ವಿಶೇಷ ರೀತಿಯ ಪ್ರೋತ್ಸಾಹ ವಿನಿಮಯ
1 ಯೆಹೋವನ ಜನರ ನಂಬಿಕೆಯು ಪರೀಕ್ಷೆಗೊಳಗಾಗದ ದಿನವೇ ಇಲ್ಲ. ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದವನಾಗಿ, ಯೆಹೋವನಿಗಾಗಿರುವ ನಮ್ಮ ಸಮಗ್ರತೆಯನ್ನು ಮುರಿದುಹಾಕಲು ಒಂದು ಕೊನೆಯ ದಾಳಿಯನ್ನು ಮಾಡುತ್ತಿದ್ದಾನೆ. (ಪ್ರಕ. 12:12) ನಾವು “ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲ”ಗೊಳ್ಳುತ್ತಾ ಹೋಗುವುದು ಅತಿ ಮುಖ್ಯವಾಗಿದೆ. ಏಕೆಂದರೆ ಆಗ ನಾವು “ಕಠಿನ ಯುದ್ಧವು ನಡೆಯುವ ದಿವಸದಲ್ಲಿ ಆ ವೈರಿಗಳನ್ನು ಎದುರಿಸುವದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ಜಯಶಾಲಿಗಳಾಗಿ ನಿಲ್ಲುವದಕ್ಕೂ ಶಕ್ತರಾಗು”ವೆವು.—ಎಫೆ. 6:10, 13.
2 ಜೊತೆ ವಿಶ್ವಾಸಿಗಳೊಂದಿಗೆ ಕೂಡಿಬರುವುದು, ನಾವು ಬಲವನ್ನು ಪಡೆದುಕೊಳ್ಳುವಂತೆ ಸಹಾಯವು ಒದಗಿಸಲ್ಪಡುವ ಯೆಹೋವನ ಏರ್ಪಾಡಾಗಿದೆ. ಅಪೊಸ್ತಲ ಪೌಲನು ಇದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದನು. ತನ್ನ ಕ್ರೈಸ್ತ ಸಹೋದರರೊಂದಿಗೆ “ಜೊತೆಯಾಗಿ ಪ್ರೋತ್ಸಾಹಿಸಲ್ಪಡ”ಲಿಕ್ಕಾಗಿ ಮತ್ತು “ದೃಢವಾಗು”ವುದಕ್ಕೋಸ್ಕರ ಅವನು ಅವರೊಂದಿಗೆ ಸಹವಾಸಮಾಡಲು ಹಾತೊರೆದನು. (ರೋಮಾ. 1:11, 12, NW ಪಾದಟಿಪ್ಪಣಿ) ದೇವರ ಚಿತ್ತವನ್ನು ಮಾಡುವುದರಲ್ಲಿ ನಮ್ಮನ್ನು ಬಲಪಡಿಸಲು, ಪ್ರೀತಿಪೂರ್ವಕವಾಗಿ ಆಡಳಿತ ಮಂಡಲಿಯು ಮುಂಬರುತ್ತಿರುವ “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನದಲ್ಲಿ ಪ್ರೋತ್ಸಾಹ ವಿನಿಮಯದ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ ಒಂದು ಅವಕಾಶವನ್ನು ಏರ್ಪಾಡು ಮಾಡಿದೆ.
3 ಪ್ರಯೋಜನ ಪಡೆಯಲಿಕ್ಕಾಗಿ ಅಲ್ಲಿ ಹಾಜರಿರಿ: ಎಲ್ಲ ಮೂರು ದಿನ ಅಲ್ಲಿ ಹಾಜರಿರುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. ಮೊದಲ ಗೀತೆಯ ಮುಂಚೆ ಬಂದು, ಸಮಾಪ್ತಿಯ ಪ್ರಾರ್ಥನೆಗೆ ಹೃತ್ಪೂರ್ವಕವಾದ “ಆಮೆನ್” ಹೇಳುವ ತನಕ ಉಳಿಯುವ ಮೂಲಕ ನಾವು ‘ನಮಗೆ ಪ್ರಯೋಜನವನ್ನು ತಂದುಕೊಳ್ಳುತ್ತೇವೆ.’ (ಯೆಶಾ. 