ದೃಢ ವಿಶ್ವಾಸದಿಂದ ಸುವಾರ್ತೆಯನ್ನು ಪ್ರಚುರಪಡಿಸುವುದು
1 ಪ್ರಥಮ ಶತಮಾನದ ಆರಂಭದಲ್ಲಿ, ರಾಜ್ಯದ ಸುವಾರ್ತೆಯನ್ನು ಸಾರುವಂತೆ ಮತ್ತು ‘ಎಲ್ಲ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವಂತೆ’ ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ ಆಜ್ಞೆಯನ್ನಿತ್ತನು. (ಮತ್ತಾ. 24:14; 28:19, 20) ಯೆಹೋವನ ಸಾಕ್ಷಿಗಳು ಈ ಆಜ್ಞೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದುದರಿಂದಲೇ, 20ನೇ ಶತಮಾನದ ಅಂತ್ಯದೊಳಗೆ ನಮ್ಮ ಕ್ರೈಸ್ತ ಸಹೋದರತ್ವವು 59,00,000ಕ್ಕಿಂತಲೂ ಹೆಚ್ಚು ಬೆಳೆದಿದೆ ಮತ್ತು ಈಗ ಈ ಶಿಷ್ಯರು 234 ದೇಶಗಳಲ್ಲಿ ಕೆಲಸಮಾಡುತ್ತಿದ್ದಾರೆ. ನಮ್ಮ ಸ್ವರ್ಗೀಯ ತಂದೆಗೆ ಸ್ತುತಿಯ ಅದೆಂತಹ ಮಹಾ ಕೂಗು ಇದಾಗಿದೆ!
2 ಈಗ ನಾವು 21ನೇ ಶತಮಾನಕ್ಕೆ ಕಾಲಿಟ್ಟಿದ್ದೇವೆ. ನಮ್ಮ ವಿರೋಧಿಯು ರಾಜ್ಯದ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ಮುಖ್ಯ ಕೆಲಸವನ್ನು ತಡೆಯಲು ಕುತಂತ್ರದಿಂದ ಪ್ರಯತ್ನಿಸುತ್ತಿದ್ದಾನೆ. ನಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸಲು, ನಮ್ಮ ಸಮಯವನ್ನು ವ್ಯರ್ಥವಾಗಿ ಕಳೆಯುವಂತೆ ಮಾಡಲು ಮತ್ತು ಹಲವಾರು ಅನಾವಶ್ಯಕ ಚಿಂತೆಗಳು ಹಾಗೂ ಅಭಿರುಚಿಗಳಲ್ಲಿ ನಮ್ಮ ಬಲವನ್ನು ಕುಂದಿಸುವಂತೆ ಮಾಡಲು, ಅವನು ಈ ವಿಷಯಗಳ ವ್ಯವಸ್ಥೆಯಿಂದ ಬರುವ ಒತ್ತಡಗಳನ್ನು ಉಪಯೋಗಿಸುತ್ತಿದ್ದಾನೆ. ನಮ್ಮ ಜೀವನದಲ್ಲಿ ಪ್ರಾಮುಖ್ಯವಾಗಿರುವ ವಿಷಯವನ್ನು ಈ ವ್ಯವಸ್ಥೆಯು ನಿರ್ದೇಶಿಸುವಂತೆ ಬಿಡುವ ಬದಲು, ಯೆಹೋವನ ಚಿತ್ತವನ್ನು ಮಾಡುವುದೇ ಅತಿ ಪ್ರಾಮುಖ್ಯವಾದ ಸಂಗತಿ ಎಂಬುದನ್ನು ನಾವು ದೇವರ ವಾಕ್ಯದಿಂದ ರುಜುಪಡಿಸುತ್ತೇವೆ. (ರೋಮಾ. 12:2) ಇದರರ್ಥ, ‘ದೇವರ ವಾಕ್ಯವನ್ನು ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಸಾರುವುದು ಮತ್ತು ನಮಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ನಡಿಸುವುದು’ ಎಂಬ ಶಾಸ್ತ್ರೀಯ ಪಬೋಧನೆಗೆ ವಿಧೇಯರಾಗಿರುವುದೇ ಆಗಿದೆ.—2 ತಿಮೊ. 4:2, 5.
3 ದೃಢ ವಿಶ್ವಾಸವನ್ನು ಬೆಳೆಸಿಕೊಳ್ಳಿರಿ: “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯ [“ದೃಢ ವಿಶ್ವಾಸ,” NW]ವುಳ್ಳವರಾಗಿಯೂ” ನಿಲ್ಲುವ ಆವಶ್ಯಕತೆ ಕ್ರೈಸ್ತರಿಗಿದೆ. (ಕೊಲೊ. 4:12) “ದೃಢ ವಿಶ್ವಾಸ” ಎಂಬ ಪದವು, “ದೃಢವಾದ ಮನವೊಪ್ಪಿಸುವಿಕೆ ಅಥವಾ ಧಾರ್ಮಿಕ ನಂಬಿಕೆ; ಮನಗಾಣಿಸಲ್ಪಟ್ಟ ಸ್ಥಿತಿ” ಎಂಬುದಾಗಿ ವ್ಯಾಖ್ಯಾನಿಸಲ್ಪಟ್ಟಿದೆ. ಕ್ರೈಸ್ತರಾಗಿ ನಾವು, ದೇವರ ಪ್ರವಾದನ ವಾಕ್ಯವು ನಿಶ್ಚಿತವಾಗಿದೆ ಮತ್ತು ಈಗ ನಾವು ಅಂತ್ಯಕ್ಕೆ ಬಹಳ ಹತ್ತಿರದಲ್ಲಿದ್ದೇವೆಂಬ ವಿಷಯದ ಕುರಿತಾಗಿಯೇ ಮನಗಾಣಿಸಲ್ಪಡಬೇಕು. ಸುವಾರ್ತೆಯು “ದೇವರ ಬಲಸ್ವರೂಪವಾಗಿದ್ದು . . . ನಂಬುವವರೆಲ್ಲರಿಗೂ ರಕ್ಷಣೆ ಉಂಟುಮಾಡುವಂಥದಾಗಿದೆ,” ಎಂದು ಹೇಳಿದ ಅಪೊಸ್ತಲ ಪೌಲನಂತಹ ಬಲವಾದ ವಿಶ್ವಾಸವು ನಮಗಿರಬೇಕು.—ರೋಮಾ. 1:16.
4 ಈಗಾಗಲೇ ತಪ್ಪುದಾರಿಯಲ್ಲಿರುವ ದುಷ್ಟರನ್ನು ಮತ್ತು ವಂಚಕರನ್ನು ಪಿಶಾಚನು ಉಪಯೋಗಿಸುತ್ತಾ, ಇತರರನ್ನು ಅನುಚಿತವಾಗಿ ಪ್ರಭಾವಿಸುತ್ತಿದ್ದಾನೆ ಮತ್ತು ತಪ್ಪುದಾರಿಯಲ್ಲಿ ನಡೆಸುತ್ತಿದ್ದಾನೆ. (2 ತಿಮೊ. 3:13) ಇದರ ಬಗ್ಗೆ ಮುಂಚಿತವಾಗಿ ಎಚ್ಚರಿಸಲ್ಪಟ್ಟವರಾಗಿ, ನಮ್ಮಲ್ಲಿ ಸತ್ಯವಿದೆ ಎಂಬ ನಮ್ಮ ದೃಢ ವಿಶ್ವಾಸವನ್ನು ಬಲಪಡಿಸಲು ನಾವು ಹೆಜ್ಜೆಗಳನ್ನು ತೆಗೆದುಕೊಳ್ಳುವೆವು. ಜೀವಿತದ ಚಿಂತೆಗಳು ನಮ್ಮ ಉತ್ಸಾಹವನ್ನು ಕುಂದಿಸುವಂತೆ ಬಿಡುವುದರ ಬದಲು, ನಾವು ರಾಜ್ಯದ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ಕೊಡಬೇಕು. (ಮತ್ತಾ. 6:33, 34) ಮತ್ತು ಈ ವ್ಯವಸ್ಥೆಯ ಅಂತ್ಯವು ಬಹಳ ದೂರವಿದೆಯೆಂದು ನೆನಸುತ್ತಾ, ಈ ಸಮಯಗಳ ತುರ್ತಿನ ಪ್ರಜ್ಞೆಯು ನಮ್ಮ ದೃಷ್ಟಿಯಿಂದ ಮರೆಯಾಗುವಂತೆ ಬಿಡಲು ನಾವು ಬಯಸುವುದಿಲ್ಲ. ಅದು ದಿನೇ ದಿನೇ ಸಮೀಪವಾಗುತ್ತಾ ಇದೆ. (1 ಪೇತ್ರ 4:7) ಈಗಾಗಲೇ ಸಾಕ್ಷಿನೀಡಲ್ಪಟ್ಟ ಕೆಲವು ಸ್ಥಳಗಳಲ್ಲಿ ಸುವಾರ್ತೆಯ ಸಾರುವಿಕೆಯು ಕೊಂಚವೇ ಪ್ರಭಾವವನ್ನು ಬೀರಿರುವಂತೆ ನಮಗನಿಸಿದರೂ, ಎಚ್ಚರಿಕೆಯ ಕೆಲಸವು ಮುಂದುವರಿಸಲ್ಪಡಬೇಕು.—ಯೆಹೆ. 33:7-9.
5 ಈ ಕೊನೆಯ ಗಳಿಗೆಯಲ್ಲಿ ನಮಗಾಗಿರುವ ಪ್ರಮುಖ ಪ್ರಶ್ನೆಗಳು ಹೀಗಿವೆ: ‘ಶಿಷ್ಯರನ್ನಾಗಿ ಮಾಡುವ ಯೇಸುವಿನ ಆಜ್ಞೆಯನ್ನು ನಾನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇನೋ? ಸುವಾರ್ತೆಯನ್ನು ಸಾರುವಾಗ, ರಾಜ್ಯವು ನೈಜವಾದದ್ದೆಂಬ ದೃಢ ವಿಶ್ವಾಸವನ್ನು ನಾನು ತೋರಿಸುತ್ತೇನೋ? ಈ ಜೀವರಕ್ಷಕ ಶುಶ್ರೂಷೆಯಲ್ಲಿ ನನ್ನಿಂದ ಸಾಧ್ಯವಾದಷ್ಟು ಹೆಚ್ಚಿನ ಪಾಲನ್ನು ತೆಗೆದುಕೊಳ್ಳಲು ನಾನು ನಿಶ್ಚಯಿಸಿಕೊಂಡಿದ್ದೇನೋ?’ ಅಂತ್ಯಕಾಲದ ಕೊನೆಯ ಭಾಗವನ್ನು ತಲಪಿದ್ದೇವೆಂಬುದನ್ನು ಸ್ಪಷ್ಟವಾಗಿ ಗ್ರಹಿಸಿದವರಾಗಿ, ನಾವು ನಮ್ಮ ಕಡೆಗೆ ಮತ್ತು ನಮ್ಮ ಸಾರುವ ಹಾಗೂ ಕಲಿಸುವ ಆಜ್ಞೆಯ ಕಡೆಗೆ ಗಮನವನ್ನು ಕೊಡುವವರಾಗಿರಬೇಕು. ಹೀಗೆ ಮಾಡುವುದರಿಂದ ನಾವು ನಮ್ಮನ್ನು ಮಾತ್ರವಲ್ಲ, ನಮ್ಮ ಸಂದೇಶಕ್ಕೆ ಕಿವಿಗೊಡುವವರನ್ನು ಸಹ ರಕ್ಷಿಸುತ್ತೇವೆ. (1 ತಿಮೊ. 4:16) ಶುಶ್ರೂಷಕರಾಗಿ ನಾವೆಲ್ಲರೂ ನಮ್ಮ ದೃಢ ವಿಶ್ವಾಸವನ್ನು ಹೇಗೆ ಬಲಪಡಿಸಿಕೊಳ್ಳಬಲ್ಲೆವು?
6 ಥೆಸಲೊನೀಕದವರನ್ನು ಅನುಕರಿಸಿರಿ: ಥೆಸಲೊನೀಕದಲ್ಲಿದ್ದ ಸಹೋದರರ ಪರಿಶ್ರಮವನ್ನು ಅವರ ನೆನಪಿಗೆ ತರುತ್ತಾ, ಅಪೋಸ್ತಲ ಪೌಲನು ಹೇಳಿದ್ದು: “ನಾವು ಸಾರಿದ ಸುವಾರ್ತೆಯು ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯ (ದೃಢ ವಿಶ್ವಾಸ)ದೊಡನೆಯೂ ಬಂತೆಂಬದನ್ನೂ ಬಲ್ಲೆವು. ನಾವು ನಿಮ್ಮಲ್ಲಿದ್ದು ನಿಮಗೋಸ್ಕರ ಎಂಥವರಾಗಿ ವರ್ತಿಸಿದೆವೆಂಬದನ್ನು ನೀವೂ ಬಲ್ಲಿರಿ. ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತನಾದ ಯೇಸುವನ್ನೂ ಅನುಸರಿಸುವವರಾದಿರಿ.” (1 ಥೆಸ. 1:5, 6) ಹೌದು, ಥೆಸಲೊನೀಕದ ಸಭೆಯವರಿಗೆ ಬಹಳಷ್ಟು ಸಂಕಟಗಳನ್ನು ಎದುರಿಸಲಿಕ್ಕಿತ್ತಾದ್ದರೂ, ಅವರು ಹುರುಪಿನಿಂದ ಮತ್ತು ದೃಢ ವಿಶ್ವಾಸದಿಂದ ಸಾರುತ್ತಿದ್ದದರಿಂದ ಪೌಲನು ಅವರನ್ನು ಪ್ರಶಂಸಿಸಿದನು. ಇದನ್ನು ಮಾಡುವುದಕ್ಕೆ ಅವರಿಗೆ ಯಾವುದು ಸಹಾಯಮಾಡಿತು? ಬಹುಮಟ್ಟಿಗೆ, ಅಪೊಸ್ತಲ ಪೌಲನಲ್ಲಿ ಮತ್ತು ಅವನ ಜೊತೆ ಕೆಲಸಗಾರರಲ್ಲಿ ಅವರು ನೋಡಿದ ಹುರುಪು ಮತ್ತು ದೃಢ ವಿಶ್ವಾಸವು ಅವರ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿತು. ಅದು ಹೇಗೆ?
7 ಪೌಲನ ಮತ್ತು ಅವನ ಪ್ರಯಾಣ ಸಂಗಡಿಗರ ಜೀವಿತಗಳೇ ಅವರ ಮೇಲೆ ದೇವರ ಆತ್ಮವು ಇತ್ತೆಂಬುದಕ್ಕೆ ಮತ್ತು ತಾವು ಸಾರಿದ್ದನ್ನು ಪೂರ್ಣಹೃದಯದಿಂದ ನಂಬಿದ್ದರೆಂಬುದಕ್ಕೆ ಸಾಕ್ಷಿ ನೀಡಿದವು. ಥೆಸಲೊನೀಕಕ್ಕೆ ಬರುವ ಮುಂಚೆ, ಪೌಲ ಮತ್ತು ಸೀಲರನ್ನು ಫಿಲಿಪ್ಪಿಯಲ್ಲಿ ಅವಮಾನಕರವಾಗಿ ಉಪಚರಿಸಲಾಗಿತ್ತು. ನ್ಯಾಯವಿಚಾರಣೆಮಾಡದೆ ಅವರು ಹೊಡೆಯಲ್ಪಟ್ಟರು, ಸೆರೆಮನೆಗೆ ಹಾಕಲ್ಪಟ್ಟರು ಮತ್ತು ಕೋಳಗಳಿಂದ ಬಂಧಿಸಲ್ಪಟ್ಟರು. ಹೀಗಿದ್ದರೂ, ಈ ಕಷ್ಟಕರ ಅನುಭವವು ಸುವಾರ್ತೆಗಾಗಿ ಅವರಲ್ಲಿದ್ದ ಹುರುಪನ್ನು ಕಡಿಮೆಗೊಳಿಸಲಿಲ್ಲ. ದೈವಿಕ ಹಸ್ತಕ್ಷೇಪವು ಅವರ ಬಿಡುಗಡೆಗೆ ಮಾತ್ರವಲ್ಲ, ಸೆರೆಮನೆಯ ಅಧಿಕಾರಿ ಹಾಗೂ ಅವನ ಮನೆಯವರ ಮತಾಂತರಕ್ಕೂ ನಡಿಸಿತು ಮತ್ತು ಈ ಸಹೋದರರು ತಮ್ಮ ಶುಶ್ರೂಷೆಯಲ್ಲಿ ಮುಂದೆ ಸಾಗುತ್ತಾ ಇರುವಂತೆ ದಾರಿಯನ್ನು ಮಾಡಿಕೊಟ್ಟಿತು.—ಅ. ಕೃ. 16:19-34.
8 ದೇವರ ಆತ್ಮದ ಬಲದಿಂದಾಗಿ, ಪೌಲನು ಥೆಸಲೊನೀಕಕ್ಕೆ ಬಂದನು. ಇಲ್ಲಿ ಅವನು ತನ್ನ ಸ್ವಂತ ಆವಶ್ಯಕತೆಗಳನ್ನು ಪೂರೈಸಲು ಪರಿಶ್ರಮಪಟ್ಟು ದುಡಿದನು ಮತ್ತು ಥೆಸಲೊನೀಕದವರಿಗೆ ಸತ್ಯವನ್ನು ಕಲಿಸುವುದರಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡನು. ಸುವಾರ್ತೆಯನ್ನು ಪ್ರತಿಯೊಂದು ಸಂದರ್ಭದಲ್ಲೂ ಪ್ರಚುರಪಡಿಸುವ ಅವಕಾಶವನ್ನು ಅವನು ಬಿಟ್ಟುಕೊಡಲಿಲ್ಲ. (1 ಥೆಸ. 2:9) ದೃಢ ವಿಶ್ವಾಸದಿಂದ ಪೌಲನು ಸಾರಿದ್ದು ಸ್ಥಳೀಯ ಜನರ ಮೇಲೆ ಎಂತಹ ಶಕ್ತಿಶಾಲಿ ಪ್ರಭಾವವನ್ನು ಬೀರಿತೆಂದರೆ, ಅವರು ತಮ್ಮ ಮುಂಚಿನ ವಿಗ್ರಹಾರಾಧನೆಯನ್ನು ತೊರೆದು, ಸತ್ಯ ದೇವರಾದ ಯೆಹೋವನ ಸೇವಕರಾದರು.—1 ಥೆಸ. 1:8-10.
9 ಹಿಂಸೆಯು ಹೊಸ ವಿಶ್ವಾಸಿಗಳನ್ನು ಸುವಾರ್ತೆ ಸಾರುವುದರಿಂದ ತಡೆಯಲಿಲ್ಲ. ಹೊಸದಾಗಿ ಕಂಡುಕೊಂಡಿದ್ದ ನಂಬಿಕೆಯಿಂದ ಪ್ರಚೋದಿಸಲ್ಪಟ್ಟು, ಶಾಶ್ವತ ಆಶೀರ್ವಾದಗಳು ತಮ್ಮದಾಗಲಿರುವವು ಎಂಬುದರ ಕುರಿತು ಸಂಪೂರ್ಣವಾಗಿ ಮನಗಾಣಿಸಲ್ಪಟ್ಟ ಕಾರಣ, ಥೆಸಲೊನೀಕದವರು ತಾವು ಉತ್ಸುಕತೆಯಿಂದ ಸ್ವೀಕರಿಸಿಕೊಂಡಿದ್ದ ಸತ್ಯವನ್ನು ಪ್ರಚುರಪಡಿಸಲು ಒತ್ತಾಯಿಸಲ್ಪಟ್ಟರು. ಆ ಸಭೆಯು ಎಷ್ಟು ಸಕ್ರಿಯವಾಗಿತ್ತೆಂದರೆ, ಅವರ ನಂಬಿಕೆ ಮತ್ತು ಹುರುಪಿನ ಸಮಾಚಾರವು ಮೆಕೆದೋನ್ಯದ ಇತರ ಭಾಗಗಳಿಗೆ ಮಾತ್ರವಲ್ಲ ಅಖಾಯದ ಪಟ್ಟಣದಲ್ಲಿಯೂ ಹಬ್ಬಿಕೊಂಡಿತು. ಆದುದರಿಂದ, ಪೌಲನು ಥೆಸಲೊನೀಕದವರಿಗೆ ತನ್ನ ಮೊದಲ ಪತ್ರವನ್ನು ಬರೆದಾಗ, ಅವರ ಒಳ್ಳೇ ಕೆಲಸಗಳು ಈಗಾಗಲೇ ಎಲ್ಲರಿಗೆ ತಿಳಿದುಬಂದಿದ್ದವು. (1 ಥೆಸ. 1:7) ಎಂತಹ ಒಂದು ಉತ್ತಮ ಮಾದರಿ!
10 ದೇವರ ಕಡೆಗೆ ಮತ್ತು ಜನರ ಕಡೆಗೆ ಪ್ರೀತಿಯಿಂದ ಪ್ರಚೋದಿಸಲ್ಪಡುವುದು: ನಾವು ಥೆಸಲೊನೀಕದವರಂತೆ, ಇಂದು ಸುವಾರ್ತೆಯನ್ನು ಸಾರುವಾಗ ದೃಢವಾದ ವೈಯಕ್ತಿಕ ವಿಶ್ವಾಸವನ್ನು ಹೇಗೆ ಕಾಪಾಡಿಕೊಳ್ಳಬಹುದು? ಅವರ ಕುರಿತು ಪೌಲನು ಬರೆದದ್ದು: “ನಂಬಿಕೆಯಿಂದ ಮಾಡುವ ನಿಮ್ಮ ಕೆಲಸವನ್ನೂ ಪ್ರೀತಿಯ ಕಾರಣ ನೀವು ಪಡುವ ಕಠಿಣ ಪರಿಶ್ರಮವನ್ನೂ ನಾವು ಎಡೆಬಿಡದೆ ಜ್ಞಾಪಕಮಾಡಿಕೊಳ್ಳುತ್ತೇವೆ.” (1 ಥೆಸ. 1:3, NW, ಪಾದಟಿಪ್ಪಣಿ) ಅವರಲ್ಲಿ ಯೆಹೋವ ದೇವರ ಕಡೆಗೆ ಮತ್ತು ತಾವು ಸಾರುತ್ತಿದ್ದ ಜನರ ಕಡೆಗೆ ಆಳವಾದ, ಹೃತ್ಪೂರ್ವಕ ಪ್ರೀತಿ ಇತ್ತೆಂಬುದು ತೀರ ಸ್ಪಷ್ಟ. ಪೌಲ ಮತ್ತು ಅವನ ಸಂಗಡಿಗರು ಥೆಸಲೊನೀಕದವರಿಗೆ “ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ [ತಮ್ಮ] ಪ್ರಾಣವನ್ನೇ ಕೊಡುವದಕ್ಕೆ” ಇದೇ ಪ್ರೀತಿಯಿಂದ ಪ್ರಚೋದಿಸಲ್ಪಟ್ಟರು.—1 ಥೆಸ. 2:8.
