ಗತಕಾಲದ ದೈವಭಕ್ತಿಯ ಕುಟುಂಬಗಳು ನಮ್ಮ ದಿನಕ್ಕಾಗಿ ಒಂದು ಮಾದರಿ
ಕುಟುಂಬ—ಇದನ್ನು ಜಗತ್ತಿನ ಗಮನದ ಕೇಂದ್ರಬಿಂದುವಾಗಿ ಮಾಡಲು ಸಂಯುಕ್ತ ರಾಷ್ಟವ್ರು ಪ್ರಯತ್ನಿಸಿತು. ಹೇಗೆ? 1994ನ್ನು “ಕುಟುಂಬದ ಅಂತಾರಾಷ್ಟ್ರೀಯ ವರ್ಷ” ಎಂದು ಘೋಷಿಸುವ ಮೂಲಕ. ಜಾಗತಿಕ ಮುಖಂಡರು, ಸಮಾಜ ವಿಜ್ಞಾನಿಗಳು, ಮತ್ತು ಕುಟುಂಬ ಸಲಹೆಗಾರರು, ಜಾರಜ ಜನನಗಳ ಮತ್ತು ಗಗನಕ್ಕೇರುತ್ತಿರುವ ವಿವಾಹ ವಿಚ್ಛೇದಗಳ ವೃದ್ಧಿಯಂತಹ ವಿಷಯಗಳ ಕುರಿತು ಪ್ರಲಾಪಿಸಲು ಶೀಘ್ರರಾಗಿದ್ದರೂ, ಅಂತಹ ಸಮಸ್ಯೆಗಳಿಗೆ ಕಾರ್ಯಾತ್ಮಕವಾದ, ವಾಸ್ತವಿಕ ಪರಿಹಾರಗಳನ್ನು ತೋರಿಸಿಕೊಡಲು ನಿಧಾನರಾಗಿದ್ದಾರೆ.
ಕುಟುಂಬ ಸಮಸ್ಯೆಗಳಿಗೆ ಪರಿಹಾರಗಳು ಬೈಬಲಿನಲ್ಲಿ ಇರಸಾಧ್ಯವೇ? ಇಂದಿನ ಕುಟುಂಬಗಳಿಗೆ ಬೈಬಲು ಸಹಾಯ ಮಾಡೀತೆಂಬ ಸೂಚನೆಯು ಕೆಲವರಿಗೆ ಮೂಢತೆಯಾಗಿ ಕಾಣಬಹುದು. ಎಷ್ಟೆಂದರೂ, ಅದು ಮಧ್ಯ ಪ್ರಾಚ್ಯ ಹಿನ್ನೆಲೆ ಮತ್ತು ಸಂಸ್ಕೃತಿಯಲ್ಲಿ ಶತಮಾನಗಳ ಹಿಂದೆ ಬರೆಯಲ್ಪಟ್ಟದ್ದು. ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಜೀವನವು, ಬೈಬಲಿನ ಕಾಲದಿಂದ ಬಹಳವಾಗಿ ಬದಲಾಗಿರುತ್ತದೆ. ಆದರೂ, ಪ್ರತಿಯೊಂದು ಕುಟುಂಬವು ತನ್ನ ಹೆಸರಿಗಾಗಿ ಯಾರಿಗೆ ಋಣಿಯಾಗಿದೆಯೋ ಆ ಯೆಹೋವ ದೇವರಿಂದ ಬೈಬಲು ಪ್ರೇರಿತವಾಗಿದೆ. (ಎಫೆಸ 3:14, 15; 2 ತಿಮೊಥೆಯ 3:16) ಕುಟುಂಬ ಸಮಸ್ಯೆಗಳ ಕುರಿತು ಬೈಬಲು ಹೇಳುವುದೇನು?
ಒಂದು ಕುಟುಂಬ ಜೀವನವನ್ನು ಸಂತೋಷಕರ ಮತ್ತು ಸಂತೃಪ್ತಿಕರವಾಗಿ ಮಾಡಲು ನಿಖರವಾಗಿ ಏನು ಬೇಕೆಂದು ಯೆಹೋವನಿಗೆ ತಿಳಿದಿದೆ. ಆದುದರಿಂದ ಆತನ ವಾಕ್ಯವಾದ ಬೈಬಲಿಗೆ, ಕುಟುಂಬ ಜೀವನದ ಕುರಿತು ಬಹಳಷ್ಟನ್ನು—ಕೆಲವನ್ನು ಬುದ್ಧಿವಾದದ ರೂಪದಲ್ಲಿ—ಹೇಳಲಿಕ್ಕಿದೆ. ದೈವಿಕ ಮೂಲಸೂತ್ರಗಳನ್ನು ಕಾರ್ಯರೂಪಕ್ಕೆ ಹಾಕಿದ ಕುಟುಂಬಗಳ ಉದಾಹರಣೆಗಳೂ ಬೈಬಲಿನಲ್ಲಿ ಅಡಕವಾಗಿವೆ. ಪರಿಣಾಮವಾಗಿ, ನೈಜ ಆಪತ್ತೆ ಮತ್ತು ಸಂತೃಪ್ತಿಯಲ್ಲಿ ಅವರು ಆನಂದಿಸಿದರು. ಬೈಬಲಿನ ಕಾಲದ ಕುಟುಂಬ ಜೀವನದ ಕಡೆಗೆ ನಾವು ದೃಷ್ಟಿಹರಿಸೋಣ ಮತ್ತು ಯಾವ ಪಾಠಗಳನ್ನು ಕಲಿಯಸಾಧ್ಯವಿದೆಯೆಂದು ನೋಡೋಣ.
ತಲೆತನ—ಒಂದು ಕಷ್ಟದೆಸೆಯೆ?
