ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w24 ಜುಲೈ ಪು. 20-25
  • ಇಸ್ರಾಯೇಲ್‌ ರಾಜರಿಂದ ಕಲಿಯೋ ಪ್ರಾಮುಖ್ಯ ಪಾಠಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಸ್ರಾಯೇಲ್‌ ರಾಜರಿಂದ ಕಲಿಯೋ ಪ್ರಾಮುಖ್ಯ ಪಾಠಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅವರು ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸಿದ್ರು
  • ಅವರು ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ರು
  • ಯೆಹೋವ ಇಷ್ಟಪಡೋ ತರ ಅವರು ಆತನನ್ನ ಆರಾಧಿಸಿದ್ರು
  • ದೇವರ ಸೇವಕರ ಮಾತುಗಳು ಕಲಿಸೋ ಮುತ್ತಿನಂಥ ಪಾಠಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ತೀರ್ಮಾನಗಳನ್ನ ಮಾಡುವಾಗ ಯೆಹೋವನ ಮೇಲೆ ಭರವಸೆಯಿಡ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • “ಯೆಹೋವ ಜೀವ ಇರೋ ದೇವರು” ಅಂತ ಯಾವಾಗ್ಲೂ ನೆನಪಿಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
  • ದೀನತೆ ತೋರಿಸಿ, ನಿಮಗೆ ಗೊತ್ತಿಲ್ಲದಿರೋ ವಿಷ್ಯಗಳೂ ಇವೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
w24 ಜುಲೈ ಪು. 20-25

ಅಧ್ಯಯನ ಲೇಖನ 30

ಗೀತೆ 52 ನಿನ್ನ ಹೃದಯವನ್ನು ಕಾಪಾಡಿಕೋ

ಇಸ್ರಾಯೇಲ್‌ ರಾಜರಿಂದ ಕಲಿಯೋ ಪ್ರಾಮುಖ್ಯ ಪಾಠಗಳು

“ಆಗ ನೀವು ನೀತಿವಂತನಿಗೂ ಕೆಟ್ಟವನಿಗೂ ಮತ್ತು ದೇವರನ್ನ ಆರಾಧಿಸುವವನಿಗೂ ಆರಾಧಿಸದವನಿಗೂ ಇರೋ ವ್ಯತ್ಯಾಸವನ್ನ ಮತ್ತೊಮ್ಮೆ ನೋಡ್ತೀರ.” —ಮಲಾ. 3:18.

ಈ ಲೇಖನದಲ್ಲಿ ಏನಿದೆ?

ಇಸ್ರಾಯೇಲ್‌ ರಾಜರ ಬಗ್ಗೆ ತಿಳ್ಕೊಳ್ಳುವಾಗ ಯೆಹೋವನನ್ನ ಮೆಚ್ಚಿಸೋಕೆ ನಾವೇನು ಮಾಡಬೇಕು ಅಂತ ಗೊತ್ತಾಗುತ್ತೆ.

1-2. ಇಸ್ರಾಯೇಲನ್ನ ಆಳಿದ ಕೆಲವು ರಾಜರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಇಸ್ರಾಯೇಲನ್ನ ಆಳಿದ 40 ರಾಜರ ಬಗ್ಗೆ ಬೈಬಲಲ್ಲಿದೆ.a ಅದ್ರಲ್ಲಿ ಕೆಲವು ರಾಜರು ಮಾಡಿದ ವಿಷ್ಯಗಳ ಬಗ್ಗೆ ಮುಚ್ಚುಮರೆ ಇಲ್ಲದೆ ತಿಳಿಸಿದೆ. ಅವ್ರಲ್ಲಿದ್ದ ಒಳ್ಳೇ ರಾಜರೂ ಕೆಲವು ಕೆಟ್ಟ ಕೆಲಸಗಳನ್ನ ಮಾಡಿದ್ರು. ಉದಾಹರಣೆಗೆ ಒಳ್ಳೇ ರಾಜನಾದ ದಾವೀದನ ಬಗ್ಗೆ ನೋಡಿ. ಯೆಹೋವ ಅವನ ಬಗ್ಗೆ “ನನ್ನ ಸೇವಕನಾದ ದಾವೀದ . . . ನನ್ನ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನೇ ಮಾಡಿದ ಅವನು ನನ್ನ ಆಜ್ಞೆಗಳನ್ನ ಪಾಲಿಸ್ತಾ ಪೂರ್ಣ ಹೃದಯದಿಂದ ನಾನು ಹೇಳಿದನ್ನ ಕೇಳಿದ” ಅಂತ ಹೇಳಿದನು. (1 ಅರ. 14:8) ಆದ್ರೂ ಅವನು ಮದುವೆ ಆದ ಸ್ತ್ರೀ ಜೊತೆ ವ್ಯಭಿಚಾರ ಮಾಡಿದ. ಅಷ್ಟೇ ಅಲ್ಲ ಅವಳ ಗಂಡನನ್ನ ಯುದ್ಧದಲ್ಲಿ ಕೊಲ್ಲಿಸಿದ.—2 ಸಮು. 11:4, 14, 15.

2 ಯೆಹೋವನಿಗೆ ನಂಬಿಗಸ್ತರಾಗಿ ಇಲ್ಲದೇ ಇದ್ದ ಹೆಚ್ಚಿನ ರಾಜರು ಕೆಲವು ಒಳ್ಳೇ ಕೆಲಸಗಳನ್ನ ಮಾಡಿದ್ರ ಬಗ್ಗೆನೂ ಬೈಬಲ್‌ ಹೇಳುತ್ತೆ. ಉದಾಹರಣೆಗೆ ರೆಹಬ್ಬಾಮ. ಯೆಹೋವನ ದೃಷ್ಟಿಯಲ್ಲಿ “ಅವನು ಕೆಟ್ಟ ಕೆಲಸಗಳನ್ನ ಮಾಡಿದ.” (2 ಪೂರ್ವ. 12:14) ಆದ್ರೂ 10 ಕುಲಗಳ ವಿರುದ್ಧ ಯುದ್ಧಕ್ಕೆ ಹೋಗಬೇಡ ಅಂತ ಯೆಹೋವ ಹೇಳಿದಾಗ ಅವನು ಕೇಳಿದ. ತನ್ನ ರಾಜ್ಯದಲ್ಲಿದ್ದ ದೇವಜನ್ರನ್ನ ಶತ್ರುಗಳಿಂದ ಕಾಪಾಡೋಕೆ ಭದ್ರಕೋಟೆಗಳನ್ನ ಕಟ್ಟಿದ.—1 ಅರ. 12:21-24; 2 ಪೂರ್ವ. 11:5-12.

3. (ಎ) ನಮ್ಮ ಮನಸ್ಸಿಗೆ ಯಾವ ಪ್ರಶ್ನೆ ಬರಬಹುದು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

3 ಆದ್ರೆ ನಮ್ಮ ಮನಸ್ಸಿಗೆ ಒಂದು ಪ್ರಶ್ನೆ ಬರಬಹುದು. ಇಸ್ರಾಯೇಲ್‌ ರಾಜರು ಒಳ್ಳೇದನ್ನೂ ಮಾಡಿದ್ರು, ಕೆಟ್ಟದ್ದನ್ನೂ ಮಾಡಿದ್ರು. ಆದ್ರೆ ಯೆಹೋವ ಅವರು ನಂಬಿಗಸ್ತರಾ ಅಲ್ವಾ ಅಂತ ಹೇಗೆ ತೀರ್ಮಾನ ಮಾಡಿದನು? ಇದಕ್ಕೆ ಉತ್ರ ತಿಳ್ಕೊಂಡ್ರೆ ಯೆಹೋವನನ್ನ ಮೆಚ್ಚಿಸೋಕೆ ನಾವೇನು ಮಾಡಬೇಕು ಅಂತ ಗೊತ್ತಾಗುತ್ತೆ. ಆ ರಾಜರು ನಂಬಿಗಸ್ತರಾ ಅಲ್ವಾ ಅಂತ ಯೆಹೋವ ತೀರ್ಮಾನ ಮಾಡುವಾಗ ಈ ಮೂರು ವಿಷ್ಯಗಳನ್ನ ಆತನು ನೋಡಿದನು. ಅವರು ಹೃದಯದಲ್ಲಿ ಎಂಥ ವ್ಯಕ್ತಿ ಆಗಿದ್ದಾರೆ? ಅವರು ಪಶ್ಚಾತ್ತಾಪಪಟ್ಟಿದ್ರಾ? ಅವರು ಸತ್ಯಾರಾಧನೆಯನ್ನ ಮುಂದುವರಿಸಿದ್ರಾ? ಅಂತ ನೋಡಿದನು. ಈ ಮೂರು ವಿಷ್ಯಗಳ ಬಗ್ಗೆ ನಾವೀಗ ತಿಳ್ಕೊಳ್ಳೋಣ.

