ನಾವು 2000 ಇಸವಿಯ ಏಪ್ರಿಲ್ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಬಲ್ಲೆವೊ?
1 ಏಪ್ರಿಲ್ 19ರ ಬುಧವಾರದ ಸಾಯಂಕಾಲವು, ನಮ್ಮ ಸೇವಾ ವರ್ಷದ ಅತಿ ಪ್ರಮುಖ ದಿನವಾಗಿರುವುದು. ಅಂದು, ಭೂಮಿಯಾದ್ಯಂತ ಸೂರ್ಯನು ಪ್ರಗತಿಪರವಾಗಿ ಅಸ್ತಮಿಸತೊಡಗಿದಂತೆ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಪ್ರತಿಯೊಂದು ಸಭೆ ಹಾಗೂ ಗುಂಪು ಕ್ರಿಸ್ತನ ಮರಣದ ಜ್ಞಾಪಕಾಚರಣೆಯನ್ನು ಆಚರಿಸುವುದು. ನಾವು ಯಾವುದೇ ಸಮಯ ವಲಯದಲ್ಲಿ ವಾಸಿಸುತ್ತಿರಲಿ, ಯೇಸು ಕ್ರಿಸ್ತನ ಯಜ್ಞಾರ್ಪಣೆಯನ್ನು ಸ್ಮರಿಸುವುದು ವರ್ಷದ ಅತಿ ಪ್ರಮುಖ ಘಟನೆಯಾಗಿರುವುದು. 2000 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ನ ಏಪ್ರಿಲ್ ತಿಂಗಳಿನಲ್ಲಿ ಜ್ಞಾಪಕಾಚರಣೆಯ ತಾರೀಖನ್ನು ಗುರುತಿಸಲಾಗಿದೆ.
2 ಯೆಹೋವನು ತನ್ನ ಮಗನನ್ನು ಯಜ್ಞವಾಗಿ ಅರ್ಪಿಸುವ ಮೂಲಕ ತೋರಿಸಿದ ಅಪಾತ್ರ ದಯೆಗಾಗಿ ಮನಃಪೂರ್ವಕವಾದ ರೀತಿಯಲ್ಲಿ ನಮ್ಮ ಗಣ್ಯತೆಯನ್ನು ತೋರ್ಪಡಿಸಲು, ಇಡೀ ಏಪ್ರಿಲ್ ತಿಂಗಳು ಒಂದು ವಿಶೇಷ ಅವಕಾಶವನ್ನು ಒದಗಿಸುತ್ತದೆ. ಹೇಗೆ? ಅಪೊಸ್ತಲ ಪೌಲನು ಬರೆದುದು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ; ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡೆವು. ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂ. 5:14, 15) ಹೌದು, ಏಪ್ರಿಲ್ ತಿಂಗಳಿನಲ್ಲಿ, ರಾಜ್ಯದ ಶುಶ್ರೂಷಕರೋಪಾದಿ ಆ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡುವ ಮೂಲಕ, ನಾವು ಸ್ವತಃ ನಮಗೋಸ್ಕರವಲ್ಲ, ಬದಲಾಗಿ ನಮ್ಮ ಪರವಾಗಿ ಪ್ರಾಣ ತೆತ್ತವನಿಗೋಸ್ಕರ ಜೀವಿಸುತ್ತಿದ್ದೇವೆ ಎಂಬುದನ್ನು ತೋರ್ಪಡಿಸಸಾಧ್ಯವಿದೆ!
3 ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಅರ್ಜಿಯನ್ನು ಹಾಕಿರಿ: “ಪ್ರಾಣವನ್ನು ಉಳಿಸಿಕೊಳ್ಳುವದೇ ವಿಶೇಷವೆಂದು ನಾನು ಎಣಿಸುವದಿಲ್ಲ. ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸಬೇಕೆಂಬದಾಗಿ ಕರ್ತನಾದ ಯೇಸುವಿನಿಂದ ನಾನು ಹೊಂದಿರುವ ಸೇವೆಯೆಂಬ ಓಟವನ್ನು ಕಡೆಗಾಣಿಸುವದೊಂದೇ ನನ್ನ ಅಪೇಕ್ಷೆ” ಎಂದು ಅಪೊಸ್ತಲ ಪೌಲನು ಹೇಳಿದಾಗ, ಅವನು ನಮಗೆ ಹುರಿದುಂಬಿಸುವಂತಹ ಮಾದರಿಯನ್ನಿಟ್ಟನು. (ಅ. ಕೃ. 20:24) ಯೆಹೋವ ದೇವರ ಕುರಿತು ಅತ್ಯುತ್ತಮವಾದ ಸಾಕ್ಷಿಯನ್ನು ನೀಡುವ ಸುಯೋಗ ನಮಗೂ ಇದೆ. ಈ ಉದ್ದೇಶದೊಂದಿಗೆ, ಆಕ್ಸಿಲಿಯರಿ ಪಯನೀಯರ್ ಚಟುವಟಿಕೆಯಲ್ಲಿ ಏಪ್ರಿಲ್ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಲು ನಾವು ಇಷ್ಟಪಡುತ್ತೇವೆ!
