ಸೈಬಿರೀಯಕ್ಕೆ ಗಡೀಪಾರುಮಾಡಲ್ಪಟ್ಟದ್ದು!
ವಸ್ಯೀಲ್ಯೈ ಕಲೈಯಿನ್ಹೇಳಿದಂತೆ
ಕಿವುಡುಗೊಳಿಸುವ ಫಿರಂಗಿ ಶಬ್ದಗಳ ಮಧ್ಯೆ ವ್ಯಕ್ತಿಯೊಬ್ಬನು ಶಾಂತಚಿತ್ತನಾಗಿ ಬೈಬಲನ್ನು ಓದುತ್ತಿರುವುದನ್ನು ನೀವು ನೋಡುವಲ್ಲಿ, ಅವನು ಏಕೆ ಅಷ್ಟು ಶಾಂತಚಿತ್ತನಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ನೀವು ಇಷ್ಟಪಡುವುದಿಲ್ಲವೋ? ನಮ್ಮ ತಂದೆಯವರು, ಅಂತಹ ಒಂದು ದೃಶ್ಯವನ್ನೇ ಸುಮಾರು 50 ವರ್ಷಗಳ ಹಿಂದೆ ನೋಡಿದರು.
ಅದು 1942, ಜುಲೈ ತಿಂಗಳಾಗಿತ್ತು, ಆಗ IIನೇ ವಿಶ್ವ ಯುದ್ಧವು ಬಿರುಸಾಗಿ ನಡೆಯುತ್ತಿತ್ತು. ಯೂಕ್ರೇನಿನ ವಿಲ್ಶ್ಯಾನ್ಟಿಸಾದ ನಮ್ಮ ತಂದೆಯ ಹಳ್ಳಿಯಿಂದ ಜರ್ಮನ್ ಸೈನ್ಯವು ಹಾದುಹೋದಾಗ, ನನ್ನ ತಂದೆಯು ವೃದ್ಧರಿದ್ದ ಒಂದು ಮನೆಯಲ್ಲಿ ಸ್ವಲ್ಪ ಹೊತ್ತು ತಂಗಿದರು. ಸುತ್ತಮುತ್ತಲು ಎಲ್ಲೆಲ್ಲೂ ಫಿರಂಗಿ ಗುಂಡುಗಳು ಆರ್ಭಟಿಸುತ್ತಿದ್ದಾಗ, ಆ ಮನೆಯ ವ್ಯಕ್ತಿ ಮಾತ್ರ ಮುಸುಕಿನ ಜೋಳವನ್ನು ಬೇಯಿಸುತ್ತಾ ಸ್ಟವ್ ಮುಂದೆ ಕುಳಿತುಕೊಂಡು, ಬೈಬಲನ್ನು ಓದುತ್ತಿದ್ದನು.
ಅದಾಗಿ ಐದು ವರ್ಷಗಳ ಬಳಿಕ, ಪಶ್ಚಿಮ ಯೂಕ್ರೇನಿನ ಇವಾನ-ಫ್ರಾನ್ಕಾಫ್ಸ್ಕ್ ಎಂಬ ಸುಂದರವಾದ ನಗರದಲ್ಲಿ ನಾನು ಜನಿಸಿದೆ. ಆಗ ಅದು ಸೋವಿಯಟ್ ಯೂನಿಯನ್ನ ಒಂದು ಭಾಗವಾಗಿತ್ತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದ ಆ ಮನುಷ್ಯನನ್ನು ಭೇಟಿಯಾದ ಸ್ಮರಣೀಯ ಘಟನೆ ಮತ್ತು ಆ ಯುದ್ಧಾವಧಿಗಳ ಭೀಕರತೆಗಳನ್ನು ಸಹ ನಂತರ ನನ್ನ ತಂದೆಯು ನನಗೆ ಹೇಳಿದರು. ಇವುಗಳೆಲ್ಲವನ್ನು ನೋಡಿ ಜನರು ಬಳಲಿಹೋಗಿ, ತಬ್ಬಿಬ್ಬಾಗಿದ್ದರು. ಅನೇಕರು, ‘ಇಷ್ಟೊಂದು ಅನ್ಯಾಯವೇಕೆ ನಡೆಯುತ್ತಿದೆ? ಸಾವಿರಾರು ಅಮಾಯಕ ಜನರು ಏಕೆ ಸಾಯುತ್ತಿದ್ದಾರೆ? ಇದನ್ನೆಲ್ಲವನ್ನು ದೇವರು ಏಕೆ ಅನುಮತಿಸಿದ್ದಾನೆ? ಏಕೆ? ಏಕೆ? ಏಕೆ?’ ಎಂದು ಯೋಚಿಸಲು ಪ್ರಾರಂಭಿಸಿದರು.
ಇಂತಹ ಪ್ರಶ್ನೆಗಳ ಸುರಿಮಳೆಯನ್ನು ಆ ವೃದ್ಧ ವ್ಯಕ್ತಿಯೊಡನೆ ತಂದೆಯು ಮುಕ್ತವಾಗಿ ಚರ್ಚಿಸಿದರು. ಒಂದರ ನಂತರ ಇನ್ನೊಂದು ಬೈಬಲಿನ ವಚನಗಳನ್ನು ತೆರೆಯುತ್ತಾ, ಆ ವ್ಯಕ್ತಿಯು ನನ್ನ ತಂದೆಗೆ ಅನೇಕ ವರ್ಷಗಳಿಂದ ಗೊಂದಲಗೊಳಿಸಿದ ಪ್ರಶ್ನೆಗಳನ್ನು ಉತ್ತರಿಸಿದನು. ತನ್ನ ನೇಮಿತ ಸಮಯದಲ್ಲಿ ಈ ಎಲ್ಲ ಯುದ್ಧಗಳಿಗೆ ಅಂತ್ಯವನ್ನು ತರಲು ದೇವರು ಉದ್ದೇಶಿಸಿದ್ದಾನೆ ಮತ್ತು ಭೂಮಿಯು ಒಂದು ಸುಂದರವಾದ ಪ್ರಮೋದವನವಾಗುವುದು ಎಂದು ಅವನು ವಿವರಿಸಿದನು.—ಕೀರ್ತನೆ 46:9; ಯೆಶಾಯ 2:4; ಪ್ರಕಟನೆ 21:3, 4.
ತಂದೆಯು ಮನೆಯ ಕಡೆ ಧಾವಿಸಿ, ಹೀಗೆ ಉದ್ಗರಿಸಿದರು: “ನಂಬಲಿಕ್ಕಾಗದ ಸಂಗತಿಯು ನಡೆಯಿತು, ಗೊತ್ತಾ? ಯೆಹೋವನ ಸಾಕ್ಷಿಗಳೊಂದಿಗೆ ಮಾಡಿದ ಮೊದಲನೇ ಚರ್ಚೆಯಲ್ಲೇ ನನ್ನ ಕಣ್ಣು ತೆರೆಯಿತು! ನನಗೆ ಸತ್ಯವು ಸಿಕ್ಕಿತು!” ತಾನು ಕ್ಯಾಥೊಲಿಕ್ ಚರ್ಚಿಗೆ ಕ್ರಮವಾಗಿ ಹೋಗುತ್ತಿದ್ದರೂ, ತನ್ನ ಪ್ರಶ್ನೆಗಳಿಗೆ ಅಲ್ಲಿನ ಪಾದ್ರಿಗಳು ಎಂದೂ ಉತ್ತರಿಸಲು ಶಕ್ತರಾಗಿರಲಿಲ್ಲವೆಂದು ನನ್ನ ತಂದೆಯು ಹೇಳಿದರು. ಆಗ ನನ್ನ ತಂದೆ ಬೈಬಲನ್ನು ಅಭ್ಯಾಸಮಾಡಲು ಪ್ರಾರಂಭಿಸಿದರು ಮತ್ತು ನಮ್ಮ ತಾಯಿಯು ಅವರನ್ನು ಜೊತೆಗೂಡಿದರು. ಅವರು ತಮ್ಮ ಮೂವರು ಮಕ್ಕಳಿಗೂ ಅಂದರೆ, ನನ್ನ ಸಹೋದರಿ, ಕೇವಲ 2 ವರ್ಷ ಪ್ರಾಯದ ಅಕ್ಕಳಿಗೆ ಮತ್ತು ನನ್ನ 7 ಹಾಗೂ 11 ವರ್ಷ ಪ್ರಾಯದ ಅಣ್ಣಂದಿರಿಗೆ ಕಲಿಸಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ಅನಂತರ, ಬಾಂಬಿನ ದಾಳಿಯಿಂದ ಅವರ ಮನೆಯು ತೀರ ಹಾಳಾಗಿ, ವಾಸಿಸಲು ಅವರಿಗೆ ಕೇವಲ ಒಂದು ಕೋಣೆಯು ಉಳಿಯಿತು.
