“ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿರಿ”
1 ಕ್ರೈಸ್ತ ಜೀವನ ಮಾರ್ಗದಲ್ಲಿ, ‘ಎಲ್ಲರಿಗೆ ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುವುದು’ ಒಳಗೂಡಿರುತ್ತದೆ. (1 ಥೆಸ. 5:15, NW) ಜಿಲ್ಲಾ ಅಧಿವೇಶನಗಳಿಗೆ ಹಾಜರಾಗುವಾಗ, ಇತರರಿಗೆ ಒಳ್ಳೆಯದನ್ನು ಮಾಡಲಿಕ್ಕಾಗಿ ನಮಗೆ ಅನೇಕ ಸಂದರ್ಭಗಳಿರುತ್ತವೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಈ ವರ್ಷ, ಸಾರ್ವಜನಿಕರ ದೃಷ್ಟಿ ನಮ್ಮ ಮೇಲಿರುವುದು. ವಿಶೇಷವಾಗಿ ಕೊಚ್ಚಿ, ಚೆನ್ನೈ, ಮತ್ತು ಮುಂಬಯಿಯಲ್ಲಿ ಐದು ಮತ್ತು ಹತ್ತು ಸಾವಿರಗಳ ಸಂಖ್ಯೆಯಲ್ಲಿ ಗುಂಪುಗಳನ್ನು ನಿರೀಕ್ಷಿಸಲಾಗಿದೆ. ಅಧಿವೇಶನದ ಕುರಿತು ಕೇಳಿಸಿಕೊಳ್ಳುವವರು ಮತ್ತು ನೋಡುವವರೆಲ್ಲರೂ, ಅವರು ಏನನ್ನು ಅನುಭವಿಸುತ್ತಾರೋ ಅದರ ಮೇಲಾಧಾರಿಸಿ ನಮ್ಮ ಕುರಿತು ಅಭಿಪ್ರಾಯಗಳನ್ನು ರೂಪಿಸುವರು. ಯೆಹೋವನ ಸಾಕ್ಷಿಗಳ ಕುರಿತು ಒಳ್ಳೆಯ ಹೆಸರನ್ನು ತರುವಂಥ ಒಂದು ಅದ್ಭುತಕರವಾದ ಸಂದರ್ಭ ನಮ್ಮೆದುರಿಗಿದೆ. ನಮ್ಮೊಂದಿಗೆ ವ್ಯವಹರಿಸುವವರೆಲ್ಲರೂ, ಬೈಬಲ್ ಬೋಧನೆಯು ನಮ್ಮನ್ನು ಭಿನ್ನರನ್ನಾಗಿ ಮಾಡಿದೆ ಎಂಬುದನ್ನು ಮನಗಾಣಲಿ ಎಂಬುದೇ ನಮ್ಮ ಹಾರೈಕೆಯಾಗಿದೆ. ಅವರು ನಮ್ಮ ಕ್ರಮಬದ್ಧತೆ, ಸ್ವಚ್ಛತೆ, ಮತ್ತು ಸುನಡತೆಯ ಕುರಿತು ಮಾತಾಡುವಂತೆ ನಾವು ಬಯಸುತ್ತೇವೆ. ನಿಸ್ವಾರ್ಥ ಸಹೋದರ ಆತ್ಮವು ನಿಜವಾಗಿಯೂ ಅಸ್ತಿತ್ವದಲ್ಲಿದೆ ಮತ್ತು ‘[ನಮ್ಮಲ್ಲಿ] ಪ್ರತಿಯೊಬ್ಬರು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ’ ನೋಡುತ್ತೇವೆ ಎಂಬುದನ್ನು ಅವರು ನೇರವಾಗಿ ನೋಡಬೇಕೆಂದು ನಾವು ಆಶಿಸುತ್ತೇವೆ. (ಫಿಲಿ. 2:4) ಈ ಅಧಿವೇಶನಗಳಲ್ಲಿ ನಾವು ಇದನ್ನು ಮಾಡಬಲ್ಲ ವಿಧಗಳನ್ನು ಪರಿಗಣಿಸೋಣ.
