ಜ್ಞಾನವಂತರಾಗಿ ನಡೆದುಕೊಳ್ಳಿರಿ
1 ಯೇಸು ನಾಲ್ಕು ಮಂದಿ ಬೆಸ್ತರನ್ನು ತನ್ನ ಶಿಷ್ಯರಾಗುವಂತೆ ಕರೆ ನೀಡಿದಾಗ ಅವರು ತಮ್ಮ ತೀರ್ಮಾನವನ್ನು ಮುಂದೂಡಲಿಲ್ಲ. ಬದಲಿಗೆ, “ಕೂಡಲೆ ಅವರು . . . ಆತನನ್ನು ಹಿಂಬಾಲಿಸಿದರು.” (ಮತ್ತಾ. 4:18-22) ತದ್ರೀತಿ, ತಾರ್ಸದ ಸೌಲನು ಪರಿವರ್ತನೆಗೊಂಡು ದೃಷ್ಟಿಯನ್ನು ಮರಳಿ ಪಡೆದಾಗ ಸುಮ್ಮನೆ ಕಾಲತಳ್ಳಲಿಲ್ಲ. ಅವನು “ತಡಮಾಡದೆ ಸಭಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ . . . ಸಾರುವದಕ್ಕೆ ಪ್ರಾರಂಭಮಾಡಿದನು.” (ಅ. ಕೃ. 9:20) ಕಾಲ ಮಿಂಚಿನಂತೆ ಸಾಗುತ್ತದೆ. ಅಲ್ಲದೆ ಒಮ್ಮೆ ಕಳೆದುಹೋದ ಸಮಯ ಮತ್ತೆ ಬಾರದು. ಆದುದರಿಂದ ನಮ್ಮ ಸಮಯವನ್ನು ಬಳಸುವ ವಿಷಯದಲ್ಲಿ ‘ಜ್ಞಾನವಂತರಾಗಿ ನಡೆದುಕೊಳ್ಳುವುದು’ ತುಂಬ ಪ್ರಾಮುಖ್ಯ.—ಎಫೆ. 5:15, 16.
2 ಮುಂಗಾಣದ ಘಟನೆ: ಯೆಹೋವನನ್ನು ಸೇವಿಸಲು ನಮಗೆ ಇಂದು ಇರುವಂಥ ಅವಕಾಶಗಳು ನಾಳೆ ಇರಲಿಕ್ಕಿಲ್ಲ. (ಯಾಕೋ. 4:14) “ಮುಂಗಾಣದಂಥ ಘಟನೆಯಿಂದ” ಯಾರೂ ತಪ್ಪಿಸಿಕೊಳ್ಳಲಾರರು. (ಪ್ರಸಂ. 9:11, NW) ಅದಕ್ಕೆ ಕೂಡಿಸಿ, ವಯಸ್ಸಾಗುತ್ತಾ ಹೋದಂತೆ ನಾವು ‘ಕಷ್ಟದ ದಿನಗಳನ್ನು’ ಅನುಭವಿಸಬೇಕಾಗುತ್ತದೆ. ಇವು, ಯೆಹೋವನಿಗೆ ನಾವು ಸಲ್ಲಿಸುವ ಸೇವೆಯನ್ನು ಸೀಮಿತಗೊಳಿಸುತ್ತದೆ. ಈ ಪ್ರಸ್ತುತ ವಿಷಯಗಳ ವ್ಯವಸ್ಥೆಯಲ್ಲಿ ಇದರಿಂದ ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ. (ಪ್ರಸಂ. 12:1) ಆದ್ದರಿಂದ, ದೇವರಿಗೆ ನಾವು ಸಮರ್ಪಣೆ ಮಾಡುವುದನ್ನು ವಿಳಂಬಿಸುವುದಾಗಲಿ, ನಮ್ಮ ಶುಶ್ರೂಷೆಯನ್ನು ಆದಷ್ಟು ಮಟ್ಟಿಗೆ ವಿಸ್ತರಿಸಲು ಅತ್ಯುತ್ತಮ ವಿದ್ಯಮಾನಗಳಿಗಾಗಿ ಕಾಯುವುದಾಗಲಿ ಜಾಣತನವಲ್ಲ. (ಲೂಕ 9:59-62) ಅಬ್ರಹಾಮನು ‘ದಿನತುಂಬಿದ ಮುದುಕನಾಗಿ’ ಶಾಂತಿ ಮತ್ತು ನೆಮ್ಮದಿಯಿಂದ ಪ್ರಾಣಬಿಟ್ಟನು. ಕಾರಣವೇನೆಂದರೆ, ಅವನು ತನ್ನ ಬದುಕನ್ನು ಸಂಪೂರ್ಣವಾಗಿ ಯೆಹೋವನಿಗೆ ಮುಡಿಪಾಗಿಟ್ಟು ಅದನ್ನು ಜಾಣ್ಮೆಯಿಂದ ಉಪಯೋಗಿಸಿದನು.—ಆದಿ. 25:8.
