ಜೀವನದ ಅತಿ ಪ್ರಾಮುಖ್ಯವಾದ ಚಟುವಟಿಕೆಗಾಗಿ ನಮ್ಮನ್ನು ಸಜ್ಜುಗೊಳಿಸುವಂಥ ಒಂದು ಶಾಲೆ
1 ತಮ್ಮ ಜೀವನದ ಗುರಿಗಳನ್ನು ತಲಪಲು ಸಹಾಯಮಾಡುವಂಥ ಶಿಕ್ಷಣವನ್ನು ಪಡೆದುಕೊಳ್ಳಲು ಜನರು ಶಾಲೆಗೆ ಹೋಗುತ್ತಾರೆ. ಆದರೆ ಯಾವ ಗುರಿಯು, ನಮ್ಮ ಜೀವದಾತನನ್ನೇ ಘನಪಡಿಸುವ ಮತ್ತು ಆತನ ಉದ್ದೇಶಗಳನ್ನು ಹಾಗೂ ಮಾರ್ಗಗಳನ್ನು ಕಲಿತುಕೊಳ್ಳುವಂತೆ ಇತರರಿಗೆ ನೆರವಾಗುವುದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿರಸಾಧ್ಯವಿದೆ? ಒಂದೂ ಇಲ್ಲ. ನಮ್ಮ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಉದ್ದೇಶವು, ನಾವು ನಮ್ಮ ನಂಬಿಕೆಯನ್ನು ಇತರರಿಗೆ ಬೋಧಿಸುವಂತೆ ನಮ್ಮನ್ನು ಸಿದ್ಧಪಡಿಸುವುದೇ ಆಗಿದೆ. ಆದ್ದರಿಂದ, ಪ್ರತಿ ವಾರ ಶಾಲೆಗೆ ಹಾಜರಾದಾಗ, ನಾವು ಜೀವನದ ಅತಿ ಪ್ರಾಮುಖ್ಯವಾದ ಚಟುವಟಿಕೆಗಾಗಿ ನಮ್ಮನ್ನು ಸಜ್ಜುಗೊಳಿಸುವ ಕೌಶಲಗಳನ್ನು ಬೆಳೆಸಿಕೊಳ್ಳುತ್ತೇವೆ.
2 ನಮ್ಮ ರಾಜ್ಯದ ಸೇವೆಯ ಕಳೆದ ತಿಂಗಳಿನ ಸಂಚಿಕೆಯಲ್ಲಿ “2003ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶೆಡ್ಯೂಲ್” ಒದಗಿಸಲ್ಪಟ್ಟಿತು. ಶೆಡ್ಯೂಲಿನಲ್ಲಿ, ಶಾಲೆಯು ಹೇಗೆ ನಡೆಸಲ್ಪಡುವುದು ಎಂಬುದರ ಕುರಿತಾದ ವಿವರಗಳು ಒಳಗೂಡಿವೆ. ಆ ಶೆಡ್ಯೂಲನ್ನು, ಪ್ರತಿ ವಾರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಬರುವಾಗ ನೀವು ತರಲಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದ ನಿಮ್ಮ ಪ್ರತಿಯಲ್ಲಿ ಇಟ್ಟುಕೊಳ್ಳುವುದನ್ನು ನೀವು ಪ್ರಾಯೋಗಿಕವಾದದ್ದಾಗಿ ಕಂಡುಕೊಳ್ಳಬಹುದು. 2003ನೇ ಇಸವಿಗಾಗಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಕೆಲವು ವೈಶಿಷ್ಟ್ಯಗಳನ್ನು ಪರಿಗಣಿಸಿರಿ.