ಅವರು ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸಿದ್ರು

4. ಯೆಹೋವನಿಗೆ ನಂಬಿಗಸ್ತರಾಗಿದ್ದ ಮತ್ತು ನಂಬಿಗಸ್ತರಾಗಿರದ ರಾಜರ ಮಧ್ಯೆ ಯಾವ ಒಂದು ವ್ಯತ್ಯಾಸ ಇತ್ತು?

4 ಯೆಹೋವನನ್ನ ಮೆಚ್ಚಿಸಿದ ರಾಜರು ಆತನನ್ನ ಪೂರ್ಣ ಹೃದಯದಿಂದb ಆರಾಧಿಸಿದ್ರು. ಉದಾಹರಣೆಗೆ ಒಳ್ಳೇ ರಾಜನಾದ ಯೆಹೋಷಾಫಾಟ “ಪೂರ್ಣ ಹೃದಯದಿಂದ ಯೆಹೋವನಿಗಾಗಿ ಹುಡುಕಿದ” ಅಂತ ಬೈಬಲ್‌ ಹೇಳುತ್ತೆ. (2 ಪೂರ್ವ. 22:9) ಒಳ್ಳೇ ರಾಜನಾದ ಯೋಷೀಯನ ಬಗ್ಗೆ “ಪೂರ್ಣ ಹೃದಯದಿಂದ . . . ಯೆಹೋವನ ಕಡೆ ವಾಪಸ್‌ ಬಂದ. ಅವನಿಗಿಂತ ಮುಂಚೆ ಇದ್ದ ರಾಜರಾಗಲಿ ಅವನ ನಂತ್ರ ಬಂದ ರಾಜರಾಗಲಿ ಯಾರೂ ಅವನ ತರ ಇರಲಿಲ್ಲ” ಅಂತ ಬೈಬಲ್‌ ಹೇಳುತ್ತೆ. (2 ಅರ. 23:25) ಹೋಗ್ತಾಹೋಗ್ತಾ ಕೆಟ್ಟದ್ದನ್ನ ಮಾಡಿದ ರಾಜ ಸೊಲೊಮೋನನ ಬಗ್ಗೆ ಏನು ಹೇಳುತ್ತೆ? “ಅವನ ಹೃದಯ . . . ಸಂಪೂರ್ಣವಾಗಿ ಯೆಹೋವ ದೇವರ ಕಡೆ ಇರಲಿಲ್ಲ” ಅಂತ ಹೇಳುತ್ತೆ. (1 ಅರ. 11:4) ಯೆಹೋವನಿಗೆ ನಿಯತ್ತಾಗಿ ಇಲ್ಲದೇ ಇದ್ದ ರಾಜ ಅಬೀಯಾಮನ ಬಗ್ಗೆನೂ “ಅವನ ಹೃದಯ . . . ಸಂಪೂರ್ಣವಾಗಿ ಯೆಹೋವ ದೇವರ ಕಡೆ ಇರಲಿಲ್ಲ” ಅಂತ ಬೈಬಲ್‌ ಹೇಳುತ್ತೆ.—1 ಅರ. 15:3.

5. ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸೋದು ಅಂದ್ರೇನು?

5 ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸೋದು ಅಂದ್ರೇನು? ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸೋ ಒಬ್ಬ ವ್ಯಕ್ತಿ, ಏನೋ ಆರಾಧನೆ ಮಾಡಬೇಕಲ್ಲಾ ಅಂತ ಆತನನ್ನ ಆರಾಧಿಸಲ್ಲ, ಬದ್ಲಿಗೆ ಆತನ ಮೇಲೆ ಪ್ರೀತಿ, ಭಕ್ತಿ ಇರೋದ್ರಿಂದ ಆರಾಧಿಸ್ತಾನೆ. ಅಷ್ಟೇ ಅಲ್ಲ ಅವನ ಜೀವ ಇರೋ ತನಕ ಯೆಹೋವನನ್ನ ಹಾಗೇ ಆರಾಧಿಸ್ತಾನೆ.

6. ನಾವು ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸೋಕೆ ಏನು ಮಾಡಬೇಕು? (ಜ್ಞಾನೋಕ್ತಿ 4:23; ಮತ್ತಾಯ 5:29, 30)

6 ನಂಬಿಗಸ್ತರಾಗಿದ್ದ ರಾಜರ ತರ ನಾವೂ ಪೂರ್ಣ ಹೃದಯದಿಂದ ಯೆಹೋವನನ್ನ ಆರಾಧಿಸೋಕೆ ಏನು ಮಾಡಬೇಕು? ಯೆಹೋವನ ಜೊತೆ ಇರೋ ಸಂಬಂಧನ ಹಾಳು ಮಾಡೋ ಯಾವುದೇ ವಿಷ್ಯಗಳನ್ನ ನಾವು ಮಾಡಬಾರದು. ಉದಾಹರಣೆಗೆ, ನಾವು ಆರಿಸ್ಕೊಳ್ಳೋ ಮನೋರಂಜನೆ ನಮ್ಮ ಸಮಯ ಹಾಳು ಮಾಡ್ತಾ ಇದ್ಯಾ? ನಾವು ಮಾಡ್ಕೊಂಡಿರೋ ಸ್ನೇಹಿತರಿಂದ ಹಣನೇ ಸರ್ವಸ್ವ ಅನ್ನೋ ಯೋಚ್ನೆ ನಮಗೆ ಬರ್ತಾ ಇದ್ಯಾ? ಅಂತ ನಾವು ಯೋಚಿಸಬೇಕು. ಒಂದುವೇಳೆ ಯೆಹೋವನ ಜೊತೆಗಿರೋ ನಮ್ಮ ಸಂಬಂಧ ಹಾಳಾಗ್ತಿದೆ ಅಂತ ಗೊತ್ತಾದ್ರೆ ತಕ್ಷಣ ನಮ್ಮ ಯೋಚ್ನೆಯನ್ನ ಮತ್ತು ನಡ್ಕೊಳ್ಳೋ ರೀತಿಯನ್ನ ಬದಲಾಯಿಸ್ಕೊಬೇಕು.—ಜ್ಞಾನೋಕ್ತಿ 4:23; ಮತ್ತಾಯ 5:29, 30 ಓದಿ.

7. ಕೆಟ್ಟ ವಿಷ್ಯಗಳಿಂದ ನಾವ್ಯಾಕೆ ದೂರ ಇರಬೇಕು?

