1999 “ದೇವರ ಪ್ರವಾದನ ವಾಕ್ಯ” ಜಿಲ್ಲಾ ಅಧಿವೇಶನಗಳು
1 ಇಸ್ರಾಯೇಲ್ಯರು ವಾಗ್ದತ್ತ ದೇಶದೊಳಗೆ ಇನ್ನೇನು ಪ್ರವೇಶಿಸಲಿದ್ದಾಗ, ದೇವರ ಆಜ್ಞೆಗಳನ್ನು ಗಣ್ಯಮಾಡುವಂತೆ ಮೋಶೆಯು ಅವರನ್ನು ಬೇಡಿಕೊಂಡನು. ಅವನು ಅವರಿಗೆ ಹೇಳಿದ್ದು: “ಇದು ನಿರರ್ಥಕವೆಂದು ಭಾವಿಸಬಾರದು; ಇದರಿಂದ ನೀವು ಬಾಳುವಿರಿ.” (ಧರ್ಮೋ. 32:45-47) ನಮ್ಮ ಜೀವಗಳು ಯೆಹೋವನಿಗೆ ತುಂಬ ಅಮೂಲ್ಯವಾಗಿರುವುದರಿಂದ ಆತನು ತನ್ನ ಬೆಲೆಕಟ್ಟಲಾರದ ವಾಕ್ಯದ ಮೂಲಕ ನಮ್ಮನ್ನು ಮಾರ್ಗದರ್ಶಿಸುತ್ತಾ ಮುಂದುವರಿಯುತ್ತಿರುವುದಕ್ಕಾಗಿ ನಾವು ಕೃತಜ್ಞರಾಗಿರಬೇಕಲ್ಲವೇ? ಆದುದರಿಂದಲೇ, ಮೂರು ದಿನದ “ದೇವರ ಪ್ರವಾದನ ವಾಕ್ಯ” ಜಿಲ್ಲಾ ಅಧಿವೇಶನಕ್ಕಾಗಿ ಮತ್ತು ಯೆಹೋವನು ನಮಗಾಗಿ ಕಾದಿರಿಸಿರುವ ಅನೇಕ ವಿಷಯಗಳಿಗಾಗಿ ನಾವೆಲ್ಲರೂ ತವಕದಿಂದ ಎದುರುನೋಡುತ್ತೇವೆ.
2 ಈ ವರ್ಷ ಭಾರತದಲ್ಲಿ, ಅನುಕೂಲಕರವಾಗಿರುವ 27 ಬೇರೆ ಬೇರೆ ಸ್ಥಳಗಳಲ್ಲಿ ಜಿಲ್ಲಾ ಅಧಿವೇಶನಗಳು ಯೋಜಿಸಲ್ಪಟ್ಟಿವೆ. ಪ್ರಪ್ರಥಮ ಬಾರಿಗೆ, ಈ ದೇಶದಲ್ಲಿ ಮಿಸೊ ಭಾಷೆಯಲ್ಲಿ ಸಂಕ್ಷೇಪಿಸಲ್ಪಟ್ಟಿರುವ ಅಧಿವೇಶನವು ಜರುಗಿಸಲ್ಪಡುವುದು.
3 ನೀವು ಪ್ರತಿದಿನ ಅಧಿವೇಶನಕ್ಕೆ ಹಾಜರಾಗುವಂತೆ ಈಗಾಗಲೇ ಏರ್ಪಾಡುಗಳನ್ನು ಮಾಡಿದ್ದಿರಬೇಕು, ಯಾಕೆಂದರೆ ನೀವು ಅಲ್ಲಿ ಹಾಜರಿರಬೇಕೆಂದು ಯೆಹೋವನು ಬಯಸುತ್ತಾನೆಂಬುದನ್ನು ನೀವು ನಂಬುತ್ತೀರಿ. ಹಾಜರಾಗುವುದಕ್ಕಾಗಿ ತನ್ನ ಸೇವಕರು ಮಾಡುವ ವೈಯಕ್ತಿಕ ಪ್ರಯತ್ನಗಳನ್ನು ಮತ್ತು ತ್ಯಾಗಗಳನ್ನು ಆತನು ನೋಡುತ್ತಾನೆಂಬ ಖಾತ್ರಿಯು ನಿಮಗಿರಲಿ ಮತ್ತು ಇವುಗಳನ್ನು ಆತನು ಗಣ್ಯತೆಯಿಂದ ಜ್ಞಾಪಕದಲ್ಲಿಟ್ಟುಕೊಳ್ಳುತ್ತಾನೆ. (ಇಬ್ರಿ. 6:10) ಆರಂಭದ ಗೀತದಿಂದ ಹಿಡಿದು ಮುಕ್ತಾಯದ ಪ್ರಾರ್ಥನೆಯ ವರೆಗೂ, ಪ್ರತಿ ದಿನ ಅಧಿವೇಶನಕ್ಕೆ ಹಾಜರಾಗುವುದರ ಮೂಲಕ, ನಾವು ಯೆಹೋವನ ಮಾತುಗಳನ್ನು ಅಮೂಲ್ಯವೆಂದೆಣಿಸುತ್ತೇವೆ ಎಂಬುದನ್ನು ತೋರಿಸಿಕೊಡುತ್ತೇವೆ. (ಧರ್ಮೋ. 4:10) ಅಧಿವೇಶನಕ್ಕಾಗಿ ತಯಾರಿಸಲು ನಮ್ಮ ಅನೇಕ ಸಹೋದರರು ಮಾಡಿರುವ ಕಠಿನ ಕೆಲಸಕ್ಕೂ ನಾವು ಗಣ್ಯತೆಯನ್ನು ತೋರಿಸುತ್ತೇವೆ.
4 ಪ್ರತಿಯೊಂದು ಅಧಿವೇಶನದ ಸ್ಥಳದಲ್ಲಿ ಸಾವಿರಾರು ಜನರು ಕೂಡಿಬರಲಿಕ್ಕಾಗಿ ಏರ್ಪಾಡು ಮಾಡಲು, ಮುಂದಾಗಿ ಯೋಜಿಸುವುದು ಮತ್ತು ಒಳ್ಳೆಯ ವ್ಯವಸ್ಥಾಪನೆಯು ಆವಶ್ಯಕ. ಅಧಿವೇಶನದ ವ್ಯವಸ್ಥೆಗಳು ಪ್ರೀತಿಪೂರ್ವಕವಾಗಿ ಮಾಡಲಾಗಿವೆಯೆಂದು ನಮಗೆ ತಿಳಿದಿರುವುದರಿಂದ, ನಾವು ಸಹಕರಿಸುವಂತೆ ಪ್ರಚೋದಿಸಲ್ಪಡಬೇಕು. ಹೀಗೆ ಮಾಡಿದರೆ ‘ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯುವುದು.’ (1 ಕೊರಿಂ. 14:40) ಆತ್ಮಿಕ ಆಹಾರ ಮತ್ತು ಕ್ರೈಸ್ತ ಸಾಹಚರ್ಯವನ್ನು ಆನಂದಿಸಲು ನೀವು ಅಧಿವೇಶನಕ್ಕೆ ಬರುವಾಗ ಪೂರ್ಣವಾಗಿ ತಯಾರಾಗಿ ಬರುವಂತೆ ಈ ಕೆಳಗಿನ ಮಾಹಿತಿಯನ್ನು ಮತ್ತು ಮರುಜ್ಞಾಪನಗಳನ್ನು ಒದಗಿಸಲಾಗಿದೆ.
