ಅಧ್ಯಯನ ಲೇಖನ 8
ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ
ಯೆಹೋವ ಕೊಡೋ ನಿರ್ದೇಶನವನ್ನ ಪಾಲಿಸ್ತಾ ಇರಿ
“ಯೆಹೋವ ಹೀಗೆ ಹೇಳ್ತಿದ್ದಾನೆ . . . ನೀನು ಯಾವ ದಾರಿಯಲ್ಲಿ ನಡಿಬೇಕಂತ ನಿನಗೆ ಮಾರ್ಗದರ್ಶಿಸುವವನು ನಾನೇ.”—ಯೆಶಾ. 48:17.
ಈ ಲೇಖನದಲ್ಲಿ ಏನಿದೆ?
ಯೆಹೋವ ತನ್ನ ಜನ್ರನ್ನ ಈಗ ಹೇಗೆ ಮಾರ್ಗದರ್ಶಿಸ್ತಿದ್ದಾನೆ ಮತ್ತು ಆತನು ಕೊಡೋ ನಿರ್ದೇಶನ ಪಾಲಿಸೋದ್ರಿಂದ ನಮಗೆ ಯಾವೆಲ್ಲ ಆಶೀರ್ವಾದ ಸಿಗುತ್ತೆ ಅಂತ ನೋಡೋಣ.
1. ನಮಗ್ಯಾಕೆ ಯೆಹೋವನ ಮಾರ್ಗದರ್ಶನೆ ಬೇಕು? ಉದಾಹರಣೆ ಕೊಡಿ.
ನೀವೊಂದು ದೊಡ್ಡ ಕಾಡಲ್ಲಿ ಕಳೆದು ಹೋಗಿದ್ದೀರ ಅಂದ್ಕೊಳ್ಳಿ. ಅಲ್ಲಿ ಕ್ರೂರವಾದ ಪ್ರಾಣಿಗಳಿವೆ. ವಿಷಕಾರಿ ಹಾವುಗಳು, ಕ್ರಿಮಿಕೀಟಗಳು, ಗಿಡಗಳೂ ಇವೆ. ಅಷ್ಟೇ ಅಲ್ಲ, ಅಲ್ಲಲ್ಲಿ ಹಳ್ಳ-ಗುಂಡಿಗಳಿವೆ. ಇದನ್ನ ನೆನಸ್ಕೊಂಡ್ರೆನೇ ನಿಮಗೆ ಭಯ ಆಗುತ್ತಲ್ವಾ? ಆದ್ರೆ ಆ ಕಾಡಿನ ಬಗ್ಗೆ ಚೆನ್ನಾಗಿ ಗೊತ್ತಿರೋ ಒಬ್ಬ ವ್ಯಕ್ತಿ ನಿಮ್ಮ ಜೊತೆ ಇದ್ರೆ ನೀವು ಭಯಪಡಬೇಕಾಗಿಲ್ಲ. ನಾವಿರೋ ಈ ಲೋಕನೂ ಆ ದೊಡ್ಡ ಕಾಡಿನ ತರ ಇದೆ. ಇಲ್ಲಿ ಯೆಹೋವನ ಜೊತೆಗಿರೋ ನಮ್ಮ ಸಂಬಂಧನ ಹಾಳು ಮಾಡೋಕೆ ತುಂಬ ಅಪಾಯಗಳಿವೆ. ಆದ್ರೆ ಯೆಹೋವ ನಮ್ಮ ಜೊತೆಗಿರೋದ್ರಿಂದ ನಾವು ಭಯಪಡಬೇಕಾಗಿಲ್ಲ. ಯಾಕಂದ್ರೆ ಆತನು ಈ ಅಪಾಯದಿಂದ ನಮ್ಮನ್ನ ಕಾಪಾಡಿ ಹೊಸ ಲೋಕಕ್ಕೆ ಕರ್ಕೊಂಡು ಹೋಗ್ತಾನೆ.
2. ಯೆಹೋವ ನಮಗೆ ಹೇಗೆ ಮಾರ್ಗದರ್ಶನೆ ಕೊಡ್ತಿದ್ದಾನೆ?
2 ಯೆಹೋವ ಈಗ ನಮಗೆ ಹೇಗೆ ಮಾರ್ಗದರ್ಶನೆ ಕೊಡ್ತಿದ್ದಾನೆ? ಮೊದಲನೇದಾಗಿ, ಆತನು ಬೈಬಲಿಂದ ನಮಗೆ ನಿರ್ದೇಶನ ಕೊಡ್ತಿದ್ದಾನೆ. ಅಷ್ಟೇ ಅಲ್ಲ, ಆತನು ಮನುಷ್ಯರಿಂದನೂ ನಮಗೆ ನಿರ್ದೇಶನ ಕೊಡ್ತಿದ್ದಾನೆ. ಉದಾಹರಣೆಗೆ “ನಂಬಿಗಸ್ತ, ವಿವೇಕಿ ಆದ ಆಳು” ನಮಗೆ ನಿರ್ದೇಶನ ಕೊಡೋ ತರ ಮಾಡಿದ್ದಾನೆ. (ಮತ್ತಾ. 24:45) ಇದ್ರಿಂದ ನಾವು ಸರಿಯಾದ ತೀರ್ಮಾನ ಮಾಡೋಕಾಗ್ತಿದೆ. ಇವ್ರಿಂದ ಅಷ್ಟೇ ಅಲ್ಲ, ಸಂಚರಣ ಮೇಲ್ವಿಚಾರಕರಿಂದ, ಹಿರಿಯರಿಂದ ನಮಗೆ ನಿರ್ದೇಶನಗಳನ್ನ ಕೊಡ್ತಿದ್ದಾನೆ. ಕಷ್ಟಗಳನ್ನ ತಾಳ್ಕೊಳ್ಳೋಕೆ ಈ ಸಹೋದರರಿಂದ ನಮಗೆ ಪ್ರೋತ್ಸಾಹ ಸಿಗ್ತಿದೆ. ಈ ಕೊನೇ ದಿನಗಳಲ್ಲಿ ಯೆಹೋವ ನಮಗೆ ನಿರ್ದೇಶನ ಕೊಡ್ತಾ ಇರೋದ್ರಿಂದ ನಾವು ಆತನ ಫ್ರೆಂಡಾಗಿ ಇರೋಕಾಗ್ತಿದೆ. ಜೀವದ ದಾರಿಯಲ್ಲಿ ನಡೆಯೋಕೆ ಆಗ್ತಿದೆ. ಹಾಗಾಗಿ ನಾವು ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿನೇ!
3. ಈ ಲೇಖನದಲ್ಲಿ ನಾವು ಏನು ಕಲಿತೀವಿ?
