ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಏಪ್ರಿಲ್‌ ಪು. 14-19
  • ಸೇವೆಲಿ ಖುಷಿ ಪಡ್ಕೊಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವೆಲಿ ಖುಷಿ ಪಡ್ಕೊಳಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ವಾಕ್ಯ ಓದಿ
  • ಸೇವೆಗೆ ಚೆನ್ನಾಗಿ ತಯಾರಿ ಮಾಡಿ
  • ಧೈರ್ಯಕ್ಕಾಗಿ ಪ್ರಾರ್ಥನೆ ಮಾಡಿ
  • ಹೊಂದ್ಕೊಳ್ಳೋಕೆ ಕಲಿರಿ, ಒಳ್ಳೇ ವಿಷ್ಯಗಳಿಗೆ ಗಮನ ಕೊಡಿ
  • ಯೆಹೋವನನ್ನ ಮತ್ತು ಜನ್ರನ್ನ ಪ್ರೀತಿಸಿ
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಯೇಸು ತರ ಹುರುಪಿಂದ ಸಾರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಸಾರುತ್ತಾ ಇರೋಕೆ ಪ್ರೀತಿ ನಿಮ್ಮನ್ನ ಪ್ರೇರಿಸಲಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಏಪ್ರಿಲ್‌ ಪು. 14-19

ಅಧ್ಯಯನ ಲೇಖನ 16

ಗೀತೆ 44 ಕೊಯ್ಲಿನಲ್ಲಿ ಆನಂದಿಸುತ್ತಾ ಪಾಲಿಗರಾಗುವುದು

ಸೇವೆಲಿ ಖುಷಿ ಪಡ್ಕೊಳಿ

“ಸಂತೋಷದಿಂದ ಯೆಹೋವನ ಸೇವೆ ಮಾಡಿ.”—ಕೀರ್ತ. 100:2.

ಈ ಲೇಖನದಲ್ಲಿ ಏನಿದೆ?

ಸೇವೇಲಿ ಖುಷಿ ಪಡ್ಕೊಳ್ಳೋಕೆ ನಾವೇನು ಮಾಡಬೇಕು ಅಂತ ನೋಡೋಣ.

1. ಸಿಹಿಸುದ್ದಿ ಸಾರೋಕೆ ಕೆಲವ್ರಿಗೆ ಹೇಗನಿಸುತ್ತೆ? (ಚಿತ್ರನೂ ನೋಡಿ.)

ನಮಗೆ ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ಜನ್ರಿಗೆ ಸಹಾಯ ಮಾಡಬೇಕು ಅನ್ನೋ ಆಸೆ ಇರೋದ್ರಿಂದ ಸಿಹಿಸುದ್ದಿ ಸಾರ್ತೀವಿ. ಎಷ್ಟೋ ಸಹೋದರ ಸಹೋದರಿಯರಿಗೆ ಸಾರೋದಂದ್ರೆ ತುಂಬ ಇಷ್ಟ. ಆದ್ರೆ ಕೆಲವ್ರಿಗೆ ಸ್ವಲ್ಪ ಕಷ್ಟ. ಯಾಕಂದ್ರೆ ‘ಕರಿದೇ ಇರೋರ ಮನೆಗೆ ಹೋಗಿ ಹೇಗಪ್ಪಾ ಮಾತಾಡೋದು’ ಅಂತ ಕೆಲವ್ರಿಗೆ ಅನಿಸುತ್ತೆ. ಕೆಲವ್ರಿಗೆ ಸಂಕೋಚ ಇರುತ್ತೆ, ಇನ್ನು ಕೆಲವರು ಹೆದರುತ್ತಾರೆ. ಅಷ್ಟೇ ಅಲ್ಲ, ಕೋಪದಿಂದ ಮನೆಯವರು ಎಲ್ಲಿ ಬೈದುಬಿಡ್ತಾರೋ ಅನ್ನೋ ಭಯನೂ ಇರುತ್ತೆ. ಈ ಎಲ್ಲಾ ಸಹೋದರ ಸಹೋದರಿಯರಿಗೆ ಯೆಹೋವನ ಮೇಲೆ ತುಂಬ ಪ್ರೀತಿ ಇದೆ. ಆದ್ರೆ ಪರಿಚಯ ಇಲ್ಲದೆ ಇರೋರ ಹತ್ರ ಹೋಗಿ ಮಾತಾಡೋಕೆ ಸ್ವಲ್ಪ ಕಷ್ಟಪಡ್ತಾರೆ. ಅವ್ರಿಗೆ ಇಷ್ಟೆಲ್ಲಾ ಕಷ್ಟ ಆದ್ರೂ ಸಿಹಿಸುದ್ದಿ ಸಾರೋದು ಮುಖ್ಯ ಅಂತ ಅರ್ಥಮಾಡ್ಕೊಂಡು ತಮ್ಮಿಂದ ಆದಷ್ಟು ಪ್ರಯತ್ನ ಮಾಡ್ತಾರೆ. ಇದನ್ನ ನೋಡಿ ಯೆಹೋವನಿಗೆ ಎಷ್ಟು ಖುಷಿ ಆಗುತ್ತೆ ಅಲ್ವಾ?

ಇಬ್ರು ಸಹೋದರಿಯರು ಮನೆಮನೆ ಸೇವೆ ಮಾಡ್ತಿದ್ದಾರೆ. ಅವ್ರಲ್ಲಿ ಒಬ್ರು ಖುಷಿಯಾಗಿ ಇದ್ದಾರೆ, ಇನ್ನೊಬ್ರ ಮುಖದಲ್ಲಿ ಭಯ ಮತ್ತು ಬೇಜಾರಿದೆ.

ನಿಮಗೆ ಸಿಹಿಸುದ್ದಿ ಸಾರೋದಂದ್ರೆ ಇಷ್ಟಾನಾ? (ಪ್ಯಾರ 1 ನೋಡಿ)


2. ಸೇವೆನ ಖುಷಿಖುಷಿಯಾಗಿ ಮಾಡೋಕೆ ಆಗ್ತಿಲ್ಲ ಅಂತ ಯಾಕೆ ಬೇಜಾರು ಮಾಡ್ಕೊಬಾರದು?