ತಾಯಿಗೆ, ಆರು ಸಹೋದರಿಯರು ಮತ್ತು ಒಬ್ಬ ಸಹೋದರನಿದ್ದ ಒಂದು ದೊಡ್ಡ ಕುಟುಂಬವಿತ್ತು. ಅವರ ತಂದೆ ಐಶ್ವರ್ಯವಂತರಲ್ಲಿ ಒಬ್ಬರಾಗಿದ್ದದ್ದರಿಂದ, ಅವರು ತಮ್ಮ ಅಧಿಕಾರ ಹಾಗೂ ಅಂತಸ್ತಿಗೆ ತುಂಬ ಬೆಲೆಕೊಡುವವರಾಗಿದ್ದರು. ಆದುದರಿಂದ, ನಮ್ಮ ಕುಟುಂಬವು ಹೊಸದಾಗಿ ಕಂಡುಕೊಂಡ ನಂಬಿಕೆಗೆ ಮೊದಮೊದಲು ನಮ್ಮ ಸಂಬಂಧಿಕರು ವಿರೋಧವನ್ನು ವ್ಯಕ್ತಪಡಿಸಿದರು. ಆದರೆ, ಕಾಲವು ಉರುಳಿದಂತೆ, ವಿರೋಧಮಾಡಿದವರಲ್ಲಿ ಅನೇಕರು, ಪ್ರತಿಮೆಗಳ ಉಪಯೋಗದಂತಹ, ಧಾರ್ಮಿಕ ಆಚರಣೆಗಳನ್ನು ಆಚರಿಸುವುದನ್ನು ಬಿಟ್ಟುಬಿಟ್ಟು, ನಮ್ಮ ಹೆತ್ತವರೊಂದಿಗೆ ಶುದ್ಧಾರಾಧನೆಯಲ್ಲಿ ಒಳಗೂಡಿದರು.
ಪಾದ್ರಿಗಳು ಮುಚ್ಚುಮರೆಯಿಲ್ಲದೆ ಜನರನ್ನು ಸಾಕ್ಷಿಗಳ ವಿರುದ್ಧ ಏಳುವಂತೆ ಕೆರಳಿಸಿದರು. ಇದರಿಂದಾಗಿ, ಸ್ಥಳೀಯರು ಅವರ ಕಿಟಕಿಗಳನ್ನು ಮುರಿದುಹಾಕಿ, ಅವರಿಗೆ ಬೆದರಿಕೆಯನ್ನೊಡ್ಡುತ್ತಿದ್ದರು. ಇಷ್ಟೆಲ್ಲ ಆದರೂ, ನಮ್ಮ ಹೆತ್ತವರು ಮಾತ್ರ ಬೈಬಲ್ ಅಭ್ಯಾಸಮಾಡುವುದನ್ನು ನಿಲ್ಲಿಸಲಿಲ್ಲ. ಹೀಗೆ, ನಾನು 1947ರಲ್ಲಿ ಜನಿಸುವ ಸಮಯದಷ್ಟಕ್ಕೆ, ನಮ್ಮ ಕುಟುಂಬವು ಆತ್ಮದಿಂದಲೂ ಸತ್ಯದಿಂದಲೂ ಯೆಹೋವನನ್ನು ಆರಾಧಿಸುತ್ತಿತ್ತು.—ಯೋಹಾನ 4:24.
ಗಡೀಪಾರುಮಾಡಲ್ಪಟ್ಟದ್ದು
1951, ಏಪ್ರಿಲ್ 8ರ ಮುಂಜಾನೆಯ ಸಮಯವು—ಆಗ ನನಗೆ ಕೇವಲ ನಾಲ್ಕು ವರ್ಷ ಪ್ರಾಯ—ನನ್ನ ಮನಸ್ಸಿನಲ್ಲಿ ಹಾಗೇ ಅಚ್ಚಳಿಯದೇ ಉಳಿದಿದೆ. ನಾಯಿಗಳೊಂದಿಗೆ ಮಿಲಿಟರಿ ವ್ಯಕ್ತಿಗಳು ನಮ್ಮ ಮನೆಯನ್ನು ಹೊಕ್ಕಿದರು. ಅವರು ಗಡೀಪಾರುಮಾಡುವ ನೋಟೀಸನ್ನು ತೋರಿಸಿ, ಮನೆಯನ್ನು ತಲಾಶು ಮಾಡಲು ಪ್ರಾರಂಭಿಸಿದರು. ನಮ್ಮ ಹೊಸ್ತಿಲಲ್ಲಿ, ಮಶೀನ್ ಗನ್ಗಳುಳ್ಳ ಸೈನಿಕರು ನಿಂತಿದ್ದರು. ಅವರ ಜೊತೆಗೆ ನಾಯಿಗಳೂ ಇದ್ದವು. ಮತ್ತು ಮಿಲಿಟರಿ ಸಮವಸ್ತ್ರಗಳನ್ನು ಧರಿಸಿದ್ದ ಜನರು ಮೇಜಿನ ಮುಂದೆ ಕುಳಿತು, ನಮಗೆ ಕೊಡಲ್ಪಟ್ಟಿದ್ದ ಎರಡು ತಾಸುಗಳೊಳಗೆ ನಾವು ಮನೆ ಬಿಟ್ಟುಹೋಗುವಂತೆ ನಮಗಾಗಿ ಕಾಯುತ್ತಿದ್ದರು. ಏನು ನಡೆಯುತ್ತಿದೆ ಎಂಬುದರ ಅರಿವಿಲ್ಲದೆ ನಾನು ಅಳಲು ಪ್ರಾರಂಭಿಸಿದೆ.
ನನ್ನ ಹೆತ್ತವರನ್ನು ಒಂದು ದಾಖಲೆಗೆ ಸಹಿ ಹಾಕುವಂತೆ ಆಜ್ಞಾಪಿಸಲಾಯಿತು. ತಾವು ಇನ್ನು ಮುಂದೆ ಯೆಹೋವನ ಸಾಕ್ಷಿಗಳಾಗಿಲ್ಲವೆಂದೂ ಇನ್ನು ಮುಂದೆ ತಮಗೆ ಅವರೊಡನೆ ಯಾವ ಸಂಬಂಧವೂ ಇಲ್ಲವೆಂದೂ ಅದರಲ್ಲಿ ಬರೆಯಲ್ಪಟ್ಟಿತ್ತು. ಅವರು ಅದಕ್ಕೆ ಸಹಿ ಹಾಕುವಲ್ಲಿ, ಅವರನ್ನು ಅದೇ ಮನೆ ಮತ್ತು ಸ್ವದೇಶದಲ್ಲಿರುವಂತೆ ಅನುಮತಿಸಲಾಗುತ್ತಿತ್ತು. ಆದರೆ ನಮ್ಮ ತಂದೆಯು ದೃಢವಾಗಿ ಹೇಳಿದ್ದು: “ನೀವು ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋದರೂ ಸರಿ, ನಮ್ಮ ದೇವರಾದ ಯೆಹೋವನು ನಮ್ಮೊಂದಿಗಿರುವನು ಎಂಬ ಭರವಸೆಯು ನನಗಿದೆ.”
ಆಗ ಆ ಅಧಿಕಾರಿಯು ನಮ್ಮ ತಂದೆಯನ್ನು ಬೇಡಿಕೊಂಡದ್ದು, “ನಿನ್ನ ಕುಟುಂಬ, ನಿನ್ನ ಮಕ್ಕಳ ಬಗ್ಗೆ ಸ್ವಲ್ಪ ಯೋಚಿಸು. ನಿನ್ನನ್ನು ಪ್ರವಾಸ ಸ್ಥಳಕ್ಕೆ ಕೊಂಡೊಯ್ಯಲಾಗುತ್ತಿಲ್ಲ. ನಿನ್ನನ್ನು ದೂರದ ಉತ್ತರಭಾಗಕ್ಕೆ ಕೊಂಡೊಯ್ಯಲಾಗುತ್ತಿದೆ. ಅಲ್ಲಿ ಯಾವಾಗಲೂ ಮಂಜು ಬೀಳುತ್ತಿರುತ್ತದೆ ಮತ್ತು ಹಿಮಕರಡಿಯು ಓಡಾಡುವ ಸ್ಥಳವು ಅದಾಗಿದೆ.”
ಆ ಸಮಯದಲ್ಲಿ “ಸೈಬಿರೀಯ” ಎಂಬ ಪದವು ಎಲ್ಲರಿಗೂ ಎದೆಯನ್ನು ಝಲ್ಲೆನಿಸುವ, ನಿಗೂಢವಾದ ಸ್ಥಳವಾಗಿತ್ತು. ಆದರೆ ನಂಬಿಕೆ ಮತ್ತು ಯೆಹೋವನ ಮೇಲಿರುವ ಗಾಢವಾದ ಪ್ರೀತಿಯು, ಈ ಅಜ್ಞಾತ ಭಯಕ್ಕಿಂತಲೂ ಅತ್ಯಂತ ಬಲವಾಗಿತ್ತು. ನಮ್ಮ ಸಾಮಾನುಗಳನ್ನು ವ್ಯಾಗನ್ನಲ್ಲಿ ತುಂಬಿಸಲಾಯಿತು. ಮತ್ತು ಅಲ್ಲಿಂದ ನಮ್ಮನ್ನು ಪಟ್ಟಣಕ್ಕೆ ಕರೆದುಕೊಂಡುಹೋಗಿ, ಸುಮಾರು 20ರಿಂದ 30 ಕುಟುಂಬಗಳೊಂದಿಗೆ ಸರಕು ರವಾನೆಯ ರೈಲಿನಲ್ಲಿ ತುಂಬಿಸಲಾಯಿತು. ಹೀಗೆ ನಾವು ಸೈಬಿರೀಯದ ದಟ್ಟವಾದ ಟೈಗಾ ಕಾಡು ಅಥವಾ ಅರಣ್ಯಕ್ಕೆ ಪ್ರಯಾಣವನ್ನು ಆರಂಭಿಸಿದೆವು.
