ನಾವು ಇತರರಿಗೆ ತೀರಿಸಬೇಕಾದ ಋಣ
1 ಜನರಿಗೆ ಸಾರಿ ಹೇಳುವ ಹಂಗು ತನಗಿದೆ ಎಂದು ಅಪೊಸ್ತಲ ಪೌಲನಿಗೆ ಅನಿಸಿತು. ಯೆಹೋವನು ತನ್ನ ಮಗನ ಅತ್ಯಮೂಲ್ಯ ರಕ್ತದ ಮೂಲಕ ಎಲ್ಲ ಮನುಷ್ಯರು ರಕ್ಷಣೆಯನ್ನು ಹೊಂದುವುದನ್ನು ಸಾಧ್ಯಗೊಳಿಸಿದ್ದಾನೆ ಎಂದು ಪೌಲನಿಗೆ ತಿಳಿದಿತ್ತು. (1 ತಿಮೊ. 2:3-6) ಆದುದರಿಂದಲೇ ಪೌಲನು ಹೀಗೆ ಹೇಳಿದನು: “ಗ್ರೀಕರಿಗೂ ಇತರ ಜನಗಳಿಗೂ ಜ್ಞಾನಿಗಳಿಗೂ ಮೂಢರಿಗೂ ತೀರಿಸಬೇಕಾದ ಒಂದು ಋಣ ನನ್ನ ಮೇಲೆ ಅದೆ.” ತನ್ನ ಜೊತೆ ಮಾನವರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ಮೂಲಕ ಅವರ ಕಡೆಗಿರುವ ತನ್ನ ಋಣವನ್ನು ತೀರಿಸಿಕೊಳ್ಳಲು ಅವನು ಶ್ರದ್ಧಾಪೂರ್ವಕವಾಗಿ ಮತ್ತು ಶ್ರಮಪಟ್ಟು ದುಡಿದನು.—ರೋಮಾ. 1:14, 15.
2 ಪೌಲನಂತೆ ಇಂದಿರುವ ಕ್ರೈಸ್ತರು ಸಹ ತಮಗೆ ದೊರಕುವ ಎಲ್ಲ ಸಂದರ್ಭಗಳಲ್ಲಿ ತಮ್ಮ ನೆರೆಯವರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಪ್ರಯಾಸಪಡುತ್ತಾರೆ. ‘ಮಹಾ ಸಂಕಟವು’ ಶೀಘ್ರವಾಗಿ ಸಮೀಪಿಸುತ್ತಿರುವ ಕಾರಣ, ಪ್ರಾಮಾಣಿಕ ಹೃದಯದ ಜನರನ್ನು ಹುಡುಕುವ ನಮ್ಮ ಕೆಲಸವು ಈಗ ಇನ್ನಷ್ಟು ಜರೂರಿಯದ್ದಾಗಿದೆ. ಜನರಿಗಾಗಿರುವ ನೈಜ ಪ್ರೀತಿಯು ಈ ಜೀವರಕ್ಷಕ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ಮಾಡುವಂತೆ ನಮ್ಮನ್ನು ಪ್ರೇರೇಪಿಸಲಿ.—ಮತ್ತಾ. 24:21; ಯೆಹೆ. 33:8.
3 ನಮ್ಮ ಋಣವನ್ನು ತೀರಿಸುವುದು: ಜನರನ್ನು ನಾವು ತಲಪುವ ಮುಖ್ಯ ವಿಧಾನವು ಮನೆಯಿಂದ ಮನೆಯ ಸಾರುವ ಕೆಲಸದ ಮೂಲಕವೇ ಆಗಿದೆ. ಹೆಚ್ಚಿನ ಮನೆಗಳಲ್ಲಿ ಜನರು ಮನೆಯಲ್ಲಿಲ್ಲದಿರುವಂಥ ಕ್ಷೇತ್ರಗಳಲ್ಲಿ, ದಾಖಲೆಗಳನ್ನು ಇಟ್ಟುಕೊಳ್ಳುವ ಮತ್ತು ಬೇರೆ ಸಮಯದಲ್ಲಿ ಅಲ್ಲಿಗೆ ಪುನಃ ಹೋಗುವ ಮೂಲಕ ನಾವು ಹೆಚ್ಚಿನ ಜನರನ್ನು ಭೇಟಿಯಾಗಬಲ್ಲೆವು. (1 ಕೊರಿಂ. 10:33) ವ್ಯಾಪಾರ ಕ್ಷೇತ್ರದಲ್ಲಿ, ಬೀದಿಗಳಲ್ಲಿ, ಪಾರ್ಕ್ಗಳಲ್ಲಿ, ವಾಹನ ನಿಲುಗಡೆ ಸ್ಥಳಗಳಲ್ಲಿ ಮತ್ತು ಟೆಲಿಫೋನಿನ ಮೂಲಕ ಸಾಕ್ಷಿನೀಡುವುದರಿಂದಲೂ ನಾವು ಜನರನ್ನು ತಲಪಸಾಧ್ಯವಿದೆ. ನಾವು ಸ್ವತಃ ಹೀಗೆ ಕೇಳಿಕೊಳ್ಳಬೇಕು: ‘ಜೀವದಾಯಕ ಸಂದೇಶವನ್ನು ಹಂಚಲಿಕ್ಕಾಗಿ ಎಲ್ಲ ರೀತಿಯ ಸಾಕ್ಷಿಕಾರ್ಯಗಳಲ್ಲಿ ನನ್ನಿಂದಾದಷ್ಟು ಮಟ್ಟಿಗೆ ಭಾಗವಹಿಸುತ್ತಿದ್ದೇನೊ?’—ಮತ್ತಾ. 10:11.