2 ನಿಮಗೂ ಹೀಗೇ ಅನಿಸುತ್ತಾ? ಹಾಗಿದ್ರೆ ಬೇಜಾರು ಮಾಡ್ಕೊಬೇಡಿ. ನಮ್ಮೆಲ್ರಿಗೂ ಕೆಲವೊಮ್ಮೆ ಭಯ ಆಗುತ್ತೆ. ಯಾಕಂದ್ರೆ ಬೇರೆಯವ್ರ ಗಮನ ನಮ್ಮ ಮೇಲೆ ಜಾಸ್ತಿ ಬರಬಾರದು, ಅವ್ರಿಗೆ ತೊಂದ್ರೆ ಕೊಡಬಾರದು ಅಂತ ನಮ್ಮ ಮನಸ್ಸಲ್ಲಿ ಇರುತ್ತೆ. ಅದ್ರಲ್ಲೂ ಜನ್ರಿಗೆ ಒಳ್ಳೇದು ಮಾಡೋಕೆ ಹೋಗಿ ಅವ್ರ ಕೈಯಲ್ಲೇ ಬೈಸ್ಕೊಂಡು ಬರೋದು ನಮಗ್ಯಾರಿಗೂ ಇಷ್ಟ ಆಗಲ್ಲ. ಆದ್ರೆ ನೆನಪಿಡಿ, ನಿಮಗೆ ಏನು ಅನಿಸ್ತಾ ಇದ್ಯೋ ಅದು ಯೆಹೋವನಿಗೆ ಚೆನ್ನಾಗಿ ಗೊತ್ತಿದೆ. ನಿಮಗೆ ಸಹಾಯ ಮಾಡೋಕೂ ಆತನು ರೆಡಿ ಇದ್ದಾನೆ. (ಯೆಶಾ. 41:13) ಹಾಗಾಗಿ ಆತನು ನಮಗೆ ಹೇಗೆ ಸಹಾಯ ಮಾಡ್ತಾನೆ ಅಂತ ಈ ಲೇಖನದಲ್ಲಿ ನೋಡೋಣ. ಸೇವೆನ ಖುಷಿಖುಷಿಯಾಗಿ ಮಾಡೋಕೆ ಸಹಾಯ ಮಾಡೋ 5 ವಿಷ್ಯಗಳ ಬಗ್ಗೆ ನಾವೀಗ ಕಲಿಯೋಣ.

ದೇವರ ವಾಕ್ಯ ಓದಿ

3. ಜನ್ರ ಹತ್ರ ಮಾತಾಡೋಕೆ ಯೆರೆಮೀಯನಿಗೆ ಯಾವುದು ಸಹಾಯ ಮಾಡ್ತು?

3 ಹಿಂದಿನ ಕಾಲದಲ್ಲಿದ್ದ ಸೇವಕರಿಗೂ ಯೆಹೋವ ಕೊಟ್ಟ ಕೆಲಸ ಮಾಡೋಕೆ ಕೆಲವೊಮ್ಮೆ ಕಷ್ಟ ಆಯ್ತು. ಆಗ ಅವರು ದೇವರು ಕೊಟ್ಟ ಸಂದೇಶದಿಂದ ಶಕ್ತಿ ಪಡ್ಕೊಂಡ್ರು. ಪ್ರವಾದಿ ಯೆರೆಮೀಯನಿಗೆ ದೇವರು ಒಂದು ಸಂದೇಶ ಸಾರೋಕೆ ಹೇಳಿದಾಗ “ನಾನಿನ್ನೂ ಚಿಕ್ಕ ಹುಡುಗ, ನನಗೆ ಸರಿಯಾಗಿ ಮಾತಾಡೋಕ್ಕೂ ಬರಲ್ಲ” ಅಂತ ಹೇಳಿದ. (ಯೆರೆ. 1:6) ಆದ್ರೆ ದೇವರ ಸಂದೇಶ ಅವನಿಗೆ ಯೆಹೋವ ಕೊಟ್ಟ ನೇಮಕ ಮಾಡೋಕೆ ಸಹಾಯ ಮಾಡ್ತು. “ದೇವರ ಸಂದೇಶ . . . ನನ್ನ ಮೂಳೆಗಳ ಒಳಗೆ ಉರಿಯೋ ಬೆಂಕಿಯನ್ನ ಮುಚ್ಚಿಟ್ಟ ಹಾಗಿತ್ತು, ಅದನ್ನ ಅದುಮಿಟ್ಟು ನನಗೆ ಸುಸ್ತಾಗಿ ಹೋಯ್ತು” ಅಂತ ಅವನು ಹೇಳಿದ. (ಯೆರೆ. 20:8, 9) ಜನ್ರು ಮೊಂಡರಾಗಿದ್ರೂ ಯೆರೆಮೀಯ ಅವ್ರ ಹತ್ರ ಹೋಗಿ ಮಾತಾಡೋಕೆ ಯೆಹೋವ ಕೊಟ್ಟ ಸಂದೇಶ ಅವನಿಗೆ ಧೈರ್ಯ ಕೊಡ್ತು.