3 ಸಮಯ ಸಂಕೋಚವಾಗಿದೆ: “ಸಮಯವು ಸಂಕೋಚವಾದದ್ದರಿಂದ” ನಾವು ನಮ್ಮ ಕಾಲವನ್ನು ಸಹ ಜಾಣ್ಮೆಯಿಂದ ಉಪಯೋಗಿಸಲು ಬಯಸುತ್ತೇವೆ. (1 ಕೊರಿಂ. 7:29-31) ಅತೀ ಶೀಘ್ರದಲ್ಲೇ ಈ ಹಳೇ ವಿಷಯಗಳ ವ್ಯವಸ್ಥೆಯು ಅಂತ್ಯಗೊಳ್ಳುವುದು. ‘ಭೂಮಿಯ ಪೈರನ್ನು ಕೊಯ್ಯುವ ಕಾಲದಲ್ಲಿ,’ ಕುರಿಸದೃಶ ಜನರನ್ನು ಒಟ್ಟುಗೂಡಿಸುವ ಮಹಾ ಕಾರ್ಯದಲ್ಲಿ ಭಾಗವಹಿಸುವ ಅವಕಾಶಗಳೂ ಕೊನೆಗೊಳ್ಳುವವು. (ಪ್ರಕ. 14:15) ಶುಶ್ರೂಷೆಯಲ್ಲಿ ಹೆಚ್ಚು ಉಪಯುಕ್ತಕರವಾಗಿ ವ್ಯಯಿಸಬಹುದಾದ ಸಮಯವನ್ನು ಜೀವನದ ಚಿಂತೆಗಳು ಮತ್ತು ಅಪಕರ್ಷಣೆಗಳು ಕಸಿದುಕೊಳ್ಳದಂತೆ ನಾವು ಕಟ್ಟೆಚ್ಚರವಹಿಸಬೇಕು. (ಲೂಕ 21:34, 35) ಕೊಯ್ಲಿನ ಕೆಲಸ ಅಂತ್ಯಗೊಂಡಾಗ ನಾವು ಅದರಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿದ್ದೇವೆಂಬ ಅರಿವು ನಮಗೆಷ್ಟು ತೃಪ್ತಿತರುವುದು!
4 ನಮಗೆ ಸಿಗುವ ಹರ್ಷಭರಿತ ಸೇವಾವಕಾಶಗಳು ಕೈತಪ್ಪಿ ಹೋಗದಂತೆ ನಾವು ಸದಾ ಎಚ್ಚರ ವಹಿಸಬೇಕು. “ಈಹೊತ್ತು ಎಂಬ ಕಾಲವು ಇರುವ ತನಕ” ಯೆಹೋವನನ್ನು ಸೇವಿಸಲು ನಮ್ಮಿಂದಾದುದೆಲ್ಲವನ್ನು ಮಾಡಲಿಕ್ಕಾಗಿ ನಾವು ದೃಢನಿಶ್ಚಿತರಾಗಿರೋಣ. (ಇಬ್ರಿ. 3:13) ಹೀಗೆ ಮಾಡುವುದರಿಂದ ನಾವು ನಿಜವಾಗಿಯೂ ಜ್ಞಾನವಂತರೆಂದು ತೋರಿಸಿಕೊಡುತ್ತೇವೆ. ಏಕೆಂದರೆ, “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾ. 2:17.