ನಿಮ್ಮ ಮಗನು ಅಥವಾ ಮಗಳು ಒಂದು ಪ್ರೌಢ ನಿರ್ಣಯವನ್ನು ಮಾಡಬಲ್ಲರೊ?
1. ರಕ್ತದ ಉಪಯೋಗದ ಬಗ್ಗೆ ಯುವ ಸಾಕ್ಷಿಗಳು ಯಾವ ನಿಲುವನ್ನು ತೆಗೆದುಕೊಂಡಿದ್ದಾರೆ? ಒಂದು ಉದಾಹರಣೆಯನ್ನು ಕೊಡಿರಿ.
1 ಒಂದು ಪ್ರೌಢ ನಿರ್ಣಯ—ಯಾವುದರ ಬಗ್ಗೆ? ರಕ್ತಪೂರಣಗಳ ಬಗ್ಗೆಯೇ. 1992, ಮಾರ್ಚ್ 15ರ ಕಾವಲಿನಬುರುಜು ಸಂಚಿಕೆಯಲ್ಲಿ “ಯೆಹೋವನಿಂದ ಬೋಧಿಸಲ್ಪಟ್ಟ ಪ್ರಕಾರ ನಡೆಯಿರಿ” ಎಂಬ ಶೀರ್ಷಿಕೆಯುಳ್ಳ ಲೇಖನದಲ್ಲಿ ತೋರಿಸಲ್ಪಟ್ಟಂತೆ, ಯೆಹೋವನ ಸಾಕ್ಷಿಗಳ ಮಕ್ಕಳು ರಕ್ತದ ಕುರಿತಾದ ದೇವರ ನಿಯಮಕ್ಕೆ ವಿಧೇಯರಾಗುವುದು ತಮ್ಮ ಹೆತ್ತವರಿಗೆ ಪ್ರಾಮುಖ್ಯವಾಗಿರುವಂತೆಯೇ ತಮಗೂ ಪ್ರಾಮುಖ್ಯವಾಗಿದೆ ಎಂಬ ತಮ್ಮ ಬಯಕೆಯನ್ನು ರುಜುಪಡಿಸಲು ಸ್ಪಷ್ಟವಾದ ಮತ್ತು ದೃಢವಾದ ನಿಲುವನ್ನು ತೆಗೆದುಕೊಳ್ಳಬೇಕಾಗಿರುತ್ತದೆ. ನಿಮ್ಮ ಅಪ್ರಾಪ್ತ ವಯಸ್ಸಿನ ಮಗನು/ಮಗಳು ಸಹ ಇಂಥ ಒಂದು ನಿರ್ಣಯವನ್ನು ಮಾಡುವಂತೆ ಕೇಳಿಕೊಳ್ಳಲ್ಪಡುವ ಸಾಧ್ಯತೆಯಿದೆಯೊ?
2. ರಕ್ತಪೂರಣವನ್ನು ನಿರಾಕರಿಸಿದಂಥ ಅಪ್ರಾಪ್ತ ವಯಸ್ಸಿನ ಹುಡುಗಿಗೆ ಒಂದು ನ್ಯಾಯಾಲಯವು ಯಾವ ಕಾನೂನುಬದ್ಧ ಮಟ್ಟವನ್ನು ಅನ್ವಯಿಸಿತು, ಮತ್ತು ಇದರಿಂದ ಕ್ರೈಸ್ತ ಹೆತ್ತವರು ಹಾಗೂ ಅವರ ಅಪ್ರಾಪ್ತ ವಯಸ್ಸಿನ ಮಕ್ಕಳು ಏನನ್ನು ಕಲಿಯಬಲ್ಲರು?
2 ಕಾನೂನು ಏನು ಹೇಳುತ್ತದೆ? ಯುನೈಟೆಡ್ ಸ್ಟೇಟ್ಸ್ನಲ್ಲಿ, ಪ್ರೌಢರಾದ ಅಪ್ರಾಪ್ತ ವಯಸ್ಸಿನ ಮಕ್ಕಳ ಹಕ್ಕಿನ ಬಗ್ಗೆ ತೀರ್ಪನ್ನು ಕೊಟ್ಟಿರುವ ಅತ್ಯುಚ್ಚ ನ್ಯಾಯಾಲಯವು ಇಲಿನೊಯಿ ರಾಜ್ಯದ ಸರ್ವೋಚ್ಚ ನ್ಯಾಯಾಲಯ ಆಗಿದೆ. ಹದಿನೇಳು ವರ್ಷದ ಸಹೋದರಿಯೊಬ್ಬಳ ಮೊಕದ್ದಮೆಯನ್ನು ಪರಿಶೀಲಿಸುತ್ತಾ ಆ ನ್ಯಾಯಾಲಯ ಅಧಿಕೃತವಾಗಿ ತಿಳಿಸಿದ್ದು: “ಅಪ್ರಾಪ್ತ ವಯಸ್ಸಿನ ಆ ಹುಡುಗಿಯು ತನ್ನ ಕ್ರಿಯೆಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳುವಷ್ಟು [ಮತ್ತು] ವಯಸ್ಕರಂಥ ತೀರ್ಮಾನಶಕ್ತಿಯನ್ನು ತೋರಿಸುವಷ್ಟು ಪ್ರೌಢತೆಯುಳ್ಳವಳಾಗಿದ್ದಾಳೆ ಎಂಬುದಕ್ಕೆ ಸ್ಪಷ್ಟ ಹಾಗೂ ಮನಗಾಣಿಸುವಂಥ ಸಾಕ್ಷ್ಯವಿದ್ದರೆ, ಆಗ ಸಾಮಾನ್ಯ ನಿಯಮದ ಹಕ್ಕಿನ ಮೇರೆಗೆ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಪ್ರೌಢ ಅಪ್ರಾಪ್ತ ವಯಸ್ಕ ಸಿದ್ಧಾಂತ ಅನುಮತಿಸುತ್ತದೆ.” ಹೀಗೆ, ಅಪ್ರಾಪ್ತ ವಯಸ್ಸಿನ ಹುಡುಗ/ಹುಡುಗಿ ತಮ್ಮ ಸ್ವಂತ ನಿರ್ಣಯಗಳನ್ನು ಮಾಡುವಷ್ಟು ಪ್ರೌಢತೆಯುಳ್ಳವರಾಗಿದ್ದಾರೊ ಎಂಬುದನ್ನು ನಿರ್ಧರಿಸಲಿಕ್ಕಾಗಿ ಡಾಕ್ಟರ್ಗಳು ಮತ್ತು ಅಧಿಕಾರಿಗಳು, ರಕ್ತವನ್ನು ತೆಗೆದುಕೊಳ್ಳುವ ವಿಷಯದಲ್ಲಿ ರೋಗಿಯು ತನ್ನ ವೈಯಕ್ತಿಕ ಆಕ್ಷೇಪಣೆಯನ್ನು ವ್ಯಕ್ತಪಡಿಸುವುದನ್ನು ಕೇಳಿಸಿಕೊಳ್ಳಲು ಅವರನ್ನು ಭೇಟಿಮಾಡಬಹುದು. ಆದುದರಿಂದ, ಆ ಹುಡುಗ/ಹುಡುಗಿ ತಮ್ಮ ವೈದ್ಯಕೀಯ ಪರಿಸ್ಥಿತಿಯ ಗಂಭೀರತೆಯ ಕುರಿತು, ಮತ್ತು ತಾವು ಆಯ್ಕೆಮಾಡುವ ಚಿಕಿತ್ಸೆಯ ಪರಿಣಾಮಗಳ ಕುರಿತು ತಕ್ಕಮಟ್ಟಿಗೆ ಅರ್ಥಮಾಡಿಕೊಂಡಿರುವುದು ಅಗತ್ಯ ಹಾಗೂ ರಕ್ತದ ಬಗ್ಗೆಯಿರುವ ದೇವರ ನಿಯಮದ ಕುರಿತಾದ ತನ್ನ ಸ್ವಂತ ಧಾರ್ಮಿಕ ನಂಬಿಕೆಯನ್ನು ಸ್ಪಷ್ಟವಾಗಿಯೂ ದೃಢವಾಗಿಯೂ ವ್ಯಕ್ತಪಡಿಸುವುದು ಅಗತ್ಯ.
