿಗಳ—ಜೀವದಿಂದಿರುವವರ ಮತ್ತು ಸತ್ತುಹೋದವರ—ದೃಢಸಂಕಲ್ಪವನ್ನು ಪ್ರತಿಧ್ವನಿಸುತ್ತವೆ. (ಎಫೆ. 6:11, 13) ಅವರ ಧೈರ್ಯದ ಕುರಿತಾದ ಬೆರಗುಗೊಳಿಸುವ ಕಥೆ ಮತ್ತು ವಿಜಯದ ಕುರಿತು ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢವಾಗಿ ನಿಲ್ಲುತ್ತಾರೆ (ಇಂಗ್ಲಿಷ್) ಎಂಬ ಮನಕಲಕಿಸುವ ವಿಡಿಯೋದಲ್ಲಿ ಹೇಳಲ್ಪಟ್ಟಿದೆ. ಸಭೆಯಲ್ಲಿರುವ ಎಲ್ಲರೂ ಇದನ್ನು ನೋಡುವಂತೆ ಮತ್ತು ತಮ್ಮ ಭಾವನೆಗಳು ಹಾಗೂ ಅನಿಸಿಕೆಗಳನ್ನು ಪರಸ್ಪರ ಹಂಚಿಕೊಳ್ಳುವಂತೆ ಉತ್ತೇಜಿಸಲಾಗುತ್ತದೆ.
2 ಈ ಪ್ರಶ್ನೆಗಳು ನಿಮ್ಮ ಯೋಚನೆಯನ್ನು ಪ್ರಚೋದಿಸಲಿ: (1) ಯೆಹೋವನ ಸಾಕ್ಷಿಗಳು ಯಾವ ಕಾರಣಗಳಿಗಾಗಿ ನಾಸಿಗಳ ವಿರುದ್ಧ ನಿರ್ಭೀತವಾದ ನಿಲುವನ್ನು ತೆಗೆದುಕೊಂಡರು? (2ಎ) ಒಂದು ಅಭಿವಂದನೆಯ (ಹೇಲ್ ಹಿಟ್ಲರ್) ವಿಷಯದಲ್ಲಿ ಯಾವ ಪರಸ್ಪರ ವಿರುದ್ಧವಾದ ದೃಷ್ಟಿಕೋನಗಳಿದ್ದವು, ಮತ್ತು ಏಕೆ? (2ಬಿ) ಇದು ಹೇಗೆ ಸಾಕ್ಷಿ ಕುಟುಂಬಗಳನ್ನು ಬಾಧಿಸಿತು? (3) ಎಷ್ಟು ಸಾಕ್ಷಿಗಳು ಸೆರೆಶಿಬಿರಗಳಿಗೆ ಕಳುಹಿಸಲ್ಪಟ್ಟರು, ಅವರು ಅಲ್ಲಿ ಹೇಗೆ ಗುರುತಿಸಲ್ಪಟ್ಟರು, ಮತ್ತು ಗೆಸ್ಟಾಪೊ ಅವರೊಂದಿಗೆ ಹೇಗೆ ವ್ಯವಹರಿಸಿದರು? (4) ಸ್ವಾತಂತ್ರಕ್ಕಾಗಿ ನಮ್ಮ ಸಹೋದರರು ಯಾವ ಕ್ರಯವನ್ನು ಕೊಡಲು ಸಿದ್ಧರಿರಲಿಲ್ಲ? (5ಎ) ಯೆಹೋವನ ಸಾಕ್ಷಿಗಳು ಹೇಗೆ ಮತ್ತು ಯಾವಾಗ ಹಿಟ್ಲರನ ಆಳ್ವಿಕೆಯ ಘೋರ ಕೃತ್ಯಗಳ ವಿರುದ್ಧ ಮಾತಾಡಿದರು? (5ಬಿ) ಹಿಟ್ಲರ್ ಹೇಗೆ ಪ್ರತಿಕ್ರಿಯಿಸಿದನು? (6) ಯೆಹೋವನ ಜನರ ಒಗ್ಗಟ್ಟು, ಶಾರೀರಿಕವಾಗಿಯೂ ಆತ್ಮಿಕವಾಗಿಯೂ ಹೇಗೆ ಅವರಿಗೂ ಇತರರಿಗೂ ಜೀವರಕ್ಷಕವಾಗಿ ಪರಿಣಮಿಸಿತು? (7) ಸೆರೆಶಿಬಿರವೊಂದರಲ್ಲಿ ಯಾವ ರಾಜ್ಯ ಗೀತೆ ರಚಿಸಲ್ಪಟ್ಟಿತು? (8) ಏನೇ ಬರಲಿ, ಯೆಹೋವನಿಗೆ ನಿಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವಂತೆ ಯಾವ ನಂಬಿಗಸ್ತ ಪುರುಷರು, ಸ್ತ್ರೀಯರು, ಮತ್ತು ಯೌವನಸ್ಥರ ಉದಾಹರಣೆಗಳು ನಿಮ್ಮನ್ನು ಪ್ರೇರಿಸುತ್ತವೆ? (1999 ಯಿಯರ್ಬುಕ್, 144-7ನೆಯ ಪುಟಗಳನ್ನೂ ನೋಡಿ.) (9) ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ, ಲೋಕದ ಭಾಗವಾಗಿಲ್ಲದಿರುವುದರ ಕುರಿತು ಈ ವಿಡಿಯೋ ನಿಮ್ಮಲ್ಲಿ ಯಾವ ಅನಿಸಿಕೆಯನ್ನು ಮೂಡಿಸುತ್ತದೆ?
