ದೇವರ ಪ್ರವಾದನ ವಾಕ್ಯವೆಲ್ಲವೂ ಸತ್ಯವಾಗುವುದು!
1 ಯೆಹೋವನ ಸಾಕ್ಷಿಗಳು ಯಾವಾಗಲೂ ಬೈಬಲ್ ಪ್ರವಾದನೆಯಲ್ಲಿ ಆಸಕ್ತರಾಗಿದ್ದಾರೆ. ಆದುದರಿಂದ, ಕಳೆದ ವರ್ಷದ ಜಿಲ್ಲಾ ಅಧಿವೇಶನದ ಮುಖ್ಯ ವಿಷಯವು, “ದೇವರ ಪ್ರವಾದನ ವಾಕ್ಯ” ಎಂದಾಗಿರುವುದು ಎಂಬುದನ್ನು ಕೇಳಿಸಿಕೊಂಡಾಗ ನಾವು ಪುಳಕಿತರಾದೆವು. ನಮಗೋಸ್ಕರ ಯೆಹೋವನು ‘ಹೊತ್ತುಹೊತ್ತಿಗೆ ಬೇಕಾದ ಆಹಾರ’ದೋಪಾದಿ ಏನನ್ನು ಸಿದ್ಧಪಡಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ನಾವು ಕಾತುರರಾಗಿದ್ದೆವು. (ಮತ್ತಾ. 24:45) ಮತ್ತು ಆತನು ನಮ್ಮನ್ನು ನಿರಾಶೆಗೊಳಿಸಲಿಲ್ಲ.
2 ಅಧಿವೇಶನದ ಮುಖ್ಯಾಂಶಗಳು: ಶುಕ್ರವಾರದ ಮುಖ್ಯಭಾಷಣವು “ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ” ಎಂದಾಗಿತ್ತು. ಇದು ರೂಪಾಂತರದ ಕುರಿತು ಒಂದು ಬೋಧಪ್ರದ ಚರ್ಚೆಯನ್ನು ಒಳಗೊಂಡಿತ್ತು. (ಮತ್ತಾ. 17:1-9) ಈಗ ನಾವು ಸುಸಮಯದ ಹೊಸ್ತಿಲಲ್ಲೇ ನಿಂತುಕೊಂಡಿದ್ದೇವೆ ಎಂಬುದನ್ನು ಈ ಭಾಷಣವು ಒತ್ತಿಹೇಳಿತು, ಏಕೆಂದರೆ ನಾವು ಅಂತ್ಯಕಾಲದ ಕೊನೆಯ ಭಾಗದಲ್ಲಿ ಜೀವಿಸುತ್ತಿದ್ದೇವೆ ಮತ್ತು ಹೊಸ ವ್ಯವಸ್ಥೆಯು ತುಂಬ ಸನ್ನಿಹಿತವಾಗಿದೆ! ನಾವು ದೇವರ ವಾಕ್ಯಕ್ಕೆ ಗಮನವನ್ನು ಕೊಡಬೇಕಾದ ಒಂದು ಮುಖ್ಯ ವಿಧವು ಅದನ್ನು ಕ್ರಮವಾಗಿ ಓದುವುದೇ ಆಗಿದೆ. “ದೇವರ ವಾಕ್ಯದ ವಾಚನದಲ್ಲಿ ಆನಂದಿಸಿರಿ” ಎಂಬ ಭಾಷಣಮಾಲೆಯು, ಬೈಬಲ್ ಓದುವಿಕೆಯನ್ನು ಹೆಚ್ಚು ಲಾಭದಾಯಕವೂ ಆನಂದದಾಯಕವೂ ಆಗಿ ಮಾಡಲು ಕೆಲವೊಂದು ಪ್ರಾಯೋಗಿಕ ಸಲಹೆಗಳನ್ನು ನೀಡಿತು.