11 ತದ್ರೀತಿಯಲ್ಲಿ, ಯೆಹೋವನ ಕಡೆಗೆ ಮತ್ತು ತಮ್ಮ ಜೊತೆ ಮಾನವರ ಕಡೆಗೆ ನಮಗಿರುವ ಆಳವಾದ ಪ್ರೀತಿಯು, ದೇವರು ನಮಗೆ ಕೊಟ್ಟಿರುವಂತಹ ಸಾರುವಿಕೆಯ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ನಮ್ಮನ್ನು ಪ್ರೇರಿಸುತ್ತದೆ. ಇಂತಹ ಪ್ರೀತಿಯೊಂದಿಗೆ, ಸುವಾರ್ತೆಯನ್ನು ಹಬ್ಬಿಸುವುದು ನಮ್ಮ ವೈಯಕ್ತಿಕ ಹಾಗೂ ದೇವದತ್ತ ಜವಾಬ್ದಾರಿಯೂ ಆಗಿದೆಯೆಂಬುದನ್ನು ನಾವು ಮನಗಾಣುತ್ತೇವೆ. ನಮ್ಮನ್ನು ‘ವಾಸ್ತವವಾದ ಜೀವಕ್ಕೆ’ ನಡೆಸುವುದರಲ್ಲಿ ಯೆಹೋವನು ಮಾಡಿರುವ ಎಲ್ಲ ವಿಷಯಗಳ ಕುರಿತು ಸಕಾರಾತ್ಮಕವಾಗಿ ಮತ್ತು ಗಣ್ಯತಾಪೂರ್ವಕವಾಗಿ ಮನನಮಾಡುವುದು, ನಾವು ನಮ್ಮ ಪೂರ್ಣ ಹೃದಯದಿಂದ ನಂಬುವ ಅದೇ ಅದ್ಭುತಕರ ಸತ್ಯಗಳನ್ನು ಇತರರಿಗೆ ಹೇಳುವಂತೆ ಪ್ರಚೋದಿಸುತ್ತದೆ.—1 ತಿಮೊ. 6:19.
12 ಸಾರುವ ಕೆಲಸದಲ್ಲಿ ನಾವು ನಮ್ಮನ್ನು ಕಾರ್ಯಮಗ್ನರನ್ನಾಗಿ ಇರಿಸಿಕೊಂಡಂತೆಯೇ, ಯೆಹೋವನ ಮತ್ತು ಜನರ ಕಡೆಗೆ ನಮಗಿರುವ ಪ್ರೀತಿಯಲ್ಲಿ ಬೆಳೆಯುತ್ತಾ ಇರಬೇಕು. ಪ್ರೀತಿಯು ಬೆಳೆಯುತ್ತಾ ಹೋದಲ್ಲಿ, ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ನಮ್ಮ ಪಾಲನ್ನು ಹೆಚ್ಚಿಸಲು ಮತ್ತು ನಮಗೆ ತೆರೆದಿರುವ ಸಾಕ್ಷಿಕಾರ್ಯದ ಇತರ ಎಲ್ಲ ವಿಧಗಳನ್ನು ಬೆನ್ನಟ್ಟಲು ನಾವು ಉತ್ತೇಜಿಸಲ್ಪಡುವೆವು. ಹೀಗೆ ಸಂಬಂಧಿಕರಿಗೆ, ನೆರೆಮನೆಯವರಿಗೆ ಮತ್ತು ಪರಿಚಯಸ್ಥರಿಗೆ ಅನೌಪಚಾರಿಕವಾಗಿ ಸಾಕ್ಷಿನೀಡುವ ಅವಕಾಶಗಳ ಸದುಪಯೋಗವನ್ನು ನಾವು ಮಾಡಿಕೊಳ್ಳುವೆವು. ನಾವು ನೀಡುವ ಸುವಾರ್ತೆಯನ್ನು ಅನೇಕ ಜನರು ನಿರಾಕರಿಸಬಹುದಾದರೂ ಮತ್ತು ರಾಜ್ಯದ ಪ್ರಚುರಪಡಿಸುವಿಕೆಯನ್ನು ಕೆಲವರು ತಡೆಯಲು ಪ್ರಯತ್ನಿಸಬಹುದಾದರೂ ನಾವು ಆಂತರಿಕ ಸಂತೋಷವನ್ನು ಅನುಭವಿಸುತ್ತೇವೆ. ಏಕೆ? ಏಕೆಂದರೆ ರಾಜ್ಯದ ಕುರಿತು ಸಾಕ್ಷಿಯನ್ನು ಕೊಡಲು ಮತ್ತು ಜನರು ರಕ್ಷಣೆಯನ್ನು ಪಡೆದುಕೊಳ್ಳುವಂತೆ ಸಹಾಯಮಾಡಲು, ನಮ್ಮಿಂದ ಸಾಧ್ಯವಾದುದೆಲ್ಲವನ್ನೂ ನಾವು ಮಾಡಿದ್ದೇವೆಂಬುದು ನಮಗೆ ಗೊತ್ತಿದೆ. ಮತ್ತು ಸಹೃದಯಿಗಳನ್ನು ಕಂಡುಕೊಳ್ಳುವಂತೆ ಯೆಹೋವನು ನಮ್ಮ ಪ್ರಯತ್ನಗಳನ್ನು ಆಶೀರ್ವದಿಸುವನು. ಜೀವಿತದ ಒತ್ತಡಗಳು ಬೆನ್ನುಹತ್ತಿ ನಮ್ಮನ್ನು ಸುತ್ತುವರಿದಾಗಲೂ ಮತ್ತು ನಮ್ಮ ಸಂತೋಷವನ್ನು ಕಸಿದುಕೊಳ್ಳಲು ಸೈತಾನನು ಪ್ರಯತ್ನಿಸುವಾಗಲೂ ನಾವು ನಮ್ಮ ದೃಢ ವಿಶ್ವಾಸವನ್ನು ಹಾಗೂ ಇತರರಿಗೆ ಸಾಕ್ಷಿನೀಡುವ ಕೆಲಸದಲ್ಲಿರುವ ನಮ್ಮ ಹುರುಪನ್ನು ಕಾಪಾಡಿಕೊಳ್ಳಲು ಶಕ್ತರಾಗಿರುವೆವು. ನಮ್ಮಲ್ಲಿ ಪ್ರತಿಯೊಬ್ಬರು ತಮ್ಮತಮ್ಮ ಪಾಲನ್ನು ಮಾಡುವಾಗ, ಅದು ಥೆಸಲೊನೀಕದಲ್ಲಿದ್ದ ಸಭೆಯಂತೆ, ಬಲವಾದ, ಹುರುಪುಳ್ಳ ಸಭೆಗಳನ್ನು ಉಂಟುಮಾಡುವುದು.