4 ಇಸವಿ 2000ದ ಏಪ್ರಿಲ್ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಅನೇಕರು ಪಯನೀಯರ್ ಸೇವೆಯನ್ನು ಮಾಡಲು ಇದು ಅನುಕೂಲಕರವಾದ ತಿಂಗಳಾಗಿದೆ. 1998ರ ಏಪ್ರಿಲ್ ತಿಂಗಳಿನಲ್ಲಿ ನಾವು ಆಕ್ಸಿಲಿಯರಿ ಪಯನೀಯರರ ಸಾರ್ವಕಾಲಿಕ ಉಚ್ಚಾಂಕವನ್ನು ತಲಪಿದಾಗ, ಈ ಸೇವೆಯಲ್ಲಿ ಪಾಲ್ಗೊಂಡಿದ್ದ 2,170 ಮಂದಿ ಪಯನೀಯರರು, ಒಟ್ಟು ಪ್ರಚಾರಕರಲ್ಲಿ 12 ಪ್ರತಿಶತವನ್ನು ಪ್ರತಿನಿಧಿಸಿದ್ದರು. ಒಂದೇ ವರ್ಷದ ಬಳಿಕ, 1999ರ ಆಗಸ್ಟ್ ತಿಂಗಳಿನಲ್ಲಿ ವರದಿಸಿದ ಪ್ರಚಾರಕರ ಒಟ್ಟು ಸಂಖ್ಯೆಯಲ್ಲಿ 17 ಪ್ರತಿಶತ ಅಭಿವೃದ್ಧಿಯಿತ್ತು. ಇದರರ್ಥ, ನಮ್ಮ ಹಿಂದಿನ ಆಕ್ಸಿಲಿಯರಿ ಪಯನೀಯರರ ಉಚ್ಚಾಂಕವನ್ನು ನಾವು ಮೀರಿಸುವ ಮಹತ್ತರ ಸಾಧ್ಯತೆಯಿದೆ. ಇದಕ್ಕೆ ಕೂಡಿಸಿ, ಸಭೆಯಲ್ಲಿ ಇನ್ನೂ ಅನೇಕರು ಈ ಸೇವಾ ವೈಶಿಷ್ಟ್ಯದಲ್ಲಿ ಪಾಲ್ಗೊಳ್ಳಲು ಸುಲಭವಾಗುವಂತೆ, ಆವಶ್ಯಕ ತಾಸುಗಳು ಸಹ ಕಡಿಮೆಮಾಡಲ್ಪಟ್ಟಿವೆ. ಪ್ರತಿಯೊಬ್ಬ ದೀಕ್ಷಾಸ್ನಾನಿತ ಪ್ರಚಾರಕನು, ಈ ಏಪ್ರಿಲ್ ತಿಂಗಳಿನಲ್ಲಿ ತಾನು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಸಾಧ್ಯವಿದೆಯೋ ಎಂಬುದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸತಕ್ಕದ್ದು.
5 ಇಸವಿ 2000 ಕ್ಯಾಲೆಂಡರ್ನ ಏಪ್ರಿಲ್ ತಿಂಗಳನ್ನು ಉಪಯೋಗಿಸಿ, ಮುಂದಿನ ತಿಂಗಳಿಗಾಗಿ ಈಗಲೇ ನಿಮ್ಮ ಕಾರ್ಯತಖ್ತೆಯನ್ನು ಯೋಜಿಸಿರಿ. ಯಾವ ದಿನಗಳಲ್ಲಿ ನೀವು ಕ್ಷೇತ್ರ ಸೇವೆಗೆ ಹೋಗಲು ಶಕ್ತರಾಗಿರುವಿರಿ ಎಂಬುದನ್ನು ನಿರ್ಧರಿಸಿರಿ, ಮತ್ತು ಆ ತಿಂಗಳಿನಲ್ಲಿ ಸಾರುವ ಚಟುವಟಿಕೆಯಲ್ಲಿ ನೀವು ಎಷ್ಟು ತಾಸುಗಳನ್ನು ಮೀಸಲಾಗಿಡಲು ಸಾಧ್ಯವಿದೆಯೆಂದು ಲೆಕ್ಕಹಾಕಿ. ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ ನೀವು ಇತರರೊಂದಿಗೆ ಸಾಕ್ಷಿ ನೀಡುವುದರಲ್ಲಿ ಕಳೆಯಸಾಧ್ಯವಿರುವ ಸಮಯವನ್ನೂ ಅದರಲ್ಲಿ ಒಳಗೂಡಿಸಿರಿ. ಈ ಎಲ್ಲ ತಾಸುಗಳನ್ನು ಕೂಡಿಸುವಲ್ಲಿ, ಆಕ್ಸಿಲಿಯರಿ ಪಯನೀಯರರಿಗಾಗಿ ಅಗತ್ಯಪಡಿಸಲ್ಪಟ್ಟಿರುವ 50 ತಾಸುಗಳು ನಿಮಗೆ ಸಿಗುತ್ತವೊ? ಅಗತ್ಯವಿರುವ ತಾಸುಗಳ ಕೊರತೆಯಿರುವಲ್ಲಿ, ಆಕ್ಸಿಲಿಯರಿ ಪಯನೀಯರ್ ಸೇವೆಗೋಸ್ಕರ ನೀವು ಸಮಯವನ್ನು ಖರೀದಿಸಸಾಧ್ಯವಾಗುವಂತೆ, ನೀವು ನಿಮ್ಮ ಕಾರ್ಯತಖ್ತೆಯಲ್ಲಿ ಇನ್ನೂ ಬೇರೆ ಹೊಂದಾಣಿಕೆಗಳನ್ನು ಮಾಡಬಲ್ಲಿರೊ? ಆ ತಿಂಗಳಿನಲ್ಲಿ 50 ತಾಸುಗಳನ್ನು ಪೂರೈಸಲಿಕ್ಕಾಗಿ ನೀವು ಪ್ರತಿ ದಿನ ಸರಾಸರಿ ಒಂದು ಗಂಟೆ ಹಾಗೂ 40 ನಿಮಿಷಗಳನ್ನು ಬದಿಗಿರಿಸಬೇಕಾಗಿದೆ.