4 ಒಬ್ಬ ಪಯನೀಯರಳಿಗೆ ತನ್ನ ಕ್ಷೇತ್ರದಲ್ಲಿರುವ ಎಲ್ಲರನ್ನು ತಲಪಬೇಕೆಂಬ ತೀವ್ರ ಆಸ್ತಕಿ ಇತ್ತು. ಆದರೆ ಅಲ್ಲಿದ್ದ ಒಂದು ಮನೆಯ ಕಿಟಕಿಯು ಯಾವಾಗಲೂ ಮುಚ್ಚಿರುತ್ತಿತ್ತು ಮತ್ತು ಅವಳು ಹೋದಾಗಲೆಲ್ಲ ಯಾರೂ ಮನೆಯಲ್ಲಿರುತ್ತಿರಲಿಲ್ಲ. ಒಂದು ದಿನ ಅವಳು ಶುಶ್ರೂಷೆಯಲ್ಲಿ ತೊಡಗಿರದ ಸಮಯದಲ್ಲಿ ಆ ಮನೆಯ ಮುಂದೆ ಒಂದು ಕಾರು ನಿಂತಿರುವುದನ್ನು ಕಂಡಳು. ಈ ಸಂದರ್ಭವು ತನ್ನ ಕೈತಪ್ಪಿಹೋಗಬಾರದೆಂದು ನೆನಸಿ, ಅವಳು ಆ ಮನೆಗೆ ಹೋಗಿ ಕರೆಗಂಟೆಯನ್ನು ಒತ್ತಿದಳು. ಒಬ್ಬ ಗಂಡಸು ಬಾಗಿಲನ್ನು ತೆರೆದನು ಮತ್ತು ಆರಂಭದ ಸಂಭಾಷಣೆಯು ಹಲವು ಪುನರ್ಭೇಟಿಗಳಿಗೆ ನಡೆಸಿತು. ಈ ಸಹೋದರಿಯೂ ಆಕೆಯ ಗಂಡನೂ ಪುನರ್ಭೇಟಿಗಳನ್ನು ಮಾಡಿದರು ಮತ್ತು ಕ್ರಮೇಣ ಆ ವ್ಯಕ್ತಿಯು ಬೈಬಲ್ ಅಧ್ಯಯನಕ್ಕೆ ಒಪ್ಪಿದನು ಹಾಗೂ ಈಗ ಅವನು ಒಬ್ಬ ಸ್ನಾತ ಸಹೋದರನಾಗಿದ್ದಾನೆ. ಇತರರಿಗೆ ಸಾರಬೇಕೆಂಬ ಋಣ ತನ್ನ ಮೇಲಿದೆ ಎಂದು ಈ ಸಹೋದರಿ ಭಾವಿಸಿದ್ದಕ್ಕಾಗಿ ಅವನು ಅವಳಿಗೆ ಆಭಾರಿಯಾಗಿದ್ದಾನೆ.
5 ಅಂತ್ಯವು ತೀರ ಸಮೀಪವಿರುವ ಕಾರಣ, ಸಾರುವ ಕೆಲಸದಲ್ಲಿ ಹುರುಪಿನಿಂದ ನಮ್ಮನ್ನು ತೊಡಗಿಸಿಕೊಳ್ಳುವ ಮೂಲಕ, ಜೊತೆ ಮಾನವರ ಕಡೆಗಿನ ನಮ್ಮ ಋಣವನ್ನು ತೀರಿಸಿಕೊಳ್ಳಬೇಕಾದ ಸಮಯ ಇದೇ ಆಗಿದೆ.—2 ಕೊರಿಂ. 6:1, 2.