ನಿವೃತ್ತಿ—ದೇವಪ್ರಭುತ್ವ ಚಟುವಟಿಕೆಗೆ ಒಂದು ತೆರೆದ ಅವಕಾಶವೊ?
ನಿವೃತ್ತಿ—ಅನೇಕರಿಗೆ ಇದು ಒಂದು ದೀರ್ಘ ಕಾಲಾವಧಿಯ ಒತ್ತಡ ಹಾಗೂ ಉದ್ರೇಕಕ್ಕೆ ಕೊನೆಯಾಗಿದೆ. ಆಯಾಸಕರವಾದ ಅಥವಾ ಭ್ರಮಾವೇಶದ ಒಂದು ನಿಯತಕ್ರಮದಿಂದ ನಿರ್ಬಂಧಿಸಲ್ಪಟ್ಟ ಬಳಿಕ, ನಿವೃತ್ತಿಹೊಂದುವುದನ್ನು ಅನೇಕರು ಅನೇಕ ವರ್ಷಗಳ ವಿಶ್ರಾಂತಿ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕಾಗಿರುವ ಒಂದು ಅವಕಾಶದೋಪಾದಿ ಎದುರುನೋಡುತ್ತಾರೆ. ಆದರೂ, ತೀರ ಅನೇಕವೇಳೆ, ಆ ಅವಕಾಶವು ಬೇಸರ ಹಾಗೂ ಉತ್ಸಾಹಶೂನ್ಯತೆಗೆ ನಡಿಸುತ್ತದೆ. ಕೆಲಸವು ಒದಗಿಸುವಂತಹ ಸ್ವಪ್ರಯೋಜನವನ್ನು, ಮನೋರಂಜನೆ ಹಾಗೂ ಹವ್ಯಾಸಗಳು ಒದಗಿಸುವುದಿಲ್ಲ.
ಯೆಹೋವನ ಸಾಕ್ಷಿಗಳಿಗಾದರೊ, ನಿವೃತ್ತಿಯು “ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭ”ವನ್ನು ಒದಗಿಸಬಲ್ಲದು. (1 ಕೊರಿಂಥ 16:9) ವೃದ್ಧಾಪ್ಯಕ್ಕೆ ತನ್ನದೇ ಆದ ಸಮಸ್ಯೆಗಳು ಹಾಗೂ ಪರಿಮಿತಿಗಳು ಇರುವುದಾದರೂ, ಯೆಹೋವನಿಗಾಗಿರುವ ತಮ್ಮ ಸೇವೆಯನ್ನು ಆತನ ಸಹಾಯದಿಂದ ಅಧಿಕಗೊಳಿಸಬಲ್ಲೆವೆಂಬುದನ್ನು ಕೆಲವು ವೃದ್ಧರು ಕಂಡುಕೊಂಡಿದ್ದಾರೆ. ನೆದರ್ಲೆಂಡ್ಸ್ನಲ್ಲಿರುವ ಕೆಲವು ವೃದ್ಧ ಕ್ರೈಸ್ತರ ಅನುಭವಗಳನ್ನು ಪರಿಗಣಿಸಿರಿ. 1995ರ ಸೇವಾ ವರ್ಷದ ಸಮಯದಲ್ಲಿ, 1,223ಕ್ಕಿಂತಲೂ ಹೆಚ್ಚಿನ ಪಯನೀಯರ (ಪೂರ್ಣ ಸಮಯದ ರಾಜ್ಯ ಘೋಷಕರು)ರಲ್ಲಿ 269 ಮಂದಿ, 50 ಅಥವಾ ಅದಕ್ಕಿಂತಲೂ ಹೆಚ್ಚು ಪ್ರಾಯದವರಾಗಿದ್ದರು. ಇವರಲ್ಲಿ, 81 ಮಂದಿ 65 ಅಥವಾ ಅದಕ್ಕಿಂತಲೂ ಹೆಚ್ಚು ಪ್ರಾಯದವರಾಗಿದ್ದರು.
