ಕುಟುಂಬದ ತಲೆಗಳೇ ಒಳ್ಳೆಯ ಆತ್ಮಿಕ ನಿಯತ ಕ್ರಮವನ್ನು ಕಾಪಾಡಿಕೊಳ್ಳಿರಿ
1 ದಾನಿಯೇಲನು ಬಾಬೆಲಿನ ವಿಗ್ರಹಾರಾಧನೆ ಮತ್ತು ಭ್ರಷ್ಟಾಚಾರದ ಮಧ್ಯೆ ಹಲವಾರು ದಶಕಗಳ ವರೆಗೆ ಜೀವಿಸಿದ್ದರೂ, ಅವನು ಯೆಹೋವನನ್ನು “ನಿತ್ಯವೂ” ಭಜಿಸುವವನಾಗಿ ಪ್ರಖ್ಯಾತನಾಗಿದ್ದನು. (ದಾನಿ. 6:16, 20) ಅವನು ತನ್ನ ಆತ್ಮಿಕತೆಯನ್ನು ಹೇಗೆ ಕಾಪಾಡಿಕೊಂಡನು? ಸತ್ಯಾರಾಧನೆಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ನೆರವೇರಿಸುವುದಕ್ಕಾಗಿ ಅವನು ಒಂದು ನಿಯತ ಕ್ರಮವನ್ನು ಇಟ್ಟುಕೊಂಡಿದ್ದನು ಎಂದು ಬೈಬಲ್ ದಾಖಲೆಯು ತೋರಿಸುತ್ತದೆ. ಉದಾಹರಣೆಗೆ, ವಾಡಿಕೆಗನುಸಾರ ತನ್ನ ಮಹಡಿಯ ಕೋಣೆಯಲ್ಲಿ ದಿನಕ್ಕೆ ಮೂರಾವರ್ತಿ ಅವನು ಪ್ರಾರ್ಥಿಸಿದನು. (ದಾನಿ. 6:10) ಮತ್ತು ಧರ್ಮಶಾಸ್ತ್ರವನ್ನು ಓದುವಂತಹ ಇತರ ಆತ್ಮಿಕ ಚಟುವಟಿಕೆಗಳಿಗಾಗಿ ಕೂಡ ಅವನು ಒಂದು ನಿರ್ದಿಷ್ಟ ರೂಢಿಯನ್ನು ಇಟ್ಟುಕೊಂಡಿದ್ದನು ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ, ಜೀವಕ್ಕೆ ಅಪಾಯವನ್ನೊಡ್ಡುವಂಥ ಒಂದು ಪರೀಕ್ಷೆಯನ್ನು ಎದುರಿಸಿದಾಗಲೂ ಯೆಹೋವನಿಗೆ ಸದ್ಭಕ್ತನಾಗಿರುವುದರಲ್ಲಿ ಅವನು ಅಚಲನಾಗಿದ್ದನು, ಮತ್ತು ಅವನು ಅದ್ಭುತಕರವಾದ ರೀತಿಯಲ್ಲಿ ರಕ್ಷಿಸಲ್ಪಟ್ಟನು.—ದಾನಿ. 6:4-22.
2 ತದ್ರೀತಿಯಲ್ಲಿ ಇಂದು, “ನಿತ್ಯವೂ ಎಚ್ಚರ”ವಾಗಿರಲಿಕ್ಕಾಗಿ ನಾವು ಬಹಳಷ್ಟು ಶ್ರಮಿಸಬೇಕು. (ಎಫೆ. 6:18, NW) ನಾವು ಜೀವಿಸುತ್ತಿರುವ ಲೋಕವು “ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾ. 5:19) ವಿರೋಧ ಇಲ್ಲವೆ ಪರೀಕ್ಷೆಗಳು ಹಠಾತ್ತನೇ ಎದುರಾಗಬಹುದು ಮತ್ತು ನಮ್ಮ ನಂಬಿಕೆಯನ್ನು ಪರೀಕ್ಷೆಗೊಳಪಡಿಸಬಹುದು. ಮಹಾ ಸಂಕಟದ ಸಮಯದಲ್ಲಿ, ದೇವರ ಸೇವಕರು ಮಾಗೋಗ್ನ ಗೋಗನ ಅತಿ ಉಗ್ರವಾದ ದಾಳಿಗೆ ಗುರಿಯಾಗುವರು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲವೆಂಬಂತೆ ತೋರುವುದು. ಇದು ಯೆಹೋವನಲ್ಲಿ ಪೂರ್ಣ ಭರವಸೆಯನ್ನು ಕೇಳಿಕೊಳ್ಳುವುದು.—ಯೆಹೆ. 38:14-16.
