ಯುವ ಜನರೇ—ಭವಿಷ್ಯತ್ತಿಗಾಗಿ ಒಂದು ಒಳ್ಳೇ ಅಸ್ತಿವಾರವನ್ನು ಕಟ್ಟಿರಿ
1. ಕ್ರೈಸ್ತ ಯುವ ಜನರು ಬಲವಾದ ನಂಬಿಕೆಯನ್ನು ಏಕೆ ಬೆಳೆಸಿಕೊಳ್ಳಬೇಕಾಗಿದೆ?
1 ನಿಮ್ಮ ಮನಸ್ಸಿನಲ್ಲಿ ನೀವು ಯಾವುದಕ್ಕೆ ಆದ್ಯತೆ ನೀಡುತ್ತೀರಿ? ನೀವು ಯಾವುದರ ಕುರಿತು ಯೋಚಿಸುತ್ತೀರಿ? ನಿಮ್ಮ ಪ್ರಮುಖ ಆಲೋಚನೆಗಳು ಪ್ರಸ್ತುತ ವಿಷಯಗಳ ಮೇಲಿವೆಯೋ, ಅಥವಾ ಭವಿಷ್ಯತ್ತಿನ ಹಾಗೂ ದೇವರು ವಾಗ್ದಾನಿಸಿರುವ ವಿಷಯಗಳ ಮೇಲೆ ಕೇಂದ್ರೀಕೃತವಾಗಿವೆಯೋ? (ಮತ್ತಾ. 6:24, 31-33; ಲೂಕ 8:14) ಅಬ್ರಹಾಮ ಮತ್ತು ಮೋಶೆಯ ಉದಾಹರಣೆಗಳಲ್ಲಿ ನೋಡಸಾಧ್ಯವಿರುವಂತೆ, ದೇವರ ವಾಗ್ದಾನಗಳ ಮೇಲೆ ಭರವಸೆಯಿಟ್ಟು ಅದಕ್ಕನುಸಾರ ಕ್ರಿಯೆಗೈಯಬೇಕಾದರೆ ಬಲವಾದ ನಂಬಿಕೆಯು ಅಗತ್ಯವಾಗಿದೆ. (ಇಬ್ರಿ. 11:8-10, 24-26) ಈ ರೀತಿಯ ನಂಬಿಕೆಯನ್ನು ಬೆಳೆಸಿಕೊಂಡು, “ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರ”ವನ್ನು ನೀವು ಹೇಗೆ ಕಟ್ಟಸಾಧ್ಯವಿದೆ?—1 ತಿಮೊ. 6:18.
2. ರಾಜ ಯೋಷೀಯನ ಮಾದರಿಯಿಂದ ನಾವೇನನ್ನು ಕಲಿಯುತ್ತೇವೆ?
2 ಯೆಹೋವನಿಗಾಗಿ ಹುಡುಕಿರಿ: ನಿಮ್ಮ ಕುಟುಂಬದೊಂದಿಗೆ ಆತ್ಮಿಕ ಚಟುವಟಿಕೆಗಳ ಒಂದು ನಿಯತಕ್ರಮ ನಿಮಗಿರುವಲ್ಲಿ ಅದು ಶ್ಲಾಘನೀಯ. ಆದರೆ ಈ ರೀತಿಯ ನಿಯತಕ್ರಮವು ತಾನೇ ಬಲವಾದ ನಂಬಿಕೆಯನ್ನು ಉಂಟುಮಾಡಬಲ್ಲದೆಂದು ನೆನಸಬೇಡಿರಿ. ‘ದೈವಜ್ಞಾನವನ್ನು ಪಡೆದುಕೊಳ್ಳಲು’ ನೀವು ವೈಯಕ್ತಿಕವಾಗಿ ಯೆಹೋವನಿಗಾಗಿ ಹುಡುಕಬೇಕಾಗಿದೆ. (ಜ್ಞಾನೋ. 2:3-5; 1 ಪೂರ್ವ. 28:9) ಯುವ ರಾಜನಾದ ಯೋಷೀಯನು ಅದನ್ನೇ ಮಾಡಿದನು. ಆತ್ಮಿಕ ಬೆಳವಣಿಗೆಗೆ ಅಷ್ಟು ಅನುಕೂಲಕರವಲ್ಲದ ವಾತಾವರಣದಲ್ಲಿ ಬೆಳೆದಿದ್ದರೂ, ಅವನು 15 ವರ್ಷ ಪ್ರಾಯದವನಾಗಿದ್ದಾಗ “ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು.”—2 ಪೂರ್ವ. 34:3.