ದೃಷ್ಟಾಂತಕ್ಕೆ, ಕುಟುಂಬ ತಲೆತನದ ವಿಷಯವನ್ನು ಪರಿಗಣಿಸಿರಿ. ಮೂಲಪಿತೃಗಳ ಕಾಲದಲ್ಲಿ, ಅಬ್ರಹಾಮ, ಇಸಾಕ, ಮತ್ತು ಯಾಕೋಬರು ನಿರ್ವಿವಾದವಾಗಿ “ಕುಟುಂಬ ತಲೆಗಳಾ” ಗಿದ್ದರು. (ಅ. ಕೃತ್ಯಗಳು 7:8, 9, NW; ಇಬ್ರಿಯ 7:4) ರ್ಯಾಲ್ಫ್ ಗಾವರ್ ಇವರ ಬೈಬಲ್ ಸಮಯಗಳ ಹೊಸ ಶಿಷ್ಟಾಚಾರಗಳು ಮತ್ತು ಸಂಪ್ರದಾಯಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಕುಟುಂಬವು . . . ತಂದೆಯಿಂದ ಆಳಲ್ಪಟ್ಟ ಒಂದು ‘ಚಿಕ್ಕ ರಾಜ್ಯ’ ವಾಗಿತ್ತು. ಅವನು ಪತ್ನಿಯ ಮೇಲೆ, ಮಕ್ಕಳು, ಮೊಮ್ಮಕ್ಕಳು, ಮತ್ತು ಸೇವಕರು—ಮನೆವಾರ್ತೆಯ ಪ್ರತಿಯೊಬ್ಬರ ಮೇಲೆ ಆಳಿದನು.” ನಿಶ್ಚಯವಾಗಿಯೂ, ಹಲವುಬಾರಿ ಅವರ ಗಂಡು ಮಕ್ಕಳ ಕುಟುಂಬಗಳ ಮೇಲೂ ಮೂಲಪಿತೃಗಳಿಗೆ ಅಧಿಕಾರವಿತ್ತು.—ಹೋಲಿಸಿ ಆದಿಕಾಂಡ 42:37.
ಇದು ಪುರುಷರಿಗೆ ತಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆ ದಬ್ಬಾಳಿಕೆ ನಡೆಸುವ ಪರವಾನೆ ಕೊಡಲಿಲ್ಲವೇ? ಇಲ್ಲವೇ ಇಲ್ಲ. ದೇವರು ಪ್ರಥಮ ಸ್ತ್ರೀಯಾದ ಹವ್ವಳಿಗೆ ಹೀಗಂದದ್ದು ನಿಜ: “ಗಂಡನ ಮೇಲೆ ನಿನಗೆ ಆಶೆಯಿರುವದು; ಅವನು ನಿನಗೆ ಒಡೆಯನಾಗುವನು.” (ಆದಿಕಾಂಡ 3:16) ವಿವಾಹಿತ ಸ್ತ್ರೀಯರ ಸಾಮಾನ್ಯ ಬಾಳು ಹೇಗಿರುವುದೆಂದು ಆ ಮಾತುಗಳು ಸೂಚಿಸಿದವಾದರೂ, ದೇವರ ಸತ್ಯಾರಾಧಕರ ಮಧ್ಯೆ ವಿಷಯಗಳು ಹೇಗಿರಲಿದ್ದವೆಂದು ಅವು ವರ್ಣಿಸಲಿಲ್ಲ. ದೈವಭೀತಿಯುಳ್ಳ ಗಂಡಂದಿರು ಯೆಹೋವನ ಮೂಲ ಉದ್ದೇಶವನ್ನು ಮನಸ್ಸಿನಲ್ಲಿಡಬೇಕಿತ್ತು. ಯೆಹೋವನು ಸ್ತ್ರೀಯನ್ನು ಮನುಷ್ಯನಿಗೆ “ಸರಿಬೀಳುವ ಸಹಕಾರಿ” ಯನ್ನಾಗಿ ಮಾಡಿದನೇ ಹೊರತು ದಾಸಿಯನ್ನಾಗಿ ಅಲ್ಲ. (ಆದಿಕಾಂಡ 2:20) ಆರಂಭದ ಕಾಲದ ದೈವಭಕ್ತಿಯ ಪುರುಷರು ದೇವರಿಗೆ ತಮ್ಮ ಸ್ವಂತ ಅಧೀನತೆ ಮತ್ತು ಹೊಣೆಗಾರಿಕೆಯನ್ನು ಅಂಗೀಕರಿಸಿದುದರಿಂದ, ಅವರು ತಮ್ಮ ಅಧಿಕಾರದ ಅಪಪ್ರಯೋಗ ಮಾಡಲಿಲ್ಲ. ತಮ್ಮ ಹೆಂಡತಿಯರು ಮತ್ತು ಮಕ್ಕಳನ್ನು ಬರಿಯ ದಾಸರಾಗಿ ಉಪಚರಿಸುವುದಕ್ಕೆ ಬದಲಾಗಿ, ದೈವಭೀತಿಯ ಮೂಲಪಿತೃಗಳು ಅವರಿಗೆ ನಿಜ ಪ್ರೀತಿ ಮತ್ತು ಮಮತೆಯನ್ನು ತೋರಿಸಿದರು.