ಐಹಿಕ ಉದ್ಯೋಗದಲ್ಲಿರುವಾಗ ತಾವು ಸ್ಥಾಪಿಸಿದಂತಹ ಕಾರ್ಯಮಗ್ನ ರೀತಿಯನ್ನು ಮುಂದುವರಿಸುವ ಮೂಲಕವಾಗಿಯೇ ಕೆಲವರು ಪಯನೀಯರ್ ಸೇವೆಯನ್ನು ಮಾಡಲು ಶಕ್ತರಾಗಿದ್ದಾರೆ. (ಹೋಲಿಸಿರಿ ಫಿಲಿಪ್ಪಿ 3:16.) ಕಾರಲ್ ಎಂಬ ಹೆಸರಿನ ಒಬ್ಬ ನಿವೃತ್ತ ಕ್ರೈಸ್ತನು ಜ್ಞಾಪಿಸಿಕೊಳ್ಳುವುದು: “ನಾನು ನನ್ನ ಐಹಿಕ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದಾಗ, ಬೆಳಗ್ಗೆ 7:30ಕ್ಕೆ ಕೆಲಸವನ್ನಾರಂಭಿಸುವುದು ವಾಡಿಕೆಯಾಗಿತ್ತು. ನಾನು ನನ್ನ ನಿವೃತ್ತಿವೇತನವನ್ನು ಪಡೆದುಕೊಳ್ಳಲಾರಂಭಿಸಿದಾಗ, ಅದೇ ನಿಯತಕ್ರಮವನ್ನು ಅನುಸರಿಸಲು ನಿರ್ಧರಿಸಿದೆ. ಪ್ರತಿ ದಿನ ಬೆಳಗ್ಗೆ ಏಳು ಗಂಟೆಗೆ, ರೈಲುಮಾರ್ಗದ ನಿಲ್ದಾಣದ ಮುಂದೆ ಪತ್ರಿಕಾ ಬೀದಿ ಸಾಕ್ಷಿಯನ್ನು ಮಾಡುವ ಮೂಲಕ ನಾನು ದಿನವನ್ನು ಆರಂಭಿಸುತ್ತಿದ್ದೆ.”
ಜಾಗರೂಕವಾದ ಯೋಜನೆಯು ಸಹ ಸಾಫಲ್ಯಕ್ಕೆ ಒಂದು ಕೀಲಿ ಕೈಯಾಗಿದೆ. (ಜ್ಞಾನೋಕ್ತಿ 21:5) ಉದಾಹರಣೆಗಾಗಿ, ಕೆಲವರು ತಮ್ಮ ಶುಶ್ರೂಷೆಯಲ್ಲಿ ತಮ್ಮನ್ನು ಬೆಂಬಲಿಸಿಕೊಳ್ಳಲಿಕ್ಕಾಗಿ ಸಾಕಷ್ಟು ಹಣಕಾಸನ್ನು ಬದಿಗಿರಿಸಲು ಶಕ್ತರಾಗಿದ್ದಾರೆ. ಇತರರು ತಮ್ಮ ವೈಯಕ್ತಿಕ ಖರ್ಚುಗಳನ್ನು ಕಡಿಮೆಮಾಡಲು ಹಾಗೂ ಅಂಶಕಾಲಿಕ ಉದ್ಯೋಗವನ್ನು ಗಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಟೇಒಡಾರ್ ಮತ್ತು ಆನ್ರನ್ನು ಪರಿಗಣಿಸಿರಿ. ಕುಟುಂಬ ಹಂಗುಗಳು ಅವರು ಪಯನೀಯರ್ ಸೇವೆಯನ್ನು ನಿಲ್ಲಿಸುವಂತೆ ಅಗತ್ಯಪಡಿಸುವ ವರೆಗೆ, ಅವರು ತಮ್ಮ ವೈವಾಹಿಕ ಜೀವಿತವನ್ನು