3 ಯೆಹೋವ ಕೊಡೋ ನಿರ್ದೇಶನಗಳನ್ನ ಪಾಲಿಸೋಕೆ ನಮಗೆ ಕೆಲವೊಮ್ಮೆ ಕಷ್ಟ ಆಗುತ್ತೆ. ಅದ್ರಲ್ಲೂ ಅಪರಿಪೂರ್ಣ ಮಾನವರಿಂದ ಆ ನಿರ್ದೇಶನ ಬಂದಾಗ ಪಾಲಿಸೋಕೆ ಇನ್ನೂ ಕಷ್ಟ ಆಗುತ್ತೆ. ಯಾಕಂದ್ರೆ ಅವರು ಕೊಡ್ತಿರೋ ನಿರ್ದೇಶನ ನಮಗೆ ಇಷ್ಟ ಆಗದೇ ಇರಬಹುದು ಮತ್ತು ಅದು ಸರಿ ಇಲ್ಲ ಅಂತನೂ ಅನಿಸಬಹುದು. ಆಗ ಇದು ಯೆಹೋವನಿಂದ ಬಂದಿರೋಕೆ ಸಾಧ್ಯನೇ ಇಲ್ಲ ಅಂತ ಅನಿಸಿಬಿಡಬಹುದು. ಆದ್ರೆ ಅಂಥ ಸಮಯದಲ್ಲಿ ಯೆಹೋವನೇ ತನ್ನ ಜನ್ರನ್ನ ಮುಂದೆ ನಿಂತು ನಡಿಸ್ತಿದ್ದಾನೆ ಅಂತ ನಂಬಬೇಕು. ಅಷ್ಟೇ ಅಲ್ಲ, ಆತನು ಕೊಡೋ ನಿರ್ದೇಶನಗಳನ್ನ ಪಾಲಿಸಿದ್ರೆ ನಮಗೆ ಆಶೀರ್ವಾದಗಳು ಸಿಗುತ್ತೆ ಅನ್ನೋದನ್ನೂ ಮನಸ್ಸಲ್ಲಿ ಇಡಬೇಕು. ಅದಕ್ಕೆ ನಾವು ಮೂರು ಪ್ರಶ್ನೆಗಳಿಗೆ ಉತ್ರ ತಿಳ್ಕೊಬೇಕು. (1) ಯೆಹೋವ ಹಿಂದೆ ತನ್ನ ಜನ್ರನ್ನ ಹೇಗೆ ಮಾರ್ಗದರ್ಶಿಸಿದನು? (2) ಈಗ ಆತನು ಹೇಗೆ ಮಾರ್ಗದರ್ಶಿಸ್ತಿದ್ದಾನೆ? (3) ಆತನು ಕೊಡೋ ನಿರ್ದೇಶನಗಳನ್ನ ಪಾಲಿಸ್ತಾ ಇದ್ರೆ ಯಾವ ಆಶೀರ್ವಾದಗಳು ಸಿಗುತ್ತೆ?
ಹಿಂದಿನ ಕಾಲದಿಂದ ಇಲ್ಲಿನ ತನಕ ಯೆಹೋವ ಮನುಷ್ಯರಿಂದ ತನ್ನ ಜನ್ರಿಗೆ ನಿರ್ದೇಶನಗಳನ್ನ ಕೊಡ್ತಿದ್ದಾನೆ (ಪ್ಯಾರ 3 ನೋಡಿ)
ಯೆಹೋವ ಇಸ್ರಾಯೇಲ್ಯರನ್ನ ಹೇಗೆ ಮಾರ್ಗದರ್ಶಿಸಿದನು?
4-5. ಮೋಶೆಯಿಂದಾನೇ ಇಸ್ರಾಯೇಲ್ಯರನ್ನ ಮಾರ್ಗದರ್ಶಿಸ್ತಾ ಇದ್ದೀನಿ ಅಂತ ಯೆಹೋವ ಹೇಗೆ ತೋರಿಸಿಕೊಟ್ಟನು? (ಚಿತ್ರ ನೋಡಿ.)
4 ಯೆಹೋವ ದೇವರು ಇಸ್ರಾಯೇಲ್ಯರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರೋಕೆ ಮೋಶೆಯನ್ನ ನೇಮಿಸಿದನು. ಅವರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಅಂತ ನಿರ್ದೇಶನ ಕೊಡೋಕೆ ಹಗಲಲ್ಲಿ ಮೋಡವನ್ನ, ರಾತ್ರಿಯಲ್ಲಿ ಬೆಂಕಿಯನ್ನ ಕೊಟ್ಟನು. (ವಿಮೋ. 13:21) ಆ ಮೋಡ ಎಲ್ಲಿ ಹೋಗ್ತಿತ್ತೋ ಅಲ್ಲಿಗೆ ಮೋಶೆ ಜನ್ರನ್ನ ಕರ್ಕೊಂಡು ಹೋಗ್ತಿದ್ದ. ಹೀಗೆ ಯೆಹೋವ ತಮ್ಮನ್ನ ಮೋಶೆಯ ಮೂಲಕ ನಡೆಸ್ತಾ ಇದ್ದಾನೆ ಅನ್ನೋದಕ್ಕೆ ಜನ್ರ ಕಣ್ಮುಂದೆನೇ ತುಂಬ ಆಧಾರಗಳಿತ್ತು. ಕೊನೆಗೆ ಯೆಹೋವ ಇಸ್ರಾಯೇಲ್ಯರನ್ನ ಕೆಂಪು ಸಮುದ್ರಕ್ಕೆ ಕರ್ಕೊಂಡು ಬಂದಾಗ ಜನ್ರು ತುಂಬ ಹೆದರಿದರು. ಮುಂದೆ ಸಮುದ್ರ, ಹಿಂದೆ ಈಜಿಪ್ಟಿನ ಸೈನ್ಯ. ಇದನ್ನ ನೋಡಿದಾಗ ತಾವು ಇನ್ನೇನು ಸತ್ತು ಹೋಗ್ತೀವಿ, ಮೋಶೆ ತಮ್ಮನ್ನ ತಪ್ಪು ದಾರಿಯಲ್ಲಿ ಕರ್ಕೊಂಡು ಬಂದಿದ್ದಾನೆ ಅಂತ ಅವರು ಅಂದ್ಕೊಂಡ್ರು. ಆದ್ರೆ ಯೆಹೋವ ಬೇಕಂತಾನೇ ಮೋಶೆ ಮೂಲಕ ಅವ್ರನ್ನ ಅಲ್ಲಿಗೆ ಕರ್ಕೊಂಡು ಬಂದಿದ್ದನು. (ವಿಮೋ. 14:2) ಆಮೇಲೆ ಯೆಹೋವ ಅದ್ಭುತವಾಗಿ ಅವ್ರನ್ನ ಕಾಪಾಡಿದನು.—ವಿಮೋ. 14:26-28.