3. ಇಂದು ಯುವ ಕ್ರೈಸ್ತರು ಯೆಹೋವನಿಗಾಗಿ ಹೇಗೆ ಹುಡುಕಬಲ್ಲರು?
3 ನೀವು ಯೆಹೋವನಿಗಾಗಿ ಹೇಗೆ ಹುಡುಕಬಹುದು? ನೀವು ನಂಬುವಂಥ ವಿಷಯಗಳನ್ನು ಜಾಗರೂಕವಾಗಿ ಪರೀಕ್ಷಿಸುವ ಮತ್ತು ಅವು ನಿಜವಾಗಿಯೂ ಸತ್ಯವಾಗಿದೆ ಎಂದು ‘ಸ್ವತಃ ನಿಮಗೆ ರುಜುಪಡಿಸುವ’ ಮೂಲಕವೇ. (ರೋಮಾ. 12:2, NW) ಉದಾಹರಣೆಗೆ, ಬೈಬಲು ರಕ್ತದ ಕುರಿತು ಏನು ಹೇಳುತ್ತದೆ ಎಂಬುದನ್ನು ನೀವು ವಿವರಿಸಬಲ್ಲಿರೋ ಅಥವಾ 1914ರಲ್ಲಿ ದೇವರ ರಾಜ್ಯವು ಪರಲೋಕದಲ್ಲಿ ಆಳಲು ಆರಂಭಿಸಿತು ಎಂಬುದನ್ನು ರುಜುಪಡಿಸಬಲ್ಲಿರೋ? ಭವಿಷ್ಯತ್ತಿಗಾಗಿ ಒಂದು ಒಳ್ಳೇ ಅಸ್ತಿವಾರವನ್ನು ಕಟ್ಟುವುದರಲ್ಲಿ “ಸತ್ಯದ [ನಿಷ್ಕೃಷ್ಟ] ಜ್ಞಾನ”ವನ್ನು ಪಡೆದುಕೊಳ್ಳುವುದು ಒಂದು ಪ್ರಧಾನ ಭಾಗವಾಗಿದೆ.—1 ತಿಮೊ. 2:3, 4.
4. ಅಸ್ನಾತ ಪ್ರಚಾರಕರು ತಮ್ಮ ಪ್ರಗತಿಯನ್ನು ಹೇಗೆ ವ್ಯಕ್ತಪಡಿಸುವರು?
4 ದೇವರಿಗಾಗಿ ಯೋಷೀಯನು ಮಾಡಿದ ಹುಡುಕುವಿಕೆಯು ಒಳ್ಳೆಯ ಫಲಿತಾಂಶಗಳನ್ನು ತಂದಿತು. ಅವನು 20ರ ಪ್ರಾಯವನ್ನು ತಲಪುವ ಮುಂಚೆಯೇ, ದೇಶದಿಂದ ಸುಳ್ಳಾರಾಧನೆಯನ್ನು ತೊಲಗಿಸಲು ಧೈರ್ಯದಿಂದ ಕ್ರಿಯೆಗೈದನು. (2 ಪೂರ್ವ. 34:3-7) ತದ್ರೀತಿಯಲ್ಲಿ, ನಿಮ್ಮ ಆತ್ಮಿಕ ಪ್ರಗತಿಯು ನಿಮ್ಮ ಕೃತ್ಯಗಳಿಂದ ವ್ಯಕ್ತವಾಗುವುವು. (1 ತಿಮೊ. 4:15) ನೀವು ಒಬ್ಬ ಅಸ್ನಾತ ಪ್ರಚಾರಕರಾಗಿರುವುದಾದರೆ, ನಿಮ್ಮ ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸಲಿಕ್ಕಾಗಿ ಪ್ರಯತ್ನಿಸಿರಿ. ಕೇವಲ ಸಾಹಿತ್ಯವನ್ನು ನೀಡುವುದರಲ್ಲೇ ತೃಪ್ತರಾಗಬೇಡಿರಿ. ಬೈಬಲನ್ನು ಉಪಯೋಗಿಸುವುದು, ಜನರೊಂದಿಗೆ ತರ್ಕಸಮ್ಮತವಾಗಿ ಮಾತಾಡುವುದು, ಮತ್ತು ನೀವು ಕಂಡುಕೊಳ್ಳುವ ಆಸಕ್ತಿಯನ್ನು ಬೆಳೆಸುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. (ರೋಮಾ. 12:7) ಇದು ನೀವು ಆತ್ಮಿಕವಾಗಿ ಬೆಳೆಯುವಂತೆ ನಿಮಗೆ ಸಹಾಯಮಾಡುವುದು.