3 “ಒಂದು ಮಹತ್ವದ ಕೀಲಿ ಕೈಯು, ಫಲಕಾರಿಯಾದ ಕುಟುಂಬ ಬೈಬಲ್ ವಾಚನ, ಅಧ್ಯಯನ ಮತ್ತು ಚರ್ಚೆಯನ್ನು ಜೀವನಮಾರ್ಗವಾಗಿ ಮಾಡುವುದೇ.” ಇದನ್ನು “ಕುಟುಂಬಗಳೇ—ದೈನಂದಿನ ಬೈಬಲ್ ವಾಚನವನ್ನು ನಿಮ್ಮ ಜೀವನಮಾರ್ಗವಾಗಿ ಮಾಡಿರಿ!” ಎಂಬ ಶೀರ್ಷಿಕೆಯಿದ್ದ 1998ರ ಜಿಲ್ಲಾ ಅಧಿವೇಶನದ ಡ್ರಾಮದ ಪೀಠಿಕೆಯು ಹೇಳಿತು. ಅದು ಮುಂದುವರಿಸಿದ್ದು: “ಕುಟಂಬಗಳು ಇಂತಹ ಕಾರ್ಯಕ್ರಮವನ್ನು ಕ್ರಮವಾಗಿ ಅನುಸರಿಸುವುದಾದರೆ ಮತ್ತು ಬೈಬಲು ಸಜೀವವಾಗುವಂತಹ ರೀತಿಯಲ್ಲಿ ಇದನ್ನು ಮಾಡುವುದಾದರೆ, ಈ ಬೈಬಲ್ ಅಭಿಮುಖವಾದ ಕ್ರಮವು ಕುಟುಂಬದ ಮೇಲೆ ಭಾರೀ ಪರಿಣಾಮವನ್ನು ಉಂಟುಮಾಡಬಲ್ಲದು. ಅದು ನಮ್ಮ ಜ್ಞಾನವನ್ನು ಬೆಳೆಸುತ್ತದೆ. ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ಮತ್ತು ಅದು ನಮ್ಮನ್ನು ಪ್ರಚೋದಿಸಿ, ಸತ್ಯದ ಪಕ್ಷದಲ್ಲಿ ನಿಲ್ಲುವಂತೆ ಪ್ರೇರಿಸುವ ಆದರ್ಶಗಳನ್ನು—ಪೂರ್ವಕಾಲಗಳ ಪರಮ ನಂಬಿಗಸ್ತಿಕೆಯ ಸ್ತ್ರೀಪುರುಷರನ್ನು—ಒದಗಿಸುತ್ತದೆ.” ಒಳ್ಳೆಯ ಆತ್ಮಿಕ ನಿಯತ ಕ್ರಮದ ವಿಭಿನ್ನವಾದ ವೈಶಿಷ್ಟ್ಯಗಳನ್ನು ನಾವು ಪರಿಗಣಿಸುವಾಗ, ಕುಟುಂಬದ ತಲೆಗಳು ತಮ್ಮ ಕುಟುಂಬದ ಆತ್ಮಿಕ ಕಾರ್ಯಕ್ರಮವನ್ನು ಉತ್ತಮಗೊಳಿಸಲಿಕ್ಕಾಗಿ ಒಂದು ಅಥವಾ ಎರಡು ವಿಧಾನಗಳಿಗಾಗಿ ಹುಡುಕಬೇಕು.
4 ದೇವರ ವಾಕ್ಯವನ್ನು ದಿನಾಲೂ ಪರಿಶೀಲಿಸಿರಿ: “ದೇವರ ರಾಜ್ಯವು ಯಾವ ವಿರೋಧವೂ ಇಲ್ಲದೆ ಆಳ್ವಿಕೆ ನಡೆಸುವಾಗ ಮತ್ತು ದೇವರ ಚಿತ್ತವು ಪರಲೋಕದಲ್ಲಿ ನೆರವೇರಿರುವಂತೆ ಭೂಮಿಯಲ್ಲೂ ನೆರವೇರುವಾಗ, ಯಾವ ದುಷ್ಟ ಮನುಷ್ಯರು ಮತ್ತು ಪ್ರಾಣಿಗಳು ಕೂಡ ‘ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ.’ (ಯೆಶಾ. 11:9; ಮತ್ತಾ. 6:9, 10)” ಆ ಪದಗಳು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—2001ರ ಸೆಪ್ಟೆಂಬರ್ 11ಕ್ಕಾಗಿರುವ ಶಾಸ್ತ್ರವಚನದ ಹೇಳಿಕೆಗಳಲ್ಲಿ ಕಂಡುಬಂದವು. ಈ ಮರುಜ್ಞಾಪನವು ಎಷ್ಟು ಸಾಂತ್ವನದಾಯಕವಾಗಿತ್ತು! ಕುಟುಂಬದ ಒಬ್ಬ ತಲೆಯೋಪಾದಿ, ಬೈಬಲ್ ವಚನವನ್ನು ಮತ್ತು ಹೇಳಿಕೆಗಳನ್ನು ನಿಮ್ಮ ಕುಟುಂಬದೊಂದಿಗೆ ಪರಿಶೀಲಿಸುವ ದೈನಂದಿನ ವಾಡಿಕೆ ನಿಮಗಿದೆಯೋ? ಇದು ಅತಿ ಪ್ರಯೋಜನಕಾರಿಯಾಗಿದೆ. ಬೆಳಗ್ಗೆ ಕೂಡಿಬರಲು ಸಾಧ್ಯವಿಲ್ಲದಿರುವುದಾದರೆ, ಪ್ರಾಯಶಃ ನೀವದನ್ನು ಸಾಯಂಕಾಲ ಮಾಡಬಹುದು. ಒಬ್ಬ ತಂದೆಯು ಹೇಳಿದ್ದು: “ದೈನಿಕ ಬೈಬಲ್ ವಚನವನ್ನು ಚರ್ಚಿಸಲು, ಸಂಜೆಯ ಊಟದ ಸಮಯವು ನಮಗೆ ಒಳ್ಳೆಯ ಸಮಯವಾಗಿ ಪರಿಣಮಿಸಿದೆ.”
5 ದಿನದ ವಚನವನ್ನು ಒಂದು ಕುಟುಂಬವಾಗಿ ಚರ್ಚಿಸುವ ಒಳ್ಳೆಯ ನಿಯತ ಕ್ರಮವನ್ನು ನೀವು ಈಗಾಗಲೇ ಹೊಂದಿರುವುದಾದರೆ, ನೀವು ಪ್ರಶಂಸಾರ್ಹರು. ಪ್ರಾಯಶಃ ನೀವು ಇದೇ ಸಮಯದಲ್ಲಿ ಬೈಬಲಿನ ಒಂದು ಭಾಗವನ್ನು ಓದುವ ಮೂಲಕ ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಕೆಲವರಿಗೆ ದಿನದ ವಚನವು ಎಲ್ಲಿಂದ ತೆಗೆಯಲ್ಪಟ್ಟಿದೆಯೋ ಆ ಇಡೀ ಅಧ್ಯಾಯವನ್ನು ಓದುವ ಅಭ್ಯಾಸವಿದೆ. ಇತರರು ಕ್ರಮಾನುಸಾರವಾದ ವಾಚನವನ್ನು ಮಾಡುತ್ತಾರೆ, ಅಂದರೆ ಆಯ್ಕೆಮಾಡಿಕೊಂಡಿರುವಂಥ ಒಂದು ಬೈಬಲ್ ಪುಸ್ತಕದಿಂದ ಕ್ರಮೇಣ ಓದಿಕೊಂಡುಹೋಗುತ್ತಾರೆ. ದೈನಂದಿನ ಬೈಬಲ್ ವಾಚನವು, ನಿಮ್ಮ ಕುಟುಂಬವು ಯೆಹೋವನನ್ನು ಅಪ್ರಸನ್ನಗೊಳಿಸುವ ವಿಷಯದಲ್ಲಿ ಹಿತಕರವಾದ ಭಯವನ್ನು ಬೆಳೆಸಿಕೊಳ್ಳಲು ಸಹಾಯಮಾಡುವುದು ಮತ್ತು ಆತನ ಚಿತ್ತವನ್ನು ಮಾಡಲಿಕ್ಕಾಗಿ ಅವರ ಅಪೇಕ್ಷೆಯನ್ನು ತೀವ್ರಗೊಳಿಸುವುದು.—ಧರ್ಮೋ. 17:18-20.