ಪಯನೀಯರರೋಪಾದಿ ಮುಂದುವರಿಸಿದರು. ಆದರೆ ಅವರ ಪಯನೀಯರ್ ಆತ್ಮವು ಸಜೀವವಾಗಿ ಉಳಿಯಿತು! ಅವರ ಪುತ್ರಿಯರು ಬೆಳೆದಂತೆ, ಅವರು ಪಯನೀಯರ್ ಸೇವೆಯನ್ನು ಮಾಡುವಂತೆ ಸತತವಾಗಿ ಪ್ರೋತ್ಸಾಹಿಸಲ್ಪಟ್ಟರು. ಹೆಚ್ಚು ಪ್ರಾಮುಖ್ಯವಾಗಿ, ಅನೇಕವೇಳೆ ಆಕ್ಸಿಲಿಯರಿ ಪಯನೀಯರರೋಪಾದಿ ಸೇವೆಮಾಡುತ್ತಾ, ಟೇಒಡಾರ್ ಮತ್ತು ಆನ್ ಒಂದು ಒಳ್ಳೆಯ ಮಾದರಿಯನ್ನಿಟ್ಟರು. ಹುಡುಗಿಯರು ದೊಡ್ಡವರಾದಂತೆ, ಕ್ಷೇತ್ರ ಸೇವೆಗಾಗಿ ಹೆಚ್ಚು ಸಮಯವನ್ನು ಪಡೆದುಕೊಳ್ಳಲಿಕ್ಕಾಗಿ, ಟೇಒಡಾರ್ ಮತ್ತು ಆನ್ ಐಹಿಕ ಕೆಲಸವನ್ನು ಕಡಿಮೆಮಾಡಲಾರಂಭಿಸಿದರು.
ತಮ್ಮ ಪುತ್ರಿಯರು ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸಿ, ಮನೆಯನ್ನು ಬಿಟ್ಟುಹೋದ ಬಳಿಕ, ಆನ್ ಪಯನೀಯರ್ ಸೇವೆಯನ್ನು ಆರಂಭಿಸಿದಳು. ಒಂದು ದಿನ ಅವಳು ಅವನ ಉದ್ಯೋಗವನ್ನು ಬಿಟ್ಟುಬಿಡುವಂತೆ ಟೇಒಡಾರ್ನಿಗೆ ಪ್ರೋತ್ಸಾಹಿಸಿದಳು. “ನಾವಿಬ್ಬರೂ ಪಯನೀಯರ್ ಸೇವೆಮಾಡಸಾಧ್ಯವಿದೆ” ಎಂದು ಅವಳು ಸೂಚಿಸಿದಳು. ಟೇಒಡಾರ್ ತನ್ನ ಇಂಗಿತಗಳ ಕುರಿತಾಗಿ ತನ್ನ ಯಜಮಾನನಿಗೆ ತಿಳಿಸಿದನು. ಅವನಿಗೆ ಆಶ್ಚರ್ಯವಾಗುವಂತೆ, ಅವನ ಯಜಮಾನನು ಅವನಿಗೆ ಅಂಶಕಾಲಿಕ ಕೆಲಸವನ್ನು ಕೊಡುವ ಮೂಲಕ ಅವನಿಗೆ ಸಹಾಯ ಮಾಡಲು ಮುಂದಾದನು; ಅವನು ಹೇಳಿದ್ದು: “ಮೇಲೆ [ಸ್ವರ್ಗದಲ್ಲಿ] ಇರುವ ನಿನ್ನ ಧಣಿಗಾಗಿ ಪೂರ್ಣ ಸಮಯದ ಕೆಲಸವನ್ನು ಮಾಡಲು ನೀನು ಬಯಸುತ್ತೀ ಎಂದು ನಾನು ಎಣಿಸುತ್ತೇನೆ.” ಟೇಒಡಾರ್ ಮತ್ತು ಆನ್ ಈಗ ಒಟ್ಟಿಗೆ ಪಯನೀಯರ್ ಸೇವೆಯಲ್ಲಿ ಆನಂದಿಸುತ್ತಿದ್ದಾರೆ.
