ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ನಹೂಮ
1. ನಹೂಮ ಪುಸ್ತಕದಿಂದ ನಾವೇನನ್ನು ಕಲಿಯಬಹುದು?
1 ಯೆಹೋವನು ತನ್ನ ವೈರಿಗಳಿಗೆ ಮುಯ್ಯಿ ತೀರಿಸುತ್ತಾನೆ ಮತ್ತು ವೈರಿಗಳು ಅದೆಷ್ಟೇ ಬಲಾಢ್ಯರಾಗಿದ್ದರೂ ಆತನ ಮುಂದೆ ನಿಲ್ಲಲಾರರೆಂದು ನಹೂಮನು ಪ್ರವಾದಿಸಿದ್ದನು. ಇದಕ್ಕೆ ರುಜುವಾತು ಪುರಾತನ ನಿನೆವೆ ಪಟ್ಟಣದ ನಾಶನ. (ನಹೂ. 1:2, 6) ನಹೂಮನ ಪ್ರವಾದನೆಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡರೆ ನಮ್ಮ ಸೇವೆಗೆ ಸಹಾಯವಾಗುವ ಪಾಠಗಳನ್ನು ಕಲಿಯಬಹುದು.
2. ರಾಜ್ಯ ಸಂದೇಶವನ್ನು ನಿರೀಕ್ಷೆಯ ಸಂದೇಶವಾಗಿ ಹೇಗೆ ತಿಳಿಸುವುದು?
2 ಸಂತೈಸಿ ಮತ್ತು ನಿರೀಕ್ಷೆ ಹುಟ್ಟಿಸಿ: ನಹೂಮ ಪುಸ್ತಕವನ್ನು ಹಾಗೆ ಸುಮ್ಮನೆ ಓದಿಕೊಂಡು ಹೋದರೆ ಅದು ಕೇವಲ ಅಶ್ಶೂರ ರಾಜ್ಯದ ರಾಜಧಾನಿಯಾಗಿದ್ದ ನಿನೆವೆ ಪಟ್ಟಣದ ನಾಶನದ ಬಗ್ಗೆ ತಿಳಿಸುವ ಥರ ಇದೆ. (ನಹೂ. 1:1; 3:7) ಆದರೆ ಈ ನಾಶನದ ಪ್ರಕಟಣೆ ಯೆಹೋವನ ಜನರಿಗೆ ಸಂತಸದ ಸುದ್ದಿಯಾಗಿತ್ತು. ನಹೂಮನ ಹೆಸರಿನ ಅರ್ಥ “ಸಂತೈಸುವವನು” ಎಂದಾಗಿದೆ. ಅವನು ತನ್ನ ಹೆಸರಿಗೆ ತಕ್ಕಂತೆ ಜೊತೆ ಯೆಹೂದ್ಯರಿಗೆ ಅವರ ವೈರಿಗಳು ಇಲ್ಲವಾಗುವರು ಎಂದು ಸಂತೈಸಿದನು. ಯೆಹೋವನು ತನ್ನ ಜನರಿಗೆ “ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ” ಎಂಬ ಆಶ್ವಾಸನೆಯನ್ನೂ ಕೊಟ್ಟನು. (ನಹೂ. 1:7) ನಾವು ಸಹ ಸಾರುವಾಗ ಸಿಹಿಸುದ್ದಿಯನ್ನು ಹೇಳುವ ಮೂಲಕ ಜನರನ್ನು ಸಂತೈಸಬೇಕು ಮತ್ತು ತಮ್ಮ ರಕ್ಷಣೆಗಾಗಿ ಯೆಹೋವನನ್ನು ಆಶ್ರಯಿಸುವಂತೆ ಕಲಿಸಬೇಕು.—ನಹೂ. 1:15.
3. ಉದಾಹರಣೆಗಳನ್ನು ಮತ್ತು ದೃಷ್ಟಾಂತಗಳನ್ನು ಬಳಸುವುದರಲ್ಲಿ ನಾವು ನಹೂಮನನ್ನು ಹೇಗೆ ಅನುಕರಿಸಬಹುದು?
