ಅವರು ಯೆಹೋವನ ಚಿತ್ತವನ್ನು ಮಾಡಿದರು
ಯೋಬನ ಸಮಗ್ರತೆಯು ಬಹುಮಾನಿಸಲ್ಪಡುತ್ತದೆ
ಯೋಬನು, ಸಹಾನುಭೂತಿಯುಳ್ಳ ವ್ಯಕ್ತಿಯೂ, ವಿಧವೆಯರ, ಅನಾಥರ ಮತ್ತು ಸಂಕಟಕ್ಕೊಳಗಾದವರ ರಕ್ಷಕನೂ ಆಗಿದ್ದನು. (ಯೋಬ 29:12-17; 31:16-21) ತರುವಾಯ, ಇದ್ದಕ್ಕಿದ್ದಹಾಗೆ, ಅವನು ತನ್ನ ಸಂಪತ್ತನ್ನು, ತನ್ನ ಮಕ್ಕಳನ್ನು, ಮತ್ತು ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಾ, ಸಂಕಷ್ಟದಲ್ಲಿ ಬಿದ್ದನು. ದುಃಖಕರವಾಗಿ, ಪೀಡಿತರಿಗೆ ಬೆಂಬಲದ ಆಧಾರಸ್ತಂಭವಾಗಿದ್ದ ಈ ಸಜ್ಜನನಿಗೆ, ಸಹಾಯದ ಅಗತ್ಯವಿದ್ದಾಗ ಕೊಂಚವೇ ಸಹಾಯವು ಸಿಕ್ಕಿತು. ಅವನ ಹೆಂಡತಿಯು ಸಹ, “ದೇವರನ್ನು ದೂಷಿಸಿ ಸಾಯಿ” ಎಂದು ಅವನಿಗೆ ಹೇಳಿದಳು. ಮತ್ತು ಅವನ ‘ಸ್ನೇಹಿತರಾದ’ ಎಲೀಫಜನು, ಬಿಲ್ದದನು, ಮತ್ತು ಚೋಫರನು ಯಾವ ಸಾಂತ್ವನವನ್ನೂ ಒದಗಿಸಲಿಲ್ಲ. ಬದಲಿಗೆ, ಯೋಬನು ಪಾಪಮಾಡಿದ್ದನು ಮತ್ತು ಆದಕಾರಣ ಅವನ ವೇದನೆ ಯೋಗ್ಯವಾದದ್ದಾಗಿತ್ತೆಂದು ಅವರು ವ್ಯಂಗ್ಯವಾಗಿ ಸೂಚಿಸಿದರು.—ಯೋಬ 2:9; 4:7, 8; 8:5, 6; 11:13-15.
ಹೆಚ್ಚು ಕಷ್ಟಾನುಭವದ ಎದುರಿನಲ್ಲೂ ಯೋಬನು ನಂಬಿಗಸ್ತನಾಗಿ ಉಳಿದನು. ಈ ಕಾರಣ, ಯೆಹೋವನು ಕಟ್ಟಕಡೆಗೆ ಯೋಬನಿಗೆ ಕರುಣೆ ತೋರಿಸಿ, ಅವನನ್ನು ಆಶೀರ್ವದಿಸಿದನು. ಯೆಹೋವನು ಇದನ್ನು ಹೇಗೆ ಮಾಡಿದನೆಂಬುದರ ವೃತ್ತಾಂತವು, ಸಮಗ್ರತೆಯನ್ನು ಪಾಲಿಸುವ ದೇವರ ಎಲ್ಲ ಸೇವಕರಿಗೆ, ಸಕಾಲದಲ್ಲಿ ಅವರೂ ಬಹುಮಾನಿಸಲ್ಪಡುವರೆಂಬ ಆಶ್ವಾಸನೆಯನ್ನು ಒದಗಿಸುತ್ತದೆ.