3 ಭಾಷಣ ಗುಣ: ಜನವರಿಯಲ್ಲಿ ಆರಂಭಿಸುತ್ತಾ, ಪ್ರತಿಯೊಂದು ಶಾಲಾ ಕೂಟವು ಒಂದು ಭಾಷಣ ಗುಣ ಅಥವಾ ವಾಚನ, ಅಧ್ಯಯನ ಮಾಡುವಿಕೆ ಇಲ್ಲವೆ ಬೋಧಿಸುವಿಕೆಯ ಯಾವುದಾದರೊಂದು ಅಂಶದ ಕುರಿತಾದ ಐದು ನಿಮಿಷದ ಭಾಷಣದೊಂದಿಗೆ ಪ್ರಾರಂಭವಾಗುವುದು. ಈ ಆರಂಭಿಕ ಚರ್ಚೆಗಳನ್ನು ಶಾಲಾ ಮೇಲ್ವಿಚಾರಕನು ನಡೆಸುವನು, ಅಥವಾ ಈ ಭಾಷಣವನ್ನು ಕೊಡುವಂತೆ ಅವನು ಮತ್ತೊಬ್ಬ ಅರ್ಹ ಹಿರಿಯನನ್ನು ನೇಮಿಸಬಹುದು. ಭಾಷಣಕರ್ತನು ಭಾಷಣ ಗುಣದ ಅರ್ಥನಿರೂಪಣೆ ಮತ್ತು ಪ್ರಾಮುಖ್ಯತೆಯ ಕುರಿತು ಚರ್ಚಿಸುವನು. ನಂತರ, ಶಾಸ್ತ್ರೀಯ ಉದಾಹರಣೆಗಳನ್ನು ಚರ್ಚಿಸುವ ಮೂಲಕ ಅವನು ವಿಷಯಭಾಗವನ್ನು ವಿಕಸಿಸಬೇಕು. ಮತ್ತು ಈ ಭಾಷಣ ಗುಣವನ್ನು ಪ್ರಯೋಗಕ್ಕೆ ಹಾಕುವ ವಿಧವನ್ನು ದೃಷ್ಟಾಂತಿಸುತ್ತಾ, ಹೀಗೆ ಮಾಡುವುದರಿಂದ ನಮ್ಮ ಕ್ಷೇತ್ರ ಶುಶ್ರೂಷೆಯು ಹೇಗೆ ಉತ್ತಮಗೊಳ್ಳುವುದು ಎಂಬುದರ ಮೇಲೆ ವಿಶೇಷ ಗಮನವನ್ನು ಹರಿಸಬೇಕು.
4 ನೇಮಕ ನಂಬರ್ 1: ಉಪದೇಶ ಭಾಷಣವನ್ನು ಕೊಡುವಂತೆ ನೇಮಿಸಲ್ಪಟ್ಟಿರುವ ಸಹೋದರರಿಗೆ ‘ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ’ ಪುನಃ ಒಮ್ಮೆ ಸಲಹೆ ನೀಡಲಾಗುತ್ತದೆ. ಮಾಹಿತಿಯನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಅವರು ಸಭೆಗೆ ತೋರಿಸಬೇಕು ಎಂಬುದನ್ನು ಇದು ಅರ್ಥೈಸುತ್ತದೆ. ನೀವು ಈ ನೇಮಕವನ್ನು ಪಡೆದುಕೊಳ್ಳುವುದಾದರೆ, ಇದನ್ನು ಹೇಗೆ ತಯಾರಿಸುವುದು ಎಂಬುದರ ಕುರಿತಾದ ಸಲಹೆಗಳಿಗಾಗಿ ಶುಶ್ರೂಷಾ ಶಾಲೆ ಪಠ್ಯಪುಸ್ತಕದ 48-9ನೆಯ ಪುಟಗಳನ್ನು ನೋಡಿರಿ, ಮತ್ತು ಪುಸ್ತಕದ ವಿಷಯಸೂಚಿಯ “ಪ್ರಾಯೋಗಿಕ ಅನ್ವಯ” ಎಂಬ ವಿಷಯದ ಕೆಳಗೆ ಕೊಡಲ್ಪಟ್ಟಿರುವ ಉಲ್ಲೇಖಗಳನ್ನು ಅಧ್ಯಯನ ಮಾಡಿರಿ.
5 ಬೈಬಲ್ ವಾಚನದ ಶೆಡ್ಯೂಲ್: ಒಂದುವೇಳೆ, ಗತ ಸಮಯಗಳಲ್ಲಿ, ಸಾಪ್ತಾಹಿಕ ಬೈಬಲ್ ವಾಚನಕ್ಕೆ ಅಂಟಿಕೊಂಡಿರಲು ನಿಮಗೆ ಸಾಧ್ಯವಿಲ್ಲದೇ ಹೋಗಿರುವುದಾದರೆ, ಈ ವರ್ಷದ ಶೆಡ್ಯೂಲ್ನೊಂದಿಗೆ ಅಂಟಿಕೊಳ್ಳಲು ನೀವೇಕೆ ತೀರ್ಮಾನಿಸಬಾರದು? ಹೀಗೆ ಮಾಡಲು ತೀರ್ಮಾನಿಸುವವರು ವರ್ಷಾಂತ್ಯದೊಳಗೆ ಕ್ರೈಸ್ತ ಗ್ರೀಕ್ ಶಾಸ್ತ್ರಗಳನ್ನು ಓದಿ ಮುಗಿಸಿಬಿಡುವರು. ಕ್ರೈಸ್ತ ಗ್ರೀಕ್ ಶಾಸ್ತ್ರಗಳೊಂದಿಗೆ ಒಂದು ಬೈಬಲ್ ವಾಚನ ಕಾರ್ಯಕ್ರಮವನ್ನು ಆರಂಭಿಸುವುದರ ಪ್ರಯೋಜನಗಳ ಕುರಿತು ಶುಶ್ರೂಷಾ ಶಾಲೆ ಪುಸ್ತಕದ ಪುಟ 10, ಪ್ಯಾರಗ್ರಾಫ್ 4ರಲ್ಲಿ ಚರ್ಚಿಸಲಾಗಿದೆ.
