ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ವಿದ್ಯಾರ್ಥಿಗಳನ್ನು ಸಂಘಟನೆಯತ್ತ ಮಾರ್ಗದರ್ಶಿಸಿರಿ
1 ಬೈಬಲ್ ಅಧ್ಯಯನಗಳನ್ನು ನಡೆಸುವ ನಮ್ಮ ಗುರಿ ಕೇವಲ ಬೈಬಲ್ ಬೋಧನೆಗಳ ಮಾಹಿತಿಯನ್ನು ಕಲಿಸುವುದು ಮಾತ್ರವಲ್ಲ, ಕ್ರೈಸ್ತ ಸಭೆಯ ಭಾಗವಾಗುವಂತೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದೂ ಆಗಿದೆ. (ಜೆಕ. 8:23) ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರ್ ಈ ದಿಸೆಯಲ್ಲಿ ನಮಗೆ ಸಹಾಯ ಮಾಡಬಲ್ಲದು. ಹೊಸ ಬೈಬಲ್ ವಿದ್ಯಾರ್ಥಿಗಳಿಗೆ ಇದರ ಪ್ರತಿಯನ್ನು ಕೊಟ್ಟು ಓದಲು ಉತ್ತೇಜಿಸಿ. ಅದಲ್ಲದೆ, ಪ್ರತಿವಾರ ಅಧ್ಯಯನದ ಸಮಯದಲ್ಲಿ ಕೆಲವು ನಿಮಿಷಗಳನ್ನಾದರೂ ತೆಗೆದುಕೊಂಡು ಯೆಹೋವನ ಸಂಘಟನೆಯ ಬಗ್ಗೆ ಒಂದೊಂದು ಅಂಶವನ್ನು ಅವರಿಗೆ ತಿಳಿಸುತ್ತಾ ಇರ್ರಿ.
2 ಸಭಾ ಕೂಟಗಳು: ಬೈಬಲ್ ವಿದ್ಯಾರ್ಥಿಗಳು ದೇವರ ಸಂಘಟನೆಯನ್ನು ಗಣ್ಯಮಾಡಲು ಕಲಿಯುವ ಪ್ರಧಾನ ವಿಧ ಸಭಾ ಕೂಟಗಳಲ್ಲಿ ಅವರು ನಮ್ಮೊಂದಿಗೆ ಸಹವಾಸ ಮಾಡುವುದರ ಮೂಲಕವೇ. (1 ಕೊರಿಂ. 14:24, 25) ಆದ್ದರಿಂದ ಮೊದಲಾಗಿ ಅವರಿಗೆ ವಾರದ ಐದು ಕೂಟಗಳ ಪರಿಚಯವಾಗುವಂತೆ ಪ್ರತಿಸಲ ಒಂದೊಂದು ಕೂಟದ ಬಗ್ಗೆ ವಿವರಿಸಿ. ಮುಂದಿನ ಸಾರ್ವಜನಿಕ ಭಾಷಣದ ಶೀರ್ಷಿಕೆ ತಿಳಿಸಿ. ಕಾವಲಿನಬುರುಜು ಅಧ್ಯಯನ ಮತ್ತು ಸಭಾ ಬೈಬಲ್ ಅಧ್ಯಯನಗಳಲ್ಲಿ ಚರ್ಚಿಸಲಾಗುವ ಪ್ರಕಾಶನಗಳನ್ನು ತೋರಿಸಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟದ ಬಗ್ಗೆ ವಿವರಿಸಿ. ಶುಶ್ರೂಷಾ ಶಾಲೆಯಲ್ಲಿ ನಿಮಗೆ ನೇಮಕವಿರುವಲ್ಲಿ ಬಹುಶಃ ನೀವದನ್ನು ಅವರೊಂದಿಗೆ ರಿಹರ್ಸ್ ಮಾಡಬಹುದು. ಕೂಟಗಳಲ್ಲಿ ನೀವು ಕೇಳಿದ ಮುಖ್ಯ ಅಂಶಗಳನ್ನು ಹಂಚಿಕೊಳ್ಳಿ. ನಮ್ಮ ಪ್ರಕಾಶನಗಳಲ್ಲಿನ ಚಿತ್ರಗಳನ್ನು ತೋರಿಸುತ್ತ ಕೂಟಗಳಲ್ಲಿ ನಿಜವಾಗಿಯೂ ಏನು ನಡೆಯುತ್ತದೆ ಎಂಬದನ್ನು ಚಿತ್ರಿಸಿಕೊಳ್ಳಲು ಅವರಿಗೆ ಸಹಾಯಮಾಡಿ. ಕೂಟಗಳಿಗೆ ಹಾಜರಾಗುವಂತೆ ಪ್ರಥಮ ಅಧ್ಯಯನದಿಂದಲೇ ಅವರನ್ನು ಆಮಂತ್ರಿಸಿ.