6 ನಿಮ್ಮ ಕುಟುಂಬದ ಬೈಬಲ್ ವಾಚನ ಕಾರ್ಯಕ್ರಮ ಮತ್ತು ದಿನದ ವಚನದ ಪರಿಶೀಲನೆಯು, ನೀವು ಮಾಹಿತಿಯ ಪ್ರಾಯೋಗಿಕ ಮೌಲ್ಯವನ್ನು ಚರ್ಚಿಸಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳುವಾಗ ಇನ್ನಷ್ಟು ಪ್ರಯೋಜನಕಾರಿಯಾಗಿರುವುದು. ಶುಶ್ರೂಷಾ ಶಾಲೆ ಪಠ್ಯಪುಸ್ತಕದ 60ನೆಯ ಪುಟವು ಈ ಸಲಹೆಯನ್ನು ನೀಡುತ್ತದೆ: “ಆ ವಾರಕ್ಕಾಗಿ ನೇಮಿಸಲ್ಪಟ್ಟಿರುವ ಬೈಬಲ್ ವಾಚನದಲ್ಲಿ ಕೆಲವು ವಚನಗಳನ್ನು ನೀವು ಆರಿಸಿಕೊಂಡು, ಅವುಗಳ ಅರ್ಥವನ್ನು ಚರ್ಚಿಸಿ, ಬಳಿಕ ಇಂತಹ ಪ್ರಶ್ನೆಗಳನ್ನು ಕೇಳಬಹುದು: ‘ಇದು ನಮಗೆ ಹೇಗೆ ಮಾರ್ಗದರ್ಶನವನ್ನು ಒದಗಿಸುತ್ತದೆ? ಈ ವಚನಗಳನ್ನು ನಾವು ಶುಶ್ರೂಷೆಯಲ್ಲಿ ಹೇಗೆ ಉಪಯೋಗಿಸಬಹುದು? ಅವು ಯೆಹೋವನ ಬಗ್ಗೆ ಮತ್ತು ಆತನು ಕಾರ್ಯವನ್ನು ನಡಿಸುವ ರೀತಿಯ ಬಗ್ಗೆ ಏನನ್ನು ತಿಳಿಸುತ್ತವೆ, ಮತ್ತು ಅದು ನಮಗೆ ಆತನ ಕಡೆಗಿರುವ ನಮ್ಮ ಗಣ್ಯತೆಯನ್ನು ಹೇಗೆ ವರ್ಧಿಸುತ್ತದೆ?’” ಇಂತಹ ಆತ್ಮಿಕ ಸಂಭಾಷಣೆಗಳು, ನಿಮ್ಮ ಮನೆವಾರ್ತೆಯಲ್ಲಿರುವ ಎಲ್ಲರೂ “ಕರ್ತನ [“ಯೆಹೋವನ,” NW] ಚಿತ್ತವೇನೆಂಬದನ್ನು ವಿಚಾರಿಸಿ ತಿಳಿ”ದುಕೊಳ್ಳುತ್ತಾ ಹೋಗಲು ಸಹಾಯಮಾಡುವವು.—ಎಫೆ. 5:17.
7 ಕುಟುಂಬ ಅಧ್ಯಯನ: ಕುಟುಂಬ ಅಧ್ಯಯನವನ್ನು ಪ್ರತಿ ವಾರ ಕ್ರಮವಾಗಿ ನಡೆಸುವುದು, ಆತ್ಮಿಕ ವಿಷಯಗಳು ಮೊದಲಿನ ಸ್ಥಾನವನ್ನು ಪಡೆದುಕೊಳ್ಳುತ್ತವೆ ಎಂಬುದನ್ನು ಕುಟುಂಬ ತಲೆಗಳು ತಮ್ಮ ಮಕ್ಕಳಿಗೆ ತೋರಿಸುವ ಉತ್ತಮವಾದ ವಿಧಾನವಾಗಿದೆ. ಒಬ್ಬ ಯುವಕನು ಜ್ಞಾಪಿಸಿಕೊಳ್ಳುವುದು: “ಕೆಲವೊಮ್ಮೆ ಕೆಲಸಕ್ಕೆ ಹೋಗಿ ಬಂದ ಕಾರಣ ತಂದೆಗೆ ಎಷ್ಟು ಆಯಾಸವಾಗಿರುತ್ತಿತ್ತೆಂದರೆ ಅವರಿಗೆ ಎಚ್ಚತ್ತಿರಲು ಆಗುತ್ತಿರಲಿಲ್ಲ. ಆದರೂ ಅಧ್ಯಯನವು ನಡೆಸಲ್ಪಡುತ್ತಿತ್ತು. ಇದು ನಾವು ಅದರ ಗಂಭೀರತೆಯನ್ನು ತಿಳಿದುಕೊಳ್ಳಲು ಸಹಾಯಮಾಡಿತು.” ಈ ಏರ್ಪಾಡಿನ ಯಶಸ್ಸಿಗೆ ಮಕ್ಕಳು ಕೂಡ ತಮ್ಮ ನೆರವನ್ನು ನೀಡಬಲ್ಲರು. ಒಂಬತ್ತು ಮಕ್ಕಳಿರುವ ಒಂದು ಕುಟುಂಬವು ತಮ್ಮ ಕುಟುಂಬ ಅಧ್ಯಯನಕ್ಕಾಗಿ ಕ್ರಮವಾಗಿ ಐದು ಗಂಟೆಗೆ ಎದ್ದಿತು. ಏಕೆಂದರೆ ಬೇರೆ ಯಾವ ಸಮಯವೂ ಅನುಕೂಲಕರವಾಗಿರಲಿಲ್ಲ.