ಅಧಿವೇಶನದ ಮುಂಚೆ
5 ನೀವು ಯಾರೊಂದಿಗೆ ಬೈಬಲ್ ಅಭ್ಯಾಸಗಳನ್ನು ನಡಿಸುತ್ತಿದ್ದೀರೋ ಅವರು ಮತ್ತು ಇತರ ಆಸಕ್ತ ವ್ಯಕ್ತಿಗಳಿಗೆ, ಅಧಿವೇಶನಕ್ಕೆ ಹಾಜರಾಗುವುದಕ್ಕಾಗಿ ವೈಯಕ್ತಿಕ ಏರ್ಪಾಡುಗಳನ್ನು ಮಾಡಲು ಸಹಾಯದ ಅಗತ್ಯವಿದೆಯೋ? ಅವರು ಅಲ್ಲಿ ನೋಡುವ ಮತ್ತು ಕೇಳಿಸಿಕೊಳ್ಳುವ ವಿಷಯಗಳು ಯೆಹೋವನ ಆರಾಧಕರಾಗುವಂತೆ ಅವರನ್ನು ಪ್ರೇರಿಸಬಹುದು. (1 ಕೊರಿಂ. 14:25) ವಸತಿಸೌಕರ್ಯ ಮತ್ತು ಪ್ರಯಾಣ ವ್ಯವಸ್ಥೆಯಲ್ಲಿ ಸಹಾಯದ ಅಗತ್ಯವಿರುವವರ ಕುರಿತು, ವಿಶೇಷವಾಗಿ ಸಭೆಯ ವೃದ್ಧ ಸದಸ್ಯರ ಕುರಿತು ಹಿರಿಯರು ತಿಳಿದುಕೊಂಡಿರಬೇಕು ಮತ್ತು ಅವರ ಅಗತ್ಯಗಳು ಪೂರೈಸಲ್ಪಡುವಂತೆ ಪ್ರೀತಿಪೂರ್ವಕವಾಗಿ ನೋಡಿಕೊಳ್ಳತಕ್ಕದ್ದು.—ಗಲಾ. 6:10.
6 ವಸತಿಸೌಕರ್ಯಕ್ಕಾಗಿ ನಿಮ್ಮ ಕಡೆಯಿಂದ ಎಲ್ಲ ಏರ್ಪಾಡುಗಳು ಮಾಡಲ್ಪಟ್ಟಿವೆಯೋ? ನೀವು ಹೊಟೇಲಿನಲ್ಲಿ ತಂಗುವುದಾದರೆ, ನಿಮಗಾಗಿ ರೂಮ್ ಬುಕ್ ಆಗಿದೆಯೇ ಮತ್ತು ನೀವು ಹೊಟೇಲಿಗೆ ಮುಂಗಡ ಹಣವನ್ನು ಕಳುಹಿಸಿದ್ದೀರೋ?
7 ಅಧಿವೇಶನದ ಸಂಬಂಧದಲ್ಲಿ ನಿಮಗೆ ಮಾಹಿತಿಯ ಅಗತ್ಯವಿರುವಲ್ಲಿ, ಸಭೆಯ ಸೆಕ್ರಿಟರಿಯು ನಿರ್ದಿಷ್ಟ ಸ್ಥಳದ ವಿಳಾಸವನ್ನು ನಿಮಗೆ ಒದಗಿಸುವನು. ದಯವಿಟ್ಟು ಅಧಿವೇಶನ ನಡೆಯುವ ಕಟ್ಟಡದ ಸಿಬ್ಬಂದಿ ವರ್ಗಕ್ಕೆ ಫೋನ್ ಮಾಡಬೇಡಿರಿ ಅಥವಾ ಪತ್ರ ಬರೆಯಬೇಡಿರಿ.
8 ಅಧಿವೇಶನದಲ್ಲಿರುವ ಪ್ರಥಮ ಚಿಕಿತ್ಸೆಯು ಕೇವಲ ತುರ್ತುಪರಿಸ್ಥಿತಿಗಳಿಗಾಗಿರುತ್ತದೆ. ನೀವು ನಿಮ್ಮ ಸ್ವಂತ ಆ್ಯಸ್ಪಿರಿನ್, ಬ್ಯಾಂಡೇಜುಗಳು, ಉಚ್ಛ್ವಾಸಕ, ಪಚನಕಾರಿ ಸಹಾಯಕಗಳು ಮತ್ತು ಅಗತ್ಯವಿದೆಯೆಂದು ನಿಮಗನಿಸಬಹುದಾದ ತದ್ರೀತಿಯ ಐಟಮ್ಗಳನ್ನು ಅಧಿವೇಶನಕ್ಕೆ ತರುವಂತೆ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ನಿಮಗೆ ಅಥವಾ ನಿಮ್ಮ ಪ್ರಿಯ ವ್ಯಕ್ತಿಯೊಬ್ಬರಿಗೆ ಹೃದಯದ ಸಮಸ್ಯೆ, ಸಿಹಿಮೂತ್ರರೋಗ ಅಥವಾ ಥಟ್ಟನೆ ರೋಗಗ್ರಸ್ಥರಾಗುವ ಗಂಭೀರ ಅಸ್ವಸ್ಥತೆ ಇರುವುದಾದರೆ, ಅಧಿವೇಶನಕ್ಕೆ ಬರುವಾಗ, ನೀವು ಮನೆಯಲ್ಲಿರುತ್ತಿದ್ದರೆ ಅಥವಾ ರಜೆಯಲ್ಲಿರುತ್ತಿದ್ದರೆ ಈ ಅಗತ್ಯಗಳನ್ನು ಪೂರೈಸಲು ತೆಗೆದುಕೊಳ್ಳುತ್ತಿದ್ದಂತಹ ಆವಶ್ಯಕ ಔಷಧವನ್ನು ದಯವಿಟ್ಟು ಜೊತೆಯಲ್ಲಿ ತನ್ನಿರಿ. ಅಗತ್ಯವಿರುವ ಸಹಾಯವನ್ನು ನೀಡಲು ಅತ್ಯುತ್ತಮ ಸ್ಥಾನದಲ್ಲಿರುವ ಕುಟುಂಬದ ಸದಸ್ಯನು ಅಥವಾ ಆಪ್ತ ಮಿತ್ರನು ಅವರ ಪರಿಸ್ಥಿತಿಯನ್ನು ತಿಳಿದುಕೊಂಡವನಾಗಿರುವುದರಿಂದ ಅವನು ಯಾವಾಗಲೂ ಅವರೊಂದಿಗೆ ಇರುವುದು ವಿವೇಕದ ಸಂಗತಿಯಾಗಿರುವುದು.