7 ನಮ್ಮ ಪೂರ್ಣ ಹೃದಯ ಯೆಹೋವನ ಕಡೆ ಇರಬೇಕಂದ್ರೆ ನಮ್ಮ ಹೃದಯ ಆಚೆ-ಈಚೆ ಹೋಗದ ಹಾಗೆ ನಾವು ನೋಡ್ಕೊಬೇಕು. ನಾವು ಈ ವಿಷ್ಯದಲ್ಲಿ ಹುಷಾರಾಗಿಲ್ಲ ಅಂದ್ರೆ ಏನಾಗಬಹುದು? ಯೆಹೋವನ ಸೇವೆಯಲ್ಲಿ ಬಿಜ಼ಿಯಾಗಿದ್ರೆ ಸಾಕು, ಕೆಟ್ಟ ಸಹವಾಸದಿಂದ ನಮಗೇನೂ ತೊಂದ್ರೆ ಆಗಲ್ಲ ಅಂತ ನಾವು ಅಂದ್ಕೊಂಡು ಬಿಡಬಹುದು. ಇದನ್ನ ಅರ್ಥಮಾಡ್ಕೊಳ್ಳೋಕೆ ಒಂದು ಉದಾಹರಣೆ ನೋಡಿ. ತುಂಬ ಗಾಳಿ ಮತ್ತು ಧೂಳಿರೋ ಒಂದು ದಿನ ನಿಮ್ಮ ಮನೆಯನ್ನ ಕ್ಲೀನ್‌ ಮಾಡ್ತಿರ ಅಂದ್ಕೊಳ್ಳಿ. ನೀವು ಕ್ಲೀನ್‌ ಮಾಡಿ ಆದ್ಮೇಲೆ ಮನೆಯ ಬಾಗಿಲನ್ನ ಮತ್ತು ಕಿಟಕಿಯನ್ನ ಹಾಗೇ ತೆರೆದು ಇಡ್ತೀರಾ? ಇಲ್ಲಾ ಅಲ್ವಾ? ತೆರೆದಿಟ್ರೆ ಮತ್ತೆ ಮನೆ ಧೂಳಾಗುತ್ತೆ ಅಲ್ವಾ? ಅದೇ ತರ ಯೆಹೋವನ ಜೊತೆ ಇರೋ ನಮ್ಮ ಸ್ನೇಹ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ಒಳ್ಳೇ ಕೆಲಸಗಳನ್ನ ಮಾಡಬೇಕು ನಿಜ. ಅದಷ್ಟೇ ಅಲ್ಲ ಧೂಳು “ಗಾಳಿ” ಬಂದಾಗ ಬಾಗಿಲನ್ನ ಹೇಗೆ ಮುಚ್ಚುತ್ತೀವೋ ಹಾಗೇ ಕೆಟ್ಟ ವಿಷ್ಯಗಳಿಂದ ಮತ್ತು ಕೆಟ್ಟ ಮನೋಭಾವದಿಂದ ದೂರ ಇರಬೇಕು. ಆಗ ನಮ್ಮ ಪೂರ್ಣ ಹೃದಯ ಯೆಹೋವನ ಕಡೆ ಇರುತ್ತೆ.—ಎಫೆ. 2:2.

ಅವರು ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ರು

8-9. ತಮ್ಮ ತಪ್ಪನ್ನ ತಿಳಿಸಿದಾಗ ರಾಜ ದಾವೀದ ಮತ್ತು ರಾಜ ಹಿಜ್ಕೀಯ ಏನು ಮಾಡಿದ್ರು? (ಚಿತ್ರ ನೋಡಿ.)

8 ಈಗಾಗ್ಲೇ ನೋಡಿದ ಹಾಗೆ ರಾಜ ದಾವೀದ ಒಂದು ದೊಡ್ಡ ತಪ್ಪು ಮಾಡಿದ. ಆ ತಪ್ಪಿನ ಬಗ್ಗೆ ಪ್ರವಾದಿ ನಾತಾನ ಬಂದು ದಾವೀದನ ಹತ್ರ ಹೇಳಿದಾಗ ಅವನು ಆ ತಪ್ಪನ್ನ ದೀನತೆಯಿಂದ ಒಪ್ಕೊಂಡ ಮತ್ತು ಪಶ್ಚಾತ್ತಾಪಪಟ್ಟ. (2 ಸಮು. 12:13) ಕೀರ್ತನೆ 51​ನ್ನ ಓದುವಾಗ ದಾವೀದ ಮನಸ್ಸಾರೆ ಪಶ್ಚಾತ್ತಾಪಪಟ್ಟ ಅಂತ ನಮಗೆ ಗೊತ್ತಾಗುತ್ತೆ. ಅವನು ನಾತಾನನನ್ನ ಯಾಮಾರಿಸೋಕೆ ಅಥವಾ ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಪಶ್ಚಾತ್ತಾಪಪಟ್ಟ ತರ ನಾಟಕ ಆಡ್ಲಿಲ್ಲ. —ಕೀರ್ತ. 51:3, 4, 17, ಮೇಲ್ಬರಹ.

9 ರಾಜ ಹಿಜ್ಕೀಯ ಕೂಡ ತಪ್ಪು ಮಾಡಿದ. ಅವನ ಬಗ್ಗೆ ಬೈಬಲ್‌ “ಅವನ ಹೃದಯದಲ್ಲಿ ಅಹಂಕಾರ ಹುಟ್ಕೊಂಡಿತ್ತು. ಹಾಗಾಗಿ ದೇವರಿಗೆ ಅವನ ಮೇಲೆ, ಯೆಹೂದ ಮತ್ತು ಯೆರೂಸಲೇಮಿನ ಮೇಲೆ ತುಂಬ ಕೋಪ ಬಂತು” ಅಂತ ಹೇಳುತ್ತೆ. (2 ಪೂರ್ವ. 32:25) ಹಿಜ್ಕೀಯ ಯಾಕಿಷ್ಟು ಅಹಂಕಾರ ತೋರಿಸಿದ? ಯೆಹೋವನ ಆಶೀರ್ವಾದದಿಂದ ಅವನು ತುಂಬ ಶ್ರೀಮಂತನಾಗಿದ್ದ, ಆತನ ಸಹಾಯದಿಂದ ಅಶ್ಶೂರ್ಯರ ಸೈನ್ಯವನ್ನ ಸೋಲಿಸಿದ್ದ ಮತ್ತು ಆತನ ಸಹಾಯದಿಂದ ಅವನ ಕಾಯಿಲೆನೂ ವಾಸಿಯಾಗಿತ್ತು. ಈ ಎಲ್ಲಾ ಕಾರಣದಿಂದ ಅವನು ಅಹಂಕಾರ ತೋರಿಸಿರಬಹುದು. ಅವನಿಗೆ ಅಹಂಕಾರ ಇದ್ದಿದ್ರಿಂದ ತನ್ನ ಹತ್ರ ಇದ್ದ ಐಶ್ವರ್ಯನೆಲ್ಲಾ ಬಾಬೆಲಿನವ್ರಿಗೆ ತೋರಿಸಿದ. ಇದನ್ನ ನೋಡಿ ಯೆಹೋವನಿಗೆ ಕೋಪ ಬಂತು. ಇದ್ರ ಬಗ್ಗೆ ಪ್ರವಾದಿ ಯೆಶಾಯ ಅವನಿಗೆ ತಿಳಿಸಿದ. (2 ಅರ. 20:12-18) ಆಗ ಅವನು ದಾವೀದನ ತರ ದೀನತೆಯಿಂದ ತನ್ನ ತಪ್ಪನ್ನ ಒಪ್ಕೊಂಡು ಪಶ್ಚಾತ್ತಾಪಪಟ್ಟ. (2 ಪೂರ್ವ. 32:26) ಹೀಗೆ ಅವನು “ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ.” ಅದಕ್ಕೇ ಆತನು ಅವನನ್ನ ನಂಬಿಗಸ್ತನು ಅಂತ ನೋಡಿದನು.—2 ಅರ. 18:3.

ಚಿತ್ರಗಳು: 1. ನಾತಾನ ಮಾತಾಡುವಾಗ ರಾಜ ದಾವೀದ ಪಶ್ಚಾತ್ತಾಪದಿಂದ ಸ್ವರ್ಗದ ಕಡೆಗೆ ನೋಡ್ತಿದ್ದಾನೆ. 2. ಪ್ರವಾದಿ ಯೆಶಾಯ ಮಾತಾಡುವಾಗ ರಾಜ ಹಿಜ್ಕೀಯ ತುಂಬ ದುಃಖದಿಂದ ತನ್ನ ತಲೆ ಮೇಲೆ ಕೈ ಇಟ್ಟು ಮುಖ ಕೆಳಗೆ ಮಾಡಿದ್ದಾನೆ.

ರಾಜ ದಾವೀದನಿಗೆ ಮತ್ತು ರಾಜ ಹಿಜ್ಕೀಯನಿಗೆ ಅವರು ಮಾಡಿದ ತಪ್ಪನ್ನ ತಿಳಿಸಿದಾಗ ದೀನತೆಯಿಂದ ಅವರು ತಪ್ಪನ್ನ ಒಪ್ಕೊಂಡು ಪಶ್ಚಾತ್ತಾಪ ಪಟ್ರು (ಪ್ಯಾರ 8-9 ನೋಡಿ)


10. ಅಮಚ್ಯನನ್ನ ತಿದ್ದಿದಾಗ ಅವನು ಏನು ಮಾಡಿದ?