2 ನೀವು ನಿಮ್ಮ ವಸತಿಸೌಕರ್ಯವನ್ನು ಈಗಾಗಲೇ ಕಾಯ್ದಿರಿಸಿದ್ದೀರೋ? (1) ನಾವು ಮುಂಚಿತವಾಗಿ ಬುಕ್ ಮಾಡುವುದು, ನಮ್ಮ ಸಹೋದರರು ಲಾಡ್ಜ್ಗಳು ಮತ್ತು ಡಾರ್ಮಿಟರಿಗಳನ್ನು ಕಡಿಮೆ ಬೆಲೆಗಳಲ್ಲಿ ಬಾಡಿಗೆಗೆ ಪಡೆದುಕೊಳ್ಳುವಂತೆ ಸಹಾಯಮಾಡುತ್ತದೆ. ಒಮ್ಮೆ ಬುಕ್ ಮಾಡಿದ ನಂತರ, ನಾವದನ್ನು ಬದಲಾಯಿಸಲು ಪ್ರಯತ್ನಿಸದಿರುವುದು ಪ್ರಾಮುಖ್ಯವಾಗಿದೆ—ನಮಗೆ ಹೆಚ್ಚು ಉತ್ತಮವಾದ ಸೌಕರ್ಯಗಳು ಸಿಕ್ಕಿದರೂ ಕೂಡ. ನಮ್ಮ ‘ಮಾತು ಹೌದಾದರೆ, ಹೌದಾಗಿರಬೇಕು.’ (ಮತ್ತಾ. 5:37) (2) ನೀವು ಸರಿಯಾದ ಮುಂಗಡ ಹಣವನ್ನು ಕಳುಹಿಸಿಲ್ಲವಾದರೆ, ನಿಮ್ಮ ಕೋಣೆಯು ಕಾಯ್ದಿರಿಸಲ್ಪಡುವುದೆಂದು ನಿರೀಕ್ಷಿಸಬೇಡಿ. (3) ಎಲ್ಲ ಹೋಟೆಲ್ ಸಿಬ್ಬಂದಿಯವರೊಂದಿಗೆ ತಾಳ್ಮೆ ಮತ್ತು ಗೌರವದಿಂದ ವರ್ತಿಸಿರಿ. ಅವರು ತಮ್ಮ ಕರ್ತವ್ಯಗಳನ್ನು ಪೂರೈಸುವುದರಲ್ಲಿ ನಿಧಾನಿಗಳಾಗಿರುವುದಾದರೂ ಹೀಗೆ ಮಾಡಿರಿ. (4) ಹೋಟೆಲಿನ ಸಿಬ್ಬಂದಿಯವರು ನಿಮ್ಮ ಕೋಣೆಯನ್ನು ಸ್ವಚ್ಛಗೊಳಿಸುವುದಾದರೂ, ಯಾವಾಗಲೂ ಸ್ವಚ್ಛತೆಯ ವಿಷಯದಲ್ಲಿ ಯೆಹೋವನು ಇಡುವ ಮಟ್ಟಗಳನ್ನು ಪ್ರತಿಬಿಂಬಿಸುವಂಥ ರೀತಿಯಲ್ಲಿ ಅದನ್ನು ಬಿಟ್ಟುಹೋಗಿ. (5) ಅದರ ಕಟ್ಟಡ ಹಾಗೂ ಸುತ್ತಲಿನ ಪ್ರದೇಶವನ್ನು ಉಪಯೋಗಿಸುವ ವಿಷಯದಲ್ಲಿ ಹೋಟೆಲಿನ ಎಲ್ಲ ನಿಯಮಗಳನ್ನು ಪಾಲಿಸಿರಿ. (6) ಪರಿಚಾರಕರು ಮತ್ತು ಗುಡಿಸುವವರಿಗಾಗಿ ಸಾಮಾನ್ಯವಾಗಿ ಕೊಡಲಾಗುವ ಭಕ್ಷೀಸು ಹಣವನ್ನು ಬಿಟ್ಟುಹೋಗಿ.
3 ಒಳ್ಳೆಯದನ್ನು ಮಾಡುವುದು ಹೇಗೆಂಬುದನ್ನು ಮಕ್ಕಳಿಗೆ ಕಲಿಸುವುದು: ಜನರು ಖಂಡಿತವಾಗಿಯೂ ನಮ್ಮ ಮಕ್ಕಳನ್ನು ಗಮನಿಸುವರು, ಮತ್ತು ಅನೇಕ ಸಂದರ್ಭಗಳಲ್ಲಿ ಮಕ್ಕಳೇ ಪ್ರೇಕ್ಷಕರನ್ನು ಹೆಚ್ಚಾಗಿ ಪ್ರಭಾವಿಸುವವರಾಗಿದ್ದಾರೆ. ಹೆತ್ತವರೇ, ಅಧಿವೇಶನಕ್ಕೆ ಮುಂಚೆ ನಿಮ್ಮ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ವ್ಯಯಿಸಿ, ಎಲ್ಲ ಸಮಯಗಳಲ್ಲಿ ಮತ್ತು ಎಲ್ಲ ಸ್ಥಳಗಳಲ್ಲಿ ಅವರಿಂದ ಅಪೇಕ್ಷಿಸಲ್ಪಡುವ ಕ್ರೈಸ್ತ ನಡವಳಿಕೆಯ ಕುರಿತು ಅವರೊಂದಿಗೆ ಪುನರ್ವಿಮರ್ಶಿಸುವುದು ಸಹಾಯಕರವಾಗಿರುವುದು. (ಎಫೆ. 