9 ನಾವು ಅಧಿವೇಶನಕ್ಕೆ ಹೋಗುವಾಗ ಮತ್ತು ಹಿಂದಿರುಗಿ ಬರುವಾಗ, ಅನೌಪಚಾರಿಕವಾಗಿ ಸಾಕ್ಷಿಯನ್ನು ನೀಡುವ ಸಂದರ್ಭಗಳು ಏಳಬಹುದು. ಇತರರೊಂದಿಗೆ ಸತ್ಯವನ್ನು ಹಂಚಲು ನೀವು ತಯಾರಾಗಿರುವಿರೊ? ಎಳೆಯ ಮಕ್ಕಳನ್ನು ಸೇರಿಸಿ ನಮ್ಮಲ್ಲಿ ಎಲ್ಲರೂ, ಪೆಟ್ರೋಲ್ ಬಂಕ್ನಲ್ಲಿರುವ ಕಾರ್ಮಿಕರಿಗೆ, ಸುಂಕ ವಸೂಲಿಮಾಡುವವರಿಗೆ ಮತ್ತು ನಿಮ್ಮ ಪ್ರಯಾಣದಲ್ಲಿ ಭೇಟಿಯಾಗುವ ಇತರರಿಗೆ ಕಿರುಹೊತ್ತಗೆಗಳನ್ನು ನೀಡುವುದರಲ್ಲಿ ಪಾಲ್ಗೊಳ್ಳಬಹುದು. ಆಸಕ್ತ ವ್ಯಕ್ತಿಗಳೊಂದಿಗೆ ಪತ್ರಿಕೆಗಳನ್ನು, ಬ್ರೋಷರುಗಳನ್ನು ಮತ್ತು ಇತರ ಸಾಹಿತ್ಯಗಳನ್ನು ನೀಡುವ ಅವಕಾಶಗಳು ಕೂಡ ಇರುವವು. ನಮ್ಮ ಸರ್ವಸಾಮಾನ್ಯ ಸಾರುವಿಕೆಯ ವಿಧಾನಗಳ ಮೂಲಕ ಯಾರಿಗೆ ಸಾಕ್ಷಿಯನ್ನು ಕೊಡಲು ಸಾಧ್ಯವಾಗುವುದಿಲ್ಲವೊ ಅಂತಹ ಜನರಿಗೆ ಅನೌಪಚಾರಿಕವಾಗಿ ಸಾಕ್ಷಿಕೊಡಲು ಸಿದ್ಧರಾಗಿರಿ.
ಅಧಿವೇಶನದ ಸಮಯದಲ್ಲಿ
10 ಪ್ರತಿದಿನ ಅಧಿವೇಶನದ ಹಾಲ್ನ ಬಾಗಿಲುಗಳು ತೆರೆಯಲ್ಪಡುವಾಗ, ನೀವು ನಿಮ್ಮ ಅತಿ ಸಮೀಪದ ಕುಟುಂಬ ಸದಸ್ಯರಿಗೆ ಅಥವಾ ನಿಮ್ಮೊಡನೆ ಪ್ರಯಾಣಿಸುತ್ತಿರುವ ಗುಂಪಿಗೆ ಮಾತ್ರವೇ ಆಸನಗಳನ್ನು ಕಾದಿರಿಸಬಹುದು. ವೃದ್ಧ ಸಹೋದರ ಸಹೋದರಿಯರಿಗೆ ಅನುಕೂಲಕರವಾದ ಆಸನಗಳನ್ನು ಕಾದಿರಿಸಲಾಗುವುದು ಮತ್ತು ಅಂಗವಿಕಲ ಹಾಗೂ ಗಾಲೀ ಕುರ್ಚಿಯನ್ನು ಬಳಸುವವರಿಗೆ ಪ್ರತ್ಯೇಕ ಸ್ಥಳಾವಕಾಶಗಳು ಒದಗಿಸಲ್ಪಡುವವು. ಪರಿಸರ ಅಸ್ವಸ್ಥತೆಗಳು ಅಥವಾ ಅಲರ್ಜಿಗಳಿರುವವರಿಗೆ ಅಧಿವೇಶನ ಸ್ಥಳದಲ್ಲಿ ವಿಶೇಷ ಕೋಣೆಗಳನ್ನು ಕಾದಿರಿಸಲು ಸಾಧ್ಯವಿಲ್ಲ. ಪ್ರತಿದಿನ ನೀವು ನಿಮ್ಮ ಆಸನವನ್ನು ಬಿಟ್ಟುಹೋಗುವ ಮೊದಲು, ನಿಮ್ಮ ವಸ್ತುಗಳೆಲ್ಲವೂ ನಿಮ್ಮ ಬಳಿ ಇವೆಯೆಂಬುದನ್ನು ದಯವಿಟ್ಟು ಪರಿಶೀಲಿಸಿ ಖಾತ್ರಿಮಾಡಿಕೊಳ್ಳಿರಿ.
11 ನಮ್ಮ ಜಿಲ್ಲಾ ಅಧಿವೇಶನಗಳಿಗೆ ದೊಡ್ಡ ಸಂಖ್ಯೆಗಳಲ್ಲಿ ಹಾಜರಾಗುವಾಗಲೂ ನಾವು ಸ್ಥಳೀಯ ನಿಯಮಗಳಿಗೆ, ಬೆಂಕಿ ಕಾಯಿದೆಗಳಿಗೆ ಮತ್ತು ಇತರ ಸುರಕ್ಷಾ ಅಂಶಗಳಿಗೆ ತಕ್ಕಂತೆ ನಡೆಯುವ ಅಗತ್ಯವಿದೆ. ಆದುದರಿಂದ, ನಡುದಾರಿಗಳು ಮತ್ತು ಹೊರಗೆ ಹೋಗುವ ದಾರಿಯಲ್ಲಿ ಅಡೆತಡೆಗಳಿಲ್ಲದಿರುವಂತೆ ಖಾತ್ರಿಮಾಡಿಕೊಳ್ಳಿ. ತುರ್ತುಪರಿಸ್ಥಿತಿಯು ಏಳುವಲ್ಲಿ, ಅಧಿವೇಶನದ ಸ್ಥಳದಿಂದ ತ್ವರಿತವಾಗಿ ಹೊರಗೆ ಬರಬೇಕಾದೀತು.
12 ನೀವು ಜಿಲ್ಲಾ ಅಧಿವೇಶನದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಲಿದ್ದೀರೊ? ಶನಿವಾರ ಬೆಳಗ್ಗಿನ ಕಾರ್ಯಕ್ರಮಕ್ಕಾಗಿ, ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ಆಸನಗಳ ಒಂದು ವಿಭಾಗವು ಕಾದಿರಿಸಲ್ಪಡುವುದು ಮತ್ತು ಅಟೆಂಡೆಂಟರು ನಿಮ್ಮನ್ನು ಆ ಸ್ಥಳಕ್ಕೆ ಮಾರ್ಗದರ್ಶಿಸುವರು. ಸಾಧ್ಯವಿರುವಲ್ಲಿ, ಬೆಳಗ್ಗಿನ ಕಾರ್ಯಕ್ರಮವು ಪ್ರಾರಂಭವಾಗುವ ಮುಂಚೆ ದಯವಿಟ್ಟು ನಿಮ್ಮ ಆಸನದಲ್ಲಿ ಕುಳಿತುಕೊಳ್ಳಿರಿ. ನಿಮ್ಮ ಬೈಬಲ್, ಸಂಗೀತ ಪುಸ್ತಕ, ಟವಲ್ ಮತ್ತು ಸಭ್ಯ ಉಡುಗೆಯನ್ನು ನಿಮ್ಮೊಂದಿಗೆ ತನ್ನಿರಿ. ಗುರಿನುಡಿಗಳಿರುವ ಟೀ-ಶರ್ಟುಗಳು ಮತ್ತು ತದ್ರೀತಿಯ ಉಡುಪು ಇಂತಹ ಮಹತ್ವದ ಸಂದರ್ಭಕ್ಕೆ ತಕ್ಕದ್ದಾಗಿರುವುದಿಲ್ಲ. ದೀಕ್ಷಾಸ್ನಾನದ ಅಭ್ಯರ್ಥಿಗಳೊಂದಿಗೆ ನಮ್ಮ ಶುಶ್ರೂಷೆ ಪುಸ್ತಕದಿಂದ ಪ್ರಶ್ನೆಗಳನ್ನು ಪುನರ್ವಿಮರ್ಶಿಸುವ ಸಭಾ ಹಿರಿಯರು, ಪ್ರತಿಯೊಬ್ಬನಿಗೂ ಈ ಅಂಶಗಳು ಅರ್ಥವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ದೀಕ್ಷಾಸ್ನಾನವು ಯೆಹೋವ ದೇವರ ಕಡೆಗೆ ಮಾಡುವ ವೈಯಕ್ತಿಕ ಸಮರ್ಪಣೆಯ ಚಿಹ್ನೆಯಾಗಿರುವುದರಿಂದ, ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಾಗ ಅಭ್ಯರ್ಥಿಗಳು ಕೈಗಳನ್ನು ಹಿಡಿದುಕೊಳ್ಳುವುದು ತಕ್ಕದ್ದಾಗಿರುವುದಿಲ್ಲ.