6 ಬೈಬಲ್ ವಾಚನದಿಂದ ಮುಖ್ಯಾಂಶಗಳು: ಸಭಿಕರು ವಾರದ ವಾಚನಭಾಗದ ಮೇಲೆ ಹೇಳಿಕೆಗಳನ್ನು ನೀಡಲಾಗುವಂತೆ, ಈ ಭಾಗವನ್ನು ಹತ್ತು ನಿಮಿಷಕ್ಕೆ ಹೆಚ್ಚಿಸಲಾಗಿದೆ. ಈಗ ಭಾಗದ ನೇಮಕವನ್ನು ಪಡೆಯುವವರು ನಿಗದಿಪಡಿಸಲ್ಪಟ್ಟ ಸಮಯಕ್ಕೆ ಅಂಟಿಕೊಳ್ಳಬೇಕು. ಇದು ಮೌಖಿಕ ಪುನರ್ವಿಮರ್ಶೆಯಿರುವ ವಾರವನ್ನೂ ಸೇರಿಸಿ ಪ್ರತಿ ವಾರ ನೀಡಲ್ಪಡುವುದು. ನೇಮಿತ ಅಧ್ಯಾಯಗಳನ್ನು ಓದುವಾಗ, ನಿಮ್ಮ ಕುಟುಂಬ ಅಧ್ಯಯನದಲ್ಲಿ, ನಿಮ್ಮ ಶುಶ್ರೂಷೆಯಲ್ಲಿ, ಅಥವಾ ನಿಮ್ಮ ಜೀವನ ರೀತಿಯಲ್ಲಿ ನಿಮಗೆ ಪ್ರಯೋಜವಾಗಬಹುದಾದಂಥ ಅಂಶಗಳಿಗಾಗಿ ಹುಡುಕಿರಿ. ಜನರೊಂದಿಗೆ ಮತ್ತು ಜನಾಂಗಗಳೊಂದಿಗೆ ವ್ಯವಹರಿಸುವುದರಲ್ಲಿ ಯೆಹೋವನ ಯಾವ ಗುಣಗಳು ಪ್ರದರ್ಶಿಸಲ್ಪಟ್ಟವು? ನಿಮ್ಮ ನಂಬಿಕೆಯನ್ನು ಬಲಪಡಿಸಿದಂಥ ಮತ್ತು ಯೆಹೋವನಿಗಾಗಿರುವ ನಿಮ್ಮ ಗಣ್ಯತೆಯನ್ನು ಹೆಚ್ಚಿಸಿದಂಥ ಯಾವ ವಿಷಯವನ್ನು ನೀವು ಕಲಿತಿರಿ? ನೇಮಿತ ಅಧ್ಯಾಯಗಳಲ್ಲಿರುವ ಯಾವುದೇ ಅಂಶದ ಕುರಿತು ಹೇಳಿಕೆ ನೀಡಲು ಅಂಜದಿರಿ, ಮತ್ತು ಇದು ನೇಮಕ ನಂಬರ್ 2ರಲ್ಲಿ ಓದಲ್ಪಡಲಿರುವ ವಚನಗಳನ್ನೂ ಒಳಗೂಡಿಸುವುದು, ಏಕೆಂದರೆ ವಾಚನವನ್ನು ಮಾಡಲಿರುವ ಸಹೋದರನು ವಚನಗಳ ಕುರಿತು ಹೇಳಿಕೆ ನೀಡುವುದಿಲ್ಲ.