8 ಕುಟುಂಬ ಅಧ್ಯಯನವು ಪರಿಣಾಮಕಾರಿಯಾಗಿರಲಿಕ್ಕಾಗಿ, ಕುಟುಂಬದ ತಲೆಯು ‘ತನ್ನ ಉಪದೇಶದ ವಿಷಯದಲ್ಲಿ ಎಚ್ಚರಿಕೆ’ಯಿಂದಿರಬೇಕು. (1 ತಿಮೊ. 4:16) ಶುಶ್ರೂಷಾ ಶಾಲೆ ಪಠ್ಯಪುಸ್ತಕದ 32ನೆಯ ಪುಟವು ಹೇಳುವುದು: “ಪರಿಣಾಮಕಾರಿಯಾದ ಒಂದು ಕುಟುಂಬ ಅಧ್ಯಯನವು ನಿಮ್ಮ ಕುಟುಂಬದ ಸದಸ್ಯರ ಕುರಿತಾದ ಅಧ್ಯಯನದಿಂದಲೇ ಆರಂಭಗೊಳ್ಳುತ್ತದೆ ಎಂದು ಹೇಳಸಾಧ್ಯವಿದೆ. ನಿಮ್ಮ ಕುಟುಂಬದ ಸದಸ್ಯರು ಆತ್ಮಿಕವಾಗಿ ಹೇಗೆ ಪ್ರಗತಿಮಾಡುತ್ತಿದ್ದಾರೆ? . . . ನೀವು ನಿಮ್ಮ ಮಕ್ಕಳೊಂದಿಗೆ ಕ್ಷೇತ್ರ ಸೇವೆಯಲ್ಲಿರುವಾಗ, ಅವರು ತಮ್ಮ ಸಮವಯಸ್ಕರ ಮುಂದೆ ತಮ್ಮನ್ನು ಯೆಹೋವನ ಸಾಕ್ಷಿಗಳಾಗಿ ತೋರಿಸಿಕೊಳ್ಳಲು ಸಂತೋಷಿಸುತ್ತಾರೊ? ಕುಟುಂಬ ಬೈಬಲ್ ವಾಚನ ಮತ್ತು ಅಧ್ಯಯನದ ನಿಮ್ಮ ಕಾರ್ಯಕ್ರಮದಲ್ಲಿ ಅವರು ಸಂತೋಷಿಸುತ್ತಾರೊ? ಅವರು ನಿಜವಾಗಿಯೂ ಯೆಹೋವನ ಮಾರ್ಗಗಳನ್ನು ತಮ್ಮ ಜೀವನಮಾರ್ಗವಾಗಿ ಮಾಡಿಕೊಳ್ಳುತ್ತಿದ್ದಾರೊ? ಈ ವಿಷಯದಲ್ಲಿ ಜಾಗರೂಕ ಅವಲೋಕನವು, ಕುಟುಂಬದ ಪ್ರತಿಯೊಬ್ಬ ಸದಸ್ಯನಲ್ಲಿ ಆತ್ಮಿಕ ಗುಣಗಳನ್ನು ಸ್ಥಾಪಿಸಲಿಕ್ಕಾಗಿ ಮತ್ತು ಬೆಳೆಸಲಿಕ್ಕಾಗಿ ಕುಟುಂಬದ ತಲೆಯಾಗಿರುವ ನೀವು ಏನು ಮಾಡಬೇಕೆಂಬುದನ್ನು ತೋರಿಸುವುದು.”
9 ಸಭಾ ಕೂಟಗಳು: ಸಭಾ ಕೂಟಗಳಿಗಾಗಿ ತಯಾರಿಸುವುದು ಮತ್ತು ಅವುಗಳಿಗೆ ಹಾಜರಾಗುವುದು ನಿಮ್ಮ ಸಾಪ್ತಾಹಿಕ ನಿಯತ ಕ್ರಮದ ಪ್ರಾಮುಖ್ಯ ಭಾಗವಾಗಿರಬೇಕು. (ಇಬ್ರಿ. 10:24, 25) ಕೆಲವು ಸಂದರ್ಭಗಳಲ್ಲಿ, ಕೆಲವು ಕೂಟಗಳಿಗಾಗಿ ನೀವು ಕುಟುಂಬವಾಗಿ ತಯಾರಿಮಾಡಲು ಸಾಧ್ಯವಿರಬಹುದು. ಕೊನೆಯ ಕ್ಷಣದ ತನಕ ಕಾದಿರುವ ಬದಲು, ಸಾಕಷ್ಟು ಮುಂಚಿತವಾಗಿಯೇ ತಯಾರಿಯನ್ನು ಮಾಡಲು ನೀವು ಏರ್ಪಾಡುಗಳನ್ನು ಮಾಡಬಲ್ಲಿರೋ? ಈ ವಿಷಯದಲ್ಲಿ ಒಂದು ನಿಯತ ಕ್ರಮವು, ನಿಮ್ಮ ತಯಾರಿಸುವಿಕೆಯ ಗುಣಮಟ್ಟವನ್ನು ಉತ್ತಮಗೊಳಿಸುವುದು ಮತ್ತು ನೀವು ಕೂಟಗಳಿಂದ ಪಡೆದುಕೊಳ್ಳುವ ಪ್ರಯೋಜನಗಳನ್ನು ಹೆಚ್ಚಿಸುವುದು.—ಜ್ಞಾನೋ. 21:5.