48:17, 18, NW) ಈ ವರ್ಷದ ಅಧಿವೇಶನಗಳು ಸಾರ್ವಜನಿಕ ರಜಾದಿನಗಳ ಸಮಯದಲ್ಲಿ ಏರ್ಪಾಡು ಮಾಡಲ್ಪಟ್ಟಿವೆ. ಇದರಿಂದ ಎಲ್ಲ ಮಕ್ಕಳು ಮತ್ತು ಕೆಲಸ ಮಾಡುತ್ತಿರುವ ಪ್ರಚಾರಕರು ಹೆಚ್ಚಿನ ರಜೆಯನ್ನು ಕೇಳುವ ಆವಶ್ಯಕತೆಯಿಲ್ಲದೆ ಹಾಜರಾಗಲು ಸಾಧ್ಯವಿರುವುದು. ಆದರೂ ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿರುವ ನಮ್ಮ ಸಹೋದರರಿಗೆ, ಮುಂಬಯಿಗೆ ಪ್ರಯಾಣಿಸಲು ಸ್ವಲ್ಪ ಹೆಚ್ಚಿನ ಸಮಯದ ಅಗತ್ಯವಿರಬಹುದು. ಆದ್ದರಿಂದ, ಎಲ್ಲ ಮೂರು ದಿನ ಹಾಜರಾಗಲು ಸಮಯವು ಲಭ್ಯವಿರಲಿಕ್ಕಾಗಿ ಅವರು ತಮ್ಮ ಕೆಲಸದ ಶೆಡ್ಯೂಲನ್ನು ಸಾಕಷ್ಟು ಮುಂಚಿತವಾಗಿಯೇ ಏರ್ಪಾಡುಮಾಡಬೇಕಾದೀತು. ದೊಡ್ಡ ಅಧಿವೇಶನಗಳಿಗೆ ಹಾಜರಾಗಲಿಕ್ಕಾಗಿ ಹೆಚ್ಚಿನ ಪ್ರಯತ್ನದ ಅಗತ್ಯವಿರಬಹುದು, ಆದರೆ ಯೆಹೋವನ ಚಿತ್ತವನ್ನು ಮಾಡಲಿಕ್ಕಾಗಿ ಆತನು ನಮಗೆ ಸಹಾಯಮಾಡುವನು ಎಂಬ ಆತನ ಆಶ್ವಾಸನೆ ನಮಗಿದೆ. (1 ಯೋಹಾ. 5:14, 15) ಅಧಿವೇಶನ ಸಂಚಾರಕ್ಕಾಗಿ ಟ್ರೈನ್ ಬುಕಿಂಗ್ಗಳು ಎರಡು ತಿಂಗಳುಗಳ ಮುಂಚೆಯೇ ಪ್ರಾರಂಭವಾಗುತ್ತವೆ. ನಾವಿದನ್ನು ಈಗಾಗಲೇ ಮಾಡಿಲ್ಲವಾದರೆ, ಮುಂದೆ ನೋಡಿಕೊಳ್ಳೋಣ ಎಂದು ನೆನಸಿ ಪ್ರಯತ್ನವನ್ನು ಬಿಟ್ಟುಬಿಡುವ ಬದಲು, ಪ್ರಯಾಣ ಮತ್ತು ತಂಗುವಿಕೆಯ ವಿಷಯದಲ್ಲಿ ನಿಶ್ಚಿತ ಏರ್ಪಾಡುಗಳನ್ನು ಮಾಡಲು ಇದೇ ಸಮಯವಾಗಿದೆ. ಎಲ್ಲ ಮೂರು ದಿನ ಹಾಜರಾಗಲಿಕ್ಕಾಗಿ ನಾವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವನು ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ.—ಜ್ಞಾನೋ. 10:22.
4 ಪ್ರೋತ್ಸಾಹಕ್ಕಾಗಿ ಮುನ್ನೋಡಿರಿ: ನೀವು ಒಂದು ಜಿಲ್ಲಾ ಅಧಿವೇಶನವನ್ನು ಮುಗಿಸಿ ಹಿಂದಿರುಗುತ್ತಿರುವಾಗ, “ನಾನು ಹಾಜರಾಗಿರುವ ಅಧಿವೇಶನಗಳಲ್ಲೇ ಇದು ಅತ್ಯುತ್ತಮವಾದದ್ದಾಗಿತ್ತು!” ಎಂದು ಹೇಳಿದ್ದೀರೋ? ನಿಮಗೆ ಏಕೆ ಹಾಗೆ ಅನಿಸಿತು? ಕಾರಣ, ಅಪರಿಪೂರ್ಣ ಮಾನವರಾಗಿ ನಾವು ಕ್ರಮೇಣ ದಣಿದುಹೋಗಿ, ನಮ್ಮಲ್ಲಿ ಆತ್ಮಿಕ ಪ್ರೋತ್ಸಾಹದ ಒಂದು ಅಗತ್ಯ ಉಂಟಾಗುತ್ತದೆ. (ಯೆಶಾ. 40:30) ಒಬ್ಬ ಸಹೋದರಿಯು ವಿವರಿಸಿದ್ದು: “ಈ ವ್ಯವಸ್ಥೆಯು ನನ್ನನ್ನು ಬಳಲಿಸುತ್ತದೆ, ಮತ್ತು ಅಧಿವೇಶನಗಳು ನನಗೆ ಬೇಕಾಗಿರುವ ಆತ್ಮಿಕ ವರ್ಧನೆಯನ್ನು ಕೊಡುವ ಮೂಲಕ ನನ್ನ ಆತ್ಮಿಕ ಹೊರನೋಟವನ್ನು ಪುನಃ ಕೇಂದ್ರೀಕರಿಸುತ್ತವೆ. ನನಗೆ ಪ್ರೋತ್ಸಾಹವು ತುಂಬ ಅಗತ್ಯವಾಗಿರುವ ಸಮಯದಲ್ಲೇ ಅದು ಬರುತ್ತದೋ ಎಂಬಂತೆ ತೋರುತ್ತದೆ.” ತದ್ರೀತಿಯ ಅನಿಸಿಕೆಗಳನ್ನು ನೀವೂ ಅನುಭವಿಸಿರಬಹುದು.