4. ನಾವ್ಯಾಕೆ ದೇವರ ವಾಕ್ಯ ಓದಿ, ಅದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು? (ಕೊಲೊಸ್ಸೆ 1:9, 10)

4 ನಮಗೂ ದೇವರ ವಾಕ್ಯದಿಂದ ಶಕ್ತಿ ಸಿಗುತ್ತೆ. ಪೌಲ ಕೊಲೊಸ್ಸೆಯವ್ರಿಗೆ ಸರಿಯಾದ ಜ್ಞಾನ ಪಡ್ಕೊಂಡ್ರೆ “ಯೆಹೋವನನ್ನ ಆರಾಧಿಸುವವರು ಹೇಗಿರಬೇಕೋ ಹಾಗೆ” ಇರೋಕಾಗುತ್ತೆ ಮತ್ತು “ಒಳ್ಳೇ ಕೆಲಸಗಳನ್ನ ಮಾಡ್ತಾ” ಇರೋಕಾಗುತ್ತೆ ಅಂತ ಹೇಳಿದ. (ಕೊಲೊಸ್ಸೆ 1:9, 10 ಓದಿ.) ಈ ಒಳ್ಳೇ ಕೆಲಸದಲ್ಲಿ ಸಿಹಿಸುದ್ದಿ ಸಾರೋದೂ ಸೇರಿದೆ. ಹಾಗಾಗಿ ನಾವು ದೇವರ ವಾಕ್ಯ ಓದಿ, ಅದ್ರ ಬಗ್ಗೆ ಚೆನ್ನಾಗಿ ಯೋಚಿಸಿದ್ರೆ ಯೆಹೋವನ ಮೇಲಿರೋ ನಂಬಿಕೆ ಜಾಸ್ತಿ ಆಗುತ್ತೆ. ಸಿಹಿಸುದ್ದಿ ಸಾರೋದು ಎಷ್ಟು ಮುಖ್ಯ ಅನ್ನೋದೂ ಅರ್ಥ ಆಗುತ್ತೆ.

5. ದೇವರ ವಾಕ್ಯದಿಂದ ಸಹಾಯ ಪಡ್ಕೊಬೇಕಂದ್ರೆ ನಾವೇನು ಮಾಡಬೇಕು?

5 ದೇವರ ವಾಕ್ಯದಿಂದ ಸಹಾಯ ಪಡ್ಕೊಬೇಕಂದ್ರೆ ನಾವೇನು ಮಾಡಬೇಕು? ಅದನ್ನ ಅವಸರವಾಗಿ ಓದದೇ ಸಮಯ ತಗೊಂಡು ಓದಿ ಅಧ್ಯಯನ ಮಾಡಬೇಕು, ಓದಿದ್ರ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡಬೇಕು. ನಿಮಗೆ ಒಂದು ವಚನ ಅರ್ಥ ಆಗ್ತಿಲ್ಲ ಅಂದ್ರೆ ಅಲ್ಲಿಗೇ ಬಿಡಬೇಡಿ. ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಅಥವಾ ನಮ್ಮ ಪುಸ್ತಕ-ಪತ್ರಿಕೆಗಳಲ್ಲಿ ಆ ವಚನದ ಅರ್ಥ ಏನು ಅಂತ ಹುಡುಕಿ. ಹೀಗೆ ಮಾಡಿದ್ರೆ ಬೈಬಲಲ್ಲಿ ಇರೋದು ನಿಜ ಅಂತ ನಿಮಗೇ ಮೊದಲು ಮನವರಿಕೆ ಆಗುತ್ತೆ. (1 ಥೆಸ. 5:21) ಆಗ ನೀವು ಕಲ್ತಿದ್ದನ್ನ ಬೇರೆಯವ್ರಿಗೆ ಖುಷಿಯಿಂದ ಹೇಳೋಕಾಗುತ್ತೆ.

ಸೇವೆಗೆ ಚೆನ್ನಾಗಿ ತಯಾರಿ ಮಾಡಿ

6. ನಾವು ಸೇವೆಗೆ ಹೋಗೋ ಮುಂಚೆ ಯಾಕೆ ಚೆನ್ನಾಗಿ ತಯಾರಿ ಮಾಡಬೇಕು?

6 ಸೇವೆಗೆ ಹೋಗೋ ಮುಂಚೆ ಚೆನ್ನಾಗಿ ತಯಾರಿ ಮಾಡಿದ್ರೆ ಜನ್ರ ಜೊತೆ ಭಯ ಇಲ್ಲದೆ, ಆರಾಮಾಗಿ ಮಾತಾಡೋಕಾಗುತ್ತೆ. ಯೇಸು ತನ್ನ ಶಿಷ್ಯರನ್ನ ಸಿಹಿಸುದ್ದಿ ಸಾರೋಕೆ ಕಳಿಸೋ ಮುಂಚೆ ತಯಾರಾಗೋಕೆ ಸಹಾಯ ಮಾಡಿದನು. (ಲೂಕ 10:1-11) ಯೇಸು ಹೇಳಿದ ಹಾಗೆ ಮಾಡಿದ್ರಿಂದ ಅವ್ರಿಗೆ ಸಿಹಿಸುದ್ದಿ ಸಾರೋಕಾಯ್ತು, ಖುಷಿನೂ ಸಿಕ್ತು.—ಲೂಕ 10:17.

7. ನಾವು ಸೇವೆಗೆ ಹೇಗೆ ತಯಾರಾಗಬಹುದು? (ಚಿತ್ರನೂ ನೋಡಿ.)

7 ನೀವು ಸೇವೆಗೆ ಹೇಗೆ ತಯಾರಾಗಬಹುದು? ನೀವು ಏನು ಹೇಳಬೇಕಂತ ಇದ್ದೀರೋ ಅದನ್ನ ನಿಮ್ಮ ಸ್ವಂತ ಮಾತಲ್ಲಿ ಹೇಳಿ. ಅದಕ್ಕೆ ನಿಮ್ಮ ಟೆರಿಟೊರಿಯಲ್ಲಿ ಇರೋರು ಏನೆಲ್ಲಾ ಹೇಳಬಹುದು ಅಂತ ಯೋಚ್ನೆ ಮಾಡಿ. ಅವರು ಸಾಮಾನ್ಯವಾಗಿ ಕೇಳೋ 2-3 ಪ್ರಶ್ನೆಗಳನ್ನ ಬರೆದಿಡಿ. ಅದಕ್ಕೆ ಹೇಗೆ ಉತ್ರ ಕೊಡಬಹುದು ಅಂತ ಯೋಚ್ನೆ ಮಾಡಿ. ಆಗ ನಿಮಗೆ ಜನ್ರ ಹತ್ರ ಆರಾಮಾಗಿ, ನಗ್ತಾ ಮಾತಾಡೋಕಾಗುತ್ತೆ.