10 ರಾಜ ಅಮಚ್ಯನ ಬಗ್ಗೆ ನೋಡಿ. ಅವನು ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ. “ಆದ್ರೆ ಅವನು ಅದನ್ನ ಪೂರ್ಣ ಹೃದಯದಿಂದ ಮಾಡಲಿಲ್ಲ.” (2 ಪೂರ್ವ. 25:2) ಹಾಗಿದ್ರೆ ಅವನು ಏನು ತಪ್ಪು ಮಾಡಿದ? ಯೆಹೋವನ ಸಹಾಯದಿಂದ ಅವನು ಎದೋಮ್ಯರನ್ನ ನಾಶ ಮಾಡಿದ್ಮೇಲೆ ಅವನು ಅವ್ರ ದೇವರನ್ನ ಆರಾಧಿಸಿದ.c ಅವನು ಮಾಡಿದ ತಪ್ಪನ್ನ ಹೇಳೋಕೆ ಒಬ್ಬ ಪ್ರವಾದಿ ಬಂದಾಗ ಅದನ್ನ ಅವನು ಕೇಳಿಸ್ಕೊಳ್ಳಲೇ ಇಲ್ಲ. ಅವನನ್ನ ಹಾಗೇ ಕಳಿಸಿಬಿಟ್ಟ.—2 ಪೂರ್ವ. 25:14-16.

11. ಯೆಹೋವ ನಮ್ಮನ್ನ ಕ್ಷಮಿಸಬೇಕಂದ್ರೆ ನಾವೇನು ಮಾಡಬೇಕು? (2 ಕೊರಿಂಥ 7:9, 11) (ಚಿತ್ರಗಳನ್ನ ನೋಡಿ.)

11 ಇವ್ರಿಂದ ನಾವೇನು ಕಲಿತೀವಿ? ನಾವೂ ಕೂಡ ತಪ್ಪು ಮಾಡಿದಾಗ ಅದಕ್ಕೆ ಪಶ್ಚಾತ್ತಾಪ ಪಡಬೇಕು ಮತ್ತು ಆ ತಪ್ಪನ್ನ ಮಾಡದೇ ಇರೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬೇಕು. ಕೆಲವೊಮ್ಮೆ ಹಿರಿಯರು ನಮಗೆ ಯಾವುದಾದ್ರೂ ಒಂದು ವಿಷ್ಯಕ್ಕೆ ಸಲಹೆ ಕೊಡಬಹುದು. ಆದ್ರೆ ಅದು ತುಂಬ ಚಿಕ್ಕದು ಅಂತ ನಮಗೆ ಅನಿಸಬಹುದು. ಆಗ ನಾವು ಏನು ಮಾಡಬೇಕು? ಯೆಹೋವ ನಮ್ಮನ್ನ ಪ್ರೀತಿಸಲ್ಲ, ಹಿರಯರು ನಮ್ಮನ್ನ ಇಷ್ಟಪಡಲ್ಲ ಅಂತ ನಾವು ಅಂದ್ಕೊಬಾರದು. ಇಸ್ರಾಯೇಲಿನ ಒಳ್ಳೇ ರಾಜರಿಗೆ ಕೂಡ ಸಲಹೆ ಮತ್ತು ಶಿಸ್ತು ಬೇಕಿತ್ತು. (ಇಬ್ರಿ. 12:6) ಹಾಗಾಗಿ ನಮಗೂ ಏನಾದ್ರೂ ಸಲಹೆ ಸಿಕ್ಕಾಗ (1) ದೀನತೆಯಿಂದ ತಪ್ಪನ್ನ ಒಪ್ಕೊಬೇಕು (2) ಬೇಕಾದ ಬದಲಾವಣೆ ಮಾಡಬೇಕು (3) ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡ್ತಾ ಇರಬೇಕು. ಹೀಗೆ ನಾವು ನಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ರೆ ಯೆಹೋವ ಖಂಡಿತ ನಮ್ಮನ್ನ ಕ್ಷಮಿಸ್ತಾನೆ. —2 ಕೊರಿಂಥ 7:9, 11 ಓದಿ.

ಚಿತ್ರಗಳು: 1. ಒಬ್ಬ ಯುವ ಹಿರಿಯ ಸಹೋದರನೊಬ್ಬನ ಜೊತೆ ಮಾತಾಡ್ತಿದ್ದಾನೆ. ಆ ಸಹೋದರ ತನ್ನ ಪಕ್ಕದಲ್ಲಿದ್ದ ಮದ್ಯದ ಬಾಟಲಿಯನ್ನ ಮತ್ತು ಅರ್ಧ ಮದ್ಯ ಇರೋ ಗ್ಲಾಸನ್ನ ನೋಡ್ತಿದ್ದಾನೆ. 2. ಆ ಸಹೋದರ ಬೈಬಲನ್ನ ಮತ್ತು ಎಂದೆಂದೂ ಖುಷಿಯಾಗಿ ಬಾಳೋಣ ಪುಸ್ತಕದ ಪಾಠ 43ನ್ನ ಬಳಸಿ ಸಂಶೋಧನೆ ಮಾಡ್ತಿದ್ದಾನೆ 3. ಆ ಸಹೋದರ ಮತ್ತು ಯುವ ಹಿರಿಯ ಮನೆಮನೆ ಸೇವೆಯನ್ನ ಒಟ್ಟಿಗೆ ಮಾಡ್ತಿದ್ದಾರೆ.

ನಮ್ಮ ತಪ್ಪನ್ನ ತಿಳಿಸಿದಾಗ (1) ದೀನತೆ ತೋರಿಸಬೇಕು (2) ಬೇಕಾದ ಬದಲಾವಣೆ ಮಾಡಬೇಕು (3) ಪೂರ್ಣ ಹೃದಯದಿಂದ ಯೆಹೋವನ ಸೇವೆ ಮಾಡ್ತಾ ಇರಬೇಕು (ಪ್ಯಾರ 11 ನೋಡಿ)f


ಯೆಹೋವ ಇಷ್ಟಪಡೋ ತರ ಅವರು ಆತನನ್ನ ಆರಾಧಿಸಿದ್ರು

12. ಯೆಹೋವ ಯಾಕೆ ಕೆಲವು ರಾಜರನ್ನ ನಂಬಿಗಸ್ತರು ಅಂತ ನೋಡಿದನು?

12 ಯೆಹೋವ ಯಾವ ರಾಜರನ್ನ ನಂಬಿಗಸ್ತರು ಅಂತ ನೋಡಿದನೋ ಅವರು ಆತನಿಗೆ ಇಷ್ಟ ಆಗೋ ಹಾಗೆ ಆತನನ್ನ ಆರಾಧಿಸಿದ್ರು. ಅಷ್ಟೇ ಅಲ್ಲ ಅಲ್ಲಿದ್ದ ಜನ್ರಿಗೆ ಆತನನ್ನ ಆರಾಧಿಸೋಕೆ ಪ್ರೋತ್ಸಾಹ ಕೊಟ್ರು. ಈಗಾಗ್ಲೇ ನೋಡಿದ ತರ ಅವರು ಕೆಲವೊಂದು ತಪ್ಪುಗಳನ್ನ ಮಾಡಿದ್ರು ನಿಜ. ಆದ್ರೂ ಅವರು ಯೆಹೋವನನ್ನ ಮಾತ್ರ ಆರಾಧಿಸಿದ್ರು ಮತ್ತು ದೇಶದಲ್ಲಿದ್ದ ಮೂರ್ತಿಗಳನ್ನ ತೆಗೆದುಹಾಕೋಕೆ ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿದ್ರು.d

13. ಅಹಾಬ ನಂಬಿಗಸ್ತನಲ್ಲ ಅಂತ ಯೆಹೋವ ಯಾಕೆ ತೀರ್ಪು ಮಾಡಿದನು?

