ನಿಮ್ಮನ್ನು ನೋಡಿ ಇತರರು ಏನು ಕಲಿಯುತ್ತಾರೆ?
1 “ನನ್ನೊಂದಿಗೆ ನನ್ನ ನೊಗದಡಿ ಬಂದು ನನ್ನಿಂದ ಕಲಿಯಿರಿ” ಎಂದನು ಯೇಸು. (ಮತ್ತಾ. 11:29, NW ಪಾದಟಿಪ್ಪಣಿ) ಹೌದು, ಅವನು ಬರೀ ಮಾತುಗಳಿಂದ ಅಲ್ಲ, ಒಳ್ಳೇ ಮಾದರಿಯನ್ನಿಡುವ ಮೂಲಕವೂ ಇತರರಿಗೆ ಬೋಧಿಸಿದನು. ಯೇಸುವಿನ ಶಿಷ್ಯರು ಅವನನ್ನು ನೋಡಿ ಕಲಿತ ಸಂಗತಿಗಳ ಬಗ್ಗೆ ಯೋಚಿಸಿ. ಅವನು ಸೌಮ್ಯನೂ ದಯಾಪರನೂ ಪ್ರೀತಿಪರನೂ ಆಗಿರುವುದನ್ನು ನೋಡಿದರು. (ಮತ್ತಾ. 8:1-3; ಮಾರ್ಕ 6:30-34) ಅವನಲ್ಲಿದ್ದ ದೀನತೆ ಯಥಾರ್ಥವಾಗಿತ್ತು. (ಯೋಹಾ. 13:2-5) ಶಿಷ್ಯರು ಯೇಸುವಿನೊಂದಿಗೆ ಶುಶ್ರೂಷೆಯಲ್ಲಿ ಪಾಲ್ಗೊಂಡಾಗ ಅವನು ಪರಿಣಾಮಕಾರಿಯಾಗಿ, ಬಿಡುವಿಲ್ಲದೆ ಪರಿಶ್ರಮಪಟ್ಟು ಇತರರಿಗೆ ಸತ್ಯವನ್ನು ಕಲಿಸುವುದನ್ನು ನೋಡಿದರು. (ಲೂಕ 8:1; 21:37, 38) ಶುಶ್ರೂಷೆಯಲ್ಲಿರುವಾಗ ಇತರರು ನಮ್ಮಲ್ಲಿ ಏನನ್ನು ಗಮನಿಸುತ್ತಾರೆ?
2 ಮನೆಯವರು: ನಮ್ಮ ಸಭ್ಯ ಉಡುಪು, ಶಿಷ್ಟಾಚಾರ, ಮನೆಯವರ ಬಗ್ಗೆ ಯಥಾರ್ಥ ವೈಯಕ್ತಿಕ ಆಸಕ್ತಿ ಇವೆಲ್ಲವೂ ಅವರ ಮೇಲೆ ಒಳ್ಳೇ ಪರಿಣಾಮ ಬೀರಬಲ್ಲದು. (2 ಕೊರಿಂ. 6:3; ಫಿಲಿ. 1:27) ನಾವು ಪದೇ ಪದೇ ಬೈಬಲ್ ಬಳಸುವುದನ್ನು ಅವರು ಗಮನಿಸುತ್ತಾರೆ. ನಾವು ಗೌರವದಿಂದ ಕಿವಿಗೊಡುವುದನ್ನು ಗಮನಿಸಿ ಇನ್ನಿತರರು ಪ್ರಭಾವಿತರಾಗುತ್ತಾರೆ. ಈ ವಿಷಯಗಳಲ್ಲಿ ನಾವಿಡುವ ಒಳ್ಳೇ ಮಾದರಿ ಜನರನ್ನು ರಾಜ್ಯ ಸಂದೇಶದೆಡೆಗೆ ಸೆಳೆಯಬಲ್ಲದು ಎಂಬುದನ್ನು ಎಂದಿಗೂ ನಿರ್ಲಕ್ಷಿಸಬೇಡಿ.
