ಅಧ್ಯಯನ ಲೇಖನ 45
ಗೀತೆ 3 ಯೆಹೋವ ನಮ್ಮ ಆಶ್ರಯ, ವಿಶ್ವಾಸ
ಆರೈಕೆ ಮಾಡ್ವಾಗ್ಲೂ ಖುಷಿ ಕಾಪಾಡ್ಕೊಳಿ
“ ಕಣ್ಣೀರು ಸುರಿಸ್ತಾ ಬೀಜ ಬಿತ್ತೋರು, ಖುಷಿಯಿಂದ ಜೈಕಾರ ಹಾಕ್ತಾ ಕೊಯ್ಲು ಮಾಡ್ತಾರೆ.”—ಕೀರ್ತ. 126:5.
ಈ ಲೇಖನದಲ್ಲಿ ಏನಿದೆ?
ಬೇರೆಯವ್ರನ್ನ ಆರೈಕೆ ಮಾಡೋರಿಗೆ ಬೇರೆ-ಬೇರೆ ಸವಾಲುಗಳಿರುತ್ತೆ. ಅವನ್ನ ಎದುರಿಸೋದು ಹೇಗೆ, ಅವರು ತಮ್ಮ ಖುಷಿ ಕಾಪಾಡ್ಕೊಳ್ಳೋದು ಹೇಗೆ ಅಂತ ನೋಡೋಣ.
1-2. ಬೇರೆಯವ್ರನ್ನ ಆರೈಕೆ ಮಾಡೋರನ್ನ ನೋಡಿದ್ರೆ ಯೆಹೋವನಿಗೆ ಹೇಗೆ ಅನಿಸುತ್ತೆ? (ಜ್ಞಾನೋಕ್ತಿ 19:17) (ಚಿತ್ರ ನೋಡಿ.)
ಕೊರಿಯಾದಲ್ಲಿರೋ ಜಿನ್ಯಲ್ ಅನ್ನೋ ಸಹೋದರ ಹೀಗೆ ಹೇಳ್ತಾರೆ, “ನನಗೆ ಮದುವೆ ಆಗಿ 32 ವರ್ಷ ಆಗಿದೆ. ನನ್ನ ಹೆಂಡ್ತಿಗೆ ಪಾರ್ಕಿನ್ಸನ್ ಅನ್ನೋ ನಡುಕ ಕಾಯಿಲೆ ಇದೆ. ಅವಳಿಗೆ ಎದ್ದು ಓಡಾಡೋಕೆ ಆಗಲ್ಲ. 5 ವರ್ಷದಿಂದ ನಾನೇ ಅವಳನ್ನ ನೋಡ್ಕೊಳ್ತಾ ಇದ್ದೀನಿ. ನನಗೆ ಅವಳಂದ್ರೆ ತುಂಬ ಇಷ್ಟ, ಅದಕ್ಕೆ ಅವಳನ್ನ ನೋಡ್ಕೊಳ್ಳೋಕೆ ನನಗೆ ಕಷ್ಟ ಆಗಲ್ಲ. ಆಸ್ಪತ್ರೆ ಬೆಡ್‌ನ ನಾವು ಮನೆಯಲ್ಲೇ ಹಾಕಿದ್ದೀವಿ, ಪ್ರತಿ ರಾತ್ರಿ ಅವಳು ಅದ್ರಲ್ಲಿ ಮಲಗುವಾಗ ಇಬ್ರೂ ಕೈ ಹಿಡ್ಕೊಂಡು ಪಕ್ಕ-ಪಕ್ಕದಲ್ಲೇ ಮಲಗ್ತೀವಿ.”
2 ನೀವು ನಿಮ್ಮ ಅಪ್ಪ-ಅಮ್ಮ, ಸಂಗಾತಿ, ಮಗು ಅಥವಾ ಫ್ರೆಂಡ್‌ನ ಆರೈಕೆ ಮಾಡ್ತಿದ್ದೀರಾ? ನೀವು ಅವ್ರನ್ನ ತುಂಬ ಪ್ರೀತಿಸ್ತೀರ, ಅದಕ್ಕೇ ಅವ್ರನ್ನ ಕಷ್ಟ ಕಾಲದಲ್ಲಿ ಕೈ ಬಿಡದೆ ನೋಡ್ಕೊಳ್ತಿದ್ದೀರ. ನೀವು ಈ ಕೆಲ್ಸ ಮಾಡೋ ಮೂಲಕ ನಿಮಗೆ ಯೆಹೋವನ ಮೇಲೆ ಪ್ರೀತಿ ಇದೆ ಅಂತಾನೂ ತೋರಿಸ್ತಿದ್ದೀರ. (1 ತಿಮೊ. 5:4, 8; ಯಾಕೋ. 1:27) ಆದ್ರೂ ಇದನ್ನ ಮಾಡೋದು ಸುಲಭ ಅಲ್ಲ. ನಿಮಗೆ ಏನೆಲ್ಲಾ ಕಷ್ಟ ಆಗ್ತಿದೆ ಅಂತ ಯಾರಿಗೂ ಗೊತ್ತಾಗದೆ ಇರಬಹುದು. ಕೆಲವು ಸಲ ‘ನಾನು ಇಷ್ಟೆಲ್ಲಾ ಮಾಡಿದ್ರೂ ನನ್ನನ್ನ ಯಾರೂ ಅರ್ಥ ಮಾಡ್ಕೊಳ್ತಾ ಇಲ್ವಲ್ಲ’ ಅಂತಾನೂ ನಿಮ್ಗೆ ನೋವಾಗಬಹುದು. ಎಲ್ರೂ ನೋಡ್ವಾಗ ನೀವು ನಗ್‌ನಗ್ತಾ ಇರೋದಾದ್ರೂ ಒಳಗೊಳಗೆ ಕಣ್ಣೀರು ಹಾಕ್ತಿರಬಹುದು. (ಕೀರ್ತ. 6:6) ಬೇರೆಯವ್ರಿಗೆ ನಿಮ್ಮ ಕಷ್ಟ, ನೋವು ಅರ್ಥ ಆಗದಿದ್ರೂ ಯೆಹೋವನಿಗಂತೂ ಖಂಡಿತ ನಿಮ್ಮ ಪರಿಸ್ಥಿತಿ ಅರ್ಥ ಆಗುತ್ತೆ. (ವಿಮೋ. 3:7 ಹೋಲಿಸಿ.) ನೀವು ಸುರಿಸೋ ಕಣ್ಣೀರು, ಮಾಡ್ತಿರೋ ತ್ಯಾಗ ಇದ್ಯಾವುದನ್ನೂ ಆತನು ಮರೆಯಲ್ಲ. ನಿಮ್ಮವ್ರನ್ನ ನೋಡ್ಕೊಳೋಕೆ ನೀವು ಮಾಡ್ತಿರೋ ಸಹಾಯನ ಆತನು ನೆನಪಿಡ್ತಾನೆ. (ಕೀರ್ತ. 56:8; 126:5) ಯಾಕಂದ್ರೆ ನಿಮ್ಮ ಈ ಸಹಾಯನ, ತನಗೆ ಕೊಟ್ಟಿರೋ ಸಾಲದ ತರ ಆತನು ನೋಡ್ತಾನೆ. ಖಂಡಿತ ನಿಮ್ಗೆ ‘ಸರಿಯಾಗಿರೋ ಸಮಯದಲ್ಲಿ ಪ್ರತಿಫಲ ಕೊಡ್ತೀನಿ’ ಅಂತ ಮಾತು ಕೊಟ್ಟಿದ್ದಾನೆ.—ಜ್ಞಾನೋಕ್ತಿ 19:17 ಓದಿ.
