ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿ ಅಧ್ಯಯನಕ್ಕೆ ಸಿದ್ಧರಿಲ್ಲದವರಿಗೆ ಸಹಾಯ
1. ಆರಂಭದಲ್ಲೇ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಎಲ್ಲರೂ ಸ್ವೀಕರಿಸುತ್ತಾರಾ? ವಿವರಿಸಿ.
1 ಒಬ್ಬನು ಯೆಹೋವನ ಆರಾಧಕನಾಗಬೇಕಾದರೆ ಬೈಬಲ್ ಏನನ್ನು ಬೋಧಿಸುತ್ತದೊ ಅದನ್ನು ಕಲಿಯಬೇಕು. ಆದರೆ ಎಲ್ಲರೂ ಕ್ರೈಸ್ತರಲ್ಲ ಮತ್ತು ಬೈಬಲನ್ನು ದೇವರ ವಾಕ್ಯವೆಂದು ಒಪ್ಪುವುದಿಲ್ಲ. ಇನ್ನು ಕೆಲವರು ದೇವರನ್ನೇ ನಂಬುವುದಿಲ್ಲ ಮತ್ತು ಬೈಬಲ್ ಕಡೆಗೆ ಗೌರವವೂ ಇಲ್ಲ. ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಆರಂಭದಲ್ಲಿ ಸ್ವೀಕರಿಸಲು ನಿರಾಕರಿಸುವವರಿಗೆ ಯಾವ ಸಾಧನಗಳು ನೆರವಾಗುತ್ತವೆ? ಕೆಳಗಿನ ಸಲಹೆಗಳು 20 ದೇಶಗಳ ಪ್ರಚಾರಕರ ಹೇಳಿಕೆಗಳ ಮೇಲೆ ಆಧರಿತವಾಗಿವೆ.
2. ಒಬ್ಬ ವ್ಯಕ್ತಿ ತಾನು ದೇವರನ್ನು ನಂಬುವುದಿಲ್ಲ ಎಂದು ಹೇಳಿದರೆ ನಾವೇನು ತಿಳಿಯಲು ಪ್ರಯತ್ನಿಸಬೇಕು? ಏಕೆ?
2 ದೇವರನ್ನು ನಂಬದವರು: ಒಬ್ಬ ವ್ಯಕ್ತಿ ದೇವರನ್ನು ನಂಬುವುದಿಲ್ಲ ಎಂದು ಹೇಳಿದರೆ ಯಾಕೆ ನಂಬುವುದಿಲ್ಲ ಎಂದು ತಿಳಿದುಕೊಳ್ಳುವುದು ಉತ್ತಮ. ಅವನಿಗೆ ವಿಕಾಸವಾದದ ಮೇಲೆ ನಂಬಿಕೆಯಿರುವುದರಿಂದಲಾ? ಲೋಕದಲ್ಲಿನ ಅನ್ಯಾಯ ಅಥವಾ ಧರ್ಮಗಳ ಕಪಟತನ ನೋಡಿ ದೇವರ ಮೇಲೆ ನಂಬಿಕೆ ಕಳೆದುಕೊಂಡಿದ್ದಾನಾ? ದೇವರ ಮೇಲಿನ ನಂಬಿಕೆ ನಿಷಿದ್ಧವಾಗಿರುವ ದೇಶದವನಾ? ಬಹುಶಃ ಅವನು ದೇವರು ಇಲ್ಲವೇ ಇಲ್ಲ ಎಂದು ಹೇಳುವ ವ್ಯಕ್ತಿಯಲ್ಲ. ಅವನಿಗೆ ತನ್ನ ಜೀವನದಲ್ಲಿ ದೇವರ ಅವಶ್ಯಕತೆ ಬಂದೇ ಇಲ್ಲ ಅದಕ್ಕೆ ದೇವರನ್ನು ನಂಬದೇ ಇರಬಹುದು. “ನಿಮಗೆ ಯಾವಾಗಲೂ ಹೀಗನಿಸಿದೆಯಾ?” ಎಂದು ಕೇಳುವ ಮೂಲಕ ಅನೇಕ ಪ್ರಚಾರಕರು ಮನೆಯವರು ವಿವರಣೆ ನೀಡುವಂತೆ ಮಾಡಿದ್ದಾರೆ. ಅವರು ಹೇಳುವಾಗ ಕೇಳಿ. ಮಧ್ಯೆ ಬಾಯಿ ಹಾಕಬೇಡಿ. ಆ ವ್ಯಕ್ತಿ ಯಾಕೆ ದೇವರನ್ನು ನಂಬುವುದಿಲ್ಲ ಎಂದು ಅರ್ಥಮಾಡಿಕೊಂಡಾಗಲೇ ಅವನಿಗೆ ಹೇಗೆ ಉತ್ತರಿಸಬೇಕು ಮತ್ತು ಯಾವ ಸಾಹಿತ್ಯ ಕೊಡಬೇಕೆಂದು ಗೊತ್ತಾಗುವುದು.—ಜ್ಞಾನೋ. 18:13.