ಮಕ್ಕಳು ಸಾಮಾನ್ಯವಾಗಿ ಪಡೆದುಕೊಂಡ ಮಮತೆಯ ನಸುನೋಟವನ್ನು ಆದಿಕಾಂಡ 50:23 (NW) ರಲ್ಲಿ ಕೊಡಲಾಗಿದೆ. ಅಲ್ಲಿ ಯೋಸೇಫನ ಮರಿಮಕ್ಕಳ ಕುರಿತು ಅದು ಹೇಳುವುದು: “ಅವರು ಯೋಸೇಫನ ತೊಡೆಗಳ ಮೇಲೆ ಹುಟ್ಟಿದವರಾಗಿದ್ದರು.” ಯೋಸೇಫನು ಆ ಮಕ್ಕಳನ್ನು ತನ್ನ ವಂಶಜರಾಗಿ ಅಂಗೀಕರಿಸಿದನೆಂದು ಇದರ ಸರಳಾರ್ಥವಾಗಿರಬಲ್ಲದಾದರೂ, ಮಕ್ಕಳನ್ನು ಅವನು ತನ್ನ ತೊಡೆಯ ಮೇಲೆ ಕುಲುಕಾಡಿಸುತ್ತಾ, ಅವರೊಂದಿಗೆ ಮಮತೆಯಿಂದ ಆಟವಾಡಿದನೆಂದೂ ಸೂಚಿಸಬಲ್ಲದು. ಇಂದು ತಂದೆಗಳು ತದ್ರೀತಿಯ ಮಮತೆಯನ್ನು ತಮ್ಮ ಮಕ್ಕಳಿಗೆ ತೋರಿಸುವುದು ಒಳ್ಳೆಯದು.
ಕುಟುಂಬ ತಲೆಗಳೋಪಾದಿ, ಆ ದೈವಭೀತಿಯ ಮೂಲಪಿತೃಗಳು ತಮ್ಮ ಕುಟುಂಬಗಳ ಆತ್ಮಿಕ ಅಗತ್ಯಗಳನ್ನೂ ನೋಡಿಕೊಂಡರು. ಭೌಗೋಲಿಕ ಪ್ರಳಯದ ಬಳಿಕ ನಾವೆಯಿಂದ ಹೊರಗೆ ಬಂದಾಗ, “ನೋಹನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಮಾಡಿ ಅದರ ಮೇಲೆ . . . ಸರ್ವಾಂಗಹೋಮ ಮಾಡಿದನು.” (ಆದಿಕಾಂಡ 8:20; ಹೋಲಿಸಿ ಯೋಬ 1:5.) ನಂಬಿಗಸ್ತ ಮೂಲಪಿತೃ ಅಬ್ರಹಾಮನು ಕುಟುಂಬ ಸದಸ್ಯರಿಗೆ ವೈಯಕ್ತಿಕ ಉಪದೇಶವನ್ನು ಕೊಡುವ ಮೂಲಕ ಒಂದು ಒಳ್ಳೆಯ ಮಾದರಿಯನ್ನಿಟ್ಟನು. ‘ಅವನು ತನ್ನ ಪುತ್ರಪೌತ್ರರಿಗೆ ಅವರು ನೀತಿ ನ್ಯಾಯಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸಿದನು.’ (ಆದಿಕಾಂಡ 18:19) ಹೀಗೆ ಪ್ರೀತಿಯುಳ್ಳ ತಲೆತನವು ಕುಟುಂಬದ ಭಾವನಾತ್ಮಕ ಮತ್ತು ಆತ್ಮಿಕ ಸುಕ್ಷೇಮಕ್ಕೆ ನೆರವಾಯಿತು.
ಕ್ರೈಸ್ತ ಪುರುಷರು ಇಂದು ಈ ಮಾದರಿಯನ್ನು ಅನುಸರಿಸುತ್ತಾರೆ. ತಮ್ಮ ಕುಟುಂಬಗಳಿಗೆ ದೇವರ ಆವಶ್ಯಕತೆಗಳಿಗೆ ಹೊಂದಿಕೆಯಾಗಿರಲು ಸಹಾಯ ಮಾಡುತ್ತಾ, ತಾವಾಗಿಯೇ ಒಳ್ಳೆಯ ಮಾದರಿಯನ್ನಿಡುವ ಮೂಲಕ ಆರಾಧನಾ ವಿಷಯಗಳಲ್ಲಿ ತಲೆತನವನ್ನು ಅವರು ತೋರಿಸುತ್ತಾರೆ. (ಮತ್ತಾಯ 28:19, 20; ಇಬ್ರಿಯ 10:24, 25) ಮೂಲಪಿತೃಗಳಂತೆ, ಕ್ರೈಸ್ತ ಗಂಡಂದಿರು ಮತ್ತು ತಂದೆಗಳು ಸಹ ತಮ್ಮ ಕುಟುಂಬ ಸದಸ್ಯರಿಗೆ ವ್ಯಕ್ತಿಪರ ಉಪದೇಶವನ್ನು ಕೊಡಲು ಸಮಯವನ್ನು ತೆಗೆದುಕೊಳ್ಳುತ್ತಾರೆ.
ನಿರ್ಣಾಯಕ ಕ್ರಿಯೆ ಕೈಕೊಳ್ಳುವುದು
ಮೂಲಪಿತೃ ಯಾಕೋಬನು, ಕೊನೆಗೆ ತನ್ನ ಮಾವನ ದೊಡ್ಡ ಸಾಲವನ್ನು ತೀರಿಸಿದಾಗ, ಕೇಳಿದ್ದು: “ನಾನು ಸ್ವಂತ ಮನೆಗೋಸ್ಕರ ಏನನ್ನಾದರೂ ಯಾವಾಗ ಸಂಪಾದನೆ ಮಾಡಿಕೊಳ್ಳಲಿ?” (ಆದಿಕಾಂಡ 30:30, NW) ಎಲ್ಲ ತಂದೆಯರಂತೆ, ಯಾಕೋಬನು ತನ್ನ ಕುಟುಂಬದ ಭೌತಿಕ ಅಗತ್ಯಗಳನ್ನು ಪೂರೈಸುವ ಒತ್ತಡವನ್ನು ಅನುಭವಿಸಿದನು, ಮತ್ತು ಇದನ್ನು ಮಾಡಲು ಅವನು ಕಷ್ಟಪಟ್ಟು ಕೆಲಸ ಮಾಡಿದನು. ಆದಿಕಾಂಡ 30:43 ಹೇಳುವುದು: “ಯಾಕೋಬನು ಬಹಳ ಸಂಪತ್ತುಳ್ಳವನಾದನು; ಅವನಿಗೆ ದೊಡ್ಡ ದೊಡ್ಡ ಹಿಂಡುಗಳೂ ದಾಸದಾಸಿಯರೂ ಒಂಟೆಕತ್ತೆಗಳೂ ಹೇರಳವಾಗಿದ್ದವು.”