ದಾರಿಯುದ್ದಕ್ಕೂ ರೈಲು ನಿಲ್ದಾಣಗಳಲ್ಲಿ, ಗಡೀಪಾರುಮಾಡಲ್ಪಟ್ಟಿದ್ದ ಇನ್ನೂ ಅನೇಕರನ್ನು ಒಯ್ಯುತ್ತಿದ್ದ ಇನ್ನಿತರ ರೈಲುಗಳನ್ನು ನಾವು ನೋಡಿದೆವು. ಮತ್ತು ಆ ರೈಲುಗಳ ಮೇಲೆ “ಯೆಹೋವನ ಸಾಕ್ಷಿಗಳು ಪ್ರಯಾಣಿಸುತ್ತಿದ್ದಾರೆ” ಎಂಬ ಫಲಕಗಳನ್ನು ತೂಗುಹಾಕಲಾಗಿತ್ತು. ಇದೊಂದು ಅಪೂರ್ವವಾದ ಸಾಕ್ಷಿಯಾಗಿತ್ತು. ಏಕೆಂದರೆ, ಸಾವಿರಾರು ಸಾಕ್ಷಿಗಳನ್ನು ಮತ್ತು ಅವರ ಕುಟುಂಬಗಳನ್ನು ಉತ್ತರ ಮತ್ತು ಪೂರ್ವದ ಹಲವಾರು ಸ್ಥಳಗಳಿಗೆ ಕಳುಹಿಸಲಾಗುತ್ತಿದೆ ಎಂಬುದನ್ನು ಅನೇಕರು ತಿಳಿದುಕೊಂಡರು.
ಏಪ್ರಿಲ್ 1951ರಲ್ಲಿ ಯೆಹೋವನ ಸಾಕ್ಷಿಗಳನ್ನು ಒಟ್ಟುಗೂಡಿಸಿ, ಗಡೀಪಾರುಮಾಡಿದ ವಿಷಯವು ಉತ್ತಮವಾಗಿ ದಾಖಲೆಯಾಗಿದೆ. ಇತಿಹಾಸಕಾರನಾದ ವಾಲ್ಟರ್ ಕೋಲಾರ್ಸ್, ಸೋವಿಯಟ್ ಯೂನಿಯನ್ನಲ್ಲಿ ಧರ್ಮ ಎಂಬ ತನ್ನ ಪುಸ್ತಕದಲ್ಲಿ ಬರೆದದ್ದು: “ಇದು ರಷ್ಯದಲ್ಲಿ ‘ಸಾಕ್ಷಿಗಳ’ ಅಂತ್ಯವಾಗಿರಲಿಲ್ಲ, ಬದಲಿಗೆ ಇದು ಅವರ ಪರಿವರ್ತನಾ ಚಟುವಟಿಕೆಗಳ ಒಂದು ಹೊಸ ಅಧ್ಯಾಯದ ಆರಂಭವಾಗಿತ್ತು. ಗಡೀಪಾರು ಮಾಡಲ್ಪಡುತ್ತಿರುವಾಗ ಅವರ ರೈಲು ಅಲ್ಲಲ್ಲಿ ನಿಂತಾಗ, ನಿಲ್ದಾಣಗಳಲ್ಲಿ ತಮ್ಮ ನಂಬಿಕೆಯನ್ನು ಇತರರಿಗೆ ತಿಳಿಸಲು ಸಹ ಪ್ರಯತ್ನಿಸಿದರು. ಅವರನ್ನು ಗಡೀಪಾರುಮಾಡುವ ಮೂಲಕ, ಸೋವಿಯಟ್ ಸರಕಾರವು ಅವರ ನಂಬಿಕೆಯನ್ನು ಹಬ್ಬಿಸಲು ಇದಕ್ಕಿಂತ ಉತ್ತಮ ಸಹಾಯವನ್ನು ಕೊಡಸಾಧ್ಯವಿರಲಿಲ್ಲ. ದೂರದ ಹಳ್ಳಿಗಳಲ್ಲಿದ್ದ ‘ಸಾಕ್ಷಿಗಳನ್ನು’—ಹಿಂಸೆ ಮತ್ತು ಗುಲಾಮಗಿರಿಯ ಭೀಕರ ಜಗತ್ತಾಗಿದ್ದರೂ—ಒಂದು ವಿಸ್ತಾರವಾದ ಜಗತ್ತಿಗೆ ಕರೆದುಕೊಂಡು ಬರಲಾಯಿತು.”
ಸಂತೋಷಕರವಾಗಿ, ನನ್ನ ಕುಟುಂಬಕ್ಕೆ ಆಹಾರವನ್ನು—ಹಿಟ್ಟು, ಮುಸುಕಿನ ಜೋಳಗಳು, ಮತ್ತು ಬೀನ್ಸ್ಗಳನ್ನು—ತೆಗೆದುಕೊಂಡುಹೋಗಲು ಅನುಮತಿಯನ್ನು ನೀಡಲಾಗಿತ್ತು. ನನ್ನ ಅಜ್ಜನಿಗೆ ಒಂದು ಹಂದಿಯನ್ನು ಕೊಲ್ಲುವ ಅನಮತಿಯೂ ಕೊಡಲ್ಪಟ್ಟಿತು. ಮತ್ತು ಇದು ನಮಗೆ ಮತ್ತು ಇತರ ಸಾಕ್ಷಿಗಳಿಗೆ ಆಹಾರವಾಯಿತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯದಾಳದಿಂದ ಹಾಡಲ್ಪಡುತ್ತಿದ್ದ ಸಂಗೀತಗಳನ್ನು ಕೇಳಿಸಿಕೊಳ್ಳಸಾಧ್ಯವಿತ್ತು. ಸಹಿಸಿಕೊಳ್ಳಲು ನಮಗೆ ಯೆಹೋವನು ಶಕ್ತಿಯನ್ನು ನೀಡಿದನು.—ಜ್ಞಾನೋಕ್ತಿ 18:10.
ಮೂರು ವಾರಗಳಷ್ಟು ಪ್ರಯಾಣಿಸಿ ರಷ್ಯವನ್ನು ದಾಟಿದ ಮೇಲೆ, ಕೊನೆಗೆ ನಾವು ಶೀತಲವಾದ, ನಿರ್ಜನವಾದ, ದೂರದ ಸೈಬಿರೀಯಕ್ಕೆ ಬಂದಿಳಿದೆವು. ಇರ್ಕೂಟ್ಸ್ಕ್ ಜಿಲ್ಲೆಯ ಚನ್ಸ್ಕ್ ಪ್ರದೇಶದ ಟಾರೆಯಾ ನಿಲ್ದಾಣಕ್ಕೆ ಬಂದು ತಲಪಿದೆವು. ಅಲ್ಲಿಂದ ನಮ್ಮನ್ನು ಟೈಗಾದ ಒಂದು ಪುಟ್ಟ ಹಳ್ಳಿಗೆ ಕರೆದುಕೊಂಡು ಹೋಗಲಾಯಿತು. ಇದನ್ನು ನಮ್ಮ ದಾಖಲೆ ಪತ್ರಗಳಲ್ಲಿ “ಶಾಶ್ವತ ವಸಾಹತು” ಎಂದು ನಮೂದಿಸಲಾಗಿತ್ತು. 15 ಕುಟುಂಬಗಳ ಸಾಮಾನುಗಳನ್ನು ಸುಲಭವಾಗಿ ಒಂದು ಜಾರುಬಂಡಿಯ ಮೇಲೆ ಹೇರಿ, ಇದನ್ನು ಟ್ರ್ಯಾಕ್ಟರ್ ಕೆಸರಿನಲ್ಲಿ ಎಳೆದುಕೊಂಡು ಹೋಯಿತು. ಸುಮಾರು 20 ಕುಟುಂಬಗಳು, ಪ್ರತ್ಯೇಕಿಸಲ್ಪಡದೆ ಎಲ್ಲ ಒಂದೇ ಉದ್ದವಾದ ಓಣಿಯಂತಿದ್ದ ಸಿಪಾಯಿಮನೆಗಳಲ್ಲಿ ನೆಲೆಸಿದವು. ಯೆಹೋವನ ಸಾಕ್ಷಿಗಳು ಭಯಂಕರ ಜನರು ಎಂದು ಅಲ್ಲಿದ್ದ ಸ್ಥಳಿಕರಿಗೆ ಈ ಅಧಿಕಾರಿಗಳು ಮೊದಲೇ ಎಚ್ಚರಿಕೆಯನ್ನು ನೀಡಿದ್ದರು. ಆದುದರಿಂದ, ಆರಂಭದಲ್ಲಿ, ಈ ಜನರು ನಮ್ಮನ್ನು ನೋಡಿದರೆ ಭಯಪಡುತ್ತಿದ್ದರು. ಮತ್ತು ಅವರು ನಮ್ಮೊಂದಿಗೆ ಹೆಚ್ಚು ಪರಿಚಯ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಲಿಲ್ಲ.
