ಮುಂದಾಗಿ ಯೋಜಿಸುವುದು—ಯಾವುದಕ್ಕಾಗಿ?
1 ಭವಿಷ್ಯಕ್ಕಾಗಿರುವ ಯೋಜನೆಗಳ ಕುರಿತು ನಾವೆಲ್ಲರೂ ಒಂದಲ್ಲ ಒಂದು ಸಮಯ ಯೋಚಿಸುತ್ತೇವೆ. ಭೂನಿರೀಕ್ಷೆಯನ್ನು ಹೊಂದಿರುವವರು, ದೇವರ ನೀತಿಯ ಹೊಸ ಲೋಕದಲ್ಲಿ ನಿರಂತರವಾಗಿ ಜೀವಿಸುವ ಸಮಯಕ್ಕಾಗಿ ಎದುರುನೋಡುತ್ತಾರೆ. ಆದರೆ, ನಮ್ಮ ಈ ಹೃತ್ಪೂರ್ವಕವಾದ ನಿರೀಕ್ಷೆಯನ್ನು ಕಳೆದುಕೊಳ್ಳುವಂತೆ ಮಾಡುವ ಪ್ರಭಾವಗಳು ಕೂಡ ಇವೆ. ಹಾಗಾಗಿ, ರಾಜ್ಯದ ಅಭಿರುಚಿಗಳ ಮೇಲೆ ನಮ್ಮ ಜೀವನವನ್ನು ಕೇಂದ್ರೀಕರಿಸಲು ಹಾಗೂ ತುಂಬ ಆಕರ್ಷಕವಾಗಿರುವ ಶರೀರದಾಶೆಗಳಿಂದ ಸೆಳೆಯಲ್ಪಡದಿರಲು ಶ್ರದ್ಧಾಪೂರ್ವಕ ಪ್ರಯತ್ನವು ಅಗತ್ಯ.—1 ಯೋಹಾ. 2:15-17.
2 ಆತ್ಮಿಕ ಮೌಲ್ಯಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವ ಜನರ ಆಸೆ ಆಕಾಂಕ್ಷೆಗಳನ್ನು ಲೋಕವು ಗ್ರಹಿಸಸಾಧ್ಯವಿಲ್ಲ. (1 ಕೊರಿಂ. 2:14) ಇತರರು ಕೀರ್ತಿ, ಅಧಿಕಾರ ಇಲ್ಲವೇ ಐಶ್ವರ್ಯದ ಹಿಂದೆ ಓಡುತ್ತಿರುವಾಗ ನಾವಾದರೋ ಆತ್ಮಿಕ ನಿಕ್ಷೇಪಗಳಿಗಾಗಿ ಪ್ರಯಾಸಪಡುತ್ತಿರುತ್ತೇವೆ. (ಮತ್ತಾ. 6:19-21) ಭವಿಷ್ಯದ ಕುರಿತಾದ ಲೋಕದ ದೃಷ್ಟಿಕೋನಕ್ಕೆ ನಮ್ಮ ಆಲೋಚನೆಗಳನ್ನು ಸರಿಹೊಂದಿಸಲು ಪ್ರಯತ್ನಿಸುವುದಾದರೆ, ನಮ್ಮ ಆತ್ಮಿಕ ಗುರಿಗಳನ್ನು ನಾವು ಎಂದಾದರೂ ಮುಟ್ಟಲು ಸಾಧ್ಯವಿದೆಯೇ? ಸ್ವಲ್ಪ ಸಮಯದೊಳಗೆ ದಿನನಿತ್ಯದ ವಿಷಯಗಳಲ್ಲೇ ನಮ್ಮ ಹೃದಯವು ತಲ್ಲೀನವಾಗಿಬಿಡುವುದು. ಇದನ್ನು ನಾವು ಹೇಗೆ ತಡೆಯಬಲ್ಲೆವು?
3 “ಯೇಸು ಕ್ರಿಸ್ತನನ್ನು ಧರಿಸಿಕೊಳ್ಳಿರಿ”: ಭವಿಷ್ಯಕ್ಕಾಗಿರುವ ನಮ್ಮ ಯೋಜನೆಗಳನ್ನು ರಾಜ್ಯದ ಅಭಿರುಚಿಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೊ ಎಂಬುದನ್ನು ದೃಢಪಡಿಸಿಕೊಳ್ಳುವ ಒಂದು ಮಾರ್ಗವು, ನಮ್ಮ ಸಂಭಾಷಣೆಯನ್ನು ಪರೀಕ್ಷಿಸುವುದು ಆಗಿದೆ. ಪ್ರಾಪಂಚಿಕ ವಿಷಯಗಳ ಮತ್ತು ದಿನನಿತ್ಯದ ವಿಷಯಗಳ ಕುರಿತಾಗಿಯೇ ನಾವು ಯಾವಾಗಲೂ ಮಾತಾಡುತ್ತಿರುತ್ತೇವೋ? ಹಾಗಿರುವಲ್ಲಿ, ನಮ್ಮ ಹೃದಯವು ಆತ್ಮಿಕ ಮೌಲ್ಯಗಳಿಗೆ ಕೊಡುತ್ತಿರುವ ಗಮನವು ಕಡಿಮೆಯಾಗುತ್ತಿದೆಯೋ ಎಂಬುದನ್ನು ನಾವು ಪರಿಗಣಿಸಬೇಕು. ‘ದೇಹದ ಆಶೆಗಳನ್ನು ಪೂರೈಸುವದಕ್ಕಾಗಿ ಚಿಂತಿಸದೆ [“ಮುಂದಾಗಿ ಯೋಜಿಸದೆ,” NW] ಕರ್ತನಾದ ಯೇಸು ಕ್ರಿಸ್ತನನ್ನು ಧರಿಸಿಕೊಳ್ಳುವುದಕ್ಕಾಗಿ’ ನಾವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗಬಹುದು.—ರೋಮಾ. 13:14.