ಕಾಡಲ್ಲಿದ್ದಾಗ ಮೋಶೆ ದೇವಜನ್ರನ್ನ ಮೋಡ ಎಲ್ಲಿ ಹೋಗ್ತಿತ್ತೋ ಅಲ್ಲಿಗೆ ಕರ್ಕೊಂಡು ಹೋಗ್ತಿದ್ದ (ಪ್ಯಾರ 4-5 ನೋಡಿ)
5 ಇಸ್ರಾಯೇಲ್ಯರು 40 ವರ್ಷ ಕಾಡಲ್ಲಿದ್ರು. ಅಷ್ಟೂ ವರ್ಷ ಮೋಶೆ, ಮೋಡ ಎಲ್ಲಿ ಹೋಗ್ತಿತ್ತೋ ಅಲ್ಲಿಗೆ ಜನ್ರನ್ನ ಕರ್ಕೊಂಡು ಹೋಗ್ತಿದ್ದ.a ಸ್ವಲ್ಪ ಸಮಯದ ವರೆಗೆ ಆ ಮೋಡ ಮೋಶೆಯ ಡೇರೆಯ ಮೇಲೆ ನಿಂತಿತ್ತು. ಅದು ಎಲ್ಲಾ ಇಸ್ರಾಯೇಲ್ಯರಿಗೆ ಕಾಣ್ತಿತ್ತು. (ವಿಮೋ. 33:7, 9, 10) ಆ ಮೋಡದಿಂದಾನೇ ಯೆಹೋವ ಮೋಶೆಗೆ ನಿರ್ದೇಶನ ಕೊಡ್ತಾ ಇದ್ದನು. ಅದನ್ನ ಅವನು ಇಸ್ರಾಯೇಲ್ಯರಿಗೆ ಹೇಳ್ತಾ ಇದ್ದನು. (ಕೀರ್ತ. 99:7) ಆಗ್ಲೂ ಯೆಹೋವ ಮೋಶೆಯಿಂದಾನೇ ಮಾರ್ಗದರ್ಶನೆ ಕೊಡ್ತಿದ್ದಾನೆ ಅಂತ ಇಸ್ರಾಯೇಲ್ಯರು ಕಣ್ಣಾರೆ ನೋಡಿದ್ರು.
ಮೋಶೆ ಮತ್ತು ಯೆಹೋಶುವ (ಪ್ಯಾರ 5, 7 ನೋಡಿ)
6. ಯೆಹೋವ ನಿರ್ದೇಶನ ಕೊಟ್ಟಾಗ ಇಸ್ರಾಯೇಲ್ಯರು ಏನು ಮಾಡ್ಲಿಲ್ಲ? (ಅರಣ್ಯಕಾಂಡ 14:2, 10, 11)
6 ಆದ್ರೆ ಎಷ್ಟೋ ಇಸ್ರಾಯೇಲ್ಯರು ಯೆಹೋವ ಮೋಶೆ ಮೂಲಕನೇ ತಮಗೆ ನಿರ್ದೇಶನ ಕೊಡ್ತಿದ್ದಾನೆ ಅನ್ನೋದನ್ನ ಒಪ್ಕೊಳ್ಳಲಿಲ್ಲ. (ಅರಣ್ಯಕಾಂಡ 14:2, 10, 11 ಓದಿ.) ಅವರು ಆ ತಪ್ಪನ್ನ ಪದೇಪದೇ ಮಾಡಿದ್ರು. ಹಾಗಾಗಿ ಆ ಪೀಳಿಗೆಯವರು ದೇವರು ಮಾತು ಕೊಟ್ಟ ದೇಶಕ್ಕೆ ಹೋಗೋ ಅವಕಾಶ ಕಳ್ಕೊಂಡ್ರು.—ಅರ. 14:30.
7. ಯಾರೆಲ್ಲ ಯೆಹೋವನ ಮಾತನ್ನ ಕೇಳಿದ್ರು? (ಅರಣ್ಯಕಾಂಡ 14:24) (ಚಿತ್ರನೂ ನೋಡಿ.)
7 ಆದ್ರೆ ಕೆಲವು ಇಸ್ರಾಯೇಲ್ಯರು ಯೆಹೋವ ಕೊಟ್ಟ ನಿರ್ದೇಶನ ಪಾಲಿಸಿದ್ರು. ಅವ್ರಲ್ಲೊಬ್ಬ ಕಾಲೇಬ. ಅವನು ಯೆಹೋವ “ಹೇಳಿದ ಹಾಗೇ ಮನಸ್ಸಾರೆ ನಡೀತಾ” ಇದ್ದ. (ಅರಣ್ಯಕಾಂಡ 14:24 ಓದಿ.) ಅದಕ್ಕೇ ಕಾನಾನ್ ದೇಶದಲ್ಲಿ ಅವನಿಗೆ ಇಷ್ಟ ಆದ ಜಾಗವನ್ನ ಆಸ್ತಿಯಾಗಿ ಕೊಟ್ಟನು. (ಯೆಹೋ. 14:12-14) ಇಸ್ರಾಯೇಲ್ಯರ ಮುಂದಿನ ಪೀಳಿಗೆಯವರೂ ಯೆಹೋವ ಕೊಟ್ಟ ನಿರ್ದೇಶನ ಪಾಲಿಸಿದ್ರು. ಅದಕ್ಕೇ ಅವರು ಯೆಹೋಶುವ ನಾಯಕನಾದಾಗ, ಅವನು “ಬದುಕಿರೋ ತನಕ ಅವನಿಗೆ ತುಂಬಾ ಗೌರವ ಕೊಟ್ರು.” (ಯೆಹೋ. 4:14) ಹೀಗೆ ಯೆಹೋವನ ಮಾತು ಕೇಳಿದ್ರಿಂದ ಆತನು ಅವ್ರನ್ನ ಕಾನಾನ್ ದೇಶಕ್ಕೆ ಕರ್ಕೊಂಡು ಹೋದನು.—ಯೆಹೋ. 21:43, 44.
8. ರಾಜರ ಕಾಲದಲ್ಲಿ ಯೆಹೋವ ತನ್ನ ಜನ್ರಿಗೆ ಹೇಗೆ ನಿರ್ದೇಶನ ಕೊಡ್ತಿದ್ದನು? (ಚಿತ್ರನೂ ನೋಡಿ.)