ಆದರೂ ಕೆಲವು ವರ್ಷಗಳ ತರುವಾಯ, ಯಾಕೋಬನು ಕಾನಾನ್ ದೇಶಕ್ಕೆ ಸ್ಥಳ ಬದಲಾಯಿಸಿದ ಬಳಿಕ, ತನ್ನ ಮಗಳಾದ ದೀನಳು, ವಿಧರ್ಮಿ ಕಾನಾನ್ಯರೊಂದಿಗೆ ಸಹವಾಸಿಸುವ ಅಪಾಯಕರ ಹವ್ಯಾಸವನ್ನು ಬೆಳೆಸಿದುದನ್ನು ತಿಳಿಯದೆ ಇದ್ದನೆಂದು ವ್ಯಕ್ತವಾಗುತ್ತದೆ.a (ಆದಿಕಾಂಡ 34:1) ತನ್ನ ಮನೆವಾರ್ತೆಯಲ್ಲಿ ವಿಧರ್ಮಿಗಳ ಧಾರ್ಮಿಕ ಸಾಮಗ್ರಿಗಳ ಇರುವಿಕೆಯನ್ನು ಕಂಡಾಗಲೂ ಅವನು ಕ್ರಿಯೆ ಕೈಕೊಳ್ಳಲು ತಪ್ಪಿದನು. ಆದರೂ, ಒಬ್ಬ ಕಾನಾನ್ಯನು ದೀನಳನ್ನು ಕೆಡಿಸಿದ ದುರಂತದ ಬಳಿಕ, ಯಾಕೋಬನು ನಿರ್ಣಾಯಕ ಕ್ರಿಯೆಯನ್ನು ಕೈಕೊಂಡನು. “ನಿಮ್ಮಲ್ಲಿರುವ ಅನ್ಯದೇವರುಗಳನ್ನು ತಳ್ಳಿಬಿಟ್ಟು ನಿಮ್ಮನ್ನು ಶುದ್ಧೀಕರಿಸಿ,” ಎಂದವನು ನಿರ್ದೇಶಿಸಿದನು.—ಆದಿಕಾಂಡ 35:2-4.
ತಮ್ಮ ಕುಟುಂಬಗಳ ಆತ್ಮಿಕತೆಯ ವಿಷಯವಾಗಿ ಕ್ರೈಸ್ತ ತಂದೆಗಳು ಎಚ್ಚತ್ತಿರಬೇಕು. ಕುಟುಂಬದ ಆತ್ಮಿಕ ಹಿತಾಸಕ್ತಿಗಳಿಗೆ, ಅಶ್ಲೀಲ ಸಾಹಿತ್ಯ ಅಥವಾ ಅಹಿತಕರ ಸಂಗೀತದ ಇರುವಿಕೆಯಂತಹ ಗಂಭೀರವಾದ ಬೆದರಿಕೆಗಳು ಮನೆಯಲ್ಲಿದ್ದಲ್ಲಿ, ಅವರು ನಿರ್ಣಾಯಕ ಕ್ರಿಯೆಯನ್ನು ಕೈಕೊಳ್ಳಬೇಕು.
ಆಸಕ್ತಿಕರವಾಗಿ, ಸಾರ, ರೆಬೆಕ್ಕ, ಮತ್ತು ರಾಹೇಲರಂತಹ ನಂಬಿಗಸ್ತ ಸ್ತ್ರೀಯರು ಸಹ ಕುಟುಂಬದಲ್ಲಿ ಗಮನಾರ್ಹ ಪ್ರಭಾವವನ್ನು ಬೀರಿದರು. ಅವರು ತಮ್ಮ ಗಂಡಂದಿರಿಗೆ ಅಧೀನರಾಗಿದ್ದರೂ, ಸೂಕ್ತವೂ ಆವಶ್ಯಕವೂ ಆಗಿದ್ದಾಗ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದರಿಂದ ಅವರು ನಿರ್ಬಂಧಿಸಲ್ಪಡಲಿಲ್ಲ. ದೃಷ್ಟಾಂತಕ್ಕೆ, ಮೋಶೆ ಮತ್ತು ಅವನ ಕುಟುಂಬವು ಐಗುಪ್ತಕ್ಕೆ ಹೋಗುತ್ತಿದ್ದಾಗ, “ಯೆಹೋವನು [“ಯೆಹೋವನ ದೂತನು,” ಸೆಪ್ಟ್ಯೂಅಜಿಂಟ್] ಅವನೆದುರಿಗೆ ಬಂದು ಅವನ [ಮೋಶೆಯ ಮಗನ] ಪ್ರಾಣವನ್ನು ತೆಗೆಯಬೇಕೆಂದಿದ್ದನು,” ಎಂದು ವಿಮೋಚನಕಾಂಡ 4:24-26 ನಮಗೆ ಹೇಳುತ್ತದೆ. ಮೋಶೆಯ ಮಗನು ಸಂಹರಿಸಲ್ಪಡುವ ಅಪಾಯದಲ್ಲಿದ್ದನು ಯಾಕೆಂದರೆ ಅವನಿಗೆ ಸುನ್ನತಿ ಮಾಡಲು ಮೋಶೆ ತಪ್ಪಿದ್ದನೆಂಬುದು ವ್ಯಕ್ತ. ಚಿಪ್ಪೋರಳು ತರ್ವೆಯಾಗಿ ಕ್ರಿಯೆ ಕೈಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿಸಿದಳು. ಪರಿಣಾಮವಾಗಿ, ದೇವದೂತನು ಅವನನ್ನು ಉಳಿಸಿದನು. ಸನ್ನಿವೇಶವು ಅದನ್ನು ಸೂಕ್ತವಾಗಿ ಮಾಡುವಾಗ, ಇಂದು ಕ್ರೈಸ್ತ ಪತ್ನಿಯರೂ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬಲ್ಲರು.