3. ಹೆತ್ತವರು ಯಾವ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಮತ್ತು ಏಕೆ?
3 ನಿಮ್ಮ ಮಗನು/ಮಗಳು ಏನು ಹೇಳುವರು? ನಿಮ್ಮ ಮಕ್ಕಳು ರಕ್ತದ ಬಗ್ಗೆಯಿರುವ ದೇವರ ನಿಯಮದ ಕುರಿತು ತಾವೇ ಮಾತಾಡಲು ಶಕ್ತರಾಗಿದ್ದಾರೊ? ‘ರಕ್ತವನ್ನು ವಿಸರ್ಜಿಸಬೇಕೆಂಬುದು’ ದೇವರ ಆಜ್ಞೆಯಾಗಿದೆ ಎಂಬುದನ್ನು ಅವರು ಪೂರ್ಣಹೃದಯದಿಂದ ನಂಬುತ್ತಾರೊ? (ಅ. ಕೃ. 15:29; 21:25) ಅವರು ತಮ್ಮ ನಂಬಿಕೆಯನ್ನು ಶಾಸ್ತ್ರವಚನಗಳಿಂದ ವಿವರಿಸಬಲ್ಲರೊ? ಅವರ ಜೀವವು ಅಪಾಯದಲ್ಲಿದೆಯೆಂದು ಡಾಕ್ಟರ್ಗಳು ನೆನಸುವಲ್ಲಿ, ಒಂದುವೇಳೆ ಹೆತ್ತವರು ಇರದಿರುವ ಸಂದರ್ಭಗಳಲ್ಲೂ ಅವರು ರಕ್ತದ ಬಗ್ಗೆ ತಮ್ಮ ದೃಢನಿರ್ಣಯವನ್ನು ಧೈರ್ಯದಿಂದ ಸಮರ್ಥಿಸುವರೊ? ‘ಕಾಲವೂ ಪ್ರಾಪ್ತಿಯೂ [ನಮ್ಮಲ್ಲಿ] ಯಾರಿಗೂ ತಪ್ಪಿದ್ದಲ್ಲವಾದ್ದರಿಂದ,’ ನಿಮ್ಮ ಮಕ್ಕಳ ಸಮಗ್ರತೆಗೆ ಬರಬಹುದಾದ ಯಾವುದೇ ಅನಿರೀಕ್ಷಿತ ಪರೀಕ್ಷೆಯನ್ನು ಎದುರಿಸಲು ನೀವು ಅವರನ್ನು ಹೇಗೆ ತಯಾರುಗೊಳಿಸಬಲ್ಲಿರಿ?—ಪ್ರಸಂ. 9:11; ಎಫೆ. 6:4.
4, 5. (ಎ) ಹೆತ್ತವರಿಗೆ ಯಾವ ಜವಾಬ್ದಾರಿಯಿದೆ, ಮತ್ತು ಅವರು ಅದನ್ನು ಹೇಗೆ ಪೂರೈಸಸಾಧ್ಯವಿದೆ? (ಬಿ) ಹೆತ್ತವರಿಗೆ ಸಹಾಯಮಾಡಲಿಕ್ಕಾಗಿ ಯಾವ ಒದಗಿಸುವಿಕೆಗಳು ಲಭ್ಯವಿವೆ?