ಸೇವೆಗೆ ಹೋದಾಗ ಭಯ ಇದ್ದ ಆ ಸಹೋದರಿ ಈಗ ಮನೆಯಲ್ಲಿ ಇದ್ದಾರೆ ಅವರು “ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ” ಅನ್ನೋ ಕಿರುಹೊತ್ತಗೆಯನ್ನ ಓದ್ತಾ ಇದ್ದಾರೆ.

ಸೇವೆಗೆ ಚೆನ್ನಾಗಿ ತಯಾರಿ ಮಾಡಿ (ಪ್ಯಾರ 7 ನೋಡಿ)


8. ಕ್ರೈಸ್ತರು ಹೇಗೆ ಮಣ್ಣಿನ ಪಾತ್ರೆ ತರ ಇದ್ದಾರೆ?

8 ಅಪೊಸ್ತಲ ಪೌಲ ಸಹೋದರ ಸಹೋದರಿಯರಿಗೆ, “ನಾವು ಮಣ್ಣಿನ ಪಾತ್ರೆಗಳ ತರ ಇದ್ರೂ ನಮ್ಮಲ್ಲಿ ಈ ನಿಧಿ ಇದೆ” ಅಂತ ಹೇಳಿದ. (2 ಕೊರಿಂ. 4:7) ನಿಧಿ ಅಂದ್ರೆ ಏನು? ಜನ್ರ ಜೀವ ಉಳಿಸೋ ದೇವರ ಸಂದೇಶ ಸಾರೋ ಕೆಲಸನೇ ಈ ನಿಧಿ. (2 ಕೊರಿಂ. 4:1) ಹಾಗಾದ್ರೆ ಮಣ್ಣಿನ ಪಾತ್ರೆ ಅಂದ್ರೆ ಯಾರು? ಈ ಸಂದೇಶ ಸಾರೋ ಯೆಹೋವನ ಸೇವಕರು. ಪೌಲನ ಕಾಲದಲ್ಲಿ ವ್ಯಾಪಾರಿಗಳು ಮಣ್ಣಿನ ಪಾತ್ರೆಯಲ್ಲಿ ತುಂಬ ಬೆಲೆಬಾಳೋ ವಸ್ತುಗಳನ್ನ ತಗೊಂಡು ಹೋಗ್ತಿದ್ರು. ಉದಾಹರಣೆಗೆ ಆಹಾರ, ದ್ರಾಕ್ಷಾಮದ್ಯ ಮತ್ತು ಹಣ. ಇವತ್ತು ಯೆಹೋವ ನಮಗೆ ಒಂದು ಬೆಲೆಬಾಳೋ ನಿಧಿ ಕೊಟ್ಟಿದ್ದಾನೆ. ಅದೇ ಸಾರೋ ಕೆಲಸ. ಹಾಗಾಗಿ ಆ ಸಿಹಿಸುದ್ದಿನ ಧೈರ್ಯವಾಗಿ ಸಾರೋಕೆ ಆತನು ನಮಗೆ ಖಂಡಿತ ಶಕ್ತಿ ಕೊಡ್ತಾನೆ.

ಧೈರ್ಯಕ್ಕಾಗಿ ಪ್ರಾರ್ಥನೆ ಮಾಡಿ

9. ಜನ್ರ ಹತ್ರ ಮಾತಾಡೋಕೆ ಭಯ ಆದಾಗ ನಾವೇನು ಮಾಡಬೇಕು? (ಚಿತ್ರನೂ ನೋಡಿ.)

9 ಕೆಲವೊಮ್ಮೆ ನಮಗೆ ಜನ್ರ ಹತ್ರ ಮಾತಾಡೋಕೆ ಭಯ ಆಗುತ್ತೆ. ಆಗ ಏನು ಮಾಡಬೇಕು? ಅಪೊಸ್ತಲರು ಏನು ಮಾಡಿದ್ರು ನೋಡಿ. ಅವ್ರಿಗೆ ಸಾರಲೇಬಾರದು ಅಂತ ಕೆಲವು ಅಧಿಕಾರಿಗಳು ಆಜ್ಞೆ ಕೊಟ್ರು. ಆಗ ಅಪೊಸ್ತಲರು ಯೆಹೋವನ ಹತ್ರ “ನಿನ್ನ ಸೇವಕರು ನಿನ್ನ ಮಾತನ್ನ ಧೈರ್ಯವಾಗಿ ಹೇಳ್ತಾ ಇರೋಕೆ ಸಹಾಯ ಮಾಡು” ಅಂತ ಪ್ರಾರ್ಥನೆ ಮಾಡಿದ್ರು. ಯೆಹೋವ ಅವ್ರ ಪ್ರಾರ್ಥನೆಗೆ ತಕ್ಷಣ ಉತ್ರ ಕೊಟ್ಟನು. (ಅ. ಕಾ. 4:18, 29, 31) ಭಯ ಆದಾಗ ಅವ್ರ ತರ ನೀವೂ ಪ್ರಾರ್ಥನೆ ಮಾಡಿ. ಜನ್ರ ಮೇಲಿರೋ ಭಯಕ್ಕಿಂತ ಪ್ರೀತಿ ಜಾಸ್ತಿ ಆಗೋ ತರ ಮಾಡಪ್ಪಾ ಅಂತ ಕೇಳ್ಕೊಳಿ.

ಆ ಸಹೋದರಿ ಮಾರ್ಕೆಟ್‌ಗೆ ಹೋಗಿದ್ದಾರೆ. ಅಲ್ಲಿ ಅವರು ಮನಸ್ಸಲ್ಲೇ ಪ್ರಾರ್ಥನೆ ಮಾಡ್ತಿದ್ದಾರೆ.

ಧೈರ್ಯಕ್ಕಾಗಿ ಪ್ರಾರ್ಥಿಸಿ (ಪ್ಯಾರ 9 ನೋಡಿ)


10. ಯೆಹೋವ ನಮಗೆ ತನ್ನ ಸಾಕ್ಷಿಗಳಾಗಿರೋಕೆ ಹೇಗೆ ಸಹಾಯ ಮಾಡ್ತಿದ್ದಾನೆ? (ಯೆಶಾಯ 43:10-12)

10 ಯೆಹೋವ ನಮ್ಮನ್ನ ತನ್ನ ಸಾಕ್ಷಿಗಳು ಅಂತ ಕರೆದಿದ್ದಾನೆ. ಅಷ್ಟೇ ಅಲ್ಲ, ನಾವು ಧೈರ್ಯವಾಗಿರೋಕೆ ಆತನು ನಮಗೆ ಸಹಾಯ ಮಾಡ್ತಾನೆ ಅಂತನೂ ಮಾತುಕೊಟ್ಟಿದ್ದಾನೆ. (ಯೆಶಾಯ 43:10-12 ಓದಿ.) ಆತನು ನಮಗೆ 4 ರೀತಿಯಲ್ಲಿ ಸಹಾಯ ಮಾಡ್ತಾನೆ. ಒಂದು, ನಾವು ಸಿಹಿಸುದ್ದಿ ಸಾರುವಾಗೆಲ್ಲ ಯೇಸು ನಮ್ಮ ಜೊತೆ ಇರ್ತಾನೆ. (ಮತ್ತಾ. 28:18-20) ಎರಡು, ದೇವದೂತರಿಂದ ನಮಗೆ ಸಹಾಯ ಮಾಡ್ತಾನೆ. (ಪ್ರಕ. 14:6) ಮೂರು, ನಾವು ಕಲ್ತಿದ್ದನ್ನ ನೆನಪಿಸ್ಕೊಳ್ಳೋಕೆ ಪವಿತ್ರಶಕ್ತಿಯ ಸಹಾಯ ಕೊಡ್ತಾನೆ. (ಯೋಹಾ. 14:25, 26) ನಾಲ್ಕು, ನಮ್ಮ ಸಹೋದರ ಸಹೋದರಿಯರಿಂದಾನೂ ಸಹಾಯ ಮಾಡ್ತಾನೆ. ಹೀಗೆ ಯೆಹೋವ ನಮ್ಮ ಬೆನ್ನೆಲುಬಾಗಿ ನಿಂತಿರೋದ್ರಿಂದ, ನಮ್ಮ ಸಹೋದರ ಸಹೋದರಿಯರು ನಮ್ಮ ಕೈ ಹಿಡಿದಿರೋದ್ರಿಂದ ನಾವು ಸಿಹಿಸುದ್ದಿಯನ್ನ ಖುಷಿಖುಷಿಯಾಗಿ ಸಾರೋಕಾಗುತ್ತೆ.

ಹೊಂದ್ಕೊಳ್ಳೋಕೆ ಕಲಿರಿ, ಒಳ್ಳೇ ವಿಷ್ಯಗಳಿಗೆ ಗಮನ ಕೊಡಿ

11. ತುಂಬ ಜನ್ರಿಗೆ ಸಿಹಿಸುದ್ದಿ ಸಾರಬೇಕಂದ್ರೆ ಏನು ಮಾಡಬೇಕು? (ಚಿತ್ರನೂ ನೋಡಿ.)

11 ನೀವು ಮನೆಮನೆ ಸೇವೆ ಮಾಡುವಾಗ ತುಂಬ ಜನ ಸಿಗಲಿಲ್ಲಾಂದ್ರೆ ಬೇಜಾರು ಮಾಡ್ಕೊಬೇಡಿ. ನಿಮ್ಮ ಟೆರಿಟೊರಿಯಲ್ಲಿ ಇರೋ ಜನ ಎಲ್ಲಿಗೆ ಹೋಗಿರಬಹುದು ಅಂತ ಯೋಚ್ನೆ ಮಾಡಿ. (ಅ. ಕಾ. 16:13) ಅವರು ಕೆಲಸಕ್ಕೆ ಹೋಗಿರಬಹುದು, ಶಾಪಿಂಗಿಗೆ ಹೋಗಿರಬಹುದು ಅಥವಾ ಬೇರೆ ಕೆಲಸದ ಮೇಲೆ ಹೊರಗಡೆ ಹೋಗಿರಬಹುದು. ಹಾಗಾಗಿ ಬೀದಿ ಸಾಕ್ಷಿಕಾರ್ಯ ಮಾಡೋಕಾಗುತ್ತಾ ಅಂತ ನೋಡಿ. “ನಾನು ಜಾಸ್ತಿ ಸೇವೆ ಮಾಡೋಕೆ ಶಾಪಿಂಗ್‌ ಮಾಲ್‌ಗಳಿಗೆ ಮತ್ತು ಜನ ತುಂಬಿರೋ ಜಾಗಗಳಿಗೆ ಹೋಗ್ತೀನಿ” ಅಂತ ಜಾಷುವ ಅನ್ನೋ ಸಹೋದರ ಹೇಳ್ತಾರೆ. ಅವರು ಮತ್ತು ಅವ್ರ ಹೆಂಡ್ತಿ ಬ್ರಿಜೆಟ್‌ ಸಂಜೆ ಹೊತ್ತಲ್ಲಿ ಮತ್ತು ಭಾನುವಾರ ಮಧ್ಯಾಹ್ನ ಮನೆಮನೆ ಸೇವೆ ಮಾಡ್ತಾರೆ. ಇದ್ರಿಂದ ಅವ್ರಿಗೆ ಜಾಸ್ತಿ ಜನ್ರ ಜೊತೆ ಮಾತಾಡೋಕಾಗಿದೆ.—ಎಫೆ. 5:15, 16.

ಆ ಸಹೋದರಿ ವ್ಯಾಪಾರ ಮಾಡ್ತಿರೋ ಒಬ್ಬ ಸ್ತ್ರೀಗೆ jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡ್ತಿದ್ದಾರೆ.