ನೀವು ಹುಷಾರಿಲ್ಲದ ಯಾರನ್ನಾದ್ರೂ ಆರೈಕೆ ಮಾಡ್ತಿದ್ದೀರಾ? (ಪ್ಯಾರ 2 ನೋಡಿ)
3. ಅಬ್ರಹಾಮ ಮತ್ತು ಸಾರ, ತೆರಹನ ಆರೈಕೆ ಮಾಡುವಾಗ ಯಾವೆಲ್ಲ ಸವಾಲುಗಳನ್ನ ಎದುರಿಸಿರಬಹುದು?
3 ಬೇರೆಯವ್ರನ್ನ ಆರೈಕೆ ಮಾಡಿದ ಎಷ್ಟೋ ಉದಾಹರಣೆಗಳು ಬೈಬಲಲ್ಲಿದೆ. ಅಬ್ರಹಾಮ ಮತ್ತು ಸಾರ ಕೂಡ ಈ ತರ ಆರೈಕೆ ಮಾಡಿದ್ರು. ಅವರು ಊರ್ ಪಟ್ಟಣ ಬಿಟ್ಟು ಬಂದಾಗ ಅವ್ರ ಜೊತೆ 200 ವರ್ಷ ವಯಸ್ಸಾದ ಅವ್ರ ತಂದೆ ತೆರಹ ಕೂಡ ಇದ್ದನು. ಅವರು ಖಾರಾನ್‌ಗೆ ಸುಮಾರು 960 ಕಿಲೋಮೀಟರ್ ಪ್ರಯಾಣ ಮಾಡಿ ಹೋಗಬೇಕಿತ್ತು. (ಆದಿ. 11:31, 32) ಅಬ್ರಹಾಮ ಮತ್ತು ಸಾರ, ತೆರಹನನ್ನ ತುಂಬ ಪ್ರೀತಿಸ್ತಿದ್ರು ಅನ್ನೋದ್ರಲ್ಲಿ ಸಂಶಯ ಇಲ್ಲ. ಹಾಗಿದ್ರೂ ಅಷ್ಟು ದೂರ ಪ್ರಯಾಣ ಮಾಡಬೇಕಾದ್ರೆ ಅವ್ರಿಗೆ ಎಷ್ಟು ಕಷ್ಟ ಆಗಿರಬೇಕು ಅಂತ ಸ್ವಲ್ಪ ಯೋಚ್ನೆ ಮಾಡಿ. ಒಂಟೆ ಅಥವಾ ಕತ್ತೆಗಳ ಮೇಲೆ ಪ್ರಯಾಣ ಮಾಡ್ತಾ ವಯಸ್ಸಾದ ತೆರಹನನ್ನ ಕರ್ಕೊಂಡು ಹೋಗುವಾಗ ಕೆಲವೊಮ್ಮೆ ಅವ್ರಿಗೆ ಸಾಕ್‌ಸಾಕಾಗಿ ಹೋಗಿರಬಹುದು. ಏನೇ ಆದ್ರೂ ಅವ್ರಿಗೆ ಪ್ರಯಾಣ ಮಾಡೋಕೆ ಬೇಕಿರೋ ಶಕ್ತಿನ ಯೆಹೋವ ದೇವರು ಅವ್ರಿಗೆ ಕೊಟ್ಟನು. ನೀವು ನಿಮ್ಮವ್ರನ್ನ ಆರೈಕೆ ಮಾಡ್ವಾಗ್ಲೂ ಖಂಡಿತ ನಿಮಗೂ ಬೇಕಿರೋ ಶಕ್ತಿನ ಕೊಟ್ಟೇ ಕೊಡ್ತಾನೆ.—ಕೀರ್ತ. 55:22.
4. ಈ ಲೇಖನದಲ್ಲಿ ನಾವೇನು ಕಲಿತೀವಿ?
4 ಬೇರೆಯವ್ರನ್ನ ನೀವು ಚೆನ್ನಾಗಿ ಆರೈಕೆ ಮಾಡಬೇಕಂದ್ರೆ ನಿಮ್ಮ ಖುಷಿನ ಕಾಪಾಡ್ಕೊಬೇಕು. (ಜ್ಞಾನೋ. 15:13) ನೆನಪಿಡಿ, ಒಬ್ಬ ವ್ಯಕ್ತಿಗೆ ಖುಷಿ ಇದ್ರೆ ಅವನ ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ರೂ ಅವನು ಸಂತೋಷವಾಗಿ ಇರ್ತಾನೆ. (ಯಾಕೋ. 1:2, 3) ಹಾಗಾದ್ರೆ ಇಂಥ ಖುಷಿನ ನೀವು ಹೇಗೆ ಪಡ್ಕೊಬಹುದು? ಯೆಹೋವನಿಗೆ ಪ್ರಾರ್ಥನೆ ಮಾಡಿ. ‘ಖುಷಿಯಾಗಿರೋಕೆ ನನಗೆ ಯಾವ ಕಾರಣಗಳಿವೆ ತೋರಿಸು’ ಅಂತ ಕೇಳ್ಕೊಳ್ಳಿ. ಈ ಲೇಖನದಲ್ಲಿ ನಾವು, ಆರೈಕೆ ಮಾಡೋರು ಖುಷಿನ ಕಾಪಾಡ್ಕೊಳ್ಳೋಕೆ ಏನೆಲ್ಲ ಮಾಡಬೇಕು, ಇವ್ರಿಗೆ ಸಹಾಯ ಮಾಡೋಕೆ ನಾವೇನು ಮಾಡಬಹುದು ಅಂತ ನೋಡೋಣ. ಈಗ ಆರೈಕೆ ಮಾಡೋರು ತಮ್ಮ ಖುಷಿನ ಯಾಕೆ ಕಳ್ಕೊತಾರೆ ಮತ್ತು ಅವರು ಅದನ್ನ ಹೇಗೆ ಕಾಪಾಡ್ಕೊಬೇಕು ಅಂತ ನೋಡೋಣ.
ಆರೈಕೆ ಮಾಡ್ವಾಗ ಖುಷಿ ಕಳೆದು ಹೋಗಬಹುದು!
5. ಆರೈಕೆ ಮಾಡೋರು ಯಾಕೆ ತಮ್ಮ ಖುಷಿನ ಕಾಪಾಡ್ಕೊಬೇಕು?
5 ಆರೈಕೆ ಮಾಡೋರು ಖುಷಿನ ಕಳ್ಕೊಂಡು ಬಿಟ್ರೆ, ಬೇಗ ಸುಸ್ತಾಗಿ ಹೋಗ್ತಾರೆ, ಕುಗ್ಗಿ ಹೋಗ್ತಾರೆ. (ಜ್ಞಾನೋ. 24:10) ಈ ತರ ಆದ್ರೆ ಅವರು ದಯೆಯಿಂದ ನಡ್ಕೊಳ್ಳೋಕೆ ಆಗಲ್ಲ. ಕಷ್ಟದಲ್ಲಿರೋ ತಮ್ಮವರಿಗೆ ಬೇಕಾಗೋ ಸಹಾಯನ ಚೆನ್ನಾಗಿ ಮಾಡೋಕಾಗಲ್ಲ. ಆದ್ರಿಂದ ಆರೈಕೆ ಮಾಡೋರು ಯಾಕೆ ಖುಷಿನ ಕಳ್ಕೊತಾರೆ ಅನ್ನೋ ಕಾರಣಗಳನ್ನ ನಾವೀಗ ತಿಳ್ಕೊಳೋಣ ಬನ್ನಿ.