6 ಈಗ ರೆಗ್ಯುಲರ್ ಪಯನೀಯರರಿಗೆ ಸಹ ತಾಸುಗಳ ಆವಶ್ಯಕತೆಯು ಕಡಿಮೆಮಾಡಲ್ಪಟ್ಟಿರುವುದರಿಂದ, ಪೂರ್ಣ ಸಮಯದ ಸೇವೆಯನ್ನು ಆರಂಭಿಸಲು ನೀವು ಯೋಜಿಸುತ್ತಿದ್ದೀರೊ? ಏಪ್ರಿಲ್ ತಿಂಗಳಿನಲ್ಲಿ ಹಗಲು ದೀರ್ಘವಾಗಿರುವುದರಿಂದ, ಪೂರ್ಣ ಸಮಯದ ಸೇವೆಯನ್ನು ಆರಂಭಿಸಲು ಇದೇ ಅತ್ಯುತ್ತಮವಾದ ತಿಂಗಳಾಗಿರುವುದು! ರೆಗ್ಯುಲರ್ ಪಯನೀಯರರಿಗಾಗಿರುವ 70 ತಾಸುಗಳ ಆವಶ್ಯಕತೆಯನ್ನು ಮುಟ್ಟುವ ಸಾಮರ್ಥ್ಯದ ಕುರಿತು ನೀವು ಅನಿಶ್ಚಿತರಾಗಿರುವಲ್ಲಿ, 70 ತಾಸುಗಳನ್ನು ನಿಮ್ಮ ಗುರಿಯಾಗಿಟ್ಟುಕೊಂಡು, ನೀವು ಏಪ್ರಿಲ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಯೋಜಿಸಬಾರದೇಕೆ? ನೀವು ಆ ಗುರಿಯನ್ನು ತಲಪಸಾಧ್ಯವಿದೆಯೆಂದು ನಿಮಗೆ ಒಮ್ಮೆ ಗೊತ್ತಾದರೆ, ಸಾಧ್ಯವಾದಷ್ಟು ಬೇಗನೆ ನೀವು ರೆಗ್ಯುಲರ್ ಪಯನೀಯರರ ಶ್ರೇಣಿಗೆ ಸೇರಲು ಮನಸ್ಸುಮಾಡುವಿರಿ.—ನಮ್ಮ ಶುಶ್ರೂಷೆ ಪುಸ್ತಕದ 113-14ನೆಯ ಪುಟಗಳನ್ನು ನೋಡಿರಿ.
7 ಸುವಾರ್ತೆಯ ಪ್ರಚಾರಕರೋಪಾದಿ ಪೂರ್ಣವಾಗಿ ಪಾಲ್ಗೊಳ್ಳಿರಿ: ನಮಗೆಲ್ಲರಿಗೆ, ಅಂದರೆ ಪ್ರಚಾರಕರಿಗೆ ಮತ್ತು ಪಯನೀಯರರಿಗೆ, ದೇವರಿಗಾಗಿ ಹಾಗೂ ನೆರೆಯವರಿಗಾಗಿರುವ ಯಥಾರ್ಥ ಪ್ರೀತಿಯು, ನಮ್ಮ ವೈಯಕ್ತಿಕ ಸನ್ನಿವೇಶಗಳಿಗನುಸಾರ ಯೆಹೋವನ ಸೇವೆಯಲ್ಲಿ ನಮ್ಮಿಂದಾದದ್ದೆಲ್ಲವನ್ನು ಮನಃಪೂರ್ವಕವಾಗಿ ಮಾಡುವಂತೆ ಪ್ರಚೋದಿಸುತ್ತದೆ. (ಲೂಕ 10:27) ಹೀಗೆ, “ನಾವು ಕಷ್ಟಪಡುತ್ತೇವೆ, ಹೋರಾಡುತ್ತೇವೆ, ಯಾಕಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ” ಎಂಬುದನ್ನು ನಾವು ತೋರಿಸುತ್ತೇವೆ. (1 ತಿಮೊ. 4:10) ಆದುದರಿಂದಲೇ, ಏಪ್ರಿಲ್ ತಿಂಗಳಿನಲ್ಲಿ ಪ್ರತಿಯೊಬ್ಬರೂ ರಾಜ್ಯದ ಕೆಲಸದಲ್ಲಿ ಪೂರ್ಣ ರೀತಿಯಲ್ಲಿ ಪಾಲ್ಗೊಳ್ಳುವುದರೊಂದಿಗೆ, ಆ ತಿಂಗಳಿನಲ್ಲಿ 100 ಪ್ರತಿಶತ ಭಾಗವಹಿಸುವಿಕೆಯನ್ನು ಕಾಣಲು ನಾವು ನಿರೀಕ್ಷಿಸುತ್ತೇವೆ.