3. ಬೇರೆಯವರ ಕಡೆಗೆ ಮತ್ತು ಅವರ ನಂಬಿಕೆಯ ಕಡೆಗೆ ಗೌರವ ತೋರಿಸಬಹುದು ಹೇಗೆ?
3 ಉತ್ತರ ಕೊಡುವಾಗ ಆ ವ್ಯಕ್ತಿಯ ದೃಷ್ಟಿಕೋನವನ್ನು ಖಂಡಿಸುತ್ತಿರುವ ಹಾಗೆ ಅನಿಸದಂತೆ ಜಾಗ್ರತೆ ವಹಿಸಿ. ಒಂದು ದೇಶದಿಂದ ಈ ಸಲಹೆ ಬಂದಿದೆ: “ತಾನೇನು ನಂಬಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬ ವ್ಯಕ್ತಿಗಿದೆ. ಇದನ್ನು ಗೌರವಿಸುವುದು ತುಂಬ ಪ್ರಾಮುಖ್ಯ. ವಾದದಲ್ಲಿ ಗೆಲ್ಲುವುದರ ಕಡೆಗೆ ಗಮನಕೊಡುವ ಬದಲು ಮನೆಯವರೇ ಯೋಚಿಸಿ ತಾವಾಗಿಯೇ ಒಂದು ತೀರ್ಮಾನಕ್ಕೆ ಬರುವಂತೆ ಮಾಡುವ ಪ್ರಶ್ನೆಗಳನ್ನು ಹಾಕುವುದು ಅತ್ಯುತ್ತಮ.” ಮನೆಯವರು ತಮ್ಮ ಅಭಿಪ್ರಾಯವನ್ನು ತಿಳಿಸಿದ ನಂತರ ಸಂಚರಣ ಮೇಲ್ವಿಚಾರಕರೊಬ್ಬರು “ನೀವು ಈ ವಿಷಯದ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ?” ಎಂದು ಕೇಳಿ ನಂತರ ಉತ್ತರ ಕೊಡುತ್ತಾರೆ.
4. ಬೌದ್ಧ ಮತದವರಿಗೆ ಹೇಗೆ ಸಹಾಯ ಮಾಡಬಹುದು?
4 ಬೌದ್ಧ ಮತದ ಅನೇಕರು ದೇವರನ್ನು ನಂಬುವುದಿಲ್ಲ. ಇವರಿಗೆ ಸಾಕ್ಷಿ ನೀಡುವಾಗ ಬ್ರಿಟನ್ ದೇಶದ ಕೆಲವು ಪ್ರಚಾರಕರು ಕಿರುಹೊತ್ತಗೆಗಳನ್ನು ಬಳಸುತ್ತಾರೆ. ನಂತರ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಪರಿಚಯಿಸಿ ಹೀಗನ್ನುತ್ತಾರೆ: “ನೀವು ದೇವರನ್ನು ನಂಬದಿದ್ದರೂ ಬೈಬಲ್ ಬಗ್ಗೆ ಕಲಿಯುವುದು ತುಂಬ ಪ್ರಯೋಜನಕರ. ಏಕೆಂದರೆ ಅದರಲ್ಲಿ ಬಹಳಷ್ಟು ಪ್ರಾಯೋಗಿಕ ಮಾರ್ಗದರ್ಶನವಿದೆ.” ಅಮೆರಿಕದಲ್ಲಿ ಚೀನೀಯರ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಪಯನೀಯರನೊಬ್ಬ ಹೇಳುವುದು: “ನಮ್ಮ ಕ್ಷೇತ್ರದಲ್ಲಿ ಅನೇಕರಿಗೆ ಓದುವುದೆಂದರೆ ತುಂಬ ಇಷ್ಟ. ಹಾಗಾಗಿ ನಾವು ಮತ್ತೆ ಭೇಟಿ ಮಾಡುವ ಮೊದಲೇ ಇಡೀ ಪ್ರಕಾಶನ ಓದಿ ಮುಗಿಸಿರುತ್ತಾರೆ. ಆದರೆ ಬೈಬಲ್ ಅಧ್ಯಯನ ಮಾಡುವುದರ ಬಗ್ಗೆ ಅವರಿಗೆ ಅಷ್ಟಾಗಿ ಅರ್ಥವಾಗುವುದಿಲ್ಲ. ಆದ್ದರಿಂದ ಆರಂಭದ ಭೇಟಿಯಲ್ಲೇ ನಾನು ಸಿಹಿ ಸುದ್ದಿ ಪತ್ರಿಕೆಯನ್ನು ನೀಡುತ್ತೇನೆ. ಯಾಕೆಂದರೆ ಅದು ಮನೆಯವರೊಂದಿಗೆ ಚರ್ಚೆಯನ್ನು ಪ್ರೋತ್ಸಾಹಿಸುವಂಥ ರೀತಿಯಲ್ಲಿ ರಚಿಸಲಾಗಿದೆ.” ಅಮೆರಿಕದಲ್ಲಿ ಚೀನೀ ಭಾಷೆಯ ಸರ್ಕಿಟ್ನಲ್ಲಿ ಕೆಲಸ ಮಾಡುತ್ತಿರುವ ಸರ್ಕಿಟ್ ಮೇಲ್ವಿಚಾರಕರು ವರದಿಸಿದ್ದೇನೆಂದರೆ ಮೊದಲ ಭೇಟಿಯಲ್ಲೇ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಬಹುದು. ಮೊದಲನೇ ಅಧ್ಯಾಯ ದೇವರ ಬಗ್ಗೆ ಚರ್ಚಿಸುವುದರಿಂದ ಅದನ್ನು ಬಿಟ್ಟು ಅಧ್ಯಾಯ 2ರಿಂದ ಅಧ್ಯಯನ ಆರಂಭಿಸುವುದು ಒಳ್ಳೆಯದು. ಏಕೆಂದರೆ ಅದು ಮನೆಯವರಿಗೆ ಬೈಬಲನ್ನು ಪರಿಚಯಿಸುತ್ತದೆ.
5. ತಾಳ್ಮೆ ಏಕೆ ಅಗತ್ಯ?
5 ಒಬ್ಬ ವ್ಯಕ್ತಿಗೆ ದೇವರ ಮೇಲೆ ನಂಬಿಕೆ ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ಆದ್ದರಿಂದ ತಾಳ್ಮೆ ತುಂಬ ಮುಖ್ಯ. ಮೊದಲ ಕೆಲವು ಸಂಭಾಷಣೆಗಳಲ್ಲೇ ಆ ವ್ಯಕ್ತಿ ಸೃಷ್ಟಿಕರ್ತನಿದ್ದಾನೆ ಎಂದು ನಂಬಲು ಆರಂಭಿಸಲಿಕ್ಕಿಲ್ಲ. ಆದರೆ ಸಮಯಾನಂತರ ಅವನು, ದೇವರು ಇರಬಹುದೋ ಏನೋ ಎಂದು ಒಪ್ಪಿಕೊಳ್ಳಬಹುದು. ಅಥವಾ ಬೇರೆಯವರು ಯಾಕೆ ಅದನ್ನು ನಂಬುತ್ತಾರೆಂದು ತನಗೀಗ ಅರ್ಥವಾಗುತ್ತಿದೆ ಎಂದವನು ಹೇಳಬಹುದು.
6. ಕೆಲವರಿಗೆ ಬೈಬಲ್ ಕಡೆಗೆ ಯಾಕೆ ಆಸಕ್ತಿ ಇಲ್ಲ?