13 ನೀವು ಅಧಿವೇಶನದಲ್ಲಿ ಕ್ಯಾಮರಗಳನ್ನು, ವಿಡಿಯೋ ರೆಕಾರ್ಡರ್ಗಳನ್ನು ಮತ್ತು ಆಡಿಯೋ ಕ್ಯಾಸೆಟ್ ರೆಕಾರ್ಡರ್ಗಳನ್ನು ಉಪಯೋಗಿಸಬಹುದು. ಹೀಗಿದ್ದರೂ, ಅವುಗಳನ್ನಿಡುವ ಸ್ಥಳವು ಅಥವಾ ಅದರ ಉಪಯೋಗವು ನಡುದಾರಿಗಳನ್ನು ಅಡ್ಡಗಟ್ಟಬಾರದು, ಇತರರ ವೀಕ್ಷಣೆಗೆ ತೊಂದರೆಯನ್ನು ಉಂಟುಮಾಡಬಾರದು ಅಥವಾ ಕಾರ್ಯಕ್ರಮದ ಮೇಲೆ ಇತರರಿಗೆ ಇರುವ ಗಮನವನ್ನು ಅಪಕರ್ಷಿಸಬಾರದು. ಅವುಗಳನ್ನು ಇಲೆಕ್ಟ್ರಿಕಲ್ ಅಥವಾ ಧ್ವನಿ ವ್ಯವಸ್ಥೆಗಳಿಗೆ ಜೋಡಿಸಲೇಬಾರದು.
14 ಸೆಲ್ಯುಲರ್ ಫೋನುಗಳ ಮತ್ತು ಪೇಜರ್ಗಳ ಉಪಯೋಗವು ಹೆಚ್ಚುತ್ತಿರುವುದನ್ನು ನಾವು ಕಾಣುವಾಗ, ಈ ಉಪಕರಣಗಳು ಕಾರ್ಯಕ್ರಮಕ್ಕೆ ನೀವು ಕೊಡುತ್ತಿರುವ ಗಮನಕ್ಕೆ ಮಾತ್ರವಲ್ಲ ನಿಮ್ಮ ಸುತ್ತಲೂ ಕುಳಿತುಕೊಂಡಿರುವವರ ಗಮನಕ್ಕೂ ಅಡ್ಡಬರದಂತೆ ದಯವಿಟ್ಟು ಜಾಗರೂಕರಾಗಿರಿ. ನೀವು ಸಭಾಂಗಣದಲ್ಲಿ ಕುಳಿತಿರುವಾಗ ಈ ಉಪಕರಣಗಳು ಎಲ್ಲರಿಗೂ ಕೇಳಿಸುವಂತಹ ರೀತಿಯಲ್ಲಿ ಮೊಳಗುವಂತೆ ಅಥವಾ ಬೀಪ್ ಶಬ್ದ ಮಾಡುವಂತೆ ಬಿಡಬೇಡಿರಿ. ಕಾರ್ಯಕ್ರಮವು ನಡಿಯುತ್ತಿರುವಾಗ ಸೆಲ್ಯುಲರ್ ಫೋನ್ ಅನ್ನು ಉಪಯೋಗಿಸುವುದು ನಿಮಗೆ ಅತ್ಯಾವಶ್ಯಕವೆಂದು ತೋರಿಬಂದರೆ, ಆಗ ದಯವಿಟ್ಟು ಸಭಾಂಗಣದ ಹೊರಗೆ ಹೋಗಿ ಅದನ್ನು ಉಪಯೋಗಿಸಿರಿ.
15 ಸಮಯ ಮತ್ತು ಸರಳತೆಯ ಕಾರಣಗಳಿಗಾಗಿ, ಪ್ರತಿ ದಿನ ಅಧಿವೇಶನಕ್ಕೆ ಬರುವಾಗ ನಮ್ಮ ಸ್ವಂತ ಊಟವನ್ನು ತರಬೇಕೆಂದು ಸೊಸೈಟಿಯು ನಮ್ಮನ್ನು ಕೇಳಿಕೊಂಡಿದೆ. ಹೆಚ್ಚಿನ ಸಹೋದರರು ಈ ನಿರ್ದೇಶನವನ್ನು ಅನುಸರಿಸಿದ್ದಾರೆ ಮತ್ತು ಮಧ್ಯಾಹ್ನದ ವಿರಾಮದ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಒಟ್ಟಿಗೆ ಕುಳಿತುಕೊಂಡು, ಆ ದಿನಕ್ಕಾಗಿ ತಮ್ಮೊಂದಿಗೆ ತಂದಿರುವ ಆಹಾರವನ್ನು ತಿನ್ನುತ್ತಾರೆ. ಮಧ್ಯಾಹ್ನದ ವಿರಾಮದ ವೇಳೆಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಕ್ಕೆ ಮತ್ತು ತಮ್ಮ ಸಹೋದರ ಸಹೋದರಿಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ಸಿಗುವಂತಹ ಅವಕಾಶವನ್ನು ತಾವು ತುಂಬ ಆನಂದಿಸುತ್ತೇವೆಂದು ಅನೇಕರು ಹೇಳಿದ್ದಾರೆ. ಆಹಾರಪದಾರ್ಥಗಳನ್ನು ಮತ್ತು ಪಾನೀಯಗಳನ್ನು ಸಮಯಕ್ಕಿಂತ ಮುಂಚೆ ಖರೀದಿಸಿ, ಆಸನದ ಕೆಳಗಡೆ ಇಡಸಾಧ್ಯವಿರುವಂತಹ ಚಿಕ್ಕ ಕಂಟೇನರ್ನಲ್ಲಿ ಅವುಗಳನ್ನು ತರುವುದು ಉತ್ತಮ. ಹಾಜರಿರುವವರೆಲ್ಲರೂ ಈ ಸೂಚನೆಗಳನ್ನು ಅನುಸರಿಸುವಂತೆ ನಾವು ವಿನಂತಿಸುತ್ತೇವೆ. ಕಾರ್ಯಕ್ರಮವು ನಡೆಯುತ್ತಿರುವಾಗಲೇ ಅನೇಕ ಸಹೋದರರು ಸಭಾಂಗಣದಿಂದ ಹೊರಗೆ ಹೋಗಿ ನಮ್ಮ ಅಧಿವೇಶನಗಳು ನಡೆಯುವ ಸ್ಥಳಗಳಲ್ಲೇ ಇರುವ ಅಥವಾ ಹೊರಗಿರುವ ಆಹಾರ ಮಾರಾಟಗಾರರಲ್ಲಿಗೆ ಹೋಗುತ್ತಾರೆಂದು ಇತ್ತೀಚೆಗೆ ವರದಿಸಲಾಗಿದೆ. ಇದು ಸಭಿಕರನ್ನು ಅಪಕರ್ಷಿಸುತ್ತದೆ ಮಾತ್ರವಲ್ಲ ವೇದಿಕೆಯಿಂದ ಸಾದರಪಡಿಸಲಾಗುವ ವಿಷಯಗಳಿಗೆ ಅಗೌರವವನ್ನೂ ತೋರಿಸುತ್ತದೆ. ಇಂತಹ ಸ್ಥಳಗಳಿಂದ ತಿಂಡಿತಿನಿಸುಗಳನ್ನು ಅಥವಾ ಪಾನೀಯಗಳನ್ನು ಪಡೆದುಕೊಳ್ಳುವುದನ್ನು ನಾವು ಆಕ್ಷೇಪಿಸುತ್ತಿಲ್ಲ, ಆದರೆ ಅದನ್ನು ವಿರಾಮದ ಸಮಯದಲ್ಲಿ ಮಾಡುವುದು ಹೆಚ್ಚು ಉತ್ತಮ. ಆಹಾರದ ಅಂಗಡಿಗಳ ಸುತ್ತಲೂ ಕಿಕ್ಕಿರಿದು ಗುಂಪುಗೂಡುವುದರಿಂದ ಲೌಕಿಕ ಜನರು ಪ್ರತಿನಿಧಿಗಳೊಂದಿಗೆ ಬೆರೆಯುವಂತೆ ಆಕರ್ಷಿಸಲ್ಪಡುತ್ತಾರೆ ಮತ್ತು ಇವರಲ್ಲಿ ಕೆಲವರು ಅಪರಾಧವನ್ನು ನಡೆಸುವ ಉದ್ದೇಶದಿಂದ ಒಳನುಗ್ಗಬಹುದೆಂಬುದನ್ನು ನೆನಪಿನಲ್ಲಿಡುವುದು ಒಳ್ಳೇದು. ಆದುದರಿಂದ, ಪ್ರತಿಯೊಬ್ಬನು ದಿನಾಲೂ ಅಧಿವೇಶನಕ್ಕೆ ಹಾಜರಾಗುವಾಗ ತನ್ನ ಸ್ವಂತ ಆಹಾರ ಮತ್ತು ಪಾನೀಯವನ್ನು ತರುವುದಕ್ಕೆ ಪ್ರಯತ್ನಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ. ಅಧಿವೇಶನಕ್ಕೆ ನಿಮ್ಮ ಜೊತೆಗೆ ಬರಲಿರುವ ಆಸಕ್ತ ವ್ಯಕ್ತಿಗಳು ಸಹ ತಮ್ಮ ಸ್ವಂತ ಆಹಾರವನ್ನು ತರಬೇಕು. ಗ್ಲಾಸಿನ ಕಂಟೇನರ್ಗಳನ್ನು ಮತ್ತು ಮದ್ಯಪಾನೀಯಗಳನ್ನು ಅಧಿವೇಶನದ ಸ್ಥಳಗಳಲ್ಲಿ ತರುವುದಕ್ಕೆ ಅನುಮತಿಯಿರುವುದಿಲ್ಲ.
16 ಪ್ರತಿದಿನದ ಕಾರ್ಯಕ್ರಮವು ಮುಗಿದ ನಂತರ ಸ್ಥಳವನ್ನು ಶುಚಿಗೊಳಿಸಲು ಸಹಾಯಮಾಡುವುದರಲ್ಲಿ ನೀವು ಸ್ವಯಂ ಸೇವೆಯನ್ನು ಮಾಡಬಲ್ಲಿರೋ? ಅಥವಾ ಅಧಿವೇಶನದ ಇತರ ಯಾವುದೇ ಇಲಾಖೆಯೊಂದರಲ್ಲಿ ನೀವು ಕೆಲಸಮಾಡಬಲ್ಲಿರೋ? ನಿಮಗೆ ಸಹಾಯ ಮಾಡುವ ಸಾಧ್ಯತೆಯಿರುವುದಾದರೆ, ದಯವಿಟ್ಟು ಅಧಿವೇಶನದಲ್ಲಿರುವ ಸ್ವಯಂ ಸೇವೆಯ ಇಲಾಖೆಗೆ ಬನ್ನಿರಿ. 16 ವರ್ಷ ವಯಸ್ಸಿನ ಕೆಳಗಿನ ಮಕ್ಕಳು ತಮ್ಮ ಹೆತ್ತವರೊಂದಿಗೆ ಅಥವಾ ಇನ್ನೊಬ್ಬ ಜವಾಬ್ದಾರಿಯುತ ಪ್ರೌಢನೊಂದಿಗೆ ಕೆಲಸಮಾಡಬಹುದು. ಎಲ್ಲಿಯಾದರೂ ಕಸಕಡ್ಡಿಗಳು ಬಿದ್ದಿರುವುದು ಕಂಡುಬಂದರೆ ಅದನ್ನು ಎತ್ತಿ, ಸರಿಯಾಗಿ ಕಸದಬುಟ್ಟಿಯಲ್ಲಿ ಎಸೆಯುವ ಮೂಲಕ ಸ್ಥಳವನ್ನು ಶುಚಿಗೊಳಿಸುವುದರಲ್ಲಿ ನಾವೆಲ್ಲರೂ ಖಂಡಿತವಾಗಿಯೂ ಸಹಾಯನೀಡಬಲ್ಲೆವು.
17 ನಮ್ಮ ಅಧಿವೇಶನಗಳಲ್ಲಿ ಯಾವ ಉಡುಗೆ ಮತ್ತು ಕೇಶಾಲಂಕಾರವು ತಕ್ಕದ್ದಾಗಿರುತ್ತದೆಂಬುದರ ಕುರಿತು ಅತ್ಯುತ್ತಮ ಮಾರ್ಗದರ್ಶನಗಳನ್ನು ನಮಗೆ ನೀಡಲಾಗಿದೆ. ದೃಷ್ಟಾಂತಕ್ಕಾಗಿ: ನಮ್ಮ ರಾಜ್ಯದ ಸೇವೆಯಲ್ಲಿರುವ ಪುರವಣಿಗಳಲ್ಲಿ ಈ ವಿಷಯದ ಕುರಿತು ನಮಗೆ ನಿರ್ದೇಶನೆಗಳಿರುತ್ತವೆ, ನಮ್ಮ ಸಾಹಿತ್ಯಗಳಲ್ಲಿ ದೃಷ್ಟಾಂತಗಳು ಮತ್ತು ಚಿತ್ರಗಳು ಬರುತ್ತವೆ, ಮತ್ತು ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ, ಯೆಹೋವನು ಹೇಳಿರುವ ವಿಷಯಗಳು ಬೈಬಲಿನಲ್ಲಿ ನಮಗಿವೆ. (ರೋಮಾ. 12:2; 1 ತಿಮೊ. 