ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಹೊಸ ಪ್ರಚಾರಕರಿಗೆ ತರಬೇತಿ ಕೊಡಿ
ಏಕೆ ಪ್ರಾಮುಖ್ಯ: ಹೊಸ ಪ್ರಚಾರಕರು ಯೇಸು ಆಜ್ಞಾಪಿಸಿದ “ಎಲ್ಲ ವಿಷಯಗಳನ್ನು” ಮಾಡಲು ಕಲಿಯಬೇಕು. ಅದರಲ್ಲಿ ಸತ್ಯವನ್ನು ಇತರರಿಗೆ ಕಲಿಸುವುದು ಸಹ ಸೇರಿದೆ. (ಮತ್ತಾ. 28:19, 20) ಅನೇಕ ಹೊಸಬರು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಸೇರುವ ಅರ್ಹತೆಯನ್ನು ಪಡೆದಿರಬಹುದು, ಈಗಾಗಲೇ ತಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಸಾಕ್ಷಿ ನೀಡಿರಬಹುದು. ವಿದ್ಯಾರ್ಥಿ ಕಲಿತ ವಿಷಯಗಳ ಕಡೆಗೆ ಗಣ್ಯತೆ ಬೆಳೆಸಿಕೊಂಡಂತೆ, ಎಲ್ಲರಿಗೂ ಸುವಾರ್ತೆ ಸಾರಬೇಕೆಂಬ ಯೆಹೋವನ ಬಯಕೆಯನ್ನು ತಿಳಿದುಕೊಳ್ಳುತ್ತಾನೆ. ಆಗ ತಾನೂ ಒಬ್ಬ ಪ್ರಚಾರಕನಾಗಬೇಕೆಂಬ ತನ್ನ ಇಚ್ಛೆಯನ್ನು ತಿಳಿಸುತ್ತಾನೆ. (ರೋಮ. 10:13, 14) ಹೊಸಬರು ಪ್ರಚಾರಕರಾದಾಗ ಅವರಿಗೆ ಚೆನ್ನಾಗಿ ತರಬೇತಿ ಕೊಟ್ಟರೆ ಧೈರ್ಯದಿಂದ ಸೇವೆ ಮಾಡಬಲ್ಲರು ಮತ್ತು ಆಧ್ಯಾತ್ಮಿಕವಾಗಿ ಇನ್ನೂ ಹೆಚ್ಚಿನ ಪ್ರಗತಿ ಮಾಡುವರು.—ಲೂಕ 6:40.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಇತ್ತೀಚೆಗೆ ಪ್ರಚಾರಕನಾದ ಬೈಬಲ್ ವಿದ್ಯಾರ್ಥಿ ನಿಮಗಿರುವುದಾದರೆ ಅವನೊಂದಿಗೆ ಮನೆ-ಮನೆ ಸೇವೆ ಮಾಡಿ, ನಿಮ್ಮ ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನಗಳಿಗೆ ಕರೆದುಕೊಂಡು ಹೋಗಿ. ನಿಮಗೆ ವಿದ್ಯಾರ್ಥಿ ಇಲ್ಲದಿದ್ದರೆ ಹೆಚ್ಚು ಅನುಭವ ಇಲ್ಲದ ಬೇರೆ ಪ್ರಚಾರಕನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ.