ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಟ್ರ್ಯಾಕ್ಟ್ಗಳನ್ನು ಉಪಯೋಗಿಸಿರಿ
1 ಪರಿಣಾಮಕಾರಿಯಾದ ರೀತಿಯಲ್ಲಿ ಸಾಕ್ಷಿಯನ್ನು ಕೊಡಲು ಮೊದಲಾಗಿ ನೀವೇ ಸಂಭಾಷಣೆಯನ್ನು ಆರಂಭಿಸಬೇಕು ಎಂಬ ಸಂಗತಿಯನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ? ಆದರೆ ಒಬ್ಬ ವ್ಯಕ್ತಿಯ ಆಸಕ್ತಿಯನ್ನು ಸೆರೆಹಿಡಿದು, ಅವನನ್ನು ಸಂಭಾಷಣೆಯಲ್ಲಿ ಒಳಗೂಡಿಸಲು ಏನನ್ನು ಹೇಳಬೇಕು ಎಂಬುದೇ ಒಂದು ಪಂಥಾಹ್ವಾನವಾಗಿದೆ. ಇದನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಹೇಗೆ ಮಾಡಸಾಧ್ಯವಿದೆ?
2 ಸಂದರ್ಭೋಚಿತವಾದ ಕೆಲವೇ ಮಾತುಗಳನ್ನು ಉಪಯೋಗಿಸಿ, ನಮ್ಮ ಬೈಬಲ್ ಆಧಾರಿತ ಟ್ರ್ಯಾಕ್ಟ್ಗಳಲ್ಲಿ ಒಂದನ್ನು ನೀಡುವ ಮೂಲಕ ಸಂಭಾಷಣೆಗಳನ್ನು ಆರಂಭಿಸಸಾಧ್ಯವಿದೆ ಎಂಬುದು ಅನೇಕ ಪ್ರಚಾರಕರ ಅನುಭವವಾಗಿದೆ. ಟ್ರ್ಯಾಕ್ಟ್ಗಳ ಶೀರ್ಷಿಕೆಗಳು ಗಮನಸೆಳೆಯುವಂತಿದ್ದು, ಅವುಗಳಲ್ಲಿರುವ ಚಿತ್ರಗಳು ವರ್ಣರಂಜಿತವಾಗಿವೆ ಹಾಗೂ ಕಣ್ಸೆಳೆಯುವಂತಿವೆ. ಟ್ರ್ಯಾಕ್ಟ್ಗಳು ತುಂಬ ಚಿಕ್ಕದಾಗಿರುವುದರಿಂದ, ನಾನು ಇಷ್ಟೊಂದನ್ನು ಓದಬೇಕಲ್ಲಾ ಎಂಬ ಅನಿಸಿಕೆಯನ್ನು ಒಬ್ಬ ವ್ಯಕ್ತಿಯಲ್ಲಿ ಅವು ಉಂಟುಮಾಡುವುದಿಲ್ಲ. ಆದರೂ, ಈ ಟ್ರ್ಯಾಕ್ಟ್ಗಳಲ್ಲಿರುವ ಚುಟುಕಾದ ಸಂದೇಶಗಳು ಜನರ ಆಸಕ್ತಿಯನ್ನು ಕೆರಳಿಸುತ್ತವೆ. ಆದುದರಿಂದ, ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲು ಇವುಗಳನ್ನು ಉಪಯೋಗಿಸಸಾಧ್ಯವಿದೆ.
3 ಒಬ್ಬ ಸಾಕ್ಷಿಯ ವೈಯಕ್ತಿಕ ಅನಿಸಿಕೆ ಹೀಗಿದೆ: “ಈ ಗಡಿಬಿಡಿಯ ಲೋಕದಲ್ಲಿ ಜನರಿಗೆ ಸ್ವಲ್ಪವೂ ಬಿಡುವೇ ಇಲ್ಲದಿರುವುದರಿಂದ, ಅನೇಕರು ಓದುವುದಕ್ಕಾಗಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವುದಿಲ್ಲ. ಈ ಟ್ರ್ಯಾಕ್ಟ್ಗಳು ಚಿಕ್ಕದಾಗಿರುವುದರಿಂದ ಜನರು ಅದನ್ನು ನೋಡಿದಾಕ್ಷಣ ನಿರಾಕರಿಸುವುದಿಲ್ಲ. ಆದರೆ ಅದೇ ಸಮಯದಲ್ಲಿ, ಅವು ಚಿಕ್ಕದಾಗಿದ್ದರೂ ಜನರಿಗೆ ಒಂದು ಪ್ರಾಮುಖ್ಯವಾದ ಸಂದೇಶವನ್ನು ಮುಟ್ಟಿಸುತ್ತವೆ. ನಾನು ಸಹ ಅನೇಕ ಟ್ರ್ಯಾಕ್ಟ್ಗಳನ್ನು ಓದಿದ ನಂತರವೇ ಸತ್ಯವನ್ನು ಕಲಿತೆ.” ಈ ಚುಟುಕಾದ, ಮುದ್ರಿತ ಸಂದೇಶಗಳಲ್ಲಿ ವಿವರಿಸಲ್ಪಟ್ಟಿರುವ ದೇವರ ವಾಕ್ಯಕ್ಕೆ ಇರುವ ಶಕ್ತಿಯ ಬಗ್ಗೆ ಎಂದೂ ಸಂಶಯಪಡದಿರಿ.—ಇಬ್ರಿ. 4:12.
4 ನಾಲ್ಕು ಸುಲಭ ಹೆಜ್ಜೆಗಳು: ಸರಳವಾದ ಒಂದು ಪ್ರಸ್ತಾಪವನ್ನು ಉಪಯೋಗಿಸುವ ಮೂಲಕ ಅನೇಕರು ಯಶಸ್ಸನ್ನು ಪಡೆದುಕೊಂಡಿದ್ದಾರೆ. (1) ಒಬ್ಬ ವ್ಯಕ್ತಿಯನ್ನು ಸಮೀಪಿಸಿದಾಗ, ಕೆಲವು ಟ್ರ್ಯಾಕ್ಟ್ಗಳನ್ನು ತೋರಿಸಿ, ಇವುಗಳಲ್ಲಿ ಅವನಿಗೆ ಯಾವುದು ಇಷ್ಟವೆಂದು ಕೇಳಿರಿ. (2) ಆ ವ್ಯಕ್ತಿಯು ಒಂದು ಟ್ರ್ಯಾಕ್ಟನ್ನು ಆರಿಸಿಕೊಂಡ ಬಳಿಕ, ಅದರಲ್ಲಿರುವ ಮುಖ್ಯಾಂಶವನ್ನು ಎತ್ತಿತೋರಿಸುವಂತಹ ಹಾಗೂ ನೀವು ಮುಂಚೆಯೇ ಸಿದ್ಧಪಡಿಸಿಕೊಂಡಿರುವ ಒಂದು ಪ್ರಶ್ನೆಯನ್ನು ಅವನಿಗೆ ಕೇಳಿರಿ. (3) ಆ ಪ್ರಶ್ನೆಗೆ ಉತ್ತರವಾಗಿ, ಟ್ರ್ಯಾಕ್ಟ್ನಿಂದ ಸೂಕ್ತವಾದ ಪ್ಯಾರಗ್ರಾಫ್ ಅಥವಾ ಶಾಸ್ತ್ರವಚನವನ್ನು ಓದಿ ತಿಳಿಸಿರಿ. (4) ಆ ವ್ಯಕ್ತಿಯು ಒಳ್ಳೆಯ ಪ್ರತಿಕ್ರಿಯೆ ತೋರಿಸುವಲ್ಲಿ, ಟ್ರ್ಯಾಕ್ಟ್ನ ಚರ್ಚೆಯನ್ನು ಮುಂದುವರಿಸಿರಿ. ಇಲ್ಲದಿದ್ದರೆ ಸೃಷ್ಟಿ (ಇಂಗ್ಲಿಷ್) ಪುಸ್ತಕದ 16-20ನೆಯ ಅಧ್ಯಾಯಗಳಲ್ಲಿರುವ ಸೂಕ್ತವಾದ ವಿಷಯವೊಂದನ್ನು ತೋರಿಸಿರಿ. ಹೀಗೆ ಮಾಡುವ ಮೂಲಕ ನೀವು ನೇರವಾಗಿ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲು ಶಕ್ತರಾಗುವಿರಿ. ಈ ಟ್ರ್ಯಾಕ್ಟ್ಗಳಲ್ಲಿ ನಾಲ್ಕು ಟ್ರ್ಯಾಕ್ಟ್ಗಳನ್ನು ಉಪಯೋಗಿಸುವಾಗ ಏನು ಹೇಳಬೇಕು ಎಂಬ ವಿಷಯದಲ್ಲಿ ಮುಂದಾಗಿ ತಯಾರಿಮಾಡಲು, ಈ ಕೆಳಗಿನ ಸಲಹೆಗಳು ನಿಮಗೆ ಸಹಾಯ ಮಾಡುವವು.