ದೋಷಮುಕ್ತಗೊಳಿಸುವಿಕೆ ಹಾಗೂ ಪುನಸ್ಸ್ಥಾಪನೆ
ಪ್ರಥಮವಾಗಿ ಯೆಹೋವನು, ಎಲೀಫಜನು, ಬಿಲ್ದದನು, ಮತ್ತು ಚೋಫರನನ್ನು ಗದರಿಸಿದನು. ಬಹುಶಃ ಅವರಲ್ಲಿ ಹಿರಿಯವನಾದ ಎಲೀಫಜನನ್ನು ಸಂಬೋಧಿಸುತ್ತಾ, ಆತನು ಹೇಳಿದ್ದು: “ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ. ಈಗ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸನಾದ ಯೋಬನ ಬಳಿಗೆ ಹೋಗಿ ನಿಮ್ಮ ದೋಷಪರಿಹಾರಕ್ಕಾಗಿ ಹೋಮಮಾಡಿರಿ; ನನ್ನ ದಾಸನಾದ ಯೋಬನು ನಿಮ್ಮ ಪಕ್ಷವಾಗಿ ಪ್ರಾರ್ಥನೆ ಮಾಡುವನು.” (ಯೋಬ 42:7, 8) ಇದು ಏನನ್ನು ಅರ್ಥೈಸಿತು ಎಂಬುದನ್ನು ಯೋಚಿಸಿರಿ!
ಯೆಹೋವನು, ಎಲೀಫಜನು, ಬಿಲ್ದದನು, ಮತ್ತು ಚೋಫರನಿಂದ ಗಣನೀಯ ಯಜ್ಞವನ್ನು ಅಗತ್ಯಪಡಿಸಿದ್ದು, ಬಹುಶಃ ಅವರ ಪಾಪದ ತೀವ್ರತೆಯನ್ನು ಅವರಿಗೆ ಮನಗಾಣಿಸುವ ಕಾರಣದಿಂದಲೇ. ‘ದೇವರು ತನ್ನ ಪರಿಚಾರಕರಲ್ಲಿಯೂ ನಂಬಿಕೆಯನ್ನಿಡುವುದಿಲ್ಲ’ವೆಂದು ಮತ್ತು ಯೋಬನು ನಂಬಿಗಸ್ತನಾಗಿದ್ದನೊ ಇಲ್ಲವೊ ಎಂಬುದು ದೇವರಿಗೆ ಅಷ್ಟೊಂದು ಗಣ್ಯವಾದ ವಿಷಯವಾಗಿರಲಿಲ್ಲವೆಂದು ಹೇಳುವ ಮೂಲಕ, ಅವರು ತಿಳಿದೊ ತಿಳಿಯದೆಯೊ ದೇವರನ್ನು ದೂಷಿಸಿದ್ದರು. ದೇವರ ದೃಷ್ಟಿಯಲ್ಲಿ ಯೋಬನು ಮಿಂಚುಹುಳುವಿಗಿಂತ ಹೆಚ್ಚಾಗಿರಲಿಲ್ಲವೆಂದೂ ಎಲೀಫಜನು ಹೇಳಿದನು! (ಯೋಬ 4:18, 19; 22:2, 3) ‘ನನ್ನ ವಿಷಯವಾಗಿ ಯಥಾರ್ಥವಾದದ್ದನ್ನು ನೀವು ಆಡಲಿಲ್ಲ’ವೆಂದು ಯೆಹೋವನು ಹೇಳಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ!
ವಿಷಯವು ಅಷ್ಟುಮಾತ್ರವೇ ಆಗಿರಲಿಲ್ಲ. ಯೋಬನು ತನ್ನ ಸಮಸ್ಯೆಗಳನ್ನು ತಾನೇ ಬರಮಾಡಿಕೊಂಡನೆಂದು ಹೇಳುವ ಮೂಲಕ, ಎಲೀಫಜನು, ಬಿಲ್ದದನು, ಮತ್ತು ಚೋಫರನು ಅವನ ವಿರುದ್ಧ ವೈಯಕ್ತಿಕವಾಗಿ ಪಾಪಗೈದರು. ಅವರ ಆಧಾರರಹಿತ ಆಪಾದನೆಗಳು ಮತ್ತು ಸಹಾನುಭೂತಿಯ ಕೊರತೆಯು, ಯೋಬನನ್ನು ವೈಮನಸುಳ್ಳವನನ್ನಾಗಿಯೂ ಎದೆಗುಂದಿದವನನ್ನಾಗಿಯೂ ಮಾಡಿ, “ಎಷ್ಟರ ವರೆಗೆ ನನ್ನ ಆತ್ಮವನ್ನು ನೋಯಿಸಿ ಮಾತುಗಳಿಂದ ನನ್ನನ್ನು ಜಜ್ಜುತ್ತಿರುವಿರಿ?” ಎಂಬುದಾಗಿ ಕೂಗಿ ಹೇಳುವಂತೆ ಮಾಡಿತು. (ಯೋಬ 10:1; 19:2) ಈಗ ಅವರು ತಮ್ಮ ಪಾಪಗಳಿಗಾಗಿ ಯಜ್ಞವನ್ನು ಯೋಬನ ಬಳಿಗೆ ತರಬೇಕಾಗಿದ್ದ ಕಾರಣ, ಆ ಮೂವರ ಮುಖಗಳ ಮೇಲೆ ಕಾಣಿಸಿಕೊಂಡ ಅಪಮಾನದ ಭಾವಗಳನ್ನು ಊಹಿಸಿಕೊಳ್ಳಿರಿ!
