“ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ”
1. ನಮ್ಮ ಕೆಲಸದ ಬಗ್ಗೆ ಕೆಲವರಿಗೆ ಯಾವ ಅಭಿಪ್ರಾಯವಿದೆ?
1 ಕೆಲವೊಮ್ಮೆ ಶುಶ್ರೂಷೆಯಲ್ಲಿ ಮನೆಯವರು ಕಟುವಾಗಿ ಪ್ರತಿಕ್ರಿಯಿಸಬಹುದು. ಯಾಕೆಂದರೆ ಅವರು ನಮ್ಮನ್ನು ಅಪಾರ್ಥ ಮಾಡಿಕೊಂಡಿರಬಹುದು ಇಲ್ಲವೆ ಅವರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಸುಳ್ಳು ಮಾಹಿತಿ ಸಿಕ್ಕಿರಬಹುದು ಇಲ್ಲವೆ ವಾರ್ತಾ ಮಾಧ್ಯಮಗಳು ನಮ್ಮ ಬಗ್ಗೆ ತಪ್ಪಾಗಿ ವರದಿಸಿರಬಹುದು. ತಪ್ಪಾದ ವಿಧಾನಗಳನ್ನು ಬಳಸಿ “ಮತಾಂತರ ಮಾಡುತ್ತಿದ್ದೇವೆ” ಎಂದು ಕೆಲವು ಸ್ಥಳಗಳಲ್ಲಿ ನಮ್ಮ ಮೇಲೆ ಆರೋಪಹಾಕಲಾಗಿದೆ. ಇವೆಲ್ಲಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
2. ಜನರ ಆರೋಪಗಳಿಂದ ನಿರುತ್ತೇಜಿತರಾಗದಿರಲು ನಮಗೆ ಯಾವುದು ಸಹಾಯಮಾಡುವುದು?
2 ಸಕಾರಾತ್ಮಕ ಮನೋಭಾವ ಇರಲಿ: ಒಂದನೇ ಶತಮಾನದಲ್ಲಿ ಯೇಸುವನ್ನೂ ಯೆಹೋವನ ಇತರ ಸೇವಕರನ್ನೂ ಜನರು ಪದೇ ಪದೇ ತಪ್ಪಾರ್ಥ ಮಾಡಿಕೊಂಡು ಕೆಟ್ಟದಾಗಿ ಮಾತಾಡಿದರು. (ಅ. ಕಾ. 28:22) ಆದರೂ ಯೆಹೋವನ ಆ ಸೇವಕರು ತಮ್ಮ ಶುಶ್ರೂಷೆಯ ಬಗ್ಗೆ ನಾಚಿಕೆಪಡಲಿಲ್ಲ. “ವಿವೇಕವು ತನ್ನ ಕ್ರಿಯೆಗಳ ಮೂಲಕ ನೀತಿಯುತವೆಂದು ಸಾಬೀತಾಗುತ್ತದೆ” ಎಂದನು ಯೇಸು. (ಮತ್ತಾ. 11:18, 19) ಸತ್ಯವನ್ನು ಹುಡುಕುತ್ತಿದ್ದ ಜನರು ಸುವಾರ್ತೆಯ ಮೌಲ್ಯವನ್ನು ಗ್ರಹಿಸುವರೆಂಬ ಭರವಸೆ ಆತನಿಗಿತ್ತು. ಆದ್ದರಿಂದ ತನ್ನ ತಂದೆಯ ಚಿತ್ತವನ್ನು ಹುರುಪಿನಿಂದ ಮಾಡುತ್ತಾ ಇದ್ದನು. ದೇವರ ಮಗನನ್ನೇ ಜನರು ದುರುಪಚರಿಸಿದ್ದರು ಎಂಬದನ್ನು ಮನಸ್ಸಿನಲ್ಲಿಟ್ಟರೆ ನಾವೆಂದೂ ನಿರುತ್ತೇಜನಗೊಳ್ಳದಿರುವೆವು.
3. ತಪ್ಪು ವರದಿಗಳು ಮತ್ತು ವಿರೋಧ ಬಂದಾಗ ನಾವು ಆಶ್ಚರ್ಯಗೊಳ್ಳಬಾರದೇಕೆ?