3 ಜ್ಞಾಪಕಾಚರಣೆ, ಸಮ್ಮೇಳನಗಳು, ಅಧಿವೇಶನಗಳು ಮತ್ತು ಸರ್ಕಿಟ್ ಮೇಲ್ವಿಚಾರಕರ ಭೇಟಿ ಸನ್ನಿಹಿತವಾಗಿರುವಾಗ ಈ ಏರ್ಪಾಡುಗಳ ಬಗ್ಗೆ ವಿದ್ಯಾರ್ಥಿಗೆ ತಿಳಿಸಲು ಹಾಗೂ ಅವರ ಹುಮ್ಮನಸ್ಸನ್ನು ಹೆಚ್ಚಿಸಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಿ. ಒಂದೊಂದಾಗಿ ಈ ಮುಂದಿನ ಪ್ರಶ್ನೆಗಳಿಗೆ ಉತ್ತರಕೊಡಿ: ನಾವು ನಮ್ಮನ್ನು ಯೆಹೋವನ ಸಾಕ್ಷಿಗಳೆಂದು ಕರೆಯುವುದೇಕೆ? ನಮ್ಮ ಕೂಟಗಳು ನಡೆಯುವ ಸ್ಥಳಗಳನ್ನು ರಾಜ್ಯ ಸಭಾಗೃಹಗಳೆಂದು ಹೇಳುವುದೇಕೆ? ಹಿರಿಯರ ಹಾಗೂ ಶುಶ್ರೂಷಾ ಸೇವಕರ ಕರ್ತವ್ಯಗಳೇನು? ಸಾರುವ ಕೆಲಸ ಮತ್ತು ಟೆರಿಟೊರಿಯನ್ನು ಹೇಗೆ ಸಂಘಟಿಸಲಾಗುತ್ತದೆ? ನಮ್ಮ ಸಾಹಿತ್ಯವನ್ನು ಹೇಗೆ ತಯಾರಿಸಲಾಗುತ್ತದೆ? ನಮ್ಮ ಸಂಘಟನೆಯ ಕೆಲಸಕ್ಕೆ ಹಣ ಎಲ್ಲಿಂದ ಬರುತ್ತದೆ? ಕೆಲಸದ ಮೇಲ್ವಿಚಾರಣೆ ಮಾಡುವುದರಲ್ಲಿ ಬ್ರಾಂಚ್ ಆಫೀಸ್ ಮತ್ತು ಆಡಳಿತ ಮಂಡಲಿಯ ಪಾತ್ರಗಳೇನು?
