ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳ ವಿತರಣೆ ಏಪ್ರಿಲ್ 2ರಂದು ಆರಂಭ
1. ಈ ವರ್ಷ ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ಯಾವಾಗ ವಿತರಿಸುವೆವು? ಈ ವಾರ್ಷಿಕ ಕಾರ್ಯಾಚರಣೆಯ ಪ್ರಯೋಜನವೇನು?
1 ಈ ವರ್ಷದ ಅತಿ ಮುಖ್ಯ ಸಮಾರಂಭವಾದ ಕ್ರಿಸ್ತನ ಮರಣದ ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ನಾವು ಏಪ್ರಿಲ್ 2-17ರ ತನಕ ವಿತರಿಸಲಿದ್ದೇವೆ. ಈ ಹಿಂದೆ ಈ ವಾರ್ಷಿಕ ಕಾರ್ಯಾಚರಣೆಗೆ ಅನೇಕ ಆಸಕ್ತರು ಒಳ್ಳೇ ಪ್ರತಿಕ್ರಿಯೆ ತೋರಿಸಿದ್ದಾರೆ. ಉದಾಹರಣೆಗೆ ಮಹಿಳೆಯೊಬ್ಬಳು ಜ್ಞಾಪಕಾಚರಣೆಯ ದಿನದಂದು ಒಂದು ಬ್ರಾಂಚ್ ಆಫೀಸಿಗೆ ಫೋನ್ ಮಾಡಿ, “ಈಗ ತಾನೇ ಮನೆಗೆ ಬಂದೆ. ಬಾಗಿಲಿನಡಿ ಒಂದು ಆಮಂತ್ರಣ ಪತ್ರವಿತ್ತು. ನನಗೆ ಹೋಗಲು ಮನಸ್ಸಿದೆ, ಆದರೆ ಅದು ಎಷ್ಟು ಘಂಟೆಗೆ ಇದೆಯೆಂದು ಗೊತ್ತಿಲ್ಲ” ಎಂದು ಹೇಳಿದರು. ಈ ಮಾಹಿತಿ ಆಮಂತ್ರಣ ಪತ್ರದಲ್ಲಿ ಎಲ್ಲಿರುತ್ತದೆಂದು ನಮ್ಮ ಸಹೋದರ ಅವರಿಗೆ ವಿವರಿಸಿದರು. ಸಂಭಾಷಣೆಯ ಕೊನೆಯಲ್ಲಿ ಈ ಮಹಿಳೆ, “ಇವತ್ತು ಸಂಜೆ ನಿಮ್ಮ ಕಾರ್ಯಕ್ರಮಕ್ಕೆ ಹೋಗುವೆ” ಎಂದು ಮಾತುಕೊಟ್ಟರು.
2. ಆಮಂತ್ರಣ ಪತ್ರ ಕೊಡುವಾಗ ನಾವೇನು ಹೇಳಬಹುದು?
2 ವಿತರಣೆಯ ವಿಧ: ಕಡಿಮೆ ದಿನಗಳಲ್ಲಿ ಟೆರಿಟೊರಿ ಆವರಿಸಬೇಕಾದ್ದರಿಂದ ಸಂಕ್ಷಿಪ್ತ ಭೇಟಿ ಉತ್ತಮ. ನಾವು ಹೀಗನ್ನಬಹುದು: “ನಮಸ್ಕಾರ. ಏಪ್ರಿಲ್ 17ರ ಭಾನುವಾರದಂದು ಮುಖ್ಯವಾದ ಒಂದು ವಾರ್ಷಿಕ ಸಮಾರಂಭವು ಲೋಕವ್ಯಾಪಕವಾಗಿ ಜರಗಲಿದೆ. ಅದರ ಆಮಂತ್ರಣ ಪತ್ರವನ್ನು ನಿಮ್ಮ ಕುಟುಂಬಕ್ಕೆ ಕೊಡಲಿಚ್ಛಿಸುತ್ತೇವೆ. [ಆಮಂತ್ರಣ ಪತ್ರವನ್ನು ಮನೆಯವರಿಗೆ ಕೊಡಿ.] ಏಪ್ರಿಲ್ 17 ಯೇಸುವಿನ ಮರಣದ ಜ್ಞಾಪಕಾಚರಣೆಯ ತಾರೀಖು. ಆತನ ಮರಣದಿಂದ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವೆಂದು ವಿವರಿಸುವ ಒಂದು ಉಚಿತ ಬೈಬಲ್ ಭಾಷಣವನ್ನು ಅಂದು ಕೊಡಲಾಗುವುದು. ಈ ಕೂಟ ನಡೆಯುವ ಸ್ಥಳ ಹಾಗೂ ಸಮಯವನ್ನು ಈ ಆಮಂತ್ರಣ ಪತ್ರದಲ್ಲಿ ಕೊಡಲಾಗಿದೆ.” ಸಮಸ್ಯೆ ಏಳಬಹುದಾದ ಟೆರಿಟೊರಿಯಲ್ಲಿ ನೀವು ಕೆಲಸಮಾಡುತ್ತಿರುವಲ್ಲಿ, ಆಮಂತ್ರಣ ಪತ್ರವನ್ನು ನೀಡುವ ಮುಂಚೆ ಮನೆಯವರು ಆಸಕ್ತರಾಗಿದ್ದಾರೊ ಎಂಬುದನ್ನು ನೀವು ಮೊದಲು ಗೊತ್ತುಮಾಡತಕ್ಕದ್ದು.
