ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • dp ಅಧ್ಯಾ. 7 ಪು. 98-113
  • ಜಗತ್ತನ್ನೇ ಬದಲಾಯಿಸಿದ ನಾಲ್ಕು ಪದಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನೇ ಬದಲಾಯಿಸಿದ ನಾಲ್ಕು ಪದಗಳು
  • ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಔತಣವು ಹತೋಟಿ ಮೀರುತ್ತದೆ
  • ಗೋಡೆಯ ಮೇಲಿನ ಕೈಬರಹ
  • ಒಳನೋಟವುಳ್ಳ ವ್ಯಕ್ತಿಯನ್ನು ಆಹ್ವಾನಿಸಲಾಗುತ್ತದೆ
  • ಒಂದು ಒಗಟು ಬಿಡಿಸಲ್ಪಟ್ಟದ್ದು!
  • ಬಾಬೆಲಿನ ಪತನ
  • ಗೋಡೆಯ ಮೇಲಿನ ಕೈಬರಹದಿಂದ ಪಾಠವನ್ನು ಕಲಿತುಕೊಳ್ಳುವುದು
  • ದುರಭಿಮಾನಿ ಪ್ರಭುವಿನ ಸಾಮ್ರಾಜ್ಯ ನಷ್ಟ
    ಕಾವಲಿನಬುರುಜು—1998
  • ಗೋಡೆಯ ಮೇಲೆ ಕೈಬರಹ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ದಾನಿಯೇಲ—ಪರೀಕ್ಷೆಗೊಳಗಾಗಿರುವ ಒಂದು ಪುಸ್ತಕ
    ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
  • ನಿಮಗೆ ಗೊತ್ತಿತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಇನ್ನಷ್ಟು
ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ!
dp ಅಧ್ಯಾ. 7 ಪು. 98-113

ಅಧ್ಯಾಯ ಏಳು

ಜಗತ್ತನ್ನೇ ಬದಲಾಯಿಸಿದ ನಾಲ್ಕು ಪದಗಳು

1. ಬಹಳ ಸಮಯದ ಹಿಂದೆ ಒಂದು ಗೋಡೆಯ ಮೇಲೆ ಬರೆಯಲ್ಪಟ್ಟಿದ್ದ ನಾಲ್ಕು ಪದಗಳ ಪ್ರಭಾವವು ಎಷ್ಟು ವ್ಯಾಪಕವಾಗಿತ್ತು?

ಗಾರೆಯ ಗೋಡೆಯ ಮೇಲೆ ನಾಲ್ಕು ಸರಳ ಪದಗಳು ಬರೆಯಲ್ಪಟ್ಟಿದ್ದವು. ಆದರೂ, ಈ ನಾಲ್ಕು ಪದಗಳು ಒಬ್ಬ ಪರಾಕ್ರಮಿ ಅರಸನನ್ನು ಕಳವಳಗೊಳಿಸಿದವು ಮತ್ತು ಬಹುಮಟ್ಟಿಗೆ ಅವನಿಗೆ ಹುಚ್ಚುಹಿಡಿಸಿದವು. ಇಬ್ಬರು ಅರಸರು ಸಿಂಹಾಸನದಿಂದ ಕೆಳಗಿಳಿಸಲ್ಪಡುವುದನ್ನು, ಅವರಲ್ಲಿ ಒಬ್ಬನ ಮರಣ, ಹಾಗೂ ಒಂದು ಪ್ರಬಲ ಲೋಕ ಶಕ್ತಿಯ ಅಂತ್ಯವನ್ನು ಅವು ಪ್ರಕಟಿಸಿದವು. ಆ ಪದಗಳು, ಪೂಜ್ಯಭಾವದಿಂದ ಪರಿಗಣಿಸಲ್ಪಡುತ್ತಿದ್ದ ಧಾರ್ಮಿಕ ಪುರೋಹಿತ​ವರ್ಗಕ್ಕೆ ಅವಮಾನವನ್ನು ಮಾಡಿದವು. ಎಲ್ಲಕ್ಕಿಂತಲೂ ಮಿಗಿಲಾಗಿ, ಅವು ಯೆಹೋವನ ಆರಾಧನೆಯನ್ನು ಘನತೆಗೇರಿಸಿದವು ಮತ್ತು ಆತನ ಪರಮಾಧಿಕಾರವನ್ನು ದೃಢೀಕರಿಸಿದವು; ಅದು ಕೂಡ ಈ ಎರಡು ವಿಷಯಗಳಿಗೆ ಅಧಿಕಾಂಶ ಜನರು ಯಾವುದೇ ರೀತಿಯ ಗೌರವವನ್ನು ತೋರಿಸದಿದ್ದಂತಹ ಒಂದು ಸಮಯದಲ್ಲಿ ಸಂಭವಿಸಿತು. ಅಷ್ಟೇಕೆ, ಇಂದಿನ ಲೋಕ ಘಟನೆಗಳ ಮೇಲೆಯೂ ಆ ಪದಗಳು ಬೆಳಕು ಬೀರಿದವು! ಆ ನಾಲ್ಕು ಪದಗಳು ಇದೆಲ್ಲವನ್ನೂ ಹೇಗೆ ಮಾಡಸಾಧ್ಯವಿತ್ತು? ನಾವೀಗ ನೋಡೋಣ.