8 ಕೆಲವು ವರ್ಷಗಳಾದ ಮೇಲೆ ಯೆಹೋವ ತನ್ನ ಜನ್ರಿಗೆ ನ್ಯಾಯಾಧೀಶರಿಂದ ನಿರ್ದೇಶನಗಳನ್ನ ಕೊಡ್ತಿದ್ದನು. ಅದಾದ್ಮೇಲೆ ರಾಜರ ಕಾಲದಲ್ಲಿ ಪ್ರವಾದಿಗಳಿಂದ ನಿರ್ದೇಶನ ಕೊಟ್ಟನು. ಕೆಲವು ರಾಜರು ಆ ಪ್ರವಾದಿಗಳು ಕೊಡ್ತಿದ್ದ ಸಲಹೆಗಳನ್ನ ಪಾಲಿಸ್ತಿದ್ರು. ಉದಾಹರಣೆಗೆ ರಾಜ ದಾವೀದ ಪ್ರವಾದಿ ನಾತಾನನ ಮಾತನ್ನ ಕೇಳಿ ತಪ್ಪನ್ನ ತಿದ್ಕೊಂಡ. (2 ಸಮು. 12:7, 13; 1 ಪೂರ್ವ. 17:3, 4) ರಾಜ ಯೆಹೋಷಾಫಾಟ ಯಹಜೀಯೇಲ ಕೊಟ್ಟ ನಿರ್ದೇಶನ ಪಾಲಿಸಿದ ಮತ್ತು ಯೆಹೂದದ ಜನ್ರಿಗೆ “[ದೇವರ] ಪ್ರವಾದಿಗಳ ಮೇಲೆ ನಂಬಿಕೆಯಿಡಿ” ಅಂತ ಹೇಳಿದ. (2 ಪೂರ್ವ. 20:14, 15, 20) ಕಷ್ಟ ಬಂದಾಗ ರಾಜ ಹಿಜ್ಕೀಯ ಕೂಡ ಪ್ರವಾದಿ ಯೆಶಾಯನ ಹತ್ರ ತಾನೇನು ಮಾಡಬೇಕು ಅಂತ ಕೇಳಿದ. (ಯೆಶಾ. 37:1-6) ಹೀಗೆ ರಾಜರು ಯಾವಾಗೆಲ್ಲ ಯೆಹೋವನ ನಿರ್ದೇಶನ ಪಾಲಿಸ್ತಿದ್ರೋ ಆಗೆಲ್ಲ ಯೆಹೋವ ಅವ್ರನ್ನ ಆಶೀರ್ವದಿಸ್ತಿದ್ದನು ಮತ್ತು ತನ್ನ ಜನ್ರನ್ನ ಕಾಪಾಡ್ತಿದ್ದನು. (2 ಪೂರ್ವ. 20:29, 30; 32:22) ಯೆಹೋವ ಪ್ರವಾದಿಗಳಿಂದಾನೇ ನಿರ್ದೇಶನಗಳನ್ನ ಕೊಡ್ತಿದ್ದಾನೆ ಅಂತ ಎಲ್ರಿಗೂ ಗೊತ್ತಿತ್ತು. ಆದ್ರೂ ಎಷ್ಟೋ ರಾಜರು ಮತ್ತು ಇಸ್ರಾಯೇಲ್ಯರು ಪ್ರವಾದಿಗಳ ಮಾತನ್ನ ಒಂಚೂರೂ ಕೇಳಲಿಲ್ಲ.—ಯೆರೆ. 35:12-15.
ರಾಜ ಹಿಜ್ಕೀಯ ಮತ್ತು ಪ್ರವಾದಿ ಯೆಶಾಯ (ಪ್ಯಾರ 8 ನೋಡಿ)
ಯೆಹೋವ ಒಂದನೇ ಶತಮಾನದ ಕ್ರೈಸ್ತರನ್ನ ಹೇಗೆ ಮಾರ್ಗದರ್ಶಿಸಿದನು?
9. ಒಂದನೇ ಶತಮಾನದ ಕ್ರೈಸ್ತರಿಗೆ ಯೆಹೋವ ಯಾರಿಂದ ನಿರ್ದೇಶನ ಕೊಡ್ತಿದ್ದನು? (ಚಿತ್ರನೂ ನೋಡಿ.)
9 ಕ್ರಿಸ್ತ ಶಕ ಒಂದನೇ ಶತಮಾನದಲ್ಲಿ ಯೆಹೋವ ಕ್ರೈಸ್ತ ಸಭೆಯ ಏರ್ಪಾಡು ಮಾಡಿದನು. ಆಗಿದ್ದ ಕ್ರೈಸ್ತರಿಗೆ ಆತನು ಹೇಗೆ ನಿರ್ದೇಶನ ಕೊಟ್ಟನು? ಆತನು ಯೇಸು ಕ್ರಿಸ್ತನನ್ನ ಸಭೆಯ ಯಜಮಾನನಾಗಿ ನೇಮಿಸಿದನು. (ಎಫೆ. 5:23) ಆದ್ರೆ ಯೇಸುನೇ ನೇರವಾಗಿ ಶಿಷ್ಯರ ಹತ್ರ ಹೋಗಿ ನಿರ್ದೇಶನ ಕೊಡ್ತಾ ಇರಲಿಲ್ಲ. ಬದ್ಲಿಗೆ ಯೆರೂಸಲೇಮಲ್ಲಿದ್ದ ಅಪೊಸ್ತಲರನ್ನ ಮತ್ತು ಹಿರಿಯರನ್ನ ನೇಮಿಸಿದನು. (ಅ. ಕಾ. 15:1, 2) ಅಷ್ಟೇ ಅಲ್ಲ, ಸಭೆಯಲ್ಲಿ ಇರೋರಿಗೆ ನಿರ್ದೇಶನ ಕೊಡೋಕೆ ಮೇಲ್ವಿಚಾರಕರೂ ಇರ್ತಿದ್ರು.—1 ಥೆಸ. 5:12; ತೀತ 1:5.
ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಹಿರಿಯರು (ಪ್ಯಾರ 9 ನೋಡಿ)
10. (ಎ) ನಿರ್ದೇಶನ ಸಿಕ್ಕಾಗ ಒಂದನೇ ಶತಮಾನದ ಕ್ರೈಸ್ತರು ಏನು ಮಾಡಿದ್ರು? (ಅಪೊಸ್ತಲರ ಕಾರ್ಯ 15:30, 31) (ಬಿ) ಹಿಂದಿನ ಕಾಲದಲ್ಲಿ ನಿರ್ದೇಶನ ಕೊಡೋಕೆ ಯೆಹೋವ ಯಾರನ್ನ ನೇಮಿಸಿದನೋ ಅವ್ರ ಮಾತನ್ನ ಕೆಲವರು ಯಾಕೆ ಕೇಳಲಿಲ್ಲ? (“ಯೆಹೋವ ಮನುಷ್ಯರಿಂದ ನಿರ್ದೇಶನ ಕೊಡ್ತಿದ್ದಾನೆ ಅಂತ ಗೊತ್ತಿದ್ರೂ ಕೆಲವರು ಯಾಕೆ ಒಪ್ಪಲಿಲ್ಲ?” ಅನ್ನೋ ಚೌಕ ನೋಡಿ.)
10 ನಿರ್ದೇಶನ ಸಿಕ್ಕಾಗ ಒಂದನೇ ಶತಮಾನದ ಕ್ರೈಸ್ತರು ಏನು ಮಾಡಿದ್ರು? ತುಂಬ ಜನ ಅದನ್ನ ಮನಸ್ಸಾರೆ ಪಾಲಿಸಿದ್ರು. ಅವ್ರಿಗೆ ಸಿಕ್ಕ “ಪ್ರೋತ್ಸಾಹದ ಮಾತುಗಳನ್ನ ನೋಡಿ ಅವ್ರಿಗೆ ತುಂಬ ಖುಷಿ ಆಯ್ತು.” (ಅಪೊಸ್ತಲರ ಕಾರ್ಯ 15:30, 31 ಓದಿ.) ಹಾಗಾದ್ರೆ ಇವತ್ತು ಯೆಹೋವ ತನ್ನ ಜನ್ರನ್ನ ಹೇಗೆ ಮಾರ್ಗದರ್ಶಿಸ್ತಾ ಇದ್ದಾನೆ?