3 ದೃಢವಾಗಿ ನಿಲ್ಲು ವಿಡಿಯೋದಲ್ಲಿ ಚಿತ್ರಿಸಲ್ಪಟ್ಟಿರುವ ಯೆಹೋವನ ಸಾಕ್ಷಿಗಳ ಧೀರ ಮತ್ತು ಪ್ರೋತ್ಸಾಹದಾಯಕ ಮಾದರಿಯು ಯುವ ಜನರಿಗೆ—ಸಾಕ್ಷಿಗಳಾಗಿರದವರಿಗೂ—ಅಸಹಿಷ್ಣುತೆ, ಸಮವಯಸ್ಕರ ಒತ್ತಡ, ಮತ್ತು ಮನಸ್ಸಾಕ್ಷಿ ಎಂಬ ಪ್ರಾಮುಖ್ಯವಾದ ವಿವಾದಾಂಶಗಳನ್ನು ಎದುರಿಸಲು ಸಹಾಯಮಾಡುವುದು. ಒಂದುವೇಳೆ ನೀವು ಮಾಧ್ಯಮಿಕ ಅಥವಾ ಪ್ರೌಢ ಶಾಲೆಗೆ ಹೋಗುತ್ತಿರುವ ಯುವ ವ್ಯಕ್ತಿಯಾಗಿರುವುದಾದರೆ, ನಿಮ್ಮ ಶಿಕ್ಷಕರು ಈ ವಿಚಾರವನ್ನು ಶಾಲೆಯಲ್ಲಿ ಉಪಯೋಗಿಸುವ ಅವಕಾಶವನ್ನು ನೀಡಬಹುದೋ? ಪ್ರಾಯಶಃ ನೀವು ಅವರಿಗೆ ಈ ವಿಡಿಯೋದ ಒಂದು ಪ್ರತಿಯನ್ನು ಕೊಟ್ಟು, ಇದು ಅಷ್ಟೊಂದು ಪ್ರಖ್ಯಾತವಾಗಿರದ ಐತಿಹಾಸಿಕ ವರದಿ ಅಥವಾ ನೀತಿ ಪಾಠವುಳ್ಳ ಒಂದು ಸಾಕ್ಷ್ಯಚಿತ್ರ ಎಂಬುದಾಗಿ ವಿವರಿಸಬಹುದು.
4 ಸರಿಯಾದದ್ದನ್ನು ಮಾಡಲು ದೃಢರಾಗಿ ನಿಲ್ಲುವ ಮೂಲಕ ದೇವರನ್ನು ಸಂತೋಷಪಡಿಸಲು ದೈವಿಕ ಬೋಧನೆಯು ನಮಗೆ ಹೇಗೆ ಆತ್ಮಿಕ ಬಲವನ್ನು ಕೊಡುತ್ತದೆ ಎಂಬುದನ್ನು ತೋರಿಸಲು, ದೃಢವಾಗಿ ನಿಲ್ಲು ವಿಡಿಯೋ ಅತ್ಯುತ್ತಮ ಸಾಧನವಾಗಿದೆ. (1 ಕೊರಿಂ. 16:13) ಇದನ್ನು ಸತ್ಯದಲ್ಲಿ ಆಸಕ್ತಿ ತೋರಿಸುವ ಎಲ್ಲರೊಂದಿಗೂ ಹಂಚಿಕೊಳ್ಳಿ.