ಗಡೀಪಾರುಮಾಡಲ್ಪಟ್ಟ ಸಮಯದಲ್ಲಿ ದುಡಿತ
ಯೆಹೋವನ ಸಾಕ್ಷಿಗಳು, ಮರಕಡಿಯುವ ಕೆಲಸವನ್ನು ಮಾಡಿದರು. ಇದನ್ನು ಅವರು ತುಂಬ ಕಷ್ಟಕರವಾದ ಪರಿಸ್ಥಿತಿಗಳ ಮಧ್ಯೆ ಮಾಡಿದರು. ಎಲ್ಲ ಕೆಲಸವನ್ನು ಕೈಗಳಿಂದಲೇ ಮಾಡಬೇಕಾಗಿತ್ತು. ದಿಮ್ಮಿಗಳನ್ನು ಗರಗಸದಿಂದ ಕೊಯ್ಯುವುದು, ಅವುಗಳನ್ನು ಕತ್ತರಿಸುವುದು, ಕುದುರೆ ಗಾಡಿಗಳ ಮೇಲೆ ಹೇರುವುದು ಮತ್ತು ಅನಂತರ ಅವುಗಳನ್ನು ರೈಲುಗಾಡಿಗಳ ಮೇಲೆ ಹೇರುವುದು. ರಾಶಿ ರಾಶಿ ರಕ್ತಹೀರುವ ಕೀಟಗಳಿಂದ ತಪ್ಪಿಸಿಕೊಳ್ಳಸಾಧ್ಯವಿರದೆ ಇದ್ದುದು ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸಿತು. ನನ್ನ ತಂದೆ ಭಯಂಕರವಾದ ರೀತಿಯಲ್ಲಿ ಕಷ್ಟವನ್ನು ಅನುಭವಿಸಿದರು. ಅವರ ದೇಹವು ಸಂಪೂರ್ಣವಾಗಿ ಊದಿಕೊಂಡಿತ್ತು, ಆದರೂ ಸಹಿಸಿಕೊಳ್ಳಲಿಕ್ಕಾಗಿ ಅವರು ಯೆಹೋವನಿಗೆ ತೀವ್ರವಾಗಿ ಪ್ರಾರ್ಥಿಸಿದರು. ಈ ಎಲ್ಲ ಕಷ್ಟಗಳ ಮಧ್ಯೆಯೂ, ಅಧಿಕಾಂಶ ಯೆಹೋವನ ಸಾಕ್ಷಿಗಳ ನಂಬಿಕೆಯು ಮಾತ್ರ ಅಚಲವಾಗಿಯೇ ಉಳಿದಿತ್ತು.
ಸ್ವಲ್ಪ ಸಮಯದಲ್ಲೇ, ನಮ್ಮನ್ನು ಇರ್ಕೂಟ್ಸ್ಕ್ ಪಟ್ಟಣಕ್ಕೆ ಕರೆದುಕೊಂಡುಹೋಗಲಾಯಿತು. ಅಲ್ಲಿ ನಮ್ಮ ಕುಟುಂಬವು ಹಿಂದಿನ ಸೆರೆಮನೆ ಶಿಬಿರದಲ್ಲಿ ವಾಸಿಸಿ, ಅಲ್ಲಿನ ಇಟ್ಟಿಗೆಯ ಕಾರ್ಖಾನೆಯೊಂದರಲ್ಲಿ ಕೆಲಸಮಾಡುತ್ತಿತ್ತು. ದೊಡ್ಡದಾದ, ಆ ಬಿಸಿ ಕುಲುಮೆಗಳಿಂದ ಇಟ್ಟಿಗೆಗಳನ್ನು ನೇರವಾಗಿ ಕೈಗಳಿಂದಲೇ ತೆಗೆಯಲಾಗುತ್ತಿತ್ತು. ತೆಗೆಯಬೇಕಾದ ಇಟ್ಟಿಗೆಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದ್ದುದರಿಂದ, ಕೆಲಸವನ್ನು ಮಾಡಿಮುಗಿಸುವುದಕ್ಕಾಗಿ ತಮ್ಮ ಹೆತ್ತವರಿಗೆ ಮಕ್ಕಳು ಕೂಡ ಸಹಾಯಮಾಡಬೇಕಾಗಿತ್ತು. ಪುರಾತನ ಐಗುಪ್ತ್ಯದಲ್ಲಿ ಇಸ್ರಾಯೇಲ್ಯರು ದಾಸತ್ವದಲ್ಲಿದ್ದಾಗಿನ ಸಮಯವನ್ನು ಅದು ಜ್ಞಾಪಕಕ್ಕೆ ತಂದಿತು.—ವಿಮೋಚನಕಾಂಡ 5:9-16.
ಮೊದಲು ಹೇಳಲಾಗಿದ್ದಂತೆ, ಸಾಕ್ಷಿಗಳು “ಜನರ ಶತ್ರುಗಳು” ಅಲ್ಲ ಬದಲಾಗಿ, ಅವರು ಶ್ರಮಜೀವಿಗಳೂ ಪ್ರಾಮಾಣಿಕರೂ ಎಂಬುದು ಸ್ಪಷ್ಟವಾಯಿತು. ಸಾಕ್ಷಿಗಳಲ್ಲಿ ಒಬ್ಬನೇ ಒಬ್ಬನು ಕೂಡ ಅಧಿಕಾರಿಗಳಿಗೆ ಅವಮಾನಮಾಡಲಿಲ್ಲ ಇಲ್ಲವೇ ಅಧಿಕಾರದಲ್ಲಿರುವವರ ನಿರ್ಣಯಗಳ ವಿರುದ್ಧ ದಂಗೇಯೇಳಲಿಲ್ಲ. ಅವರ ನಂಬಿಕೆಯನ್ನು ಸಹ ಅನೇಕರು ಗಣ್ಯಮಾಡತೊಡಗಿದರು.
ನಮ್ಮ ಆತ್ಮಿಕ ಜೀವನ
ಸಾಕ್ಷಿಗಳನ್ನು ಗಡೀಪಾರುಮಾಡುವ ಮುಂಚೆ, ಅವರು ಪ್ರಯಾಣ ಮಾಡುತ್ತಿದ್ದಾಗ ಮತ್ತು ಗಡೀಪಾರುಮಾಡಲ್ಪಟ್ಟ ಸ್ಥಳದಲ್ಲಿದ್ದಾಗ ಅವರನ್ನು ಆಗಿಂದಾಗ್ಗೆ ತಪಾಸಣೆ ಮಾಡಲಾಯಿತು. ಆದರೂ ಅವರು ಕಾವಲಿನಬುರುಜು ಪತ್ರಿಕೆಗಳನ್ನು ಮತ್ತು ಬೈಬಲುಗಳನ್ನು ಸಹ ಅಡಗಿಸಿಡಲು ಶಕ್ತರಾದರು. ಅನಂತರ ಇವುಗಳನ್ನು ಕೈಯಿಂದ ಮತ್ತು ಇತರ ಮಾಧ್ಯಮಗಳಿಂದ ಪುನರುತ್ಪಾದಿಸಲಾಯಿತು. ಈ ಸಿಪಾಯಿಮನೆಗಳಲ್ಲಿ ಕ್ರಿಸ್ತೀಯ ಕೂಟಗಳು ಕ್ರಮವಾಗಿ ನಡೆಸಲ್ಪಟ್ಟವು. ಕಮಾಂಡೆಂಟನು ಸಿಪಾಯಿಮನೆಗಳೊಳಗೆ ಬರುವಾಗ, ನಾವು ಸಂಗೀತವನ್ನು ಹಾಡುತ್ತಿರುವುದನ್ನು ನೋಡುತ್ತಿದ್ದಾಗ, ಹಾಡುವುದನ್ನು ನಿಲ್ಲಿಸುವಂತೆ ನಮಗೆ ಆಜ್ಞಾಪಿಸುತ್ತಿದ್ದನು. ನಾವು ನಿಲ್ಲಿಸುತ್ತಿದ್ದೆವು ಆದರೆ, ಅವನು ಮುಂದಿನ ಸಿಪಾಯಿಮನೆಗೆ ಹೋದಾಗ ನಾವು ಪುನಃ ಹಾಡಲು ಶುರುಮಾಡುತ್ತಿದ್ದೆವು. ನಾವು ಹಾಡುವುದನ್ನು ನಿಲ್ಲಿಸುವಂತೆ ಮಾಡುವುದು ಅವನಿಗೆ ಅಸಾಧ್ಯವಾಗಿತ್ತು.
ಅದೇ ರೀತಿಯಲ್ಲಿ, ನಮ್ಮ ಸಾರುವ ಕಾರ್ಯವು ಸಹ ಎಂದಿಗೂ ನಿಂತುಹೋಗಲಿಲ್ಲ. ಸಾಕ್ಷಿಗಳು ಎಲ್ಲೆಂದರಲ್ಲಿ ಪ್ರತಿಯೊಬ್ಬರ ಬಳಿಯೂ ಹೋಗಿ ಮಾತನಾಡುತ್ತಿದ್ದರು. ನನ್ನ ಅಣ್ಣಂದಿರು ಮತ್ತು ಹೆತ್ತವರು ತಾವು ಹೇಗೆ ಬೈಬಲ್ ಸತ್ಯಗಳನ್ನು ಇತರರಿಗೆ ಹಂಚಿದರು ಎಂಬುದನ್ನು ನನಗೆ ಆಗಾಗ್ಗೆ ಹೇಳುತ್ತಿದ್ದರು. ಇದರಿಂದಾಗಿ, ಬೈಬಲ್ ಸತ್ಯವನ್ನು ಸಹೃದಯಿಗಳು ಸ್ವೀಕರಿಸಲು ತೊಡಗಿದರು. ಹೀಗೆ, 1950ಗಳ ಆರಂಭದಲ್ಲಿ, ಇರ್ಕೂಟ್ಸ್ಕ್ನಲ್ಲಿ ಮತ್ತು ಆಸುಪಾಸಿನಲ್ಲಿ ಯೆಹೋವನ ರಾಜ್ಯದ ಘೋಷಣೆಯು ಮಾಡಲ್ಪಟ್ಟಿತು.