6 ಬೈಬಲಲ್ಲಿ ಭರವಸೆ ಅಥವಾ ಆಸಕ್ತಿ ಇಲ್ಲದವರು: ದೇವರನ್ನು ನಂಬುವುದಾದರೂ ಬೈಬಲಲ್ಲಿ ಆಸಕ್ತಿಯಿಲ್ಲದವರು ಎಷ್ಟೋ ಜನರಿದ್ದಾರೆ. ಇದಕ್ಕೆ ಕಾರಣ ಅವರು ಬೈಬಲನ್ನು ದೇವರ ವಾಕ್ಯವೆಂದು ನಂಬುವುದಿಲ್ಲ. ಕ್ರೈಸ್ತೇತರ ಧರ್ಮದ ದೇಶದಲ್ಲಿ ಜೀವಿಸುತ್ತಿದ್ದು ಬೈಬಲ್ ಬರೀ ಕ್ರಿಶ್ಚಿಯನ್ನರ ಪುಸ್ತಕ ಎಂದವರು ನಂಬುತ್ತಿರಬಹುದು. ಅಥವಾ ನಾಮಮಾತ್ರಕ್ಕೆ ಕ್ರೈಸ್ತ ದೇಶವಾಗಿದ್ದು ಧರ್ಮದ ಕಡೆಗೆ ಗಮನ ಕೊಡದ ದೇಶವೊಂದರಲ್ಲಿ ಅವರು ಜೀವಿಸುತ್ತಿರಬಹುದು. ಬೈಬಲ್ನಿಂದ ನಮಗೇನು ಪ್ರಯೋಜನವಿಲ್ಲ ಎಂದು ನೆನಸುತ್ತಿರಬಹುದು. ಇಂಥವರಲ್ಲಿ ಬೈಬಲ್ ಕಡೆಗೆ ಆಸಕ್ತಿ ಬೆಳೆಸಿ ಕ್ರಮೇಣ ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿ ಅಧ್ಯಯನ ನಡೆಸುವುದು ಹೇಗೆ?
7. ಬೈಬಲಲ್ಲಿ ಆಸಕ್ತಿ ಹುಟ್ಟಿಸುವ ಒಂದು ಒಳ್ಳೇ ವಿಧ ಯಾವುದು?
7 ಗ್ರೀಸ್ ದೇಶದ ಬ್ರಾಂಚ್ ಆಫೀಸ್ ಹೀಗೆ ತಿಳಿಸುತ್ತದೆ: “ಬೈಬಲ್ ಕಡೆಗೆ ಆಸಕ್ತಿ ಇಲ್ಲದವರಿಗೆ ಸಹಾಯ ಮಾಡುವ ಅತ್ಯುತ್ತಮ ವಿಧ, ಬೈಬಲನ್ನು ತೆರೆದು ಅದರಲ್ಲೇನಿದೆ ಎಂದು ತೋರಿಸುವುದೇ. ಬೈಬಲ್ನಲ್ಲಿರುವ ಸಂದೇಶ ಒಬ್ಬ ವ್ಯಕ್ತಿಯ ಹೃದಯದ ಮೇಲೆ ಬೀರುವ ಪ್ರಭಾವ, ನಾವು ನಮ್ಮ ಸ್ವಂತ ಮಾತಲ್ಲಿ ಹೇಳುವ ಯಾವುದೇ ವಿಷಯಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತದೆಂದು ಅನೇಕ ಪ್ರಚಾರಕರು ಗಮನಿಸಿದ್ದಾರೆ. (ಇಬ್ರಿ. 4:12) ಬೈಬಲ್ನಲ್ಲಿ ದೇವರ ಹೆಸರನ್ನು ನೋಡಿ ಅನೇಕರು ಪ್ರಭಾವಿತರಾಗಿ, ಅದರಲ್ಲಿ ಇನ್ನೇನಿದೆ ಎಂದು ತಿಳಿಯುವ ಆಸಕ್ತಿಯನ್ನು ಹುಟ್ಟಿಸಿದೆ.” ಭಾರತದ ಬ್ರಾಂಚ್ ಆಫೀಸ್ ಹೇಳಿದ್ದು: “ಅನೇಕ ಹಿಂದೂಗಳಿಗೆ ಜೀವ ಮತ್ತು ಮರಣದ ಕುರಿತ ಸತ್ಯ ಹಾಗೂ ಜಾತಿ ಧರ್ಮ ಎಂಬ ಭೇದಭಾವವಿಲ್ಲದ ಒಂದು ಲೋಕದ ಬಗ್ಗೆ ಬೈಬಲಿನ ವಾಗ್ದಾನ ತುಂಬ ಹಿಡಿಸುತ್ತದೆ.” ಸ್ಥಳೀಯ ಸಮಸ್ಯೆಗಳ ಬಗ್ಗೆ ತಿಳಿಸುವ ಮೂಲಕ ದೇವರ ರಾಜ್ಯ ಇದನ್ನೆಲ್ಲ ಸರಿಪಡಿಸಲು ಏನು ಮಾಡಲಿದೆ ಎಂದು ಬೈಬಲ್ನಿಂದ ತೋರಿಸಲು ಪ್ರಚಾರಕರಿಗೆ ಅವಕಾಶ ಸಿಗುತ್ತದೆ.