10 ಗುಣಮಟ್ಟ ಮತ್ತು ಕ್ರಮನಿಷ್ಠೆಗಳು ಪರಿಣಾಮಕಾರಿಯಾದ ಆತ್ಮಿಕ ನಿಯತ ಕ್ರಮದ ಎದ್ದುಕಾಣುವ ವೈಶಿಷ್ಟ್ಯಗಳಾಗಿವೆ. ನೀವು ಎಲ್ಲ ಕೂಟಗಳಿಗೆ ತಯಾರಿಸುವುದನ್ನು ಪರಿಸ್ಥಿತಿಗಳು ಕಷ್ಟಕರವಾಗಿ ಮಾಡುವುದಾದರೆ ಆಗೇನು? ಶುಶ್ರೂಷಾ ಶಾಲೆ ಪಠ್ಯಪುಸ್ತಕದ 31ನೆಯ ಪುಟವು ಈ ಸಲಹೆಯನ್ನು ನೀಡುತ್ತದೆ: “ವಿಷಯಭಾಗವನ್ನು ಅಧ್ಯಯನ ಮಾಡಿ ಮುಗಿಸುವ ಉದ್ದೇಶದಿಂದ ಅವಸರವಸರವಾಗಿ ಅಧ್ಯಯನ ಮಾಡುವ, ಇಲ್ಲವೆ ಅದಕ್ಕಿಂತಲೂ ಗಂಭೀರವಾಗಿ, ಎಲ್ಲವನ್ನೂ ಮಾಡಲು ನಿಮಗೆ ಸಮಯವಿಲ್ಲ ಎಂಬ ಕಾರಣದಿಂದ ಯಾವುದನ್ನೂ ಅಧ್ಯಯನ ಮಾಡದಿರುವ ಅಪಾಯಗಳಿಗೆ ಒಳಗಾಗಬೇಡಿರಿ. ಇದಕ್ಕೆ ಬದಲಾಗಿ, ಎಷ್ಟನ್ನು ಅಧ್ಯಯನ ಮಾಡಸಾಧ್ಯವಿದೆ ಎಂಬುದನ್ನು ನಿರ್ಧರಿಸಿ ಅದನ್ನು ಒಳ್ಳೆಯದಾಗಿ ಮಾಡಿರಿ. ಪ್ರತಿ ವಾರ ಹಾಗೆ ಮಾಡಿರಿ. ಸಕಾಲದಲ್ಲಿ, ಇತರ ಕೂಟಗಳನ್ನೂ ಇದರಲ್ಲಿ ಸೇರಿಸಲಿಕ್ಕಾಗಿರುವ ನಿಮ್ಮ ಪ್ರಯತ್ನಗಳನ್ನು ಹೆಚ್ಚು ವಿಸ್ತಾರಗೊಳಿಸಿರಿ.”
11 ಕುಟುಂಬಗಳು ಕೂಟಗಳಿಗೆ ಸ್ವಲ್ಪ ಬೇಗನೆ ಬರುವಾಗ, ಇದು ಅವರು ಯೆಹೋವನನ್ನು ಸ್ತುತಿಸಲು ಮತ್ತು ಆತನು ಒದಗಿಸುವ ಉಪದೇಶದಿಂದ ಪ್ರಯೋಜನವನ್ನು ಪಡೆದುಕೊಳ್ಳಲು ತಮ್ಮನ್ನು ಯೋಗ್ಯವಾದ ಮನೋಸ್ಥಿತಿಯಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ. ನಿಮ್ಮ ಕುಟುಂಬಕ್ಕೆ ಈ ವಾಡಿಕೆ ಇದೆಯೋ? ಇದು ಮನೆವಾರ್ತೆಯಲ್ಲಿರುವ ಎಲ್ಲರ ಸುಯೋಜನೆ ಮತ್ತು ಸಹಕಾರವನ್ನು ಕೇಳಿಕೊಳ್ಳುತ್ತದೆ. ಕೂಟಗಳಿರುವ ದಿನಗಳಂದು ನಿಮ್ಮ ಕುಟುಂಬವು ಅನೇಕವೇಳೆ ಗಡಿಬಿಡಿಯಿಂದ ಓಡಾಡುತ್ತಿರುವುದನ್ನು ಮತ್ತು ಬಲು ಒತ್ತಡದಲ್ಲಿರುವುದನ್ನು ನೀವು ಕಂಡುಕೊಳ್ಳುವುದಾದರೆ, ನಿಮ್ಮ ನಿಯತ ಕ್ರಮದಲ್ಲಿ ಹೊಂದಾಣಿಕೆಗಳನ್ನು ಮಾಡಸಾಧ್ಯವಿದೆಯೇ? ಮುಂಚಿತವಾಗಿಯೇ ಮಾಡಲ್ಪಡಸಾಧ್ಯವಿರುವ ವಿಷಯಗಳು ಇವೆಯೋ? ಕುಟುಂಬದ ಒಬ್ಬ ಸದಸ್ಯನು ಹೆಚ್ಚನ್ನು ಮಾಡಲಿಕ್ಕಿರುವುದರಿಂದ ಅವನು ಹೊರೆಹೊತ್ತವನಂತಿರುವುದಾದರೆ, ಇತರರು ಅವನಿಗೆ ಸಹಾಯಮಾಡಬಹುದೋ? ಕೆಲವು ನಿಮಿಷ ಮುಂಚಿತವಾಗಿಯೇ ಮನೆಯಿಂದ ಹೊರಡಲು ಎಲ್ಲರೂ ಸಿದ್ಧರಿರುವುದಾದರೆ ಅದು ಒತ್ತಡವನ್ನು ಕಡಿಮೆಗೊಳಿಸುವುದೋ? ಸುಯೋಜನೆಯು ಕುಟುಂಬದಲ್ಲೂ ಸಭೆಯಲ್ಲೂ ಸಮಾಧಾನದ ಪರಿಸ್ಥಿತಿಯನ್ನು ಪ್ರವರ್ಧಿಸಲು ಸಹಾಯಮಾಡುತ್ತದೆ.—1 ಕೊರಿಂ. 14:33, 40.