8 ಯೇಸುವಿನ ಉತ್ತೇಜನವನ್ನು ನಾವು ಮರೆಯದಿರೋಣ: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” ಹೀಗೆ ಹೇಳಿದ ನಂತರ ಕೂಡಲೆ ಯೇಸು ತನ್ನ 12 ಮಂದಿ ಅಪೊಸ್ತಲರನ್ನು ಕರೆದು, ಅವರನ್ನು ಸಾರಲು ಕಳುಹಿಸಿದನು. (ಮತ್ತಾ. 9:37, 38; 10:1, 5, 7) ಸುಮಾರು ಒಂದು ವರ್ಷದ ಬಳಿಕ, ಆ 12 ಮಂದಿ ಸಾರುವ ಚಟುವಟಿಕೆಯಲ್ಲಿ ಚೆನ್ನಾಗಿ ತರಬೇತಿ ಪಡೆದುಕೊಂಡ ನಂತರ, ಯೇಸು “ಇನ್ನೂ ಎಪ್ಪತ್ತು ಮಂದಿಯನ್ನು ನೇಮಿಸಿ,” ಅವರಿಗೂ ಇದೇ ಸೂಚನೆಯನ್ನು ನೀಡಿದನು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ.” (ಲೂಕ 10:1, 2) ಯೆಹೋವನು ಆ ಪ್ರಾರ್ಥನೆಗಳಿಗೆ ಉತ್ತರವನ್ನು ಕೊಟ್ಟನು ಎಂಬುದನ್ನು ಬೈಬಲಿನ ಅಪೊಸ್ತಲರ ಕೃತ್ಯಗಳು ಪುಸ್ತಕವು ವರದಿಸುತ್ತದೆ. ಸಾ.ಶ. 33ರ ಪಂಚಾಶತ್ತಮದಷ್ಟಕ್ಕೆ ಶಿಷ್ಯರ ಸಂಖ್ಯೆಯು ಸುಮಾರು 120ಕ್ಕೆ ಏರಿತ್ತು. ತದನಂತರ, 3,000 ಮತ್ತು 5,000 ಶಿಷ್ಯರ ಆನುಕ್ರಮಿಕ ಉಚ್ಚಾಂಕಗಳನ್ನು ತಲಪಲಾಯಿತು. (ಅ. ಕೃ. 1:15; 2:41; 4:4) ಆ ಬಳಿಕ “ಶಿಷ್ಯರ ಸಂಖ್ಯೆಯು . . . ಬಹಳವಾಗಿ ಹೆಚ್ಚುತ್ತಾ ಬಂತು.” (ಅ. ಕೃ. 6:7) ತದ್ರೀತಿಯಲ್ಲಿ, ಆಧುನಿಕ ಕಾಲದಲ್ಲಿಯೂ, ಇನ್ನೂ ಹೆಚ್ಚಿನ ರಾಜ್ಯ ಪ್ರಚಾರಕರಿಗಾಗಿ ನಾವು ಯಜಮಾನನ ಬಳಿ ಬೇಡಿಕೊಳ್ಳುತ್ತಾ ಇರಬೇಕು! ನಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ, ಪ್ರತಿ ತಿಂಗಳು ಶುಶ್ರೂಷೆಯಲ್ಲಿ ಭಾಗವಹಿಸಲಿಕ್ಕಾಗಿ ಸಭೆಯ ಪ್ರತಿಯೊಬ್ಬ ಪ್ರಚಾರಕನು ನಿಶ್ಚಿತ ಏರ್ಪಾಡುಗಳನ್ನು ಮಾಡತಕ್ಕದ್ದು.
9 ದಯವಿಟ್ಟು 2000 ಕ್ಯಾಲೆಂಡರ್ನಲ್ಲಿ ಏಪ್ರಿಲ್ ತಿಂಗಳನ್ನು ಗಮನವಿಟ್ಟು ನೋಡಿರಿ. ಆ ತಿಂಗಳ ಮೊದಲ ಎರಡು ದಿನಗಳು ಶನಿವಾರ ಮತ್ತು ಭಾನುವಾರಗಳಾಗಿರುವುದರಿಂದ, ಆ ವಾರಾಂತ್ಯದಲ್ಲಿ ಸೇವೆಯಲ್ಲಿ ಭಾಗವಹಿಸಲಿಕ್ಕಾಗಿ, ಅಂದರೆ ಆ ತಿಂಗಳ ಆರಂಭದಲ್ಲೇ ಸೇವೆಯನ್ನು ಪ್ರಾರಂಭಿಸಲಿಕ್ಕಾಗಿ ನೀವು ಯೋಜನೆಗಳನ್ನು ಮಾಡಬಲ್ಲಿರೊ? ನಿಮ್ಮ ಸಭಾ ಪುಸ್ತಕಾಭ್ಯಾಸ ಗುಂಪಿನೊಂದಿಗೆ ಆ ತಿಂಗಳ ಪ್ರತಿಯೊಂದು “ಪತ್ರಿಕಾ ದಿನ”ಕ್ಕೆ ನೀವು ಬೆಂಬಲ ನೀಡಬಲ್ಲಿರೊ? ಪ್ರತಿ ಭಾನುವಾರ ಶುಶ್ರೂಷೆಯಲ್ಲಿ ಒಂದು ತಾಸು ಅಥವಾ ಅದಕ್ಕಿಂತಲೂ ಹೆಚ್ಚು ಸಮಯವನ್ನು ಕಳೆಯುವುದರ ಕುರಿತಾಗಿ ಏನು? ಹಗಲು ದೀರ್ಘವಾಗಿರುವುದರಿಂದ, ಸಾಯಂಕಾಲಗಳಲ್ಲಿ ಹೆಚ್ಚು ಬೆಳಕಿರುತ್ತದೆ. ಸಂಜೆ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳಲು ನೀವು ಏರ್ಪಾಡುಗಳನ್ನು ಮಾಡಸಾಧ್ಯವಿದೆಯೊ? ಅಷ್ಟುಮಾತ್ರವಲ್ಲ, ಉದ್ಯೋಗದ ಸ್ಥಳದಲ್ಲಿ, ಶಾಲೆಯಲ್ಲಿ, ಅಥವಾ ಇನ್ನಿತರ ದೈನಂದಿನ ಚಟುವಟಿಕೆಗಳಲ್ಲಿ ಒಳಗೂಡಿರುವಾಗ ಅನೌಪಚಾರಿಕವಾಗಿ ಸಾಕ್ಷಿನೀಡಲು ನಿಮಗೆ ಸಿಗುವ ಅವಕಾಶಗಳ ಸದುಪಯೋಗವನ್ನು ಮಾಡಲು ಮರೆಯದಿರಿ. ಶುಶ್ರೂಷೆಯಲ್ಲಿ ನೀವು ಸ್ವಲ್ಪ ಸಮಯವನ್ನು ಕಳೆಯಸಾಧ್ಯವಿರುವ ದಿನಗಳ ಮೇಲೆ ಗುರುತು ಹಾಕಿರಿ, ಮತ್ತು ಆ ತಿಂಗಳಿಗಾಗಿರುವ ನಿಮ್ಮ ಸೇವಾ ತಾಸುಗಳನ್ನು ದಾಖಲಿಸಲಿಕ್ಕಾಗಿ ಕ್ಯಾಲೆಂಡರನ್ನು ಉಪಯೋಗಿಸಿರಿ.