13 ಪರೀಕ್ಷೆಯ ಕೆಳಗೆ ಎಂದೂ ಬಿಟ್ಟುಕೊಡದಿರಿ: ನಾವು ಬೇರೆ ಬೇರೆ ತರಹದ ಕಷ್ಟಗಳನ್ನು ನಿಭಾಯಿಸುತ್ತಿರುವಾಗಲೂ ನಮಗೆ ದೃಢ ವಿಶ್ವಾಸದ ಅಗತ್ಯವಿದೆ. (1 ಪೇತ್ರ 1:6, 7) ಶಿಷ್ಯರು ತನ್ನನ್ನು ಹಿಂಬಾಲಿಸುವುದಾದರೆ, ಅವರನ್ನು “ಎಲ್ಲಾ ಜನಾಂಗಗಳವರು ಹಗೆಮಾಡುವರು,” ಎಂಬುದನ್ನು ಯೇಸು ಸ್ಪಷ್ಟಪಡಿಸಿದನು. (ಮತ್ತಾ. 24:9) ಪೌಲ ಮತ್ತು ಸೀಲರು ಇದನ್ನು ಫಿಲಿಪ್ಪಿಯಲ್ಲಿ ಅನುಭವಿಸಿದರು. ಅವರು ಸೆರೆಮನೆಯ ಒಳಕೋಣೆಯಲ್ಲಿ ಹಾಕಲ್ಪಟ್ಟರು ಮತ್ತು ಅವರ ಕಾಲುಗಳಿಗೆ ಕೋಳವನ್ನು ತೊಡಿಸಲಾಯಿತು ಎಂದು ಅಪೊಸ್ತಲರ ಕೃತ್ಯಗಳ ಪುಸ್ತಕದ 16ನೇ ಅಧ್ಯಾಯದಲ್ಲಿರುವ ದಾಖಲೆಯು ಹೇಳುತ್ತದೆ. ಸಾಮಾನ್ಯವಾಗಿ, ಮುಖ್ಯ ಕಟ್ಟಡವು ಒಂದು ಅಂಗಳ ಅಥವಾ ಮೊಗಸಾಲೆಯಂತಿತ್ತು ಮತ್ತು ಅದರ ಆವರಣದ ಸುತ್ತಲೂ ಚಿಕ್ಕ ಕೋಣೆಗಳಿದ್ದು, ಅವುಗಳ ಮೂಲಕ ಸೂರ್ಯನ ಬೆಳಕು ಮತ್ತು ಗಾಳಿಯನ್ನು ಪಡೆಯುವ ಅವಕಾಶವಿತ್ತು. ಆದರೆ, ಸೆರೆಮನೆಯ ಒಳಕೋಣೆಗಳಿಗೆ ಬೆಳಕಿನ ಯಾವುದೇ ವ್ಯವಸ್ಥೆಯಿರಲಿಲ್ಲ ಮತ್ತು ಮಿತವಾದ ಗಾಳಿಸಂಚಾರದ ವ್ಯವಸ್ಥೆಯಿತ್ತು. ಪೌಲ ಮತ್ತು ಸೀಲರಿಗೆ ಕತ್ತಲೆಯನ್ನು, ಶಾಖವನ್ನು ಮತ್ತು ಸೆರೆಮನೆಯ ದುರ್ನಾತವನ್ನು ಕೂಡ ಸಹಿಸಬೇಕಾಗುತ್ತಿತ್ತು. ಚರ್ಮ ಸುಲಿದು ರಕ್ತಸ್ರಾವವಾಗುವಷ್ಟು ಮಟ್ಟಿಗೆ ಹೊಡೆಯಲ್ಪಟ್ಟು, ಗಂಟೆಗಟ್ಟಲೆ ಕೋಳದಲ್ಲಿ ಬಂಧಿತರಾಗಿದ್ದಾಗ, ಅವರು ಅನುಭವಿಸಿದ್ದಿರಬೇಕಾದ ನೋವನ್ನು ನೀವು ಸ್ವಲ್ಪ ಊಹಿಸಿಕೊಳ್ಳಬಲ್ಲಿರೋ?
14 ಇಂತಹ ಪರೀಕ್ಷೆಗಳ ಮಧ್ಯೆಯೂ, ಪೌಲ ಮತ್ತು ಸೀಲರು ನಂಬಿಗಸ್ತರಾಗಿ ಉಳಿದರು. ಪರೀಕ್ಷೆಯ ಎದುರಿನಲ್ಲೂ ಅವರು ಹೃತ್ಪೂರ್ವಕವಾದ ದೃಢ ವಿಶ್ವಾಸವನ್ನು ತೋರಿಸುತ್ತಾ, ಯೆಹೋವನನ್ನು ಸೇವಿಸಲು ತಮ್ಮನ್ನು ಬಲಪಡಿಸಿಕೊಂಡರು. ಅವರ ವಿಶ್ವಾಸವು 16ನೇ ಅಧ್ಯಾಯದ 25ನೇ ವಚನದಲ್ಲಿ ಎತ್ತಿತೋರಿಸಲಾಗಿದೆ. ಪೌಲ ಮತ್ತು ಸೀಲರು “ಪ್ರಾರ್ಥನೆಮಾಡುವವರಾಗಿ ದೇವರಿಗೆ ಸ್ತುತಿಪದಗಳನ್ನೂ ಹಾಡುತ್ತಿದ್ದರು” ಎಂದು ಅಲ್ಲಿ ಹೇಳಲಾಗುತ್ತದೆ. ನಿಜಾಂಶವೇನೆಂದರೆ, ಅವರು ಸೆರೆಮನೆಯ ಒಳಕೋಣೆಯಲ್ಲಿ ಇರಿಸಲ್ಪಟ್ಟಿದ್ದರೂ, ದೇವರ ಮೆಚ್ಚಿಗೆಯನ್ನು ಪಡೆಯುವುದರ ಬಗ್ಗೆ ಅವರಿಗೆಷ್ಟು ಖಾತ್ರಿಯಿತ್ತೆಂದರೆ, ಇತರ ಕೈದಿಗಳಿಗೂ ಕೇಳಿಸುವಷ್ಟು ಗಟ್ಟಿಯಾದ ಸ್ವರದಲ್ಲಿ ಅವರು ಸ್ತುತಿಪದಗಳನ್ನು ಹಾಡಿದರು! ಇಂದು ನಮ್ಮ ನಂಬಿಕೆಯ ಪರೀಕ್ಷೆಗಳನ್ನು ಎದುರಿಸುವಾಗಲೂ ನಾವು ಇದೇ ರೀತಿಯ ದೃಢ ವಿಶ್ವಾಸವುಳ್ಳವರಾಗಿರಬೇಕು.
15 ಪಿಶಾಚನು ನಮ್ಮ ಮೇಲೆ ಹೇರುವ ಪರೀಕ್ಷೆಗಳು ಅಸಂಖ್ಯಾತವಾಗಿವೆ. ಕೆಲವರಿಗೆ ಅದು ಕುಟುಂಬದಿಂದ ಬರುವ ಹಿಂಸೆಯಾಗಿರಬಹುದು. ನಮ್ಮ ಸಹೋದರರಲ್ಲಿ ಅನೇಕರು ಕಾನೂನುಬದ್ಧ ಪಂಥಾಹ್ವಾನಗಳನ್ನು ಎದುರಿಸುತ್ತಾರೆ. ಧರ್ಮಭ್ರಷ್ಟರ ವಿರೋಧವನ್ನು ಸಹ ನಾವು ಎದುರಿಸಬಹುದು. ಆರ್ಥಿಕ ಹೊರೆಗಳು ಮತ್ತು ಜೀವನವನ್ನು ಸಾಗಿಸುವುದರ ಕುರಿತ ವ್ಯಾಕುಲವು ಸಹ ಇರುತ್ತದೆ. ಯುವ ಜನರು ಶಾಲೆಯಲ್ಲಿ ಸಮಾನಸ್ಥರ ಒತ್ತಡವನ್ನು ಎದುರಿಸುತ್ತಾರೆ. ಈ ಪರೀಕ್ಷೆಗಳನ್ನು ನಾವು ಯಶಸ್ವಿಕರವಾಗಿ ಹೇಗೆ ಎದುರಿಸಬಲ್ಲೆವು? ದೃಢ ವಿಶ್ವಾಸವನ್ನು ತೋರಿಸಲು ಏನು ಅವಶ್ಯವಾಗಿದೆ?