6. ಆರೈಕೆ ಮಾಡೋರಿಗೆ ಯಾಕೆ ಸುಸ್ತಾಗುತ್ತೆ?
6 ಆರೈಕೆ ಮಾಡೋರಿಗೆ ಸುಸ್ತಾಗುತ್ತೆ. ಲೇಯ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ, “ಆರೈಕೆ ಮಾಡ್ತಾ-ಮಾಡ್ತಾ ನಾನು ಭಾವನಾತ್ಮಕವಾಗಿ ಸೋತು ಹೋಗ್ತೀನಿ. ರಾತ್ರಿ ಆಗೋ ಅಷ್ಟರಲ್ಲಿ ಯಾವ ಕೆಲಸ ಮಾಡೋಕೂ ಶಕ್ತಿ ಇರಲ್ಲ. ಎಷ್ಟೊಂದು ಸಲ ಒಂದು ಮೆಸೇಜ್‌ಗೂ ರಿಪ್ಲೈ ಮಾಡೋಕೆ ಮನಸ್ಸೇ ಆಗಲ್ಲ.” ಇನ್ನು ಕೆಲವ್ರಿಗೆ ಸುಸ್ತಾಗ್ತಿದೆ ಅಂತ ಅನಿಸ್ತಿದ್ರೂ ವಿಶ್ರಾಂತಿ ತಗೊಳೋಕೆ ಅವಕಾಶನೇ ಸಿಗಲ್ಲ. ಐನಸ್ ಅನ್ನೋ ಒಬ್ಬ ಸಹೋದರಿ ಹೀಗೆ ಹೇಳ್ತಾರೆ, “ರಾತ್ರಿಯೆಲ್ಲ ನಾನು ಪ್ರತಿ ಎರಡು ಗಂಟೆಗೆ ಒಂದ್ಸಲ ಎದ್ದು ನನ್ನ ಅತ್ತೆಗೆ ಏನಾದ್ರೂ ಸಹಾಯ ಬೇಕಾ ಅಂತ ನೋಡ್ತೀನಿ. ನನಗೆ ಸರಿಯಾಗಿ ನಿದ್ದೆನೇ ಮಾಡೋಕ್ಕಾಗಲ್ಲ. ನಾನೂ ನನ್ನ ಗಂಡ ರಜೆಗೆ ಅಂತ ಹೊರಗೆ ಹೋಗಿ ಎಷ್ಟೋ ವರ್ಷ ಆಗೋಯ್ತು.” ಇನ್ನು ಕೆಲವ್ರಿಗೆ ಯಾರಾದ್ರೂ ಮದುವೆಗೆ ಕರೆದ್ರೆ, ಗೆಟ್ ಟು ಗೆದರ್‌ಗೆ ಕರೆದ್ರೆ ಹೋಗೋಕೆ ಟೈಮೇ ಇರಲ್ಲ. ಅವರ ನೇಮಕಗಳನ್ನ ಮಾಡೋಕೂ ಆಗಲ್ಲ. ಈ ಎಲ್ಲ ಕಾರಣಗಳಿಂದಾಗಿ ಅವ್ರಿಗೆ ಒಬ್ಬಂಟಿ ಅಂತ ಅನಿಸುತ್ತೆ ಅಥವಾ ತಾವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ಹಾಕೊಂಡಿದ್ದೀವಿ ಅಂತ ಅನಿಸುತ್ತೆ.
7. ಆರೈಕೆ ಮಾಡೋ ಕೆಲವ್ರಿಗೆ ಯಾಕೆ ಮನಸ್ಸು ಚುಚ್ಚುತ್ತೆ?
7 ಆರೈಕೆ ಮಾಡೋರಿಗೆ ಆಗಾಗ ಮನಸ್ಸು ಚುಚ್ಚುತ್ತೆ ಅಥವಾ ನೋವಾಗುತ್ತೆ. ಜೆಸ್ಸಿಕಾ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ, “ನಾನು ಚೆನ್ನಾಗಿ ನೋಡ್ಕೊಳ್ತೀನಿ, ಆದ್ರೆ ಸುಸ್ತಾದಾಗ ವಿಶ್ರಾಂತಿ ತಗೊಳ್ತೀನಿ. ಆದ್ರೆ ಸ್ವಲ್ಪ ಹೊತ್ತಾದ ಮೇಲೆ ನನ್ನ ಮನಸ್ಸು, ‘ಛೇ, ನಾನು ಅವ್ರನ್ನ ನೋಡ್ಕೊಳ್ಳೋ ಬದ್ಲು ವಿಶ್ರಾಂತಿ ತಗೊಳ್ತಿದ್ದೀನಲ್ಲ’ ಅಂತ ಚುಚ್ಚುತ್ತೆ.” ಇನ್ನು ಕೆಲವ್ರಿಗೆ ‘ನಾನು ಅವ್ರನ್ನ ಸರಿಯಾಗಿ ನೋಡ್ಕೊಳ್ತಾ ಇಲ್ವೇನೋ’ ಅಂತ ಬೇಜಾರಾಗುತ್ತೆ. ಬೇರೆ ಕೆಲವರು, ‘ನಾನು ಬೇಜಾರಲ್ಲಿ ಅವ್ರಿಗೆ ನೋವಾಗೋ ತರ ಮಾತಾಡಿಬಿಟ್ಟೆ. ಅವರು ಕಾಯಿಲೆಯಿಂದ ಎಷ್ಟು ಕಷ್ಟಪಡ್ತಿದ್ದಾರೆ, ಹೀಗಿರುವಾಗ ನಾನು ಅವ್ರಿಗೆ ನೋವಾಗೋ ತರ ಮಾತಾಡಿದ್ನಲ್ಲ’ ಅಂತ ಕುಗ್ಗಿ ಹೋಗ್ತಾರೆ. (ಯಾಕೋ. 3:2) ಇನ್ನೂ ಕೆಲವರು, ‘ಎಷ್ಟು ಖುಷಿಯಾಗಿ, ಚೆನ್ನಾಗಿ ಮಾತಾಡ್ಕೊಂಡು ನಗಾಡ್ತಾ ಇದ್ದ ವ್ಯಕ್ತಿಗೆ ಈ ತರ ಪರಿಸ್ಥಿತಿ ಬಂತಲ್ಲ’ ಅಂತ ಕೊರಗ್ತಾ ಇರ್ತಾರೆ. ಬಾರ್ಬೆರ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, ‘ನಾವು ಪ್ರೀತಿಸೋ ವ್ಯಕ್ತಿ ನಮ್ ಕಣ್ಮುಂದೆನೇ ದಿನೇದಿನೇ ಸಾವಿಗೆ ಹತ್ರ ಆಗೋದನ್ನ ನೋಡ್ದಾಗ ನಮ್ಮ ಹೃದಯ ಹಿಂಡಿದಂತಾಗುತ್ತೆ.’
8. ಯಾರಾದ್ರೂ ಥ್ಯಾಂಕ್ಸ್ ಹೇಳಿದ್ರೆ ಆರೈಕೆ ಮಾಡೋರಿಗೆ ಹೇಗೆ ಅನಿಸುತ್ತೆ?