4 ಯುವಜನರು, ಪೂರ್ಣ ಸಮಯದ ಸೇವೆಯನ್ನು ಪ್ರವೇಶಿಸುವ ದಿನಕ್ಕಾಗಿ ಮುಂದಾಗಿಯೇ ಯೋಜನೆಯನ್ನು ಮಾಡುವ ಮೂಲಕ ‘ಕ್ರಿಸ್ತನನ್ನು ಧರಿಸಿಕೊಳ್ಳಸಾಧ್ಯವಿದೆ.’ ರೆಗ್ಯುಲರ್ ಪಯನೀಯರ್ ಆಗಲು ಬಯಸುತ್ತಿದ್ದ ಒಬ್ಬ ಯುವಕನು, ಯೌವನಸ್ಥರು ಹಣವನ್ನು ಸಂಪಾದಿಸಿ ಆರ್ಥಿಕವಾಗಿ ನೆಲೆಯೂರುವುದು ಸರ್ವಸಾಮಾನ್ಯ ರೂಢಿಯಾಗಿದ್ದ ಒಂದು ಸಂಸ್ಕೃತಿಯಲ್ಲಿ ಬೆಳೆಸಲ್ಪಟ್ಟಿದ್ದನು. ಹಾಗಾಗಿ, ಅವನು ವ್ಯಾಪಾರದಲ್ಲಿ ಎಷ್ಟರ ಮಟ್ಟಿಗೆ ಮುಳುಗಿಹೋಗಿದ್ದನೆಂದರೆ, ಕೂಟಗಳಿಗೆ ಹಾಜರಾಗುವುದು ಮತ್ತು ಸೇವೆಯಲ್ಲಿ ಭಾಗವಹಿಸುವುದು ಅವನಿಗೆ ಯಾಂತ್ರಿಕವಾಗಿಬಿಟ್ಟಿತ್ತು. ಆದರೆ ಮತ್ತಾಯ 6:33ರಲ್ಲಿರುವ ಯೇಸುವಿನ ಮಾತುಗಳಲ್ಲಿ ಅವನು ಭರವಸೆಯನ್ನಿಡಲು ಪ್ರಾರಂಭಿಸಿದನು. ಹಾಗೂ ತನ್ನ ಗಾಣದೆತ್ತಿನಂತಹ ಯಾಂತ್ರಿಕ ಜೀವನದಿಂದ ಹೊರಬರುತ್ತಾ, ಪೂರ್ಣಸಮಯದ ಸೇವೆಯನ್ನು ತನ್ನ ಜೀವನ ವೃತ್ತಿಯಾಗಿ ಮಾಡಿಕೊಂಡನು. ಅವನು ಹೇಳುವಂತೆ, ಈಗ ಅವನು ‘ತನ್ನ ಪೂರ್ಣ ಸಾಮರ್ಥ್ಯದೊಂದಿಗೆ’ ಒಂದು ಒಳ್ಳೆಯ ಮನಸ್ಸಾಕ್ಷಿಯಿಂದ ಯೆಹೋವನ ಸೇವೆಯನ್ನು ಮಾಡುತ್ತಿದ್ದಾನೆ.
5 ಭವಿಷ್ಯಕ್ಕಾಗಿ ಯೋಜಿಸುವುದು ಬುದ್ಧಿವಂತಿಕೆಯಾಗಿದೆ ಎಂದು ಬೈಬಲು ಹೇಳುತ್ತದೆ. (ಜ್ಞಾನೋ. 21:5, NW) ನಾವೆಲ್ಲರೂ ದೇವರ ಚಿತ್ತವನ್ನು ಮನಸ್ಸಿನಲ್ಲಿ ಪ್ರಧಾನವಾಗಿಟ್ಟುಕೊಂಡು ಅದನ್ನು ಮಾಡುವಂತಾಗಲಿ.—ಎಫೆ. 5:15-17.