ನಮ್ಮ ಆದ್ಯತೆ
1. ತನಗೆ ಶುಶ್ರೂಷೆಯೇ ಮುಖ್ಯ ಎಂಬುದನ್ನು ಯೇಸು ಹೇಗೆ ತೋರಿಸಿಕೊಟ್ಟನು?
1 ಶುಶ್ರೂಷೆಗೆ ಯೇಸು ಆದ್ಯತೆ ನೀಡಿದನು. ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸುವಾರ್ತೆ ತಿಳಿಸಲು ಪ್ಯಾಲಸ್ತೀನಿನಲ್ಲಿ ನೂರಾರು ಮೈಲಿಗಳಷ್ಟು ದೂರ ನಡೆದನು. ಶುಶ್ರೂಷೆಗೆ ಹೆಚ್ಚಿನ ಸಮಯ ಮತ್ತು ಗಮನ ಕೊಡಲಿಕ್ಕಾಗಿ ತನ್ನ ಜೀವನವನ್ನು ಸರಳವಾಗಿಟ್ಟನು. (ಮತ್ತಾ. 8:20) ತಮ್ಮ ರೋಗಗಳನ್ನು ಯೇಸು ವಾಸಿಮಾಡುತ್ತಾನೆಂದು ತಿಳಿದ ಜನರು ಆತನು ತಮ್ಮನ್ನು ಬಿಟ್ಟು ಹೋಗದಂತೆ ತಡೆಯಲು ಪ್ರಯತ್ನಿಸಿದರು. ಆಗ ಯೇಸು “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ” ಎಂದು ಆ ಜನರಿಗೆ ಹೇಳಿದನು.—ಲೂಕ 4:43.
2. ಯೇಸುವಿಗೆ ಶುಶ್ರೂಷೆಯು ಏಕೆ ಅಷ್ಟೊಂದು ಪ್ರಾಮುಖ್ಯವಾಗಿತ್ತು?
2 ಯೇಸು ಶುಶ್ರೂಷೆಗೆ ಏಕೆ ಅಷ್ಟು ಪ್ರಾಮುಖ್ಯತೆ ಕೊಟ್ಟನು? ಯೆಹೋವನ ನಾಮದ ಪವಿತ್ರೀಕರಣವೇ ಆತನಿಗೆ ಎಲ್ಲಕ್ಕಿಂತ ಮುಖ್ಯವಾಗಿತ್ತು. (ಮತ್ತಾ. 6:9) ಯೇಸು ಸ್ವರ್ಗದಲ್ಲಿರುವ ತನ್ನ ತಂದೆಯನ್ನು ಪ್ರೀತಿಸಿದನು. ಆದ್ದರಿಂದ ತನ್ನ ತಂದೆಯ ಚಿತ್ತವನ್ನು ಪೂರೈಸುವ ಮತ್ತು ಆತನ ಪ್ರತಿಯೊಂದು ಆಜ್ಞೆಯನ್ನು ಪಾಲಿಸುವ ಮನಸ್ಸುಳ್ಳವನಾಗಿದ್ದನು. (ಯೋಹಾ. 14:31) ಮಾತ್ರವಲ್ಲ ಜನರ ಬಗ್ಗೆ ಯಥಾರ್ಥವಾದ ಕಾಳಜಿಯುಳ್ಳವನೂ ಸಹಾಯಮಾಡುವ ಮನಸ್ಸುಳ್ಳವನೂ ಆಗಿದ್ದನು.—ಮತ್ತಾ. 9:36, 37.
3. ಶುಶ್ರೂಷೆಯೇ ನಮ್ಮ ಆದ್ಯತೆ ಎಂಬುದನ್ನು ನಾವು ಹೇಗೆ ತೋರಿಸಿಕೊಡಬಲ್ಲೆವು?