7 ನೇಮಕ ನಂಬರ್ 2: ಪ್ರತಿ ವಾರದ ಮೊದಲನೆಯ ವಿದ್ಯಾರ್ಥಿ ನೇಮಕವು ಸಾರ್ವಜನಿಕ ವಾಚನದಲ್ಲಿ ಒಂದು ಅಭ್ಯಾಸವಾಗಿರುವುದು. ಪ್ರತಿ ತಿಂಗಳಿನ ಕೊನೆಯ ವಾರದ ಹೊರತು, ಎಲ್ಲ ವಾಚನ ನೇಮಕವು ಆ ವಾರದ ಬೈಬಲ್ ವಾಚನ ಭಾಗದಿಂದ ತೆಗೆಯಲ್ಪಡುವುದು. ತಿಂಗಳ ಕೊನೆಯ ವಾಚನವು ಕಾವಲಿನಬುರುಜುವಿನಿಂದ ತೆಗೆಯಲ್ಪಡುವುದು. ಒಂದು ಪೀಠಿಕೆಯನ್ನು ಮತ್ತು ಸಮಾಪ್ತಿಯನ್ನು ಕೊಡದೆ ವಿದ್ಯಾರ್ಥಿಯು ನೇಮಿತ ವಿಷಯಭಾಗವನ್ನು ಓದಬೇಕು. ಈ ರೀತಿಯಲ್ಲಿ, ಅವನು ತನ್ನ ಮುಖ್ಯ ಗಮನವನ್ನು ತನ್ನ ಓದುವಿಕೆಯ ಮೇಲೆ ಕೇಂದ್ರೀಕರಿಸಬಲ್ಲನು.—1 ತಿಮೊ. 4:13.
8 ನೇಮಕ ನಂಬರ್ 3 ಮತ್ತು 4: ಈ ನೇಮಕಗಳಲ್ಲಿ ಕೆಲವು ನೇಮಕಗಳಿಗೆ ಬೇರೆ ಮೂಲಗಳಿಗಿಂತಲೂ ಹೆಚ್ಚಿನ ಮೂಲ ವಿಷಯಗಳನ್ನು ತರ್ಕಿಸು (ಇಂಗ್ಲಿಷ್) ಪುಸ್ತಕದಿಂದ ಕೊಡಲಾಗಿದೆ; ಕೆಲವು ನೇಮಕಗಳಿಗೆ ಕೇವಲ ಮುಖ್ಯ ವಿಷಯವು ಕೊಡಲ್ಪಟ್ಟಿದೆ. ತರ್ಕಿಸು ಪುಸ್ತಕವು ಲಭ್ಯವಿಲ್ಲದಿರುವಲ್ಲಿ ಇತರ ರೆಫರೆನ್ಸ್ಗಳು ಕೊಡಲ್ಪಟ್ಟಿವೆ. ಸೀಮಿತವಾದ ಮೂಲ ವಿಷಯವಿರುವ ಅಥವಾ ಕೇವಲ ಮುಖ್ಯ ವಿಷಯವು ಮಾತ್ರ ಕೊಡಲ್ಪಟ್ಟಿರುವ ನೇಮಕಗಳನ್ನು ಪಡೆದಿರುವವರಿಗೆ, ನಮ್ಮ ಕ್ರೈಸ್ತ ಪ್ರಕಾಶನಗಳಲ್ಲಿ ಸಂಶೋಧನೆ ಮಾಡುವ ಮೂಲಕ ತಮ್ಮ ಭಾಷಣಗಳನ್ನು ವಿಕಸಿಸುವ ಅವಕಾಶವಿರುವುದು. ಇದು, ಸಹೋದರಿಯರು ತಮ್ಮ ಸಹಾಯಕರಿಗನುಸಾರ ತಮ್ಮ ಹೇಳಿಕೆಗಳನ್ನು ಹೊಂದಿಸಿಕೊಳ್ಳುವುದನ್ನು ಹೆಚ್ಚು ಸುಲಭಗೊಳಿಸಬಹುದು.