8 ಆರೈಕೆ ಮಾಡೋರಿಗೆ ‘ನನಗೆ ಯಾರೂ ಬೆಲೆ ಕೊಡ್ತಿಲ್ಲ’ ಅಂತ ಅನಿಸುತ್ತೆ. ಯಾಕೆ? ಇವರು ಮಾಡೋ ತ್ಯಾಗನ, ಪಡೋ ಕಷ್ಟನ ಗಮನಿಸಿ ಥ್ಯಾಂಕ್ಸ್ ಹೇಳೋರು ತುಂಬ ಅಪರೂಪ. ಯಾರಾದ್ರೂ ಆ ತರ ಗಮನಿಸಿ ಇವ್ರನ್ನ ಮೆಚ್ಕೊಂಡ್ರೆ ಇವ್ರಿಗೆ ತುಂಬ ಖುಷಿ ಆಗುತ್ತೆ. (1 ಥೆಸ. 5:18) ಮೆಲಿಸಾ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ಒಂದೊಂದ್ಸಲ ಆರೈಕೆ ಮಾಡಿಮಾಡಿ ಸುಸ್ತಾಗಿ ನನಗೆ ಕಣ್ಣೀರೇ ಬಂದ್ಬಿಡುತ್ತೆ. ಆದ್ರೆ ಅವರು ಅದನ್ನ ಗುರುತಿಸಿ ‘ನೀನು ನನಗೋಸ್ಕರ ಎಷ್ಟೆಲ್ಲಾ ಕಷ್ಟಪಡ್ತಿದ್ಯಾ, ತುಂಬಾ ಥ್ಯಾಂಕ್ಸ್’ ಅಂತ ಹೇಳಿದ್ರೆ ಎಷ್ಟೋ ಬಲ ಸಿಗುತ್ತೆ. ಮಾರನೇ ದಿನ ಎದ್ದು ಮತ್ತೆ ಅವ್ರಿಗೆ ಬೇಕಾಗಿರೋ ಸಹಾಯ ಮಾಡೋಕೆ ಬೇಕಿರೋ ಶಕ್ತಿ ಸಿಗುತ್ತೆ.” ಮಾಡ್ತಿರೋ ಸಹಾಯನ ಅರ್ಥ ಮಾಡ್ಕೊಂಡು ಯಾರಾದ್ರೂ ಅದನ್ನ ಮೆಚ್ಕೊಂಡ್ರೆ ಎಷ್ಟು ಖುಷಿ ಆಗುತ್ತೆ ಅಂತ ಸಹೋದರ ಅಹ್ಮದು ಹೇಳ್ತಾರೆ. ಇವರ ಹೆಂಡ್ತಿಯ ತಂಗಿ ಮಗಳಿಗೆ ಮೂರ್ಛೆ ರೋಗ ಇದೆ. ಆದ್ರಿಂದ ಇವರೂ ಇವರ ಹೆಂಡ್ತಿ ಅವಳನ್ನ ನೋಡ್ಕೊತಿದ್ದಾರೆ. ಅಹ್ಮದು ಹೇಳೋದು, “ನಾನೂ ನನ್ನ ಹೆಂಡ್ತಿ ಇವಳನ್ನ ನೋಡ್ಕೊಳ್ಳೋಕೆ ಏನೆಲ್ಲಾ ತ್ಯಾಗ ಮಾಡ್ತಿದೀವಿ, ಎಷ್ಟೆಲ್ಲಾ ಕಷ್ಟಪಡ್ತಿದ್ದೀವಿ ಅನ್ನೋದು ಅವಳಿಗೆ ಪೂರ್ತಿ ಗೊತ್ತಿಲ್ಲ. ಆದ್ರೂ ಅವಳು ಆಗೊಮ್ಮೆ ಈಗೊಮ್ಮೆ ನಮಗೆ ಥ್ಯಾಂಕ್ಸ್ ಹೇಳಿದ್ರೆ ಅಥವಾ ಐ ಲವ್ ಯೂ ಅಂತ ಬರೆದು ತೋರಿಸಿದ್ರೆ ನಮಗೆ ಆಗೋ ಖುಷಿ ಅಷ್ಟಿಷ್ಟಲ್ಲ.”
ಖುಷಿ ಕಾಪಾಡ್ಕೊಳ್ಳಿ
9. ಆರೈಕೆ ಮಾಡ್ತಿರೋರು ಹೇಗೆ ವಿನಮ್ರತೆ ತೋರಿಸಬಹುದು?
9 ನಿಮ್ಮ ಕೈಯಲ್ಲಿ ಏನು ಆಗುತ್ತೆ, ಏನು ಆಗಲ್ಲ ಅಂತ ಅರ್ಥ ಮಾಡ್ಕೊಳ್ಳಿ. (ಜ್ಞಾನೋ. 11:2) ಸಹಾಯ ಮಾಡೋಕೆ ಮನಸ್ಸಿರುತ್ತೆ, ಆದ್ರೆ ಅದನ್ನ ಮಾಡೋಕೆ ಬೇಕಾಗಿರೋ ಸಮಯ-ಶಕ್ತಿ ನಮ್ಮಲ್ಲಿ ಯಾವಾಗ್ಲೂ ಇರಲ್ಲ. ಅದಕ್ಕೆ ನಿಮ್ಮ ಕೈಯಲ್ಲಿ ಏನಾಗುತ್ತೆ, ಏನಾಗಲ್ಲ ಅಂತ ನೀವು ತಿಳ್ಕೊಬೇಕು. ಕೆಲವೊಮ್ಮೆ ‘ಇದನ್ನ ನನಗೆ ಮಾಡೋಕೆ ಆಗಲ್ಲ’ ಅಂತ ನೀವು ಹೇಳಬಹುದು. ಅದ್ರಲ್ಲಿ ಏನೂ ತಪ್ಪಿಲ್ಲ. ನೀವು ಈ ತರ ನಡ್ಕೊಂಡ್ರೆ ನಿಮ್ಮಲ್ಲಿ ವಿನಮ್ರತೆ ಇದೆ ಅಂತ ತೋರಿಸ್ತಿದ್ದೀರ. ಯಾರಾದ್ರೂ ನಿಮಗೆ ಸಹಾಯ ಮಾಡ್ಲಾ ಅಂತ ಕೇಳಿದ್ರೆ ‘ಬೇಡ’ ಅಂತ ಹೇಳಬೇಡಿ. ಸಹೋದರ ಜಯ್ ಹೀಗೆ ಹೇಳ್ತಾರೆ, “ಪ್ರತಿದಿನ ನಮಗೆ ಮಾಡೋಕೆ ಸುಮಾರು ಕೆಲಸ ಇರಬಹುದು, ಆದ್ರೆ ನಮಗಿರೋ ಸಮಯ ಮತ್ತು ಶಕ್ತಿ ಸ್ವಲ್ಪನೇ ಅಂತ ನೆನಪಿಡಬೇಕು. ಅದಕ್ಕೇ ನಿಮ್ಮ ಕೈಯಲ್ಲಿ ಆಗೋದಕ್ಕಿಂದ ಜಾಸ್ತಿ ವಿಷ್ಯನ ಒಪ್ಕೊಳ್ಳದೇ ನಿಮ್ಮ ಕೈಯಲ್ಲಿ ಏನಾಗುತ್ತೋ ಅದನ್ನ ಮಾಡಿ, ಆಗ ನೀವು ಖುಷಿ ಖುಷಿಯಾಗಿ ಇರ್ತೀರ.”