2:9, 10) ನಾವು ಯಾರು ಮತ್ತು ನಾವು ಈ ಪಟ್ಟಣದಲ್ಲಿ ಏಕೆ ಒಟ್ಟುಗೂಡಿಬಂದಿದ್ದೇವೆಂಬುದು ಜನರಿಗೆ ತಿಳಿದಿದೆ. ಹೀಗಾಗಿ, ನಮ್ಮ ಉಡುಗೆ ಮತ್ತು ಕೇಶಾಲಂಕಾರವು ಒಂದು ಬಲವಾದ ಸಾಕ್ಷಿಯಾಗಿರುತ್ತದೆ. ಯೆಹೋವನ ಸಾಕ್ಷಿಗಳಲ್ಲಿ ಹೆಚ್ಚಿನವರು ಈ ವಿಷಯದಲ್ಲಿ ಉತ್ತಮ ಮಾದರಿಯಾಗಿದ್ದಾರೆ. ಹೀಗಿದ್ದರೂ, ಆಗಾಗ, ನಮ್ಮ ಅಧಿವೇಶನಗಳನ್ನು ಹಾಜರಾಗುವ ಕೆಲವರು ಉಡುಗೆ ಮತ್ತು ಕೇಶಾಲಂಕಾರದಲ್ಲಿ ಲೋಕದ ಆತ್ಮವನ್ನು ಪ್ರತಿಬಿಂಬಿಸುವುದನ್ನು ನಾವು ಕಾಣುತ್ತೇವೆ. ಅಂಗವನ್ನು ಪ್ರದರ್ಶಿಸುವ ಯಾವುದೇ ರೀತಿಯ ಉಡುಗೆಯನ್ನು ಧರಿಸುವುದು, ತಾನೊಬ್ಬ ಆತ್ಮಿಕ ವ್ಯಕ್ತಿಯಾಗಿದ್ದೇನೆಂಬ ಹೇಳಿಕೆಗೆ ವಿರುದ್ಧವಾಗಿದೆ. ಸಭ್ಯ, ಶುಚಿಯಾದ, ನೀಟಾದ ತೋರಿಕೆಯು ಹೆಚ್ಚು ಆಕರ್ಷಕವಾಗಿರುತ್ತದೆ. ಆದುದರಿಂದಲೇ, ಕುಟುಂಬ ತಲೆಗಳು ತಮ್ಮ ಕುಟುಂಬ ಸದಸ್ಯರು ಏನನ್ನು ಧರಿಸಲು ಯೋಜಿಸುತ್ತಾರೆಂಬುದರ ಕುರಿತು ಗಮನವನ್ನು ಕೊಡತಕ್ಕದ್ದು. ಅಧಿವೇಶನದ ಸ್ಥಳದಿಂದ ನಾವು ದೂರವಿರುವಾಗಲೂ ಇದು ಅನ್ವಯಿಸುತ್ತದೆ. ನಮ್ಮ ಬ್ಯಾಡ್ಜ್ ಕಾರ್ಡನ್ನು ದಿನದ ಕಾರ್ಯಕ್ರಮದ ಮುಂಚೆಯೂ ಮತ್ತು ಅನಂತರವೂ ಧರಿಸುವುದು, ನಮ್ಮನ್ನು ಯೆಹೋವನೊಂದಿಗೆ ಮತ್ತು ಆತನ ಶುದ್ಧ ಜನರೊಂದಿಗೆ ಗುರುತಿಸುತ್ತದೆ.—ಮಾರ್ಕ 8:38ನ್ನು ಹೋಲಿಸಿರಿ.
18 ವಿವೇಕಿ ಅರಸನಾದ ಸೊಲೊಮೋನನು, “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ” ಮತ್ತು “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು” ಎಂಬುದನ್ನು ಅವಲೋಕಿಸಲು ಪ್ರೇರೇಪಿಸಲ್ಪಟ್ಟನು. (ಜ್ಞಾನೋ. 22:15; 29:15) ಕಾರ್ಯಕ್ರಮದ ಸಮಯದಲ್ಲಿ ಮೇಲ್ವಿಚಾರಣೆಯಿಲ್ಲದೆ ಬಿಡಲ್ಪಟ್ಟ ಎಳೆಯ ಸಾಕ್ಷಿಗಳು, ಕಾರ್ಯಕ್ರಮದಿಂದ ಪ್ರಯೋಜನಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಸಹೋದರ ಸಹೋದರಿಯರಿಗೆ ತೊಂದರೆಯನ್ನು ಉಂಟುಮಾಡಿದ್ದಾರೆ. ಕಳೆದ ವರ್ಷದ ಅಧಿವೇಶನದ ಸಮಯದಲ್ಲಿ, ಕೆಲವು ಎಳೆಯ ಮಕ್ಕಳು ಮೇಲ್ವಿಚಾರಣೆಯಿಲ್ಲದೆ ಆಚೀಚೆ ಓಡಾಡುತ್ತಿರುವುದು ಕಂಡುಬರುತ್ತಿತ್ತು. ಅದೇ ಸಮಯದಲ್ಲಿ ಕೆಲವು ಯುವ ಜನರು ಸಭಾಂಗಣದ ಹೊರಗೆ ಮತ್ತು ಶೌಚಾಲಯಗಳಿರುವ ಸುತ್ತಮುತ್ತಲಿನ ಸ್ಥಳಗಳಲ್ಲಿ ಅಲೆದಾಡುತ್ತಿರುವುದನ್ನು ನೋಡಲಾಯಿತು. ಈ ಮಕ್ಕಳು ಮತ್ತು ಯುವ ಜನರು, ತಮಗಾಗಿ ತಯಾರಿಸಲ್ಪಟ್ಟಿದ್ದ ಆತ್ಮಿಕ ಕಾರ್ಯಕ್ರಮದಿಂದ ಪ್ರಯೋಜನಪಡೆದುಕೊಳ್ಳುತ್ತಿರಲಿಲ್ಲ ಎಂಬುದು ಸ್ಪಷ್ಟ. ತಮ್ಮ ಮಕ್ಕಳ ನಡತೆಗೆ ಹೆತ್ತವರು ಯೆಹೋವನ ಮುಂದೆ ಹೊಣೆಗಾರರಾಗಿರುವ ಕಾರಣ, ತಮ್ಮ ಮಕ್ಕಳು ಯೆಹೋವನ ಉಪದೇಶಕ್ಕೆ ಕಿವಿಗೊಡುತ್ತಿದ್ದಾರೆ ಎಂಬುದನ್ನು ಹಾಗೂ ಉತ್ತಮವಾಗಿ ವರ್ತಿಸುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಒಬ್ಬ ತಂದೆ ಅಥವಾ ತಾಯಿಯು ಮಕ್ಕಳನ್ನು ತಮ್ಮೊಂದಿಗೆಯೇ ಕುಳಿತುಕೊಳ್ಳುವಂತೆ ಮಾಡಬೇಕು. ಇತರರನ್ನು ಅಪಕರ್ಷಿಸುವಂತಹ ಮಕ್ಕಳನ್ನು ಅಟೆಂಡೆಂಟರು ಸಮೀಪಿಸಿ, ಹಾಗೆ ಮಾಡದಂತೆ ವಿನಂತಿಸುತ್ತಾ ಕಾರ್ಯಕ್ರಮಕ್ಕೆ ಗಮನವನ್ನು ಕೊಡುವಂತೆ ಅವರಿಗೆ ದಯಾಪೂರ್ವಕವಾಗಿ ಜ್ಞಾಪಕಹುಟ್ಟಿಸುವರು.