ಮೋಶೆಯ ಧರ್ಮಶಾಸ್ತ್ರದ ಕೆಳಗೆ ಪಿತೃಸದೃಶ ಉಪದೇಶ
ಸಾ.ಶ.ಪೂ. 1513 ರಲ್ಲಿ ಇಸ್ರಾಯೇಲ್ಯರು ಒಂದು ಜನಾಂಗವಾದಾಗ, ಮೂಲಪಿತೃಗಳ ಯುಗವು ಕೊನೆಗೊಂಡಿತು. (ವಿಮೋಚನಕಾಂಡ 24:3-8) ತಂದೆಗಳು ಕುಟುಂಬ ತಲೆಗಳಾಗಿ ಕಾರ್ಯನಡಿಸುವುದನ್ನು ಮುಂದುವರಿಸಿದರು. ಆದರೂ, ಕುಟುಂಬ ನಿಯಮವು ದೇವರು ಮೋಶೆಗೆ ಕೊಟ್ಟ ಜನಾಂಗಿಕ ಧರ್ಮಶಾಸ್ತ್ರದ ಕೆಳಗೆ ಬಂತು ಮತ್ತು ನೇಮಿತ ನ್ಯಾಯಸ್ಥಾಪಕರಿಂದ ನಿರ್ವಹಿಸಲ್ಪಟ್ಟಿತು. (ವಿಮೋಚನಕಾಂಡ 18:13-26) ಲೇವಿಯ ಕುಲದ ಯಾಜಕತ್ವವು ಆರಾಧನೆಯ ಯಜ್ಞಾರ್ಪಣೆಗೆ ಸಂಬಂಧಿಸಿದ ವಿಷಯಗಳ ಅಧಿಕಾರವನ್ನು ವಹಿಸಿತು. ಆದರೂ, ತಂದೆಯು ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುವುದನ್ನು ಮುಂದುವರಿಸಿದನು. ಮೋಶೆ ಪ್ರಬೋಧಿಸಿದ್ದು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:6, 7.
ಧರ್ಮಶಾಸ್ತ್ರವು ಒದಗಿಸಿದ ಪಸ್ಕದಂತಹ ಸಂದರ್ಭಗಳಲ್ಲಿ, ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ ಉಪದೇಶವನ್ನು ನೀಡಸಾಧ್ಯವಿತ್ತು. ಪಸ್ಕದ ದಿನವಾದ ನೈಸಾನ್ 14 ಸಮೀಪಿಸಿದಾಗ, ಯೆಹೂದಿ ಕುಟುಂಬಗಳು ಯೆರೂಸಲೇಮಿಗೆ ತಮ್ಮ ವಾಡಿಕೆಯ ಸಂಚಾರಕ್ಕಾಗಿ ಸಿದ್ಧತೆಯನ್ನು ಪ್ರಾರಂಭಿಸುತ್ತಿದ್ದವು. (ಧರ್ಮೋಪದೇಶಕಾಂಡ 16:16; ಹೋಲಿಸಿ ಲೂಕ 2:41.) ಅಂತಹ ಸಿದ್ಧತೆಗಳ ಸಂಭ್ರಮಗಳಲ್ಲಿ ಯಾವ ಮಗುವು ತಾನೇ ಒಳಗೂಡದೆ ಇದ್ದೀತು? ಪ್ರಯಾಣವು ತಾನೇ ಒಂದು ಉಲ್ಲಾಸವಾಗಿರುತ್ತಿತ್ತು. ಅಷ್ಟರೊಳಗೆ ಮಳೆಗಾಲವು ಅಂತ್ಯಗೊಂಡಿರುತ್ತಿತ್ತು, ಮತ್ತು ವಸಂತಕಾಲದ ಸೂರ್ಯನು ವಾಯುವಿನಿಂದ ಚಳಿಗಾಲದ ಶೈತ್ಯವನ್ನು ಹೊರಗಟ್ಟತೊಡಗಿರುತ್ತಿದ್ದನು. ಹೆರ್ಮೋನ್ ಬೆಟ್ಟದ ಹಿಮವು ಕರಗುವಾಗ, ಯೋರ್ದನ್ ಹೊಳೆಯು ಅದರ ದಡಮೀರಿ ಹರಿಯುತ್ತಿತ್ತು.