2. (ಎ) ನೆಬೂಕದ್ನೆಚ್ಚರನ ಮರಣಾನಂತರ ಬಾಬೆಲಿನಲ್ಲಿ ಏನು ಸಂಭವಿಸಿತು? (ಬಿ) ಆಗ ಯಾವ ಅರಸನು ಆಳ್ವಿಕೆಗೆ ಬಂದನು?

2 ದಾನಿಯೇಲ ಪುಸ್ತಕದ 4ನೆಯ ಅಧ್ಯಾಯದಲ್ಲಿ ವಿವರಿಸಲ್ಪಟ್ಟಿರುವ ಘಟನೆಗಳು ಸಂಭವಿಸಿ ಅನೇಕ ದಶಕಗಳು ಕಳೆದಿದ್ದವು. ಬಾಬೆಲಿನಲ್ಲಿ ಅಹಂಕಾರಿ ಅರಸನಾಗಿದ್ದ ನೆಬೂಕದ್ನೆಚ್ಚರನ 43 ವರ್ಷಗಳ ಆಳ್ವಿಕೆಯು, ಸಾ.ಶ.ಪೂ. 582ರಲ್ಲಿ ಅವನು ಮರಣಹೊಂದಿದಾಗ ಕೊನೆಗೊಂಡಿತು. ಅವನ ವಂಶದಲ್ಲಿ ಅನೇಕ ಉತ್ತರಾಧಿಕಾರಿಗಳು ಬಂದರೂ, ಅಕಾಲ ಮರಣ ಅಥವಾ ಹತ್ಯೆಯ ಕಾರಣದಿಂದ ಒಬ್ಬರ ನಂತರ ಇನ್ನೊಬ್ಬರ ಆಳ್ವಿಕೆಯು ಕೊನೆಗೊಂಡಿತು. ಕೊನೆಯದಾಗಿ, ನೆಬೊನೈಡಸ್‌ ಎಂಬ ಹೆಸರಿನ ಒಬ್ಬ ವ್ಯಕ್ತಿಯು, ಒಂದು ದಂಗೆಯ ಮೂಲಕ ಸಿಂಹಾಸನವನ್ನು ಗೆದ್ದುಕೊಂಡನು. ಸಿನ್‌ ಎಂಬ ಚಂದ್ರದೇವನ ಮಹಾ ಪುರೋಹಿತೆಯ ಮಗನಾಗಿದ್ದ ನೆಬೊನೈಡಸನು, ಬಾಬೆಲಿನ ರಾಜಮನೆತನಕ್ಕೆ ರಕ್ತ​ಸಂಬಂಧಿಯಾಗಿರಲಿಲ್ಲ ಎಂಬುದು ಸುವ್ಯಕ್ತ. ತನ್ನ ಆಳ್ವಿಕೆಯನ್ನು ಶಾಸನಬದ್ಧವಾಗಿ ಮಾಡಲಿಕ್ಕಾಗಿ ಅವನು ನೆಬೂಕದ್ನೆಚ್ಚರನ ಮಗಳನ್ನು ಮದುವೆಯಾದನು, ತಮ್ಮ ಮಗನಾದ ಬೇಲ್ಶಚ್ಚರನನ್ನು ತನ್ನ ರಾಜಪ್ರತಿನಿಧಿಯನ್ನಾಗಿ ಮಾಡಿದನು, ಮತ್ತು ಕೆಲವೊಮ್ಮೆ ಬಹಳ ದೀರ್ಘ ಸಮಯದ ವರೆಗೆ ಬಾಬೆಲಿನ ಮೇಲ್ವಿಚಾರಣೆಯನ್ನು ಅವನಿಗೆ ​ವಹಿಸಿದನು ಎಂದು ಅಧಿಕೃತ ಮಾಹಿತಿಗಳು ಸೂಚಿಸುತ್ತವೆ. ಹಾಗಿರುವಲ್ಲಿ, ಬೇಲ್ಶಚ್ಚರನು ನೆಬೂಕದ್ನೆಚ್ಚರನ ಮೊಮ್ಮಗನಾಗಿದ್ದಿರಸಾಧ್ಯವಿದೆ. ತನ್ನ ಅಜ್ಜನ ಅನುಭವಗಳಿಂದ ಅವನು, ಯೆಹೋವನು ಪರಾತ್ಪರ ದೇವರಾಗಿದ್ದಾನೆ ಮತ್ತು ಯಾವುದೇ ಅರಸನನ್ನು ಅವಮಾನಕ್ಕೆ ಗುರಿಪಡಿಸಲು ಶಕ್ತನಾಗಿದ್ದಾನೆ ಎಂಬ ಪಾಠವನ್ನು ಕಲಿತುಕೊಂಡಿದ್ದನೋ? ಖಂಡಿತವಾಗಿಯೂ ಇಲ್ಲ!​—⁠ದಾನಿಯೇಲ 4:⁠37.

