ನೀವು ಹಿಂದೊಮ್ಮೆ ರೆಗ್ಯುಲರ್ ಪಯನೀಯರ್ ಆಗಿದ್ದಿರೊ?
1. ಅನೇಕರು ಯಾವ ಸದವಕಾಶವನ್ನು ಆನಂದಿಸಿದ್ದಾರೆ? ಕೆಲವರಿಗೆ ಏನು ಮಾಡಬೇಕಾಗಿ ಬಂತು?
1 ಅನೇಕ ವರ್ಷಗಳಿಂದ ಸಾವಿರಾರು ಮಂದಿ ಪೂರ್ಣ ಸಮಯದ ಶುಶ್ರೂಷಕರಾಗಿ ‘ಬೋಧಿಸುವ ಹಾಗೂ ಸುವಾರ್ತೆ ಸಾರುವ’ ಸದವಕಾಶವನ್ನು ಆನಂದಿಸಿದ್ದಾರೆ. (ಅ. ಕಾ. 5:42) ಆದರೆ ಅವರಲ್ಲಿ ಕೆಲವರು ಕಾರಣಾಂತರಗಳಿಂದ ಪಯನೀಯರ್ ಸೇವೆ ನಿಲ್ಲಿಸಬೇಕಾಯಿತು. ಒಂದುವೇಳೆ ನೀವು ಹಿಂದೊಮ್ಮೆ ರೆಗ್ಯುಲರ್ ಪಯನೀಯರರಾಗಿದ್ದರೆ, ಪುನಃ ಪಯನೀಯರರಾಗಲು ಸಾಧ್ಯವಿದೆಯೊ ಎಂದು ನಿಮ್ಮ ಸದ್ಯದ ಪರಿಸ್ಥಿತಿಗಳನ್ನು ಪರಿಶೀಲಿಸಿ ನೋಡಿದ್ದೀರೊ?
2. ಹಿಂದೆ ಪಯನೀಯರ್ ಆಗಿದ್ದವರು ತಮ್ಮ ಸದ್ಯದ ಪರಿಸ್ಥಿತಿಯನ್ನು ಏಕೆ ಪರಿಶೀಲಿಸಬೇಕು?
2 ಪರಿಸ್ಥಿತಿ ಬದಲಾಗುತ್ತದೆ: ನೀವು ಪಯನೀಯರ್ ಸೇವೆ ನಿಲ್ಲಿಸುವಂತೆ ಮಾಡಿದ ಪರಿಸ್ಥಿತಿ ಬಹುಶಃ ಈಗ ಇರಲಿಕ್ಕಿಲ್ಲ. ಉದಾಹರಣೆಗೆ, ತಿಂಗಳಿಗೆ 90 ತಾಸು ಸೇವೆಮಾಡಲು ಆಗದಿದ್ದ ಕಾರಣ ನೀವು ಪಯನೀಯರ್ ಸೇವೆ ನಿಲ್ಲಿಸಿರಬಹುದು. ಆದರೆ ಈಗ ಕೇವಲ 70 ತಾಸು ಮಾಡಲಿಕ್ಕಿರುವುದರಿಂದ ಪುನಃ ಪಯನೀಯರರಾಗಬಲ್ಲಿರೊ? ಬಹುಶಃ ನೀವು ಹಿಂದೆ ಮಾಡುತ್ತಿದ್ದಷ್ಟು ಐಹಿಕ ದುಡಿಮೆ ಈಗ ಮಾಡಬೇಕಾಗಿಲ್ಲ, ಇಲ್ಲವೆ ಹಿಂದೆ ಇದ್ದಷ್ಟು ಕುಟುಂಬ ಜವಾಬ್ದಾರಿಗಳು ಈಗಿರಲಿಕ್ಕಿಲ್ಲ. ಆದ್ದರಿಂದ ಪುನಃ ಪಯನೀಯರರಾಗಬಲ್ಲಿರೊ? ಇತ್ತೀಚೆಗೆ ಐಹಿಕ ಉದ್ಯೋಗದಿಂದ ನಿವೃತ್ತಿ ಪಡೆದಿದ್ದೀರೊ? ಅಸ್ವಸ್ಥತೆಯ ಕಾರಣ ಪಯನೀಯರ್ ಸೇವೆ ನಿಲ್ಲಿಸಿದ್ದ ಸಹೋದರಿಯೊಬ್ಬರು 89ರ ಪ್ರಾಯದಲ್ಲಿ ಅದನ್ನು ಪುನಃ ಆರಂಭಿಸಿದರು. ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಆಸ್ಪತ್ರೆಗೆ ದಾಖಲಾಗುವಷ್ಟರ ಮಟ್ಟಿಗೆ ಅವರ ಆರೋಗ್ಯ ಹದಗೆಟ್ಟಿರಲಿಲ್ಲ. ಆದ್ದರಿಂದ ಪುನಃ ಪಯನೀಯರ್ ಸೇವೆ ಮಾಡುವಷ್ಟು ಆರೋಗ್ಯ ತನಗಿದೆ ಎಂದವರಿಗೆ ಅನಿಸಿತು!