12 ಕ್ಷೇತ್ರ ಸೇವೆ: ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ನಿರ್ದಿಷ್ಟವಾದ ಒಂದು ಸಮಯವನ್ನು ಬದಿಗಿರಿಸುವುದು ಒಳ್ಳೆಯ ಆತ್ಮಿಕ ನಿಯತ ಕ್ರಮದ ಮತ್ತೊಂದು ಭಾಗವಾಗಿದೆ. ಜೇಸನ್ ಎಂಬ ಯುವಕನು ಜ್ಞಾಪಿಸಿಕೊಳ್ಳುವುದು: “ನಮ್ಮ ಕುಟುಂಬದಲ್ಲಿ, ಶನಿವಾರ ಬೆಳಗ್ಗೆಗಳನ್ನು ಯಾವಾಗಲೂ ಕ್ಷೇತ್ರ ಸೇವೆಗಾಗಿ ಬದಿಗಿರಿಸಲಾಗುತ್ತಿತ್ತು. ಇದರಿಂದ ನನಗೆ ಒಳಿತಾಯಿತು, ಹೇಗೆಂದರೆ ನಾನು ಶುಶ್ರೂಷೆಗೆ ಎಷ್ಟು ಹೆಚ್ಚು ಬಾರಿ ಹೋದೆನೊ ಅಷ್ಟು ಹೆಚ್ಚು ನನಗೆ ಅದರಿಂದ ಸಾಧಿಸಲಾಗುತ್ತಿದ್ದ ಒಳಿತನ್ನು ನೋಡಸಾಧ್ಯವಾಯಿತು ಮತ್ತು ನಾನು ಅದರಲ್ಲಿ ಹೆಚ್ಚು ಆನಂದಿಸಿದೆ.” ಹೀಗೆಯೇ ಸಾಕ್ಷಿ ಕುಟುಂಬಗಳಲ್ಲಿ ಬೆಳೆಸಲ್ಪಟ್ಟ ಅನೇಕರು, ಶುಶ್ರೂಷೆಗಾಗಿ ಪ್ರತಿ ವಾರ ಒಂದು ನಿರ್ದಿಷ್ಟವಾದ ಸಮಯವನ್ನು ಬದಿಗಿರಿಸುವುದು, ಕ್ರೈಸ್ತ ಶುಶ್ರೂಷಕರಾಗಿ ಪ್ರಗತಿಹೊಂದಲು ಸಹಾಯಮಾಡಿದೆ ಎಂಬುದನ್ನು ಗಮನಿಸಿದ್ದಾರೆ.
