ಆದರದಿಂದ ಸ್ವಾಗತಿಸಿ!
1. (1) ಜನರಿಗೆ ಸಾಕ್ಷಿಕೊಡಲು ಯಾವುದು ಉತ್ತಮ ಸಂದರ್ಭವಾಗಿದೆ? (2) ಏಕೆ?
1 ಜನರಿಗೆ ಸಾಕ್ಷಿಕೊಡಲು ಕ್ರಿಸ್ತರ ಮರಣದ ವಾರ್ಷಿಕ ಸ್ಮರಣೆಯಷ್ಟು ಉತ್ತಮ ಸಂದರ್ಭ ಬೇರೆ ಯಾವುದೂ ಇಲ್ಲ. ಈ ಬಗ್ಗೆ ಯೋಚಿಸಿ: ಈ ವರ್ಷ ಒಂದು ಕೋಟಿಗಿಂತಲೂ ಹೆಚ್ಚು ಆಸಕ್ತ ಜನರು ಈ ಆಚರಣೆಗೆ ಹಾಜರಾಗುವ ಅಂದಾಜಿದೆ. ವಿಮೋಚನಾ ಮೌಲ್ಯದ ಮೂಲಕ ತೋರಿಸಲ್ಪಟ್ಟಿರುವ ಪ್ರೀತಿಯ ಎರಡು ಮಹಾನ್ ಅಭಿವ್ಯಕ್ತಿಗಳ ಕುರಿತು ಅವರು ಆ ದಿನ ತಿಳಿದುಕೊಳ್ಳಲಿದ್ದಾರೆ. (ಯೋಹಾ. 3:16; 15:13) ಮತ್ತು ದೇವರು ಕೊಟ್ಟಿರುವ ವಿಮೋಚನಾ ಮೌಲ್ಯವೆಂಬ ಉಡುಗೊರೆಯಿಂದ ಯಾವ ಆಶೀರ್ವಾದಗಳನ್ನು ಪಡೆದುಕೊಳ್ಳಬಹುದು ಎಂದೂ ಕಲಿಯಲಿದ್ದಾರೆ. (ಯೆಶಾ. 65:21-23) ಅಂದು ಜನರಿಗೆ ಸಾಕ್ಷಿ ಕೊಡುವುದು ಭಾಷಣಕಾರರೊಬ್ಬರೇ ಅಲ್ಲ. ನಮಗೆಲ್ಲರಿಗೂ ಆ ಸುಯೋಗವಿದೆ. ಹೇಗೆ? ಬಂದಿರುವ ಹೊಸಬರನ್ನು ಆದರದಿಂದ ಸ್ವಾಗತಿಸುವ ಮೂಲಕವೇ!—ರೋಮ. 15:7.
2. ಹೊಸಬರನ್ನು ಆದರದಿಂದ ಸ್ವಾಗತಿಸುವುದು ಹೇಗೆ?
2 ಕಾರ್ಯಕ್ರಮ ಆರಂಭವಾಗಲು ಕಾಯುತ್ತಾ ಆಸನದಲ್ಲೇ ಕೂತಿರುವ ಬದಲು ಅಕ್ಕಪಕ್ಕ ಇರುವವರ ಪರಿಚಯ ಮಾಡಿಕೊಳ್ಳಲು ಮುಂದಾಗಬಾರದೇಕೆ? ಮೊದಲ ಬಾರಿ ಬಂದವರಿಗೆ ಮುಜುಗರ, ಹೆದರಿಕೆ ಆಗುವುದು ಸಹಜ. ಕಾರ್ಯಕ್ರಮ ಹೇಗೆ ನಡೆಯಲಿದೆ ಎನ್ನುವುದೂ ಗೊತ್ತಿರುವುದಿಲ್ಲ. ನೀವು ಅವರನ್ನು ನೋಡಿ ಮಂದಹಾಸ ಬೀರಿ ವಂದಿಸಿದರೆ ಅವರಿಗೆ ನಿರಾಳವೆನಿಸುವುದು. ‘ನೀವು ನಮ್ಮ ಕೂಟಗಳಿಗೆ ಮೊದಲ ಬಾರಿ ಬಂದಿದ್ದೀರಾ? ಇಲ್ಲಿ ಯಾರದ್ದಾದರೂ ಪರಿಚಯವಿದೆಯಾ?’ ಎಂದು ಕೇಳಿ. ಹೀಗೆ ಅವರು ಆಮಂತ್ರಣ ಪತ್ರಿಕೆ ನೋಡಿ ಕಾರ್ಯಕ್ರಮಕ್ಕೆ ಬಂದಿದ್ದಾರೋ ಎಂದು ತಿಳಿದುಕೊಳ್ಳಲು ಆಗುತ್ತದೆ. ಅವರಿಗೆ ನಿಮ್ಮೊಂದಿಗೆ ಕೂತುಕೊಳ್ಳಲು ಹೇಳಬಹುದು. ನಿಮ್ಮ ಬೈಬಲ್, ಗೀತೆ ಪುಸ್ತಕವನ್ನು ಅವರಿಗೂ ತೋರಿಸಿ. ಕಾರ್ಯಕ್ರಮ ರಾಜ್ಯ ಸಭಾಗೃಹದಲ್ಲೇ ನಡೆಯುತ್ತಿರುವಲ್ಲಿ ಅಲ್ಲಿನ ಕೆಲವು ವಿಷಯಗಳನ್ನು ಅವರಿಗೆ ತೋರಿಸಬಹುದು. ಕಾರ್ಯಕ್ರಮದ ನಂತರ ಅವರಿಗೆ ಯಾವುದಾದರೂ ಪ್ರಶ್ನೆಯಿರುವಲ್ಲಿ ಅದನ್ನು ಉತ್ತರಿಸಲು ಸಮಯ ಮಾಡಿಕೊಳ್ಳಿ. ನಿಮ್ಮ ಸಭೆಯ ನಂತರ ಇನ್ನೊಂದು ಸಭೆ ಸ್ಮರಣೆಗಾಗಿ ಅಲ್ಲಿ ಕೂಡಿಬರಲಿದ್ದು ಅಲ್ಲಿಂದ ನೀವು ಬೇಗನೆ ತೆರಳಬೇಕಾದಲ್ಲಿ, ‘ನಿಮಗೆ ಕಾರ್ಯಕ್ರಮ ಹೇಗನಿಸಿತು ಎಂದು ತಿಳಿಯಲು ನಾನು ಇಷ್ಟಪಡುತ್ತೇನೆ. ಪುನಃ ನಿಮ್ಮನ್ನು ಭೇಟಿಯಾಗಬಹುದಾ?’ ಎಂದು ಕೇಳಿ. ಹೇಳಿದಂತೆ ಪುನಃ ಭೇಟಿಯಾಗಲು ಮರೆಯದಿರಿ. ನಿಷ್ಕ್ರಿಯ ಪ್ರಚಾರಕರು ಕಾರ್ಯಕ್ರಮಕ್ಕೆ ಬಂದಿರುವಲ್ಲಿ ಹಿರಿಯರು ಅವರಿಗೆ ವಿಶೇಷ ಗಮನಕೊಟ್ಟು, ಪ್ರೋತ್ಸಾಹಿಸಬೇಕು.
3. ಸ್ಮರಣೆಗೆ ಬಂದ ಹೊಸಬರನ್ನು ಸ್ವಾಗತಿಸಲು ಮುಂದಾಗುವುದು ಯಾಕೆ ಮಹತ್ವದ ವಿಷಯವಾಗಿದೆ?
3 ಹೊಸಬರು ಆ ದಿನ ಯೆಹೋವ ದೇವರ ಜನರು ಆಧ್ಯಾತ್ಮಿಕ ಪರದೈಸಿನಲ್ಲಿ ಅನುಭವಿಸುವ ಆನಂದ, ಶಾಂತಿ, ಐಕ್ಯತೆಯ ತುಣುಕನ್ನಷ್ಟೇ ಸವಿಯುತ್ತಾರೆ. (ಕೀರ್ತ. 29:11; ಯೆಶಾ. 11:6-9; 65:13, 14.) ಹಾಗಾದರೆ ನಮ್ಮ ಸಭೆಯಲ್ಲಿ ಸ್ಮರಣೆಗೆ ಹಾಜರಾದ ಹೊಸಬರ ಮೇಲೆ ಅದು ಯಾವ ಪ್ರಭಾವ ಬೀರುತ್ತದೆ? ಅದು ನಾವು ಅವರನ್ನು ಸ್ವಾಗತಿಸುವ ರೀತಿಯ ಮೇಲೆ ಹೆಚ್ಚು ಹೊಂದಿಕೊಂಡಿದೆ.