ನಮ್ಮ ಕ್ರೈಸ್ತ ಜೀವನ
“ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಂಡನು”
ಪೌಲ ರೋಮ್ಗೆ ಬರುತ್ತಿರುವುದು ಗೊತ್ತಾದ ಕೂಡಲೇ ಅಲ್ಲಿನ ಸಹೋದರರು ಆತನನ್ನು ನೋಡಲು ಬಂದರು. ಸುಮಾರು 64 ಕಿ.ಮೀ. ದೂರ ಪ್ರಯಾಣಮಾಡಿ ಬಂದಿದ್ದರು. ಅವರ ನಿಸ್ವಾರ್ಥ ಪ್ರೀತಿ ಪೌಲನ ಮೇಲೆ ಯಾವ ಪ್ರಭಾವ ಬೀರಿತು? “ಅವರನ್ನು ನೋಡಿದಾಗ ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿ ಧೈರ್ಯಗೊಂಡನು.” (ಅಕಾ 28:15) ಬೇರೆ ಬೇರೆ ಸಭೆಗಳಿಗೆ ಹೋಗಿ ಸಹೋದರ-ಸಹೋದರಿಯರನ್ನು ಪ್ರೋತ್ಸಾಹಿಸುತ್ತಿದ್ದ ಆತನಿಗೆ ಈಗ ಸಹೋದರರನ್ನು ನೋಡಿ ಧೈರ್ಯ ಸಿಕ್ಕಿತು. ಆತನೀಗ ಸೆರೆಯಾಳಾಗಿದ್ದನು.—2ಕೊರಿಂ 13:10.
ಇಂದು ಸರ್ಕಿಟ್ ಮೇಲ್ವಿಚಾರಕರು ಒಂದೊಂದೇ ಸಭೆಯನ್ನು ಭೇಟಿ ಮಾಡುತ್ತಾ ಸಹೋದರ-ಸಹೋದರಿಯರನ್ನು ಬಲಪಡಿಸುತ್ತಾರೆ. ಯೆಹೋವನ ಎಲ್ಲ ಸೇವಕರಂತೆ ಅವರಿಗೂ ಕೆಲವೊಮ್ಮೆ ಸುಸ್ತು, ಚಿಂತೆ, ನಿರುತ್ಸಾಹ ಆಗುತ್ತದೆ. ಆದ್ದರಿಂದ ನೀವು ‘ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು.’ (ರೋಮ 1:11, 12) ಮುಂದಿನ ಸಾರಿ ಸರ್ಕಿಟ್ ಮೇಲ್ವಿಚಾರಕ ಮತ್ತು ಅವರ ಪತ್ನಿ ನಿಮ್ಮ ಸಭೆಯನ್ನು ಭೇಟಿ ಮಾಡಿದಾಗ ಅವರನ್ನು ಹೇಗೆ ಪ್ರೋತ್ಸಾಹಿಸುತ್ತೀರಾ?
ಕ್ಷೇತ್ರ ಸೇವೆಯ ಕೂಟಕ್ಕೆ ಹಾಜರಾಗಿ. ಆ ವಿಶೇಷ ವಾರದ ಚಟುವಟಿಕೆಗಳಲ್ಲಿ ಪ್ರಚಾರಕರು ಸಂಪೂರ್ಣವಾಗಿ ಭಾಗವಹಿಸುವುದನ್ನು ನೋಡುವಾಗ ಸರ್ಕಿಟ್ ಮೇಲ್ವಿಚಾರಕರಿಗೆ ತುಂಬ ಸಂತೋಷವಾಗುತ್ತದೆ. (1ಥೆಸ 1:2, 3; 2:20) ಆ ತಿಂಗಳಲ್ಲಿ ಸಹಾಯಕ ಪಯನೀಯರ್ ಸೇವೆ ಮಾಡಬಹುದು. ಸರ್ಕಿಟ್ ಮೇಲ್ವಿಚಾರಕ ಅಥವಾ ಅವರ ಪತ್ನಿ ಜೊತೆ ಸೇವೆಗೆ ಹೋಗಬಹುದು ಅಥವಾ ಬೈಬಲ್ ಅಧ್ಯಯನಕ್ಕೆ ಅವರನ್ನು ಕರಕೊಂಡು ಹೋಗಬಹುದು. ಹೊಸ ಪ್ರಚಾರಕರು, ಸೇವೆಯಲ್ಲಿ ಚೆನ್ನಾಗಿ ಮಾತಾಡಲು ಬರದ ಪ್ರಚಾರಕರು ಹೀಗೆ ಬೇರೆ ಬೇರೆ ಪ್ರಚಾರಕರ ಜೊತೆ ಸೇವೆ ಮಾಡುವುದಕ್ಕೆ ಅವರಿಗೆ ಖುಷಿಯಾಗುತ್ತದೆ.
ಅತಿಥಿಸತ್ಕಾರ ಮಾಡಿ. ನಿಮ್ಮ ಮನೆಯಲ್ಲಿ ಅವರಿಗೆ ಉಳುಕೊಳ್ಳಲು ಏರ್ಪಾಡು ಮಾಡುತ್ತೀರಾ? ಅವರನ್ನು ಊಟಕ್ಕೆ ಕರೆಯುತ್ತೀರಾ? ಇದನ್ನು ಮಾಡಿದರೆ ನೀವು ಅವರನ್ನು ಪ್ರೀತಿಸುತ್ತೀರಿ ಎಂದು ತೋರಿಸಿಕೊಡುತ್ತೀರಿ. ಅವರಿಗೆ ಎಲ್ಲ ಸೌಕರ್ಯ, ಭರ್ಜರಿ ಅಡುಗೆ ಮಾಡಿಕೊಡಬೇಕು ಅಂತೇನಿಲ್ಲ.—ಲೂಕ 10:38-42.
ಮಾರ್ಗದರ್ಶನ, ಬುದ್ಧಿವಾದಕ್ಕೆ ಕಿವಿಗೊಟ್ಟು ಅದನ್ನು ಪಾಲಿಸಿ. ನಾವು ಎಲ್ಲಿ ಪ್ರಗತಿ ಮಾಡಬೇಕಾಗಿದೆ ಎಂದು ಸರ್ಕಿಟ್ ಮೇಲ್ವಿಚಾರಕರು ಪ್ರೀತಿಯಿಂದ ತಿಳಿಸುತ್ತಾರೆ. ಕೆಲವೊಮ್ಮೆ ಬಲವಾದ ಬುದ್ಧಿವಾದವನ್ನೂ ಹೇಳುತ್ತಾರೆ. (1ಕೊರಿಂ 5:1-5) ಅವರಿಗೆ ವಿಧೇಯತೆ ಮತ್ತು ಅಧೀನತೆ ತೋರಿಸಿದರೆ ಸಂತೋಷಪಡುತ್ತಾರೆ.—ಇಬ್ರಿ 13:17.
ಕೃತಜ್ಞತೆ ವ್ಯಕ್ತಪಡಿಸಿ. ಸರ್ಕಿಟ್ ಮೇಲ್ವಿಚಾರಕ ಮತ್ತು ಅವರ ಪತ್ನಿಯಿಂದ ನಿಮಗೆ ಹೇಗೆ ಸಹಾಯ ಆಗಿದೆ ಎಂದು ಅವರಿಗೆ ತಿಳಿಸಿ. ಇದನ್ನು ನೇರವಾಗಿ ಅವರಿಗೆ ಹೇಳಬಹುದು ಅಥವಾ ಕಾರ್ಡಲ್ಲಿ ಬರೆದು ತಿಳಿಸಬಹುದು.—ಕೊಲೊ 3:15.