ಆದರೆ ಯೋಬನು ಅವರ ಅವಮಾನವನ್ನು ಕಂಡು ಹಿಗ್ಗಬಾರದಿತ್ತು. ವಾಸ್ತವವಾಗಿ, ತನ್ನ ಆಪಾದಕರ ಪರವಾಗಿ ಅವನು ಪ್ರಾರ್ಥಿಸಬೇಕೆಂದು ಯೆಹೋವನು ಅಗತ್ಯಪಡಿಸಿದನು. ಯೋಬನು ಉಪದೇಶಿಸಲ್ಪಟ್ಟಂತೆಯೇ ಕಾರ್ಯನಡಿಸಿದನು, ಮತ್ತು ಇದಕ್ಕಾಗಿ ಅವನು ಆಶೀರ್ವದಿಸಲ್ಪಟ್ಟನು. ಪ್ರಥಮವಾಗಿ, ಯೆಹೋವನು ಅವನ ಭಯಂಕರವಾದ ರೋಗವನ್ನು ವಾಸಿಮಾಡಿದನು. ತರುವಾಯ, ಯೋಬನ ಸಹೋದರರು, ಸಹೋದರಿಯರು, ಮತ್ತು ಮಾಜಿ ಸ್ನೇಹಿತರು ಅವನನ್ನು ಸಂತೈಸಲು ಬಂದು, “ಪ್ರತಿಯೊಬ್ಬರೂ ಒಂದೊಂದು ವರಹವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಅವನಿಗೆ ಕೊಟ್ಟರು.”a ಅಲ್ಲದೆ, ಯೋಬನಿಗೆ “ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಒಂದು ಸಾವಿರ ಜೋಡಿ ಎತ್ತುಗಳೂ ಒಂದು ಸಾವಿರ ಹೆಣ್ಣುಕತ್ತೆಗಳೂ ಉಂಟಾದವು.”b ಮತ್ತು ಯೋಬನ ಹೆಂಡತಿ ಅವನೊಂದಿಗೆ ರಾಜಿಮಾಡಿಕೊಂಡಳೆಂಬುದು ಸ್ಪಷ್ಟ. ಸಕಾಲದಲ್ಲಿ, ಯೋಬನಿಗೆ ಏಳು ಮಂದಿ ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳಾದರು, ಮತ್ತು ಅವನು ತನ್ನ ವಂಶದ ನಾಲ್ಕು ಸಂತತಿಗಳನ್ನು ನೋಡಿದನು.—ಯೋಬ 42:10-17.