10 ಯಾರು ಅರ್ಹತೆಯನ್ನು ಹೊಂದಿದ್ದು, ಹಿರಿಯರಿಂದ ಒಪ್ಪಿಗೆಯನ್ನು ಪಡೆದಿದ್ದಾರೋ ಅವರೆಲ್ಲರೂ ಅಸ್ನಾತ ಪ್ರಚಾರಕರೋಪಾದಿ ಸೇವೆಸಲ್ಲಿಸಲಾರಂಭಿಸಲು ಏಪ್ರಿಲ್ ತಿಂಗಳು ಸೂಕ್ತವಾದ ಸಮಯವಾಗಿರುವುದು. ನೀವು ಯಾರೊಂದಿಗಾದರೂ ಬೈಬಲನ್ನು ಅಭ್ಯಾಸಿಸುತ್ತೀರೆಂದು ಭಾವಿಸಿ. ಅವನು ಸುವಾರ್ತೆಯ ಒಬ್ಬ ಪ್ರಚಾರಕನೋಪಾದಿ ಪರಿಗಣಿಸಲ್ಪಡುವಂತೆ ಕೇಳಿಕೊಳ್ಳಲಿಕ್ಕಾಗಿ ಅಧ್ಯಕ್ಷ ಮೇಲ್ವಿಚಾರಕನೊಂದಿಗೆ ಮಾತಾಡುವಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದಾನೊ? ಅಸ್ನಾತ ಮಕ್ಕಳು ನಿಮಗಿರುವಲ್ಲಿ, ಅವರ ಆತ್ಮಿಕ ಪ್ರಗತಿಯ ಕುರಿತು ನೀವು ಹಿರಿಯರೊಂದಿಗೆ ಚರ್ಚಿಸಿದ್ದೀರೊ? ಅವರು ಪ್ರಚಾರಕರಾಗಲು ಇದು ಸೂಕ್ತವಾದ ಸಮಯವಾಗಿರುವುದಿಲ್ಲವೊ?—ನಮ್ಮ ಶುಶ್ರೂಷೆ ಪುಸ್ತಕದ 97-100ನೆಯ ಪುಟಗಳನ್ನು ನೋಡಿರಿ.
11 ನಾವು 2000 ಇಸವಿಯ ಏಪ್ರಿಲ್ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡುವ ನಮ್ಮ ಪ್ರಯತ್ನದಲ್ಲಿ, ನಾವೆಲ್ಲರೂ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ ಮತ್ತು ತಿಂಗಳ ಅಂತ್ಯದಲ್ಲಿ ಕ್ಷೇತ್ರ ಸೇವಾ ವರದಿಯನ್ನು ಹಾಕಬೇಕಾಗಿದೆ. (ಹೋಲಿಸಿರಿ ಮಾರ್ಕ 6:30.) ಪ್ರಥಮ ಬಾರಿಗೆ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವ ಹೊಸ ಅಸ್ನಾತ ಪ್ರಚಾರಕರಿಗೆ, ತಮ್ಮ ಚಟುವಟಿಕೆಯ ವರದಿಯನ್ನು ಸಮಯಕ್ಕೆ ಸರಿಯಾಗಿ ಹಾಕುವಂತೆ ಪ್ರೋತ್ಸಾಹ ನೀಡತಕ್ಕದ್ದು. ನಮ್ಮ ಪಾತ್ರವನ್ನು ನಿರ್ವಹಿಸುವ ಮೂಲಕ ನಾವು ಏಪ್ರಿಲ್ ತಿಂಗಳ ವರದಿಗೆ ಮತ್ತು ನಮ್ಮ ಸಾಕ್ಷಿಕಾರ್ಯದಲ್ಲಿ ಮಾಡುವ ಪ್ರಯತ್ನಗಳ ಮೂಲಕ ಯೆಹೋವನಿಗೆ ಸಲ್ಲಿಸಲ್ಪಡುವ ಸ್ತುತಿಯ ಘೋಷಣೆಗೆ ಅತ್ಯುತ್ತಮವಾದ ರೀತಿಯಲ್ಲಿ ನೆರವು ನೀಡಸಾಧ್ಯವಿದೆ.
12 ಜ್ಞಾಪಕಾಚರಣೆಗೆ ಬರುವಾಗ ನಿಮ್ಮೊಂದಿಗೆ ಇತರರನ್ನೂ ಕರೆತನ್ನಿರಿ: 2000 ಇಸವಿಯಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗುವವರ ಹೊಸ ಉಚ್ಚಾಂಕವನ್ನು ನೋಡುವುದು ನಮಗೆ ರೋಮಾಂಚನವನ್ನು ಉಂಟುಮಾಡುತ್ತದಲ್ಲವೊ? ಹೌದು! ನಮ್ಮ ಪರವಾಗಿ ಯೆಹೋವ ದೇವರು ಹಾಗೂ ಯೇಸು ಕ್ರಿಸ್ತನು ತೋರಿಸಿರುವ ಪ್ರೀತಿಯ ಅತ್ಯಂತ ದೊಡ್ಡ ಅಭಿವ್ಯಕ್ತಿಗಾಗಿ ತಮ್ಮ ಗಣ್ಯತೆಯನ್ನು ವ್ಯಕ್ತಪಡಿಸಲಿಕ್ಕಾಗಿ, ಜನರು ಹಿಂದೆಂದಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಕೂಡಿಬಂದಿದ್ದರೆಂಬುದನ್ನು ಇದು ಅರ್ಥೈಸುವುದು! (ಯೋಹಾ. 3:16; 15:13) ನೀವು ಹಾಗೂ ನಿಮ್ಮ ಕುಟುಂಬವು ಯಾವುದೇ ಕಾರಣಕ್ಕಾಗಿ ಜ್ಞಾಪಕಾಚರಣೆಗೆ ಹಾಜರಾಗುವುದನ್ನು ತಪ್ಪಿಸಿಕೊಳ್ಳದಿರಲು ಅಗತ್ಯವಿರುವ ಎಲ್ಲ ಏರ್ಪಾಡುಗಳನ್ನು ಮಾಡಿರಿ.