ಹೊಂದ್ಕೊಳ್ಳೋಕೆ ಕಲಿರಿ (ಪ್ಯಾರ 11 ನೋಡಿ)


12. ಜನ್ರು ಏನನ್ನ ನಂಬ್ತಾರೆ ಮತ್ತು ಅವ್ರ ಮನಸ್ಸಲ್ಲಿ ಏನಿದೆ ಅಂತ ತಿಳ್ಕೊಳ್ಳೋದು ಹೇಗೆ?

12 ನೀವು ಜನ್ರ ಹತ್ರ ಮಾತಾಡುವಾಗ ಅವರು ಅಷ್ಟು ಆಸಕ್ತಿ ತೋರಿಸಿಲ್ಲಾಂದ್ರೆ ಏನು ಮಾಡೋದು? ಅವರು ಏನನ್ನ ನಂಬ್ತಾರೆ, ಅವ್ರಿಗೆ ಯಾವ ಚಿಂತೆ ಇದೆ ಅಂತ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡಿ. ಜಾಷುವ ಮತ್ತು ಬ್ರಿಜೆಟ್‌ ಕರಪತ್ರದಲ್ಲಿರೋ ಪ್ರಶ್ನೆನ ಜನ್ರ ಹತ್ರ ಕೇಳ್ತಿದ್ರು. ಉದಾಹರಣೆಗೆ ಬೈಬಲ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅನ್ನೋ ಕರಪತ್ರ ತೋರಿಸಿ “ಕೆಲವರು ‘ಬೈಬಲ್‌ ದೇವ್ರಿಂದ ಬಂದಿದೆ’ ಅಂತ ಹೇಳ್ತಾರೆ, ಇನ್ನು ಕೆಲವರು ‘ಇಲ್ಲ’ ಅಂತ ಹೇಳ್ತಾರೆ. ನಿಮಗೇನು ಅನಿಸುತ್ತೆ?” ಅಂತ ಕೇಳ್ತಿದ್ರು. ಇದು ಅವ್ರಿಗೆ ಮಾತನ್ನ ಮುಂದುವರಿಸೋಕೆ ಸಹಾಯ ಮಾಡ್ತಿತ್ತು.

13. ನಾವು ಹೇಳೋದನ್ನ ಜನ ಕೇಳಲಿಲ್ಲ ಅಂದ್ರೂ ನಾವು ನಮ್ಮ ಗುರಿ ಮುಟ್ಟಿದ್ದೀವಿ ಅಂತ ಯಾಕೆ ಹೇಳಬಹುದು? (ಜ್ಞಾನೋಕ್ತಿ 27:11)

13 ನಾವು ಹೇಳೋದನ್ನ ಜನ ಕೇಳಲಿಲ್ಲ ಅಂದ್ರೂ ನಾವು ನಮ್ಮ ಗುರಿ ಮುಟ್ಟಿದ್ದೀವಿ ಅಂತ ಅರ್ಥ. ಯಾಕಂದ್ರೆ ಯೆಹೋವ ಮತ್ತು ಯೇಸು ಕೊಟ್ಟಿರೋ ಕೆಲಸನ ನಾವು ಮಾಡಿದ್ದೀವಿ, ಅವ್ರ ಬಗ್ಗೆ ಜನ್ರಿಗೆ ಸಾಕ್ಷಿ ಕೊಟ್ಟಿದ್ದೀವಿ. (ಅ. ಕಾ. 10:42) ನಮಗೆ ಮಾತಾಡೋಕೆ ಯಾರೂ ಸಿಗಲಿಲ್ಲ ಅಂದ್ರೂ ನಾವು ಹೇಳೋದನ್ನ ಯಾರೂ ಕೇಳಿಸ್ಕೊಳ್ತಿಲ್ಲ ಅಂದ್ರೂ ನಾವು ಖುಷಿಯಾಗಿ ಇರಬಹುದು. ಯಾಕಂದ್ರೆ ನಾವು ಹಾಕೋ ಪ್ರಯತ್ನ ನೋಡಿ ಯೆಹೋವ ನಮ್ಮನ್ನ ಮೆಚ್ಕೊಳ್ತಾನೆ ಅನ್ನೋ ಸಮಾಧಾನ ನಮಗಿರುತ್ತೆ.—ಜ್ಞಾನೋಕ್ತಿ 27:11 ಓದಿ.

14. ಸಭೆಲಿ ಯಾರಿಗಾದ್ರೂ ಬೈಬಲ್‌ ಕಲಿಯೋಕೆ ಆಸಕ್ತಿ ತೋರಿಸಿದ ವ್ಯಕ್ತಿ ಸಿಕ್ಕಾಗ ನಾವ್ಯಾಕೆ ಖುಷಿಪಡ್ತೀವಿ?

14 ನಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಯಾರಾದ್ರೂ ಆಸಕ್ತಿ ತೋರಿಸಿದ ವ್ಯಕ್ತಿ ಸಿಕ್ಕಿದ್ರೆ, ಅವ್ರ ಜೊತೆ ನಾವೂ ಖುಷಿಪಡ್ತೀವಿ. ಯಾಕಂದ್ರೆ ಈ ನಮ್ಮ ಕೆಲಸನ ಒಂದು ಕಾವಲಿನಬುರುಜು ಕಳೆದುಹೋಗಿರೋ ಒಂದು ಮಗು ಹುಡುಕೋದಕ್ಕೆ ಹೋಲಿಸಿತ್ತು. ಒಂದು ಮಗು ಕಳೆದುಹೋದ್ರೆ ಎಲ್ರೂ ಹುಡುಕ್ತಾ ಇರ್ತಾರೆ, ಆದ್ರೆ ಕೊನೆಗೆ ಆ ಮಗು ಒಬ್ರಿಗೆ ಸಿಕ್ಕಾಗ ಅವ್ರಷ್ಟೇ ಅಲ್ಲ, ಎಲ್ರೂ ಖುಷಿ ಪಡ್ತಾರೆ. ಶಿಷ್ಯರಾಗಿ ಮಾಡೋ ಕೆಲಸನೂ ಅದೇ ತರಾನೇ. ನಾವೆಲ್ರೂ ಸಿಹಿಸುದ್ದಿ ಸಾರ್ತೀವಿ. ಆದ್ರೆ ಯಾರಿಗಾದ್ರು ಒಬ್ರಿಗೆ ಆಸಕ್ತಿ ತೋರಿಸಿದ ವ್ಯಕ್ತಿ ಸಿಕ್ಕಾಗ, ಆ ವ್ಯಕ್ತಿ ಕೂಟಕ್ಕೆ ಬಂದಾಗ ಅವ್ರ ಜೊತೆ ನಾವೂ ಖುಷಿಪಡ್ತೀವಿ.