16 ಪ್ರಪ್ರಥಮವಾಗಿ, ಯೆಹೋವನೊಂದಿಗೆ ಆಪ್ತವಾದ ವೈಯಕ್ತಿಕ ಸಂಬಂಧವನ್ನು ಕಾಪಾಡಿಕೊಳ್ಳುವ ಆವಶ್ಯಕತೆಯೇ ಆಗಿದೆ. ಪೌಲ ಮತ್ತು ಸೀಲರು ಸೆರೆಮನೆಯ ಒಳಕೋಣೆಯಲ್ಲಿದ್ದಾಗ, ತಮಗೆ ಒದಗಿಬಂದಿದ್ದ ಸ್ಥಿತಿಯ ಕುರಿತು ಗೊಣಗಲು ಅಥವಾ ತಮ್ಮ ಕುರಿತು ತಾವೇ ಮರುಕಪಟ್ಟುಕೊಳ್ಳಲು ಆ ಸಮಯವನ್ನು ಉಪಯೋಗಿಸಲಿಲ್ಲ. ಅವರು ತಕ್ಷಣವೇ ಪ್ರಾರ್ಥನೆಯಲ್ಲಿ ದೇವರ ಬಳಿ ತಿರುಗಿ, ಆತನನ್ನು ಹಾಡುಗಳೊಂದಿಗೆ ಸ್ತುತಿಸಿದರು. ಯಾಕೆ? ಯಾಕೆಂದರೆ, ಅವರಿಗೆ ತಮ್ಮ ಸ್ವರ್ಗೀಯ ತಂದೆಯೊಂದಿಗೆ ಆಪ್ತವಾದ ವೈಯಕ್ತಿಕ ಸಂಬಂಧವಿತ್ತು. ಅವರು ನೀತಿಯ ನಿಮಿತ್ತ ಕಷ್ಟವನ್ನು ಅನುಭವಿಸುತ್ತಿದ್ದರೆಂದು ಮತ್ತು ತಮ್ಮ ರಕ್ಷಣೆಯು ಯೆಹೋವನ ಹಸ್ತಗಳಲ್ಲಿದೆ ಎಂಬುದನ್ನು ಅವರು ಮನಗಂಡಿದ್ದರು.—ಕೀರ್ತ. 3:8.
17 ನಾವು ಇಂದು ಪರೀಕ್ಷೆಗಳನ್ನು ಎದುರಿಸುವಾಗ, ನಾವು ಕೂಡ ಯೆಹೋವನ ಕಡೆಗೆ ನೋಡಬೇಕು. “ದೇವರ ಮುಂದೆ . . . ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ . . . ಕಾಯುವದು” ಎಂದು ಪೌಲನು ಕ್ರೈಸ್ತರಾದ ನಮ್ಮನ್ನು ಉತ್ತೇಜಿಸುತ್ತಾನೆ. (ಫಿಲಿ. 4:6, 7) ನಾವು ಪರೀಕ್ಷೆಗಳನ್ನು ಒಬ್ಬೊಂಟಿಗರಾಗಿಯೇ ನಿಭಾಯಿಸುವಂತೆ ಯೆಹೋವನು ಎಂದೂ ಬಿಡಲಾರನೆಂದು ತಿಳಿದುಕೊಂಡಿರುವುದು ಎಷ್ಟು ಸಾಂತ್ವನದಾಯಕವಾಗಿದೆ! (ಯೆಶಾ. 41:10) ನಾವು ಎಷ್ಟರವರೆಗೆ ಆತನನ್ನು ದೃಢವಾದ ವಿಶ್ವಾಸದಿಂದ ಸೇವೆ ಸಲ್ಲಿಸುತ್ತೇವೋ ಅಷ್ಟರವರೆಗೆ ಆತನು ನಮ್ಮೊಂದಿಗೆ ಯಾವಾಗಲೂ ಇರುತ್ತಾನೆ.—ಕೀರ್ತ. 46:7.
18 ದೃಢ ವಿಶ್ವಾಸವನ್ನು ತೋರಿಸುವುದಕ್ಕಿರುವ ಇನ್ನೊಂದು ಮಹತ್ತರವಾದ ಸಹಾಯಕವು, ಯೆಹೋವನ ಸೇವೆಯಲ್ಲಿ ನಮ್ಮನ್ನು ಕಾರ್ಯಮಗ್ನರಾಗಿ ಇರಿಸಿಕೊಳ್ಳುವುದೇ ಆಗಿದೆ. (1 ಕೊರಿಂ. 15:58) ಪೌಲ ಮತ್ತು ಸೀಲರು ಸುವಾರ್ತೆಯನ್ನು ಸಾರುವುದರಲ್ಲಿ ಕಾರ್ಯಮಗ್ನರಾಗಿದ್ದ ಕಾರಣಕ್ಕಾಗಿಯೇ ಸೆರೆಮನೆಗೆ ತಳ್ಳಲ್ಪಟ್ಟರು. ಸಂಕಷ್ಟಗಳ ಕಾರಣ ಅವರು ಸುವಾರ್ತೆ ಸಾರುವುದನ್ನು ನಿಲ್ಲಿಸಿದರೋ? ಇಲ್ಲ. ಅವರು ಸೆರೆಮನೆಯಲ್ಲಿರುವಾಗಲೂ ಸುವಾರ್ತೆ ಸಾರುವುದನ್ನು ಮುಂದುವರಿಸಿದರು ಮತ್ತು ಸೆರೆಮನೆಯಿಂದ ಬಿಡುಗಡೆಗೊಳಿಸಲ್ಪಟ್ಟ ಮೇಲೆ, ಅವರು ಥೆಸಲೊನೀಕಕ್ಕೆ ಪ್ರಯಾಣಿಸಿದರು ಮತ್ತು ಯೆಹೂದ್ಯರ ಸಭಾಮಂದಿರಕ್ಕೆ ಹೋಗಿ “ಶಾಸ್ತ್ರಾಧಾರದಿಂದ ಅವರ ಸಂಗಡ ವಾದಿಸಿ”ದರು. (ಅ. ಕೃ. 17:1-3) ಯೆಹೋವನಲ್ಲಿ ದೃಢ ವಿಶ್ವಾಸ ಅಥವಾ ನಂಬಿಕೆಯು ಇರುವಾಗ ಮತ್ತು ನಮ್ಮಲ್ಲಿ ಸತ್ಯವಿದೆ ಎಂದು ನಾವು ಮನಗಾಣಿಸಲ್ಪಟ್ಟಾಗ, ಯಾವುದೂ ‘ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರದು.’—ರೋಮಾ. 8:35-39.