3 ಉದಾಹರಣೆಗಳನ್ನು ಮತ್ತು ದೃಷ್ಟಾಂತಗಳನ್ನು ಕೊಡಿ: ಈಜಿಪ್ಟಿನ ಥೀಬ್ಸ (ನೋ ಆಮೋನ್) ಪಟ್ಟಣವನ್ನು ಅಶ್ಶೂರರು ನಾಶ ಮಾಡಿದ್ದರು. ಅದೇ ರೀತಿಯಲ್ಲಿ ನಿನೆವೆ ಪಟ್ಟಣವೂ ನಾಶವಾಗುವುದೆಂದು ತಿಳಿಸುವಂತೆ ನಹೂಮನನ್ನು ಯೆಹೋವನು ಪ್ರೇರಿಸಿದ್ದನು. (ನಹೂ. 3:8-10) ನಾವು ಜನರೊಂದಿಗೆ ಈ ವಿಷಯಗಳ ವ್ಯವಸ್ಥೆಯ ನಾಶನದ ಬಗ್ಗೆ ಮಾತಾಡುವಾಗ ನೆರವೇರಿರುವ ಬೈಬಲ್ ಪ್ರವಾದನೆಗಳ ಉದಾಹರಣೆ ಕೊಡಬೇಕು. ಆಗ ಯೆಹೋವ ದೇವರು ತಾನು ಹೇಳಿರುವ ಮಾತನ್ನು ಚಾಚೂ ತಪ್ಪದೇ ನೆರವೇರಿಸುತ್ತಾನೆ ಎಂದು ಅವರಿಗೆ ಅರ್ಥವಾಗುತ್ತದೆ. ಉದಾಹರಣೆಗೆ, ಯೆಹೋವನು ಹೇಳಿದಂತೆಯೇ ನಿನೆವೆಯು ನಾಶವಾಯಿತು. ಮೇದ್ಯಯರು ಮತ್ತು ಬಾಬೆಲಿನವರು ಕ್ರಿ.ಪೂ. 632ರಲ್ಲಿ ನಿನೆವೆಯ ವಿರುದ್ದ ಯುದ್ದಕ್ಕೆ ಬಂದಾಗ ಭಾರಿ ಮಳೆಯಿಂದಾಗಿ ಟೈಗ್ರಿಸ್ ನದಿ ತುಂಬಿ ಹರಿಯಿತು. ಇದರಿಂದಾಗಿ ಪಟ್ಟಣದ ಸುದೃಢವಾದ ಗೋಡೆಯ ಒಂದು ಭಾಗ ಕುಸಿಯಿತು. ಹೀಗೆ ನಿನೆವೆಯನ್ನು ಸುಲಭವಾಗಿ ಆಕ್ರಮಿಸಲಾಯಿತು.—ನಹೂ. 1:8; 2:6.
4. ಸೇವೆಯಲ್ಲಿ ನಾವು ಹೇಗೆ ಸ್ಪಷ್ಟವಾಗಿ ಮತ್ತು ಅರ್ಥವಾಗುವಂತೆ ಮಾತಾಡಬಹುದು?
4 ಸ್ಪಷ್ಟವಾಗಿ ಮತ್ತು ಅರ್ಥವಾಗುವಂತೆ ಮಾತಾಡಿ: ನಹೂಮನು ವರ್ಣನಾತ್ಮಕವಾಗಿ ಮತ್ತು ಮನ ಮುಟ್ಟುವಂತೆ ಬರೆದಿದ್ದನು. ಆತನು ವಿವರಿಸಿದ ವಿಷಯಗಳು ಸ್ಪಷ್ಟವಾಗಿದ್ದವು. (ನಹೂ. 1:14; 3:1) ಅದೇ ರೀತಿ ನಾವು ಸಹ ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಮಾತಾಡಬೇಕು. (1 ಕೊರಿಂ. 14:9) ನಿಮ್ಮ ಮೊದಲ ಮಾತುಗಳಲ್ಲೇ ನೀವು ಯಾಕೆ ಬಂದಿದ್ದೀರೆಂದು ಮನೆಯವನಿಗೆ ಸ್ಪಷ್ಟವಾಗಿ ಹೇಳಿ. ವಿದ್ಯಾರ್ಥಿಯೊಂದಿಗೆ ಬೈಬಲ್ ಅಧ್ಯಯನ ಮಾಡುವಾಗ ಯೆಹೋವನ ಮೇಲೆ ಮತ್ತು ಆತನ ವಾಕ್ಯದ ಮೇಲೆ ನಂಬಿಕೆ ಬೆಳೆಸಿಕೊಳ್ಳುವಂತೆ ಸಹಾಯಮಾಡಿ. ಕಲಿತ ವಿಷಯಗಳು ವೈಯಕ್ತಿಕವಾಗಿ ಪ್ರಯೋಜನಕಾರಿ ಆಗಿವೆ ಎಂದು ಅವನಿಗೆ ಮನಗಾಣಿಸಿ.—ರೋಮ. 10:14.
5. ನಹೂಮನ ಪ್ರವಾದನೆಯಲ್ಲಿ ನಮಗೆ ಯಾವ ಆಶ್ವಾಸನೆಯಿದೆ?
5 ಯೆಹೋವನ ಮಾತು ಖಡಾಖಂಡಿತವಾಗಿ ನೆರವೇರುತ್ತದೆ ಎಂಬ ನಂಬಿಕೆ ನಹೂಮನಿಗಿತ್ತು ಎಂದು ಆತನ ಪುಸ್ತಕದಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಸೈತಾನನ ವ್ಯವಸ್ಥೆಯ ನಾಶನ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಮಗೆ ಸಾಂತ್ವನದ ವಿಷಯವೊಂದಿದೆ. ಅದೇನೆಂದರೆ “ಅಪಾಯವು ಎರಡನೆಯ ಸಲ ಉಂಟಾಗಬೇಕಾಗಿಲ್ಲ,” ಇದರರ್ಥ ಈ ವ್ಯವಸ್ಥೆ ಮೊದಲ ಬಾರಿಯಲ್ಲೇ ಸಂಪೂರ್ಣವಾಗಿ ನಾಶವಾಗುತ್ತದೆ.—ನಹೂ. 1:9.