ಮೊದಮೊದಲು, ಯೆಹೋವನ ಸಾಕ್ಷಿಗಳು ರಾಜಕೀಯ ಶತ್ರುಗಳಾಗಿದ್ದಾರೆಂದು ನೆನಸಲಾಗಿತ್ತು, ಆದರೆ ಅನಂತರ ನಮ್ಮ ಸಂಸ್ಥೆಯು ಸಂಪೂರ್ಣವಾಗಿ ಧಾರ್ಮಿಕದದ್ದಾಗಿದೆ ಎಂಬುದನ್ನು ಅಧಿಕೃತವಾಗಿ ದೃಢಪಡಿಸಲಾಯಿತು. ಆದರೂ, ಅಧಿಕಾರಿಗಳು ನಮ್ಮ ಕಾರ್ಯವನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದುದರಿಂದ ಅವರು ನಮ್ಮನ್ನು ಪತ್ತೇಹಚ್ಚದಂತೆ, ನಾವು ಎರಡು ಅಥವಾ ಮೂರು ಕುಟುಂಬಗಳ ಸಣ್ಣ ಗುಂಪುಗಳಲ್ಲಿ ಬೈಬಲ್ ಅಧ್ಯಯನಕ್ಕಾಗಿ ಕೂಡಿಬರುತ್ತಿದ್ದೆವು. ಫೆಬ್ರವರಿ 1952ರ ಒಂದು ದಿನ ಮುಂಜಾನೆಯ ಸಮಯದಲ್ಲಿ ಕೂಲಂಕಷವಾದ ಅನ್ವೇಷಣೆಯು ನಡೆಸಲ್ಪಟ್ಟಿತು. ಆಗ ಹತ್ತು ಸಾಕ್ಷಿಗಳನ್ನು ದಸ್ತಗಿರಿ ಮಾಡಲಾಯಿತು ಮತ್ತು ನಮ್ಮಲ್ಲಿ ಇನ್ನುಳಿದವರನ್ನು ಬೇರೆ ಬೇರೆ ಸ್ಥಳಗಳಿಗೆ ಕೊಂಡೊಯ್ಯಲಾಯಿತು. ನಮ್ಮ ಕುಟುಂಬವನ್ನು ಈಸ್ಕ್ರಾ ಹಳ್ಳಿಗೆ ಕರೆದುಕೊಂಡು ಹೋಗಲಾಯಿತು. ಈ ಸ್ಥಳದಲ್ಲಿ ಸುಮಾರು ನೂರು ಜನರು ವಾಸಿಸುತ್ತಿದ್ದರು ಮತ್ತು ಇದು ಇರ್ಕೂಟ್ಸ್ಕ್ನಿಂದ ಸುಮಾರು 30 ಕಿಲೊಮೀಟರುಗಳ ದೂರದಲ್ಲಿತ್ತು.
ಪರಿಸ್ಥಿತಿಗಳು ಬದಲಾದಂತೆ ಅದನ್ನು ಸಹಿಸಿಕೊಳ್ಳುವುದು
ಹಳ್ಳಿಯ ಮುಖ್ಯಸ್ಥರು ತುಂಬ ಆದರಾತಿಥ್ಯವನ್ನು ತೋರಿಸಿದರು, ಇದು ನಮ್ಮನ್ನು ಆಶ್ಚರ್ಯಪಡಿಸಿತು. ಜನರು ಸಾಧಾರಣ ರೀತಿಯವರೂ ತುಂಬ ಸ್ನೇಹಪರರೂ ಆಗಿದ್ದರು. ನಮಗೆ ಸಹಾಯವನ್ನು ಮಾಡಲಿಕ್ಕಾಗಿ ಕೆಲವರು ತಮ್ಮ ಮನೆಗಳಿಂದ ಹೊರಬಂದರು. ಹೆಚ್ಚುಕಡಿಮೆ 17 ಚದರ ಮೀಟರುಗಳುಳ್ಳ ಅದೇ ಚಿಕ್ಕ ಕೋಣೆಯಲ್ಲಿ ಇರಿಸಲ್ಪಟ್ಟವರಲ್ಲಿ ನಮ್ಮ ಕುಟುಂಬವು ಮೂರನೆಯದ್ದಾಗಿತ್ತು. ಬೆಳಕಿಗಾಗಿ ಕೇವಲ ಸೀಮೆಣ್ಣೆ ದೀಪಗಳು ಇದ್ದವು.
ಮರುದಿನ ಬೆಳಗ್ಗೆ ಚುನಾವಣೆಯಿತ್ತು. ನನ್ನ ಹೆತ್ತವರು ತಾವು ಈಗಾಗಲೇ ದೇವರ ರಾಜ್ಯಕ್ಕೆ ಮತ ಹಾಕಿದ್ದೇವೆಂದು ಹೇಳಿದರಾದರೂ ಇದು ಜನರಿಗೆ ಅರ್ಥವಾಗಲಿಲ್ಲ. ಆದುದರಿಂದ ನನ್ನ ಕುಟುಂಬದ ವಯಸ್ಕ ಸದಸ್ಯರು ಇಡೀ ದಿನ ಸೆರೆವಾಸವನ್ನು ಅನುಭವಿಸಿದರು. ಅನಂತರ, ಅನೇಕ ಜನರು ಅವರ ನಂಬಿಕೆಗಳ ಬಗ್ಗೆ ಕೇಳಿದರು, ಆಗ ಮಾನವಕುಲಕ್ಕಾಗಿರುವ ಏಕಮಾತ್ರ ನಿರೀಕ್ಷೆಯಾದ ದೇವರ ರಾಜ್ಯದ ಕುರಿತಾಗಿ ಮಾತಾಡಲಿಕ್ಕಾಗಿ ನನ್ನ ಕುಟುಂಬಕ್ಕೆ ಒಂದು ಒಳ್ಳೆಯ ಅವಕಾಶವು ಸಿಕ್ಕಿತು.
ಈಸ್ಕ್ರಾ ಹಳ್ಳಿಯಲ್ಲಿ ನಾವು ನಾಲ್ಕು ವರ್ಷಗಳಿದ್ದೆವು, ಆದರೆ ಆಗ ಅಕ್ಕಪಕ್ಕದಲ್ಲಿ ಯಾವ ಸಾಕ್ಷಿಯೂ ಇರಲಿಲ್ಲ. ಆ ಹಳ್ಳಿಯಿಂದ ಹೊರಗೆ ಹೋಗಬೇಕಾಗಿದ್ದರೆ, ನಾವು ಕಮಾಂಡೆಂಟ್ನಿಂದ ವಿಶೇಷ ಅನುಮತಿಯನ್ನು ಪಡೆದುಕೊಳ್ಳಬೇಕಾಗಿತ್ತು. ಮತ್ತು ಅವನು ಅನುಮತಿಯನ್ನು ಕೊಡುತ್ತಿದ್ದುದೇ ಅಪರೂಪ, ಏಕೆಂದರೆ ಇತರ ಜನರಿಂದ ನಮ್ಮನ್ನು ದೂರವಿಡುವುದಕ್ಕಾಗಿಯೇ ನಮ್ಮನ್ನು ಗಡೀಪಾರುಮಾಡಿದ್ದರು. ಆದರೂ, ಸಾಕ್ಷಿಗಳು ತಾಜಾ ಆತ್ಮಿಕ ಭೋಜನವನ್ನು ಪಡೆದುಕೊಂಡಾಗಲೆಲ್ಲ ಅದನ್ನು ಹಂಚಲಿಕ್ಕಾಗಿ ಹೇಗಾದರೂ ಮಾಡಿ ಇತರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು.
1953ರಲ್ಲಿ ಸ್ಟ್ಯಾಲಿನ್ ಮೃತನಾದ ಅನಂತರ, ಸೆರೆವಾಸದಲ್ಲಿದ್ದ ಎಲ್ಲ ಸಾಕ್ಷಿಗಳ ದಂಡನೆಗಳನ್ನು 25 ವರ್ಷಗಳಿಂದ 10 ವರ್ಷಗಳಿಗೆ ಇಳಿಸಲಾಯಿತು. ಇನ್ನುಮೇಲೆ ಎಲ್ಲಿಗಾದರೂ ಹೋಗಬೇಕಾದರೆ ಸೈಬೀರಿಯದಲ್ಲಿರುವವರು ವಿಶೇಷವಾದ ದಾಖಲೆಪತ್ರಗಳನ್ನು ಹೊಂದುವ ಅಗತ್ಯವಿರಲಿಲ್ಲ. ಆದರೆ, ಅಧಿಕಾರಿಗಳು ಮತ್ತೆ ಅನ್ವೇಷಣೆಯನ್ನು ಮಾಡಲು ಪ್ರಾರಂಭಿಸಿದರು. ಮತ್ತು ಸಾಕ್ಷಿಗಳೇನಾದರೂ ಬೈಬಲುಗಳನ್ನು ಅಥವಾ ಬೈಬಲ್ ಸಾಹಿತ್ಯಗಳನ್ನು ಹೊಂದಿದ್ದಲ್ಲಿ ಅವರನ್ನು ದಸ್ತಗಿರಿ ಮಾಡುತ್ತಿದ್ದರು. ಸಾಕ್ಷಿಗಳಿಗಾಗಿ ವಿಶೇಷವಾದ ಶಿಬಿರಗಳನ್ನು ಮಾಡಲಾಯಿತು, ಮತ್ತು ಇರ್ಕೂಟ್ಸ್ಕ್ ಪ್ರದೇಶದಲ್ಲಿ ಸುಮಾರು 400 ಸಹೋದರರನ್ನು ಮತ್ತು 200 ಸಹೋದರಿಯರನ್ನು ಈ ಶಿಬಿರಗಳಲ್ಲಿ ಇರಿಸಲಾಯಿತು.