8. ಕ್ರೈಸ್ತಪ್ರಪಂಚದಿಂದಾಗಿ ಬೈಬಲ್ ಕಡೆಗೆ ನಕಾರಾತ್ಮಕ ನೋಟವಿರುವವರಿಗೆ ನಾವೇನು ಹೇಳಬಹುದು?
8 ಕ್ರೈಸ್ತಪ್ರಪಂಚದ ಕಾರಣ ಯಾರಿಗಾದರೂ ಬೈಬಲ್ ಬಗ್ಗೆ ನಕಾರಾತ್ಮಕ ನೋಟ ಇದ್ದಲ್ಲಿ, ಬೈಬಲ್ ಮತ್ತು ಅದರಲ್ಲಿರುವ ಬೋಧನೆಗಳನ್ನು ಕ್ರೈಸ್ತಪ್ರಪಂಚದವರು ತಪ್ಪಾಗಿ ಕಲಿಸಿದ್ದಾರೆಂದು ವಿವರಿಸಿ. ಭಾರತದ ಬ್ರಾಂಚ್ ಆಫೀಸ್ ಬರೆದದ್ದು: “ಬೈಬಲ್ ಬರೀ ಚರ್ಚ್ಗಳಿಗೆ ಸೇರಿದ್ದಲ್ಲ ಎಲ್ಲರಿಗಾಗಿದೆ ಎಂದು ಜನರಿಗೆ ತಿಳಿಯಲು ಕೆಲವು ಸಲ ಸಹಾಯ ಮಾಡಬೇಕಾಗುತ್ತದೆ.” ಅದು ಮುಂದುವರಿಸಿ ಹೇಳಿದ್ದೇನೆಂದರೆ, ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ ಕಿರುಹೊತ್ತಗೆಯ ಭಾಗ 4ರಲ್ಲಿ ಹೇಗೆ ಚರ್ಚ್ಗಳು ಬೈಬಲ್ ಅನ್ನು ಕಲಬೆರಕೆ ಮಾಡಲು ಮತ್ತು ನಾಶಮಾಡಲೂ ಪ್ರಯತ್ನಿಸಿವೆ ಎಂಬ ವಿಷಯ ಓದಿ ಹಿಂದೂ ಜನರು ಆಶ್ಚರ್ಯಗೊಳ್ಳುತ್ತಾರೆ. ಬ್ರೆಜಿಲ್ನ ಪಯನೀಯರರೊಬ್ಬರು ಜನರಿಗೆ ಹೀಗನ್ನುತ್ತಾರೆ: “ಬೈಬಲ್ನಲ್ಲಿ ಏನಿದೆ ಅಂತ ನೀವೇಕೆ ಹೆಚ್ಚು ತಿಳಿದುಕೊಳ್ಳಬಾರದು? ಅನೇಕ ಜನರು ಯಾವುದೇ ಧಾರ್ಮಿಕ ಸಂಸ್ಥೆಯ ಹಂಗಿಲ್ಲದೆ ಮುಕ್ತ ಮನಸ್ಸಿಂದ ಇದರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ನೀವೂ ತಿಳಿದುಕೊಳ್ಳಬಹುದು. ಆಗ ಖಂಡಿತ ಆಶ್ಚರ್ಯಪಡುವಿರಿ.”
9. ಬೈಬಲ್ ಬಗ್ಗೆ ಕಲಿಯಲು ಒಬ್ಬ ವ್ಯಕ್ತಿಗೆ ಆರಂಭದಲ್ಲಿ ಇಷ್ಟವಿಲ್ಲದಿದ್ದರೆ ನಾವೇಕೆ ಬಿಟ್ಟುಕೊಡಬಾರದು?