13 ಇತರರನ್ನು ಜ್ಞಾಪಕಾಚರಣೆಗೆ ಆಮಂತ್ರಿಸಲಾರಂಭಿಸಲು ಸಹ ಇದು ಸೂಕ್ತವಾದ ಸಮಯವಾಗಿದೆ. ಯಾರೆಲ್ಲ ಹಾಜರಾಗಬೇಕೆಂದು ನೀವು ಬಯಸುತ್ತೀರೋ ಅಂತಹವರ ಹೆಸರಿನ ಒಂದು ಪಟ್ಟಿಯನ್ನು ಮಾಡಿಕೊಳ್ಳಿರಿ. ಈ ಹಿಂದೆ ಬೈಬಲನ್ನು ಅಭ್ಯಾಸಿಸಿರುವವರನ್ನು, ಈಗ ಅಭ್ಯಾಸಿಸುತ್ತಿರುವವರನ್ನು ಮತ್ತು ನೀವು ಪುನರ್ಭೇಟಿಮಾಡುತ್ತಿರುವವರನ್ನು ಸಹ ಈ ಪಟ್ಟಿಯಲ್ಲಿ ಒಳಗೂಡಿಸಿರಿ. ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಮತ್ತು ನೆರೆಹೊರೆಯಲ್ಲಿರುವ ನಿಮ್ಮ ಪರಿಚಯಸ್ಥರನ್ನು ಹಾಗೂ ನೀವು ಯಾರೊಂದಿಗೆ ವ್ಯಾಪಾರ-ವ್ಯವಹಾರ ಮಾಡುತ್ತೀರೊ ಅವರನ್ನು ಸಹ ಈ ಪಟ್ಟಿಗೆ ಸೇರಿಸಿರಿ. ಇನ್ನಿತರ ಪರಿಚಯಸ್ಥರು ಹಾಗೂ ನಿಮ್ಮ ಸಂಬಂಧಿಕರನ್ನು ಅದರಲ್ಲಿ ಸೇರಿಸಲು ಮರೆಯದಿರಿ. ಪಟ್ಟಿಯನ್ನು ಮಾಡಿದ ಬಳಿಕ, ಪ್ರತಿಯೊಬ್ಬರಿಗೂ ಮನಃಪೂರ್ವಕವಾಗಿ, ವೈಯಕ್ತಿಕವಾದ ಆಮಂತ್ರಣವನ್ನು ನೀಡಲು ಆರಂಭಿಸಿರಿ. ಯಾವಾಗ ಮತ್ತು ಎಲ್ಲಿ ಜ್ಞಾಪಕಾಚರಣೆಯು ನಡೆಯುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಯಪಡಿಸಿರಿ. ಏಪ್ರಿಲ್ ತಿಂಗಳ 19ನೆಯ ತಾರೀಖು ಸಮೀಪಿಸಿದಂತೆ, ನಿಮ್ಮ ಪಟ್ಟಿಯಲ್ಲಿರುವವರಿಗೆ ವ್ಯಕ್ತಿಗತವಾಗಿ ಅಥವಾ ಟೆಲಿಫೋನ್ನ ಮೂಲಕ ಜ್ಞಾಪಕಾಚರಣೆಯ ನೆನಪುಹುಟ್ಟಿಸಿರಿ. ಆ ರಾತ್ರಿ ಜ್ಞಾಪಕಾಚರಣೆಗೆ ನಿಮ್ಮೊಂದಿಗೆ ಬರುವಂತೆ ಅವರಿಗೆ ಕರೆಕೊಡಿರಿ.