3 ಯೇಸುವನ್ನು ಅನುಕರಿಸಿರಿ: ಯೇಸು ಮಾಡಿದ ಹಾಗೆ ಶುಶ್ರೂಷೆಗೆ ಆದ್ಯತೆ ಕೊಡುವುದು ನಮಗೆ ಅಷ್ಟೊಂದು ಸುಲಭವಾಗಲಿಕ್ಕಿಲ್ಲ. ಏಕೆಂದರೆ ಈ ಲೋಕ ನಮ್ಮ ಹೆಚ್ಚಿನ ಸಮಯವನ್ನು ಕಬಳಿಸಿಬಿಡುತ್ತದೆ ಮತ್ತು ಅನೇಕ ಅಪಕರ್ಷಣೆಗಳನ್ನೂ ತರುತ್ತದೆ. (ಮತ್ತಾ. 24:37-39; ಲೂಕ 21:34) ಆದ್ದರಿಂದ ಪ್ರಾಮುಖ್ಯವಾದ ವಿಷಯಗಳು ಯಾವುವು ಎಂಬುದನ್ನು ಖಚಿತಪಡಿಸಬೇಕು. ಇದರರ್ಥ ಸಾರುವ ಕೆಲಸಕ್ಕಾಗಿ ತಯಾರಿಸಲು ಮತ್ತು ಅದರಲ್ಲಿ ಕ್ರಮವಾಗಿ ಭಾಗವಹಿಸಲು ಸಮಯವನ್ನು ಬದಿಗಿರಿಸಬೇಕು. (ಫಿಲಿ. 1:10) ಅದಕ್ಕಾಗಿ ನಮ್ಮ ಜೀವನಶೈಲಿಯನ್ನು ಸರಳವಾಗಿಡಲು ಮತ್ತು ಈ ಲೋಕವನ್ನು ಪೂರ್ಣವಾಗಿ ಅನುಭೋಗಿಸದಿರಲು ನಾವು ಸತತ ಪ್ರಯತ್ನಮಾಡಬೇಕು.—1 ಕೊರಿಂ. 7:31.
4. ನಾವು ಈಗಲೇ ಸರಿಯಾದ ಆದ್ಯತೆ ಇಡುವುದು ಪ್ರಾಮುಖ್ಯವೇಕೆ?
4 ಸಮಯ ತುಂಬ ಕಡಿಮೆ ಇರುವಾಗ ಜಾಣನು ಪ್ರಾಮುಖ್ಯ ಕೆಲಸಗಳನ್ನು ಮೊದಲು ಮಾಡುತ್ತಾನೆ. ಉದಾಹರಣೆಗೆ ಒಂದು ದೊಡ್ಡ ಬಿರುಗಾಳಿ ಬೀಸಲಿದೆ ಎಂದು ಅವನಿಗೆ ತಿಳಿದಾಗ ಮೊದಲು ಏನು ಮಾಡುವನು? ತನ್ನ ಕುಟುಂಬದ ಸುರಕ್ಷೆಗಾಗಿ ಏರ್ಪಾಡು ಮಾಡಲು ಮತ್ತು ನೆರೆಯವರನ್ನು ಎಚ್ಚರಿಸಲು ತನ್ನೆಲ್ಲಾ ಸಮಯಶಕ್ತಿಯನ್ನು ಉಪಯೋಗಿಸುವನು. ಅವನು ಪ್ರಾಮುಖ್ಯವಲ್ಲದ ವಿಷಯಗಳನ್ನು ಮಾಡಲು ಹೋಗುವುದಿಲ್ಲ. ಅಂತೆಯೇ ಅರ್ಮಗೆದೋನ್ ಯುದ್ಧಕ್ಕೆ ಉಳಿದಿರುವ ಸಮಯ ಕೊಂಚವೇ. (ಚೆಫ. 1:14-16; 1 ಕೊರಿಂ. 7:29) ನಮ್ಮನ್ನೂ ನಮಗೆ ಕಿವಿಗೊಡುವವರನ್ನೂ ರಕ್ಷಿಸುವ ಉದ್ದೇಶದಿಂದ ನಾವು ನಮಗೆ ಮತ್ತು ಸಭೆಯೊಳಗೂ ಹೊರಗೂ ಮಾಡುವ ಬೋಧನೆಗೆ ಸದಾ ಗಮನಕೊಡಬೇಕು. (1 ತಿಮೊ. 4:16) ಹೌದು, ನಮ್ಮ ರಕ್ಷಣೆಯು ನಾವು ಶುಶ್ರೂಷೆಗೆ ಆದ್ಯತೆ ಕೊಡುತ್ತೇವೋ ಇಲ್ಲವೋ ಎಂಬುದರ ಮೇಲೆ ಹೊಂದಿಕೊಂಡಿದೆ!