19 ನಮ್ಮ ಅಧಿವೇಶನಗಳಿಗೆ ನಾವು ಸಾರ್ವಜನಿಕರನ್ನು ಸಹ ಆಮಂತ್ರಿಸುವುದರಿಂದ, ಮಕ್ಕಳು ಮತ್ತು ವೈಯಕ್ತಿಕ ವಸ್ತುಗಳ ಕುರಿತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ವಿವೇಕಯುತವಾಗಿದೆ. ನಮ್ಮ ಮಕ್ಕಳು ಯೆಹೋವನಿಂದ ಬಂದಿರುವ ಅಮೂಲ್ಯವಾದ ಕೊಡುಗೆಯಾಗಿದ್ದಾರೆ. ಆದರೆ ಲೋಕವು ಸೈತಾನನ ಕೊಳ್ಳೆಸ್ವಭಾವದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆಂದು ನಮಗೆ ಗೊತ್ತಿದೆ. ಆದುದರಿಂದಲೇ, ನಿಮ್ಮ ಮಕ್ಕಳು ಎಲ್ಲಿದ್ದಾರೆಂಬುದನ್ನು ದಯವಿಟ್ಟು ಎಲ್ಲ ಸಮಯಗಳಲ್ಲಿ ಖಾತ್ರಿಪಡಿಸಿಕೊಳ್ಳಿರಿ. ಅದಲ್ಲದೆ, ಕ್ಯಾಮರಗಳು, ಪರ್ಸ್ಗಳು ಮತ್ತು ಇನ್ನಿತರ ಅಮೂಲ್ಯ ವಸ್ತುಗಳು ಎಲ್ಲ ಸಮಯಗಳಲ್ಲಿ ನಿಮ್ಮೊಂದಿಗಿರಲಿ ಮತ್ತು ನಿಮ್ಮ ಆಸನದ ಮೇಲೆ ಅವುಗಳನ್ನು ಬಿಡಬೇಡಿರಿ. ನಿಮ್ಮ ವಾಹನಕ್ಕೆ ಬೀಗಹಾಕಿರುವುದನ್ನು ಖಾತ್ರಿಮಾಡಿಕೊಳ್ಳಿರಿ ಮತ್ತು ವೈಯಕ್ತಿಕ ವಸ್ತುಗಳನ್ನು ವಾಹನದ ಡಿಕ್ಕಿಯಲ್ಲಿ ಇಡಿರಿ ಅಥವಾ ಅವುಗಳನ್ನು ನಿಮ್ಮೊಂದಿಗೆ ಒಯ್ಯಿರಿ. ಹೀಗೆ ಮಾಡುವುದರಿಂದ ಯಾರಾದರೂ ನಿಮ್ಮ ವಾಹನದೊಳಗೆ ನುಗ್ಗಿ ಕಳ್ಳತನಮಾಡುವ ಪ್ರಲೋಭನೆಯು ಕಡಿಮೆಯಾಗುವುದು.
20 ನಿಮ್ಮ ಹೊಟೇಲ್ ರಿಸರ್ವೇಶನ್ನಲ್ಲಿ ಏನಾದರೂ ಸಮಸ್ಯೆ ಏಳುವಲ್ಲಿ, ಸ್ಥಳಿಕ ರೂಮಿಂಗ್ ಇಲಾಖೆಯು ನಿಮಗೆ ಸಹಾಯಮಾಡಲು ಉತ್ಸುಕವಾಗಿರುತ್ತದೆ. ನೀವು ಇನ್ನೂ ಅಧಿವೇಶನದ ಸ್ಥಳದಲ್ಲಿರುವಾಗ ಯಾವುದೇ ಸಮಸ್ಯೆಗಳು ಏಳುವಲ್ಲಿ ಅದನ್ನು ದಯವಿಟ್ಟು ರೂಮಿಂಗ್ ಇಲಾಖೆಗೆ ತಿಳಿಯಪಡಿಸಿರಿ. ನೀವು ಅಧಿವೇಶನದ ಕಾರ್ಯಕ್ರಮದಿಂದ ಆನಂದವನ್ನು ಪಡೆದುಕೊಳ್ಳುತ್ತಾ ಮುಂದರಿಯುವಂತೆ, ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿ ಸಹಾಯ ನೀಡುವುದರಲ್ಲಿ ಸಹೋದರರು ಸಂತೋಷಿಸುತ್ತಾರೆ. ಅಷ್ಟೇ ಅಲ್ಲದೆ, ರೂಮಿಂಗ್ ಸಂಬಂಧದಲ್ಲಿ ದಯವಿಟ್ಟು ಈ ಕೆಳಗಿನ ವಿಷಯಗಳನ್ನು ಗಮನಿಸಿರಿ:
▪ ಯೆಹೋವನ ಜನರಲ್ಲಿ ಅನೇಕರು ಹೊಟೇಲಿನಲ್ಲಿ ತಂಗುವ ಕಾರಣ, ನೀವು ರೂಮ್ ರಿಸರ್ವೇಶನ್ ಮಾಡುವ ಸಮಯದಲ್ಲಿ ಧೂಮಪಾನವು ನಿಷೇಧಿಸಲ್ಪಟ್ಟ ರೂಮಿಗಾಗಿ ವಿನಂತಿಸಿರುವುದಾದರೂ, ನಮ್ಮಲ್ಲಿ ಎಲ್ಲರಿಗೂ ಈ ರೀತಿಯ ರೂಮ್ ಸಿಗಲಿಕ್ಕಿಲ್ಲ. ಕಳೆದ ವರ್ಷದ ಅಧಿವೇಶನದಲ್ಲಿ, ಕೆಲವು ಸಹೋದರರು ಹೊಟೇಲಿನ ಸಿಬ್ಬಂದಿ ವರ್ಗದೊಂದಿಗೆ ಹೆಚ್ಚಿನ ಸೌಕರ್ಯಗಳಿಗಾಗಿ ಜಗಳವಾಡುತ್ತಿದ್ದರು ಎಂಬ ಸುದ್ದಿಯನ್ನು ತಿಳಿಸುವ ವರದಿಗಳು ನಮಗೆ ಬಂದಿವೆ.
▪ ನೀವು ಉಳಿದುಕೊಂಡಿರುವ ಹೊಟೇಲನ್ನು ಬಾಡಿಗೆಗೆ ತೆಗೆದುಕೊಳ್ಳುವ ಮತ್ತು ಬಿಟ್ಟುಹೋಗುವ ಸಮಯಗಳನ್ನು ದಯವಿಟ್ಟು ಗಮನಿಸಿರಿ. ನೀವು ಮುಂಚಿತವಾಗಿ ವಿನಂತಿಸುವುದಾದರೆ, ನಾವು ಹೊಟೇಲಿಗೆ ಬೇಗನೇ ಬಂದು ಸೇರಿದರೂ ತಡವಾಗಿ ಬಿಟ್ಟುಹೋಗುವ ಅನುಮತಿಯನ್ನು ಅವರು ನಮಗೆ ಕೊಡಬಹುದು.
▪ ಹಣವನ್ನು ಒಯ್ಯುವುದು ಹೆಚ್ಚೆಚ್ಚು ಅಪಾಯಕರವಾಗುತ್ತಿದೆ. ರೆಸ್ಟೋರೆಂಟಿನ ಅಥವಾ ಇತರ ಖರ್ಚುಗಳನ್ನು ನಿಮ್ಮ ರೂಮ್ ಬಿಲ್ನಲ್ಲಿ ಹಾಕಿಸಿ, ಹೊಟೇಲನ್ನು ಬಿಟ್ಟುಹೋಗುವಾಗ ಅದರ ಹಣವನ್ನು ಸಲ್ಲಿಸುವುದು ಪ್ರಯೋಜನಕರವಾಗಿರುವುದು.
▪ ಹೊಟೇಲಿನಲ್ಲಿ ಲಭ್ಯವಿರುವ ಟೆಲಿವಿಷನ್ ಮತ್ತು ವಿಡಿಯೋ ಸೌಕರ್ಯಗಳು, ಅಯೋಗ್ಯವಾಗಿರುವ ಕಾರ್ಯಕ್ರಮಗಳನ್ನು ಪ್ರದರ್ಶಿಸುವ ಚಾನೆಲ್ಗಳನ್ನು ಸುಲಭವಾಗಿ ಲಭ್ಯಗೊಳಿಸುತ್ತವೆ. ನೀವು ವಿನಂತಿಸುವಲ್ಲಿ, ಹೆಚ್ಚಿನ ಹೊಟೇಲುಗಳು ನೀವು ಅಲ್ಲಿ ತಂಗಿರುವ ಅವಧಿಯ ವರೆಗೆ ನಿಮ್ಮ ರೂಮಿನಿಂದ ನಿರ್ದಿಷ್ಟ ಚಾನೆಲ್ಗಳನ್ನು ಅಥವಾ ಕಾರ್ಯಕ್ರಮಗಳನ್ನು ತೆಗೆದುಬಿಡುವವು. ಮಕ್ಕಳು ಟೆಲಿವಿಷನ್ ಅನ್ನು ವೀಕ್ಷಿಸುವಾಗ ನೀವು ಮನೆಯಲ್ಲಿ ಅವರ ಮೇಲೆ ನಿಗಾ ಇಡುವಂತೆಯೇ, ಇಲ್ಲಿಯೂ ದಯವಿಟ್ಟು ಅವರ ಮೇಲ್ವಿಚಾರಣೆಯನ್ನು ಮಾಡಿರಿ.
