ಪ್ರಭಾವಯುತ ಸಾಕ್ಷಿ ನೀಡೋಣ
1. ಭಾಷಣ ಮಾತ್ರವಲ್ಲದೆ ಬೇರಾವ ಸಂಗತಿಗಳು ಜ್ಞಾಪಕಾಚರಣೆಗೆ ಹಾಜರಾದ ಆಸಕ್ತರನ್ನು ಪ್ರಭಾವಿಸಬಹುದು? ವಿವರಿಸಿ.
1 ಯಾವಾಗ? ಜ್ಞಾಪಕಾಚರಣೆಯ ರಾತ್ರಿಯಂದು. ಅದಕ್ಕೆ ಹಾಜರಾಗುವಂತೆ ಜನರನ್ನು ಆಮಂತ್ರಿಸಲು ನಾವು ಬಹಳ ಶ್ರಮಿಸಿದ್ದೇವೆ. ಅಂದು ಹಾಜರಾಗುವ ಆಸಕ್ತರನ್ನು ಪ್ರಭಾವಿಸಬಹುದಾದದ್ದು ಅವರು ಕೇಳಲಿರುವ ಸಂಗತಿಗಳು ಮಾತ್ರವಲ್ಲ ನೋಡುವ ಸಂಗತಿಗಳು ಸಹ. ಜ್ಞಾಪಕಾಚರಣೆಗೆ ಹಾಜರಾದ ಬಳಿಕ ಸ್ತ್ರೀಯೊಬ್ಬಳು, ಸ್ವಯಂಸೇವಕರಿಂದ ಕಟ್ಟಲಾಗಿದ್ದ ಆ ಸಭಾಗೃಹವು ಎಷ್ಟು ಅಂದವೂ ಸ್ವಚ್ಛವೂ ಆಗಿತ್ತೆಂದು ಮತ್ತು ಎಲ್ಲರೂ ಎಷ್ಟು ಸ್ನೇಹಪರರಾಗಿದ್ದರೆಂದು ನಿರ್ದಿಷ್ಟವಾಗಿ ತಿಳಿಸಿದಳು. ಆದ್ದರಿಂದ, ಭಾಷಣಕರ್ತನು ಮಾತ್ರವಲ್ಲ ನಾವೆಲ್ಲರೂ ವರ್ಷದ ಈ ಅತ್ಯಂತ ಪ್ರಮುಖ ಸಂದರ್ಭದಂದು ಸಾಕ್ಷಿಕೊಡುವುದರಲ್ಲಿ ಭಾಗಿಗಳಾಗುತ್ತೇವೆ.—ಎಫೆ. 4:16.
2. ನಮ್ಮಲ್ಲಿ ಪ್ರತಿಯೊಬ್ಬರು ಹಾಜರಾಗುವ ಆಸಕ್ತರಿಗೆ ಹೇಗೆ ಸಾಕ್ಷಿಕೊಡಬಲ್ಲೆವು?