5. ದೀಕ್ಷಾಸ್ನಾನ ಪಡೆದಿರುವ ಕ್ರೈಸ್ತರಿಗೆ ತಮ್ಮ ಶುಶ್ರೂಷೆಯನ್ನು ವಿಸ್ತರಿಸಲಿಕ್ಕಾಗಿ ಯಾವ ಅವಕಾಶಗಳು ಒದಗಿಬರುತ್ತವೆ?
5 ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಯೆಹೋವನಿಗೆ ಕೊಡಿರಿ: ಯೆಹೋವನಿಗೆ ನೀವು ಮಾಡಿರುವ ಸಮರ್ಪಣೆಯನ್ನು ದೀಕ್ಷಾಸ್ನಾನದ ಮೂಲಕ ಸಂಕೇತಿಸುವಾಗ, ನೀವು ದೇವರ ಒಬ್ಬ ನೇಮಿತ ಶಿಷ್ಯರಾಗುತ್ತೀರಿ. (2 ಕೊರಿಂ. 3:5, 6) ಇದು ನಿಮಗೆ ಪೂರ್ಣ ಸಮಯ ಯೆಹೋವನನ್ನು ಸೇವಿಸಲು ಅವಕಾಶಗಳನ್ನು ಒದಗಿಸಿಕೊಡುತ್ತದೆ. ಇದರಲ್ಲಿ ಪಯನೀಯರ್ ಸೇವೆ ಮತ್ತು ಬೆತೆಲ್ ಸೇವೆ, ಹಾಗೂ ಸಂಚರಣ ಕೆಲಸವೂ ಒಳಗೂಡಿದೆ. ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಲಿಕ್ಕಾಗಿರುವ ಇತರ ವಿಧಗಳು, ಬೇರೊಂದು ಭಾಷೆಯನ್ನು ಕಲಿಯುವುದು ಅಥವಾ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸುವುದು ಆಗಿವೆ.
6. ನಾವೆಲ್ಲರೂ ಭವಿಷ್ಯತ್ತಿಗಾಗಿ ಒಂದು ಒಳ್ಳೇ ಅಸ್ತಿವಾರವನ್ನು ಹೇಗೆ ಕಟ್ಟಿಕೊಳ್ಳಬಲ್ಲೆವು?
6 ಈ ರೀತಿಯ ಸೇವಾ ಸುಯೋಗಗಳಿಗೆ ಎಲ್ಲರೂ ತಮ್ಮನ್ನು ಲಭ್ಯಗೊಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಿಜವಾದರೂ, ಪ್ರತಿಯೊಬ್ಬರೂ ನಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ನೀಡಬಲ್ಲೆವು. (ಮತ್ತಾ. 22:37) ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ಯೆಹೋವನನ್ನು ಸೇವಿಸುವುದನ್ನು ನಿಮ್ಮ ಜೀವನದ ಕೇಂದ್ರಬಿಂದುವನ್ನಾಗಿ ಮಾಡಿಕೊಳ್ಳಿರಿ. (ಕೀರ್ತ. 16:5) ಹೀಗೆ ಮಾಡುವ ಮೂಲಕ, ನೀವು ಭವಿಷ್ಯತ್ತಿಗಾಗಿ ಒಂದು ಒಳ್ಳೇ ಅಸ್ತಿವಾರವನ್ನು ಕಟ್ಟಿಕೊಳ್ಳುತ್ತಿರುವಿರಿ.