10. ಆರೈಕೆ ಮಾಡೋರು ಕಾಯಿಲೆ ಬಿದ್ದವ್ರನ್ನ ಅರ್ಥ ಮಾಡ್ಕೊಳ್ಳೋದು ಯಾಕೆ ಮುಖ್ಯ? (ಜ್ಞಾನೋಕ್ತಿ 19:11)
10 ಅರ್ಥ ಮಾಡ್ಕೊಳ್ಳಿ. (ಜ್ಞಾನೋಕ್ತಿ 19:11 ಓದಿ.) ನೀವು ಕಾಯಿಲೆ ಬಿದ್ದಿರೋರನ್ನ ಚೆನ್ನಾಗಿ ಅರ್ಥ ಮಾಡ್ಕೊಳಿ. ಆಗ ನಿಮ್ಗೆ ಕಿರಿಕಿರಿ ಆದ್ರೂ ಸಮಾಧಾನವಾಗಿ ಇರ್ತೀರ. ಅರ್ಥ ಮಾಡ್ಕೊಳ್ಳೋ ವ್ಯಕ್ತಿ, ‘ಯಾಕೆ ಇವರು ಈ ತರ ನಡ್ಕೊಳ್ತಿದ್ದಾರೆ’ ಅಂತ ಯೋಚಿಸಿ ತಿಳ್ಕೊತಾನೆ. ಸಾಮಾನ್ಯವಾಗಿ ಕೆಲವು ಗಂಭೀರ ಕಾಯಿಲೆ ಇರೋರು ಕೆಲವೊಮ್ಮೆ ತಪ್ಪಾಗಿ ನಡ್ಕೊಂಡು ಬಿಡಬಹುದು. (ಪ್ರಸಂ. 7:7)ಉದಾಹರಣೆಗೆ, ಯಾವಾಗ್ಲೂ ದಯೆಯಿಂದ, ಯೋಚ್ನೆ ಮಾಡಿ ಮಾತಾಡೋ ವ್ಯಕ್ತಿನೂ ಕಾಯಿಲೆ ಬಂದ್ಮೇಲೆ ರೇಗಬಹುದು, ಕಿರುಚಬಹುದು ಅಥವಾ ನಿಮ್ಮನ್ನ ದೂರಬಹುದು, ನಿಮಗೆ ಬೇಜಾರಾಗೋ ತರ ಏನಾದ್ರೂ ಬೈದು ಬಿಡಬಹುದು. ನೀವು ಯಾರನ್ನಾದ್ರೂ ಆರೈಕೆ ಮಾಡ್ತಿರೋದಾದ್ರೆ ಅವ್ರಿಗಿರೋ ಕಾಯಿಲೆ ಬಗ್ಗೆ ಸ್ವಲ್ಪ ಓದಿ ತಿಳ್ಕೊಳ್ಳಿ. ನೀವು ಚೆನ್ನಾಗಿ ತಿಳ್ಕೊಂಡ್ರೆ, ‘ಅವರು ಬೇಕ್‌ಬೇಕಂತ ಈ ತರ ನಡ್ಕೋತಿಲ್ಲ, ಅವ್ರಿಗೆ ಈ ಕಾಯಿಲೆ ಇರೋದ್ರಿಂದ ಈ ತರ ನಡ್ಕೊಳ್ತಿದ್ದಾರೆ’ ಅಂತ ಅರ್ಥ ಮಾಡ್ಕೊತೀರ.—ಜ್ಞಾನೋ. 14:29.
11. ಆರೈಕೆ ಮಾಡೋರು ಪ್ರತಿದಿನ ಯಾವ ಮುಖ್ಯ ಕೆಲಸ ಮಾಡ್ಲೇಬೇಕು? (ಕೀರ್ತನೆ 132:4, 5)
11 ಯೆಹೋವನ ಜೊತೆ ಸ್ನೇಹ ಬಲಪಡಿಸೋಕೆ ಟೈಮ್ ಮಾಡ್ಕೊಳ್ಳಿ. ಕೆಲವೊಮ್ಮೆ ತುಂಬ ಕೆಲಸ ಮಾಡೋಕೋಸ್ಕರ ಬೇರೆ ಕೆಲಸಗಳನ್ನ ಸ್ವಲ್ಪ ಕಡಿಮೆ ಮಾಡಬೇಕಾಗುತ್ತೆ. (ಫಿಲಿ. 1:10) ನಮ್ಮೆಲ್ರಿಗೂ ಇರೋ ತುಂಬ ಮುಖ್ಯವಾದ ಕೆಲಸ ಯೆಹೋವನ ಜೊತೆ ನಮಗಿರೋ ಸ್ನೇಹನ ಬಲಪಡಿಸ್ಕೊಳ್ಳೋದೇ. ರಾಜ ದಾವೀದ ಯೆಹೋವನ ಆರಾಧನೆಗೆ ಯಾವಾಗ್ಲೂ ಮೊದಲ ಸ್ಥಾನ ಕೊಟ್ಟ. (ಕೀರ್ತನೆ 132:4, 5 ಓದಿ.) ಅದೇ ತರ ನಾವು ಕೂಡ ಪ್ರತಿದಿನ ಬೈಬಲ್ ಓದೋಕೆ, ಪ್ರಾರ್ಥನೆ ಮಾಡೋಕೆ ಟೈಮ್ ಕೊಡ್ಲೇಬೇಕು. ಎಲೀಶ ಅನ್ನೋ ಒಬ್ಬ ಸಹೋದರಿ ಏನ್ ಹೇಳ್ತಾರೆ ನೋಡಿ, “ನನಗೆ ಸಮಾಧಾನ ಕೊಡೋ ಕೀರ್ತನೆಗಳನ್ನ ಓದಿ ಧ್ಯಾನ ಮಾಡ್ತೀನಿ. ನಾನು ಯೆಹೋವ ದೇವರಿಗೆ ಹಗಲಿರುಳು ಪ್ರಾರ್ಥನೆ ಮಾಡ್ತಾ ಇರ್ತೀನಿ. ಅದಕ್ಕೇ ನಾನು ಕಷ್ಟದಲ್ಲೂ ಖುಷಿಯಾಗಿ, ಸಮಾಧಾನವಾಗಿ ಇದ್ದೀನಿ.”
12. ಆರೈಕೆ ಮಾಡೋರು ತಮ್ಮ ಆರೋಗ್ಯ ನೋಡ್ಕೊಳ್ಳೋಕೆ ಟೈಮ್ ಮಾಡ್ಕೊಳ್ಳೋದು ಯಾಕೆ ಮುಖ್ಯ?