13 ಯೆಹೋವ ಕೆಲವು ರಾಜರನ್ನ ನಂಬಿಗಸ್ತರಲ್ಲ ಅಂತ ತೀರ್ಪು ಮಾಡಿದನು. ಯಾಕೆ? ಅವರು ಒಂದು ಕೆಲಸನೂ ಒಳ್ಳೇದು ಮಾಡಿಲ್ಲ ಅಂತನಾ? ಹಾಗಲ್ಲ. ಉದಾಹರಣೆಗೆ, ಕೆಟ್ಟ ರಾಜನಾದ ಅಹಾಬನ ಬಗ್ಗೆ ನೋಡಿ. ತನ್ನಿಂದಾಗಿ ನಾಬೋತನ ಕೊಲೆ ಆಗಿದೆ ಅಂತ ಗೊತ್ತಾದಾಗ ಅವನು ಸ್ವಲ್ಪ ದೀನತೆ ತೋರಿಸಿದ ಮತ್ತು ದುಃಖಪಟ್ಟ. (1 ಅರ. 21:27-29) ಅಷ್ಟೇ ಅಲ್ಲ ಅವನು ಪಟ್ಟಣಗಳನ್ನು ಕಟ್ಟಿದ ಮತ್ತು ಇಸ್ರಾಯೇಲ್ಯರನ್ನ ಉಳಿಸೋಕೆ ಯುದ್ಧ ಮಾಡಿ ಜಯಗಳಿಸಿದ. (1 ಅರ. 20:21, 29; 22:39) ಆದ್ರೆ ಅವನು ಒಂದು ಕೆಟ್ಟ ಕೆಲಸ ಮಾಡಿದ. ಅದೇನಂದ್ರೆ ಅವನು ತನ್ನ ಹೆಂಡತಿಯ ಮಾತು ಕೇಳಿ ಮೂರ್ತಿ ಪೂಜೆ ಮಾಡೋಕೆ ಜನ್ರಿಗೆ ಕುಮ್ಮಕ್ಕು ಕೊಟ್ಟ. ಅವನು ಮಾಡಿದ ಈ ತಪ್ಪಿಗೆ ಪಶ್ಚಾತ್ತಾಪ ಪಡ್ಲೇ ಇಲ್ಲ.—1 ಅರ. 21:25, 26.

14. (ಎ) ರಾಜ ರೆಹಬ್ಬಾಮ ನಂಬಿಗಸ್ತನಲ್ಲ ಅಂತ ಯೆಹೋವ ಯಾಕೆ ತೀರ್ಮಾನ ಮಾಡಿದನು? (ಬಿ) ನಂಬಿಗಸ್ತರಾಗಿಲ್ಲದ ಹೆಚ್ಚಿನ ರಾಜರು ಯಾವ ತಪ್ಪನ್ನ ಮಾಡಿದರು?

14 ನಂಬಿಗಸ್ತನಾಗಿ ಇಲ್ಲದೇ ಇದ್ದ ಇನ್ನೊಬ್ಬ ರಾಜ ರೆಹಬ್ಬಾಮನ ಬಗ್ಗೆ ನೋಡಿ. ಅವನು ತುಂಬ ಒಳ್ಳೇ ಕೆಲಸಗಳನ್ನ ಮಾಡಿದ. ಆದ್ರೆ ಅಧಿಕಾರ ಸಿಕ್ಕಿ ಬಲಿಷ್ಠನಾದ ಮೇಲೆ ಯೆಹೋವನ ಮಾತು ಕೇಳೋದನ್ನ ಬಿಟ್ಟುಬಿಟ್ಟ. (2 ಪೂರ್ವ. 12:1) ಹೀಗೆ ಕೆಲವೊಂದು ಸಲ ಅವನು ಯೆಹೋವ ದೇವರನ್ನ ಆರಾಧಿಸಿದ, ಇನ್ನು ಕೆಲವೊಮ್ಮೆ ಸುಳ್ಳು ದೇವರುಗಳನ್ನ ಆರಾಧಿಸಿದ. (1 ಅರ. 14:21-24) ರೆಹಬ್ಬಾಮ ಮತ್ತು ಅಹಾಬ ಅಷ್ಟೇ ಅಲ್ಲ ನಂಬಿಗಸ್ತರಾಗಿಲ್ಲದ ಇನ್ನೂ ಕೆಲವು ರಾಜರು ಸುಳ್ಳು ಆರಾಧನೆಯನ್ನ ಮಾಡಿದರು. ಜನ್ರಿಗೆ ಸುಳ್ಳು ಆರಾಧನೆ ಮಾಡೋಕೆ ಪ್ರೋತ್ಸಾಹ ಕೊಟ್ರು. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಆ ರಾಜರು ತಾನು ಇಷ್ಟ ಪಡೋ ರೀತಿಯಲ್ಲಿ ತನ್ನನ್ನ ಆರಾಧನೆ ಮಾಡಿದ್ದಾರಾ ಇಲ್ವಾ ಅಂತ ನೋಡಿ ಯೆಹೋವ ಅವರನ್ನ ಒಳ್ಳೆಯವರು ಅಥವಾ ಕೆಟ್ಟವರು ಅಂತ ತೀರ್ಮಾನಿಸಿದ್ದನು ಅಂತ ಗೊತ್ತಾಗುತ್ತೆ.

15. ಜನ್ರು ತನ್ನ ಇಷ್ಟದ ಪ್ರಕಾರ ಆರಾಧಿಸಬೇಕು ಅಂತ ಯೆಹೋವ ಯಾಕೆ ಬಯಸ್ತಾನೆ?

15 ಜನ್ರು ತನ್ನ ಇಷ್ಟದ ಪ್ರಕಾರ ಆರಾಧಿಸಬೇಕು ಅಂತ ಯೆಹೋವ ಬಯಸಿದನು. ಯೆಹೋವನಿಗೆ ಅದು ಯಾಕೆ ಅಷ್ಟು ಪ್ರಾಮುಖ್ಯವಾಗಿತ್ತು? ಒಂದು ಕಾರಣ ಏನಂದ್ರೆ, ಜನ್ರೆಲ್ಲರೂ ಯೆಹೋವ ಇಷ್ಟಪಡೋ ತರ ಆತನನ್ನ ಆರಾಧಿಸೋಕೆ ಸಹಾಯ ಮಾಡೋದು ರಾಜನ ಜವಾಬ್ದಾರಿಯಾಗಿತ್ತು. ಅಷ್ಟೇ ಅಲ್ಲ ಸುಳ್ಳು ಆರಾಧನೆ ಮಾಡೋದ್ರಿಂದ ಜನ್ರು ದೊಡ್ಡದೊಡ್ಡ ತಪ್ಪುಗಳನ್ನ ಮಾಡ್ತಾ ಇದ್ರು ಮತ್ತು ಬೇರೆಯವ್ರಿಗೆ ಅನ್ಯಾಯ ಮಾಡ್ತಾ ಇದ್ರು. (ಹೋಶೇ. 4:1, 2) ಆದ್ರೆ ಇಸ್ರಾಯೇಲಿನಲ್ಲಿದ್ದ ರಾಜರು ಮತ್ತು ಜನ್ರು ಯೆಹೋವನಿಗೆ ಸಮರ್ಪಿಸಿಕೊಂಡಿದ್ರು. ಹಾಗಾಗಿ ಅವರು ಸುಳ್ಳು ಆರಾಧನೆ ಮಾಡಿದ್ರಿಂದ ವ್ಯಭಿಚಾರ ಮಾಡಿದಂಗೆ ಇತ್ತು ಅಂತ ಬೈಬಲ್‌ ಹೇಳುತ್ತೆ. (ಯೆರೆ. 3:8, 9) ಉದಾಹರಣೆಗೆ, ಗಂಡ-ಹೆಂಡ್ತಿ ಒಬ್ರಿಗೊಬ್ರು ಯಾವಾಗ್ಲೂ ನಿಯತ್ತಾಗಿರಬೇಕು. ಆದ್ರೆ ಅವ್ರಲ್ಲಿ ಒಬ್ಬ ವ್ಯಕ್ತಿ ವ್ಯಭಿಚಾರ ಮಾಡಿದಾಗ ಅವ್ರ ಸಂಗಾತಿಯ ಎದೆನೇ ಒಡೆದುಹೋಗುತ್ತೆ. ಅದೇ ತರ ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡ ಸೇವಕ ಸುಳ್ಳು ಆರಾಧನೆ ಮಾಡಿದ್ರೆ ಯೆಹೋವನಿಗೂ ಅಷ್ಟೇ ನೋವಾಗುತ್ತೆ.e—ಧರ್ಮೋ. 4:23, 24.

16. ಒಬ್ಬ ವ್ಯಕ್ತಿ ನೀತಿವಂತನಾ, ಕೆಟ್ಟವನಾ ಅಂತ ಯೆಹೋವ ಹೇಗೆ ತೀರ್ಮಾನಿಸ್ತಾನೆ?