ಇವತ್ತು ಯೆಹೋವ ನಮ್ಮನ್ನ ಹೇಗೆ ಮಾರ್ಗದರ್ಶಿಸ್ತಾ ಇದ್ದಾನೆ?
11. ಯೆಹೋವ ತನ್ನ ಜನ್ರನ್ನ ಮಾರ್ಗದರ್ಶಿಸ್ತಾ ಇದ್ದಾನೆ ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ.
11 ಯೆಹೋವ ತನ್ನ ಜನ್ರನ್ನ ಈಗ್ಲೂ ಮಾರ್ಗದರ್ಶಿಸ್ತಾ ಇದ್ದಾನೆ. ಆತನು ತನ್ನ ವಾಕ್ಯವಾದ ಬೈಬಲ್ ಮತ್ತು ಸಭೆಯ ಯಜಮಾನನಾದ ಯೇಸುವಿಂದ ನಿರ್ದೇಶನ ಕೊಡ್ತಿದ್ದಾನೆ. ಅಷ್ಟೇ ಅಲ್ಲ, ಮನುಷ್ಯರಿಂದಾನೂ ನಮಗೆ ನಿರ್ದೇಶನ ಕೊಡ್ತಿದ್ದಾನೆ. 1870ರ ನಂತ್ರ ಏನಾಯ್ತು ನೋಡಿ. ಚಾರ್ಲ್ಸ್ ಟೇಸ್ ರಸ್ಸಲ್ ಮತ್ತು ಅವ್ರ ಜೊತೆ ಇದ್ದವರು 1914 ಒಂದು ಮುಖ್ಯವಾದ ವರ್ಷ, ಆಗ ದೇವರ ಆಳ್ವಿಕೆ ಶುರುವಾಯ್ತು ಅಂತ ಅರ್ಥಮಾಡ್ಕೊಂಡ್ರು. (ದಾನಿ. 4:25, 26) ಅದು ಅವ್ರಿಗೆ ಹೇಗೆ ಗೊತ್ತಾಯ್ತು? ಅವರು ಬೈಬಲಲ್ಲಿರೋ ಭವಿಷ್ಯವಾಣಿಗಳನ್ನ ಚೆನ್ನಾಗಿ ಹುಡುಕಿದ್ರು. ಅದನ್ನ ಅರ್ಥಮಾಡ್ಕೊಳ್ಳೋಕೆ ಯೆಹೋವನೇ ಅವ್ರಿಗೆ ಸಹಾಯ ಮಾಡಿದನು. 1914ರಲ್ಲಿ ದೇವರ ಆಳ್ವಿಕೆ ಶುರುವಾಯ್ತು ಅನ್ನೋದಕ್ಕೆ ಅವ್ರ ಕಣ್ಮುಂದೆನೇ ತುಂಬ ಸಾಕ್ಷಿಗಳಿತ್ತು. ಒಂದನೇ ಮಹಾಯುದ್ಧ ಶುರು ಆಯ್ತು, ಅದಾದ್ಮೇಲೆ ಅಂಟುರೋಗಗಳು, ಭೂಕಂಪಗಳು, ಆಹಾರದ ಕೊರತೆನೂ ಶುರುವಾಯ್ತು. (ಲೂಕ 21:10, 11) ಆ ಸಮಯದಲ್ಲಿ, ಯೆಹೋವ ತನ್ನ ಜನ್ರಿಗೆ ಈ ಸಹೋದರರಿಂದ ನಿರ್ದೇಶನ ಕೊಟ್ಟನು ಅನ್ನೋದ್ರಲ್ಲಿ ಅನುಮಾನನೇ ಇಲ್ಲ!
12-13. ಸಿಹಿಸುದ್ದಿ ಸಾರೋ ಕೆಲಸ ಜಾಸ್ತಿ ಮಾಡೋಕೆ ಎರಡನೇ ಮಹಾಯುದ್ಧದ ಸಮಯದಲ್ಲಿ ಸಹೋದರರು ಯಾವ ಏರ್ಪಾಡುಗಳನ್ನ ಮಾಡಿದ್ರು?
12 ಎರಡನೇ ಮಹಾಯುದ್ಧದ ಸಮಯದಲ್ಲೂ ಏನಾಯ್ತು ನೋಡಿ. ಮುಖ್ಯ ಕಾರ್ಯಾಲಯದಲ್ಲಿದ್ದ ನಮ್ಮ ಸಹೋದರರು ಪ್ರಕಟನೆ 17:8ರಲ್ಲಿರೋ ವಿಷ್ಯನ ಚೆನ್ನಾಗಿ ಅರ್ಥಮಾಡ್ಕೊಂಡ್ರು. ಈ ಮಹಾಯುದ್ಧ ಮುಗಿದ ಮೇಲೆ ಹರ್ಮಗೆದೋನ್ ಶುರು ಆಗಲ್ಲ, ಬದ್ಲಿಗೆ ಪರಿಸ್ಥಿತಿ ಸುಧಾರಿಸುತ್ತೆ ಮತ್ತು ಸಿಹಿಸುದ್ದಿ ಸಾರೋಕೆ ತುಂಬ ಅವಕಾಶಗಳು ಸಿಗುತ್ತೆ ಅಂತ ತಿಳ್ಕೊಂಡ್ರು. ಅದಕ್ಕೇ ಗಿಲ್ಯಡ್ ಶಾಲೆ ಶುರು ಮಾಡಿದ್ರು. ಮಿಷನರಿಗಳಿಗೆ ಬೇರೆ ದೇಶಕ್ಕೆ ಹೋಗಿ ಸಿಹಿಸುದ್ದಿ ಸಾರೋಕೆ ತರಬೇತಿ ಕೊಟ್ರು. ಇದನ್ನೆಲ್ಲ ಯುದ್ಧ ನಡಿತಾ ಇರುವಾಗ್ಲೇ ಮಾಡ್ತಿದ್ರು. ಆಗ ಕೆಲವ್ರಿಗೆ, ಈ ಸಮಯದಲ್ಲಿ ಹೀಗೆ ಮಾಡ್ತಿರೋದು ಸರಿನಾ ಅಂತ ಅನಿಸಿರಬಹುದು. ಆದ್ರೂ ಸಂಘಟನೆ ಈ ಏರ್ಪಾಡು ಮಾಡ್ತು. ಅಷ್ಟೇ ಅಲ್ಲ, ನಂಬಿಗಸ್ತ ಆಳು ಸಭೆಯಲ್ಲಿರೋ ಎಲ್ಲ ಪ್ರಚಾರಕರಿಗೂ ಒಂದು ಶಾಲೆನ ಏರ್ಪಾಡು ಮಾಡ್ತು.b ಅಲ್ಲಿ ಅವ್ರಿಗೆ ಚೆನ್ನಾಗಿ ಸಿಹಿಸುದ್ದಿ ಸಾರೋಕೆ ಮತ್ತು ಕಲಿಸೋಕೆ ತರಬೇತಿ ಸಿಕ್ತು. ಹೀಗೆ ಮುಂದೆ ಮಾಡಬೇಕಿದ್ದ ಒಂದು ದೊಡ್ಡ ಕೆಲಸಕ್ಕೆ ಯೆಹೋವ ತನ್ನ ಜನ್ರನ್ನ ಸಿದ್ಧ ಮಾಡಿದನು.
