ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಪ್ರಶ್ನೆಗಳನ್ನು ಕೇಳುವ ಮತ್ತು ಕಿವಿಗೊಡುವ ಮೂಲಕ
1 ಹೆಚ್ಚಿನ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇಷ್ಟಪಡುತ್ತಾರೆ, ಆದರೆ ಇತರರಿಂದ ಬುದ್ಧಿಹೇಳಿಸಿಕೊಳ್ಳುವುದು ಅಥವಾ ಪ್ರಶ್ನಿಸಲ್ಪಡುವುದನ್ನು ಅವರು ಇಷ್ಟಪಡುವುದಿಲ್ಲ. ಆದುದರಿಂದ, ಕ್ರೈಸ್ತ ಶುಶ್ರೂಷಕರಾಗಿರುವ ನಾವು ಜನರ ದೃಷ್ಟಿಕೋನವನ್ನು ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳುವ ಕಲೆಯನ್ನು ಕಲಿತುಕೊಳ್ಳಬೇಕು.—ಜ್ಞಾನೋ. 20:5.
2 ನಮ್ಮ ಪ್ರಶ್ನೆಗಳು ಜನರನ್ನು ಯೋಚಿಸುವಂತೆ ಪ್ರಚೋದಿಸಬೇಕೇ ಹೊರತು ಅವರನ್ನು ಮುಜುಗರಗೊಳಿಸಬಾರದು. ಮನೆಯಿಂದ ಮನೆಗೆ ಸಾರುವಾಗ ಒಬ್ಬ ಸಹೋದರನು ಹೀಗೆ ಕೇಳುತ್ತಾನೆ, “ಜನರು ಪರಸ್ಪರ ಘನತೆ ಹಾಗೂ ಗೌರವದಿಂದ ವ್ಯವಹರಿಸುವ ಕಾಲ ಎಂದಾದರೂ ಬರುವುದೆಂದು ನೀವು ನೆನಸುತ್ತೀರೊ?” ಮನೆಯವನ ಪ್ರತಿಕ್ರಿಯೆಯ ಆಧಾರದ ಮೇಲೆ ಆ ಸಹೋದರನು ಹೀಗೆ ಮುಂದುವರಿಸುತ್ತಾನೆ, “ಇದನ್ನು ಸಾಧಿಸಲು ಏನು ಅವಶ್ಯ ಎಂದು ನೀವು ನೆನಸುತ್ತೀರಿ?” ಅಥವಾ “ನಿಮಗೆ ಹಾಗನಿಸಲು ಕಾರಣವೇನು?” ಅನೌಪಚಾರಿಕವಾಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಾರುವಾಗ, ಮಕ್ಕಳಿರುವವರಿಗೆ ಇನ್ನೊಬ್ಬ ಸಹೋದರನು ಹೀಗೆ ಪ್ರಶ್ನಿಸುತ್ತಾನೆ, “ಒಬ್ಬ ಹೆತ್ತವರಾಗಿರುವುದರಲ್ಲಿ ಯಾವುದು ಹೆಚ್ಚು ಆನಂದಕರ ವಿಷಯವಾಗಿದೆ ಎಂಬುದು ನಿಮ್ಮ ಅಭಿಪ್ರಾಯ?” ಅನಂತರ ಅವನು ಹೀಗೆ ಕೇಳುತ್ತಾನೆ, “ನಿಮಗಿರುವ ಅತ್ಯಂತ ದೊಡ್ಡ ಚಿಂತೆ ಯಾವುದು?” ಇಂತಹ ಪ್ರಶ್ನೆಗಳು ಜನರನ್ನು ಮುಜುಗರಗೊಳಿಸದೆ, ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಮಾಡುತ್ತವೆ ಎಂಬುದನ್ನು ಗಮನಿಸಿರಿ. ಸನ್ನಿವೇಶಗಳು ಬದಲಾಗುವುದರಿಂದ, ನಮ್ಮ ಪ್ರಶ್ನೆಗಳನ್ನು ಮತ್ತು ಅವುಗಳನ್ನು ಕೇಳುವ ಶೈಲಿಯನ್ನು ಟೆರಿಟೊರಿಯಲ್ಲಿರುವವರಿಗೆ ತಕ್ಕ ಹಾಗೆ ಸರಿಹೊಂದಿಸಿಕೊಳ್ಳುವ ಆವಶ್ಯಕತೆಯಿರಬಹುದು.