12 ನಿಮ್ಮ ಆರೋಗ್ಯ ಕಾಪಾಡ್ಕೊಳ್ಳೋಕೆ ಟೈಮ್ ಮಾಡ್ಕೊಳ್ಳಿ. ಆರೈಕೆ ಮಾಡೋರು ಬಿಜ಼ಿ ಆಗಿರೋದ್ರಿಂದ ಅಡುಗೆ ಮಾಡೋಕೆ, ಒಳ್ಳೆ ಊಟ ತಿನ್ನೋಕೆ ಕಷ್ಟ ಆಗಬಹುದು. ಆದ್ರೆ ನಿಮ್ಮ ದೇಹ ಮತ್ತು ಮನಸ್ಸು ಆರೋಗ್ಯವಾಗಿ ಇರಬೇಕಂದ್ರೆ, ನೀವು ಒಳ್ಳೆ ಊಟ ತಿನ್ನಬೇಕು, ಸ್ವಲ್ಪನಾದ್ರೂ ವ್ಯಾಯಾಮ ಮಾಡಬೇಕು. ಹಾಗಾಗಿ ಇದಕ್ಕೆ ಹೇಗಾದ್ರೂ ಮಾಡಿ ಸ್ವಲ್ಪ ಟೈಮ್ ಮಾಡ್ಕೊಳ್ಳಿ. (ಎಫೆ. 5:15, 16) ಇದ್ರ ಜೊತೆಗೆ ನೀವು ಸಾಕಷ್ಟು ನಿದ್ದೆನೂ ಮಾಡಬೇಕು. (ಪ್ರಸಂ. 4:6) ನಿದ್ದೆ ಮೆದುಳಲ್ಲಿರೋ ವಿಷಕಾರಿ ವಿಷ್ಯಗಳನ್ನ ತೆಗೆಯೋಕೆ ಸಹಾಯ ಮಾಡುತ್ತೆ ಅಂತ ಕೆಲವು ವರದಿಗಳು ಹೇಳುತ್ತೆ. ಬ್ಯಾನರ್ ಹೆಲ್ತ್ ಅನ್ನೋ ಆರೋಗ್ಯ ಸಂಸ್ಥೆ “ಹೌ ಸ್ಲೀಪ್ ಕಾನ್ ಅಫೆಕ್ಟ್ ಸ್ಟ್ರೆಸ್” ಅನ್ನೋ ಲೇಖನದಲ್ಲಿ, ‘ಸಾಕಷ್ಟು ನಿದ್ದೆ ಮಾಡೋದ್ರಿಂದ ಚಿಂತೆ ಕಮ್ಮಿ ಆಗುತ್ತೆ, ಒತ್ತಡನ ನಿಭಾಯಿಸೋಕೆ ಬೇಕಾಗಿರೋ ಶಕ್ತಿ ಸಿಗುತ್ತೆ’ ಅಂತ ಹೇಳಿದೆ. ಇದ್ರ ಜೊತೆಗೆ ನೀವು ಸ್ವಲ್ಪ ಮಟ್ಟಿಗೆ ಮನೋರಂಜನೆಗೂ ಟೈಮ್ ಮಾಡ್ಕೋಬೇಕು. (ಪ್ರಸಂ. 8:15) ಈ ರೀತಿ ಆರೈಕೆ ಮಾಡ್ತಾ ಖುಷಿಯಾಗಿ ಇರೋ ಒಬ್ಬ ಸಹೋದರಿ ಹೀಗೆ ಹೇಳ್ತಾರೆ, “ವಾತಾವರಣ ಚೆನ್ನಾಗಿದ್ದಾಗ ನಾನು ಮನೆ ಹೊರಗೆ ಕೂತ್ಕೊಳ್ತೀನಿ, ಹೊಳಿತಾ ಇರೋ ಸೂರ್ಯನ ನೋಡ್ತೀನಿ. ತಿಂಗಳಿಗೆ ಒಂದು ಸಲನಾದ್ರೂ ನನ್ನ ಸ್ನೇಹಿತ್ರ ಜೊತೆ ಸಮಯ ಕಳೆಯೋಕೆ ಪ್ಲಾನ್ ಮಾಡ್ತೀನಿ.”
13. ನಗ್‌ನಗ್ತಾ ಇರೋಕೆ ಪ್ರಯತ್ನ ಮಾಡೋದು ಯಾಕೆ ಮುಖ್ಯ? (ಜ್ಞಾನೋಕ್ತಿ 17:22)
13 ನಗ್‌ನಗ್ತಾ ಇರೋಕೆ ಕಾರಣ ಹುಡುಕಿ. (ಜ್ಞಾನೋಕ್ತಿ 17:22 ಓದಿ; ಪ್ರಸಂ. 3:1, 4) ನಗು ನಿಮ್ಮ ದೇಹ ಮತ್ತು ಮೆದುಳು ಆರೋಗ್ಯವಾಗಿ ಇರೋಕೆ ಸಹಾಯ ಮಾಡುತ್ತೆ. ನೀವು ಅಂದ್ಕೊಂಡಂತೆ ಎಲ್ಲ ಟೈಮಲ್ಲೂ ಇರೋಕೆ ಆಗಲ್ಲ. ಕೆಲವೊಮ್ಮೆ ಬೇಜಾರಾಗಬಹುದು. ಆದ್ರೆ ಆ ಸಮಯದಲ್ಲೂ ನೀವು ನಗೋಕೆ ಪ್ರಯತ್ನ ಮಾಡೋದಾದ್ರೆ, ಆ ಪರಿಸ್ಥಿತಿನ ಆ ಒತ್ತಡನ ಕಡಿಮೆ ಮಾಡೋಕೆ ಆಗುತ್ತೆ. ಅದ್ರಲ್ಲೂ ನೀವು ಯಾರನ್ನ ನೋಡ್ಕೊಳ್ತಾ ಇದ್ದೀರೋ, ಆ ವ್ಯಕ್ತಿ ಜೊತೆ ಸೇರಿ ತಮಾಷೆ ಮಾಡ್ತಾ ನಗಾಡೋದಾದ್ರೆ ನಿಮ್ಮಿಬ್ರ ಬಾಂಧವ್ಯ ಇನ್ನಷ್ಟು ಬಲ ಆಗುತ್ತೆ.
14. ಒಬ್ಬ ಒಳ್ಳೆ ಫ್ರೆಂಡ್ ಹತ್ರ ಮಾತಾಡೋದ್ರಿಂದ ನಿಮಗೆ ಹೇಗೆ ಸಹಾಯ ಆಗುತ್ತೆ?
14 ಒಬ್ಬ ಒಳ್ಳೆ ಫ್ರೆಂಡ್ ಹತ್ರ ಮಾತಾಡಿ. ನೀವು ಖುಷಿಖುಷಿಯಾಗಿ ಇರಬೇಕು ಅಂತ ಎಷ್ಟೇ ಪ್ರಯತ್ನ ಹಾಕಿದ್ರೂ ಕೆಲವೊಮ್ಮೆ ಕುಗ್ಗಿ ಹೋಗ್ತೀರ. ಆಗೆಲ್ಲ ನಿಮಗೆ ಹೇಗೆ ಅನಿಸ್ತಿದೆ ಅಂತ ಒಬ್ಬ ಒಳ್ಳೆ ಫ್ರೆಂಡ್ ಹತ್ರ ಮಾತಾಡಿ. ಅವರು ನಿಮ್ಮಲ್ಲಿ ತಪ್ಪು ಹುಡುಕದೆ ನಿಮಗೆ ಬೇಜಾರು ಮಾಡದೆ ನೀವು ಹೇಳೋದನ್ನ ಕೇಳಿಸ್ಕೊತ್ತಾರೆ. (ಜ್ಞಾನೋ. 17:17) ನಾವು ಹೇಳೋದನ್ನ ಅವರು ಕೇಳಿಸ್ಕೊಂಡಾಗ ಮತ್ತು ನಿಮಗೆ ಸಮಾಧಾನ ಮಾಡೋಕೆ ಏನಾದ್ರೂ ಹೇಳಿದಾಗ ನೀವು ಖುಷಿಯಾಗಿ ಇರ್ತೀರ.—ಜ್ಞಾನೋ. 12:25.
15. ಪರದೈಸಿನ ಬಗ್ಗೆ ಯೋಚ್ನೆ ಮಾಡೋದ್ರಿಂದ ಏನು ಪ್ರಯೋಜ್ನ?