9 ಸನ್ನಿವೇಶಗಳು: ಶುಶ್ರೂಷಾ ಶಾಲೆ ಪುಸ್ತಕದ 45ನೇ ಪುಟದಲ್ಲಿ ಸೂಚಿಸಲ್ಪಟ್ಟಿರುವಂತೆ, ಶಾಲಾ ಮೇಲ್ವಿಚಾರಕನು ಒಂದು ಸನ್ನಿವೇಶವನ್ನು ನೇಮಿಸಬಹುದು. ಅವನು ನೇಮಿಸದಿದ್ದಲ್ಲಿ, 82ನೇ ಪುಟದಲ್ಲಿರುವ ಪಟ್ಟಿಯಿಂದ ಸಹೋದರಿಯರು ಒಂದು ಸನ್ನಿವೇಶವನ್ನು ಆರಿಸಿಕೊಳ್ಳಬಹುದು. ಪ್ರತಿ ಎರಡು ತಿಂಗಳಿಗೊಮ್ಮೆ ಒಬ್ಬ ಸಹೋದರಿಯು ಒಂದು ಭಾಷಣವನ್ನು ಕೊಡುವುದಾದರೆ, ಆ 30 ಸನ್ನಿವೇಶಗಳು ಐದು ವರುಷಗಳಿಗೆ ಸಾಕಾಗುವಷ್ಟು ವಿಭಿನ್ನತೆಯನ್ನು ಒದಗಿಸುವವು. 30ನೆಯ ಸನ್ನಿವೇಶವನ್ನು ಅಂದರೆ “ನಿಮ್ಮ ಕ್ಷೇತ್ರಕ್ಕೆ ಸೂಕ್ತವಾಗಿರುವ ಇನ್ನೊಂದು ಸನ್ನಿವೇಶ”ವನ್ನು ಆರಿಸಿಕೊಳ್ಳುವ ಸಹೋದರಿಯರು, ತಮ್ಮ ಸನ್ನಿವೇಶವನ್ನು ತಮ್ಮ ನೇಮಕ ಚೀಟಿ (S-89)ಯ ಕೆಳಭಾಗದಲ್ಲಿ ಅಥವಾ ಅದರ ಹಿಂಭಾಗದಲ್ಲಿ ಬರೆಯಬೇಕು. ಶಾಲಾ ಮೇಲ್ವಿಚಾರಕನು ಅವಳ ಪುಸ್ತಕದ 82ನೇ ಪುಟದಲ್ಲಿ ವಿದ್ಯಾರ್ಥಿಯ ಭಾಷಣದ ತಾರೀಖನ್ನು ಅವಳು ಉಪಯೋಗಿಸುವ ಸನ್ನಿವೇಶದ ಪಕ್ಕದಲ್ಲಿ ಬರೆಯುವನು. ವಿದ್ಯಾರ್ಥಿಯ ಸಲಹಾ ಪಟ್ಟಿಯ ಮೇಲೆ ಗುರುತನ್ನು ಮಾಡುವ ಸಮಯದಲ್ಲೇ ಅವನು ಇದನ್ನು ಮಾಡಬಹುದು.
10 ಸಲಹಾ ಪಟ್ಟಿ: ನಿಮ್ಮ ಸಲಹಾ ಪಟ್ಟಿಯು ನಿಮ್ಮ ಪುಸ್ತಕದಲ್ಲೇ ಇದೆ. ಅದು 79-81ನೆಯ ಪುಟಗಳಲ್ಲಿ ಕಂಡುಬರುತ್ತದೆ. ಆದ್ದರಿಂದ, ಪ್ರತಿಯೊಂದು ಭಾಷಣವನ್ನು ನೀಡಿದ ಬಳಿಕ ನೀವು ನಿಮ್ಮ ಪುಸ್ತಕವನ್ನು ಶಾಲಾ ಮೇಲ್ವಿಚಾರಕನಿಗೆ ಒಪ್ಪಿಸಬೇಕು. ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಗಳು ಕೆಲಸ ಮಾಡುತ್ತಿರುವ ಸಲಹಾ ಅಂಶಗಳ ದಾಖಲೆಯನ್ನು ಇಟ್ಟುಕೊಳ್ಳಬೇಕು.
11 ಮೌಖಿಕ ಪುನರ್ವಿಮರ್ಶೆ: ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆಯು ಮೌಖಿಕವಾಗಿ ನಡೆಸಲ್ಪಡುವುದು. ಅದು ಎರಡು ತಿಂಗಳಿಗೊಮ್ಮೆ 30 ನಿಮಿಷಗಳ ವರೆಗೆ ನಡೆಸಲ್ಪಡುವುದು. ಪುನರ್ವಿಮರ್ಶೆಯ ಸಮಯದಲ್ಲಿ ಪರಿಗಣಿಸಬೇಕಾದ ಪ್ರಶ್ನೆಗಳು ಎಂದಿನಂತೆ ನಮ್ಮ ರಾಜ್ಯದ ಸೇವೆಯಲ್ಲಿ ಕಂಡುಬರುವವು. ಮೌಖಿಕ ಪುನರ್ವಿಮರ್ಶೆಗೆಂದು ಶೆಡ್ಯೂಲ್ ಮಾಡಲಾಗಿರುವ ವಾರದಲ್ಲೇ ಸರ್ಕಿಟ್ ಸಮ್ಮೇಳನ ಅಥವಾ ಸರ್ಕಿಟ್ ಮೇಲ್ವಿಚಾರಕನ ಸಂದರ್ಶನವು ಇರುವುದಾದರೆ, ಅದರ ಮುಂದಿನ ವಾರದ ಭಾಷಣಗಳನ್ನು ಒಂದು ವಾರಕ್ಕೆ ಮುಂಚಿತವಾಗಿ ನೀಡಬೇಕು ಮತ್ತು ಮೌಖಿಕ ಪುನರ್ವಿಮರ್ಶೆಯನ್ನು ಮುಂದಿನ ವಾರಕ್ಕೆ ಮುಂದೂಡಬೇಕು.