13 ಇದನ್ನೆಲ್ಲ ನೋಡುವಾಗ, ಯುದ್ಧದ ಸಮಯದಲ್ಲೂ ಯೆಹೋವ ತನ್ನ ಜನ್ರನ್ನ ಮಾರ್ಗದರ್ಶಿಸಿದನು ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ. ಎರಡನೇ ಮಹಾಯುದ್ಧ ಮುಗಿದಾಗಿಂದ ಇಲ್ಲಿ ತನಕ ಯೆಹೋವನ ಜನ್ರಿಗೆ ಸಾರೋಕೆ ಎಷ್ಟೋ ಅವಕಾಶಗಳು ಸಿಕ್ಕಿವೆ. ಅದಕ್ಕೇ ಅವರು ಈ ಕೆಲಸನ ಎಲ್ಲಾ ಕಡೆ ಖುಷಿಖುಷಿಯಿಂದ ಮಾಡ್ತಾ ಇದ್ದಾರೆ. ಇದ್ರಿಂದ ತುಂಬ ಜನ್ರಿಗೆ ಯೆಹೋವನ ಬಗ್ಗೆ ತಿಳ್ಕೊಳ್ಳೋಕೆ ಆಗ್ತಿದೆ.
14. ಸಂಘಟನೆಯಿಂದ ಮತ್ತು ಹಿರಿಯರಿಂದ ಬರೋ ನಿರ್ದೇಶನ ಯಾವಾಗ್ಲೂ ಯೆಹೋವನಿಂದಾನೇ ಬಂದಿರುತ್ತೆ ಅಂತ ನಾವ್ಯಾಕೆ ನಂಬಬಹುದು? (ಪ್ರಕಟನೆ 2:1) (ಚಿತ್ರನೂ ನೋಡಿ.)
14 ಇವತ್ತೂ ಕೂಡ ಆಡಳಿತ ಮಂಡಲಿಯ ಸಹೋದರರು ಯೇಸು ತರ ಯೋಚ್ನೆ ಮಾಡಿ ನಮಗೆ ನಿರ್ದೇಶನಗಳನ್ನ ಕೊಡ್ತಾರೆ. ಅದನ್ನ ಸಂಚರಣ ಮೇಲ್ವಿಚಾರಕರು ಮತ್ತು ಹಿರಿಯರು ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ತಿಳಿಸ್ತಾರೆ.c ಈ ಅಭಿಷಿಕ್ತ ಹಿರಿಯರು ಯೇಸು ಕ್ರಿಸ್ತನ “ಬಲಗೈಯಲ್ಲಿ” ಇದ್ದಾರೆ. (ಪ್ರಕಟನೆ 2:1 ಓದಿ.) ಈ ಹಿರಿಯರಿಂದನೂ ಕೆಲವೊಮ್ಮೆ ತಪ್ಪುಗಳು ಆಗುತ್ತೆ. ಯಾಕಂದ್ರೆ ಇವರೂ ನಮ್ಮ ತರಾನೇ ಅಪರಿಪೂರ್ಣರು. ಹಿಂದಿನ ಕಾಲದಲ್ಲಿದ್ದ ಮೋಶೆ, ಯೆಹೋಶುವ ಮತ್ತು ಅಪೊಸ್ತಲರೂ ಕೆಲವು ತಪ್ಪುಗಳನ್ನ ಮಾಡಿದ್ರು. (ಅರ. 20:12; ಯೆಹೋ. 9:14, 15; ರೋಮ. 3:23) ಹಾಗಿದ್ರೂ ನಾವು ಒಂದು ವಿಷ್ಯ ಮನಸ್ಸಲ್ಲಿ ಇಟ್ಕೊಬೇಕು. ಅದೇನಂದ್ರೆ ನಂಬಿಗಸ್ತನು ವಿವೇಕಿಯಾದ ಆಳನ್ನ ಮತ್ತು ಹಿರಿಯರನ್ನ ಯೇಸು ಕ್ರಿಸ್ತನೇ ಮುಂದೆ ನಿಂತು ನಡೆಸ್ತಿದ್ದಾನೆ ಮತ್ತು ಅವ್ರಿಗೆ ನಿರ್ದೇಶನಗಳನ್ನ ಕೊಡ್ತಿದ್ದಾನೆ. “ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ” ಅವ್ರಿಂದಾನೇ ಆತನು ನಮ್ಮನ್ನ ಮಾರ್ಗದರ್ಶಿಸ್ತಾನೆ. (ಮತ್ತಾ. 28:20) ಹಾಗಾಗಿ ಯೆಹೋವ ನೇಮಿಸಿರೋ ಈ ಸಹೋದರರ ಮೂಲಕ ಬರೋ ನಿರ್ದೇಶನಗಳು ಯಾವಾಗ್ಲೂ ಸರಿಯಾಗೇ ಇರುತ್ತೆ ಅಂತ ಕಣ್ಮುಚ್ಚಿ ನಂಬಬಹುದು.
ಈಗಿರೋ ಆಡಳಿತ ಮಂಡಲಿ (ಪ್ಯಾರ 14 ನೋಡಿ)
ಯೆಹೋವ ಕೊಡೋ ನಿರ್ದೇಶನಗಳನ್ನ ಪಾಲಿಸ್ತಾ ಇದ್ರೆ ಆಶೀರ್ವಾದಗಳು ಸಿಗುತ್ತೆ
15-16. ಯೆಹೋವ ಕೊಡೋ ನಿರ್ದೇಶನಗಳನ್ನ ಪಾಲಿಸಿದವ್ರ ಅನುಭವದಿಂದ ನೀವೇನು ಕಲಿತ್ರಿ?