16 ಇದ್ರಿಂದ ನಾವೇನು ಕಲಿತೀವಿ? ಸುಳ್ಳಾರಾಧನೆ ಮತ್ತು ಅದಕ್ಕೆ ಸಂಬಂಧಪಟ್ಟ ಯಾವುದೇ ವಿಷ್ಯಗಳನ್ನ ನಾವು ಮಾಡಬಾರದು. ಅಷ್ಟೇ ಅಲ್ಲ ಯಾವಾಗ್ಲೂ ಯೆಹೋವನನ್ನ ಆರಾಧಿಸ್ತಾ ಇರಬೇಕು ಮತ್ತು ಆತನ ಸೇವೆಯಲ್ಲಿ ಬಿಜ಼ಿಯಾಗಿ ಇರಬೇಕು. ನಾವು ಹೀಗೆ ಮಾಡೋದು ಯಾಕೆ ಅಷ್ಟು ಪ್ರಾಮುಖ್ಯ? ಯೆಹೋವ ಒಳ್ಳೇಯವ್ರನ್ನ ಮತ್ತು ಕೆಟ್ಟವ್ರನ್ನ ಹೇಗೆ ಗುರುತಿಸ್ತಾನೆ ಅಂತ ಪ್ರವಾದಿ ಮಲಾಕಿ ಹೇಳಿದ್ದಾನೆ. ಅವನು ಹೀಗೆ ಹೇಳಿದ: ‘ದೇವರನ್ನ ಆರಾಧಿಸುವವರನ್ನ’ ಆತನು ‘ನೀತಿವಂತರಾಗಿ’ ನೋಡ್ತಾನೆ, ‘ಆರಾಧಿಸದವ್ರನ್ನ’ ‘ಕೆಟ್ಟವರಾಗಿ’ ನೋಡ್ತಾನೆ. (ಮಲಾ. 3:18) ನಾವು ಯೆಹೋವನ ಕಣ್ಣಲ್ಲಿ ನೀತಿವಂತರಾಗಬೇಕಂದ್ರೆ ನಮ್ಮ ಅಪರಿಪೂರ್ಣತೆಯಾಗ್ಲಿ, ನಮ್ಮ ತಪ್ಪುಗಳಾಗ್ಲಿ ಯೆಹೋವನ ಸೇವೆ ನಿಲ್ಲಿಸಿಬಿಡೋ ತರ ಮಾಡಬಾರದು. ಯಾಕಂದ್ರೆ ಯೆಹೋವನ ಸೇವೆ ಮಾಡೋದನ್ನ ನಿಲ್ಲಿಸೋದೇ ಒಂದು ದೊಡ್ಡ ಪಾಪ ಆಗಿದೆ.

17. ನಾವು ಸಂಗಾತಿಯನ್ನ ಆರಿಸ್ಕೊಳ್ಳುವಾಗ ಯಾಕೆ ಹುಷಾರಾಗಿ ಇರಬೇಕು?

17 ನಿಮಗಿನ್ನೂ ಮದುವೆ ಆಗಿಲ್ಲಾಂದ್ರೆ, ನೀವು ಒಳ್ಳೇ ಸಂಗಾತಿಯನ್ನ ಹುಡುಕ್ತಾ ಇದ್ರೆ ಮಲಾಕಿ ಹೇಳಿದ ಮಾತು ನಿಮಗೆ ಸಹಾಯ ಮಾಡುತ್ತೆ. ಈ ಪ್ರಶ್ನೆಗಳ ಬಗ್ಗೆ ಯೋಚಿಸಿ: ನೀವು ಇಷ್ಟ ಪಡೋ ವ್ಯಕ್ತಿಯಲ್ಲಿ ಒಳ್ಳೇ ಗುಣಗಳಿವೆ. ಆದ್ರೆ ಅವರು ಸತ್ಯ ದೇವರಾದ ಯೆಹೋವನನ್ನ ಆರಾಧಿಸ್ತಾ ಇಲ್ಲ. ಹಾಗಂತ ಅವ್ರನ್ನ ನೀತಿವಂತರಾಗಿ ಯೆಹೋವ ನೋಡ್ತಾನಾ? (2 ಕೊರಿಂ. 6:14) ಒಂದುವೇಳೆ ನೀವು ಆ ವ್ಯಕ್ತಿಯನ್ನ ಮದುವೆಯಾದ್ರೆ ಯೆಹೋವನ ಜೊತೆ ಇರೋ ನಿಮ್ಮ ಸಂಬಂಧನ ಗಟ್ಟಿ ಮಾಡ್ಕೊಳ್ಳೋಕೆ ಅವರು ನಿಮಗೆ ಸಹಾಯ ಮಾಡ್ತಾರಾ? ರಾಜ ಸೊಲೊಮೋನನ ಬಗ್ಗೆ ನೋಡಿ. ಅವನು ಸುಳ್ಳು ಆರಾಧನೆ ಮಾಡ್ತಿದ್ದ ಸ್ತ್ರೀಯರನ್ನ ಮದುವೆ ಆದ. ಅವ್ರಲ್ಲಿ ಒಳ್ಳೇ ಗುಣಗಳಿದ್ದಿರಬಹುದು ನಿಜ. ಆದ್ರೆ ಅವರು ಯೆಹೋವ ದೇವರನ್ನ ಆರಾಧಿಸ್ತಾ ಇರಲಿಲ್ಲ. ಇದ್ರಿಂದ ಹೋಗ್ತಾಹೋಗ್ತಾ ಸೊಲೊಮೋನ ಸುಳ್ಳು ಆರಾಧನೆ ಮಾಡೋ ತರ ಅವರು ಮಾಡಿಬಿಟ್ರು.—1 ಅರ. 11:1, 4.

18. ಹೆತ್ತವರು ತಮ್ಮ ಮಕ್ಕಳಿಗೆ ಏನು ಕಲಿಸಿ ಕೊಡಬೇಕು?

18 ಹೆತ್ತವರೇ, ಬೈಬಲಲ್ಲಿರೋ ರಾಜರ ಉದಾಹರಣೆ ಬಳಸಿ ನಿಮ್ಮ ಮಕ್ಕಳಿಗೆ ಹುರುಪಿಂದ ಯೆಹೋವನ ಸೇವೆ ಮಾಡೋದು ಹೇಗೆ ಅಂತ ಕಲಿಸಿ. ಯೆಹೋವ, ಯಾವ ರಾಜರು ತನ್ನನ್ನ ಆರಾಧಿಸಿದ್ರೋ, ಯಾರು ತನ್ನನ್ನ ಆರಾಧಿಸೋಕೆ ಜನ್ರಿಗೆ ಪ್ರೋತ್ಸಾಹ ಕೊಟ್ರೋ ಅಂಥವ್ರನ್ನ ಒಳ್ಳೇಯವರು ಅಂತ ಕರೆದನು. ಯಾರು ಆತನನ್ನ ಆರಾಧಿಸಲಿಲ್ವೋ ಅವ್ರನ್ನ ಕೆಟ್ಟವರು ಅಂತ ಕರೆದನು. ಹಾಗಾಗಿ ಬೈಬಲ್‌ ಓದೋದು, ಕೂಟಗಳಿಗೆ ಹಾಜರಾಗೋದು ಮತ್ತು ಸಿಹಿಸುದ್ದಿ ಸಾರೋದು ಎಲ್ಲಕ್ಕಿಂತ ಮುಖ್ಯ ಅಂತ ನಿಮ್ಮ ಮಕ್ಕಳಿಗೆ ಹೇಳ್ಕೊಡಿ ಮತ್ತು ನಿಮ್ಮ ಜೀವನದಲ್ಲಿ ತೋರಿಸ್ಕೊಡಿ. (ಮತ್ತಾ. 6:33) ನೀವು ಹಾಗೆ ಮಾಡ್ಲಿಲ್ಲ ಅಂದ್ರೆ ಅಪ್ಪಅಮ್ಮ ಯೆಹೋವನ ಸಾಕ್ಷಿಗಳಾಗಿರೋದ್ರಿಂದ ತಾವೂ ಯೆಹೋವನ ಸಾಕ್ಷಿಗಳಾಗಿದ್ದೀವಿ ಅಂತ ನಿಮ್ಮ ಮಕ್ಕಳು ಅಂದ್ಕೊಂಡು ಬಿಡ್ತಾರೆ. ಕೊನೆಗೆ ಒಂದು ದಿನ ಯೆಹೋವನ ಆರಾಧನೆ ಮಾಡೋದು ಅಷ್ಟೊಂದು ಮುಖ್ಯ ಅಲ್ಲ ಅಂತ ಅಂದ್ಕೊಂಡುಬಿಡಬಹುದು. ಅಥವಾ ಯೆಹೋವನನ್ನ ಆರಾಧಿಸೋದನ್ನೇ ನಿಲ್ಲಿಸಿಬಿಡಬಹುದು.