ತಮ್ಮ ಜೀವಿತಗಳಲ್ಲಿ ವಿಕಸಿಸಿದ ಪರಿಸ್ಥಿತಿಗಳಿಗೆ ಪ್ರತಿಕ್ರಿಯೆಯಲ್ಲಿ ಕೆಲವರು ಪಯನೀಯರ್ ಸೇವೆಮಾಡಲು ಆರಂಭಿಸಿದರು. ಒಬ್ಬ ದಂಪತಿಗಳಿಗೆ, ಅವರ ಪುತ್ರಿ ಹಾಗು ಮೊಮ್ಮಗಳ ದುರಂತಮಯ ಮರಣವು, ಅವರು ಉಳಿದ ವರ್ಷಗಳನ್ನು ಉಪಯೋಗಿಸುತ್ತಿದ್ದ ವಿಧವನ್ನು ಗಂಭೀರವಾಗಿ ಅವಲೋಕಿಸುವಂತೆ ಮಾಡಿತು. (ಪ್ರಸಂಗಿ 7:2) ದುಃಖದಿಂದ ಭಾವಪರವಶರಾಗಿರುವುದಕ್ಕೆ ಬದಲಾಗಿ, ಎಂಟು ವರ್ಷಗಳಿಗಿಂತಲೂ ಅಧಿಕ ಸಮಯದಿಂದ ಈಗ ಅವರು ಆನಂದಿಸಿರುವ, ಪೂರ್ಣ ಸಮಯದ ಸೇವೆಯನ್ನು ಅವರು ಆರಂಭಿಸಿದರು!
ಪೂರ್ಣ ಸಮಯದ ಸೇವೆಯಲ್ಲಿ ಉಳಿಯುವುದು, ನಿಜವಾದ ನಿರ್ಧಾರವನ್ನು ಅಗತ್ಯಪಡಿಸುತ್ತದೆಂಬುದು ಒಪ್ಪತಕ್ಕ ವಿಷಯ. ದೃಷ್ಟಾಂತಕ್ಕಾಗಿ, ಎರ್ನ್ಸ್ಟ್ ಮತ್ತು ಅವನ ಹೆಂಡತಿಯಾದ ರೀಕ್, ತಮ್ಮ ಮಕ್ಕಳು ಮನೆ ಬಿಟ್ಟುಹೋದ ಕೂಡಲೇ ಪಯನೀಯರ್ ಸೇವೆಯನ್ನು ಆರಂಭಿಸಿದರು. ತದನಂತರ ಸ್ವಲ್ಪಸಮಯದಲ್ಲಿಯೇ, ಮಾಜಿ ವ್ಯಾಪಾರ ಒಡನಾಡಿಯೊಬ್ಬನು ಎರ್ನ್ಸ್ಟ್ನಿಗೆ ಲಾಭಕರವಾದ ಒಂದು ಉದ್ಯೋಗವನ್ನು ನೀಡಿದನು. ಎರ್ನ್ಸ್ಟ್ ಉತ್ತರಿಸಿದ್ದು: “ಎಂದೆಂದಿಗೂ ಅತ್ಯುತ್ತಮನಾದ ಒಬ್ಬ ಯಜಮಾನನು ನಮಗಿದ್ದಾನೆ, ಮತ್ತು ಆತನ ಸೇವೆಮಾಡುವುದನ್ನು ನಾವು ನಿಲ್ಲಿಸಲು ಬಯಸುವುದಿಲ್ಲ!” ಎರ್ನ್ಸ್ಟ್ ಮತ್ತು ಅವನ ಹೆಂಡತಿ ಯೆಹೋವನ “ಕೆಲಸ”ದಲ್ಲಿ ಉಳಿದುದರಿಂದ, ಅವರಿಗಾಗಿ ಇನ್ನಿತರ ಸೇವಾ ಸುಯೋಗಗಳು ದೊರೆತವು. ಸರ್ಕಿಟ್ ಕೆಲಸದಲ್ಲಿ ಅವರು 