5 “ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ?” ಎಂಬ ಟ್ರ್ಯಾಕ್ಟ್ನ ಶೀರ್ಷಿಕೆಯನ್ನೇ ಒಂದು ಪ್ರಶ್ನೆಯಾಗಿ ಉಪಯೋಗಿಸಬಹುದು.
◼ ನೀವು ಯಾರೊಂದಿಗೆ ಮಾತಾಡುತ್ತಿದ್ದೀರೋ ಆ ವ್ಯಕ್ತಿಯು ನಿಮ್ಮ ಪ್ರಶ್ನೆಗೆ, “ದೇವರು ಆಳುತ್ತಾನೆ” ಅಥವಾ “ನನಗೆ ಗೊತ್ತಿಲ್ಲ” ಎಂದು ಉತ್ತರ ಕೊಡಬಹುದು. ಆಗ 2ನೆಯ ಪುಟದಲ್ಲಿರುವ ಆರಂಭದ ಎರಡು ವಾಕ್ಯಗಳನ್ನು ಹಾಗೂ 3ನೆಯ ಪುಟದಲ್ಲಿರುವ ಮೊದಲ ಪ್ಯಾರಗ್ರಾಫನ್ನು ಓದಿರಿ. 1 ಯೋಹಾನ 5:19 ಮತ್ತು ಪ್ರಕಟನೆ 12:9ರಲ್ಲಿರುವ ವಿಷಯವನ್ನು ಸ್ಪಷ್ಟವಾಗಿ ತೋರಿಸಿರಿ. ಪಿಶಾಚನಾದ ಸೈತಾನನು ಅಸ್ತಿತ್ವದಲ್ಲಿದ್ದಾನೆಂಬುದನ್ನು ಈ ವ್ಯಕ್ತಿಯು ನಂಬಲಿ ಅಥವಾ ನಂಬದಿರಲಿ ಅಥವಾ ಇಡೀ ಲೋಕವು ಸೈತಾನನ ಪ್ರಭಾವದ ಕೆಳಗಿದೆ ಎಂಬ ವಾಸ್ತವಾಂಶವನ್ನು ಒಪ್ಪಿಕೊಳ್ಳಲಿ ಒಪ್ಪಿಕೊಳ್ಳದಿರಲಿ, ನೀವು ನಿಮ್ಮ ಸಂಭಾಷಣೆಯನ್ನು ಮುಂದುವರಿಸಬಹುದು. ಇದಕ್ಕಾಗಿ “ಲೋಕದ ಪರಿಸ್ಥಿತಿಗಳಿಂದ ಒಂದು ಸುಳಿವು” ಎಂಬ ಉಪಶೀರ್ಷಿಕೆಯ ಕೆಳಗಿರುವ ತರ್ಕಸರಣಿಯನ್ನು ಉಪಯೋಗಿಸಬಹುದು. ಆಸಕ್ತಿಯು ತೋರಿಸಲ್ಪಡುವಲ್ಲಿ, ಟ್ರ್ಯಾಕ್ಟ್ನ 3 ಮತ್ತು 4ನೆಯ ಪುಟಗಳಲ್ಲಿರುವ ಅಂಶಗಳನ್ನು ಉಪಯೋಗಿಸುತ್ತಾ, ಪಿಶಾಚನು ಎಲ್ಲಿಂದ ಬಂದನು ಎಂಬುದನ್ನು ವಿವರಿಸುತ್ತೇನೆಂದು ಅವನಿಗೆ ಹೇಳಿರಿ.