5 ನಮಗೆ ಬೇಕಾದ ಪ್ರೋತ್ಸಾಹವನ್ನು ನಾವು ಭಾಷಣಗಳು ಮತ್ತು ಇಂಟರ್ವ್ಯೂಗಳ ಮೂಲಕ ಮಾತ್ರವಲ್ಲ, ನಮ್ಮ ಅಧಿವೇಶನಗಳ ಆತ್ಮಿಕವಾಗಿ ಸಮೃದ್ಧಗೊಳಿಸುವ ಇತರ ವೈಶಿಷ್ಟ್ಯಗಳಿಂದಲೂ ಪಡೆದುಕೊಳ್ಳುತ್ತೇವೆ. ಒಬ್ಬ ಸಹೋದರನು ಅಂದದ್ದು: “ಸ್ಪಷ್ಟವಾದ ಬೈಬಲ್ ತತ್ತ್ವಗಳ ಪ್ರಾಯೋಗಿಕ ಅನ್ವಯವನ್ನೇ ನಾನು ಅತಿಯಾಗಿ ಮೆಚ್ಚುತ್ತೇನೆ. ಗತಕಾಲದ ಒಳ್ಳೆಯ ಮತ್ತು ಕೆಟ್ಟ ಮಾದರಿಗಳಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು ಎಂಬುದನ್ನು ತೋರಿಸುವುದರಲ್ಲಿ ಡ್ರಾಮಗಳು ನಿಶ್ಚಯವಾಗಿಯೂ ಬಹುಮೂಲ್ಯವಾಗಿವೆ. ಮತ್ತು ಸಾಹಿತ್ಯದ ಬಿಡುಗಡೆಯು ನಾನು ಸದಾ ಮುನ್ನೋಡುವಂಥ ಸಂಗತಿಯಾಗಿದೆ. ನಾನು ಮನೆಗೆ ಹಿಂದಿರುಗಿದ ನಂತರ ತುಂಬ ಕಾಲದ ವರೆಗೂ ಅವುಗಳಲ್ಲಿ ಆನಂದಿಸುತ್ತೇನೆ.”
6 ಅಧಿವೇಶನಗಳು, ನಿಭಾಯಿಸಲು ಕಷ್ಟಕರವಾದ ಈ “ಕಠಿನಕಾಲ”ಗಳಲ್ಲಿ ಯೆಹೋವನಿಂದ ಏರ್ಪಡಿಸಲ್ಪಡುವ ಅತಿ ಪ್ರಾಮುಖ್ಯವಾದ ಒದಗಿಸುವಿಕೆಯಾಗಿವೆ. (2 ತಿಮೊ. 3:1) ಅವು “ಎಚ್ಚರವಾಗಿರಿ, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ. ಶೂರರಾಗಿರಿ, ಬಲಗೊಳ್ಳಿರಿ” ಎಂಬ ಪ್ರೇರಿತ ಬುದ್ಧಿವಾದಕ್ಕೆ ಕಿವಿಗೊಡಲು ನಮಗೆ ಸಹಾಯಮಾಡುತ್ತವೆ. (1 ಕೊರಿಂ. 16:13) ಆದುದರಿಂದ, ಪ್ರತಿಯೊಂದು ಸೆಷನ್ಗೆ ಹಾಜರಾಗಿರಲು ದೃಢನಿರ್ಧಾರ ಮಾಡಿ, ಪ್ರೋತ್ಸಾಹದ ಸಮೃದ್ಧ ವಿನಿಮಯವನ್ನು “ಹುರುಪಿನ ರಾಜ್ಯ ಘೋಷಕರು” ಜಿಲ್ಲಾ ಅಧಿವೇಶನದಲ್ಲಿ ಆನಂದಿಸೋಣ!
[ಪುಟ 3 ರಲ್ಲಿರುವ ಚೌಕ]
ಮೂರೂ ದಿನ ಹಾಜರಾಗಿರಲು ಯೋಜಿಸಿರಿ
■ ಕೆಲಸದಿಂದ ಬಿಡುವಿಗಾಗಿ ಕೇಳಿಕೊಳ್ಳಿ.
■ ಅಧಿವೇಶನ ಪಟ್ಟಣದಲ್ಲಿ ವಸತಿಸೌಕರ್ಯವನ್ನು ಕಾಯ್ದಿರಿಸಿಕೊಳ್ಳಿ.
■ ಅಧಿವೇಶನಕ್ಕೆ ಹೋಗಲು ಪ್ರಯಾಣದ ಏರ್ಪಾಡುಗಳನ್ನು ಮಾಡಿರಿ.