12 ಉಪಕ್ಲಾಸುಗಳು: 50ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿರುವ ಸಭೆಗಳಲ್ಲಿ, ಹಿರಿಯರು ಉಪಕ್ಲಾಸುಗಳ ಉಪಯೋಗವನ್ನು ಪರಿಗಣಿಸಬಹುದು. “ಈ ಏರ್ಪಾಡನ್ನು ಎಲ್ಲ ವಿದ್ಯಾರ್ಥಿ ಭಾಷಣಗಳಿಗೆ ಇಲ್ಲವೆ ಕೊನೆಯ ಎರಡು ಭಾಷಣಗಳಿಗೆ ಮಾತ್ರ ಉಪಯೋಗಿಸಬಹುದು.” (ಶುಶ್ರೂಷಾ ಶಾಲೆ, ಪು. 285) ಈ ಎರಡನೆಯ ಸಲಹೆಯು, ಅನೇಕ ಸಹೋದರಿಯರು ಮತ್ತು ವಾಚನ ನೇಮಕಗಳನ್ನು ನಿರ್ವಹಿಸಲಿಕ್ಕಾಗಿ ಕೇವಲ ಕೆಲವೇ ಸಹೋದರರಿರುವ ಸಭೆಗಳನ್ನು ಮನಸ್ಸಿನಲ್ಲಿಟ್ಟು ಕೊಡಲಾಗಿದೆ. ಈ ಕ್ಲಾಸ್ಗಳನ್ನು ನಡೆಸಲಿಕ್ಕಾಗಿ ಹಿರಿಯರು ಅರ್ಹ ಸಹೋದರರನ್ನು ಆರಿಸಿಕೊಳ್ಳಬೇಕು.
13 ಉಪಸಲಹೆಗಾರ: ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶೆಡ್ಯೂಲಿನಲ್ಲಿ ಸೂಚಿಸಲ್ಪಟ್ಟಿರುವ ಪ್ರಕಾರ, ಬೈಬಲ್ ಮುಖ್ಯಾಂಶಗಳನ್ನು ನೀಡುವ ಮತ್ತು ಉಪದೇಶ ಭಾಷಣಗಳನ್ನು ಕೊಡುವ ಹಿರಿಯರು ಮತ್ತು ಶುಶ್ರೂಷಾ ಸೇವಕರಿಗೆ ವೈಯಕ್ತಿಕ ಸಲಹೆಯನ್ನು ನೀಡಲಿಕ್ಕಾಗಿ ಒಬ್ಬ ಉಪಸಲಹೆಗಾರನು ಹಿರಿಯರ ಮಂಡಲಿಯಿಂದ ನೇಮಿಸಲ್ಪಡಬೇಕು. ಇದನ್ನು ಮಾಡುವಂತೆ ನೇಮಿಸಲ್ಪಡುವ ಸಹೋದರನು ಅನುಭವಸ್ಥನಾಗಿರಬೇಕು, ಇವನು ನೀಡುವ ಸಲಹೆಯನ್ನು ಇತರ ಹಿರಿಯರು ಗೌರವಿಸುವಂತಿರಬೇಕು. ಇವನ ಸಲಹೆಯು ರಚನಾತ್ಮಕವಾಗಿದ್ದು, ಉತ್ತಮ ಭಾಷಣ ಮತ್ತು ಬೋಧನಾ ವಿಧಗಳನ್ನು ಪ್ರಶಂಸಿಸುವಂತಹದ್ದಾಗಿದ್ದು, ಒಂದೆರಡು ವಿಷಯಗಳನ್ನು ಅಭಿವೃದ್ಧಿಗಾಗಿ ಸೂಚಿಸಬೇಕು. ಆಗಿಂದಾಗ್ಗೆ ಭಾಷಣ ಕೊಡುವಂಥ ಒಬ್ಬ ಸಹೋದರನಿಗೆ ಪ್ರತಿಯೊಂದು ಭಾಷಣದ ನಂತರ ಸಲಹೆ ಕೊಡುವ ಅಗತ್ಯವಿಲ್ಲ. ಆದರೂ ಈ ಸಲಹೆಯನ್ನು ಕೊಡುವಂತೆ ನೇಮಿಸಲ್ಪಟ್ಟಿರುವ ಸಹೋದರನು ವಿವೇಚನಾಶೀಲನಾಗಿರಬೇಕು ಮತ್ತು ಸಾರ್ವಜನಿಕ ಭಾಷಣಗಳನ್ನು ಕೊಡುತ್ತಿರುವ ಸಹೋದರರಿಗೂ ಹೆಚ್ಚಿನ ಪ್ರಗತಿಯನ್ನು ಮಾಡುವಂತೆ ಸಹಾಯಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.—1 ತಿಮೊ. 4:15.