3 ಜನರು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸುವಂತೆ ಮಾಡುವುದು: ಜನರು ತಮ್ಮ ಅಭಿಪ್ರಾಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವುದಾದರೆ, ಅನಾವಶ್ಯಕವಾಗಿ ಮಧ್ಯೆ ಮಾತಾಡದೆ ತಾಳ್ಮೆಯಿಂದ ಕಿವಿಗೊಡಿರಿ. (ಯಾಕೋ. 1:19) ಅವರ ಹೇಳಿಕೆಗಳನ್ನು ವಿನಯಭಾವದಿಂದ ಆಲಿಸಿರಿ. (ಕೊಲೊ. 4:6) ನೀವು ಹೀಗೆ ಹೇಳಬಹುದು: “ಒಳ್ಳೇದು, ನನ್ನೊಂದಿಗೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡದ್ದಕ್ಕಾಗಿ ನಿಮಗೆ ಉಪಕಾರ.” ಯಥಾರ್ಥವಾಗಿ ಅವರನ್ನು ಶ್ಲಾಘಿಸಲು ಸಾಧ್ಯವಿರುವುದಾದರೆ ಹಾಗೆ ಮಾಡಿರಿ. ಅವರ ಅಭಿಪ್ರಾಯವೇನು ಮತ್ತು ಅವರಿಗೆ ಹಾಗೆ ಅನಿಸಲು ಕಾರಣವೇನು ಎಂದು ತಿಳಿದುಕೊಳ್ಳಲು ಹೆಚ್ಚಿನ ಪ್ರಶ್ನೆಗಳನ್ನು ಕೇಳಿರಿ. ನೀವಿಬ್ಬರೂ ಸಮ್ಮತಿಸುವ ಸಾಮಾನ್ಯ ವಿಷಯದ ಕುರಿತು ಮಾತಾಡಿರಿ. ಒಂದು ಶಾಸ್ತ್ರವಚನದ ಕಡೆಗೆ ಅವರ ಗಮನವನ್ನು ಸೆಳೆಯಲು ಬಯಸುವಲ್ಲಿ, ನೀವು ಹೀಗೆ ಕೇಳಬಹುದು, “ಇದು ಸಾಧ್ಯ ಎಂದು ನೀವು ಎಂದಾದರೂ ನೆನಸಿದ್ದೀರೊ?” ಅಧಿಕಾರಯುತವಾಗಿ ಮಾತಾಡುವುದರಿಂದ ಅಥವಾ ತರ್ಕಿಸುವುದರಿಂದ ದೂರವಿರಿ.—2 ತಿಮೊ. 2:24, 25.
4 ಇತರರು ನಮ್ಮ ಪ್ರಶ್ನೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು, ನಾವು ಹೇಗೆ ಕಿವಿಗೊಡುತ್ತೇವೆಂಬುದರ ಮೇಲೆ ಹೆಚ್ಚಾಗಿ ಅವಲಂಬಿಸಿರುತ್ತದೆ. ನಾವು ನಿಜವಾಗಿಯೂ ಅವರಿಗೆ ಕಿವಿಗೊಡುತ್ತಿದ್ದೇವೊ ಇಲ್ಲವೊ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬಲ್ಲರು. ಒಬ್ಬ ಸಂಚರಣ ಮೇಲ್ವಿಚಾರಕನು ತಿಳಿಸಿದ್ದು, “ನೀವು ಜನರಿಗೆ ತಾಳ್ಮೆಯಿಂದ ಕಿವಿಗೊಡಲು ಬಯಸುತ್ತೀರೆಂಬುದನ್ನು ವ್ಯಕ್ತಪಡಿಸುವಾಗ, ಜನರನ್ನು ಆಕರ್ಷಿಸುವ ಅದ್ಭುತಕರ ಶಕ್ತಿ ಅದಕ್ಕಿರುತ್ತದೆ ಮತ್ತು ಅದು ಹೃತ್ಪೂರ್ವಕವಾದ ವೈಯಕ್ತಿಕ ಆಸಕ್ತಿಯ ಅತ್ಯುತ್ತಮ ಅಭಿವ್ಯಕ್ತಿಯಾಗಿದೆ.” ಇತರರಿಗೆ ಕಿವಿಗೊಡುವ ಮೂಲಕ ನಾವು ಅವರಿಗೆ ಮಾನಮರ್ಯಾದೆಯನ್ನು ಸಲ್ಲಿಸುತ್ತೇವೆ ಮತ್ತು ಇದು ನಾವು ಹಂಚಲು ಬಯಸುವ ಸುವಾರ್ತೆಗೆ ಕಿವಿಗೊಡುವಂತೆ ಅವರನ್ನು ಪ್ರಚೋದಿಸುತ್ತದೆ.—ರೋಮಾ. 12:10.