3. ಕುಟುಂಬದಲ್ಲಿ ಒಬ್ಬರು ಪಯನೀಯರರಾಗುವಂತೆ ಉಳಿದ ಸದಸ್ಯರು ಹೇಗೆ ಸಹಕರಿಸಬಹುದು?
3 ಬಹುಶಃ ನೀವು ಹಿಂದೆ ಪಯನೀಯರ್ ಆಗಿದ್ದಿರಲಿಕ್ಕಿಲ್ಲ, ಆದರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ವೃದ್ಧ ತಂದೆ/ತಾಯಿಯ ಇಲ್ಲವೆ ಕುಟುಂಬದ ಬೇರೊಬ್ಬ ಸದಸ್ಯರ ಆರೈಕೆಗಾಗಿ ಪಯನೀಯರ್ ಸೇವೆ ನಿಲ್ಲಿಸಿರಬಹುದು. (1 ತಿಮೊ. 5:4, 8) ಹಾಗಿದ್ದಲ್ಲಿ, ಮುಂಚೆ ಪಯನೀಯರನಾಗಿದ್ದ ಆ ಸದಸ್ಯನಿಗೆ ನೀವು ಇಲ್ಲವೆ ಕುಟುಂಬದ ಇತರರು ಹೆಚ್ಚು ನೆರವು ನೀಡಬಹುದೋ? ಈ ವಿಷಯವನ್ನು ಒಟ್ಟಿಗೆ ಕೂತು ಚರ್ಚಿಸಬಾರದೇಕೆ? (ಜ್ಞಾನೋ. 15:22) ಕುಟುಂಬದಲ್ಲಿ ಒಬ್ಬರು ಪಯನೀಯರರಾಗಲು ಉಳಿದವರೆಲ್ಲರೂ ಸಹಕರಿಸುವಲ್ಲಿ ಆ ಪಯನೀಯರ್ ಸೇವೆಯಲ್ಲಿ ಅವರೆಲ್ಲರ ಪಾಲಿದೆ ಎಂದರೆ ತಪ್ಪಾಗಲಾರದು.
4. ಪುನಃ ಪಯನೀಯರರಾಗಲು ಈಗ ನಿಮಗೆ ಸಾಧ್ಯವಿಲ್ಲದಿದ್ದರೆ ಏನು ಮಾಡಬಹುದು?
4 ಸದ್ಯದ ಪರಿಸ್ಥಿತಿಗಳಿಂದಾಗಿ ನೀವು ಪುನಃ ಪಯನೀಯರರಾಗಲು ಸಾಧ್ಯವಿಲ್ಲದಿದ್ದರೆ ನಿರುತ್ಸಾಹಗೊಳ್ಳಬೇಡಿ. ನಿಮಗಿರುವ ಸಿದ್ಧಮನಸ್ಸೇ ಯೆಹೋವನಿಗೆ ಸಂತೋಷ ತರುತ್ತದೆ. (2 ಕೊರಿಂ. 8:12) ಪಯನೀಯರ್ ಆಗಿದ್ದಾಗ ಗಳಿಸಿದ ಕೌಶಲಗಳನ್ನು ಈಗಲೂ ಶುಶ್ರೂಷೆಯಲ್ಲಿ ಬಳಸಿ. ಪುನಃ ಪಯನೀಯರರಾಗುವ ನಿಮ್ಮ ಆಸೆಯ ಬಗ್ಗೆ ಯಾವಾಗಲೂ ಪ್ರಾರ್ಥಿಸಿರಿ. ನಿಮ್ಮ ಪರಿಸ್ಥಿತಿಗಳನ್ನು ಹೊಂದಿಸಿಕೊಳ್ಳಲು ಅವಕಾಶವಿದ್ದಲ್ಲಿ ಬಿಡಬೇಡಿ. (1 ಯೋಹಾ. 5:14) ‘ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವನ್ನು’ ಯೆಹೋವನು ಬಹುಶಃ ಸಕಾಲದಲ್ಲಿ ತೆರೆಯುವನು. ಆಗ ನೀವು ಪುನಃ ಒಮ್ಮೆ ರೆಗ್ಯುಲರ್ ಪಯನೀಯರ್ ಸೇವೆಯ ಆಶೀರ್ವಾದಗಳನ್ನು ಆನಂದಿಸಬಲ್ಲಿರಿ!—1 ಕೊರಿಂ. 16:9.