ನಮಗಾಗಿರುವ ಪಾಠಗಳು
ದೇವರ ಆಧುನಿಕ ದಿನದ ಸೇವಕರಿಗೆ ಯೋಬನು ಎದ್ದುಕಾಣುವ ಮಾದರಿಯನ್ನಿಟ್ಟನು. ಅವನು “ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದು, “ನನ್ನ ದಾಸ”ನೆಂದು ಕರೆಯಲು ಯೆಹೋವನು ಹೆಮ್ಮೆಪಟ್ಟುಕೊಂಡ ವ್ಯಕ್ತಿಯಾಗಿದ್ದನು. (ಯೋಬ 1:8; 42:7, 8) ಆದರೆ, ಯೋಬನು ಪರಿಪೂರ್ಣನಾಗಿದ್ದನೆಂಬುದನ್ನು ಇದು ಅರ್ಥೈಸಲಿಲ್ಲ. ಅವನು ತನ್ನ ಸಂಕಷ್ಟದ ಒಂದು ಹಂತದಲ್ಲಿ, ದೇವರು ತನ್ನ ವಿಪತ್ತಿಗೆ ಕಾರಣನಾಗಿದ್ದನೆಂದು ತಪ್ಪಾಗಿ ಭಾವಿಸಿದನು. ಮನುಷ್ಯನೊಂದಿಗೆ ದೇವರು ವ್ಯವಹರಿಸುವ ವಿಧವನ್ನೂ ಅವನು ಟೀಕಿಸಿದನು. (ಯೋಬ 27:2; 30:20, 21) ಮತ್ತು ಅವನು ದೇವರ ನೀತಿಗಿಂತಲೂ ಹೆಚ್ಚಾಗಿ ತನ್ನ ಸ್ವಂತ ನೀತಿಯನ್ನು ಪ್ರಕಟಪಡಿಸಿದನು. (ಯೋಬ 32:2) ಆದರೆ ಸೃಷ್ಟಿಕರ್ತನನ್ನು ತಿರಸ್ಕರಿಸಲು ಯೋಬನು ನಿರಾಕರಿಸಿದನು, ಮತ್ತು ದೇವರಿಂದ ಬಂದ ತಿದ್ದುಪಾಟನ್ನು ದೈನ್ಯವಾಗಿ ಸ್ವೀಕರಿಸಿಕೊಂಡನು. “ನಾನು ತಿಳಿಯದ ಸಂಗತಿಗಳನ್ನೂ ನನಗೆ ಗೊತ್ತಿಲ್ಲದೆ ಬುದ್ಧಿಗೆ ಮೀರಿರುವ ಅದ್ಭುತಗಳನ್ನೂ ಕುರಿತು ಮಾತಾಡಿದ್ದೇನೆ, ಆದಕಾರಣ [ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ” ಎಂದು ಅವನು ಒಪ್ಪಿಕೊಂಡನು.—ಯೋಬ 42:3, 6.
ಪರೀಕ್ಷೆಯ ಸಮಯದಲ್ಲಿ ನಾವು ಸಹ ಅನುಚಿತವಾದ ರೀತಿಯಲ್ಲಿ ಯೋಚಿಸಬಹುದು, ಮಾತಾಡಬಹುದು, ಇಲ್ಲವೆ ವರ್ತಿಸಬಹುದು. (ಹೋಲಿಸಿ ಪ್ರಸಂಗಿ 7:7.) ಹಾಗಿದ್ದರೂ, ದೇವರಿಗಾಗಿರುವ ನಮ್ಮ ಪ್ರೀತಿಯು ಆಳವಾಗಿರುವಲ್ಲಿ, ತೊಂದರೆಗಳನ್ನು ಅನುಭವಿಸುವಂತೆ ಆತನು ಅನುಮತಿಸುವ ಕಾರಣ ನಾವು ಆತನ ವಿರುದ್ಧ ದಂಗೆಯೇಳುವುದಿಲ್ಲ ಇಲ್ಲವೆ ಅಸಮಾಧಾನಗೊಳ್ಳುವುದಿಲ್ಲ. ಬದಲಿಗೆ, ನಾವು ನಮ್ಮ ಸಮಗ್ರತೆಯನ್ನು ಕಾಪಾಡಿಕೊಂಡು, ಕಟ್ಟಕಡೆಗೆ ಮಹಾ ಆಶೀರ್ವಾದವನ್ನು ಪಡೆದುಕೊಳ್ಳುವೆವು. ಕೀರ್ತನೆಗಾರನು ಯೆಹೋವನ ಕುರಿತು ಹೇಳಿದ್ದು: “ಯಾರು ನಿಷ್ಠಾವಂತರಾಗಿದ್ದಾರೋ ಅವರೊಂದಿಗೆ ನೀನು ನಿಷ್ಠೆಯಿಂದ ನಡೆದುಕೊಳ್ಳುವಿ.”—ಕೀರ್ತನೆ 18:25, NW.