ಒಂದು ಔತಣವು ಹತೋಟಿ ಮೀರುತ್ತದೆ

3. ಬೇಲ್ಶಚ್ಚರನ ಔತಣವು ಹೇಗಿತ್ತು?

3 ದಾನಿಯೇಲ ಪುಸ್ತಕದ 5ನೆಯ ಅಧ್ಯಾಯವು ಒಂದು ಔತಣದೊಂದಿಗೆ ಆರಂಭವಾಗುತ್ತದೆ. “ರಾಜನಾದ ಬೇಲ್ಶಚ್ಚರನು ತನ್ನ ರಾಜ್ಯದ ಮುಖಂಡರಲ್ಲಿ ಸಾವಿರ ಮಂದಿಗೆ ಔತಣವನ್ನು ಮಾಡಿಸಿ ಆ ಸಾವಿರ ಜನರ ಕಣ್ಣೆದುರಿಗೆ ತಾನೂ ದ್ರಾಕ್ಷಾರಸವನ್ನು ಕುಡಿದನು.” (ದಾನಿಯೇಲ 5:⁠1) ನೀವು ಊಹಿಸಸಾಧ್ಯವಿರುವಂತೆ, ಈ ಎಲ್ಲ ಪುರುಷರಿಗೆ ಹಾಗೂ ಅರಸನ ಉಪರಾಣಿಯರು ಹಾಗೂ ಉಪಪತ್ನಿಯರಿಗೆ ಸ್ಥಳಾವಕಾಶವನ್ನು ಒದಗಿಸಲಿಕ್ಕಾಗಿ, ಒಂದು ದೊಡ್ಡ ಔತಣಶಾಲೆಯು ಬೇಕಾಗಿದ್ದಿರಬಹುದು. ಒಬ್ಬ ವಿದ್ವಾಂಸನು ಹೇಳಿದ್ದು: “ಬಾಬೆಲಿನ ಔತಣಗಳು ಮಹಾ ವೈಭವದಿಂದ ಕೂಡಿರುತ್ತಿದ್ದವಾದರೂ, ಸಾಮಾನ್ಯವಾಗಿ ಕುಡಿತದಲ್ಲಿ ಕೊನೆಗೊಳ್ಳುತ್ತಿದ್ದವು. ಹೊರದೇಶಗಳಿಂದ ಆಮದುಮಾಡಿಕೊಳ್ಳಲ್ಪಟ್ಟ ದ್ರಾಕ್ಷಾರಸ, ಮತ್ತು ಪ್ರತಿಯೊಂದು ರೀತಿಯ ಖಾದ್ಯವಸ್ತುಗಳು ಮೇಜಿನ ಮೇಲೆ ಸಮೃದ್ಧವಾಗಿ ತುಂಬಿರುತ್ತಿದ್ದವು. ಔತಣಶಾಲೆಯು ಸುಗಂಧದ್ರವ್ಯಗಳ ಪರಿಮಳದಿಂದ ತುಂಬಿರುತ್ತಿತ್ತು; ಗಾಯಕರು ಹಾಗೂ ವಾದ್ಯಗಾರರು, ಕೂಡಿಬಂದಿದ್ದ ಅತಿಥಿಗಳಿಗೆ ಮನೋರಂಜನೆ ನೀಡುತ್ತಿದ್ದರು.” ಎಲ್ಲರೂ ನೋಡುವಂತಹ ಸ್ಥಳದಲ್ಲಿ ಕುಳಿತಿದ್ದ ಬೇಲ್ಶಚ್ಚರನು, ದ್ರಾಕ್ಷಾರಸವನ್ನು ಕುಡಿಯುತ್ತಲೇ ಇದ್ದನು.

