ನೀವು ಸಹಿಸಿಕೊಳ್ಳುತ್ತಿದ್ದೀರೋ?
1 “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 4) ಯೋಹಾನನ ಆತ್ಮಿಕ ಮಕ್ಕಳು ತೋರಿಸಿದ ಸಹನೆಯು ಅವನಿಗೆ ಸಂತೋಷವನ್ನು ಉಂಟುಮಾಡಿತು. ಹಾಗೆಯೇ, ನಮ್ಮ ಸ್ವರ್ಗೀಯ ತಂದೆಗೂ ತನ್ನ ಲಕ್ಷಾಂತರ ಭಾವೀ ಮಕ್ಕಳು ‘ಸತ್ಯವನ್ನನುಸರಿಸಿ ನಡೆಯುತ್ತಾ’ ಹೋಗುವುದನ್ನು ನೋಡುವಾಗ ಎಷ್ಟು ಸಂತೋಷವಾಗುತ್ತಿರಬೇಕು!—ಜ್ಞಾನೋ. 23:15, 16; 27:11.
2 ದೇವಜನರಲ್ಲಿ ಅಧಿಕಾಂಶ ಮಂದಿಯು ಕ್ರೈಸ್ತ ಚಟುವಟಿಕೆಯಲ್ಲಿ ತುಂಬ ಹುರುಪಿನಿಂದ ಕೆಲಸಮಾಡುತ್ತಿರುವುದಾದರೂ, ಕೆಲವರು ಬರಬರುತ್ತಾ ನಿಧಾನಿಗಳಾಗಿಬಿಟ್ಟಿದ್ದಾರೆ. ಇವರು ಮೊದಮೊದಲು ಸತ್ಯವನ್ನು ಕಲಿಯುತ್ತಿರುವಾಗ ಬಹಳ ಚುರುಕಾಗಿ ಕೆಲಸಮಾಡಿದ್ದಿರಬಹುದು. ಆದರೆ ಕಾಲಗಳು ಉರುಳಿದಂತೆ, ಅವರು ಸ್ವಲ್ಪವೇ ಸಮಯಕ್ಕಾಗಿ ಇಲ್ಲವೇ ಅಪರೂಪಕ್ಕೆ ಒಮ್ಮೆ ಸೇವೆಗೆ ಹೋಗುವುದನ್ನು ರೂಢಿಮಾಡಿಕೊಂಡಿದ್ದಾರೆ.
3 ಕೆಲವರಿಗೆ ಆರೋಗ್ಯ ಸಮಸ್ಯೆಗಳಿರುವುದರಿಂದ ಮತ್ತು ಇನ್ನಿತರರು ವೃದ್ಧರಾಗುತ್ತಿರುವುದರಿಂದ ಸಾಕ್ಷಿಕಾರ್ಯದಲ್ಲಿ ಮೊದಲಿನಷ್ಟು ಭಾಗವಹಿಸಲು ಸಾಧ್ಯವಾಗದೇ ಇರಬಹುದು. ಆದರೂ, ಅವರ ಸಹನೆಯು ಮೆಚ್ಚತಕ್ಕದ್ದೇ. ಏಕೆಂದರೆ ಅವರು ತಮ್ಮ ಕೈಲಾದಷ್ಟನ್ನು ಮಾಡುತ್ತಿದ್ದಾರೆ. ಆದರೆ ದೇವರಿಗೆ ತಮ್ಮ ಜೀವಿತವನ್ನು ಸಮರ್ಪಿಸಿಕೊಂಡಿರುವ ಪ್ರತಿಯೊಬ್ಬರೂ ತಮ್ಮನ್ನು ಹೀಗೆ ಕೇಳಿಕೊಳ್ಳಬೇಕು: ‘ರಾಜ್ಯದ ಅಭಿರುಚಿಗಳಿಗೆ ಸ್ವಲ್ಪವೇ ಸಮಯವನ್ನು ಕೊಡುವಷ್ಟರ ಮಟ್ಟಿಗೆ ನಾನು ವೈಯಕ್ತಿಕ ವಿಷಯಗಳಲ್ಲಿ ಮುಳುಗಿಹೋಗಿದ್ದೇನೋ? ನಾನೇನಾದರೂ “ಉಗುರುಬೆಚ್ಚಗೆ” ಆಗಿಬಿಟ್ಟಿದ್ದೇನೋ ಇಲ್ಲವೇ ರಾಜ್ಯದ ಅಭಿರುಚಿಗಳಿಗಾಗಿ ನಾನು ಇನ್ನೂ “ಹೆಣಗಾಡು”ತ್ತಿದ್ದೇನೋ?’ (ಪ್ರಕ. 3:15, 16; ಲೂಕ 13:24) ನಾವು ಏನು ಮಾಡುತ್ತಿದ್ದೇವೆ ಎಂಬುದರ ಕುರಿತಾಗಿ ನಾವೆಲ್ಲರೂ ಪ್ರಾರ್ಥನಾಪೂರ್ವಕವಾಗಿ ಚಿಂತನೆಮಾಡಿ, ಅಗತ್ಯಕ್ಕೆ ತಕ್ಕಂತೆ ಸುಧಾರಣೆಯನ್ನು ಮಾಡೋಣ. ಮತ್ತು ‘ಪ್ರಭಾವ ಮಾನ ಮನಶ್ಯಾಂತಿಯನ್ನು’ ತಾನು ಕೊಡುತ್ತೇನೆಂದು ಯೆಹೋವನು ವಾಗ್ದಾನಿಸಿದ್ದಾನೆ ಎಂಬುದನ್ನು ಸಹ ನಾವು ಮನಸ್ಸಿನಲ್ಲಿಟ್ಟುಕೊಳ್ಳೋಣ.—ರೋಮಾ. 2:10.