15 ಯೆಹೋವ ಕೊಡೋ ನಿರ್ದೇಶನಗಳನ್ನ ಪಾಲಿಸಿದ್ರೆ, ಈಗ್ಲೂ ಆಶೀರ್ವಾದಗಳು ಸಿಗುತ್ತೆ. ಆ್ಯಂಡಿ ಮತ್ತು ರೋಸ್d ಉದಾಹರಣೆ ನೋಡಿ. ಜೀವನನ ಸರಳವಾಗಿ ಇಟ್ಕೊಬೇಕು ಅಂತ ಸಂಘಟನೆ ಕೊಟ್ಟ ನಿರ್ದೇಶನವನ್ನ ಅವರು ಪಾಲಿಸಿದ್ರು. (ಮತ್ತಾ. 6:22 ಮತ್ತು ಪಾದಟಿಪ್ಪಣಿ) ಹೀಗೆ ಮಾಡಿದಕ್ಕೆ ಅವರು ಎಷ್ಟೋ ಕಟ್ಟಡ ನಿರ್ಮಾಣ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡೋಕೆ ಆಯ್ತು. “ನಾವು ಕೆಲವೊಮ್ಮೆ ಚಿಕ್ಕ ಮನೆಯಲ್ಲಿ ಇರ್ತಿದ್ವಿ, ಅಲ್ಲಿ ಅಡುಗೆ ಮನೇನೂ ಇರ್ತಾ ಇರ್ಲಿಲ್ಲ. ಅಷ್ಟೇ ಅಲ್ಲ ನಂಗೆ ಫೋಟೋ ತೆಗೆಯೋಕೆ ತುಂಬ ಇಷ್ಟ ಆಗಿದ್ರೂ ಕ್ಯಾಮರಗಳನ್ನ, ಲೆನ್ಸ್‌ಗಳನ್ನ ಮಾರಿ ಬಿಟ್ಟೆ. ಆಗ ನಾನು ಅತ್ತು ಬಿಟ್ಟೆ. ಆದ್ರೆ ಅಬ್ರಹಾಮನ ಹೆಂಡತಿ ಸಾರಳ ಉದಾಹರಣೆ ನನಗೆ ಸಹಾಯ ಮಾಡ್ತು. ಹಳೇದನ್ನ ಯೋಚಿಸಿ ದುಃಖ ಪಡದೆ, ಯೆಹೋವನಿಗಾಗಿ ಈಗ ನಾನೇನು ಮಾಡ್ತಿದ್ದೀನೋ ಅದನ್ನ ನೆನಸಿ ಖುಷಿಪಡಬೇಕು ಅಂತ ಅಂದ್ಕೊಂಡೆ” ಅಂತ ರೋಸ್ ಹೇಳ್ತಾರೆ. (ಇಬ್ರಿ. 11:15) ಆ ದಂಪತಿ ಇಷ್ಟೆಲ್ಲಾ ತ್ಯಾಗ ಮಾಡಿದ್ರಿಂದ ಯಾವ ಆಶೀರ್ವಾದ ಸಿಕ್ತು? “ನಮ್ಮ ಹತ್ರ ಇರೋದನ್ನೆಲ್ಲ ಯೆಹೋವನಿಗೆ ಕೊಡ್ತಾ ಇದ್ದೀವಿ ಅನ್ನೋ ತೃಪ್ತಿ ನಮಗಿದೆ. ಯೆಹೋವ ಕೊಟ್ಟಿರೋ ಕೆಲಸಗಳನ್ನ ಮಾಡ್ತಿರುವಾಗ, ಹೊಸ ಲೋಕ ಹೇಗಿರುತ್ತೆ ಅಂತ ಕಲ್ಪಿಸಿಕೊಳ್ಳೋಕೆ ಆಗ್ತಿದೆ” ಅಂತ ರೋಸ್ ಹೇಳ್ತಾರೆ. “ನಮ್ಮ ಸಮಯ, ಶಕ್ತಿನೆಲ್ಲ ಯೆಹೋವನಿಗೆ ಕೊಡ್ತಿರೋದ್ರಿಂದ ನಾವು ತುಂಬ ಖುಷಿಯಾಗಿ ಇದ್ದೀವಿ” ಅಂತ ಆ್ಯಂಡಿ ಹೇಳ್ತಾರೆ.
16 ಯೆಹೋವ ಕೊಡೋ ನಿರ್ದೇಶನಗಳನ್ನ ಪಾಲಿಸ್ತಿದ್ರೆ ಇನ್ನೂ ಯಾವೆಲ್ಲ ಆಶೀರ್ವಾದಗಳು ಸಿಗುತ್ತೆ? ಮಾರ್ಸಿಯಾ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅಂತ ಸಂಘಟನೆ ಕೊಟ್ಟ ನಿರ್ದೇಶನವನ್ನ ಅವಳು ಪಾಲಿಸಿದಳು. ಪಯನೀಯರಿಂಗ್ ಮಾಡೋ ಗುರಿ ಇಟ್ಟಳು. (ಮತ್ತಾ. 6:33; ರೋಮ. 12:11) ಆಗ ಏನಾಯ್ತು? “ನಂಗೆ ಯೂನಿವರ್ಸಿಟಿಯಿಂದ ಒಂದು ಸ್ಕಾಲರ್‌ಷಿಪ್ ಸಿಕ್ತು. ನಾನಲ್ಲಿ ನಾಲ್ಕು ವರ್ಷ ಫ್ರೀಯಾಗಿ ಓದಬಹುದಿತ್ತು. ಆದ್ರೆ ನಂಗೆ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅಂತ ಆಸೆ ಇತ್ತು. ಅದಕ್ಕೆ ನಾನೊಂದು ಕೋರ್ಸ್ ಮಾಡಿದೆ. ಆಮೇಲೆ ಒಂದು ಚಿಕ್ಕ ಕೆಲಸಕ್ಕೆ ಸೇರ್ಕೊಂಡು ಅದ್ರಲ್ಲಿ ಬರೋ ಹಣದಿಂದ ಪಯನೀಯರಿಂಗ್ ಮಾಡಬಹುದು ಅಂದ್ಕೊಂಡೆ. ನಾನು ಈ ನಿರ್ಧಾರ ಮಾಡಿದ್ದು ಒಳ್ಳೆದೇ ಆಯ್ತು. ಈಗ ನಾನು ಖುಷಿಖುಷಿಯಾಗಿ ಪಯನೀಯರಿಂಗ್ ಮಾಡ್ತಿದ್ದೀನಿ. ನಾನು ಸೇರ್ಕೊಂಡಿರೋ ಕೆಲಸದಲ್ಲಿ ನಂಗೆ ಇಷ್ಟ ಬಂದಷ್ಟು ಸಮಯ ಕೆಲಸ ಮಾಡಬಹುದು. ಹಾಗಾಗಿ ಬೆತೆಲ್ ಸೇವೆನೂ ಮಾಡ್ತಿದ್ದೀನಿ ಮತ್ತು ಬೇರೆಬೇರೆ ಸುಯೋಗಗಳು ನಂಗೆ ಸಿಕ್ಕಿದೆ” ಅಂತ ಅವಳು ಹೇಳ್ತಾಳೆ.