21 ಅಧಿವೇಶನದ ಕಾರ್ಯಕ್ರಮದ ವೇಳೆಯಲ್ಲಿ ಸಹೋದರ ಸಹೋದರಿಯರು ನೋಟ್ಸನ್ನು ತೆಗೆದುಕೊಳ್ಳುತ್ತಿರುವುದು ಉತ್ತೇಜನದಾಯಕವಾಗಿರುತ್ತದೆ. ಸಂಕ್ಷಿಪ್ತ ನೋಟ್ಸ್ಗಳು ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಮತ್ತು ಮುಖ್ಯ ವಿಷಯಗಳನ್ನು ಜ್ಞಾಪಕಕ್ಕೆ ತರಲು ಸಹಾಯ ಮಾಡುವುದು. ನಂತರ ನಿಮ್ಮ ನೋಟ್ಸ್ಗಳನ್ನು ಕುಟುಂಬ ಮತ್ತು ನಿಮ್ಮ ಮಿತ್ರರೊಂದಿಗೆ ಪುನರ್ವಿಮರ್ಶಿಸುವುದು, ಅಧಿವೇಶನದ ಮುಖ್ಯಾಂಶಗಳನ್ನು ನೀವು ಮರೆಯದಿರಲು ಸಾಧ್ಯಮಾಡುತ್ತಾ ಪುನಃ ಅದರ ಮೇಲೆ ಮನನಮಾಡುವಂತೆ ನಿಮಗೆ ಅವಕಾಶವನ್ನು ಕೊಡುವುದು.
22 ಯೆಹೋವನ ಜನರು ದೇವಪ್ರಭುತ್ವ ಅಭಿರುಚಿಗಳ ಕಡೆಗೆ ಕಾಣಿಕೆ ನೀಡುವುದರಲ್ಲಿ ಯಾವಾಗಲೂ ಉದಾರಿಗಳಾಗಿರುತ್ತಾರೆ. (ವಿಮೋ. 36:5-7; 2 ಪೂರ್ವ. 31:10; ರೋಮಾ. 15:26, 27) ಲೋಕವ್ಯಾಪಕ ಕೆಲಸಕ್ಕಾಗಿ ನಿಮ್ಮ ಸ್ವ-ಇಚ್ಛೆಯ ಕಾಣಿಕೆಗಳು ಅಧಿವೇಶನ ಜರುಗಿರುವ ದೊಡ್ಡ ದೊಡ್ಡ ಕಟ್ಟಡಗಳ ಬಾಡಿಗೆಯನ್ನು ತುಂಬಿಸುವುದರಲ್ಲಿ ಜೊತೆಗೂಡುವ ಖರ್ಚುಗಳನ್ನು ನಿಭಾಯಿಸುವುದರಲ್ಲಿ ಉಪಯೋಗಿಸಲಾಗುತ್ತದೆ. ನಿಮ್ಮ ಕಾಣಿಕೆಯು ಚೆಕ್ನ ಮೂಲಕ ಮಾಡಲ್ಪಡುವುದಾದರೆ, ಅದನ್ನು ‘ವಾಚ್ಟವರ್ ಸೊಸೈಟಿ’ಯ ಹೆಸರಿನಲ್ಲಿ ದಯವಿಟ್ಟು ಪಾವತಿಮಾಡಿರಿ. ಅಷ್ಟೇ ಅಲ್ಲದೆ, ಕಾಣಿಕೆಯು ಸೊಸೈಟಿಯ ಮೂಲನಿಧಿಗಾಗಿದೆ ಎಂಬುದನ್ನು ತಿಳಿಯಪಡಿಸುವ ಒಂದು ಪತ್ರವನ್ನು ಅದರೊಂದಿಗೆ ಕಳುಹಿಸಿರಿ.
23 ಆಮೋಸ 3:7ರಲ್ಲಿ ದಾಖಲಿಸಲಾಗಿರುವಂತೆ, ಯೆಹೋವನು “ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು” ಎಂಬುದಾಗಿ ಹೇಳಿದ್ದಾನೆ. “ರಹಸ್ಯಗಳನ್ನು ವ್ಯಕ್ತಗೊಳಿಸುವವ”ನಾಗಿರುವ ಯೆಹೋವನು, ನಿಷ್ಕೃಷ್ಟವಾಗಿ ಮತ್ತು ಪೂರ್ಣವಾಗಿ ನೆರವೇರಿರುವ ನೂರಾರು ಪ್ರವಾದನೆಗಳನ್ನು ಬೈಬಲಿನಲ್ಲಿ ದಾಖಲಿಸಿದ್ದಾನೆ. (ದಾನಿ. 2:28, 47) ಮಹಾ ವಾಗ್ದಾನಗಳು ಇನ್ನೂ ನೆರವೇರಲಿವೆ. 1999-2000ರ “ದೇವರ ಪ್ರವಾದನ ವಾಕ್ಯ” ಎಂಬ ಜಿಲ್ಲಾ ಅಧಿವೇಶನಗಳು ದೇವರ ವಾಗ್ದಾನಗಳಲ್ಲಿ ನಿಮ್ಮ ನಂಬಿಕೆಯನ್ನು ಬಲಗೊಳಿಸುವುದು. ನಿಮಗಾಗಿರುವ ಯೆಹೋವನ ವಾಕ್ಯವನ್ನು ನಿಕಟವಾಗಿ ಆಲಿಸಿರಿ. ನೀವು ನೋಡಲಿರುವ ಮತ್ತು ಕೇಳಿಸಿಕೊಳ್ಳಲಿರುವುದೆಲ್ಲವನ್ನು ಶುಶ್ರೂಷೆಯಲ್ಲಿ, ಸಭೆಯಲ್ಲಿ ಮತ್ತು ನಿಮ್ಮ ವೈಯಕ್ತಿಕ ಜೀವಿತದಲ್ಲಿ ಅನ್ವಯಿಸಿಕೊಳ್ಳಿರಿ. ಈ ಸಮೃದ್ಧ ಆತ್ಮಿಕ ಔತಣಕ್ಕೆ ಪ್ರತಿ ದಿನ ಹಾಜರಾಗುವಂತೆ ನೀವು ಮಾಡುವ ಎಲ್ಲ ಏರ್ಪಾಡುಗಳ ಮೇಲೆ ಯೆಹೋವನ ಹೇರಳವಾದ ಆಶೀರ್ವಾದಗಳು ಇರಲಿ ಎಂದು ನಾವು ಪ್ರಾರ್ಥಿಸುತ್ತೇವೆ!
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]]
ಶುಕ್ರವಾರ, ಶನಿವಾರ, ಮತ್ತು ಭಾನುವಾರ ಇಡೀ ದಿನ ಹಾಜರಾಗಲು ಯೋಜಿಸಿರಿ!