ಯೆಹೋವನನ್ನ ಮತ್ತು ಜನ್ರನ್ನ ಪ್ರೀತಿಸಿ

15. ಖುಷಿಖುಷಿಯಾಗಿ ಸೇವೆ ಮಾಡೋಕೆ ಮತ್ತಾಯ 22:37-39 ಹೇಗೆ ಸಹಾಯ ಮಾಡುತ್ತೆ? (ಚಿತ್ರನೂ ನೋಡಿ.)

15 ನಮಗೆ ಯೆಹೋವನ ಮೇಲೆ ಮತ್ತು ಜನ್ರ ಮೇಲೆ ಪ್ರೀತಿಯಿದ್ರೆ ಖುಷಿಖುಷಿಯಾಗಿ ಸಿಹಿಸುದ್ದಿ ಸಾರೋಕೆ ಆಗುತ್ತೆ. (ಮತ್ತಾಯ 22:37-39 ಓದಿ.) ನಾವು ಸಿಹಿಸುದ್ದಿ ಸಾರೋದನ್ನ ನೋಡುವಾಗ ಯೆಹೋವನಿಗೆ ಎಷ್ಟು ಖುಷಿಯಾಗುತ್ತೆ ಅಂತ ಸ್ವಲ್ಪ ನೆನಪಿಸ್ಕೊಳ್ಳಿ. ಬೈಬಲ್‌ ಕಲಿಯೋಕೆ ಶುರುಮಾಡಿದಾಗ ಜನ್ರು ಎಷ್ಟು ಖುಷಿಯಾಗಿ ಇರ್ತಾರೆ ಅಂತ ಯೋಚ್ನೆ ಮಾಡಿ. ನಾವು ಮಾಡೋ ಕೆಲಸ ಜನ್ರ ಜೀವನೇ ಉಳಿಸುತ್ತೆ ಅಂತ ನೆನಸ್ಕೊಂಡಾಗ ನಮಗೆ ಎಷ್ಟು ಸಮಾಧಾನ ಆಗುತ್ತೆ ಅಲ್ವಾ?—ಯೋಹಾ. 6:40; 1 ತಿಮೊ. 4:16.

ಇಬ್ರು ಸಹೋದರಿಯರು ಮನೆಮನೆ ಸೇವೆ ಮಾಡ್ತಿದ್ದಾರೆ. ಮುಂಚೆ ಭಯ ಪಡ್ತಿದ್ದ ಆ ಸಹೋದರಿ ಈಗ ಧೈರ್ಯದಿಂದ ಒಬ್ಬ ಸ್ತ್ರೀಗೆ ನಮ್ಮ ಪತ್ರಿಕೆ ತೋರಿಸಿ ಮಾತಾಡ್ತಿದ್ದಾರೆ.

ಯೆಹೋವನ ಮೇಲೆ ಮತ್ತು ಜನ್ರ ಮೇಲೆ ನಾವು ಪ್ರೀತಿ ಬೆಳೆಸ್ಕೊಂಡ್ರೆ ಸಿಹಿಸುದ್ದಿ ಸಾರುವಾಗ ನಾವು ಜಾಸ್ತಿ ಖುಷಿ ಪಡ್ಕೊಳ್ತೀವಿ (ಪ್ಯಾರ 15 ನೋಡಿ)


16. ಹೊರಗೆ ಹೋಗಿ ಸೇವೆ ಮಾಡೋಕೆ ಆಗಲಿಲ್ಲ ಅಂದ್ರೂ ನಾವು ಹೇಗೆ ಖುಷಿಯಾಗಿ ಇರಬಹುದು? ಉದಾಹರಣೆ ಕೊಡಿ.

