ಕ್ರಿಸ್ತನ ಮರಣದ ಸ್ಮರಣೆಯ ಸಮಯಾವಧಿ ಸಂತೋಷಕರವಾಗಿರಲಿ!
1. ಈ ಸಲದ ಕ್ರಿಸ್ತನ ಮರಣದ ಸ್ಮರಣೆಯ ಸಮಯಾವಧಿಯಲ್ಲಿ ನಮ್ಮ ಸಂತೋಷವನ್ನು ಹೆಚ್ಚಿಸುವ ಒಂದು ಮಾರ್ಗ ಯಾವುದು?
1 ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ನಿಮ್ಮ ಸಂತೋಷವನ್ನು ಹೆಚ್ಚಿಸಲು ಬಯಸುವಿರಾ? ಅದಕ್ಕಿರುವ ಒಂದು ಮಾರ್ಗ, ನೀವು ಸೇವೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದೇ. ಸಾಧ್ಯವಾದರೆ, ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿ. ಇದು ನಿಮ್ಮ ಸಂತೋಷವನ್ನು ಇನ್ನೂ ಹೆಚ್ಚಿಸುತ್ತದೆ. ಹೇಗೆ?
2. ಸೇವೆಯನ್ನು ಹೆಚ್ಚಿಸುವುದರಿಂದ ನಮ್ಮ ಸಂತೋಷ ಹೇಗೆ ಹೆಚ್ಚುತ್ತದೆ?
2 ನಿಮ್ಮ ಸಂತೋಷವನ್ನು ಹೆಚ್ಚಿಸಿರಿ: ಯೆಹೋವ ದೇವರು ನಮ್ಮಲ್ಲೊಂದು ಸಾಮರ್ಥ್ಯವನ್ನಿಟ್ಟು ಸೃಷ್ಟಿಸಿದ್ದಾನೆ. ಅದು ನಾವು ಆತನನ್ನು ಆರಾಧಿಸುವ ಮೂಲಕ ನಮ್ಮೊಳಗಿನ ಆಧ್ಯಾತ್ಮಿಕ ಹಸಿವನ್ನು ತಣಿಸಿಕೊಂಡು ಸಂತೋಷ, ಸಂತೃಪ್ತಿಯನ್ನು ಅನುಭವಿಸುವ ಸಾಮರ್ಥ್ಯವೇ ಆಗಿದೆ. (ಮತ್ತಾ. 5:3) ಇತರರಿಗೆ ಕೊಡುವುದರಲ್ಲಿ ಸಂತೋಷವನ್ನು ಕಂಡುಕೊಳ್ಳುವಂತೆ ಸಹ ನಮ್ಮನ್ನು ಸೃಷ್ಟಿ ಮಾಡಿದನು. (ಅ.ಕಾ. 20:35) ಸುವಾರ್ತೆ ಸಾರುವ ಕೆಲಸ ಯೆಹೋವನನ್ನು ಆರಾಧಿಸಲು ಮತ್ತು ಇತರರಿಗೆ ಸಹಾಯ ಮಾಡಲು ಎರಡಕ್ಕೂ ಅವಕಾಶ ಮಾಡಿಕೊಡುತ್ತದೆ. ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಹೆಚ್ಚು ಸಂತೋಷ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ, ನಾವೆಷ್ಟು ಹೆಚ್ಚು ಸಾರುತ್ತೇವೋ ಅಷ್ಟೇ ಹೆಚ್ಚು ನಿಪುಣರಾಗಬಹುದು. ನಿಪುಣರಾಗುತ್ತಾ ಹೋದಂತೆ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಭಯ ಕಡಿಮೆಯಾಗುತ್ತದೆ. ಸಾಕ್ಷಿಕೊಡಲು ಮತ್ತು ಬೈಬಲ್ ಅಧ್ಯಯನಗಳನ್ನು ಆರಂಭಿಸಲು ನಮಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಇವೆಲ್ಲವನ್ನು ಮಾಡುವುದರಿಂದ ನಮ್ಮ ಸಂತೋಷ ಹೆಚ್ಚುತ್ತದೆ.
3. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಅತ್ಯುತ್ತಮ ಸಮಯವಾಗಿವೆಯೇಕೆ?