ದಾರಿಯುದ್ದಕ್ಕೂ, ತಂದೆಗಳು ತಮ್ಮ ಮಕ್ಕಳಿಗೆ ತಮ್ಮ ದೇಶದ ಭೂಗೋಳವನ್ನು ಮಾತ್ರವಲ್ಲ ತಾವು ಹಾದುಹೋಗಬಹುದಾದ ಪ್ರದೇಶಗಳಿಗೆ ಸಂಬಂಧಿಸಿದ ಸಮೃದ್ಧ ಇತಿಹಾಸವನ್ನು ಸಹ ಕಲಿಸಸಾಧ್ಯವಿತ್ತು. ಇವುಗಳಲ್ಲಿ ಎಲ್ಲಿ ಧರ್ಮಶಾಸ್ತ್ರದ ಶಾಪಗಳು ಮತ್ತು ಆಶೀರ್ವಾದಗಳು ಓದಲ್ಪಟ್ಟವೋ, ಆ ಏಬಾಲ್ ಮತ್ತು ಗೆರಿಜ್ಜೀಮ್ ಬೆಟ್ಟಗಳು ಒಳಗೊಂಡಿದಿರ್ದಬಹುದು. ಎಲ್ಲಿ ಯಾಕೋಬನು ದಿವ್ಯ ನಿಚ್ಚಣಿಕೆಯ ದರ್ಶನವನ್ನು ಪಡೆದಿದ್ದನೋ, ಆ ಬೇತೇಲನ್ನು ಸಹ ಅವರು ಹಾದುಹೋಗಿದ್ದಿರಬಹುದು. ಎಂತಹ ರೋಮಾಂಚಕ ಚರ್ಚೆಗಳು ಪರಿಣಮಿಸಿದ್ದಾವು! ಪ್ರಯಾಣವು ಮುಂದುವರಿದಷ್ಟಕ್ಕೆ ಮತ್ತು ಕುಟುಂಬ ಗುಂಪುಗಳು ದೇಶದ ಇತರ ಭಾಗಗಳ ಪ್ರಯಾಣಿಕರಿಂದ ಜೊತೆಸೇರಿದಷ್ಟಕ್ಕೆ ಎಲ್ಲರು ಭಕ್ತಿವರ್ಧಕವಾದ ಸಾಹಚರ್ಯದಲ್ಲಿ ಆನಂದಿಸುತ್ತಿದ್ದರು.
ಕೊನೆಗೆ ಕುಟುಂಬವು, “ಅತ್ಯಂತ ರಮಣೀಯವಾದ” ಯೆರೂಸಲೇಮನ್ನು ಪ್ರವೇಶಿಸುವುದು. (ಕೀರ್ತನೆ 50:2) ವಿದ್ವಾಂಸ ಆಲ್ಫ್ರೆಡ್ ಎಡರ್ಷೈಮ್ ಹೇಳುವುದು: “ಈ ಯಾತ್ರಿಕರಲ್ಲಿ ಅನೇಕರು ನಗರದ ಗೋಡೆಗಳ ಹೊರಗೆ ಪಾಳೆಯ ಮಾಡಿದಿರ್ದಬೇಕು. ಪಟ್ಟಣದೊಳಗೆ ಉಳಿದುಕೊಂಡವರಿಗಾದರೋ ಉಚಿತವಾದ ವಸತಿ ದೊರಕುತ್ತಿತ್ತು.” ಹೌದು, ಹೀಬ್ರು ಯುವಕರು ಸಹೋದರ ಪ್ರೀತಿ ಮತ್ತು ಅತಿಥಿ ಸತ್ಕಾರದ ಒಂದು ನೇರವಾದ ಪಾಠವನ್ನು ಪಡೆದುಕೊಂಡರು. ಯೆಹೋವನ ಸಾಕ್ಷಿಗಳ ವಾರ್ಷಿಕ ಅಧಿವೇಶನಗಳು ಇಂದು ತದ್ರೀತಿಯ ಉದ್ದೇಶವನ್ನು ನಿರ್ವಹಿಸುತ್ತವೆ.
ಕೊನೆಗೆ ನೈಸಾನ್ 14 ನೆಯ ದಿನವು ಬರುತ್ತದೆ. ಪಸ್ಕದ ಪಶುವನ್ನು ಕೊಯ್ದು ಅದನ್ನು ಹಲವಾರು ತಾಸುಗಳ ತನಕ ಸುಡಲಾಗುತ್ತಿತ್ತು. ಮಧ್ಯರಾತ್ರಿಯ ಸುಮಾರಿಗೆ ಕುಟುಂಬವು ಕುರಿಮರಿಯನ್ನು, ಹುಳಿಯಿಲ್ಲದ ರೊಟ್ಟಿ ಮತ್ತು ಕಹಿಯಾದ ಪಲ್ಯಗಳ ಸಂಗಡ ತಿನ್ನುತ್ತಿತ್ತು. ವಾಡಿಕೆಗನುಸಾರ ಮಗನೊಬ್ಬನು ಹೀಗೆ ಕೇಳುತ್ತಿದ್ದನು: “ನೀವು ನಡಿಸುವ ಈ ಆಚಾರ” ವೇನು? ಆಗ, ತಂದೆಗಳು ವಿಧಿರೂಪದ ಉಪದೇಶವನ್ನು ಕೊಡುತ್ತಾ ಹೇಳುತ್ತಿದ್ದದ್ದು: “ಯೆಹೋವನು ಐಗುಪ್ತ್ಯರನ್ನು ಸಂಹರಿಸಿದಾಗ ಐಗುಪ್ತದೇಶದಲ್ಲಿದ್ದ ಇಸ್ರಾಯೇಲ್ಯರ ಮನೆಗಳಲ್ಲಿ ಪ್ರವೇಶಿಸದೆ ಮುಂದಕ್ಕೆ ದಾಟಿ ನಮ್ಮವರನ್ನು ಉಳಿಸಿದದರಿಂದ ನಾವು ಯೆಹೋವನ ಪಸ್ಕವೆಂಬ ಈ ಯಜ್ಞಾಚಾರವನ್ನು ನಡಿಸುವದುಂಟು.”—ವಿಮೋಚನಕಾಂಡ 12:26, 27; 13:8.