20ಕ್ಕೂ ಹೆಚ್ಚು ವರ್ಷಕಾಲ ಸೇವೆಮಾಡಿದರು ಮತ್ತು ಈ ದಿನದ ತನಕವೂ ಪಯನೀಯರರೋಪಾದಿ ಮುಂದುವರಿಯುತ್ತಿದ್ದಾರೆ. ತಮ್ಮ ಸ್ವತ್ಯಾಗದ ಜೀವನಮಾರ್ಗಕ್ಕಾಗಿ ಅವರು ವಿಷಾದಪಟ್ಟರೊ? ಸ್ವಲ್ಪ ಸಮಯದ ಹಿಂದೆ ಆ ದಂಪತಿಗಳು ಬರೆದುದು: “ಅದು ಯೆಹೋವನ ಚಿತ್ತವಾಗಿರುವಲ್ಲಿ, ಮೂರು ತಿಂಗಳುಗಳೊಳಗೆ ನಾವು ನಮ್ಮ ವಿವಾಹ ಜೀವನದ 50 ವರ್ಷಗಳನ್ನು ಆಚರಿಸಲು ನಿರೀಕ್ಷಿಸುತ್ತೇವೆ; ಇದು ಅನೇಕವೇಳೆ ಸುವರ್ಣ ವಾರ್ಷಿಕೋತ್ಸವವೆಂದು ಕರೆಯಲ್ಪಡುತ್ತದೆ. ಆದರೆ ನಾವು ಪಯನೀಯರ್ ಸೇವೆಯನ್ನು ಆರಂಭಿಸಿದಾಗ, ನಮ್ಮ ನೈಜವಾದ ಸುವರ್ಣ ವರ್ಷಗಳು ಆರಂಭವಾದವೆಂದು ನಾವು ಸಂಪೂರ್ಣ ನಿಶ್ಚಿತಾಭಿಪ್ರಾಯದಿಂದ ಹೇಳುತ್ತೇವೆ.”
ಅಧಿಕವಾದ ಚಟುವಟಿಕೆಗೆ ನಡಿಸುವ ಅವಕಾಶವು, ಅಧಿಕವಾದ ಸಂತೋಷಕ್ಕೆ ಸಹ ನಡಿಸುತ್ತದೆ ಎಂಬುದನ್ನು ಅನೇಕರು ಕಂಡುಕೊಳ್ಳುತ್ತಾರೆ! 65ರ ಪ್ರಾಯವನ್ನು ತಲಪಿದ ಎರಡು ವಾರಗಳ ಬಳಿಕ ಪಯನೀಯರ್ ಸೇವೆಯನ್ನು ಆರಂಭಿಸಿದ ಒಬ್ಬ ಸಹೋದರನು ಹೀಗೆ ಹೇಳುತ್ತಾನೆ: “ಪಯನೀಯರ್ ಸೇವೆಯ ಕಳೆದ ಹತ್ತು ವರ್ಷಗಳಂತೆ, ನನ್ನ ಜೀವಿತದಲ್ಲಿ ಬಹಳವಾಗಿ ಆಶೀರ್ವಾದಗಳಿಂದ ಭರಿತವಾದ ಒಂದು ಕಾಲಾವಧಿಯನ್ನು ನಾನು ಎಂದೂ ಅನುಭವಿಸಿಲ್ಲ ಎಂಬುದಾಗಿ ನಾನು ಹೇಳಲೇಬೇಕು.” ಏಳು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಪಯನೀಯರ್ ಸೇವೆಮಾಡಿರುವ ಒಬ್ಬ ವಿವಾಹಿತ ದಂಪತಿಗಳು ಹೇಳುವುದು: “ನಮ್ಮ ಪ್ರಾಯದ ಮತ್ತು ನಮ್ಮ ಪರಿಸ್ಥಿತಿಗಳಿರುವ ಒಬ್ಬ ದಂಪತಿಗಳು ಇನ್ನಾವ ಕೆಲಸವನ್ನು ಮಾಡುತ್ತಿರಬೇಕು? ನಾವು ಟೆರಿಟೊರಿಯಲ್ಲಿ ಅನೇಕವೇಳೆ ನಮ್ಮಂತಹ ಪರಿಸ್ಥಿತಿಗಳಲ್ಲಿರುವ—ಸುಖಾನುಭವದಿಂದ ಮನೆಯಲ್ಲಿ ನೆಲೆಸಿರುವ, ಸ್ಥೂಲಕಾಯವನ್ನು ಪಡೆದುಕೊಳ್ಳುತ್ತಿರುವ, ವೃದ್ಧರಾಗುತ್ತಿರುವ, ಮತ್ತು ಅನಮ್ಯಸ್ನಾಯುಗಳಿರುವ ಜನರನ್ನು ನೋಡುತ್ತೇವೆ. ಸೇವೆಯು ನಮ್ಮನ್ನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸ್ವಸ್ಥರಾಗಿರುವಂತೆ ಮಾಡುತ್ತದೆ. ನಾವು ಯಾವಾಗಲೂ ಒಟ್ಟಿಗಿರುತ್ತೇವೆ. ನಾವು ತುಂಬಾ ನಗುತ್ತೇವೆ ಹಾಗೂ ಜೀವನದಲ್ಲಿ ಆನಂದಿಸುತ್ತೇವೆ.”
ನಿಶ್ಚಯವಾಗಿ, ಪಯನೀಯರ್ ಸೇವೆಮಾಡುವಂತೆ ತಮ್ಮನ್ನು ಅನುಮತಿಸುವ ಪರಿಸ್ಥಿತಿಗಳನ್ನು ಎಲ್ಲಾ ವೃದ್ಧರು ಹೊಂದಿರುವುದಿಲ್ಲ. ಈ ಕ್ರೈಸ್ತರು, ಆತನ ಸೇವೆಯಲ್ಲಿ ತಾವು ಮಾಡಲು ಶಕ್ತರಾಗಿರುವ ಯಾವುದೇ ಕೆಲಸವನ್ನು ಯೆಹೋವನು ಗಣ್ಯಮಾಡುತ್ತಾನೆಂಬ ಆಶ್ವಾಸನೆಯಿಂದಿರಸಾಧ್ಯವಿದೆ. (ಹೋಲಿಸಿರಿ ಮಾರ್ಕ 12:41-44.) ದೃಷ್ಟಾಂತಕ್ಕಾಗಿ, ಒಬ್ಬ ಅಶಕ್ತ ಸಹೋದರಿಯು ಒಂದು ನರ್ಸಿಂಗ್ ಹೋಮ್ಗೆ ಸೇರಿದ್ದಳು. ಹಾಗಿದ್ದರೂ, ಅವಳಿಗೆ ಚಟುವಟಿಕೆಯ ಒಂದು ಅವಕಾಶವು ಇನ್ನೂ ಲಭ್ಯವಿದೆ! ಅವಳು ತನ್ನ ಸಮಯವನ್ನು ಕಳೆಯಲು ಹೇಗೆ ಕಾರ್ಯನಿರ್ವಹಿಸುತ್ತಾಳೆಂದು ವೈದ್ಯನೊಬ್ಬನು ಕೇಳಿದನು. ಅವಳು ಹೇಳುವುದು: “ನನಗೆ ಯಾವಾಗಲೂ ಸಾಕಷ್ಟು