6:4) ಉದಾಹರಣೆಗೆ, ಯಥಾರ್ಥವಾದ ಕ್ರೈಸ್ತ ಪ್ರೀತಿಯು “ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ” ಎಂಬುದನ್ನು ಅವರಿಗೆ ತೋರಿಸಿರಿ. (1 ಕೊರಿಂ. 13:5) ಎಲ್ಲರೂ ನೋಡಬಹುದಾದಂಥ ರೀತಿಯ ಯೋಗ್ಯವಾದ ಮಾದರಿಯನ್ನು ಇಡುವ ಮೂಲಕ ವಯಸ್ಕರು ಈ ಮಾತುಗಳಿಗೆ ಇಂಬುಕೊಡಬಲ್ಲರು. ಮಕ್ಕಳೇ, ನಿಮ್ಮ ಹೆತ್ತವರಿಗೆ ವಿಧೇಯರಾಗಿರುವ ಮೂಲಕ, ಹೋಟೆಲ್ ಸ್ವತ್ತಿಗೆ ಗೌರವವನ್ನು ತೋರಿಸುವ ಮೂಲಕ, ಮತ್ತು ನಿಮ್ಮ ಸುತ್ತಲಿರುವವರ ಕುರಿತು ಪರಿಗಣನೆಯುಳ್ಳವರಾಗಿರುವ ಮೂಲಕ ನೀವು ಒಳ್ಳೆಯದನ್ನು ಬೆನ್ನಟ್ಟಬಲ್ಲಿರಿ. (ಕೊಲೊ. 3:20) ನಾವು ಐಕ್ಯವಾಗಿ ಎಲ್ಲ ಜನರಿಗೆ ಒಳ್ಳೆಯದನ್ನು ಮಾಡಲು ಪ್ರಯಾಸಪಡುವಾಗ, “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರ”ವಾಗಿರುವೆವು.—ತೀತ 2:10.
4 ನಮ್ಮ ಒಳ್ಳೆಯ ನಡತೆಯು ಕೇವಲ ಪ್ರೇಕ್ಷಕರ ಮೇಲೆ ಮಾತ್ರವಲ್ಲ, ಬದಲಿಗೆ ಒಂದಲ್ಲ ಒಂದು ಕಾರಣಕ್ಕಾಗಿ ನಮ್ಮ ಕುರಿತು ಟೀಕಿಸುತ್ತಿರುವವರ ಮೇಲೂ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಧಿವೇಶನದಲ್ಲಿ ಮತ್ತು ಅಧಿವೇಶನದ ನಗರದಾದ್ಯಂತ ನಾವು ಮಾಡುವ ಎಲ್ಲ ವಿಷಯಗಳು—ಅದು ಬೀದಿಯಲ್ಲಿ ನಡೆಯುವುದಾಗಿರಲಿ, ರೆಸ್ಟರಾಂಟ್ನಲ್ಲಿ ತಿನ್ನುವುದಾಗಿರಲಿ, ನಮ್ಮ ವಸತಿಸೌಕರ್ಯದಲ್ಲಿ ವಿಶ್ರಮಿಸುತ್ತಿರುವುದಾಗಿರಲಿ, ಅಥವಾ ಅನೌಪಚಾರಿಕ ಸಾಕ್ಷಿಯನ್ನು ಕೊಡಲು ಸಂದರ್ಭಗಳ ಸದುಪಯೋಗವನ್ನು ಮಾಡುವುದಾಗಿರಲಿ—ನಮ್ಮ ಕ್ರೈಸ್ತ ಮಾತು ಮತ್ತು ಕೃತ್ಯಗಳು ನಾವು ಒಳ್ಳೆಯದನ್ನು ಮಾಡಲು ಬಯಸುತ್ತೇವೆ ಎಂಬುದನ್ನು ರುಜುಪಡಿಸುವಂತಿರಬೇಕು.
[ಪುಟ 4 ರಲ್ಲಿರುವ ಚೌಕ]
ದಯವಿಟ್ಟು ಜ್ಞಾಪಕದಲ್ಲಿಡಿ:
■ ನಿಮ್ಮ ವಸತಿಸೌಕರ್ಯದಲ್ಲಿರುವ ಎಲ್ಲ ಸಿಬ್ಬಂದಿಯವರ ವಿಷಯದಲ್ಲಿ ತಾಳ್ಮೆ ಮತ್ತು ಗೌರವವನ್ನು ತೋರಿಸಿರಿ.
■ ಎಲ್ಲ ಅತಿಥಿಗಳ ಪ್ರಯೋಜನಕ್ಕಾಗಿ, ಹೋಟೆಲ್ ಮತ್ತು ಡಾರ್ಮಿಟರಿಯ ನಿಯಮಗಳನ್ನು ಪಾಲಿಸಿರಿ.
■ ಕೋಣೆಗಳನ್ನು ಸಾಧ್ಯವಾದಷ್ಟು ಸ್ವಚ್ಛವಾಗಿಯೂ ಅಚ್ಚುಕಟ್ಟಾಗಿಯೂ ಇಡಿರಿ.
■ ನಿಮ್ಮ ಮಕ್ಕಳು ಏನು ಮಾಡುತ್ತಾರೋ ಅದನ್ನು ಜಾಗರೂಕತೆಯಿಂದ ಗಮನಿಸಿರಿ.