19 ದೃಢ ವಿಶ್ವಾಸದ ಆಧುನಿಕ ಉದಾಹರಣೆಗಳು: ನಮ್ಮ ದಿನದಲ್ಲಿಯೂ ಪೌಲ ಮತ್ತು ಸೀಲರಂತೆ, ದೃಢ ವಿಶ್ವಾಸವನ್ನು ತೋರಿಸಿರುವ ಗಮನಾರ್ಹ ಉದಾಹರಣೆಗಳು ಇವೆ. ಔಷ್ವಿಟ್ಸ್ ಕೂಟ ಶಿಬಿರದಿಂದ ಪಾರಾದ ಒಬ್ಬ ಸಹೋದರಿಯು, ಅಲ್ಲಿನ ಸಹೋದರ ಮತ್ತು ಸಹೋದರಿಯರಿಂದ ತೋರಿಸಲ್ಪಟ್ಟ ಅಚಲವಾದ ನಂಬಿಕೆ ಮತ್ತು ವಿಶ್ವಾಸದ ಕುರಿತು ತಿಳಿಸುವುದು: “ಒಮ್ಮೆ ವಿಚಾರಣೆಯ ಸಮಯದಲ್ಲಿ, ಒಬ್ಬ ಅಧಿಕಾರಿಯು ಬಿಗಿ ಮುಷ್ಠಿಯೊಂದಿಗೆ ನನ್ನ ಬಳಿ ಬಂದನು. ‘ನಿಮ್ಮನ್ನು ಇಲ್ಲಿ ಇಟ್ಟುಕೊಂಡು ನಾವೇನು ಮಾಡಬೇಕು?’ ಎಂದು ಅವನು ಉದ್ಗರಿಸಿದನು. ‘ನಾವು ನಿಮ್ಮನ್ನು ಬಂಧಿಸಿದರೆ ನೀವು ಅದನ್ನು ಲಕ್ಷಿಸುವುದಿಲ್ಲ, ನಿಮ್ಮನ್ನು ಸೆರೆಮನೆಗೆ ಹಾಕಿದರೆ, ನೀವು ಅದರ ಕುರಿತು ಒಂದಿಷ್ಟೂ ಚಿಂತಿಸುವುದಿಲ್ಲ. ನಾವು ನಿಮ್ಮನ್ನು ಕೂಟ ಶಿಬಿರಕ್ಕೆ ಕಳುಹಿಸಿದರೆ, ಅದರ ಬಗ್ಗೆ ನೀವು ಚಿಂತಿಸುವುದೇ ಇಲ್ಲ. ನಾವು ನಿಮಗೆ ಮರಣ ಶಿಕ್ಷೆಯನ್ನು ವಿಧಿಸಿದರೆ, ಆಗಲೂ ನೀವು ನಿಶ್ಚಿಂತರಾಗಿಯೇ ಉಳಿಯುತ್ತೀರಿ. ನಿಮ್ಮನ್ನು ಇಲ್ಲಿ ಇಟ್ಟುಕೊಂಡು ನಾವೇನು ಮಾಡಬೇಕು?’” ಇಂತಹ ಯಾತನಾಮಯ ಪರಿಸ್ಥಿತಿಗಳ ಮಧ್ಯೆಯೂ ನಮ್ಮ ಸಹೋದರರು ತೋರಿಸಿದ ನಂಬಿಕೆಯು, ನಮ್ಮ ನಂಬಿಕೆಯನ್ನು ಅದೆಷ್ಟು ಬಲಗೊಳಿಸುತ್ತದೆ! ಸಹಿಸಿಕೊಳ್ಳಲು ಸಹಾಯಮಾಡುವಂತೆ ಅವರು ಯಾವಾಗಲೂ ಯೆಹೋವನ ಮೇಲೆಯೇ ಅವಲಂಬಿತರಾಗಿದ್ದರು.
20 ಇತ್ತೀಚಿಗಿನ ವರ್ಷಗಳಲ್ಲಿ ಕುಲಸಂಬಂಧಿತ ಹಿಂಸೆಯ ಎದುರಿನಲ್ಲೂ ನಮ್ಮ ಅನೇಕ ಸಹೋದರರು ತೋರಿಸಿರುವ ದೃಢ ವಿಶ್ವಾಸವನ್ನು ನಾವು ನಿಶ್ಚಯವಾಗಿಯೂ ನೆನಪಿಸಿಕೊಳ್ಳುತ್ತೇವೆ. ಜವಾಬ್ದಾರಿಯುಳ್ಳ ಸಹೋದರರು ಅಪಾಯಕರ ಪರಿಸ್ಥಿತಿಗಳಲ್ಲಿ ತಮ್ಮನ್ನು ಕಂಡುಕೊಂಡರೂ, ತಮ್ಮ ಸಹೋದರ ಸಹೋದರಿಯರು ಆತ್ಮಿಕವಾಗಿ ಉಣಿಸಲ್ಪಡುತ್ತಿದ್ದಾರೆ ಎಂಬುದರ ಕುರಿತು ಕಾಳಜಿವಹಿಸುತ್ತಾರೆ. ಅವರೆಲ್ಲರು ನಂಬಿಗಸ್ತರಾಗಿ ಮುಂದುವರಿಯುತ್ತಿದ್ದಾರೆ ಮತ್ತು ಅವರನ್ನು “ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂಬ ದೃಢ ವಿಶ್ವಾಸವು ಅವರಿಗಿದೆ.—ಯೆಶಾ. 54:17.
21 ಅವಿಶ್ವಾಸಿ ಸಂಗಾತಿಗಳಿರುವ ನಮ್ಮ ಅನೇಕ ಸಹೋದರ ಸಹೋದರಿಯರು ಸಹ ಬಲವಾದ ನಂಬಿಕೆ ಮತ್ತು ತಾಳ್ಮೆಯನ್ನು ತೋರಿಸುತ್ತಿದ್ದಾರೆ. ಗ್ವಾಡೆಲೊಪ್ನಲ್ಲಿರುವ ಒಬ್ಬ ಸಹೋದರನು ತನ್ನ ಅವಿಶ್ವಾಸಿ ಹೆಂಡತಿಯಿಂದ ತೀವ್ರವಾದ ವಿರೋಧವನ್ನು ಅನುಭವಿಸಿದನು. ಅವನನ್ನು ನಿರುತ್ತೇಜಿಸಲು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವುದನ್ನು ತಡೆಯಲು, ಅವಳು ಅಡುಗೆಯನ್ನು ಮಾಡುತ್ತಿರಲಿಲ್ಲ, ಅವನ ಬಟ್ಟೆಗಳನ್ನು ಒಗೆಯುತ್ತಿರಲಿಲ್ಲ, ಇಸ್ತ್ರಿ ಮಾಡುತ್ತಿರಲಿಲ್ಲ ಮತ್ತು ಹೊಲಿದು ಸರಿಯಾಗಿ ಇಡುತ್ತಿರಲಿಲ್ಲ. ಬಹಳ ಸಮಯದ ವರೆಗೆ, ಅವಳು ಮಾತನ್ನೇ ಬಿಟ್ಟುಬಿಟ್ಟಿದ್ದಳು. ಆದರೆ ಯೆಹೋವನನ್ನು ಸೇವಿಸುವುದರಲ್ಲಿ ಹೃದಯದಾಳದ ವಿಶ್ವಾಸವನ್ನು ತೋರಿಸುವ ಮೂಲಕ ಮತ್ತು ಸಹಾಯಕ್ಕಾಗಿ ಪ್ರಾರ್ಥನೆಯಲ್ಲಿ ಆತನೆಡೆಗೆ ತಿರುಗುವ ಮೂಲಕ ಆ ಸಹೋದರನು ಅದನ್ನೆಲ್ಲವನ್ನು ಸಹಿಸಿಕೊಂಡನು. ಎಷ್ಟು ಸಮಯದ ವರೆಗೆ ಅವನು ಇದನ್ನು ಸಹಿಸಿಕೊಂಡನು? ಸುಮಾರು 20 ವರ್ಷಗಳ ವರೆಗೆ. ಇದಾದ ನಂತರ ಅವನ ಹೆಂಡತಿಯು ಕ್ರಮೇಣವಾಗಿ ಹೃದಯಸ್ಥಿತಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡಳು. ಕಾಲಕ್ರಮೇಣ ಅವನು ನಿಜವಾಗಿ ಸಂತೋಷಿಸಿದನು, ಯಾಕೆಂದರೆ ಅವಳು ದೇವರ ರಾಜ್ಯದ ನಿರೀಕ್ಷೆಯನ್ನು ಸ್ವೀಕರಿಸಿದಳು.