2 ಆಸಕ್ತರನ್ನು ಹಾರ್ದಿಕವಾಗಿ ವಂದಿಸಿ: ಹಾಜರಾಗುವ ಆಸಕ್ತರನ್ನು ನಗುಮುಖದಿಂದ ವಂದಿಸುತ್ತಾ ಸ್ವಾಗತಿಸುವುದರಿಂದ ಒಳ್ಳೇ ಸಾಕ್ಷಿ ಕೊಡಬಹುದು. (ಯೋಹಾ. 13:35) ನಿಮಗೆ ಎಲ್ಲರೊಂದಿಗೆ ಮಾತಾಡಲು ಸಾಧ್ಯವಾಗದಿದ್ದರೂ, ಕಡಿಮೆಪಕ್ಷ ನಿಮ್ಮ ಹತ್ತಿರವಿರುವ ಜನರನ್ನು ಸ್ನೇಹದಿಂದ ಮಾತಾಡಿಸಿ ನಿಮ್ಮ ಪರಿಚಯ ಹೇಳಿ. (ಇಬ್ರಿ. 13:1, 2) ಯಾರ ಪರಿಚಯವೂ ಇಲ್ಲದಂತೆ ತೋರುವ ಆಸಕ್ತರಿದ್ದರೆ ಅವರಿಗೆ ಗಮನ ಕೊಡಿ. ಬಹುಶಃ ನಮ್ಮ ಕಾರ್ಯಾಚರಣೆಯಲ್ಲಿ ಆಮಂತ್ರಣ ಪತ್ರ ಸಿಕ್ಕಿದ್ದರಿಂದ ಅವರು ಬಂದಿರಬಹುದು. ‘ನೀವಿಲ್ಲಿ ಬಂದಿರುವುದು ಮೊದಲ ಬಾರಿಯೊ?’ ಎಂದು ಕೇಳಿ. ನಿಮ್ಮ ಜೊತೆ ಕೂತುಕೊಳ್ಳುವಂತೆ ಆಮಂತ್ರಿಸಿರಿ. ಅವರಿಗೇನಾದರೂ ಪ್ರಶ್ನೆಗಳಿದ್ದರೆ ನಿಮಗೆ ಕೇಳುವಂತೆ ಹೇಳಿ. ನಿಮ್ಮ ಸಭಾಗೃಹವನ್ನು ಇನ್ನೊಂದು ಸಭೆಯು ಬಳಸಲಿಕ್ಕಿರುವುದರಿಂದ ನೀವು ಅಲ್ಲಿಂದ ಕೂಡಲೇ ಹೊರಡಬೇಕಾದಲ್ಲಿ ಹೀಗನ್ನಿ: “ಈ ಕಾರ್ಯಕ್ರಮ ನಿಮಗೆ ಹೇಗನಿಸಿತೆಂದು ತಿಳಿಯಲಿಚ್ಛಿಸುತ್ತೇನೆ. ನಿಮ್ಮನ್ನು ಹೇಗೆ ಸಂಪರ್ಕಿಸಲಿ?”
3. ನಿಷ್ಕ್ರಿಯ ವ್ಯಕ್ತಿಗಳನ್ನು ನಾವು ಹೇಗೆ ಸ್ವಾಗತಿಸಬಹುದು?
3 ನಿಷ್ಕ್ರಿಯ ವ್ಯಕ್ತಿಗಳನ್ನು ಸ್ವಾಗತಿಸಿ: ನಿಷ್ಕ್ರಿಯ ಪ್ರಚಾರಕರು ಸಹ ಉಪಸ್ಥಿತರಿರುವರು. ಇವರಲ್ಲಿ ಕೆಲವರು ಸಭೆಗೆ ಬರುವುದು ಪ್ರತಿ ವರ್ಷ ಜ್ಞಾಪಕಾಚರಣೆಗೆ ಮಾತ್ರ. ಅವರನ್ನು ಸ್ವಾಗತಿಸಿರಿ. ಅವರನ್ನು ನೋಡಿ ನಿಮಗೆ ನಿಜವಾಗಿಯೂ ಸಂತೋಷವಾಗಿದೆಯೆಂದು ತಿಳಿಸಿ. (ರೋಮ. 15:7) ಅವರು ಸಭೆಯೊಂದಿಗಿನ ಸಹವಾಸವನ್ನು ಮುಂದುವರಿಸುವಂತೆ ಆದಷ್ಟು ಬೇಗ ಹಿರಿಯರು ಅವರ ಮನೆಗೆ ಹೋಗಿ ಪ್ರೋತ್ಸಾಹಿಸಬಹುದು. ಜ್ಞಾಪಕಾಚರಣೆಗೆ ಹಾಜರಾಗುವವರಲ್ಲಿ ಅನೇಕರು ತಾವು ಕೇಳುವಂಥ ಸಂಗತಿಗಳಿಂದ ಮಾತ್ರವಲ್ಲ ‘ನಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಾಣುವ ಪರಿಣಾಮವಾಗಿಯೂ’ ದೇವರನ್ನು ಮಹಿಮೆಪಡಿಸುವಂತೆ ಪ್ರಚೋದಿಸಲ್ಪಡಲಿ ಎಂದು ಬೇಡುತ್ತೇವೆ.—1 ಪೇತ್ರ 2:12.