3. ಆದಷ್ಟು ಹೆಚ್ಚು ಜನರನ್ನು ನಾವು ಹೇಗೆ ಆಮಂತ್ರಿಸಬಹುದು?
3 ಸಭೆಗೆ ದೊಡ್ಡ ಟೆರಿಟೊರಿಯಿರುವಲ್ಲಿ, ಮನೆಯಲ್ಲಿ ಯಾರೂ ಇಲ್ಲದಿರುವಲ್ಲಿಯೂ ಆಮಂತ್ರಣ ಪತ್ರಗಳನ್ನು ಇತರರ ದೃಷ್ಟಿಗೆ ಬೀಳದ ಜಾಗದಲ್ಲಿ ಬಿಟ್ಟುಬರುವಂತೆ ಹಿರಿಯರು ನಿರ್ದೇಶನ ನೀಡಬಹುದು. ನಿಮ್ಮ ಪುನರ್ಭೇಟಿಗಳು, ಸಂಬಂಧಿಕರು, ಸಹೋದ್ಯೋಗಿಗಳು, ಸಹಪಾಠಿಗಳು, ಇತರ ಪರಿಚಯಸ್ಥರನ್ನು ಖಂಡಿತ ಆಮಂತ್ರಿಸಿ. ವಾರಾಂತ್ಯಗಳಂದು ವಿತರಿಸುವಾಗ ಸೂಕ್ತವಿರುವಲ್ಲೆಲ್ಲ ಪತ್ರಿಕೆಗಳನ್ನೂ ನೀಡಿ. ಏಪ್ರಿಲ್ ತಿಂಗಳಲ್ಲಿ ನೀವು ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವ ಮೂಲಕ ಈ ಆನಂದದಾಯಕ ಕಾರ್ಯಾಚರಣೆಯಲ್ಲಿ ಹೆಚ್ಚನ್ನು ಮಾಡಬಲ್ಲಿರೋ?
4. ಆಸಕ್ತರು ಜ್ಞಾಪಕಾಚರಣೆಗೆ ಹಾಜರಾಗಬೇಕೆಂದು ನಾವೇಕೆ ಬಯಸುತ್ತೇವೆ?
4 ಆಸಕ್ತ ಜನರು ಹಾಜರಾಗುವಾಗ ಅವರಿಗೆ ಪ್ರಬಲ ಸಾಕ್ಷಿ ಸಿಗಲಿದೆ! ವಿಮೋಚನಾ ಮೌಲ್ಯದ ಏರ್ಪಾಡನ್ನು ಮಾಡಿ ಯೆಹೋವನು ತೋರಿಸಿದ ಮಹಾ ಪ್ರೀತಿಯ ಕುರಿತು ಅವರು ಕೇಳಿಸಿಕೊಳ್ಳುವರು. (ಯೋಹಾ. 3:16) ದೇವರ ರಾಜ್ಯದಿಂದ ಮಾನವಕುಲಕ್ಕೆ ಹೇಗೆ ಪ್ರಯೋಜನವಾಗಲಿದೆ ಎಂದು ಕಲಿಯುವರು. (ಯೆಶಾ. 65:21-23) ಅವರು ಅಲ್ಲಿರುವ ಅಟೆಂಡೆಂಟರನ್ನು ಭೇಟಿಯಾಗಿ, ಹೆಚ್ಚನ್ನು ಕಲಿಯಲು ಬೈಬಲ್ ಅಧ್ಯಯನಕ್ಕಾಗಿ ವಿನಂತಿಸುವಂತೆ ಹೇಳಲಾಗುವುದು. ಪ್ರಾಮಾಣಿಕಹೃದಯದ ಜನರು ಈ ಕಾರ್ಯಾಚರಣೆಗೆ ಸ್ಪಂದಿಸಿ, ನಮ್ಮ ಜೊತೆ ಜ್ಞಾಪಕಾಚರಣೆಗೆ ಹಾಜರಾಗಲಿ ಎಂಬುದೇ ನಮ್ಮ ಹಾರೈಕೆ!