4 ಹೇಗೆ ಸಹಿಸಿಕೊಳ್ಳಬಹುದು? ಸಹಿಸಿಕೊಳ್ಳುವಂತೆ ಯೇಸುವಿಗೆ ಯಾವುದು ಸಹಾಯಮಾಡಿತು? ಪೌಲನು ಇದಕ್ಕೆ ವಿವರಣೆಯನ್ನು ನೀಡಿದ್ದು: “ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ.” (ಇಬ್ರಿ. 12:1-3) ಯೇಸುವಿನ ಮುಂದೆ ಇಡಲ್ಪಟ್ಟಿದ್ದ ಸಂತೋಷವು, ಅವನು ಎದುರಿಸಿದ ತಾತ್ಕಾಲಿಕ ಪರೀಕ್ಷೆಗಳಿಗಿಂತಲೂ ಹೆಚ್ಚು ಪ್ರಧಾನವಾದದ್ದಾಗಿತ್ತು. ನಾವು ಕೂಡ ನಮ್ಮ ಮುಂದೆ ಇಡಲ್ಪಟ್ಟಿರುವ ಸಂತೋಷವನ್ನು ಮನಸ್ಸಿನಲ್ಲಿಟ್ಟುಕೊಳ್ಳುವಾಗ, ಸಹಿಸಿಕೊಳ್ಳುವಂತೆ ಅದು ನಮ್ಮನ್ನು ಶಕ್ತಗೊಳಿಸುತ್ತದೆ. (ಪ್ರಕ. 21:4, 7; 22:12) ವೈಯಕ್ತಿಕ ಅಧ್ಯಯನದ ಮೂಲಕ, ಕೂಟಗಳಿಗೆ ಕ್ರಮವಾಗಿ ಹೋಗುವ ಮೂಲಕ, ಮತ್ತು ಎಡೆಬಿಡದೆ ಪ್ರಾರ್ಥಿಸುವ ಮೂಲಕ ನಮಗೆ ಯೆಹೋವನು ಬಲವನ್ನು ನೀಡುವಂತೆ ನಾವು ಆತನಿಗೆ ಮೊರೆಹೋಗುವುದಾದರೆ, ಆತನು ನಮಗೆ ಕೊಟ್ಟಿರುವ ಕಾರ್ಯವನ್ನು ಮುಂದುವರಿಸುತ್ತಾ ಹೋಗಲು ಶಕ್ತರಾಗುವೆವು.
5 ತನ್ನ ನಿಷ್ಠಾವಂತ ಸೇವಕರು ತೋರಿಸುವ ಸಹನೆಯನ್ನು ನೋಡಿ ಯೆಹೋವನು ಉಲ್ಲಾಸಿಸುತ್ತಾನೆ. ಆದುದರಿಂದ ನಾವು ‘ಸತ್ಯವನ್ನನುಸರಿಸಿ ನಡೆಯುತ್ತಾ’ ಹೋಗುವ ಮೂಲಕ ಆತನ ಮನಸ್ಸಿಗೆ ಇನ್ನೂ ಹೆಚ್ಚಿನ ಸಂತೋಷವನ್ನು ಉಂಟುಮಾಡೋಣ.