6 “ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು?” ಎಂಬ ಟ್ರ್ಯಾಕ್ಟ್ ತತ್ಕ್ಷಣವೇ ಆಸಕ್ತಿಯನ್ನು ಕೆರಳಿಸಬಹುದು. ಹೀಗೆ ಕೇಳುವ ಮೂಲಕ ನೀವು ಸಂಭಾಷಣೆಯನ್ನು ಆರಂಭಿಸಬಹುದು:
◼ “ನಮ್ಮ ಸತ್ತ ಪ್ರಿಯ ಜನರನ್ನು ನಾವು ಪುನಃ ಎಂದಾದರೂ ನೋಡಬಹುದೆಂದು ನೀವು ನೆನಸುತ್ತೀರೊ?” ಈ ಪ್ರಶ್ನೆಗೆ ಆ ವ್ಯಕ್ತಿಯು ಉತ್ತರಿಸಿದ ಬಳಿಕ, ಟ್ರ್ಯಾಕ್ಟ್ನ 4ನೆಯ ಪುಟದಲ್ಲಿರುವ ಎರಡನೆಯ ಪ್ಯಾರಗ್ರಾಫ್ನ ಕಡೆಗೆ ಅವರ ಗಮನ ಸೆಳೆದು, ಯೋಹಾನ 5:28, 29ನ್ನು ಓದಿರಿ. ತದನಂತರ, ಟ್ರ್ಯಾಕ್ಟ್ನಲ್ಲಿರುವ ಮೊದಲ ಉಪಶೀರ್ಷಿಕೆಯ ಕೆಳಗಿರುವ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಈ ವಚನವು ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿರಿ. ನಾವಿಬ್ಬರೂ ಒಟ್ಟಿಗೆ ಈ ವಿಚಾರವನ್ನು ಚರ್ಚಿಸೋಣ ಎಂದು ಅವರಿಗೆ ಹೇಳಿರಿ.
7 “ಕುಟುಂಬ ಜೀವನವನ್ನು ಆನಂದಿಸಿರಿ” ಎಂಬ ಟ್ರ್ಯಾಕ್ಟ್ ಲೋಕವ್ಯಾಪಕವಾಗಿ ಎಲ್ಲ ಕುಟುಂಬಗಳಿಗೆ ಆಕರ್ಷಕವಾಗಿರುತ್ತದೆ. ಅದನ್ನು ಉಪಯೋಗಿಸುತ್ತಾ ನೀವು ಹೀಗೆ ಹೇಳಸಾಧ್ಯವಿದೆ:
◼ “ಇಂದು ಕುಟುಂಬದ ಮೇಲೆ ತುಂಬ ಒತ್ತಡವಿದೆ ಎಂಬುದನ್ನು ನೀವು ಒಪ್ಪಿಕೊಳ್ಳಬಹುದು. ಕುಟುಂಬದ ಸದಸ್ಯರ ನಡುವೆಯಿರುವ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸಲು ಏನು ಮಾಡಬಹುದು ಎಂದು ನೀವು ನೆನಸುತ್ತೀರಿ?” ಆ ವ್ಯಕ್ತಿಯು ಉತ್ತರ ನೀಡಿದ ಬಳಿಕ, 6ನೆಯ ಪುಟದಲ್ಲಿರುವ ಮೊದಲ ಪ್ಯಾರಗ್ರಾಫ್ನಲ್ಲಿ ಕಂಡುಬರುವ ಅಂಶಗಳ ಕಡೆಗೆ ಅವರ ಗಮನವನ್ನು ಸೆಳೆಯಿರಿ. ಈ ಟ್ರ್ಯಾಕ್ಟ್ನ 4 ಮತ್ತು 5ನೆಯ ಪುಟಗಳಲ್ಲಿ ಸೂಚಿಸಲ್ಪಟ್ಟಿರುವ ಶಾಸ್ತ್ರವಚನಗಳಲ್ಲಿ ಒಂದನ್ನು ಆರಿಸಿಕೊಂಡು, ಅದರ ಅರ್ಥವೇನು ಎಂಬುದನ್ನು ವಿವರಿಸಿರಿ. ತದನಂತರ ಉಚಿತವಾದ ಬೈಬಲ್ ಅಭ್ಯಾಸ ಕ್ರಮದ ಕುರಿತಾಗಿ ತಿಳಿಸಿರಿ.