15 ಪರದೈಸಲ್ಲಿ ಅವ್ರ ಜೊತೆ ಜೀವನ ಹೇಗಿರುತ್ತೆ ಅಂತ ಯೋಚ್ನೆ ಮಾಡಿ. ಅವ್ರನ್ನ ಆರೈಕೆ ಮಾಡ್ತಿರೋ ನಿಮ್ಮ ಈ ಕೆಲಸ ಸ್ವಲ್ಪ ದಿನ ಅಷ್ಟೇ. ಮನುಷ್ಯರು ಈ ಕೆಲಸ ಮಾಡ್ತಾ ಈ ತರ ಕಷ್ಟಪಡಬೇಕು ಅಂತ ದೇವರು ಯಾವತ್ತೂ ಅಂದ್ಕೊಂಡಿಲ್ಲ. (2 ಕೊರಿಂ. 4:16-18) ನಿಜವಾದ ಜೀವನ ನಮಗೆ ಮುಂದೆ ದೇವರ ಆಳ್ವಿಕೆಯಲ್ಲಿ ಸಿಗುತ್ತೆ. (1 ತಿಮೊ. 6:19) ಆ ಪರದೈಸಲ್ಲಿ ನೀವಿಬ್ರೂ ಸೇರಿ ಏನು ಮಾಡ್ತೀರ ಅಂತ ಮಾತಾಡಿದ್ರೆ ಈಗ್ಲೂ ನೀವು ಖುಷಿಯಾಗಿರಬಹುದು. (ಯೆಶಾ. 33:24; 65:21) ಹೀದರ್ ಅನ್ನೋ ಸಹೋದರಿ ಹೀಗೆ ಹೇಳ್ತಾರೆ, “ನಾನು ಯಾರನ್ನ ಆರೈಕೆ ಮಾಡ್ತಿದ್ದೀನೋ, ಆ ವ್ಯಕ್ತಿ ಹತ್ರ ಆಗಿಂದಾಗ್ಗೆ ‘ಮುಂದೆ ಒಂದು ದಿನ ನಾವಿಬ್ರೂ ಒಟ್ಟೊಟ್ಟಿಗೆ ಓಡಾಡ್ತೀವಿ, ಸೈಕಲ್ ಓಡಿಸ್ತೀವಿ, ಬಟ್ಟೆ ಹೊಲಿತೀವಿ, ಅಡುಗೆ ಮಾಡ್ತೀವಿ ಮತ್ತು ಸತ್ತವರು ಮತ್ತೆ ಎದ್ದು ಬಂದಾಗ ಅವರೆಲ್ರಿಗೂ ಬಡಿಸ್ತೀವಿ’ ಅಂತ ಹೇಳ್ತೀನಿ. ಯೆಹೋವನು ಈ ನಿರೀಕ್ಷೆ ಕೊಟ್ಟಿರೋದಕ್ಕೆ ನಾವಿಬ್ರೂ ಆತನಿಗೆ ಥ್ಯಾಂಕ್ಸ್ ಹೇಳ್ತೀವಿ.”
ಆರೈಕೆ ಮಾಡೋರಿಗೆ ನೀವು ಹೇಗೆ ಸಹಾಯ ಮಾಡಬಹುದು?
16. ಆರೈಕೆ ಮಾಡ್ತಿರೋರಿಗೆ ನಾವು ಹೇಗೆ ಸಹಾಯ ಮಾಡಬಹುದು? (ಚಿತ್ರ ನೋಡಿ.)
16 ಆರೈಕೆ ಮಾಡೋರು ಸ್ವಲ್ಪ ಬಿಡುವಾಗಿರೋಕೆ ಸಹಾಯ ಮಾಡಿ. ಆರೈಕೆ ಮಾಡೋರಿಗೂ ಸ್ವಲ್ಪ ವಿಶ್ರಾಂತಿ ಬೇಕಾಗುತ್ತೆ. ಹಾಗಾಗಿ ಸಭೆಲಿರೋ ನಾವು ಹೋಗಿ ಸ್ವಲ್ಪ ಹೊತ್ತು ಹುಷಾರಿಲ್ಲದವ್ರನ್ನ ನೋಡ್ಕೊಂಡ್ರೆ ಅವ್ರಿಗೆ ಸಹಾಯ ಆಗುತ್ತೆ. ಆಗ ಅವರು ಸ್ವಲ್ಪ ರೆಸ್ಟ್ ಮಾಡೋಕೆ ಅಥವಾ ಅವ್ರ ಸ್ವಂತ ಕೆಲಸ ಮಾಡ್ಕೊಳ್ಳೋಕೆ ಆಗುತ್ತೆ. (ಗಲಾ. 6:2) ಕೆಲವು ಪ್ರಚಾರಕರಂತೂ ಪ್ರತಿವಾರ ಯಾರು ಹೋಗಿ ಅವ್ರಿಗೆ ಸಹಾಯ ಮಾಡಬೇಕು ಅಂತ ಒಂದು ಶೆಡ್ಯೂಲ್ ಮಾಡಿದ್ದಾರೆ. ನಟಾಲಿಯಾ ಅನ್ನೋ ಒಬ್ಬ ಸಹೋದರಿ ಏನ್ ಹೇಳ್ತಾರೆ ನೋಡಿ, ಅವರ ಗಂಡನಿಗೆ ಸ್ಟ್ರೋಕ್ ಆಗಿದೆ “ನಮ್ಮ ಸಭೆಯಲ್ಲಿರೋ ಒಬ್ಬ ಸಹೋದರ ವಾರಕ್ಕೆ ಒಂದು ಸಲ ಅಥವಾ ಎರಡು ಸಲ ಬಂದು ನನ್ನ ಗಂಡನ ಜೊತೇಲಿ ಸಮಯ ಕಳೀತಾರೆ, ಅವ್ರನ್ನ ಸೇವೆಗೆ, ವಾಕಿಂಗ್‌ಗೆ ಕರ್ಕೊಂಡು ಹೋಗ್ತಾರೆ. ಅವ್ರ ಜೊತೆ ಕೆಲವೊಮ್ಮೆ ಪಿಕ್ಚರ್ ಕೂಡ ನೋಡ್ತಾರೆ. ಆಗೆಲ್ಲ ನನ್ನ ಗಂಡ ಖುಷಿಖುಷಿಯಾಗಿ ಇರ್ತಾರೆ. ಆಗ ನಾನು ನನ್ನ ಸ್ವಂತ ಕೆಲ್ಸಗಳನ್ನ ಮಾಡ್ಕೊಳ್ಳೋಕೆ, ಸ್ವಲ್ಪ ವಿಶ್ರಾಂತಿ ತಗೊಳ್ಳೋಕೆ ಅಥವಾ ವಾಕಿಂಗ್ ಮಾಡೋಕೆ ಸಮಯ ಸಿಗುತ್ತೆ.” ನಾವು ಬೇರೆಯವ್ರಿಗೆ ಇನ್ನೂ ಹೇಗೆ ಸಹಾಯ ಮಾಡಬಹುದು? ಕೆಲವೊಮ್ಮೆ, ರಾತ್ರಿ ಹೊತ್ತಲ್ಲಿ ಹೋಗಿ ಹುಷಾರಿಲ್ಲದೆ ಇರೋರನ್ನ ನಾವು ನೋಡ್ಕೊಳ್ಳೋದಾದ್ರೆ, ಅವ್ರನ್ನ ಆರೈಕೆ ಮಾಡೋರು ಸ್ವಲ್ಪ ನಿದ್ದೆ ಮಾಡೋಕೆ ಸಹಾಯ ಆಗುತ್ತೆ.
