ಸತ್ಕಾರ್ಯಮಾಡುವದರಲ್ಲಿ ಮಾದರಿಗಳಾಗಿರಿ
1. ಜಿಲ್ಲಾ ಅಧಿವೇಶನದ ಸಮಯದಲ್ಲಿ ನಾವು ವಿಶೇಷವಾಗಿ ನಮ್ಮ ನಡತೆಯ ಕುರಿತು ಹೆಚ್ಚು ಗಮನವುಳ್ಳವರಾಗಿರಬೇಕು ಏಕೆ?
1 ನಾವು ಜಿಲ್ಲಾ ಅಧಿವೇಶನಗಳಿಗಾಗಿ ದೊಡ್ಡ ಗುಂಪುಗಳಲ್ಲಿ ಕೂಡಿಬರುವಾಗ, ನಾವು ವರ್ತಿಸುವ ಮತ್ತು ಇತರರನ್ನು ಉಪಚರಿಸುವ ರೀತಿಯು ಪ್ರೇಕ್ಷಕರಿಂದ ವಿಶೇಷವಾಗಿ ಗಮನಿಸಲ್ಪಡುತ್ತದೆ. ಆದುದರಿಂದ ನಾವು ಪ್ರತಿಯೊಬ್ಬರೂ, ‘ಎಲ್ಲಾ ವಿಷಯಗಳಲ್ಲೂ ಜಿತೇಂದ್ರಿಯರೂ ಸತ್ಕಾರ್ಯಮಾಡುವವರೂ ಆಗಿರಿ’ ಎಂಬ ಬೈಬಲಿನ ಬುದ್ಧಿವಾದಕ್ಕೆ ವಿಶೇಷ ಗಮನವನ್ನು ಕೊಡುವ ಅಗತ್ಯವಿದೆ. (ತೀತ 2:6, 7) ‘ನಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲು’ ಹೆಚ್ಚಿನ ಪ್ರಯತ್ನವು ಬೇಕಾಗಿರಬಹುದು. (ಫಿಲಿ. 2:4) ಮುಂಬರುತ್ತಿರುವ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನದಲ್ಲಿ ನಾವು ಈ ಪ್ರೋತ್ಸಾಹನೆಯನ್ನು ಅನ್ವಯಿಸಬಹುದಾದ ಕೆಲವು ಕ್ಷೇತ್ರಗಳನ್ನು ಪರಿಗಣಿಸೋಣ.
2. ರೂಮಿಂಗ್ ಏರ್ಪಾಡುಗಳ ವಿಷಯದಲ್ಲಿ ನಾವು ಯಾವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
2 ರೂಮಿಂಗ್ ಏರ್ಪಾಡುಗಳು: ನಾವು ಸತ್ಕಾರ್ಯಗಳನ್ನು ತೋರಿಸಬಹುದಾದ ಅತ್ಯುತ್ತಮ ಅವಕಾಶವು ರೂಮಿಂಗ್ ಏರ್ಪಾಡುಗಳನ್ನು ಮಾಡುವಾಗ ಒದಗಿಬರುತ್ತದೆ. ನೀವು ಉಪಯೋಗಿಸಲು ಯೋಜಿಸುವ ರೂಮನ್ನು ಮಾತ್ರ ಕಾದಿರಿಸಿಕೊಳ್ಳಿ. ತಕ್ಕಷ್ಟು ಮುಂಗಡ ಹಣವನ್ನು ಕಳುಹಿಸಬೇಕೆಂಬುದನ್ನು ಮರೆಯದಿರಿ. ಹೋಟೆಲ್ ರೂಮ್ಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಮತ್ತು ಖಾಲಿಮಾಡುವ ಕಾರ್ಯನಿರತ ಸಮಯಗಳಲ್ಲಿ, ನಾವು ದೇವರಾತ್ಮದ ಫಲವನ್ನು ಪ್ರದರ್ಶಿಸುವುದಾದರೆ ಹೆಚ್ಚು ಗಣ್ಯಮಾಡಲ್ಪಡುವುದು.—ಗಲಾ. 5:22, 23.
3. ಅಧಿವೇಶನದ ನಿವೇಶನದಲ್ಲಿ ನಾವು ಯೆಹೋವನಿಗೆ ಹೇಗೆ ಕೀರ್ತಿಯನ್ನು ಕೂಡಿಸಬಲ್ಲೆವು?