3 ಸಹೋದರರು: ನಮ್ಮ ಸಹೋದರರ ಮೇಲೂ ನಾವು ಬೀರಬಲ್ಲ ಸತ್ಪ್ರಭಾವದ ಕುರಿತು ಯೋಚಿಸಿ. ಶುಶ್ರೂಷೆಗಾಗಿ ನಮ್ಮಲ್ಲಿರುವ ಹುರುಪು ಇತರರಿಗೂ ಹರಡಬಲ್ಲದು. ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವಂತೆಯೇ, ನಾವು ಚೆನ್ನಾಗಿ ತಯಾರಿಸಿ ಬಳಸುವ ನಿರೂಪಣೆಗಳು ಸೌವಾರ್ತಿಕ ಕೌಶಲಗಳನ್ನು ಹರಿತಗೊಳಿಸುವಂತೆ ಇತರರನ್ನೂ ಪ್ರಚೋದಿಸುತ್ತದೆ. (ಜ್ಞಾನೋ. 27:17) ಆಸಕ್ತಿ ತೋರಿಸಿದವರ ಬಗ್ಗೆ ನಿಖರ ದಾಖಲೆಯನ್ನಿಟ್ಟು, ತಡಮಾಡದೆ ಪುನರ್ಭೇಟಿ ಮಾಡುವುದರಲ್ಲಿ ನಾವು ತೋರಿಸುವ ಶ್ರದ್ಧೆಯು ಇತರರಿಗೂ ಹಾಗೆ ಮಾಡುವಂತೆ ಪ್ರೇರಿಸುವುದು. ಮನೆಯವರೊಂದಿಗೆ ಮಾತಾಡುವಾಗ ನಾವು ತೋರಿಸುವ ಜಾಣ್ಮೆ, ವಿವೇಚನೆಯು ಇತರರು ಸಹ ಆ ಗುಣಗಳನ್ನು ತೋರಿಸುವಂತೆ ಪ್ರೋತ್ಸಾಹಿಸುವುದು. ಹೌದು, ನಮ್ಮ ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸುವಾಗ ನಮ್ಮ ಸಹೋದರ ಸಹೋದರಿಯರ ಮೇಲೆ ಸತ್ಪ್ರಭಾವ ಬೀರುತ್ತೇವೆ.—2 ತಿಮೊ. 4:5.
4 ನೀವೇನು ಹೇಳುತ್ತೀರಿ, ಮಾಡುತ್ತೀರಿ, ಇತರರ ಮೇಲೆ ಯಾವ ಪ್ರಭಾವ ಬೀರುತ್ತೀರಿ ಎಂಬುದರ ಬಗ್ಗೆ ಆಗಾಗ್ಗೆ ಸ್ವಪರಿಶೀಲನೆ ಮಾಡಬಾರದೇಕೆ? ನಮ್ಮ ಉತ್ತಮ ಮಾದರಿ ಯೆಹೋವನನ್ನು ಸಂತೋಷಪಡಿಸುತ್ತದೆ. ಅಲ್ಲದೆ, “ನಾನು ಕ್ರಿಸ್ತನನ್ನು ಅನುಕರಿಸುವವನಾಗಿರುವಂತೆಯೇ ನೀವೂ ನನ್ನನ್ನು ಅನುಕರಿಸುವವರಾಗಿರಿ” ಎಂದು ಹೇಳಿದ ಅಪೊಸ್ತಲ ಪೌಲನಂತೆ ನಮಗೂ ಅನಿಸುವುದು.—1 ಕೊರಿಂ. 11:1.
[ಅಧ್ಯಯನ ಪ್ರಶ್ನೆಗಳು]
1. ಯೇಸುವಿನ ಶಿಷ್ಯರು ಅವನನ್ನು ನೋಡಿ ಏನು ಕಲಿತರು?
2. ಶುಶ್ರೂಷೆಯಲ್ಲಿ ನಮ್ಮ ಉತ್ತಮ ತೋರಿಕೆ ಹಾಗೂ ನಡತೆ ಮನೆಯವರಲ್ಲಿ ಹೇಗೆ ಸದಭಿಪ್ರಾಯ ಮೂಡಿಸುವುದು?
3. ಸಹೋದರರ ಮೇಲೆ ನಾವು ಯಾವ ಸತ್ಪ್ರಭಾವ ಬೀರಬಲ್ಲೆವು?
4. ನಮ್ಮ ಮಾದರಿಯನ್ನು ನಾವು ಆಗಾಗ್ಗೆ ಪರಿಶೀಲಿಸಬೇಕು ಏಕೆ?