ನಿಮ್ಮ ಸಭೇಲಿರೋ ಆರೈಕೆ ಮಾಡ್ತಿರೋ ವ್ಯಕ್ತಿಗೆ ನೀವು ಹೇಗೆ ಸಹಾಯ ಮಾಡಬಹುದು? (ಪ್ಯಾರ 16 ನೋಡಿ)a
17. ಆರೈಕೆ ಮಾಡೋರಿಗೆ ಕೂಟಗಳಲ್ಲಿ ನಾವು ಹೇಗೆ ಸಹಾಯ ಮಾಡಬಹುದು?
17 ಆರೈಕೆ ಮಾಡೋರಿಗೆ ಕೂಟಗಳಲ್ಲಿ ಸಹಾಯ ಮಾಡಿ. ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ಮತ್ತು ಅಧಿವೇಶನಗಳಲ್ಲಿ ಆರೈಕೆ ಮಾಡೋರಿಗೆ ಗಮನ ಕೊಡೋಕೆ ತುಂಬ ಕಷ್ಟ ಆಗುತ್ತೆ. ಹಾಗಾಗಿ ಅವರು ಯಾರನ್ನ ನೋಡ್ಕೊಳ್ತಾರೋ ಅವ್ರ ಪಕ್ಕದಲ್ಲಿ ನೀವು ಹೋಗಿ ಕೂತ್ಕೊಳ್ಳಿ. ಆಗ ಸ್ವಲ್ಪ ಹೊತ್ತು ಅವರು ಕೂಟಗಳನ್ನ ಆನಂದಿಸೋಕೆ ಆಗುತ್ತೆ. ವಯಸ್ಸಾಗಿರೋರು ಅಥವಾ ಕಾಯಿಲೆ ಬಿದ್ದಿರೋರು ಮನೆಯಿಂದ ಹೊರಗಡೆ ಬರೋಕೆ ಆಗದಿರೋ ಪರಿಸ್ಥಿತಿಲಿದ್ರೆ ನೀವು ಅವ್ರ ಮನೆಗೆ ಹೋಗಿ ಜ಼ೂಮಲ್ಲಿ ಮೀಟಿಂಗ್ ಹಾಕಿ ಕೊಟ್ಟು ಅವ್ರ ಜೊತೆ ನೋಡಬಹುದು. ಆಗ ಅವ್ರನ್ನ ಆರೈಕೆ ಮಾಡ್ತಿರೋರು ನೇರವಾಗಿ ಕೂಟಗಳಿಗೆ ಹೋಗಿ ಆನಂದಿಸಿ ಬರೋಕೆ ಆಗುತ್ತೆ.
18. ಆರೈಕೆ ಮಾಡ್ತಿರೋರಿಗೆ ನಾವು ಇನ್ನೂ ಹೇಗೆಲ್ಲ ಸಹಾಯ ಮಾಡಬಹುದು?
18 ಆರೈಕೆ ಮಾಡೋರನ್ನ ಮೆಚ್ಕೊಳ್ಳಿ ಮತ್ತು ಅವ್ರಿಗೋಸ್ಕರ ಪ್ರಾರ್ಥನೆ ಮಾಡಿ. ಹಿರಿಯರು ಆರೈಕೆ ಮಾಡೋರಿಗೆ ಆಗಾಗ ಪರಿಪಾಲನಾ ಭೇಟಿ ಮಾಡ್ತಿರಬೇಕು. (ಜ್ಞಾನೋ. 27:23) ನಾವೆಲ್ಲ ಎಷ್ಟೇ ಬಿಜ಼ಿ ಇದ್ರೂ ಆರೈಕೆ ಮಾಡ್ತಿರೋರನ್ನ ಮನಸಾರೆ ಮೆಚ್ಕೊಳ್ಳೋಕೆ, ಪ್ರಶಂಸಿಸೋಕೆ ಟೈಮ್ ಮಾಡ್ಕೊಬೇಕು. ಅಷ್ಟೇ ಅಲ್ಲ, ‘ಅವ್ರಿಗೆ ಬೇಕಾಗಿರೋ ಬಲ ಕೊಡಪ್ಪ, ಅವರು ತಮ್ಮ ಖುಷಿನ ಕಾಪಾಡ್ಕೊಳ್ಳೋಕೆ ಸಹಾಯ ಮಾಡಪ್ಪ’ ಅಂತ ಅವ್ರಿಗೋಸ್ಕರ ನಾವು ಕೇಳಬಹುದು.—2 ಕೊರಿಂ. 1:11.
19. ನಾವೆಲ್ಲಾ ಯಾವುದಕ್ಕೋಸ್ಕರ ಕಾಯ್ತಿದ್ದೀವಿ?
19 ಯೆಹೋವ ಮುಂದೆ ಏನೆಲ್ಲ ಮಾಡ್ತಾನೆ ಗೊತ್ತಾ? ನಮ್ಮ ಕಷ್ಟ ಕಣ್ಣೀರನ್ನ, ಕಾಯಿಲೆ ಮತ್ತು ಸಾವನ್ನ ತೆಗೆದುಹಾಕ್ತಾನೆ. (ಪ್ರಕ. 21:3, 4) ‘ಕುಂಟ, ಜಿಂಕೆ ತರ ಜಿಗಿಯೋ’ ಹಾಗೆ ಮಾಡ್ತಾನೆ. (ಯೆಶಾ. 35:5, 6) ವಯಸ್ಸಾದ್ಮೇಲೆ ಬರೋ ಕಷ್ಟನ, ಅವ್ರ ಆರೈಕೆ ಮಾಡುವಾಗ ಆಗೋ ನೋವನ್ನ ಕಿತ್ತು ಬಿಸಾಕ್ತಾನೆ. ಆ ಕಷ್ಟನ “ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸ್ಕೊಳಲ್ಲ.” (ಯೆಶಾ. 65:17) ಇದೆಲ್ಲ ದೇವರ ಆಳ್ವಿಕೆಯಲ್ಲಿ ನೆರವೇರುತ್ತೆ. ನಾವೀಗ ಅದಕ್ಕಾಗಿ ಕಾಯ್ತಾ ಇದ್ದೀವಿ. ಅಲ್ಲಿವರೆಗೂ ಯೆಹೋವ ದೇವರು ನಮ್ಮ ಕೈ ಬಿಟ್ಟಿದ್ದಾನೆ ಅಂತಲ್ಲ, ನಾವು ಆತನ ಮೇಲೆ ಆತ್ಕೊಳೋದಾದ್ರೆ ಈಗ್ಲೂ ತಾಳ್ಮೆ ಮತ್ತು ‘ಆನಂದದಿಂದ ಸಹಿಸ್ಕೊಳ್ಳೋಕೆ ಬೇಕಾದ ಶಕ್ತಿನ’ ಆತನು ನಮ್ಗೆ ಕೊಡ್ತಾನೆ.—ಕೊಲೊ. 1:11.
ಗೀತೆ 155 ನಂ ಖುಷಿಗೆ ಕಾರಣ ಯೆಹೋವ
a ಚಿತ್ರ ವಿವರಣೆ: ಇಬ್ರು ಯುವ ಸಹೋದರಿಯರು ವಯಸ್ಸಾದ ಸಹೋದರಿಯನ್ನ ನೋಡೋಕೆ ಬಂದಿದ್ದಾರೆ, ಹೀಗೆ ಅವ್ರನ್ನ ಆರೈಕೆ ಮಾಡೋರು ಸ್ವಲ್ಪ ಬಿಡುವಾಗಿರೋಕೆ ಸಹಾಯ ಮಾಡ್ತಿದ್ದಾರೆ.