3 ಈ ಲೋಕದ ಜನರು ತನ್ನನ್ನು ದ್ವೇಷಿಸಿದಂತೆ ತನ್ನ ಅನುಯಾಯಿಗಳನ್ನೂ ದ್ವೇಷಿಸುವರೆಂದು ಯೇಸು ಹೇಳಿದ್ದನು. (ಯೋಹಾ. 15:18-20) ಆದ್ದರಿಂದ ಇಂದು ತಪ್ಪು ವರದಿಗಳು ಮತ್ತು ವಿರೋಧ ಬಂದಾಗ ನಾವು ಆಶ್ಚರ್ಯಗೊಳ್ಳಬಾರದು. ನಿಜ ಹೇಳಬೇಕೆಂದರೆ, ನಾವು ಕಡೇ ದಿವಸಗಳ ಅಂತ್ಯದೆಡೆಗೆ ಸಾಗುತ್ತಿರುವುದರಿಂದ ಮತ್ತು ಸೈತಾನನ ಕೋಪ ಹೆಚ್ಚುತ್ತಿರುವುದರಿಂದ ಇಂಥ ವಿಷಯಗಳು ಅಧಿಕವಾಗುವುದನ್ನು ನಿರೀಕ್ಷಿಸಬೇಕು. (ಪ್ರಕ. 12:12) ಅಲ್ಲದೆ, ಇವು ಸೈತಾನನ ಲೋಕವು ಬೇಗನೆ ಮಣ್ಣುಮುಕ್ಕಲಿದೆ ಎಂಬದರ ಸೂಚನೆ ಎಂದು ತಿಳಿದು ಸಂತೋಷಪಡಬೇಕು.
4. ಸುವಾರ್ತೆ ಸಾರುವಾಗ ಜನರು ಕಟುವಾಗಿ ಪ್ರತಿಕ್ರಿಯಿಸುವಲ್ಲಿ ನಾವು ಹೇಗೆ ಮಾತಾಡಬೇಕು?
4 ಸೌಜನ್ಯದಿಂದ ಮಾತಾಡಿ: ಜನರು ಕಟುವಾಗಿ ಪ್ರತಿಕ್ರಿಯಿಸಿದಾಗಲೆಲ್ಲಾ ನಾವು ಸೌಜನ್ಯದಿಂದಲೂ ಮೃದುವಾಗಿಯೂ ಮಾತಾಡಬೇಕು. (ಜ್ಞಾನೋ. 15:1; ಕೊಲೊ. 4:5, 6) ಪರಿಸ್ಥಿತಿ ನೋಡಿ ಪ್ರಾಮಾಣಿಕ ಹೃದಯದ ಮನೆಯವರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಇಷ್ಟೊಂದು ತಪ್ಪು ಮಾಹಿತಿ ಏಕೆ ಹಬ್ಬಿದೆ ಎಂಬದನ್ನು ವಿವರಿಸಿ ಇಲ್ಲವೆ ನಮ್ಮ ಬಗ್ಗೆ ಈ ರೀತಿಯ ಅಭಿಪ್ರಾಯ ತಾಳಲು ಕಾರಣವೇನೆಂದು ಅವರನ್ನೇ ಕೇಳಿ. ನಮ್ಮ ಮೃದುವಾದ ಪ್ರತಿಕ್ರಿಯೆಯನ್ನು ನೋಡಿ ಯೆಹೋವನ ಸಾಕ್ಷಿಗಳ ಬಗ್ಗೆ ತಾನು ಕೇಳಿರುವ ವಿಷಯಗಳು ಸತ್ಯವೋ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಏಳಬಹುದು ಮತ್ತು ಮುಂದಿನ ಸಲ ಸಾಕ್ಷಿಗಳು ಭೇಟಿಯಾದಾಗ ಅವರು ಉತ್ತಮ ಪ್ರತಿಕ್ರಿಯೆ ತೋರಿಸಬಹುದು. ಒಂದುವೇಳೆ ಮನೆಯವರು ತುಂಬ ಸಿಟ್ಟುಗೊಂಡರೆ ಅಲ್ಲಿಂದ ಹೊರಡುವುದು ಒಳ್ಳೇದು. ನಮ್ಮ ಕೆಲಸವನ್ನು ಜನರು ಹೇಗೆಯೇ ವೀಕ್ಷಿಸಲಿ ಯೆಹೋವನು ಅದನ್ನು ಅಮೂಲ್ಯವೆಂದು ಎಣಿಸುತ್ತಾನೆ ಎಂಬ ಭರವಸೆಯಿರಲಿ.—ಯೆಶಾ. 52:7.