19. ಒಬ್ಬ ವ್ಯಕ್ತಿ ಯೆಹೋವನ ಆರಾಧನೆ ಮಾಡೋದನ್ನ ನಿಲ್ಲಿಸಿಬಿಟ್ಟಿದ್ರೆ ಮತ್ತೆ ಆತನ ಸ್ನೇಹಿತನಾಗೋಕೆ ಆಗುತ್ತಾ? (“ನೀವು ಯೆಹೋವನ ಹತ್ರ ವಾಪಸ್‌ ಬರಬಹುದು!” ಅನ್ನೋ ಚೌಕ ನೋಡಿ.)

19 ಒಬ್ಬ ವ್ಯಕ್ತಿ ಯೆಹೋವನನ್ನ ಆರಾಧಿಸೋದನ್ನ ಬಿಟ್ಟುಬಿಟ್ರೆ ಮತ್ತೆ ಅವನು ಯಾವತ್ತೂ ಆತನ ಸ್ನೇಹಿತನಾಗೋಕೆ ಆಗೋದೇ ಇಲ್ವಾ? ಹಾಗಲ್ಲ. ಅವನು ತನ್ನ ತಪ್ಪನ್ನ ತಿದ್ಕೊಂಡು ಪಶ್ಚಾತ್ತಾಪ ಪಟ್ರೆ ಮತ್ತೆ ಆತನ ಸ್ನೇಹಿತನಾಗಬಹುದು. ಆದ್ರೆ ಇದನ್ನ ಮಾಡೋಕೆ ಅಹಂಕಾರ ಬದಿಗಿಟ್ಟು ದೀನತೆ ತೋರಿಸಬೇಕು ಮತ್ತು ಸಭೆಯಲ್ಲಿರೋ ಹಿರಿಯರು ಕೊಡೋ ಸಹಾಯ ಪಡ್ಕೊಬೇಕು. (ಯಾಕೋ. 5:14) ಹೀಗೆ ಅವನು ಯೆಹೋವನ ಸಹಾಯ ಪಡ್ಕೊಳ್ಳೋಕೆ ತನ್ನಿಂದಾದ ಎಲ್ಲಾ ಪ್ರಯತ್ನ ಮಾಡಿದ್ರೆ ಅದು ಯಾವತ್ತೂ ವ್ಯರ್ಥ ಆಗಲ್ಲ.

ನೀವು ಯೆಹೋವನ ಹತ್ರ ವಾಪಸ್‌ ಬರಬಹುದು!

ರಾಜ ಮನಸ್ಸೆಯ ಉದಾಹರಣೆ ನೋಡಿ. ಅವನು ‘ಯೆಹೋವನಿಗೆ ಇಷ್ಟ ಆಗದ್ದನ್ನ ಮಿತಿ ಮೀರಿ ಮಾಡಿದ.’ ಅವನು ‘ನಿರಪರಾಧಿಗಳ ರಕ್ತವನ್ನ ದೊಡ್ಡ ಪ್ರಮಾಣದಲ್ಲಿ ಸುರಿಸಿದ’ ಮಂತ್ರ ತಂತ್ರಗಳನ್ನ ಮಾಡಿದ ಮತ್ತು ತನ್ನ ಸ್ವಂತ ಮಕ್ಕಳನ್ನೇ ಸುಳ್ಳು ದೇವರುಗಳಿಗೆ ಬೆಂಕಿಯಲ್ಲಿ ಬಲಿ ಕೊಟ್ಟ. (2 ಅರ. 21:6, 16) ಅಷ್ಟೇ ಅಲ್ಲ ಅವನು ಬೇರೆ ಜನಾಂಗಗಳವರು ಮಾಡ್ತಾ ಇದ್ದಿದ್ದಕ್ಕಿಂತ “ತುಂಬ ಕೆಟ್ಟ ಕೆಲಸಗಳನ್ನ” ಯೆಹೂದ್ಯರ ಕೈಯಿಂದ ಮಾಡಿಸಿದ. (2 ಅರ. 21:9; 2 ಪೂರ್ವ. 33:1-6) ಆದ್ರೆ ಮನಸ್ಸೆಯನ್ನ ಬಾಬೆಲಿಗೆ ಕೈದಿಯಾಗಿ ಕರ್ಕೊಂಡು ಹೋದಾಗ ಅಲ್ಲಿ ಅವನು ಪಶ್ಚಾತ್ತಾಪ ಪಡ್ತಾನೆ. ಅವನು ತನ್ನ ಜೀವನದುದ್ದಕ್ಕೂ ತುಂಬ ದೊಡ್ಡದೊಡ್ಡ ಪಾಪಗಳನ್ನ ಮಾಡಿದ್ರಿಂದ ಒಂದು ಸಲ ಅಲ್ಲ ತುಂಬ ಸಲ ಅವನು ಯೆಹೋವನ ಹತ್ರ ಕ್ಷಮೆ ಕೇಳಬೇಕಿತ್ತು. ಈ ತರ ತಪ್ಪುಗಳನ್ನ ಮಾಡಿದ್ರಿಂದ ಅವನಿಗೆ ತುಂಬ ಬೇಜಾರಾಗಿತ್ತು. ಹಾಗಾಗಿ ಅವನು “ತನ್ನನ್ನೇ ತುಂಬ ತಗ್ಗಿಸಿಕೊಂಡ. ಅವನು ದೇವರಿಗೆ ಪ್ರಾರ್ಥಿಸ್ತಾ ಇದ್ದ.” ಆಗ ಯೆಹೋವನಿಗೆ ಹೇಗೆ ಅನಿಸ್ತು? “ಅವನ ಪ್ರಾರ್ಥನೆ ಕೇಳಿ ದೇವರಿಗೆ ಕನಿಕರ ಹುಟ್ತು.” ಯೆಹೋವ ಅವನನ್ನ ಕ್ಷಮಿಸಿದ ಮತ್ತು ಯೆರೂಸಲೇಮಿಗೆ ಹೋಗಿ ರಾಜನಾಗೋಕೆ ಅವನಿಗೆ ಅವಕಾಶ ಕೊಟ್ಟ.—2 ಪೂರ್ವ. 33:12, 13.

ಇವತ್ತೂ ಕೂಡ ಯೆಹೋವನನ್ನ ಬಿಟ್ಟು ಹೋಗಿರೋರು ಮನಸ್ಸಾರೆ ಪಶ್ಚಾತ್ತಾಪ ಪಟ್ರೆ ಯೆಹೋವ ಅವ್ರನ್ನ ಕ್ಷಮಿಸ್ತಾನಾ? ಖಂಡಿತ. ಯೆಶಾಯ 55:7 “ಕೆಟ್ಟವನು ತನ್ನ ಮಾರ್ಗವನ್ನ, ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ, ಅವನು ಯೆಹೋವನ ಹತ್ರ ವಾಪಸ್‌ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ, ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ ಕ್ಷಮಿಸ್ತಾನೆ” ಅಂತ ಹೇಳುತ್ತೆ. ಹಾಗಾಗಿ ಯೆಹೋವನ ಹತ್ರ ವಾಪಾಸ್‌ ಬರೋಕೆ ನಿಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿ.

20. ನಂಬಿಗಸ್ತ ರಾಜರ ತರ ನಡ್ಕೊಂಡ್ರೆ ಯೆಹೋವ ನಮ್ಮನ್ನ ಹೇಗೆ ನೋಡ್ತಾನೆ?