ಸೋವಿಯಟ್ ಯೂನಿಯನ್ನಲ್ಲಿ ನಮಗೆ ನೀಡಲಾಗುತ್ತಿರುವ ಹಿಂಸೆಯ ಕುರಿತಾದ ಸುದ್ದಿಯು ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳನ್ನು ತಲಪಿತು. ಹೀಗೆ 1956 ಮತ್ತು ಫೆಬ್ರವರಿ 1957ರ ನಡುವೆ, ಲೋಕದ ಎಲ್ಲ ಕಡೆಗಳಲ್ಲಿ ನಡೆದ 199 ಜಿಲ್ಲಾ ಅಧಿವೇಶನಗಳಲ್ಲಿ ನಮ್ಮ ಪರವಾಗಿ ಮನವಿಯನ್ನು ಮಾಡಲಾಯಿತು. ಹಾಜರಿದ್ದ 4,62,936 ಜನರು, ಆಗ ಸೋವಿಯಟ್ನ ಮುಖ್ಯಮಂತ್ರಿಯಾಗಿದ್ದ ನ್ಯಿಕಲೈ ಎ. ಬುಲ್ಗ್ಯಾನಿನ್ಗೆ ಸಂಬೋಧಿಸಿದ ಮನವಿಗೆ ಬೆಂಬಲವನ್ನು ನೀಡಿದರು. ಇತರ ವಿಷಯಗಳೊಂದಿಗೆ, ಆ ಮನವಿಯು, ನಮ್ಮನ್ನು ಬಿಡುಗಡೆಗೊಳಿಸಬೇಕು ಮತ್ತು ನಾವು “ರಷ್ಯನ್, ಯೂಕ್ರೇನ್ಯನ್ ಮತ್ತು ಅಗತ್ಯವಿರುವ ಇತರ ಭಾಷೆಗಳಲ್ಲಿ ಕಾವಲಿನಬುರುಜು ಪತ್ರಿಕೆಯನ್ನು ಹಾಗೂ ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಇತರ ಬೈಬಲ್ ಸಾಹಿತ್ಯಗಳನ್ನು ಪಡೆದುಕೊಳ್ಳಲು ಮತ್ತು ಪ್ರಕಾಶಿಸಲು ಅಧಿಕಾರವನ್ನು ನೀಡಬೇಕು” ಎಂಬುದನ್ನು ಒಳಗೊಂಡಿತ್ತು.
ಈ ಮಧ್ಯೆ, ಇರ್ಕೂಟ್ಸ್ಕ್ನಿಂದ ಸುಮಾರು 20 ಕಿಲೊಮೀಟರುಗಳ ದೂರದಲ್ಲಿರುವ ಕೂಡ್ಯಾಕಾವಾ ಹಳ್ಳಿಗೆ ನಮ್ಮ ಕುಟುಂಬವನ್ನು ಕಳುಹಿಸಲಾಯಿತು. ಅಲ್ಲಿ ನಾವು ಏಳು ವರ್ಷಗಳಿದ್ದೆವು. 1960ರಲ್ಲಿ ನನ್ನ ಅಣ್ಣ ಫಿಯಾಡರ್ ಇರ್ಕೂಟ್ಸ್ಕ್ಗೆ ಹೋದನು. ಮತ್ತು ಅದರ ಮುಂದಿನ ವರ್ಷ ನನ್ನ ಇನ್ನೊಬ್ಬ ಅಣ್ಣ ಮದುವೆಯಾದನು ಹಾಗೂ ನನ್ನ ಅಕ್ಕ ಸಹ ಅಲ್ಲಿಂದ ಹೊರಟುಹೋದಳು. ಅನಂತರ 1962ರಲ್ಲಿ ಫಿಯಾಡರ್ ಪ್ರಚಾರಮಾಡಿದುದಕ್ಕಾಗಿ ದಸ್ತಗಿರಿಮಾಡಲ್ಪಟ್ಟು, ಸೆರೆವಾಸದಲ್ಲಿ ಹಾಕಲ್ಪಟ್ಟನು.
ನನ್ನ ಆತ್ಮಿಕ ಬೆಳವಣಿಗೆ
ಇತರರೊಂದಿಗೆ ಬೈಬಲ್ ಅಧ್ಯಯನಕ್ಕಾಗಿ ಒಟ್ಟುಗೂಡಲು, ಕೂಡ್ಯಾಕಾವಾ ಹಳ್ಳಿಯಿಂದ ಕಾಲ್ನಡಿಗೆಯಲ್ಲಿ ಅಥವಾ ಸೈಕಲಿನಲ್ಲಿ ಹೋಗಲು ಸುಮಾರು 20 ಕಿಲೊಮೀಟರುಗಳಾಗುತ್ತಿತ್ತು. ಆದುದರಿಂದ, ಇತರ ಸಾಕ್ಷಿಗಳೊಡನೆ ನಿಕಟ ಸಂಪರ್ಕವನ್ನಿಟ್ಟುಕೊಳ್ಳಲಿಕ್ಕಾಗಿ, ನಾವು ಇರ್ಕೂಟ್ಸ್ಕ್ಗೆ ಹೋಗಿ ವಾಸಿಸಲು ಪ್ರಯತ್ನಿಸಿದೆವು. ಆದರೆ, ನಾವಿದ್ದ ಸ್ಥಳದ ಮುಖ್ಯಸ್ಥನು, ನಾವು ಅಲ್ಲಿಗೆ ಹೋಗಿ ನೆಲೆಸುವುದರ ವಿರುದ್ಧವಾಗಿದ್ದನು ಮತ್ತು ನಾವು ಹೋಗದಂತೆ ಮಾಡುವುದಕ್ಕಾಗಿ ತನ್ನಿಂದಾದ ಪ್ರಯತ್ನವನ್ನೆಲ್ಲ ಮಾಡಿದನು. ಆದರೆ, ಕೆಲವು ಸಮಯದ ಅನಂತರ, ಈ ವ್ಯಕ್ತಿಯು ಹೆಚ್ಚು ಸ್ನೇಹಪರನಾದನು, ಹೀಗೆ ಇರ್ಕೂಟ್ಸ್ಕ್ನಿಂದ ಸುಮಾರು 10 ಕಿಲೊಮೀಟರುಗಳ ದೂರದಲ್ಲಿರುವ ಪೈವಾವಾರೀಕಾ ಹಳ್ಳಿಗೆ ನಾವು ಹೋಗಿ ವಾಸಿಸಸಲು ಶಕ್ತರಾದೆವು. ಅಲ್ಲಿ ಯೆಹೋವನ ಸಾಕ್ಷಿಗಳ ಸಭೆಯಿತ್ತು. ಹೀಗೆ ಒಂದು ಹೊಸ ಜೀವನವು ಪ್ರಾರಂಭವಾಯಿತು. ಪೈವಾವಾರೀಕಾದಲ್ಲಿ ಸಂಘಟಿಸಲ್ಪಟ್ಟ ಸಭಾ ಪುಸ್ತಕ ಅಭ್ಯಾಸದ ಗುಂಪುಗಳಿದ್ದವು. ಆತ್ಮಿಕ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದ ಸಹೋದರರಿದ್ದರು. ನನಗಾದ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ!
ಅಷ್ಟರೊಳಗೆ ಬೈಬಲ್ ಸತ್ಯವು ನನಗೆ ತುಂಬ ಪ್ರಿಯವೆನಿಸಿತ್ತು ಮತ್ತು ನಾನು ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಬಯಸಿದೆ. 1965ರ ಆಗಸ್ಟ್ ತಿಂಗಳಿನಲ್ಲಿ, ಚಿಕ್ಕದಾದ ಓಲ್ಕಾ ನದಿಯಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡಾಗ, ನನ್ನ ಆಸೆಯು ನೆರವೇರಿತು. ಅಲ್ಲಿ ಇನ್ನೂ ಅನೇಕ ಹೊಸ ಸಾಕ್ಷಿಗಳು ಅದೇ ಸಮಯದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಸುಮ್ಮನೆ ನೋಡಿದವರಿಗೆ, ನಾವೇನೋ ಪಿಕ್ನಿಕ್ ಮಾಡುತ್ತಿದ್ದೇವೆ ಮತ್ತು ನದಿಯಲ್ಲಿ ಈಜುತ್ತಿದ್ದೇವೆ ಎಂದು ತೋರಿದ್ದಿರಬೇಕು. ಅದಾದ ಸ್ವಲ್ಪದರಲ್ಲೇ, ನನಗೆ ದೇವಪ್ರಭುತ್ವ ಶುಶ್ರೂಷಾ ಶಾಲಾ ಮೇಲ್ವಿಚಾರಕನಾಗಿ ಪ್ರಥಮ ನೇಮಕವನ್ನು ಕೊಡಲಾಯಿತು. ಅನಂತರ, ನವೆಂಬರ್ 1965ರಲ್ಲಿ ಫಿಯಾಡರ್ ಸೆರೆಮನೆಯಿಂದ ಹಿಂದಿರುಗಿದಾಗ ನಮಗೆ ಇನ್ನೂ ಸಂತೋಷವಾಯಿತು.