4. (ಎ) ಸಾ.ಶ.ಪೂ. 539, ಅಕ್ಟೋಬರ್‌ 5/6ರ ರಾತ್ರಿಯಂದು ಬಾಬೆಲಿನವರು ಔತಣವನ್ನು ನಡೆಸುತ್ತಿದ್ದದ್ದು ಏಕೆ ವಿಚಿತ್ರವಾಗಿ ಕಂಡುಬರಬಹುದು? (ಬಿ) ದಂಡೆತ್ತಿ ಬರುತ್ತಿರುವ ಸೈನ್ಯಗಳ ಎದುರಿನಲ್ಲಿ ಯಾವುದು ಬಾಬೆಲಿನವರಿಗೆ ದೃಢವಿಶ್ವಾಸವನ್ನು ಉಂಟುಮಾಡಿತು?

4 ಈ ರಾತ್ರಿ, ಅಂದರೆ ಸಾ.ಶ.ಪೂ. 539, ಅಕ್ಟೋಬರ್‌ 5/6ರಂದು, ಬಾಬೆಲಿನವರು ಇಂತಹ ಹರ್ಷೋಲ್ಲಾಸದ ಮನಃಸ್ಥಿತಿಯಲ್ಲಿದ್ದದ್ದು ವಿಚಿತ್ರವಾಗಿ ತೋರುತ್ತದೆ. ಅವರ ರಾಷ್ಟ್ರವು ಯುದ್ಧದಲ್ಲಿ ಒಳಗೂಡಿತ್ತು, ಮತ್ತು ಸನ್ನಿವೇಶಗಳು ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ಅಷ್ಟುಮಾತ್ರವಲ್ಲ, ಇತ್ತೀಚೆಗೆ ನೆಬೊನೈಡಸನು ದಂಡೆತ್ತಿಬಂದಿರುವ ಮೇದ್ಯಯಪಾರಸಿಯ ಸೈನ್ಯಗಳಿಂದ ಸೋಲನ್ನು ಅನುಭವಿಸಿದ್ದನು ಮತ್ತು ಬಾಬೆಲಿನ ನೈರುತ್ಯ ದಿಕ್ಕಿನಲ್ಲಿರುವ ಬಾರ್ಸಿಪದಲ್ಲಿ ಆಶ್ರಯಪಡೆದುಕೊಂಡಿದ್ದನು. ಮತ್ತು ಈಗ ಕೋರೆಷನ ಸೈನ್ಯಗಳು ಬಾಬೆಲಿನ ಹೊರಗೆ ಪಾಳೆಯಹಾಕಿಕೊಂಡಿದ್ದವು. ಆದರೂ, ಬೇಲ್ಶಚ್ಚರನು ಹಾಗೂ ಅವನ ಮುಖಂಡರು ಇದರ ಬಗ್ಗೆ ಚಿಂತಿತರಾಗಿದ್ದಂತೆ ತೋರಲಿಲ್ಲ. ಎಷ್ಟೆಂದರೂ, ಅವರ ಪಟ್ಟಣವು ದುರ್ಗಮವಾದ ಬಾಬೆಲ್‌ ಆಗಿತ್ತಲ್ಲಾ! ಯೂಫ್ರೇಟೀಸ್‌ ನದಿಯ ನೀರು ಪಟ್ಟಣದ ಮೂಲಕ ಹರಿಯುತ್ತಿರುವಾಗ, ಅದರ ನೀರಿನಿಂದ ತುಂಬಿರುವ ಆಳವಾದ ಕಂದಕಗಳ ಮೇಲೆ ಅವಳ ದೈತ್ಯಾಕಾರದ ಗೋಡೆಗಳು ಎದ್ದುಕಾಣುತ್ತಿದ್ದವು. ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಯಾವ ಶತ್ರುವೂ ಬಾಬೆಲನ್ನು ಅಕಸ್ಮಾತ್ತಾಗಿ ವಶಪಡಿಸಿಕೊಂಡಿರಲಿಲ್ಲ. ಹೀಗಿರುವಾಗ ಚಿಂತೆ ಏಕೆ? ಪಾನವಿಲಾಸದ ಗದ್ದಲವು, ಹೊರಗಿರುವ ಶತ್ರುಗಳಿಗೆ ನಮ್ಮ ದೃಢವಿಶ್ವಾಸವನ್ನು ತೋರ್ಪಡಿಸುತ್ತದೆ ಹಾಗೂ ಅವರನ್ನು ಎದೆಗುಂದಿಸುತ್ತದೆ ಎಂದು ಬೇಲ್ಶಚ್ಚರನು ತರ್ಕಿಸಿದ್ದಿರಬಹುದು.