17. ಯೆಹೋವ ಕೊಡೋ ನಿರ್ದೇಶನಗಳನ್ನ ಪಾಲಿಸ್ತಾ ಇದ್ರೆ ಇನ್ನೂ ಯಾವೆಲ್ಲ ಆಶೀರ್ವಾದಗಳು ಸಿಗುತ್ತೆ? (ಯೆಶಾಯ 48:17, 18)
17 ಸಂಘಟನೆ ಕೊಡೋ ನಿರ್ದೇಶನಗಳು ನಮ್ಮನ್ನ ಕಾಪಾಡುತ್ತೆ. ಉದಾಹರಣೆಗೆ, ಹಣದ ಹಿಂದೆ ಹೋಗಬಾರದು, ಯೆಹೋವನ ನಿಯಮ ಮುರಿಯುವಂಥ ಯಾವ ಕೆಲಸನೂ ಮಾಡಬಾರದು ಅಂತ ನಮ್ಮನ್ನ ಎಚ್ಚರಿಸುತ್ತೆ. ಆ ನಿರ್ದೇಶನಗಳನ್ನ ಪಾಲಿಸಿದ್ರೆ ನಮಗೇ ಒಳ್ಳೇದು. ಆಗ ನಮ್ಮ ಮನಸ್ಸಾಕ್ಷಿ ಚುಚ್ಚಲ್ಲ, ಇಲ್ದೇ ಇರೋ ತೊಂದ್ರೆಗಳನ್ನ ಮೈಮೇಲೆ ಎಳ್ಕೊಳ್ಳೋಕೆ ಹೋಗಲ್ಲ. (1 ತಿಮೊ. 6:9, 10) ಅಷ್ಟೇ ಅಲ್ಲ ಯೆಹೋವನನ್ನ ಪೂರ್ಣ ಹೃದಯದಿಂದ ಆರಾಧಿಸೋಕೆ ಆಗುತ್ತೆ. ಆಗ ನಾವು ಖುಷಿಯಾಗಿ, ನೆಮ್ಮದಿಯಿಂದ, ತೃಪ್ತಿಯಿಂದ ಇರ್ತೀವಿ.—ಯೆಶಾಯ 48:17, 18 ಓದಿ.
18. ಯೆಹೋವ ಕೊಡೋ ನಿರ್ದೇಶನಗಳನ್ನ ಪಾಲಿಸಬೇಕು ಅಂತ ನೀವ್ಯಾಕೆ ಅಂದ್ಕೊಂಡಿದ್ದೀರಾ?
18 ಯೆಹೋವ ಈಗಷ್ಟೇ ಅಲ್ಲ, ಮಹಾ ಸಂಕಟದಲ್ಲೂ ಮತ್ತು ಯೇಸುವಿನ ಸಾವಿರ ವರ್ಷದ ಆಳ್ವಿಕೆಯಲ್ಲೂ ನಮ್ಮನ್ನ ಮನುಷ್ಯರಿಂದಾನೇ ಮಾರ್ಗದರ್ಶಿಸ್ತಾ ಇರ್ತಾನೆ. (ಕೀರ್ತ. 45:16) ಆಗ ನಮಗೆ ಇಷ್ಟ ಆಗ್ಲಿಲ್ಲ ಅಂದ್ರೂ ನಾವು ಅವ್ರ ಮಾತನ್ನ ಕೇಳ್ತಿವಾ? ನಾವು ಈಗ್ಲಿಂದಾನೇ ಅವ್ರ ಮಾತನ್ನ ಕೇಳೋಕೆ ಕಲಿತ್ರೆ ಮುಂದೆ ನಿರ್ದೇಶನಗಳನ್ನ ಪಾಲಿಸೋಕೆ ಸುಲಭ ಆಗುತ್ತೆ. ಹಾಗಾಗಿ ನಾವು ಯೆಹೋವ ಕೊಡೋ ನಿರ್ದೇಶನಗಳನ್ನ ಮತ್ತು ಆತನು ನೇಮಿಸಿರೋ ಮೇಲ್ವಿಚಾರಕರು ಕೊಡೋ ನಿರ್ದೇಶನಗಳನ್ನ ಪಾಲಿಸ್ತಾ ಇರೋಣ. (ಯೆಶಾ. 32:1, 2; ಇಬ್ರಿ. 13:17) ಹೀಗೆ ಯೆಹೋವನೇ ಮುಂದೆ ನಿಂತು ನಮ್ಮನ್ನ ಮಾರ್ಗದರ್ಶಿಸ್ತಿದ್ದಾನೆ ಅಂತ ನಂಬೋಣ. ಯಾಕಂದ್ರೆ ಆತನ ಜೊತೆಗಿರೋ ನಮ್ಮ ಫ್ರೆಂಡ್‌ಶಿಪ್‌ಗೆ ಏನೇ ಅಪಾಯ ಬಂದ್ರೂ ಅದ್ರಿಂದ ಕಾಪಾಡೋಕೆ ಮತ್ತು ನಮ್ಮನ್ನ ಶಾಶ್ವತ ಜೀವಕ್ಕೆ ನಡಿಸೋಕೆ ಯೆಹೋವನಿಗೆ ಮಾತ್ರನೇ ಆಗೋದು!
ನೀವೇನು ಹೇಳ್ತೀರಾ?
ಯೆಹೋವ ಇಸ್ರಾಯೇಲ್ಯರನ್ನ ಹೇಗೆ ಮಾರ್ಗದರ್ಶಿಸಿದನು?
ಯೆಹೋವ ಒಂದನೇ ಶತಮಾನದ ಕ್ರೈಸ್ತರನ್ನ ಹೇಗೆ ಮಾರ್ಗದರ್ಶಿಸಿದನು?
ಯೆಹೋವ ಈಗ ಕೊಡೋ ನಿರ್ದೇಶನಗಳನ್ನ ಪಾಲಿಸಿದ್ರೆ ನಮಗೆ ಯಾವೆಲ್ಲ ಆಶೀರ್ವಾದಗಳು ಸಿಗುತ್ತೆ?
ಗೀತೆ 48 ಯೆಹೋವನೊಂದಿಗೆ ಪ್ರತಿದಿನ ನಡೆಯುವುದು
a ಯೆಹೋವ ದೇವರು ಒಬ್ಬ ದೂತನನ್ನ ಕೂಡ ನೇಮಿಸಿದ್ದನು. ಅವನು “ಇಸ್ರಾಯೇಲ್ಯರ ಮುಂದೆ ಹೋಗ್ತಿದ್ದ” ಮತ್ತು ಅವ್ರನ್ನ ದೇವರು ಮಾತು ಕೊಟ್ಟ ದೇಶಕ್ಕೆ ಕರ್ಕೊಂಡು ಹೋಗ್ತಿದ್ದ. ಆ ದೂತ ಬೇರೆ ಯಾರೂ ಅಲ್ಲ ಯೇಸು ಕ್ರಿಸ್ತನೇ. ಆಗ ಅವನಿಗೆ ಮೀಕಾಯೇಲ ಅನ್ನೋ ಹೆಸ್ರಿತ್ತು.—ವಿಮೋ. 14:19; 32:34.
b ಇದನ್ನ ಮುಂಚೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಅಂತ ಕರೀತಿದ್ರು. ಆದ್ರೆ ಆ ಶಾಲೆಯಲ್ಲಿ ಕೊಡ್ತಿದ್ದ ತರಬೇತಿನ ಈಗ ಮಧ್ಯ ವಾರದ ಕೂಟದಲ್ಲಿ ಕೊಡಲಾಗುತ್ತೆ.
c ಫೆಬ್ರವರಿ 2021ರ ಕಾವಲಿನಬುರುಜುವಿನ ಪುಟ 18ರಲ್ಲಿ “ಆಡಳಿತ ಮಂಡಲಿಗಿರೋ ಜವಾಬ್ದಾರಿಗಳು” ಅನ್ನೋ ಚೌಕ ನೋಡಿ.
d ಕೆಲವ್ರ ಹೆಸ್ರು ಬದಲಾಗಿದೆ.