13 ಒಂದು ನಿಯತ ಕ್ರಮವು, ನಿಮ್ಮ ಕುಟುಂಬವು ಕ್ಷೇತ್ರ ಸೇವೆಯಲ್ಲಿ ವ್ಯಯಿಸುವಂಥ ಸಮಯವನ್ನು ಹೆಚ್ಚು ಸಂತೋಷಕರವಾಗಿಯೂ ಫಲಕಾರಿಯಾಗಿಯೂ ಮಾಡಲು ಸಹಾಯಮಾಡಬಲ್ಲದು. ಇದನ್ನು ಸಾಧಿಸುವುದು ಹೇಗೆ? ಜುಲೈ 1, 1999ರ ಕಾವಲಿನಬುರುಜು ಪುಟ 21ರಲ್ಲಿ ಈ ಮುಂದಿನ ಹೇಳಿಕೆಯನ್ನು ಮಾಡಿತು: “ನಿಮ್ಮ ಮನೆವಾರ್ತೆಯ ಸದಸ್ಯರು ವಾರದ ಕ್ಷೇತ್ರ ಸೇವೆಗಾಗಿ ತಯಾರಿಸುವಂತೆ ಸಹಾಯ ಮಾಡಲು, ನೀವು ನಿಮ್ಮ ಕುಟುಂಬ ಅಧ್ಯಯನದ ಸಮಯವನ್ನು ಕೆಲವೊಮ್ಮೆ ಉಪಯೋಗಿಸುತ್ತೀರೊ? ಹಾಗೆ ಮಾಡುವುದು ತುಂಬ ಪ್ರಯೋಜನಕರವಾಗಿರಬಲ್ಲದು. (2 ತಿಮೊಥೆಯ 2:15) ಕುಟುಂಬದವರೆಲ್ಲರ ಸೇವೆಯು ಅರ್ಥಭರಿತವೂ ಫಲಪ್ರದವೂ ಆಗಿರುವಂತೆ ಅದು ಸಹಾಯ ಮಾಡುವುದು. ಕೆಲವೊಮ್ಮೆ ನೀವು ಸಂಪೂರ್ಣ ಅಧ್ಯಯನ ಅವಧಿಯನ್ನು ಇಂತಹ ತಯಾರಿಗಾಗಿ ಬದಿಗಿಡಬಹುದು. ಹೆಚ್ಚಿನ ವೇಳೆ, ನೀವು ಕುಟುಂಬ ಅಧ್ಯಯನದ ಕೊನೆಯಲ್ಲಿ ಅಥವಾ ವಾರದ ಬೇರೊಂದು ಸಮಯದಲ್ಲಿ ಕ್ಷೇತ್ರ ಶುಶ್ರೂಷೆಯ ವಿಷಯಗಳನ್ನು ಸ್ವಲ್ಪ ಸಮಯಕ್ಕಾಗಿ ಚರ್ಚಿಸಬಹುದು.” ನಿಮ್ಮ ಕುಟುಂಬವು ಇದನ್ನು ಪ್ರಯತ್ನಿಸಿ ನೋಡಿದೆಯೋ?
14 ಪ್ರಗತಿಯನ್ನು ಮಾಡುತ್ತಾ ಹೋಗಿರಿ: ಈ ಪರಿಗಣನೆಯ ಮೂಲಕ, ನಿಮ್ಮ ಕುಟುಂಬವು ಉತ್ತಮವಾಗಿ ಕಾರ್ಯನಡಿಸುತ್ತಿರುವ ಕ್ಷೇತ್ರಗಳನ್ನು ನೀವು ಗಮನಿಸಿದಿರೋ? ಅವರನ್ನು ಶ್ಲಾಘಿಸಿರಿ ಮತ್ತು ಆ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಮಾಡಲು ಪ್ರಯತ್ನಿಸಿರಿ. ಸುಧಾರಣೆಯನ್ನು ಅವಶ್ಯಪಡಿಸುವ ಅನೇಕ ಕ್ಷೇತ್ರಗಳನ್ನು ನೀವು ಕಂಡುಕೊಳ್ಳುವುದಾದರೆ, ಮೊದಲು ಗಮನಹರಿಸಲಾಗುವಂತೆ ಒಂದು ಅಥವಾ ಎರಡು ಕ್ಷೇತ್ರಗಳನ್ನು ಆರಿಸಿಕೊಳ್ಳಿ. ಇವು ನಿಮ್ಮ ಆತ್ಮಿಕ ನಿಯತ ಕ್ರಮದ ಭಾಗವಾಗುವುದಾದರೆ, ಇನ್ನೂ ಹೆಚ್ಚಿನ ಒಂದೆರಡು ಕ್ಷೇತ್ರಗಳ ಮೇಲೆ ಕೆಲಸಮಾಡಿ. ಸಕಾರಾತ್ಮಕರಾಗಿರ್ರಿ ಮತ್ತು ಸೈರಣೆಯುಳ್ಳವರಾಗಿರ್ರಿ. (ಫಿಲಿ. 4:4, 5) ನಿಮ್ಮ ಮನೆವಾರ್ತೆಗಾಗಿ ಒಂದು ಒಳ್ಳೆಯ ಆತ್ಮಿಕ ನಿಯತ ಕ್ರಮವನ್ನು ಸ್ಥಾಪಿಸುವುದು ಹೆಚ್ಚಿನ ಪ್ರಯಾಸವನ್ನು ಕೇಳಿಕೊಳ್ಳುತ್ತದೆ ನಿಜ, ಆದರೆ ಅದು ಸಾರ್ಥಕವಾಗಿರುವುದು. ಏಕೆಂದರೆ ಯೆಹೋವನು ಆಶ್ವಾಸನೆ ನೀಡುವುದು: “ಸ್ಥಾಪಿತ ಮಾರ್ಗದಲ್ಲಿ ನಡೆಯುವವನಿಗೆ, ದೇವರಿಂದ ಬರುವ ರಕ್ಷಣೆಯನ್ನು ತೋರಿಸುವೆನು.”—ಕೀರ್ತ. 50:23, NW.