5, 6. ದ್ರಾಕ್ಷಾರಸದಿಂದ ಅಮಲೇರಿದ್ದ ಬೇಲ್ಶಚ್ಚರನು ಏನು ಮಾಡಿದನು, ಮತ್ತು ಇದು ಯೆಹೋವನಿಗೆ ಗಂಭೀರವಾದ ಅವಮಾನವಾಗಿತ್ತೇಕೆ?

5 ಅಷ್ಟರಲ್ಲೇ, ಮಿತಿಮೀರಿದ ಕುಡಿತವು ಬೇಲ್ಶಚ್ಚರನ ಮೇಲೆ ಪರಿಣಾಮವನ್ನು ಉಂಟುಮಾಡಿತು. ಜ್ಞಾನೋಕ್ತಿ 20:1 ಹೇಳುವಂತೆ, “ದ್ರಾಕ್ಷಾರಸವು ಪರಿಹಾಸ್ಯ”ವಾಗಿದೆ. ಈ ಸಂದರ್ಭದಲ್ಲಿ, ನಿಜವಾಗಿಯೂ ಅತ್ಯಂತ ಗಂಭೀರ ರೀತಿಯ ಕೃತ್ಯಗೈಯುವಂತೆ ದ್ರಾಕ್ಷಾರಸವು ಅರಸನನ್ನು ಪ್ರಚೋದಿಸಿತು. ಯೆಹೋವನ ಆಲಯದಿಂದ ಪವಿತ್ರ ಪಾತ್ರೆಗಳನ್ನು ಔತಣಶಾಲೆಯೊಳಗೆ ತರುವಂತೆ ಅವನು ಆಜ್ಞಾಪಿಸಿದನು. ನೆಬೂಕದ್ನೆಚ್ಚರನು ಯೆರೂಸಲೇಮನ್ನು ವಶಪಡಿಸಿಕೊಂಡಾಗ ಕೊಳ್ಳೆಯಾಗಿ ತಂದಿದ್ದ ಈ ಪಾತ್ರೆಗಳನ್ನು ಕೇವಲ ಶುದ್ಧಾರಾಧನೆಯಲ್ಲಿ ಮಾತ್ರ ಉಪಯೋಗಿಸಬೇಕಾಗಿತ್ತು. ಗತ ಸಮಯಗಳಲ್ಲಿ, ಯೆರೂಸಲೇಮಿನ ದೇವಾಲಯದಲ್ಲಿ ಅವುಗಳನ್ನು ಉಪಯೋಗಿಸಲು ನೇಮಿಸಲ್ಪಟ್ಟಿದ್ದ ಯೆಹೂದಿ ಯಾಜಕರಿಗೆ ಸಹ, ಸ್ವತಃ ತಮ್ಮನ್ನು ಶುದ್ಧವಾಗಿಟ್ಟುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು.​—⁠ದಾನಿಯೇಲ 5:2; ಹೋಲಿಸಿರಿ ಯೆಶಾಯ 52:⁠11.