3 ಅಧಿವೇಶನದ ನಿವೇಶನದಲ್ಲಿ: ನಾವು ಅಧಿವೇಶನಗಳಿಗಾಗಿ ಉಪಯೋಗಿಸುವ ಬಾಡಿಗೆಯ ಸೌಕರ್ಯಗಳು ಹಲವಾರು ವರ್ಷಗಳಿಂದ ಸಾರ್ವಜನಿಕ ದುರುಪಯೋಗ, ನಿರ್ಲಕ್ಷ್ಯ, ಕೊಳಕು ಮಾಡುವಿಕೆ, ಮತ್ತು ಇತರ ರೀತಿಯ ಹದಗೆಡುವಿಕೆಯನ್ನು ಎದುರಿಸಿರುತ್ತವೆ. ಶೌಚಾಲಯಗಳು, ಮತ್ತು ಸಂಬಂಧಿತ ಸೌಕರ್ಯಗಳು ನಮ್ಮ ಪರಿಶುದ್ಧ ದೇವರ ಮಟ್ಟಕ್ಕಿಂತ ಎಷ್ಟೋ ಕೆಳಮಟ್ಟದಲ್ಲಿರುತ್ತವೆ. ಇದನ್ನು ಬದಲಾಯಿಸಲು ನೀವೇನು ಮಾಡಸಾಧ್ಯವಿದೆ? ಶೌಚಾಲಯಗಳನ್ನು ಶುಚಿಮಾಡಲು, ಸಭಾಂಗಣವನ್ನು ಗುಡಿಸಲು, ಸೀಟ್ಗಳನ್ನು ತೊಳೆಯಲು ಮತ್ತು ಇತರ ಆವಶ್ಯಕ ಕೆಲಸಗಳನ್ನು ಮಾಡಲು ನೀವು ನಿಮ್ಮನ್ನು ನೀಡಿಕೊಳ್ಳಬಹುದು. ಅಧಿವೇಶನ ಸೌಕರ್ಯದ ಮೂಲೆ ಮೂಲೆಯೂ ನಮ್ಮ ಶುದ್ಧ ದೇವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಇದು ಜನರಲ್ಲಿ ಮೂಡಿಸುವ ಒಳ್ಳೆಯ ಅಭಿಪ್ರಾಯವು ಯೆಹೋವನ “ಕೀರ್ತಿಘನಮಾನ”ಗಳನ್ನು ಹೆಚ್ಚಿಸುವುದು.—ಧರ್ಮೋ 26:19.
4, 5. ಮಕ್ಕಳು ಯೆಹೋವನಿಗೆ ಹೇಗೆ ಕೀರ್ತಿಯನ್ನು ತರಸಾಧ್ಯವಿದೆ, ಮತ್ತು ಹೆತ್ತವರಿಗೆ ಯಾವ ಜವಾಬ್ದಾರಿಯಿದೆ?
4 ಹೆತ್ತವರು ಮತ್ತು ಮಕ್ಕಳು: ಅಸಭ್ಯವಾಗಿ ವರ್ತಿಸುವ ಅನೇಕ ಯುವಕರಿರುವ ಒಂದು ಲೋಕದಲ್ಲಿ, ನಮ್ಮ ಮಕ್ಕಳು ಬೇರ್ಪಟ್ಟವರಾಗಿ ಎದ್ದುಕಾಣುತ್ತಾರೆ, ಮತ್ತು ಇದು ಯೆಹೋವನಿಗೆ ಮತ್ತು ಆತನ ಸಂಸ್ಥೆಗೆ ಕೀರ್ತಿಯನ್ನು ತರುತ್ತದೆ. ಆದರೂ ಕೆಲವೊಮ್ಮೆ, ಮೇಲ್ವಿಚಾರಣೆ ಇಲ್ಲದೆ ಬಿಡಲ್ಪಟ್ಟ ಮಕ್ಕಳಿಂದಾಗಿ ಸಮಸ್ಯೆಗಳು ಉಂಟಾಗಿವೆ. (ಜ್ಞಾನೋ. 29:15) ಆದುದರಿಂದ ಹೆತ್ತವರು ತಮ್ಮ ಮಕ್ಕಳನ್ನು ಹೋಟೆಲ್ನಲ್ಲಿ, ಮತ್ತು ಈಜು ಕೊಳದ ಬಳಿ, ಅಥವಾ ಅಧಿವೇಶನದ ನಿವೇಶನದಲ್ಲಿ ಯಾವುದೇ ಉಸ್ತುವಾರಿಯಿಲ್ಲದೆ ಬಿಡಬಾರದು.