20 ಇಸ್ರಾಯೇಲ್‌ ರಾಜರಿಂದ ನಾವೇನು ಕಲಿತ್ವಿ? ನಂಬಿಗಸ್ತರಾದ ಇಸ್ರಾಯೇಲ್‌ ರಾಜರ ತರ ನಾವು ಇರಬೇಕಂದ್ರೆ ನಮ್ಮ ಪೂರ್ಣ ಹೃದಯ ಯೆಹೋವನ ಕಡೆ ಇರಬೇಕು. ಅಷ್ಟೇ ಅಲ್ಲ, ನಮ್ಮ ತಪ್ಪಿಂದ ಕಲಿಬೇಕು, ಪಶ್ಚಾತ್ತಾಪ ಪಡಬೇಕು ಮತ್ತು ಬೇಕಾದ ಬದಲಾವಣೆ ಮಾಡಬೇಕಂತ ಕಲಿತ್ವಿ. ಮುಖ್ಯವಾಗಿ, ಯಾವಾಗ್ಲೂ ಸತ್ಯ ದೇವರಾಗಿರೋ ಯೆಹೋವನನ್ನ ಮಾತ್ರ ಆರಾಧನೆ ಮಾಡಬೇಕು ಅಂತ ಕಲಿತ್ವಿ. ನಾವು ಹೀಗೆ ಮಾಡಿದ್ರೆ ಯೆಹೋವನಿಗೆ ನಂಬಿಗಸ್ತರಾಗಿ ಇರ್ತೀವಿ. ಆಗ ಯೆಹೋವ ನಮ್ಮನ್ನ ತನ್ನ ಇಷ್ಟ ಮಾಡೋ ವ್ಯಕ್ತಿ ಅಂತ ನೋಡ್ತಾನೆ.

ನಾವೇನು ಕಲಿತ್ವಿ?

  • ನಮ್ಮ ಪೂರ್ಣ ಹೃದಯ ಯೆಹೋವನ ಕಡೆ ಇರಬೇಕಂದ್ರೆ ಏನು ಮಾಡಬೇಕು?

  • ನಾವು ಪಶ್ಚಾತ್ತಾಪ ಪಟ್ಟಿದ್ದೀವಿ ಅಂತ ಹೇಗೆ ತೋರಿಸಿಕೊಡಬೇಕು?

  • ಯಾವಾಗ್ಲೂ ಯೆಹೋವನನ್ನೇ ಆರಾಧಿಸ್ತಾ ಇರೋಕೆ ನಾವೇನು ಮಾಡಬೇಕು?

ಗೀತೆ 57 ನನ್ನ ಹೃದಯದ ಧ್ಯಾನ

a ಈ ಲೇಖನದಲ್ಲಿ ದೇವ ಜನ್ರನ್ನ ಆಳಿದ “ಇಸ್ರಾಯೇಲ್‌ ರಾಜರು” ಅಂದ್ರೆ, 2 ಕುಲಗಳನ್ನ ಆಳಿದ, 10 ಕುಲಗಳನ್ನ ಆಳಿದ ಮತ್ತು ಪೂರ್ತಿ 12 ಕುಲಗಳನ್ನ ಆಳಿದ ಎಲ್ಲ ರಾಜರ ಬಗ್ಗೆ ಹೇಳ್ತಾ ಇದೆ.

b ಪದ ವಿವರಣೆ: ಬೈಬಲಲ್ಲಿ “ಹೃದಯ” ಅಂತ ಹೇಳಿರೋದು ನಮ್ಮ ಒಳಗಿನ ವ್ಯಕ್ತಿತ್ವವನ್ನ ಸೂಚಿಸುತ್ತೆ. ಅಂದ್ರೆ ನಮ್ಮ ಆಸೆ, ನಮ್ಮ ಯೋಚ್ನೆ, ನಮ್ಮ ನಡತೆ, ನಮ್ಮ ಉದ್ದೇಶ ಮತ್ತು ನಮ್ಮ ಗುರಿಗಳನ್ನ ಸೂಚಿಸುತ್ತೆ.

c ಹಿಂದಿನ ಕಾಲದಲ್ಲಿ ಇಸ್ರಾಯೇಲ್ಯರಲ್ಲದ ರಾಜರು ತಾವು ಯುದ್ಧ ಮಾಡಿ ಜಯಗಳಿಸಿದ ದೇಶದ ದೇವರುಗಳನ್ನ ಆರಾಧಿಸ್ತಾ ಇದ್ರು.

d ರಾಜ ಆಸ ತುಂಬ ದೊಡ್ಡದೊಡ್ಡ ತಪ್ಪುಗಳನ್ನ ಮಾಡಿದ. (2 ಪೂರ್ವ. 16:7, 10) ಆದ್ರೂ ಅವನು ಯೆಹೋವನಿಗೆ ಇಷ್ಟ ಆಗೋದನ್ನ ಮಾಡಿದ ಅಂತ ಬೈಬಲ್‌ ಹೇಳುತ್ತೆ. ಅವನನ್ನ ಯೆಹೋವನ ಪ್ರವಾದಿ ತಿದ್ದಿದಾಗ ಮೊದಮೊದ್ಲು ಅವನು ಹೇಳಿದ್ದನ್ನ ಕೇಳಲೇ ಇಲ್ಲ. ಆದ್ರೆ ಆಮೇಲೆ ಅವನು ಪಶ್ಚಾತ್ತಾಪ ಪಟ್ಟಿರಬಹುದು. ಅವನು ಮಾಡಿದ ಕೆಟ್ಟ ವಿಷ್ಯಗಳಿಗಿಂತ ಅವನಲ್ಲಿದ್ದ ಒಳ್ಳೇ ಗುಣಗಳನ್ನ ಯೆಹೋವ ನೋಡಿದನು. ಆಮೇಲೆ ಆಸ ಯೆಹೋವನನ್ನ ಮಾತ್ರ ಆರಾಧನೆ ಮಾಡಿದ ಮತ್ತು ತನ್ನ ದೇಶದಲ್ಲಿದ್ದ ಎಲ್ಲಾ ಮೂರ್ತಿಗಳನ್ನ ತೆಗೆದು ಹಾಕೋಕೆ ತನ್ನಿಂದಾದ ಎಲ್ಲಾ ಪ್ರಯತ್ನ ಮಾಡಿದ.—1 ಅರ. 15:11-13; 2 ಪೂರ್ವ. 14:2-5.

e ಆರಾಧನೆ ಮಾಡೋದನ್ನ ಯೆಹೋವ ತುಂಬ ಮುಖ್ಯವಾಗಿ ನೋಡ್ತಾನೆ. ಅದಕ್ಕೇ ಆತನು ಮೋಶೆಯ ನಿಯಮ ಕೊಟ್ಟಾಗ, ಅದ್ರಲ್ಲಿ ಎರಡನೇ ನಿಯಮದಲ್ಲಿ ಯೆಹೋವನನ್ನ ಬಿಟ್ಟು ಬೇರೆ ಯಾರನ್ನೂ ಮತ್ತು ಯಾವುದನ್ನೂ ಆರಾಧನೆ ಮಾಡಬಾರದು ಅಂತ ಹೇಳಿದನು.—ವಿಮೋ. 20:1-6.

f ಚಿತ್ರ ವಿವರಣೆ: ರಾಜ ದಾವೀದನಿಗೆ ಮತ್ತು ರಾಜ ಹಿಜ್ಕೀಯನಿಗೆ ಅವರು ಮಾಡಿದ ತಪ್ಪನ್ನ ತಿಳಿಸಿದಾಗ ದೀನತೆಯಿಂದ ಅವರು ತಪ್ಪನ್ನ ಒಪ್ಕೊಂಡು ಪಶ್ಚಾತ್ತಾಪಪಟ್ರು. ಒಬ್ಬ ಯುವ ಹಿರಿಯ ಕುಡಿಯೋ ಅಭ್ಯಾಸ ಇರೋ ಸಹೋದರನ ಹತ್ರ ಕಾಳಜಿ ತೋರಿಸ್ತಾ ಮಾತಾಡ್ತಿದ್ದಾನೆ. ಆಗ ಆ ಸಹೋದರ ದೀನತೆಯಿಂದ ಸಲಹೆಯನ್ನ ಕೇಳ್ತಾನೆ, ಬೇಕಾದ ಬದಲಾವಣೆ ಮಾಡ್ತಾನೆ ಮತ್ತು ನಂಬಿಗಸ್ತನಾಗಿ ಯೆಹೋವನ ಸೇವೆ ಮಾಡೋದನ್ನ ಮುಂದುವರಿಸ್ತಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