8 “ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ” ಎಂಬ ಟ್ರ್ಯಾಕ್ಟನ್ನು ಈ ನಿರೂಪಣೆಯೊಂದಿಗೆ ಉಪಯೋಗಿಸಬಹುದು:
◼ “ಹೆಚ್ಚಿನ ಜನರು ಕಾಯಿನ ಮತ್ತು ಹೇಬೆಲರ ಕಥೆಯನ್ನು ಕೇಳಿಸಿಕೊಂಡಿದ್ದಾರೆ. ಈ ಕಥೆಯು, ಬೈಬಲಿನ ಪ್ರಥಮ ಪುಸ್ತಕವಾದ ಆದಿಕಾಂಡದಲ್ಲಿದೆ. ಅದೇ ಪುಸ್ತಕದಲ್ಲಿ ಕಾಯಿನನ ಹೆಂಡತಿಯ ಕುರಿತಾಗಿಯೂ ತಿಳಿಸಲ್ಪಟ್ಟಿದೆ. ಕಾಯಿನನ ಹೆಂಡತಿಯು ಎಲ್ಲಿಂದ ಬಂದಳು ಎಂದು ನೀವು ಎಂದಾದರೂ ಕುತೂಹಲಪಟ್ಟಿದ್ದೀರೊ?” ಇದಕ್ಕೆ ಉತ್ತರವನ್ನು ನೀಡಲು ಈ ಟ್ರ್ಯಾಕ್ಟ್ನ 2ನೆಯ ಪುಟದಲ್ಲಿರುವ ಕೊನೆಯ ಪ್ಯಾರಗ್ರಾಫನ್ನು ಉಪಯೋಗಿಸಿರಿ. ಇದಾದ ಮೇಲೆ, ನಮ್ಮ ಮುಂದೆ ಯಾವ ರೀತಿಯ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ ಎಂಬುದರ ಕುರಿತು ಬೈಬಲಿನ ಪ್ರಮುಖ ಹೇಳಿಕೆಗಳನ್ನು ಸಹ ಈ ಟ್ರ್ಯಾಕ್ಟ್ ಚರ್ಚಿಸುತ್ತದೆ ಎಂಬುದನ್ನು ವಿವರಿಸಿರಿ. 5ನೆಯ ಪುಟದಲ್ಲಿರುವ ಮೂರನೆಯ ಪ್ಯಾರಗ್ರಾಫ್ನಿಂದ ಆರಂಭಿಸಿ, ಚರ್ಚೆಯನ್ನು ಮುಂದುವರಿಸಿರಿ. ಚರ್ಚಿಸುವಾಗ ಆಧಾರವಾಗಿ ಕೊಡಲ್ಪಟ್ಟಿರುವ ವಚನಗಳನ್ನು ಸಹ ಉಪಯೋಗಿಸಿರಿ.
9 ಬೈಬಲ್ ಟ್ರ್ಯಾಕ್ಟ್ಗಳನ್ನು ಹಂಚುವುದು, ಸುವಾರ್ತೆಯನ್ನು ಪ್ರಸ್ತುತಪಡಿಸುವ ಒಂದು ಪರಿಣಾಮಕಾರಿ ವಿಧವಾಗಿದೆ ಎಂಬುದು ದೀರ್ಘಸಮಯದ ಉಪಯೋಗದಿಂದ ರುಜುವಾಗಿದೆ. ನೀವು ಹೋಗುವಲ್ಲೆಲ್ಲಾ ಇವುಗಳನ್ನು ಸುಲಭವಾಗಿ ಕೊಂಡೊಯ್ಯಲು ಸಾಧ್ಯವಿರುವುದರಿಂದ, ನೀವು ಮನೆಯಿಂದ ಮನೆಯ ಚಟುವಟಿಕೆಯಲ್ಲಿರುವಾಗ ಮತ್ತು ಅನೌಪಚಾರಿಕವಾಗಿ ಸಾಕ್ಷಿನೀಡುತ್ತಿರುವಾಗ ಈ ಟ್ರ್ಯಾಕ್ಟ್ಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಸಾಧ್ಯವಿದೆ. ನಮ್ಮ ಶುಶ್ರೂಷೆಯನ್ನು ಪೂರೈಸುವುದರಲ್ಲಿ ಟ್ರ್ಯಾಕ್ಟ್ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಯಾವಾಗಲೂ ಬೇರೆ ಬೇರೆ ರೀತಿಯ ಟ್ರ್ಯಾಕ್ಟ್ಗಳನ್ನು ತೆಗೆದುಕೊಂಡುಹೋಗಲು ಮರೆಯದಿರಿ. ಮತ್ತು ಸಂಭಾಷಣೆಗಳನ್ನು ಆರಂಭಿಸಲಿಕ್ಕಾಗಿ ಅವುಗಳನ್ನು ಧಾರಾಳವಾಗಿ ಉಪಯೋಗಿಸಿರಿ.—ಕೊಲೊ. 4:17.