14 ಈ ಮುಂಚೆ ಸೊಸೈಟಿಯಿಂದ ಕೊಡಲ್ಪಟ್ಟಿದ್ದ ಮಾರ್ಗದರ್ಶನಕ್ಕನುಸಾರ, ಟೆರಿಟೊರಿಯಲ್ಲಿರುವ ಎಲ್ಲ ಅಕ್ರಿಯ ಪ್ರಚಾರಕರು ಜ್ಞಾಪಕಾಚರಣೆಗೆ ಹಾಜರಾಗುವಂತೆ ಅವರನ್ನು ಉತ್ತೇಜಿಸಲಿಕ್ಕಾಗಿ ಹಿರಿಯರ ಮಂಡಲಿಯು ವಿಶೇಷ ಪ್ರಯತ್ನವನ್ನು ಮಾಡುವುದು. (ಮತ್ತಾ. 18:12-14) ಹಿರಿಯರು, ಸೊಸೈಟಿಯ ಫೆಬ್ರವರಿ 2, 1999ರ ಪತ್ರವನ್ನು ಪುನರ್ವಿಮರ್ಶಿಸಲು ಬಯಸುವರು. ಸಭೆಯ ಸೆಕ್ರಿಟರಿಯು ಎಲ್ಲ ಅಕ್ರಿಯ ಪ್ರಚಾರಕರ ಪಟ್ಟಿಯೊಂದನ್ನು ಮಾಡಬೇಕು ಮತ್ತು ಅವರನ್ನು ಭೇಟಿಮಾಡಿ, ಜ್ಞಾಪಕಾಚರಣೆಗೆ ಬರಲು ಆಮಂತ್ರಿಸುವಂತೆ ಸೇವಾ ಮೇಲ್ವಿಚಾರಕನು ಹಿರಿಯರನ್ನು ನೇಮಿಸುವನು. ಬಹುಶಃ ಸಾಧ್ಯವಾದಷ್ಟು ಬೇಗನೆ ಪ್ರೋತ್ಸಾಹದಾಯಕವಾದ ಕುರಿಪಾಲನಾ ಭೇಟಿಯನ್ನು ಮಾಡುವ ಮೂಲಕ, ಈ ಅಕ್ರಿಯ ಪ್ರಚಾರಕರು ಕ್ಷೇತ್ರ ಸೇವೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿಯೇ ಪುನಃ ಕ್ರಿಯಾಶೀಲರಾಗಲಿಕ್ಕಾಗಿ ಸಹಾಯವು ನೀಡಲ್ಪಡಸಾಧ್ಯವಿದೆ. ಕ್ಷೇತ್ರ ಸೇವೆಯಲ್ಲಿ ಒಬ್ಬ ಅನುಭವಸ್ಥ ಪ್ರಚಾರಕನೊಂದಿಗೆ ಸೇವೆಮಾಡುವಂತೆ ಆಮಂತ್ರಿಸುವುದು ಅವರಿಗೆ ಭಕ್ತಿವೃದ್ಧಿಮಾಡುವಂತಹದ್ದಾಗಿರುವುದು.
15 ಏಪ್ರಿಲ್ ತಿಂಗಳಿಗಾಗಿ ಒಳ್ಳೆಯ ಬೆಂಬಲ ನೀಡುವಂತೆ ಉತ್ತೇಜಿಸಿರಿ! 2000 ಇಸವಿಯ ಏಪ್ರಿಲ್ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಲು, ಎಲ್ಲ ಹಿರಿಯರು, ಶುಶ್ರೂಷಾ ಸೇವಕರು ಮತ್ತು ಕುಟುಂಬದ ಮುಖ್ಯಸ್ಥರಿಂದ ಸುಸಂಘಟನೆಯು ಅಗತ್ಯವಾಗಿರುವುದು. ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ವ್ಯವಸ್ಥಾಪಿಸುವುದರಲ್ಲಿ ಹಾಗೂ ನಾಯಕತ್ವವನ್ನು ವಹಿಸುವುದರಲ್ಲಿ ಹಿರಿಯರು ಶ್ರದ್ಧಾಪೂರ್ವಕವಾಗಿ ಕಾರ್ಯನಡಿಸುವರು. (ಇಬ್ರಿ. 13:7) ವಾರದ ದಿನಗಳು ಹಾಗೂ ವಾರಾಂತ್ಯದಲ್ಲಿ ಕ್ಷೇತ್ರ ಸೇವೆಗಾಗಿರುವ ಕೂಟಗಳನ್ನು ನಡಿಸಲಿಕ್ಕಾಗಿ ಪ್ರಾಯೋಗಿಕ ಏರ್ಪಾಡುಗಳನ್ನು ಮಾಡತಕ್ಕದ್ದು. ಮಧ್ಯಾಹ್ನ ತಡವಾಗಿ ಮಾಡಲ್ಪಡುವ ಸಾಕ್ಷಿಕಾರ್ಯ ಹಾಗೂ ಸಾಯಂಕಾಲದ ಸಾಕ್ಷಿಕಾರ್ಯಕ್ಕಾಗಿಯೂ, ಸೇವೆಗಾಗಿರುವ ಕೂಟಗಳನ್ನು ಏರ್ಪಡಿಸಬಹುದು. ಏಪ್ರಿಲ್ ತಿಂಗಳಿಗಾಗಿ ಯೋಜಿಸಲ್ಪಟ್ಟಿರುವ ಎಲ್ಲ ಏರ್ಪಾಡುಗಳ ಪೂರ್ಣ ಕಾರ್ಯತಖ್ತೆಯನ್ನು ಇನ್ಫರ್ಮೇಷನ್ ಬೋರ್ಡಿನ ಮೇಲೆ ಲಗತ್ತಿಸತಕ್ಕದ್ದು. ನಿಗದಿಪಡಿಸಲ್ಪಟ್ಟ ಪ್ರತಿಯೊಂದು ಸೇವೆಗಾಗಿ ಕೂಟವನ್ನು ನಿರ್ವಹಿಸಲು ಒಬ್ಬ ಸಹೋದರನನ್ನು ನೇಮಿಸಬೇಕಾಗಿದೆ. ಪ್ರತಿಯೊಂದು ಗುಂಪಿನ ಆವಶ್ಯಕತೆಗಳನ್ನು ಪೂರೈಸಲಿಕ್ಕಾಗಿ ಸಾಕಷ್ಟು ಟೆರಿಟೊರಿಯು ಒದಗಿಸಲ್ಪಡಬೇಕು.
16 ಏಪ್ರಿಲ್ ತಿಂಗಳಿನಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಲಾಗುವುದು. ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ಪ್ರಯತ್ನದಿಂದ, ಯಾರು ಆಸಕ್ತಿಯನ್ನು ತೋರಿಸುತ್ತಾರೋ ಅವರೆಲ್ಲರಿಗೆ ಅಪೇಕ್ಷಿಸು ಬ್ರೋಷರನ್ನು ನೀಡಬೇಕು. ಆದುದರಿಂದ, ಸಾಕಷ್ಟು ಸಂಖ್ಯೆಯಲ್ಲಿ ಪತ್ರಿಕೆಗಳು ಹಾಗೂ ಬ್ರೋಷರ್ಗಳನ್ನು ಒದಗಿಸತಕ್ಕದ್ದು.