4 ಹೆತ್ತವರೇ, ನೀವು ಏನು ಮಾಡಸಾಧ್ಯವಿದೆ? ರಕ್ತದ ಬಗ್ಗೆ ದೇವರಿಗಿರುವ ನೋಟವನ್ನು ನಿಮ್ಮ ಮಕ್ಕಳಿಗೆ ಕಲಿಸುವ ಜವಾಬ್ದಾರಿಯು ನಿಮಗಿದೆ. (2 ತಿಮೊ. 3:14, 15) ತರ್ಕಿಸು (ಇಂಗ್ಲಿಷ್) ಪುಸ್ತಕದ ಪುಟ 70-4ರಲ್ಲಿ ಇದರ ಬಗ್ಗೆ ಸ್ಪಷ್ಟ ವಿವರಣೆಯನ್ನು ಕೊಡಲಾಗಿದೆ. ನಿಮ್ಮ ಕುಟುಂಬದೊಂದಿಗೆ ಅದನ್ನು ಜಾಗರೂಕತೆಯಿಂದ ಅಧ್ಯಯನಮಾಡಿರಿ. ನಿಮ್ಮ ಮಕ್ಕಳು ಏನನ್ನು ನಂಬುತ್ತಾರೆ ಮತ್ತು ಏಕೆ ನಂಬುತ್ತಾರೆ ಎಂಬುದನ್ನು ಸ್ವತಃ ವಿವರಿಸುವುದರಲ್ಲಿ ಅನುಭವವನ್ನು ಪಡೆದುಕೊಳ್ಳಲಿಕ್ಕಾಗಿ ಅವರಿಗೆ ಸಹಾಯಮಾಡಲು, ಪುಟ 74-6ರಲ್ಲಿರುವ “If Someone Says—” (“ಯಾರಾದರೂ ಹೀಗೆ ಹೇಳುವಲ್ಲಿ—”) ಎಂಬ ಭಾಗವನ್ನು ಉಪಯೋಗಿಸುತ್ತಾ ಅವರೊಂದಿಗೆ ಪ್ರ್ಯಾಕ್ಟಿಸ್ ಸೆಷನ್ಗಳನ್ನು ನಡೆಸಿರಿ. (1 ಪೇತ್ರ 3:15) ರಕ್ತದ ವಿವಾದಾಂಶದ ಬಗ್ಗೆ ನಮಗೆ ತಿಳಿವಳಿಕೆಯನ್ನು ಮೂಡಿಸುವ ಇತರ ಸಹಾಯಕಗಳಲ್ಲಿ ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋಷರ್ ಮತ್ತು 2004, ಜೂನ್ 15ರ ಕಾವಲಿನಬುರುಜುವಿನ ಪುಟ 14-24ರಲ್ಲಿ ಕಂಡುಬರುವ ಲೇಖನಗಳು ಸೇರಿವೆ. ಇದರೊಂದಿಗೆ, ರಕ್ತಪೂರಣ ಬದಲಿಗಳು—ಸಾಕ್ಷ್ಯಚಿತ್ರ ಸರಣಿ (ಇಂಗ್ಲಿಷ್) ಎಂದು ಹೆಸರಿಸಲ್ಪಟ್ಟಿರುವ ಡಿವಿಡಿಯಲ್ಲಿ ಈಗ ಲಭ್ಯವಿರುವ ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ—ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು (ಇಂಗ್ಲಿಷ್) ಹಾಗೂ ರಕ್ತರಹಿತ ಚಿಕಿತ್ಸೆ—ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ (ಇಂಗ್ಲಿಷ್) ಎಂಬ ವಿಡಿಯೋ ಕಾರ್ಯಕ್ರಮಗಳು ರಕ್ತರಹಿತ ಆರೋಗ್ಯಾರೈಕೆ ಮತ್ತು ಶಸ್ತ್ರಚಿಕಿತ್ಸೆಯು ಏಕೆ ಸಮಂಜಸವಾಗಿದೆ ಹಾಗೂ ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಮನಗಾಣಿಸುವಂಥ ಮಾಹಿತಿಯನ್ನು ನೀಡುತ್ತವೆ. ನಿಮ್ಮ ಕುಟುಂಬವು ಇತ್ತೀಚೆಗೆ ಈ ವಿಡಿಯೋಗಳನ್ನು ನೋಡಿ ಚರ್ಚೆಮಾಡಿದೆಯೊ?
5 ರಕ್ತದ ವಿಷಯದಲ್ಲಿ ‘ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳಲು’ ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ. ಆಗ ಅವರು ಯೆಹೋವನ ಆಶೀರ್ವಾದವಿರುವ ಒಂದು ಪ್ರೌಢ ನಿರ್ಣಯವನ್ನು ಮಾಡಬಲ್ಲರು.—ರೋಮಾ. 12:2.