22 ಕೊನೆಯದಾಗಿ, ಪ್ರತಿ ದಿನ ಶಾಲೆಗೆ ಹಾಜರಾಗುವ ಮತ್ತು ಅಲ್ಲಿ ಸಮಾನಸ್ಥರ ಒತ್ತಡ ಮತ್ತು ಇತರ ಪಂಥಾಹ್ವಾನಗಳನ್ನು ಎದುರಿಸುತ್ತಿರುವ ನಮ್ಮ ಯುವ ಸಹೋದರ ಸಹೋದರಿಯರ ದೃಢವಾದ ವಿಶ್ವಾಸವನ್ನು ನಾವು ಮರೆಯಬಾರದು. ಶಾಲೆಯಲ್ಲಿ ಎದುರಿಸಲಿಕ್ಕಿರುವ ಒತ್ತಡದ ಕುರಿತು ಒಬ್ಬ ಯುವ ಸಾಕ್ಷಿ ಹುಡುಗಿಯು ಹೇಳಿದ್ದು, “ಶಾಲೆಯಲ್ಲಿ ಒಂದಿಷ್ಟು ದಂಗೆಕೋರ ಆತ್ಮವನ್ನು ಪ್ರದರ್ಶಿಸುವಂತೆ ಎಲ್ಲರೂ ನಿಮ್ಮನ್ನು ಯಾವಾಗಲೂ ಉತ್ತೇಜಿಸುತ್ತಾರೆ. ಮತ್ತು ಆ ರೀತಿಯಲ್ಲಿ ನಡೆದುಕೊಳ್ಳುವಾಗ, ಸಮವಯಸ್ಕರು ನಿಮ್ಮನ್ನು ಬಹಳ ಗೌರವದಿಂದ ಕಾಣುತ್ತಾರೆ.” ನಮ್ಮ ಯುವ ಜನರು ಎಂತಹ ಒತ್ತಡವನ್ನು ಎದುರಿಸುತ್ತಿದ್ದಾರೆ! ಅವರು ಶೋಧನೆಯನ್ನು ಎದುರಿಸಲು ಮನಸ್ಸು ಮತ್ತು ಹೃದಯದಲ್ಲಿ ದೃಢನಿಶ್ಚಯವನ್ನು ಮಾಡಿಕೊಳ್ಳಬೇಕು.
23 ನಮ್ಮ ಯುವ ಜನರಲ್ಲಿ ಅನೇಕರು ಪರೀಕ್ಷೆಗಳ ಮಧ್ಯೆಯೂ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುವುದರಲ್ಲಿ ಉತ್ತಮ ಮಾದರಿಯಾಗಿದ್ದಾರೆ. ಫ್ರಾನ್ಸ್ನಲ್ಲಿ ಜೀವಿಸುವ ಒಬ್ಬ ಯುವ ಸಹೋದರಿಯು ಅಂತಹ ಉತ್ತಮ ಮಾದರಿಯನ್ನಿಟ್ಟವರಲ್ಲಿ ಒಬ್ಬಳಾಗಿದ್ದಾಳೆ. ಒಂದು ದಿನ ಊಟದ ಬಳಿಕ, ಕೆಲವು ಹುಡುಗರು ಸೇರಿ ತಮ್ಮನ್ನು ಚುಂಬಿಸುವಂತೆ ಅವಳನ್ನು ಬಲವಂತಪಡಿಸಲು ಪ್ರಯತ್ನಿಸಿದರು, ಆದರೆ ಅವಳು ಪ್ರಾರ್ಥಿಸಿದಳು ಮತ್ತು ಬಲವಾಗಿ ವಿರೋಧಿಸಿದಳು, ಹಾಗಾಗಿ ಹುಡುಗರು ಅವಳನ್ನು ಬಿಟ್ಟು ಹೋದರು. ಕೊನೆಗೆ, ಆ ಹುಡುಗರಲ್ಲಿ ಒಬ್ಬನು ಹಿಂದಿರುಗಿ ಬಂದು ಅವಳ ಧೈರ್ಯವನ್ನು ತಾನು ಮೆಚ್ಚುತ್ತೇನೆಂದು ಹೇಳಿದನು. ಅವಳು ಅವನಿಗೆ ರಾಜ್ಯದ ಕುರಿತು ಒಂದು ಒಳ್ಳೇ ಸಾಕ್ಷಿಯನ್ನು ಕೊಟ್ಟಳು ಮತ್ತು ಆ ರಾಜ್ಯದ ಆಶೀರ್ವಾದಗಳನ್ನು ಪಡೆಯಲು ಬಯಸುವವರೆಲ್ಲರಿಗಾಗಿ ಯೆಹೋವನು ಉನ್ನತ ಮಟ್ಟಗಳನ್ನು ಇಟ್ಟಿದ್ದಾನೆಂಬುದನ್ನು ವಿವರಿಸಿದಳು. ಅಲ್ಲದೆ ಆ ಶಾಲಾ ವರ್ಷದಲ್ಲಿ, ಅವಳು ಇಡೀ ತರಗತಿಗೆ ತನ್ನ ನಂಬಿಕೆಗಳನ್ನು ಸಹ ವಿವರಿಸಿದಳು.
24 ದೇವರು ತನ್ನ ಚಿತ್ತದ ಕುರಿತು ಇತರರಿಗೆ ದೃಢ ವಿಶ್ವಾಸದಿಂದ ಮಾತಾಡುವಂತೆ ಉಪಯೋಗಿಸುವ ಜನರಲ್ಲಿ ನಾವೂ ಒಬ್ಬರಾಗಿರುವುದು ಎಂತಹ ಅತ್ಯಮೂಲ್ಯ ಸುಯೋಗವಾಗಿದೆ! (ಕೊಲೊ. 4:12) ಇನ್ನೂ ಹೆಚ್ಚಾಗಿ, ಸಿಂಹದಂತಿರುವ ನಮ್ಮ ವಿರೋಧಿಯಾಗಿರುವ ಪಿಶಾಚನಾದ ಸೈತಾನನಿಂದ ಬರುವ ಆಕ್ರಮಣಗಳ ಕೆಳಗಿರುವಾಗಲೂ ನಮ್ಮ ಸಮಗ್ರತೆಯನ್ನು ರುಜುಪಡಿಸುವ ಅದ್ಭುತರಕರವಾದ ಅವಕಾಶವು ನಮಗಿದೆ. (1 ಪೇತ್ರ 5:8, 9) ನಮಗೆ ಮಾತ್ರವಲ್ಲ, ನಮ್ಮನ್ನು ಆಲಿಸುವ ಇತರರಿಗೂ ರಕ್ಷಣೆಯನ್ನು ಕೊಡಲು ಯೆಹೋವನು ರಾಜ್ಯದ ಸಂದೇಶವನ್ನು ಉಪಯೋಗಿಸುತ್ತಿದ್ದಾನೆ ಎಂಬುದನ್ನು ನಾವು ಎಂದಿಗೂ ಮರೆಯದಿರೋಣ! ನಾವು ಮಾಡುವ ನಿರ್ಣಯಗಳು ಮತ್ತು ನಮ್ಮ ದಿನನಿತ್ಯದ ಜೀವನ ರೀತಿಯು, ನಾವು ರಾಜ್ಯವನ್ನು ಮೊದಲಾಗಿ ಇಟ್ಟಿದ್ದೇವೆಂಬುದನ್ನು ರುಜುಪಡಿಸಿ ತೋರಿಸುವಂತಾಗಲಿ. ದೃಢ ವಿಶ್ವಾಸದಿಂದ ಸುವಾರ್ತೆ ಸಾರುವುದನ್ನು ನಾವು ಮುಂದುವರಿಸುತ್ತಾ ಇರೋಣ.