17 ತಿಂಗಳ ಕೊನೆಯಲ್ಲಿ ಎಲ್ಲ ಪುಸ್ತಕಾಭ್ಯಾಸ ಚಾಲಕರು ಮತ್ತು ಅವರ ಸಹಾಯಕರು, ಆ ತಿಂಗಳು ಮುಗಿದ ಕೂಡಲೆ, ತಮ್ಮ ಗುಂಪಿನಲ್ಲಿರುವ ಪ್ರತಿಯೊಬ್ಬರೂ ತಮ್ಮ ಸೇವಾ ವರದಿಯನ್ನು ಹಾಕುವಂತೆ ಅವರನ್ನು ಉತ್ತೇಜಿಸಲು ಬಯಸುವರು. ಏಪ್ರಿಲ್ 30ರ ಭಾನುವಾರದಂದು ಸಹ ಇದನ್ನು ಮಾಡಸಾಧ್ಯವಿದೆ. ತದನಂತರ, ಸೆಕ್ರಿಟರಿಯು ವರದಿಗಳ ತಾಳೆನೋಡುವಾಗ, ಕೆಲವು ಪ್ರಚಾರಕರು ತಮ್ಮ ವರದಿಯನ್ನು ನೀಡಿಲ್ಲ ಎಂಬುದನ್ನು ಅವನು ಗಮನಿಸುವಲ್ಲಿ, ಮೇ 6ಕ್ಕೆ ಅವನು ಸಭಾ ವರದಿಯನ್ನು ಸೊಸೈಟಿಗೆ ಕಳುಹಿಸಬೇಕಾಗಿರುವುದರಿಂದ, ಆ ತಾರೀಖಿಗೆ ಮೊದಲು ಅವರು ತಮ್ಮ ವರದಿಯನ್ನು ಕೊಡುವಂತೆ ಅವನು ಆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಸಾಧ್ಯವಿದೆ. ಪ್ರತಿಯೊಬ್ಬ ಪ್ರಚಾರಕನನ್ನು ಸಂಪರ್ಕಿಸುವುದರಲ್ಲಿ ತನಗೆ ಸಹಾಯ ಮಾಡುವಂತೆ ಅವನು ಪುಸ್ತಕಾಭ್ಯಾಸ ಚಾಲಕರನ್ನು ಕೇಳಿಕೊಳ್ಳಬಹುದು.
18 ದೇವಜನರಿಗೆ ಜ್ಞಾಪಕಾಚರಣೆಯ ಸಮಯವು ವರ್ಷದ ಅತಿ ಪ್ರಾಮುಖ್ಯ ಕಾಲಾವಧಿಯಾಗಿದೆ. ಯೆಹೋವನ ಸೇವೆಯಲ್ಲಿ ಇದು ನಮಗೆಲ್ಲರಿಗೂ ಅತ್ಯಂತ ಕಾರ್ಯಮಗ್ನ ಸಮಯವಾಗಿರತಕ್ಕದ್ದು. ಸುವಾರ್ತೆಯ ಪ್ರಚಾರಕರೋಪಾದಿ ಪ್ರತಿಯೊಬ್ಬರೂ ತಮ್ಮಿಂದಾದಷ್ಟು ಮಟ್ಟಿಗೆ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವುದಾದರೆ, ಯಾರು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಅರ್ಜಿಯನ್ನು ತುಂಬಿಸಸಾಧ್ಯವಿದೆಯೊ ಅಂತಹವರು ಅದನ್ನು ಮಾಡಿದರೆ, ಮತ್ತು ನಮ್ಮೊಂದಿಗೆ ಇತರರನ್ನು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಕರೆತರುವುದರಲ್ಲಿ ನಾವು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡುವುದಾದರೆ, ಅದು ಅತ್ಯಂತ ಕಾರ್ಯಮಗ್ನ ಸಮಯವಾಗಿರುವುದು. ದೇವರ ಸ್ತುತಿ ಮತ್ತು ಮಹಿಮೆಗಾಗಿ ನಾವು 2000 ಇಸವಿಯ ಏಪ್ರಿಲ್ ತಿಂಗಳನ್ನು ಹಿಂದೆಂದಿಗಿಂತಲೂ ಅತ್ಯುತ್ತಮ ತಿಂಗಳಾಗಿ ಮಾಡಲು ಪ್ರಯತ್ನಿಸುವಾಗ, ಯೆಹೋವನ ಹೇರಳ ಆಶೀರ್ವಾದಕ್ಕಾಗಿ ನಾವು ಮನಃಪೂರ್ವಕವಾಗಿ ಪ್ರಾರ್ಥಿಸೋಣ!—ಇಬ್ರಿ. 13:15.
[ಪುಟ 3 ರಲ್ಲಿರುವ ಚೌಕ]
ಆಕ್ಸಿಲಿಯರಿ ಪಯನೀಯರರು
ನಮ್ಮ ಸಾರ್ವಕಾಲಿಕ ಉಚ್ಚಾಂಕ: 2,170
(ಏಪ್ರಿಲ್ 1998)
[ಪುಟ 4 ರಲ್ಲಿರುವ ಚೌಕ]
ಒಟ್ಟು ಪ್ರಚಾರಕರು
ನಮ್ಮ ಸಾರ್ವಕಾಲಿಕ ಉಚ್ಚಾಂಕ: 21,212
(ಆಗಸ್ಟ್ 1999)
[ಪುಟ 5 ರಲ್ಲಿರುವ ಚೌಕ]
ಜ್ಞಾಪಕಾಚರಣೆಯ ಹಾಜರಿ
ನಮ್ಮ ಸಾರ್ವಕಾಲಿಕ ಉಚ್ಚಾಂಕ: 47,081
(1999)