6 ಆದರೂ, ಇನ್ನೂ ಹೆಚ್ಚಿನ ದುರಹಂಕಾರದ ಕೃತ್ಯವು ಬೇಲ್ಶಚ್ಚರನ ಮನಸ್ಸಿಗೆ ಬಂದಿತ್ತು. “ರಾಜನೂ ಅವನ ಮುಖಂಡರೂ ಪತ್ನ್ಯುಪಪತ್ನಿಯರೂ ಅವುಗಳಲ್ಲಿ ಕುಡಿದರು. ದ್ರಾಕ್ಷಾರಸವನ್ನು ಕುಡಿದು ಬಂಗಾರಬೆಳ್ಳಿತಾಮ್ರಕಬ್ಬಿಣಮರಕಲ್ಲುಗಳ ದೇವರುಗಳನ್ನು ಸ್ತುತಿಸಿದರು.” (ದಾನಿಯೇಲ 5:​3, 4) ಹೀಗೆ, ತನ್ನ ಸುಳ್ಳು ದೇವದೇವತೆಗಳನ್ನು ಯೆಹೋವನಿಗಿಂತ ಮೇಲೇರಿಸುವ ಅಭಿಲಾಷೆ ಬೇಲ್ಶಚ್ಚರನ ಮನಸ್ಸಿನಲ್ಲಿತ್ತು! ಈ ಮನೋಭಾವವು, ಬಾಬೆಲಿನ ಜನರಲ್ಲಿ ಸಾಮಾನ್ಯವಾಗಿತ್ತು ಎಂಬಂತೆ ತೋರುತ್ತದೆ. ಅವರು ತಮ್ಮ ಯೆಹೂದಿ ಬಂದಿವಾಸಿಗಳನ್ನು ತುಚ್ಛವಾಗಿ ಕಾಣುತ್ತಿದ್ದರು, ಅವರ ಆರಾಧನೆಯನ್ನು ಅಪಹಾಸ್ಯಮಾಡುತ್ತಿದ್ದರು ಮತ್ತು ಯೆಹೂದ್ಯರು ತಮ್ಮ ಮೆಚ್ಚಿನ ಸ್ವದೇಶಕ್ಕೆ ಹಿಂದಿರುಗುವ ಯಾವ ನಿರೀಕ್ಷೆಯನ್ನೂ ಅವರು ನೀಡಲಿಲ್ಲ. (ಕೀರ್ತನೆ 137:​1-3; ಯೆಶಾಯ ​14:​16, 17) ಈ ದೇಶಭ್ರಷ್ಟರನ್ನು ಅವಮಾನಗೊಳಿಸಿ, ಅವರ ದೇವರಿಗೆ ಮುಖಭಂಗಮಾಡಿದರೆ, ತನ್ನ ಸ್ತ್ರೀಯರು ಹಾಗೂ ಮುಖಂಡರು ಇದರಿಂದ ಪ್ರಭಾವಿತರಾಗುತ್ತಾರೆ, ಮತ್ತು ತನ್ನನ್ನು ತುಂಬ ಪರಾಕ್ರಮಿಯೆಂದು ಭಾವಿಸುತ್ತಾರೆ ಎಂದು ಅಮಲೇರಿದ್ದ ಈ ಸಾಮ್ರಾಟನು ನೆನಸಿದ್ದಿರಬಹುದು.a ಆದರೆ, ಬೇಲ್ಶಚ್ಚರನು ತನ್ನ ಅಧಿಕಾರವನ್ನು ತೋರಿಸುವ ಮೂಲಕ ಸ್ವಲ್ಪಮಟ್ಟಿಗಿನ ರೋಮಾಂಚನವನ್ನು ಅನುಭವಿಸಿದ್ದಿರಬಹುದಾದರೂ, ಅದು ಹೆಚ್ಚು ಸಮಯ ಉಳಿಯಲಿಲ್ಲ.

ಗೋಡೆಯ ಮೇಲಿನ ಕೈಬರಹ

7, 8. ಬೇಲ್ಶಚ್ಚರನ ಔತಣಕ್ಕೆ ಹೇಗೆ ಭಂಗ ಉಂಟಾಯಿತು, ಮತ್ತು ಇದು ಅರಸನ ಮೇಲೆ ಯಾವ ಪರಿಣಾಮವನ್ನು ಬೀರಿತು?