‘ನಗುವ ಸಮಯ ಮತ್ತು ಕುಣಿದಾಡುವ ಸಮಯ’ ಉಂಟೆಂದು ಇಸ್ರಾಯೇಲಿನ ಅರಸ ಸೊಲೊಮೋನನು ಹೇಳಿದನು. (ಪ್ರಸಂಗಿ 3:4) ಇಸ್ರಾಯೇಲ್ಯ ಮಕ್ಕಳಿಗೆ ಮನೋರಂಜನೆಗಾಗಿ ಸಮಯವನ್ನು ಕೊಡಲಾಗುತಿತ್ತು. ಪೇಟೆ ಚೌಕಗಳಲ್ಲಿ ಮಕ್ಕಳು ಆಡುವುದನ್ನು ಯೇಸು ಕ್ರಿಸ್ತನು ವೀಕ್ಷಿಸಿದನೆಂಬುದು ವ್ಯಕ್ತ. (ಜೆಕರ್ಯ 8:5; ಮತ್ತಾಯ 11:16) ಮತ್ತು ಅನುಕೂಲಸ್ಥ ಹೆತ್ತವರು ಕುಟುಂಬ ಒಕ್ಕೂಟಗಳ ಆನಂದಕ್ಕಾಗಿ ಗಾಯನ, ನಾಟ್ಯ, ಮತ್ತು ಔತಣಗಳನ್ನು ಏರ್ಪಡಿಸುವುದೇನೂ ಅಸಾಮಾನ್ಯವಾಗಿರಲಿಲ್ಲ. (ಲೂಕ 15:25) ಕ್ರೈಸ್ತ ಹೆತ್ತವರು ಇಂದು ತದ್ರೀತಿಯಲ್ಲಿ ತಮ್ಮ ಮಕ್ಕಳಿಗಾಗಿ ಹಿತಕರವಾದ ಮನೋರಂಜನೆ ಮತ್ತು ಸಾಹಚರ್ಯವನ್ನು ಒದಗಿಸುವುದರಲ್ಲಿ ಮುಂತೊಡಗುತ್ತಾರೆ.
ಯೆಹೂದಿ ಸಮಾಜದಲ್ಲಿ ತಾಯಂದಿರು ಮತ್ತು ಮಕ್ಕಳು
ಮೋಶೆಯ ಧರ್ಮಶಾಸ್ತ್ರದ ಕೆಳಗೆ ತಾಯಂದಿರು ಯಾವ ಪಾತ್ರವನ್ನು ವಹಿಸಿದರು? ಜ್ಞಾನೋಕ್ತಿ 1:8 ಆಜ್ಞಾಪಿಸಿದ್ದು: “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.” ಯೆಹೂದಿ ಪತ್ನಿಯು ತನ್ನ ಗಂಡನ ಅಧಿಕಾರದ ಚೌಕಟ್ಟಿನೊಳಗೆ, ಕುಟುಂಬ ಜೀವನದಲ್ಲಿ ದೈವದತ್ತ ಆವಶ್ಯಕತೆಗಳನ್ನು ಅನ್ವಯಿಸುತ್ತಿದ್ದಳು. ಮುಪ್ಪಿನವಳಾದ ಬಳಿಕವೂ ಅವಳ ಮಕ್ಕಳಿಂದ ಅವಳು ಸನ್ಮಾನಿಸಲ್ಪಡಬೇಕಿತ್ತು.—ಜ್ಞಾನೋಕ್ತಿ 23:22.
ತಾಯಿಗೆ ತನ್ನ ಮಕ್ಕಳ ತರಬೇತಿಯಲ್ಲೂ ದೊಡ್ಡ ಪಾಲಿತ್ತು. ಕೂಸು ಮೊಲೆಬಿಡಿಸಲ್ಪಡಲು ಸಾಕಷ್ಟು ದೊಡ್ಡದಾಗುವ ತನಕ, ಬಹಳ ಮಟ್ಟಿಗೆ ಅವಳೇ ಅದನ್ನು ಪೂರ್ತಿಯಾಗಿ ಪಾಲಿಸಿದಳು, ನಿಸ್ಸಂದೇಹವಾಗಿ ಇದು ತಾಯಿ ಮತ್ತು ಮಗುವಿನ ಆಪ್ತ ಬಂಧದಲ್ಲಿ ಫಲಿಸಿತು. (ಯೆಶಾಯ 49:15) ತಂದೆಗಳು ತಮ್ಮ ಗಂಡು ಮಕ್ಕಳಿಗೆ ಒಂದು ಕಸಬನ್ನು ಕಲಿಸುತ್ತಿದ್ದಾಗ, ತಾಯಂದಿರು ತಮ್ಮ ಹೆಣ್ಣು ಮಕ್ಕಳಿಗೆ ಗೃಹಕೃತ್ಯದ ಕೌಶಲಗಳನ್ನು ಕಲಿಸಿದರು. ತಮ್ಮ ಗಂಡು ಮಕ್ಕಳ ಮೇಲೂ ತಾಯಂದಿರಿಗೆ ಅಗಾಧವಾದ ಪ್ರಭಾವವಿತ್ತು. ದೃಷ್ಟಾಂತಕ್ಕೆ, ಅರಸ ಲೆಮೂವೇಲನು, “ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವೋಕ್ತಿ” ಯಿಂದ ಪ್ರಯೋಜನ ಹೊಂದಿದನು.—ಜ್ಞಾನೋಕ್ತಿ 31:1.
ಒಬ್ಬ ಸಮರ್ಥಳಾದ ಯೆಹೂದಿ ಪತ್ನಿಯು, “ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳು” ವುದರಲ್ಲಿಯೂ ಗಮನಾರ್ಹ ಸ್ವಾತಂತ್ರ್ಯವನ್ನು ಅನುಭೋಗಿಸಿದಳು. ಜ್ಞಾನೋಕ್ತಿ 31:10-31 ಕ್ಕನುಸಾರವಾಗಿ, ಅವಳು ಗೃಹಕೃತ್ಯದ ಒದಗಣೆಗಳನ್ನು ಖರೀದಿಸಬಹುದಿತ್ತು, ಸ್ಥಿರಾಸ್ತಿಗಳಿಗಾಗಿ ಹಣ ಹಾಕಬಹುದಿತ್ತು, ಮತ್ತು ಒಂದು ಚಿಕ್ಕ ವ್ಯಾಪಾರವನ್ನೂ ನಿರ್ವಹಿಸಬಹುದಿತ್ತು. ಗಣ್ಯತೆಯುಳ್ಳ ಗಂಡನಿಗೆ ಅವಳ ಮೌಲ್ಯವು “ಹವಳಕ್ಕಿಂತಲೂ ಬಹು” ಹೆಚ್ಚು!