9 ಯೆಹೋವನು ಪ್ರತಿಯೊಬ್ಬನ ಹೃದಯವನ್ನು ನೋಡುತ್ತಾನೆ. (1 ಸಮು. 16:7; ಜ್ಞಾನೋ. 21:2) ಸಹೃದಯಿಗಳನ್ನು ಸತ್ಯಾರಾಧನೆಯ ಕಡೆಗೆ ಸೆಳೆಯುತ್ತಿದ್ದಾನೆ. (ಯೋಹಾ. 6:44) ಇಂಥವರಲ್ಲಿ ಅನೇಕರಿಗೆ ದೇವರ ಬಗ್ಗೆ ಯಾರೂ ಕಲಿಸಿರಲಿಲ್ಲ ಅಥವಾ ಬೈಬಲ್ ಬಗ್ಗೆ ಏನೂ ತಿಳಿದಿರಲಿಲ್ಲ. ನಮ್ಮ ಶುಶ್ರೂಷೆಯು ಅವರು ‘ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡು ರಕ್ಷಣೆಯನ್ನು ಹೊಂದಲು’ ಅವಕಾಶ ಕೊಡುತ್ತಿದೆ. (1 ತಿಮೊ. 2:4) ಹಾಗಾಗಿ ಯಾರಿಗಾದರೂ ಆರಂಭದಲ್ಲಿ ಬೈಬಲ್ ಕಲಿಯಲು ಆಸಕ್ತಿಯಿಲ್ಲದಿದ್ದರೆ ಬಿಟ್ಟುಕೊಡಬೇಡಿ! ನಿಮ್ಮ ಭಾಷೆಯಲ್ಲಿ ಲಭ್ಯವಿರುವ ಸಾಧನಗಳಲ್ಲಿ ಒಂದನ್ನು ಬಳಸಿ ಅವರ ಆಸಕ್ತಿ ಕೆರಳಿಸಿ. ಕ್ರಮೇಣ ಚರ್ಚೆಯನ್ನು ಬೈಬಲ್ ಅಧ್ಯಯನಕ್ಕಾಗಿಯೇ ಇರುವ ನಮ್ಮ ಪ್ರಮುಖ ಸಾಧನ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದಲ್ಲಿ ಮುಂದುವರಿಸಬಹುದು.
[ಪುಟ 4ರಲ್ಲಿರುವ ಚೌಕ]
ದೇವರನ್ನು ನಂಬುವುದಿಲ್ಲ ಎಂದು ಮನೆಯವನು ಹೇಳಿದರೆ ಇದನ್ನು ಪ್ರಯತ್ನಿಸಿ:
• ಯಾಕೆ ಎಂದು ತಿಳಿಯಲು “ನಿಮಗೆ ಯಾವಾಗಲೂ ಹೀಗನಿಸಿದೆಯಾ?” ಎಂದು ಕೇಳಿ.
• ವಿಕಾಸವಾದವನ್ನು ನಂಬುವವನಾದರೆ ಇವನ್ನು ಬಳಸಬಹುದು:
ಎಚ್ಚರ! ಪತ್ರಿಕೆಯ “ವಿಕಾಸವೇ? ವಿನ್ಯಾಸವೇ?” ಸರಣಿ ಲೇಖನ
ಸಂತೃಪ್ತಿಕರವಾದ ಜೀವನ—ಲಭ್ಯವಾಗುವ ವಿಧ ಕಿರುಹೊತ್ತಗೆ, ಭಾಗ 4
• ಅನ್ಯಾಯ ಕಷ್ಟಗಳನ್ನು ನೋಡಿ ದೇವರ ಮೇಲೆ ನಂಬಿಕೆ ಕಳಕೊಂಡವನಾದರೆ ಇವನ್ನು ಬಳಸಿ:
ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ಭಾಗ 6 ಮತ್ತು ಜೀವಿತದ ಉದ್ದೇಶವೇನು?, ಭಾಗ 6
• ದೇವರು ಇದ್ದಾನೆ ಎಂದು ಮನೆಯವನು ಒಪ್ಪಿಕೊಳ್ಳುತ್ತಿದ್ದಾನೆ ಎಂದು ತಿಳಿದೊಡನೆ ಬೈಬಲ್ ಬೋಧಿಸುತ್ತದೆ ಪುಸ್ತಕ ಕೊಡಿ. ಅಧ್ಯಾಯ 2ರಿಂದ ಅಥವಾ ಅವನಿಗೆ ಸೂಕ್ತವಾದ ಪಾಠ ಆರಿಸಿ ಅಧ್ಯಯನ ಪ್ರಾರಂಭಿಸಬಹುದು.