14 ಸಲಹೆಗಾರರು ಯಾವುದನ್ನು ಗಮನಕೊಟ್ಟು ಕೇಳಬೇಕು: ಒಂದು ಭಾಷಣವನ್ನು ವಿಶ್ಲೇಷಿಸುವುದರಲ್ಲಿ ಒಬ್ಬ ಸಲಹೆಗಾರನಿಗೆ ಯಾವುದು ಸಹಾಯಮಾಡುವುದು? ಶುಶ್ರೂಷಾ ಶಾಲೆ ಪುಸ್ತಕದ 53 ಅಂಕಿತ ಅಧ್ಯಾಯಗಳಲ್ಲಿ ಹೆಚ್ಚಿನವುಗಳಲ್ಲಿರುವ ಮೂರನೆಯ ಚೌಕವು, ಯಾವುದಕ್ಕೆ ಗಮನಕೊಡಬೇಕು ಎಂಬುದರ ಸಂಕ್ಷಿಪ್ತ ಸಾರಾಂಶವನ್ನು ಒದಗಿಸುತ್ತದೆ. ಶಾಲಾ ಮೇಲ್ವಿಚಾರಕನು, ಒಂದು ಭಾಷಣದ ಸುಸಂಬದ್ಧ ವಿಕಸನ ಮತ್ತು ಪರಿಣಾಮಕಾರಿತ್ವವನ್ನು ಶೀಘ್ರವಾಗಿ ಗ್ರಹಿಸಲು ತನಗೆ ಸಹಾಯಮಾಡುವಂತೆ ಪುಸ್ತಕದಲ್ಲಿ ಕೊಡಲ್ಪಟ್ಟಿರುವ ಇತರ ಜ್ಞಾಪನಗಳು ಅಥವಾ ಸಲಹೆಗಳನ್ನೂ ಗಮನಿಸಬೇಕು. ಉದಾಹರಣೆಗೆ, 55ನೆಯ ಪುಟದ ಮೇಲ್ಭಾಗದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳ ಸರಣಿಯನ್ನು ಮತ್ತು 163ನೆಯ ಪುಟದ ಕೊನೆಯ ಪ್ಯಾರಗ್ರಾಫ್ನಲ್ಲಿರುವ ವಿಚಾರಗಳನ್ನು ಗಮನಿಸಿರಿ.