ಯೋಬನು ಆರೋಗ್ಯವಂತ ಸ್ಥಿತಿಗೆ ಪುನಸ್ಸ್ಥಾಪಿಸಲ್ಪಡುವ ಮೊದಲು, ಅವನ ವಿರುದ್ಧ ಪಾಪಮಾಡಿದವರ ಪರವಾಗಿ ಪ್ರಾರ್ಥಿಸುವಂತೆ ಯೆಹೋವನು ಅವಶ್ಯಪಡಿಸಿದನು. ನಮಗಾಗಿ ಎಂತಹ ಉತ್ತಮ ಮಾದರಿ! ನಮ್ಮ ಸ್ವಂತ ಪಾಪಗಳು ಕ್ಷಮಿಸಲ್ಪಡುವ ಮೊದಲು ನಮ್ಮ ವಿರುದ್ಧ ಪಾಪಮಾಡುವವರನ್ನು ನಾವು ಕ್ಷಮಿಸಬೇಕೆಂದು ಯೆಹೋವನು ಕೇಳಿಕೊಳ್ಳುತ್ತಾನೆ. (ಮತ್ತಾಯ 6:12; ಎಫೆಸ 4:32) ಇತರರನ್ನು ಕ್ಷಮಿಸಲು ಸಮಂಜಸವಾದ ಕಾರಣ ಇರುವುದಾದರೂ ನಾವು ಕ್ಷಮಿಸಲು ಸಿದ್ಧರಾಗಿರದಿದ್ದಲ್ಲಿ, ಯೆಹೋವನು ನಮ್ಮ ಕಡೆಗೆ ಕರುಣಾಮಯಿಯಾಗಿರುವಂತೆ ನಾವು ನಿರೀಕ್ಷಿಸುವುದು ಯೋಗ್ಯವಾಗಿರಸಾಧ್ಯವೊ?—ಮತ್ತಾಯ 18:21-35.
ನಾವೆಲ್ಲರೂ ಆಗಾಗ್ಗೆ ಪರೀಕ್ಷೆಗಳನ್ನು ಎದುರಿಸುತ್ತೇವೆ. (2 ತಿಮೊಥೆಯ 3:12) ಆದರೂ, ಯೋಬನಂತೆ ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳಬಲ್ಲೆವು. ಹಾಗೆ ಮಾಡುವ ಮೂಲಕ, ನಾವು ದೊಡ್ಡ ಬಹುಮಾನವನ್ನು ಪಡೆದುಕೊಳ್ಳುವೆವು. ಯಾಕೋಬನು ಬರೆದುದು: “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.”—ಯಾಕೋಬ 5:11.
[ಅಧ್ಯಯನ ಪ್ರಶ್ನೆಗಳು]
a “ಒಂದು ವರಹ”ದ (ಹೀಬ್ರೂ, ಕೆಸೀಟಾಹ್) ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ‘ನೂರು ವರಹ’ದಷ್ಟು ಹಣದಿಂದ, ಯಾಕೋಬನ ದಿನದಲ್ಲಿ ದೊಡ್ಡ ಗಾತ್ರದ ಜಮೀನನ್ನು ಖರೀದಿಸಸಾಧ್ಯವಿತ್ತು. (ಯೆಹೋಶುವ 24:32) ಆದುದರಿಂದ, ಪ್ರತಿಯೊಬ್ಬ ಭೇಟಿಕಾರನಿಂದ ಕೊಡಲ್ಪಟ್ಟ “ಒಂದು ವರಹ”ವು ಕನಿಷ್ಠ ಕೊಡುಗೆಗಿಂತ ಹೆಚ್ಚಾಗಿದ್ದಿರಬಹುದು.
b ಕತ್ತೆಗಳ ಲಿಂಗವು ಉಲ್ಲೇಖಿಸಲ್ಪಟ್ಟಿರುವುದು, ಸಂತಾನವೃದ್ಧಿಮಾಡುವ ಪ್ರಾಣಿಗಳೋಪಾದಿ ಅವುಗಳ ಮೌಲ್ಯದ ಕಾರಣದಿಂದಿರಬಹುದು.