ಕೆಲಸವು ಏಳ್ಗೆಹೊಂದಿದ ವಿಧ
1965ರಲ್ಲಿ, ಗಡೀಪಾರುಮಾಡಲ್ಪಟ್ಟ ಎಲ್ಲರನ್ನು ಒಟ್ಟುಗೂಡಿಸಿ, ನಮಗೆ ಇಷ್ಟವಾಗುವ ಕಡೆಗೆ ಹೋಗುವ ಹಕ್ಕಿದೆ ಎಂದು ಪ್ರಕಟಿಸಲಾಯಿತು. ಮತ್ತು ಇದು ನಮ್ಮ “ಶಾಶ್ವತ ವಸಾಹತು” ಅನ್ನು ಕೊನೆಗೊಳಿಸಿತು. ನಮಗಾದ ಆನಂದವು ಹೇಳತೀರದಾಯಿತು. ಅನೇಕರು ದೇಶದ ವಿವಿಧ ಭಾಗಗಳಿಗೆ ಹೋದರು, ಕೆಲವರು ಯೆಹೋವ ದೇವರು ನಮ್ಮನ್ನು ಆತ್ಮಿಕ ಬೆಳವಣಿಗೆ ಮತ್ತು ಕ್ರಿಯೆಗಳಲ್ಲಿ ಆಶೀರ್ವದಿಸಿದ್ದ ಸ್ಥಳದಲ್ಲಿಯೇ ಉಳಿಯಲು ನಿರ್ಧರಿಸಿದರು. ಇವರಲ್ಲಿ ಅನೇಕರು ಸೈಬಿರೀಯದಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನು ಬೆಳೆಸಿ, ದೊಡ್ಡವರನ್ನಾಗಿ ಮಾಡಿದ್ದರು. ಸೈಬೀರಿಯವು ಸಮಯ ಕಳೆದಂತೆ ಅಷ್ಟು ಭಯಂಕರವಾದ ಸ್ಥಳವಾಗಿ ಪರಿಣಮಿಸಲಿಲ್ಲ.
1967ರಲ್ಲಿ, ನಾನು ಮರ್ಯೀಯ ಎಂಬ ಹುಡುಗಿಯನ್ನು ಭೇಟಿಯಾದೆ. ಅವಳ ಕುಟುಂಬವು ಸಹ ಯೂಕ್ರೇನಿನಿಂದ ಸೈಬಿರೀಯಕ್ಕೆ ಗಡೀಪಾರುಮಾಡಲ್ಪಟ್ಟಿತ್ತು. ನಾವಿಬ್ಬರೂ ಚಿಕ್ಕವರಾಗಿದ್ದಾಗ, ಯೂಕ್ರೇನಿನ ವಿಲ್ಶಾನಿಟ್ಸ ಹಳ್ಳಿಯಲ್ಲಿ ವಾಸಿಸುತ್ತಿದ್ದೆವು. ನಾವು 1968ರಲ್ಲಿ ಮದುವೆಯಾದೆವು, ಅನಂತರ ನಮಗೆ ಒಬ್ಬ ಪುತ್ರ ಯಾರಾಸ್ಲಾಫ್ ಮತ್ತು ಪುತ್ರಿ ಆಕ್ಸಾನ ಹುಟ್ಟಿದರು.
ದೊಡ್ಡ ಸಂಖ್ಯೆಯಲ್ಲಿ ಆತ್ಮಿಕ ಸಹವಾಸಕ್ಕಾಗಿ ಕೂಡಿಬರಲು ಶವಸಂಸ್ಕಾರ ಮತ್ತು ವಿವಾಹಗಳನ್ನು ಉಪಯೋಗಿಸುತ್ತ ಮುಂದುವರಿದೆವು. ಇವುಗಳಿಗೆ ಹಾಜರಾಗುತ್ತಿದ್ದ ಸಾಕ್ಷಿಯಾಗಿರದ ಸಂಬಂಧಿಕರಿಗೆ ಮತ್ತು ಮಿತ್ರರಿಗೆ, ಬೈಬಲ್ ಸತ್ಯಗಳನ್ನು ವಿವರಿಸುವುದಕ್ಕೆ ಸಹ ಈ ಸಂದರ್ಭಗಳನ್ನು ಉಪಯೋಗಿಸುತ್ತಿದ್ದೆವು. ಈ ಕಾರ್ಯಕ್ರಮಗಳಿಗೆ ಅನೇಕ ವೇಳೆ ಸೆಕ್ಯೂರಿಟಿ ಅಧಿಕಾರಿಗಳು ಬರುತ್ತಿದ್ದರು. ಅಲ್ಲಿ ನಾವು ಎಲ್ಲರ ಮುಂದೆ, ಪುನರುತ್ಥಾನದ ನಿರೀಕ್ಷೆ ಅಥವಾ ವಿವಾಹದ ಸಂಬಂಧದಲ್ಲಿ ಯೆಹೋವನ ಒದಗಿಸುವಿಕೆ ಮತ್ತು ಆತನ ಹೊಸ ಲೋಕದಲ್ಲಿ ಭವಿಷ್ಯತ್ತಿಗಾಗಿರುವ ಆಶೀರ್ವಾದಗಳ ಬಗ್ಗೆ ಬಹಿರಂಗವಾಗಿ ಸಾರುತ್ತಿದ್ದೆವು.
ಒಮ್ಮೆ, ನಾನು ಶವಸಂಸ್ಕಾರದ ಭಾಷಣವನ್ನು ಇನ್ನೇನು ಮುಗಿಸುತ್ತಿದ್ದಾಗ, ಒಂದು ಕಾರು ಬಂದು ನಿಂತಿತು, ಬಾಗಿಲುಗಳು ದಢಾರನೇ ತೆರೆದುಕೊಂಡವು ಮತ್ತು ಒಳಗೆ ಕೂತಿದ್ದವರಲ್ಲಿ ಒಬ್ಬ ವ್ಯಕ್ತಿಯು ಕೆಳಗಿಳಿದು ಬಂದು, ಕಾರಲ್ಲಿ ಹತ್ತುವಂತೆ ಆಜ್ಞಾಪಿಸಿದನು. ನಾನು ಭಯಭೀತನಾಗಲಿಲ್ಲ. ಏಕೆಂದರೆ ನಾವೇನೂ ಅಪರಾಧಿಗಳಾಗಿರಲಿಲ್ಲ, ಕೇವಲ ದೇವರಲ್ಲಿ ನಂಬಿಕೆಯನ್ನಿಡುವವರು ಆಗಿದ್ದೆವು. ಆದರೆ, ನನ್ನ ಜೇಬಿನಲ್ಲಿ ನಮ್ಮ ಸಭೆಯ ರಿಪೋರ್ಟ್ಗಳಿದ್ದವು. ಆದುದರಿಂದ, ನನ್ನನ್ನು ದಸ್ತಗಿರಿಮಾಡಸಾಧ್ಯವಿತ್ತು. ಆದುದರಿಂದ ಅವರ ಜೊತೆ ಹೋಗುವ ಮುಂಚೆ, ನಾನು ನನ್ನ ಹೆಂಡತಿಗೆ ಹಣವನ್ನು ಕೊಟ್ಟುಬರುತ್ತೇನೆಂದು ಅವರಿಗೆ ಹೇಳಿದೆ. ಅವರ ಕಣ್ಣ ಮುಂದೆಯೇ, ನಾನು ಶಾಂತ ರೀತಿಯಲ್ಲಿ, ಹಣದ ಪರ್ಸನ್ನೂ ಅದರ ಜೊತೆಯಲ್ಲಿ ರಿಪೋರ್ಟ್ಗಳನ್ನು ಅವಳಿಗೆ ಕೊಟ್ಟುಬಿಟ್ಟೆ.
1974ರ ಆರಂಭದಲ್ಲಿ, ನಾನು ಮತ್ತು ಮರ್ಯೀಯ ಕದ್ದುಮುಚ್ಚಿ ನಮ್ಮ ಮನೆಯಲ್ಲಿ ಬೈಬಲ್ ಸಾಹಿತ್ಯವನ್ನು ತಯಾರಿಸಲು ಶುರುಮಾಡಿದೆವು. ನಮಗೆ ಒಬ್ಬ ಪುಟ್ಟ ಮಗನಿದ್ದುದರಿಂದ, ಅವನಿಗೆ ಗೊತ್ತಾಗದಿರುವಂತೆ, ನಾವು ಇದನ್ನು ರಾತ್ರಿ ಹೊತ್ತುಮೀರಿದ ಮೇಲೆ ಮಾಡುತ್ತಿದ್ದೆವು. ಆದರೆ, ಅವನು ಕುತೂಹಲದಿಂದ, ಮಲಗಿರುವಂತೆ ನಟಿಸಿ, ನಾವೇನು ಮಾಡುತ್ತಿದ್ದೇವೆಂಬುದನ್ನು ನೋಡಿಬಿಟ್ಟನು. ಅನಂತರ ಅವನು ಹೇಳಿದ್ದು: “ಹಾಂ, ಈಗ ನನಗೆ ಗೊತ್ತಾಯಿತು, ದೇವರ ಬಗ್ಗೆ ಪತ್ರಿಕೆಗಳನ್ನು ಯಾರು ತಯಾರಿಸುತ್ತಾರೆಂದು.” ನಮಗೆ ಈಗ ಸ್ವಲ್ಪ ಭಯವಾಯಿತು. ಆದರೆ, ಈ ಮಹತ್ವದ ಕೆಲಸದಲ್ಲಿ ಒಳಗೂಡಿರುವ ನಮ್ಮ ಕುಟುಂಬವನ್ನು ಕಾಪಾಡುವಂತೆ ನಾವು ಯಾವಾಗಲೂ ಯೆಹೋವನಲ್ಲಿ ಬೇಡಿಕೊಳ್ಳುತ್ತಿದ್ದೆವು.