ಇಂದಿಗೆ ಒಂದು ಮಾದರಿ
ಬೈಬಲಿನ ಕಾಲದಲ್ಲಿ ಕುಟುಂಬ ಏರ್ಪಾಡು, ಅದರ ಸದಸ್ಯರೆಲ್ಲರು ಭಾವನಾತ್ಮಕ ಮತ್ತು ಆತ್ಮಿಕ ಬೆಳವಣಿಗೆಗಾಗಿ ಕಾರ್ಯನಡಿಸಿತು. ತಂದೆಗಳು ತಮ್ಮ ಕುಟುಂಬಗಳು ಪ್ರಯೋಜನ ಪಡೆದುಕೊಳ್ಳುವಂತೆ ತಮ್ಮ ಅಧಿಕಾರವನ್ನು ಪ್ರೀತಿಯಿಂದ ನಿರ್ವಹಿಸಬೇಕಿತ್ತು. ಆರಾಧನೆಯಲ್ಲಿ ಅವರು ಮುಂದಾಳುತ್ವವನ್ನು ವಹಿಸಲಿಕ್ಕಿತ್ತು. ತಂದೆ ಮತ್ತು ತಾಯಿ ಇಬ್ಬರೂ ತಮ್ಮ ಮಕ್ಕಳಲ್ಲಿ—ಅವರಿಗೆ ಕಲಿಸುತ್ತಾ, ಮತ್ತು ಅವರನ್ನು ತರಬೇತಿಗೊಳಿಸುತ್ತಾ, ಅವರೊಂದಿಗೆ ಆರಾಧಿಸುತ್ತಾ, ಹಾಗೂ ಅವರಿಗೆ ಮನೋರಂಜನೆ ಒದಗಿಸುತ್ತಾ ಆಸಕ್ತಿಯನ್ನು ತೋರಿಸಿದರು. ದೈವಭಕ್ತಿಯ ತಾಯಂದಿರು ತಮ್ಮ ಕುಟುಂಬಗಳ ಪರವಾಗಿ ಮೊದಲ ಹೆಜ್ಜೆ ತೆಗೆದುಕೊಳ್ಳುತ್ತಾ, ತಮ್ಮ ಗಂಡಂದಿರ ತಲೆತನವನ್ನು ಗೌರವಿಸುತ್ತಾ, ಅಮೂಲ್ಯ ಸಹಾಯಕರಾಗಿ ಪರಿಣಮಿಸಿದರು. ವಿಧೇಯರಾದ ಮಕ್ಕಳು ತಮ್ಮ ಹೆತ್ತವರಿಗೆ ಮತ್ತು ಯೆಹೋವ ದೇವರಿಗೆ ಆನಂದವನ್ನು ತಂದರು. ಬೈಬಲಿನ ಕಾಲದ ದೈವಭೀತಿಯ ಕುಟುಂಬವು ನಮ್ಮ ದಿನಕ್ಕಾಗಿ ಒಂದು ಅತ್ಯುತ್ತಮ ಮಾದರಿಯಾಗಿದೆ, ನಿಶ್ಚಯ.
[ಅಧ್ಯಯನ ಪ್ರಶ್ನೆಗಳು]
a ಇದಕ್ಕೆ ಮುಂಚೆ, ಯಾಕೋಬನು ತನ್ನ ಕುಟುಂಬವನ್ನು ಕಾನಾನ್ಯರ ಪ್ರಭಾವದಿಂದ ಕಾಪಾಡಲು ದೃಢವಾದ ಹೆಜ್ಜೆಗಳನ್ನು ತೆಗೆದುಕೊಂಡಿದ್ದನೆಂಬುದನ್ನು ಗಮನಿಸಬೇಕು. ಅವನು ಕಟ್ಟಿದ ಯಜ್ಞವೇದಿಯ ಶೈಲಿಯು, ಅವನನ್ನು ತನ್ನ ಕಾನಾನ್ಯ ನೆರೆಯವರಿಂದ ನಿಸ್ಸಂದೇಹವಾಗಿ ಪ್ರತ್ಯೇಕಗೊಳಿಸಿತು. (ಆದಿಕಾಂಡ 33:20; ವಿಮೋಚನಕಾಂಡ 20:24, 25) ಅಷ್ಟಲ್ಲದೆ, ಅವನು ತನ್ನ ಗುಡಾರವನ್ನು ಶೆಕೆಮ್ ಪಟ್ಟಣದ ಹೊರಗೆ ಹಾಕಿಸಿಕೊಂಡು, ತನ್ನ ಸ್ವಂತ ನೀರಿನ ಸರಬರಾಯಿಯನ್ನು ಏರ್ಪಡಿಸಿಕೊಂಡನು. (ಆದಿಕಾಂಡ 33:18; ಯೋಹಾನ 4:6, 12) ಹೀಗೆ ದೀನಳಿಗೆ ತಾನು ಕಾನಾನ್ಯರ ಸಹವಾಸ ಮಾಡಬಾರದೆಂಬ ಯಾಕೋಬನ ಅಪೇಕ್ಷೆಯ ಕುರಿತ ಒಳ್ಳೆಯ ಅರಿವಿದ್ದಿರಬೇಕು.
[ಪುಟ 23 ರಲ್ಲಿರುವ ಚಿತ್ರ]
ನಿಮ್ಮ ಕುಟುಂಬವು ಬೈಬಲಿನ ಕಾಲದಲ್ಲಿ ಯೆಹೋವನನ್ನು ಆರಾಧಿಸಿದ ಕುಟುಂಬಗಳಷ್ಟೇ ಸಂತೋಷವುಳ್ಳದ್ದಾಗಿರಬಲ್ಲದು