[ಪುಟ 5ರಲ್ಲಿರುವ ಚಿತ್ರ]
ಮನೆಯವನು ಬೈಬಲನ್ನು ನಂಬುವುದಿಲ್ಲವಾದರೆ ಇದನ್ನು ಪ್ರಯತ್ನಿಸಿ:
• ಈ ಬೈಬಲ್ ತತ್ವಗಳಿಂದ ಸಿಗುವ ಪ್ರಯೋಜನಗಳನ್ನು ಚರ್ಚಿಸಿ. ಬೈಬಲಿನ ಪ್ರಾಯೋಗಿಕ ಮೌಲ್ಯದ ಬಗ್ಗೆ ತಿಳಿಸಲು ಈ ಸಾಹಿತ್ಯ ಬಳಸಿ:
ಎಚ್ಚರ! ಪತ್ರಿಕೆಯ “ಸುಖೀ ಸಂಸಾರಕ್ಕೆ ಸಲಹೆಗಳು” ಸರಣಿ ಲೇಖನ
ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆ, ಪಾಠ 9 ಮತ್ತು 11; ಸಕಲ ಜನರಿಗಾಗಿರುವ ಒಂದು ಗ್ರಂಥ ಕಿರುಹೊತ್ತಗೆ, ಪುಟ 22-26; ಸಂತೃಪ್ತಿಕರ ಜೀವನ—ಲಭ್ಯವಾಗುವ ವಿಧ, ಭಾಗ 2
ಬೈಬಲ್ ಬಗ್ಗೆ ಪೂರ್ವಾಗ್ರಹ ಇರುವ ಕಡೆ ನೀವು ಸೇವೆ ಮಾಡುತ್ತಿದ್ದರೆ ನೀವು ಹೇಳುತ್ತಿರುವ ವಿವೇಕದ ಮಾತುಗಳ ಮೂಲವನ್ನು ಹೇಳದಿರುವುದು ಉತ್ತಮ. ಹಲವಾರು ಭೇಟಿಗಳ ನಂತರ ಅದನ್ನು ಹೇಳಬಹುದು.
• ಬೈಬಲ್ ಪ್ರವಾದನೆಗಳು ಹೇಗೆ ನೆರವೇರಿವೆ ಎಂದು ವಿವರಿಸಿ. ಈ ಸಾಹಿತ್ಯ ಬಳಸಬಹುದು:
ಸಕಲ ಜನರಿಗಾಗಿರುವ ಒಂದು ಗ್ರಂಥ ಕಿರುಹೊತ್ತಗೆ, ಪುಟ 27-29
• ಬೇರೆಬೇರೆ ವಿಷಯಗಳ ಬಗ್ಗೆ ಬೈಬಲ್ ಏನು ಬೋಧಿಸುತ್ತದೆಂದು ಮನೆಯವನು ಕೇಳಿದ ಕೂಡಲೆ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಧ್ಯಯನ ಶುರುಮಾಡಿ.
[ಪುಟ 6ರಲ್ಲಿರುವ ಚೌಕ]
“ನಾನು ದೇವರನ್ನು ನಂಬುವುದಿಲ್ಲ” ಎಂದು ಮನೆಯವನು ಹೇಳಿದರೆ ಹೀಗನ್ನಿ:
• “ದೇವರೊಬ್ಬ ಇದ್ದಾನಾದರೆ ಅವನು ಎಂಥವನಾಗಿರಬೇಕೆಂದು ನೀವು ಬಯಸುತ್ತೀರಾ?” ಪ್ರೀತಿ, ಕರುಣೆ, ನ್ಯಾಯವುಳ್ಳ ನಿಷ್ಪಕ್ಷಪಾತ ದೇವರಾಗಿರಬೇಕೆಂದು ಅನೇಕ ಮನೆಯವರು ಹೇಳುತ್ತಾರೆ. ದೇವರಿಗೆ ಇಂಥ ಗುಣಗಳು ಇವೆ ಎಂದು ಬೈಬಲ್ನಿಂದ ತೋರಿಸಿ. (ಬೈಬಲ್ ಬೋಧಿಸುತ್ತದೆ ಪುಸ್ತಕದ ಅಧ್ಯಾಯ 1ನ್ನು ಬಳಸಬಹುದು. ಪ್ಯಾರ 6ರಿಂದ ಆರಂಭಿಸಿ.)