ಕಟ್ಟಕಡೆಗೆ, ಅಧಿಕಾರಿಗಳು ಯೆಹೋವನ ಸಾಕ್ಷಿಗಳ ಬಗ್ಗೆ ಹೆಚ್ಚು ಒಲವುಳ್ಳವರಾದರು. ಆದುದರಿಂದ ನಾವು ಉಸೋಲ್ಯ ಸೀಬಿರ್ಸ್ಕಯ ನಗರದ ಮೀರ್ ಕಲಾ ಮತ್ತು ವಿಶ್ರಾಮ ಕೇಂದ್ರದಲ್ಲಿ ದೊಡ್ಡ ಕೂಟಗಳನ್ನು ನಡೆಸಲು ಯೋಜನೆ ಮಾಡಿದೆವು. ನಮ್ಮ ಕೂಟಗಳು ಕೇವಲ ಬೈಬಲ್ ಅಧ್ಯಯನ ಮತ್ತು ಕ್ರಿಸ್ತೀಯ ಸಹವಾಸಕ್ಕಾಗಿ ಮಾತ್ರವೇ ನಡೆಸಲ್ಪಡುತ್ತವೆ ಎಂಬ ಖಾತ್ರಿಯನ್ನು ನಾವು ನಗರದ ಅಧಿಕಾರಿಗಳಿಗೆ ನೀಡಿದೆವು. ಜನವರಿ 1990ರಲ್ಲಿ 700ಕ್ಕಿಂತಲೂ ಹೆಚ್ಚಿನ ಜನರಿಂದ ಸಭಾಂಗಣವು ಕಿಕ್ಕಿರಿದು ತುಂಬಿತ್ತು. ಮತ್ತು ಇದು ಅನೇಕರ ಗಮನವನ್ನು ಸೆಳೆಯಿತು.
ಕೂಟದ ಅನಂತರ ಒಬ್ಬ ವರದಿಗಾರನು ಕೇಳಿದ್ದು: “ನಿಮ್ಮ ಎಳೆಯವರಿಗೆ ಯಾವಾಗ ತರಬೇತಿಯನ್ನು ಕೊಟ್ಟಿರಿ?” ಈ ಪ್ರಥಮ ಸಾರ್ವಜನಿಕ ಕೂಟದಲ್ಲಿ ನಾಲ್ಕು ತಾಸುಗಳ ವರೆಗೆ, ಅವರು ಅಲುಗಾಡದೇ ಗಮನಕೊಟ್ಟು ಕೇಳುವುದನ್ನು ನೋಡಿ ಅವನು ಮತ್ತು ಇತರರೂ ತುಂಬ ಆಶ್ಚರ್ಯಗೊಂಡರು. ಬೇಗನೇ ಯೆಹೋವನ ಸಾಕ್ಷಿಗಳ ಬಗ್ಗೆ ಒಂದು ಒಳ್ಳೆಯ ಲೇಖನವು ಸ್ಥಳಿಕ ನ್ಯೂಸ್ಪೇಪರಿನಲ್ಲಿ ಪ್ರಕಟಗೊಂಡಿತು. ಅದು ಹೇಳಿದ್ದು: “[ಯೆಹೋವನ ಸಾಕ್ಷಿಗಳಿಂದ] ನಿಜವಾಗಿಯೂ ನಾವು ಕಲಿತುಕೊಳ್ಳಬಹುದು.”
ಮಹಾ ವಿಸ್ತಾರದಲ್ಲಿ ಆನಂದಿಸುವುದು
1991ರಲ್ಲಿ ಸೋವಿಯಟ್ ಯೂನಿಯನ್ನಲ್ಲಿ ಏಳು ಅಧಿವೇಶನಗಳು ನಡೆದವು ಮತ್ತು ಅದಕ್ಕೆ 74,252 ಜನರು ಹಾಜರಾದರು. ಸೋವಿಯಟ್ ಯೂನಿಯನ್ನ ಪೂರ್ವ ರಿಪಬ್ಲಿಕ್ ಸ್ವತಂತ್ರಗೊಂಡ ಅನಂತರ, ನಾನು ಮಾಸ್ಕೋವಿಗೆ ಹೋಗುವಂತೆ ನೇಮಿಸುವ ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಪತ್ರವನ್ನು ಪಡೆದೆ. ಅಲ್ಲಿ ರಾಜ್ಯದ ಕೆಲಸವನ್ನು ವಿಸ್ತರಿಸುವುದಕ್ಕೆ ನನ್ನ ಕೈಲಾಗುತ್ತದೋ ಎಂದು ನನಗೆ ಕೇಳಲಾಯಿತು. ಆಗ ಯಾರಾಸ್ಲಾಫ್ ಮದುವೆಯಾಗಿದ್ದನು ಮತ್ತು ಅವನಿಗೆ ಒಂದು ಮಗುವಿತ್ತು. ಮತ್ತು ಆಕ್ಸಾನ ಒಬ್ಬ ಹದಿವಯಸ್ಕಳಾಗಿದ್ದಳು. ಆದುದರಿಂದ 1993ರಲ್ಲಿ ನಾನು ಮತ್ತು ಮರ್ಯೀಯ ಮಾಸ್ಕೋವಿನಲ್ಲಿ ಪೂರ್ಣ ಸಮಯದ ಸೇವೆಯನ್ನು ಸ್ವೀಕರಿಸಿದೆವು. ಅದೇ ವರ್ಷದಲ್ಲಿ, ರಷ್ಯದಲ್ಲಿ ಯೆಹೋವನ ಸಾಕ್ಷಿಗಳ ಪ್ರಾದೇಶಿಕ ಧಾರ್ಮಿಕ ಸಂಘಟನೆಯ ಆಡಳಿತ ಕೇಂದ್ರದ ಕಾರ್ಯನಿರ್ದೇಶಕನಾಗಿ ನನ್ನನ್ನು ನೇಮಿಸಲಾಯಿತು.
ಈಗ ನಾನು ಮತ್ತು ಮರ್ಯೀಯ, ಸೆಂಟ್ ಪೀಟರ್ಸ್ಬರ್ಗ್ನ ಹೊರಗಿರುವ ಹೊಸ ಬ್ರಾಂಚ್ ಆಫೀಸಿನಲ್ಲಿ ವಾಸಿಸುತ್ತಾ, ಕೆಲಸಮಾಡುತ್ತಿದ್ದೇವೆ. ರಷ್ಯದಲ್ಲಿ ತೀವ್ರಗತಿಯಲ್ಲಿ ಹೆಚ್ಚುವರಿಯುತ್ತಿರುವ ರಾಜ್ಯ ಘೋಷಕರ ಸಂಖ್ಯೆಯನ್ನು ನೋಡಿಕೊಳ್ಳುತ್ತಿರುವ ಇತರ ನಂಬಿಗಸ್ತ ಸಹೋದರರೊಡನೆ ಕೆಲಸಮಾಡುವುದು ನಿಜವಾಗಿಯೂ ಒಂದು ಸುಯೋಗ ಎಂದು ನಾನು ನೆನಸುತ್ತೇನೆ. ಈಗ ಸೋವಿಯಟ್ ಯೂನಿಯನ್ನ ಹಿಂದಿನ ರಿಪಬ್ಲಿಕ್ಗಳಲ್ಲಿ ಸುಮಾರು 2,60,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳಿದ್ದಾರೆ. ಕೇವಲ ರಷ್ಯದಲ್ಲಿ 1,00,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳಿದ್ದಾರೆ!
ನಮ್ಮ ಅಚ್ಚುಮೆಚ್ಚಿನ ಮನೆಯಾಗಿರುವ ಸೈಬಿರೀಯದಲ್ಲಿ, ನಂಬಿಗಸ್ತಿಕೆಯಿಂದ ರಾಜ್ಯದ ಸೇವೆಯನ್ನು ಮಾಡುತ್ತಿರುವ ನಮ್ಮ ಪ್ರಿಯ ಸಂಬಂಧಿಕರು ಮತ್ತು ಸ್ನೇಹಿತರನ್ನು ನಾನು ಮತ್ತು ಮರ್ಯೀಯ ಯಾವಾಗಲೂ ಜ್ಞಾಪಿಸಿಕೊಳ್ಳುತ್ತೇವೆ. ಇಂದು ಅಲ್ಲಿ ದೊಡ್ಡ ಅಧಿವೇಶನಗಳು ಯಾವಾಗಲೂ ನಡೆಸಲ್ಪಡುತ್ತವೆ. ಮತ್ತು ಇರ್ಕೂಟ್ಸ್ಕ್ನಲ್ಲಿ ಮತ್ತು ಆಸುಪಾಸಿನಲ್ಲಿ ಸುಮಾರು 2,000 ಸಾಕ್ಷಿಗಳು ಕ್ರಿಯಾಶೀಲರಾಗಿದ್ದಾರೆ. ಯೆಶಾಯ 60:22ರಲ್ಲಿರುವ ಯೆಶಾಯನ ಪ್ರವಾದನೆಯು ಈ ಭಾಗದಲ್ಲಿ ನಿಜವಾಗಿಯೂ ನೆರವೇರುತ್ತಿದೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು.”
[ಪುಟ 12 ರಲ್ಲಿರುವ ಚಿತ್ರ]
ತಂದೆಯೊಂದಿಗೆ ನಮ್ಮ ಕುಟುಂಬ, ಮತ್ತು 1959ರಲ್ಲಿ ಇರ್ಕೂಟ್ಸ್ಕ್ನಲ್ಲಿ ಗಡೀಪಾರುಮಾಡಲ್ಪಟ್ಟ ಇತರರು
[ಪುಟ 15 ರಲ್ಲಿರುವ ಚಿತ್ರ]
ಇಸ್ಕ್ರಾದಲ್ಲಿ ಗಡೀಪಾರುಮಾಡಲ್ಪಟ್ಟ ಮಕ್ಕಳು
[ಪುಟ 17 ರಲ್ಲಿರುವ ಚಿತ್ರ]
ಮದುವೆಯಾದ ವರ್ಷದಲ್ಲಿ
[ಪುಟ 17 ರಲ್ಲಿರುವ ಚಿತ್ರ]
ಇಂದು ಮರ್ಯೀಯ ಜೊತೆಯಲ್ಲಿ