ಸೇವೆ ಹೆಚ್ಚಿಸಲು ಈಗಲೇ ಯೋಜನೆ ಮಾಡಿ
1. ಮಾರ್ಚ್, ಏಪ್ರಿಲ್, ಮೇ ತಿಂಗಳ ಒಂದು ವಿಶೇಷತೆ ಏನು? ಅದಕ್ಕಾಗಿ ಹೇಗೆ ತಯಾರಿ ಮಾಡಬಲ್ಲೆವು?
1 ಪ್ರತಿ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ‘ಯೆಹೋವನನ್ನು ಬಹಳವಾಗಿ ಕೊಂಡಾಡಲು’ ನಮಗೆ ಹೆಚ್ಚು ಅವಕಾಶ ಸಿಗುತ್ತದೆ. (ಕೀರ್ತ. 109:30) ವಿಮೋಚನಾ ಮೌಲ್ಯವನ್ನು ಕೊಟ್ಟಾತನಿಗೆ ನಿಮ್ಮ ಕೃತಜ್ಞತೆ ತೋರಿಸುವ ಒಂದು ವಿಧ ಮಾರ್ಚ್ ತಿಂಗಳಲ್ಲಿ ನಿಮ್ಮ ಸೇವೆಯನ್ನು ಹೆಚ್ಚಿಸುವುದೇ. ನೀವದನ್ನು ಮಾಡುವಿರಾ? ಹಾಗಿದ್ದರೆ ಯೋಜನೆ ಮಾಡಲು ಇದೇ ತಕ್ಕ ಸಮಯ.
2. ಕಳೆದ ಏಪ್ರಿಲ್ನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ 30 ತಾಸನ್ನೂ ಮಾಡಬಹುದೆಂಬ ಏರ್ಪಾಡಿಗೆ ನಿಮ್ಮ ಹಾಗೂ ಇತರರ ಪ್ರತಿಕ್ರಿಯೆ ಏನಾಗಿತ್ತು?
2 ಆಕ್ಸಿಲಿಯರಿ ಪಯನೀಯರ್ ಸೇವೆ: ಕಳೆದ ಏಪ್ರಿಲ್ನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ 30 ತಾಸನ್ನೂ ಮಾಡಬಹುದೆಂಬ ಸುದ್ದಿ ಕೇಳಿ ನಮಗೆಲ್ಲರಿಗೂ ಎಲ್ಲಿಲ್ಲದ ಸಂತೋಷ ಉಂಟಾಯಿತು. ಪುಳಕಿತನಾದ ಒಬ್ಬ ಸಹೋದರನು ಸಂಸ್ಥೆಗೆ ಬರೆದದ್ದು: “ನಾನು ಹೈಸ್ಕೂಲಲ್ಲಿದ್ದೇನೆ. ನನಗೆ ರೆಗ್ಯುಲರ್ ಪಯನೀಯರ್ ಆಗಲು ಆಸೆ ಇದ್ದರೂ ಈಗ ಸಾಧ್ಯವಿಲ್ಲ. ಆದರೆ ಏಪ್ರಿಲ್ನಲ್ಲಿ 30 ತಾಸುಗಳ ಆಕ್ಸಿಲಿಯರಿ ಪಯನೀಯರ್ ಸೇವೆಗೆ ಅರ್ಜಿಹಾಕಿ, 50 ತಾಸು ಮಾಡಲು ಯತ್ನಿಸುವೆ.” ಪೂರ್ಣಕಾಲಿಕ ಉದ್ಯೋಗವಿರುವ ಸಹೋದರಿಯೊಬ್ಬಳು “30 ತಾಸು ಹೇಗಾದರೂ ಮಾಡಬಹುದು!” ಎಂದು ಬರೆದಳು. ಈ ಏರ್ಪಾಡಿನ ಬಗ್ಗೆ ಸಭೆಯಲ್ಲಿ ಪ್ರಕಟಣೆ ಮಾಡಲಾದಾಗ, 80 ದಾಟಿರುವ ಮಾಜಿ ಪಯನೀಯರ್ ಸಹೋದರಿಯೊಬ್ಬರು ಹೀಗಂದರು: “ಇದಕ್ಕಾಗಿಯೇ ಕಾಯ್ತಿದ್ದೆ! ನಾನು ಪಯನೀಯರಳಾಗಿದ್ದಾಗ ಎಷ್ಟೊಂದು ಆನಂದಿಸಿದೆ ಅಂತ ಯೆಹೋವನಿಗೆ ಗೊತ್ತು! ಹಾಗಾಗಿ ನನಗೆ ಇನ್ನೊಂದು ಅವಕಾಶ ಕೊಟ್ಟಿದ್ದಾನೆ.” ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಆಗದಿದ್ದವರು ಸಹ ಹೆಚ್ಚು ಸೇವೆ ಮಾಡುವ ಗುರಿಯಿಟ್ಟರು.
3. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಯಾವೆಲ್ಲ ಕಾರಣಗಳಿವೆ?
3 ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಸುವರ್ಣಾವಕಾಶ ಮಾರ್ಚ್ ತಿಂಗಳಲ್ಲಿದೆ. ಕಳೆದ ವರ್ಷದಂತೆ ಈ ಸಲವೂ 30 ತಾಸು ಮಾಡುವ ಆಯ್ಕೆ ಇದೆ. ಅಲ್ಲದೆ ಮಾರ್ಚ್ 17ರ ಶನಿವಾರದಿಂದ ಒಂದು ವಿಶೇಷ ಅಭಿಯಾನ ಆರಂಭವಾಗಲಿದೆ. ಏಪ್ರಿಲ್ 5ರಂದು ಕ್ರಿಸ್ತನ ಮರಣವನ್ನು ಸ್ಮರಿಸಲಿಕ್ಕಾಗಿ ಇತರರನ್ನು ಆಮಂತ್ರಿಸುವ ಅಭಿಯಾನ ಇದು. ಹೆಚ್ಚುವರಿ ಸೇವೆಯ ಸವಿಯುಂಡ ಅನೇಕರು ಏಪ್ರಿಲ್, ಮೇ ತಿಂಗಳಲ್ಲೂ 50 ತಾಸುಗಳ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಲು ಇಚ್ಛಿಸುವರು.
4. ಸಾರುವ ಕೆಲಸವನ್ನು ಹೆಚ್ಚಿಸಲು ಏನು ಮಾಡಬಹುದು? ಫಲಿತಾಂಶ ಏನಾಗಿರುವುದು?
4 ನಿಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರು ಈ ತಿಂಗಳುಗಳಲ್ಲಿ ಸೇವೆಯನ್ನು ಹೇಗೆ ಹೆಚ್ಚಿಸಬಹುದು? ಮುಂದಿನ ಕುಟುಂಬ ಆರಾಧನಾ ಸಮಯದಲ್ಲಿ ಇದನ್ನು ಚರ್ಚಿಸಿರಿ. (ಜ್ಞಾನೋ. 15:22) ನಿಮ್ಮ ಯೋಜನೆಗಳನ್ನು ಸಫಲಗೊಳಿಸುವಂತೆ ಯೆಹೋವನನ್ನು ಬೇಡಿಕೊಳ್ಳಿ. (1 ಯೋಹಾ. 3:22) ನಿಮ್ಮ ಸೇವೆಯನ್ನು ಹೆಚ್ಚಿಸುವಾಗ ನೀವು ಯೆಹೋವನಿಗೆ ಕೊಡುವ ಸ್ತುತಿ ಹೆಚ್ಚಾಗುತ್ತದೆ, ನಿಮ್ಮ ಆನಂದವೂ ಅಧಿಕವಾಗುತ್ತದೆ.—2 ಕೊರಿಂ. 9:6.