4 ಬೋಧಪ್ರದ ವಿಡಿಯೋಗಳು: ಯೆಹೋವನ ಅದ್ಭುತ ಸಂಘಟನೆಯನ್ನು ಬೈಬಲ್ ವಿದ್ಯಾರ್ಥಿಗಳು ನೋಡಬಹುದಾದ ಇನ್ನೊಂದು ವಿಧ ನಮ್ಮ ವಿಡಿಯೋಗಳ ಮೂಲಕವೇ. ಟು ದಿ ಎಂಡ್ಸ್ ಆಫ್ ದಿ ಅರ್ತ್ ವಿಡಿಯೋ ನಮ್ಮ ಲೋಕವ್ಯಾಪಕ ಸಾರುವ ಚಟುವಟಿಕೆಯನ್ನೂ, ಆವರ್ ಹೋಲ್ ಅಸೋಸಿಏಷನ್ ಆಫ್ ಬ್ರದರ್ಸ್ ವಿಡಿಯೋ ನಮ್ಮ ಲೋಕವ್ಯಾಪಕ ಸಹೋದರತ್ವವನ್ನೂ ಮತ್ತು ಯುನೈಟೆಡ್ ಬೈ ಡಿವೈನ್ ಟೀಚಿಂಗ್ ವಿಡಿಯೋ ಯೆಹೋವನ ಸಾಕ್ಷಿಗಳ ಐಕ್ಯತೆಯನ್ನೂ ತೋರಿಸುತ್ತದೆ. ನಮ್ಮ ಪತ್ರಿಕೆಗಳನ್ನೂ ಇತರ ಸಾಹಿತ್ಯಗಳನ್ನೂ ಐದು ವರ್ಷಗಳಿಂದ ಪಡೆಯುತ್ತಿದ್ದ ಒಬ್ಬಾಕೆ ಸ್ತ್ರೀ ಜೆಹೋವಸ್ ವಿಟ್ನೆಸೆಸ್ —ದಿ ಆರ್ಗನೈಸೇಷನ್ ಬಿಹೈಂಡ್ ದ ನೇಮ್ ವಿಡಿಯೋ ನೋಡಿ ಭಾವುಕಳಾಗಿ ಅತ್ತೇ ಬಿಟ್ಟಳು. ತನ್ನನ್ನು ಭೇಟಿಮಾಡುತ್ತಿದ್ದ ಸಾಕ್ಷಿಗಳ ಮೇಲೆ ಆಕೆಗೆ ಭರವಸೆಯಿತ್ತು. ಆದರೆ ಈಗ ವಿಡಿಯೋವನ್ನು ವೀಕ್ಷಿಸಿದ ನಂತರ ಸಂಘಟನೆಯ ಮೇಲೂ ತಾನು ಭರವಸೆಯಿಡಬಲ್ಲಳೆಂದು ಆಕೆಗನಿಸಿತು. ಆಕೆಯೊಂದಿಗೆ ಆಧ್ಯಯನವನ್ನು ಆರಂಭಿಸಲಾಯಿತು. ಮುಂದಿನ ವಾರವೇ ಆಕೆ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾದಳು.
5 ಪ್ರತಿವಾರ ಕೆಲವೊಂದು ನಿಮಿಷಗಳನ್ನು ನಮ್ಮ ವಿದ್ಯಾರ್ಥಿಯೊಂದಿಗೆ ಕಳೆಯುತ್ತ, ಒದಗಿಸಲಾಗಿರುವ ಸಾಧನಗಳನ್ನು ಬಳಸುವ ಮೂಲಕ ಇಂದು ಯೆಹೋವನು ಉಪಯೋಗಿಸುತ್ತಿರುವ ಏಕೈಕ ಸಂಘಟನೆಯತ್ತ ಬೈಬಲ್ ವಿದ್ಯಾರ್ಥಿಗಳನ್ನು ನಾವು ಪ್ರಗತಿಪರವಾಗಿ ಮಾರ್ಗದರ್ಶಿಸಬಹುದು.
[ಅಧ್ಯಯನ ಪ್ರಶ್ನೆಗಳು]
1. ಪ್ರತಿವಾರ ಬೈಬಲ್ ಅಧ್ಯಯನದ ಸಮಯದಲ್ಲಿ ಯೆಹೋವನ ಸಂಘಟನೆಯ ಬಗ್ಗೆ ಒಂದು ಅಂಶವನ್ನಾದರೂ ತಿಳಿಸುವುದು ಪ್ರಯೋಜನಕರವೇಕೆ?
2. ಸಭಾ ಕೂಟಗಳಿಗೆ ಹಾಜರಾಗುವಂತೆ ಬೈಬಲ್ ವಿದ್ಯಾರ್ಥಿಗಳನ್ನು ಹೇಗೆ ಉತ್ತೇಜಿಸಬಲ್ಲಿರಿ?
3. ಸಂಘಟನೆಯ ಯಾವ ಅಂಶಗಳನ್ನು ನಾವು ವಿವರಿಸಬಹುದು?
4, 5. ನಮ್ಮ ವಿಡಿಯೋಗಳು ಸಂಘಟನೆಗಾಗಿ ಗಣ್ಯತೆಯನ್ನು ಹೇಗೆ ಮೂಡಿಸುತ್ತವೆ?