15 ಖಾಲಿ ಸ್ಥಳವನ್ನು ಭರ್ತಿಮಾಡುವುದು: ದೊಡ್ಡದಾದ ಅಂಚುಗಳ (ಮಾರ್ಜಿನ್ಗಳ) ಜೊತೆಗೆ, ಶುಶ್ರೂಷಾ ಶಾಲೆ ಪುಸ್ತಕದಲ್ಲಿ ನೀವು ನಿಮ್ಮ ವೈಯಕ್ತಿಕ ಅಧ್ಯಯನದ ಸಮಯದಲ್ಲಿ ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಹಾಜರಿರುವಾಗ ಟಿಪ್ಪಣಿಗಳನ್ನು ಬರೆದುಕೊಳ್ಳಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿರುವ ಖಾಲಿ ಸ್ಥಳಗಳಿವೆ. (77, 92, 165, 243, 246, ಮತ್ತು 250ನೆಯ ಪುಟಗಳನ್ನು ನೋಡಿರಿ.) ಪ್ರತಿ ವಾರ ನಿಮ್ಮೊಂದಿಗೆ ನಿಮ್ಮ ಪುಸ್ತಕವನ್ನು ತರಲು ಮರೆಯದಿರಿ. ಆರಂಭದ ಭಾಷಣವು ಕೊಡಲ್ಪಡುವಾಗ, ಅದನ್ನು ನಿಮ್ಮ ಪುಸ್ತಕದಲ್ಲಿ ಅನುಸರಿಸಿಕೊಂಡು ಹೋಗಿರಿ. ಶಾಲೆಯ ಉದ್ದಕ್ಕೂ ನಿಮ್ಮ ಪುಸ್ತಕವನ್ನು ತೆರೆದಿಡಿರಿ. ಶಾಲಾ ಮೇಲ್ವಿಚಾರಕನಿಂದ ಮಾಡಲ್ಪಡುವ ಸಲಹೆಗಳನ್ನು ಗುರುತಿಸಿಕೊಳ್ಳಿ. ಭಾಷಣಕರ್ತರಿಂದ ಉಪಯೋಗಿಸಲ್ಪಡುವ ಬೋಧನಾ ವಿಧಾನಗಳಿಗೆ, ಪ್ರಶ್ನೆಗಳಿಗೆ, ಉದಾಹರಣೆಗಳಿಗೆ, ಅಲಂಕಾರಗಳಿಗೆ, ದೃಷ್ಟಾಂತಗಳಿಗೆ, ದೃಶ್ಯ ಸಾಧನಗಳಿಗೆ ಮತ್ತು ವೈದೃಶ್ಯಗಳಿಗೆ ಗಮನಕೊಡಿರಿ. ಉಪಯುಕ್ತವಾದ ಟಿಪ್ಪಣಿಗಳನ್ನು ಬರೆದುಕೊಳ್ಳುವ ಮೂಲಕ, ಶಾಲೆಯಿಂದ ಸಂಗ್ರಹಿಸಿದ ಅನೇಕ ಅತ್ಯುತ್ತಮವಾದ ಅಂಶಗಳನ್ನು ಜ್ಞಾಪಿಸಿಕೊಳ್ಳಲು ಮತ್ತು ಉಪಯೋಗಿಸಲು ನೀವು ಶಕ್ತರಾಗಿರುವಿರಿ.
16 ದೇವರ ರಾಜ್ಯದ ಕುರಿತಾದ ಸುವಾರ್ತೆಯನ್ನು ಸಾರುವುದೇ ಒಬ್ಬ ವ್ಯಕ್ತಿಗೆ ನೀಡಲ್ಪಡಬಹುದಾದ ಅತಿ ದೊಡ್ಡ ಸುಯೋಗವಾಗಿದೆ ಎಂಬುದನ್ನು ಯೇಸು ಕ್ರಿಸ್ತನು ತಿಳಿದವನಾಗಿದ್ದನು. ಅದು ಅವನ ಮುಖ್ಯ ನೇಮಕವಾಗಿತ್ತು. (ಮಾರ್ಕ 1:38) ಅವನು ಹೇಳಿದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43) ಅವನನ್ನು ಹಿಂಬಾಲಿಸುವ ಆಮಂತ್ರಣವನ್ನು ಸ್ವೀಕರಿಸಿದವರಾದ ನಾವು ಕೂಡ ಸುವಾರ್ತೆಯನ್ನು ಸಾರುವುದರಲ್ಲಿ ಅತಿ ತೀವ್ರವಾಗಿ ಒಳಗೂಡಿದ್ದೇವೆ, ಮತ್ತು ನಾವು ನಮ್ಮ ‘ಸ್ತೋತ್ರಯಜ್ಞದ’ ಗುಣಮಟ್ಟವನ್ನು ಉತ್ತಮಗೊಳಿಸಲು ಯಾವಾಗಲೂ ಶ್ರಮಿಸುತ್ತೇವೆ. (ಇಬ್ರಿ. 13:15) ಆ ಗುರಿಯನ್ನು ತಲಪಲಿಕ್ಕಾಗಿ, ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ—ಜೀವನದ ಅತಿ ಪ್ರಾಮುಖ್ಯವಾದ ಚಟುವಟಿಕೆಗಾಗಿ ನಮ್ಮನ್ನು ಸಿದ್ಧಗೊಳಿಸುವ ಶಾಲೆಯಲ್ಲಿ—ಕ್ರಮವಾಗಿ ಭಾಗವಹಿಸಲು ನಾವು ದೃಢನಿರ್ಧಾರವನ್ನು ಮಾಡೋಣ.