16 ಕೆಲವೊಮ್ಮೆ ನಿಮಗೆ ಮನೆಯಿಂದ ಹೊರಗೆ ಹೋಗಿ ಸೇವೆ ಮಾಡೋಕೆ ಆಗದೇ ಇರಬಹುದು. ಆದ್ರೂ ಯೆಹೋವ ದೇವರ ಮೇಲೆ ಮತ್ತು ಜನ್ರ ಮೇಲೆ ನಿಮಗೆ ಪ್ರೀತಿ ಇದೆ ಅಂತ ತೋರಿಸೋಕಾಗುತ್ತೆ. ಅದು ಹೇಗೆ? ಸಾಮ್ವೆಲ್‌ ಮತ್ತು ಡ್ಯಾನಿಯ ಅವ್ರ ಅನುಭವ ನೋಡಿ. ಕೋವಿಡ್‌ ಶುರು ಆದಾಗ ಅವರು ಮನೇಲೇ ಇರಬೇಕಾಯ್ತು. ಆಗ ಅವರು ಫೋನಿಂದ ಸಿಹಿಸುದ್ದಿ ಸಾರ್ತಿದ್ರು. ಪತ್ರಗಳನ್ನ ಬರೀತಿದ್ರು ಮತ್ತು ಸ್ಟಡಿಗಳನ್ನ ಜ಼ೂಮ್‌ನಲ್ಲಿ ಮಾಡ್ತಿದ್ರು. ಸಾಮ್ವೆಲ್‌ಗೆ ಕ್ಯಾನ್ಸರ್‌ ಇದ್ದಿದ್ರಿಂದ ಆಗಾಗ ಆಸ್ಪತ್ರೆಗೆ ಹೋಗ್ತಿದ್ರು. ಅಲ್ಲೂ ಅವರು ಸಿಹಿಸುದ್ದಿ ಸಾರ್ತಿದ್ರು. “ಕಷ್ಟಗಳು ಬಂದಾಗ ನಮಗೆ ತುಂಬ ಚಿಂತೆ ಆಗುತ್ತೆ. ಶಕ್ತಿನೇ ಇಲ್ಲದ ಹಾಗಾಗುತ್ತೆ. ಅದನ್ನೆಲ್ಲ ಸಹಿಸ್ಕೊಳ್ಳೋಕೆ ತುಂಬ ಕಷ್ಟ ಆಗುತ್ತೆ. ಆದ್ರೂ ನಾವು ಯೆಹೋವನ ಸೇವೆ ಮಾಡಿದ್ರೆ ಖುಷಿಯಾಗಿ ಇರ್ತೀವಿ” ಅಂತ ಸಾಮ್ವೆಲ್‌ ಹೇಳ್ತಾರೆ. ಇದಷ್ಟೇ ಅಲ್ಲ, ಅವ್ರ ಹೆಂಡತಿ ಡ್ಯಾನಿಯನೂ ಕೆಳಗೆ ಬಿದ್ದು 3 ತಿಂಗಳು ಹಾಸಿಗೆ ಹಿಡಿದುಬಿಟ್ರು. 6 ತಿಂಗಳು ವೀಲ್‌ಚೇರಲ್ಲೇ ಇರಬೇಕಾಯ್ತು. ಆಗ್ಲೂ ಆ ಸಹೋದರಿ ಏನು ಮಾಡಿದ್ರು? “ನನ್ನಿಂದ ಆದಷ್ಟು ನಾನು ಯೆಹೋವನ ಸೇವೆ ಮಾಡಿದೆ. ನನ್ನನ್ನ ನೋಡ್ಕೊಳ್ಳೋಕೆ ಬರ್ತಿದ್ದ ನರ್ಸ್‌ಗೆ, ನಮ್ಮ ಮನೆಗೆ ವಸ್ತುಗಳನ್ನ ತಂದುಕೊಡ್ತಿದ್ದವ್ರಿಗೆ ನಾನು ಸಿಹಿಸುದ್ದಿ ಸಾರಿದೆ. ಅಷ್ಟೇ ಅಲ್ಲ, ಮೆಡಿಕಲ್‌ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಒಬ್ಬ ಸ್ತ್ರೀಗೆ ಫೋನ್‌ ಮಾಡಿ ಯೆಹೋವನ ಬಗ್ಗೆ ಹೇಳಿದೆ” ಅಂತ ಡ್ಯಾನಿಯ ಹೇಳ್ತಾರೆ. ಸಾಮ್ವೆಲ್‌ ಮತ್ತು ಡ್ಯಾನಿಯ ಅವ್ರ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ ಅಂದ್ರೂ ತಮ್ಮಿಂದ ಆದಷ್ಟು ಸೇವೆ ಮಾಡಿದ್ರು. ಅದ್ರಿಂದ ಖುಷಿನೂ ಪಡ್ಕೊಂಡ್ರು.

17. ನಮಗೆ ಸೇವೆಲಿ ಖುಷಿ ಸಿಗಬೇಕಂದ್ರೆ ಏನು ಮಾಡಬೇಕು?

17 ಈ ಲೇಖನದಲ್ಲಿ ಕೊಟ್ಟಿರೋ 5 ವಿಷ್ಯಗಳನ್ನ ಪಾಲಿಸಿದ್ರೆ ನಿಮಗೆ ಸೇವೆಯಲ್ಲಿ ಖುಷಿ ಪಡ್ಕೊಳ್ಳೋಕೆ ಆಗುತ್ತೆ. ಈ 5 ವಿಷ್ಯಗಳನ್ನ ಒಂದು ಅಡುಗೆ ಮಾಡೋಕೆ ಬಳಸೋ ಎಲ್ಲಾ ಪದಾರ್ಥಗಳಿಗೆ ಹೋಲಿಸಬಹುದು. ಅದ್ರಲ್ಲಿ ಒಂದು ಪದಾರ್ಥ ಕಮ್ಮಿ ಆದ್ರೂ ಅಡುಗೆ ರುಚಿಯಾಗಿ ಬರಲ್ಲ. ಅದೇ ತರ ನಾವು ಸೇವೆಯಲ್ಲಿ ಖುಷಿ ಪಡ್ಕೊಬೇಕಂದ್ರೆ ಈ ಐದೂ ವಿಷ್ಯಗಳನ್ನ ಪಾಲಿಸಬೇಕು. ಆಗ ನಾವು ಜನ್ರ ಹತ್ರ ಮಾತಾಡೋಕೆ ಭಯಪಡಲ್ಲ, ಅವರು ಕೇಳಲಿಲ್ಲ ಅಂದ್ರೂ ಬೇಜಾರ್‌ ಮಾಡ್ಕೊಳಲ್ಲ. ಖುಷಿಯಿಂದ ಸೇವೆ ಮಾಡ್ತಾ ಇರ್ತೀವಿ.

ಸೇವೆಲಿ ಖುಷಿ ಪಡ್ಕೊಳ್ಳೋಕೆ ಈ ವಿಷ್ಯಗಳು ನಿಮಗೆ ಹೇಗೆ ಸಹಾಯ ಮಾಡುತ್ತೆ?

  • ಚೆನ್ನಾಗಿ ತಯಾರಿ ಮಾಡೋದು

  • ಧೈರ್ಯಕ್ಕಾಗಿ ಪ್ರಾರ್ಥನೆ ಮಾಡೋದು

  • ಯೆಹೋವನ ಮೇಲೆ ಮತ್ತು ಜನ್ರ ಮೇಲೆ ಪ್ರೀತಿ ಬೆಳೆಸ್ಕೊಳ್ಳೋದು

ಗೀತೆ 95 “ಯೆಹೋವನು ಒಳ್ಳೆಯವನೆಂದು ಸವಿದು ನೋಡಿರಿ”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