3 ನಾವು ಕಡೇ ದಿವಸಗಳಲ್ಲಿ ಜೀವಿಸುತ್ತಿದ್ದೇವೆ ಎಂಬ ವಿಷಯದಲ್ಲಿ ಏಕೆ ದೃಢನಂಬಿಕೆಯುಳ್ಳವರಾಗಿ ಇರಬೇಕು ಎಂಬುದಕ್ಕಿರುವ ಕೆಲವು ಕಾರಣಗಳನ್ನು ನಾವು ಶನಿವಾರ ಮಧ್ಯಾಹ್ನ ಪುನರ್ವಿಮರ್ಶಿಸಿದೆವು. ಇವೆಲ್ಲವನ್ನೂ ನೀವು ಜ್ಞಾಪಿಸಿಕೊಳ್ಳಬಲ್ಲಿರೋ? ಭಾನುವಾರ ಬೆಳಗ್ಗೆ, ಹಬಕ್ಕೂಕನ ಪ್ರವಾದನೆಯ ಕುರಿತು ಒಂದು ಸ್ವಾರಸ್ಯಕರವಾದ ಭಾಷಣಮಾಲೆಯಿತ್ತು. ಅದರಲ್ಲಿ, ನಾವು ಜೀವಿಸುತ್ತಿರುವಂತಹ ಸಮಯವು ಹಬಕ್ಕೂಕನ ದಿನಗಳಿಗೆ ಹೋಲುತ್ತದೆ ಎಂಬುದನ್ನು ಮತ್ತು ಯೆಹೋವನು ದುಷ್ಟರನ್ನು ನಾಶಪಡಿಸಿ, ನೀತಿವಂತರನ್ನು ರಕ್ಷಿಸುವಾಗ ಬಹು ಮುಖ್ಯವಾದ ಘಟನೆಗಳು ಅತಿ ಬೇಗನೆ ಘಟಿಸುವವು ಎಂಬುದನ್ನು ನಾವು ತಿಳಿದುಕೊಂಡೆವು. ಯಾಕೋಬ ಮತ್ತು ಏಸಾವರ ಬೈಬಲ್ ಡ್ರಾಮದ ಮುಖ್ಯಾಂಶವನ್ನು ನೀವು ಗ್ರಹಿಸಿದಿರೋ? ಅದರ ಮುಖ್ಯಾಂಶವು, ನಾವು ನಿರ್ಲಕ್ಷ್ಯದ ಮತ್ತು ತಾತ್ಸಾರದ ಮನೋಭಾವವನ್ನು ಪ್ರತಿರೋಧಿಸುತ್ತಾ, ಯೆಹೋವನಿಂದ ಬರುವ ಆಶೀರ್ವಾದಗಳನ್ನು ಸಕ್ರಿಯರಾಗಿ ಬೆನ್ನಟ್ಟುತ್ತಾ ಇರಬೇಕು ಎಂಬುದೇ ಆಗಿತ್ತು.
4 ಕುತೂಹಲವನ್ನು ಕೆರಳಿಸುವಂತಹ ಒಂದು ಹೊಸ ಪುಸ್ತಕ: ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಹೊಸ ಪುಸ್ತಕವನ್ನು ಪಡೆದುಕೊಳ್ಳಲು ನಾವು ನಿಜವಾಗಿಯೂ ರೋಮಾಂಚನಗೊಂಡಿದ್ದೆವು. ಈ ಚಿತ್ತಾಕರ್ಷಕ ಪುಸ್ತಕವನ್ನು ನೀವು ಈಗಾಗಲೇ ಓದುತ್ತಿರಬಹುದು ಎಂಬುದರಲ್ಲಿ ಸಂಶಯವಿಲ್ಲ. ಇದನ್ನು ಬಿಡುಗಡೆಮಾಡಿದ ಭಾಷಣಕರ್ತನು ಹೇಳಿದ್ದು: “ಕೆಲವೊಂದು ವಿವರಗಳನ್ನು ಹೊರತುಪಡಿಸಿ ದಾನಿಯೇಲ ಪುಸ್ತಕದ ಎಲ್ಲ ಪ್ರವಾದನೆಗಳು ನೆರವೇರಿವೆ.” ಇದು, ನಾವು ಜೀವಿಸುತ್ತಿರುವಂತಹ ಸಮಯವು ತುಂಬ ತುರ್ತಿನದ್ದಾಗಿದೆ ಎಂಬುದನ್ನು ಎತ್ತಿತೋರಿಸುವುದಿಲ್ಲವೋ?
5 ಈ ಅಧಿವೇಶನದ ಕಾರ್ಯಕ್ರಮವು, ಇಷ್ಟರ ತನಕ ನೆರವೇರಿರದ ದೇವರ ವಾಗ್ದಾನಗಳೆಲ್ಲವೂ ಬೇಗನೆ ನೆರವೇರುವವು ಎಂಬ ನಮ್ಮ ದೃಢ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಿದೆ. ದೇವರ ಪ್ರವಾದನ ವಾಕ್ಯದ ಕುರಿತು ಇತರರಿಗೆ ತಿಳಿಸುತ್ತಾ ಇರುವಂತೆ ನಾವು ಪ್ರಚೋದಿಸಲ್ಪಟ್ಟಿದ್ದೇವೆ!