3 ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಅತ್ಯುತ್ತಮ ಸಮಯವಾಗಿವೆ. ಆ ತಿಂಗಳುಗಳಲ್ಲಿ 30 ಅಥವಾ 50 ತಾಸು ಸೇವೆ ಮಾಡುವ ಆಯ್ಕೆ ನಮಗಿರುತ್ತದೆ. ಅಲ್ಲದೇ, ಮಾರ್ಚ್ 22, ಶನಿವಾರದಿಂದ ಆರಂಭಿಸಿ ಏಪ್ರಿಲ್ 14, ಸೋಮವಾರದವರೆಗೆ ಏರ್ಪಡಿಸಿರುವ ಅಭಿಯಾನದಲ್ಲಿ ಪಾಲ್ಗೊಂಡು ಕ್ರಿಸ್ತನ ಮರಣದ ಸ್ಮರಣೆಗೆ ಇತರರನ್ನು ಆಮಂತ್ರಿಸುತ್ತೇವೆ. ನಿಗದಿಪಡಿಸಿದ ಸಮಯದೊಳಗೆ ಆದಷ್ಟು ಸೇವಾಕ್ಷೇತ್ರವನ್ನು ಆವರಿಸಲು ಅನೇಕರು “ಹೆಗಲಿಗೆ ಹೆಗಲುಕೊಟ್ಟು” ಕೆಲಸ ಮಾಡುವರು. ಆಗ ಸಭೆಯಲ್ಲಿ ಸಡಗರ ಸಂಭ್ರಮದ ವಾತಾವರಣ ಗಿಜಿಗುಟ್ಟುವುದು. —ಫಿಲಿ. 4:3.
4. ನಾವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಯಸುವುದಾದರೆ ಏನು ಮಾಡಬೇಕು?
4 ಈಗಲೇ ಸಿದ್ಧತೆ ಮಾಡಿ: ನೀವಿನ್ನೂ ಸಿದ್ಧತೆ ಮಾಡಿರದಿದ್ದರೆ ನಿಮ್ಮ ಕೆಲಸಕಾರ್ಯಗಳನ್ನೆಲ್ಲ ಈಗಲೇ ಪರಿಶೀಲಿಸಿ ಒಂದು ಅಥವಾ ಹೆಚ್ಚು ತಿಂಗಳು ಸೇವೆಮಾಡಲು ಯಾವ್ಯಾವ ಹೊಂದಾಣಿಕೆ ಮಾಡಬೇಕಾಗಬಹುದೆಂದು ನೋಡಿ. ಇದಕ್ಕಾಗಿ ಪ್ರಾರ್ಥಿಸಿ. (ಯಾಕೋ. 1:5) ನಿಮ್ಮ ಕುಟುಂಬದವರೊಂದಿಗೆ ಮತ್ತು ಸಭೆಯಲ್ಲಿ ಇತರರೊಂದಿಗೆ ಇದರ ಬಗ್ಗೆ ಮಾತಾಡಿ. (ಜ್ಞಾನೋ. 15:22) ನಿಮಗೆ ಆರೋಗ್ಯದ ಸಮಸ್ಯೆ ಅಥವಾ ಪೂರ್ಣ ಸಮಯದ ಐಹಿಕ ಕೆಲಸವಿದ್ದರೂ, ನೀವು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿ ಅದರ ಸಂತೋಷವನ್ನು ಅನುಭವಿಸಬಹುದು.
5. ಈ ಸಲದ ಕ್ರಿಸ್ತನ ಮರಣದ ಸ್ಮರಣೆಯ ಸಮಯಾವಧಿಯಲ್ಲಿ ನಾವು ನಮ್ಮ ಸೇವೆಯನ್ನು ಹೆಚ್ಚಿಸುವುದಾದರೆ ಯಾವ ಫಲಿತಾಂಶ ಪಡೆಯಬಹುದು?
5 ತನ್ನ ಆರಾಧಕರು ಸಂತೋಷಿತರಾಗಿರಬೇಕೆಂದು ಯೆಹೋವನು ಬಯಸುತ್ತಾನೆ. (ಕೀರ್ತ. 32:11) ಈ ಸಲದ ಕ್ರಿಸ್ತನ ಮರಣದ ಸ್ಮರಣೆಯ ಸಮಯಾವಧಿಯಲ್ಲಿ ನಮ್ಮನ್ನು ನಾವು ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ನಮ್ಮ ಸಂತೋಷ ಹೆಚ್ಚುವುದಲ್ಲದೆ, ನಮ್ಮ ಸ್ವರ್ಗೀಯ ತಂದೆಗೂ ಸಂತೋಷವಾಗುತ್ತದೆ.—ಜ್ಞಾನೋ. 23:24; 27:11.