ಸಮಯವಿರುವುದಿಲ್ಲವೆಂದು ನಾನು ಅವನಿಗೆ ಹೇಳಿದೆ. ಅವನು ಇದನ್ನು ಗ್ರಹಿಸಿಕೊಳ್ಳಲಿಲ್ಲ. ಇದು ಯಾಕೆಂದರೆ ನನ್ನ ದಿವಸಗಳು ಸಂತೃಪ್ತಿಕರವಾದ ಚಟುವಟಿಕೆಗಳಿಂದ ತುಂಬಿವೆ ಎಂದು ನಾನು ಅವನಿಗೆ ಹೇಳಿದೆ. ನಾನು ಒಂಟಿಯಾಗಿಲ್ಲ, ಆದರೆ ನಾನು ಒಂಟಿಯಾಗಿರುವ ಇತರರನ್ನು ಹುಡುಕಿ, ಮಾನವಕುಲಕ್ಕಾಗಿ ದೇವರು ಏನನ್ನು ಸಿದ್ಧವಾಗಿಟ್ಟಿದ್ದಾನೆ ಎಂಬುದನ್ನು ಅವರಿಗೆ ಹೇಳಲು ಪ್ರಯತ್ನಿಸುತ್ತೇನೆ.” ಹೀಗೆ ಹೇಳುವ ಮೂಲಕ ಅವಳು ವಿಷಯಗಳನ್ನು ಸಾರಾಂಶಿಸುತ್ತಾಳೆ: “ಬಹುಮಟ್ಟಿಗೆ 80 ವರ್ಷ ಪ್ರಾಯದವರಾಗಿರುವ ಯಾರಾದರೊಬ್ಬರಿಂದ, ಒಬ್ಬನು ಬಹಳ ಹೆಚ್ಚನ್ನು ನಿರೀಕ್ಷಿಸಸಾಧ್ಯವಿಲ್ಲ. ನಾನು ಇನ್ನೂ ಅನೇಕರನ್ನು ಯೆಹೋವನ ಕಡೆಗೆ ನಡಿಸಸಾಧ್ಯವಾಗುವಂತೆ ನನಗಾಗಿ ಪ್ರಾರ್ಥಿಸಿರಿ.”
ನೀವೂ ನಿವೃತ್ತಿಹೊಂದುವ ಪ್ರಾಯದಲ್ಲಿದ್ದೀರೊ? ಕಡಿಮೆ ಚಟುವಟಿಕೆಯ ಅವಕಾಶವು ಬಹಳ ಪ್ರಲೋಭನಗೊಳಿಸುವಂತಹದ್ದಾಗಿರಬಹುದು, ಆದರೆ ಅದು ಆತ್ಮಿಕ ಆಶೀರ್ವಾದಕ್ಕೆ ಒಂದು ಅವಕಾಶವಾಗಿರುವುದಿಲ್ಲ. ನಿಮ್ಮ ಪರಿಸ್ಥಿತಿಗಳಿಗೆ ಪ್ರಾರ್ಥನಾಪೂರ್ವಕವಾದ ಪರ್ಯಾಲೋಚನೆಯನ್ನು ಕೊಡಿರಿ. ಇದರಿಂದಾಗಿ ನೀವು ಯೆಹೋವನ ಸೇವೆಯಲ್ಲಿ ಹೆಚ್ಚು ಮಹತ್ತಾದ ಚಟುವಟಿಕೆಗೆ ನಡಿಸುವ ಅವಕಾಶದ ಮೂಲಕ ಹೋಗಬಲ್ಲವರಾಗುವುದು ಸಂಭವನೀಯ.
[ಪುಟ 25 ರಲ್ಲಿರುವ ಚಿತ್ರಗಳು]
ನಿವೃತ್ತಿಯು, ಶುಶ್ರೂಷೆಯಲ್ಲಿ ಅಧಿಕವಾದ ಚಟುವಟಿಕೆಗೆ ನಡಿಸಬಲ್ಲದು