“ನಾನು ಬೈಬಲನ್ನು ನಂಬುವುದಿಲ್ಲ” ಎಂದು ಮನೆಯವನು ಹೇಳಿದರೆ ಹೀಗನ್ನಿ:
• “ತುಂಬ ಜನರಿಗೆ ಹೀಗನಿಸುತ್ತದೆ. ಬೈಬಲ್ ವೈಜ್ಞಾನಿಕವಲ್ಲ ಅಥವಾ ಅದರಲ್ಲಿರುವ ಮಟ್ಟಗಳು ಪ್ರಾಯೋಗಿಕವಲ್ಲ ಎಂದು ಕೆಲವರು ನೆನಸುತ್ತಾರೆ. ಬೈಬಲನ್ನು ಓದುವ ಅವಕಾಶ ನಿಮಗೆ ಯಾವಾಗಲಾದರೂ ಸಿಕ್ಕಿದೆಯಾ? [ಉತ್ತರಕ್ಕಾಗಿ ಕಾಯಿರಿ. ನಂತರ ಸಕಲ ಜನರಿಗಾಗಿರುವ ಒಂದು ಗ್ರಂಥ ಕಿರುಹೊತ್ತಗೆಯ ಪುಟ 3ರಲ್ಲಿರುವ ಪೀಠಿಕೆಯನ್ನು ತೋರಿಸಿ ಕಿರುಹೊತ್ತಗೆಯನ್ನು ಕೊಡಿ.] ಧರ್ಮಗಳು ಬೈಬಲ್ನಲ್ಲಿರುವ ಬೋಧನೆಗಳನ್ನು ತಪ್ಪಾಗಿ ಕಲಿಸಿರುವುದರಿಂದ ಅನೇಕರು ಬೈಬಲ್ಗೆ ಬೆಲೆಕೊಡುವುದಿಲ್ಲ. ಮುಂದಿನ ಸಾರಿ ಬಂದಾಗ ಪುಟ 4 ಮತ್ತು 5ರಲ್ಲಿರುವ ಉದಾಹರಣೆಯನ್ನು ಚರ್ಚಿಸಲು ಇಷ್ಟಪಡುತ್ತೇನೆ.”
• “ನಿಮ್ಮ ಹಾಗೇ ಅನೇಕರು ಹೇಳುತ್ತಾರೆ. ಬೈಬಲ್ ಬಗ್ಗೆ ನನಗೆ ತುಂಬ ಹಿಡಿಸಿದ ಒಂದು ವಿಷಯ ನಿಮಗೆ ತೋರಿಸಲಾ? [ಯೋಬ 26:7 ಅಥವಾ ಯೆಶಾಯ 40:22 ಓದಿ ಬೈಬಲ್ ವೈಜ್ಞಾನಿಕವಾಗಿ ನಿಷ್ಕೃಷ್ಟ ಎಂದು ತೋರಿಸಿ.] ಕುಟುಂಬಗಳಿಗೆ ಸಹಾಯವಾಗುವ ಬುದ್ಧಿಮಾತುಗಳು ಸಹ ಬೈಬಲ್ನಲ್ಲಿವೆ. ಮುಂದಿನ ಸಲ ಬಂದಾಗ ಒಂದು ಉದಾಹರಣೆಯನ್ನು ತೋರಿಸುತ್ತೇನೆ.”
• “ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬ ಧನ್ಯವಾದ. ಒಂದುವೇಳೆ ದೇವರು ಮಾನವರಿಗಾಗಿ ಒಂದು ಪುಸ್ತಕವನ್ನು ಬರೆದಿದ್ದರೆ ಅದರಲ್ಲಿ ಏನಿರಬಹುದೆಂದು ನೆನಸುತ್ತೀರಿ?” ನಂತರ ಮನೆಯವರ ಹೇಳಿಕೆಗೆ ಹೊಂದಿಕೆಯಲ್ಲಿರುವ ಯಾವುದಾದರೂ ಒಂದು ವಿಷಯವನ್ನು ಬೈಬಲ್ನಿಂದ ತೋರಿಸಿ.