5 ಅಧಿವೇಶನಕ್ಕೆ ಮುಂಚೆ, ಅವರಿಂದ ಯಾವ ರೀತಿಯ ನಡತೆಯು ಅಪೇಕ್ಷಿಸಲ್ಪಡುತ್ತದೆ ಎಂಬುದನ್ನು ಮಕ್ಕಳೊಂದಿಗೆ ಪುನಃ ಪರಿಶೀಲಿಸುವುದು ಪ್ರಯೋಜನಕರವಾಗಿದೆ ಎಂದು ಕೆಲವು ಹೆತ್ತವರು ಕಂಡುಕೊಂಡಿದ್ದಾರೆ. (ಎಫೆ. 6:4) ಪ್ರಾಮಾಣಿಕವಾದ ಕ್ರೈಸ್ತ ಪ್ರೀತಿಯು “ಮರ್ಯಾದೆಗೆಟ್ಟು ನಡೆಯುವದಿಲ್ಲ” ಅಥವಾ “ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ” ಎಂಬುದನ್ನು ಮಕ್ಕಳು ಅರ್ಥಮಾಡಿಕೊಳ್ಳುವಂತೆ ಹೆತ್ತವರು ಅವರಿಗೆ ಸಹಾಯಮಾಡುತ್ತಾರೆ. (1 ಕೊರಿಂ. 13:5) ಜಿಲ್ಲಾ ಅಧಿವೇಶನವು ನಾವು ಯೆಹೋವನಿಂದ ಬೋಧಿಸಲ್ಪಡಬೇಕಾದ ಒಂದು ಸಮಯವಾಗಿದೆ. ಮಕ್ಕಳು ಮತ್ತು ವಯಸ್ಕರು ಈ ಏರ್ಪಾಡಿಗಾಗಿರುವ ತಮ್ಮ ಗೌರವವನ್ನು, ಅಧಿವೇಶನದ ನಿವೇಶನದಲ್ಲಿ ಮತ್ತು ಇತರ ಸ್ಥಳಗಳಲ್ಲಿ ತಮ್ಮ ನಡತೆಯ ಮೂಲಕ ತೋರಿಸಿಕೊಡಸಾಧ್ಯವಿದೆ.—ಯೆಶಾ. 54:13.
6. ನಮ್ಮ ಒಳ್ಳೆಯ ನಡತೆಯು ಇತರರ ಮೇಲೆ ಯಾವ ಪರಿಣಾಮವನ್ನು ಬೀರುಬಲ್ಲದು?
6 ನಮ್ಮ ಒಳ್ಳೆಯ ನಡತೆಯು ತಪ್ಪಭಿಪ್ರಾಯಗಳನ್ನು ಹೋಗಲಾಡಿಸಿ ಜನರನ್ನು ಸತ್ಯಾರಾಧನೆಯ ಕಡೆಗೆ ಸೆಳೆಯುವುದರಲ್ಲಿ ಹೆಚ್ಚನ್ನು ಮಾಡುವುದು. (ಮತ್ತಾ. 5:16; 1 ಪೇತ್ರ 2:12) ಜಿಲ್ಲಾ ಅಧಿವೇಶನದ ಸಮಯದಲ್ಲಿ ನಾವು ಭೇಟಿಯಾಗುವ ಪ್ರತಿಯೊಬ್ಬರೂ, ನಮ್ಮ ವರ್ತನೆ ಮತ್ತು ನಾವು ಅವರನ್ನು ಉಪಚರಿಸುವ ರೀತಿಯಿಂದ ಒಂದು ಒಳ್ಳೆಯ ಸಾಕ್ಷಿಯನ್ನು ಪಡೆದುಕೊಳ್ಳುವಂತಾಗಲಿ. ಈ ರೀತಿಯಲ್ಲಿ ನಾವು ‘ಸತ್ಕಾರ್ಯಮಾಡುವದರಲ್ಲಿ ಮಾದರಿಯಾಗಿರುವೆವು’ ಮತ್ತು ಯೆಹೋವನನ್ನು ಘನಪಡಿಸುವೆವು.—ತೀತ 2:7.
[ಪುಟ 4 ರಲ್ಲಿರುವ ಚೌಕ]
ಇತರರ ವಿಷಯದಲ್ಲಿ ಪರಿಗಣನೆಯುಳ್ಳವರಾಗಿರಿ
▪ ನೀವು ಉಪಯೋಗಿಸಲು ಯೋಜಿಸುವ ರೂಮನ್ನು ಮಾತ್ರ ಕಾದಿರಿಸಿ
▪ ಹೋಟೆಲ್ ರೂಮ್ಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಮತ್ತು ಖಾಲಿಮಾಡುವ ಸಮಯಗಳಲ್ಲಿ ತಾಳ್ಮೆಯುಳ್ಳವರಾಗಿರಿ
▪ ಅಧಿವೇಶನದ ನಿವೇಶನವನ್ನು ಸ್ವಚ್ಛವಾಗಿಡಲು ಸಹಕರಿಸಿ
▪ ನಿಮ್ಮ ಮಕ್ಕಳ ಒಳ್ಳೆಯ ಉಸ್ತುವಾರಿಯನ್ನು ಮಾಡಿರಿ
▪ ಯೋಗ್ಯವಾದ ಬಕ್ಷೀಸನ್ನು ಬಿಟ್ಟುಬನ್ನಿ