7 “ಆಗಲೇ ಒಬ್ಬನ ಕೈಯ ಬೆರಳುಗಳು ಒಂದು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ [“ಗಾರೆಯ,” NW] ಗೋಡೆಯ ಮೇಲೆ ಬರಹ ಬರೆದವು; ಬರೆಯುತ್ತಿದ್ದ ಹಸ್ತವನ್ನು ರಾಜನು ನೋಡಿದನು” ಎಂದು ಪ್ರೇರಿತ ವೃತ್ತಾಂತವು ತಿಳಿಸುತ್ತದೆ. (ದಾನಿಯೇಲ 5:⁠5) ಎಂತಹ ಅಸಾಮಾನ್ಯ ದೃಶ್ಯ! ಇದ್ದಕ್ಕಿದ್ದ ಹಾಗೆ ಒಂದು ಕೈ ಕಾಣಿಸಿಕೊಂಡಿತು; ಗೋಡೆಯ ಮೇಲೆ ಚೆನ್ನಾಗಿ ಬೆಳಕು ಬೀಳುತ್ತಿದ್ದ ಸ್ಥಳದ ಬಳಿ ಅದು ಗಾಳಿಯಲ್ಲಿ ತೇಲುತ್ತಿತ್ತು. ಹಾಜರಿದ್ದ ಅತಿಥಿಗಳು ಇದನ್ನು ದಿಟ್ಟಿಸಿ ನೋಡಲು ಆರಂಭಿಸಿದಾಗ, ಆ ಔತಣಕೂಟದಲ್ಲಿ ಅನಿರೀಕ್ಷಿತವಾಗಿ ಉಂಟಾದ ನಿಶ್ಶಬ್ದವನ್ನು ಊಹಿಸಿಕೊಳ್ಳಿರಿ. ಆ ಕೈ, ಗಾರೆಯ ಗೋಡೆಯ ಮೇಲೆ ರಹಸ್ಯವಾದ ಸಂದೇಶವನ್ನು ಬರೆಯಲಾರಂಭಿಸಿತು.b ಈ ಅಸಾಧಾರಣ ಘಟನೆಯು ಎಷ್ಟು ಅಶುಭಕರವೂ ಅವಿಸ್ಮರಣೀಯವೂ ಆಗಿತ್ತೆಂದರೆ, ಸನ್ನಿಹಿತವಾಗಿರುವ ಒಂದು ದಂಡನೆಯ ಎಚ್ಚರಿಕೆಯನ್ನು ಸೂಚಿಸಲಿಕ್ಕಾಗಿ, ಇಂದು ಕೂಡ ಜನರು “ಗೋಡೆಯ ಮೇಲಿನ ಕೈಬರಹ” ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸುತ್ತಾರೆ.

8 ಯೆಹೋವನಿಗಿಂತಲೂ ಹೆಚ್ಚಾಗಿ ತನ್ನನ್ನು ಹಾಗೂ ತನ್ನ ದೇವದೇವತೆಗಳನ್ನು ಮೇಲೇರಿಸಿಕೊಳ್ಳಲು ಪ್ರಯತ್ನಿಸಿದ್ದ ಈ ಅಹಂಕಾರಿ ಅರಸನ ಮೇಲೆ ಇದು ಯಾವ ಪರಿಣಾಮವನ್ನು ಬೀರಿತು? “ಆಗ ಅವನ ಮುಖ ಕಳೆಗುಂದಿತು, ಮನಸ್ಸು ಕಳವಳಗೊಂಡಿತು, ಸೊಂಟದ ಕೀಲು ಸಡಲಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.” (ದಾನಿಯೇಲ 5:⁠6) ಬೇಲ್ಶಚ್ಚರನು ತನ್ನ ಪ್ರಜೆಗಳ ಮುಂದೆ ಮಹಾಮಹಿಮನಾಗಿಯೂ ಘನತೆಯುಳ್ಳವನಾಗಿಯೂ ಕಾಣಿಸಿಕೊಳ್ಳುವ ಆಕಾಂಕ್ಷೆಯುಳ್ಳವನಾಗಿದ್ದನು. ಅದಕ್ಕೆ ಬದಲಾಗಿ, ಅವನು ಈಗ ಭೀತಿಯಿಂದ ಕೂಡಿದ್ದು, ಭಯವೇ ಮೂರ್ತಿವೆತ್ತಂತೆ ಕಾಣುತ್ತಿದ್ದನು​—⁠ಅವನ ಮುಖವು ಕಳೆಗುಂದಿತ್ತು, ಅವನ ತುಟಿಗಳು ಕಂಪಿಸುತ್ತಿದ್ದವು, ಅವನ ಇಡೀ ದೇಹವು ಎಷ್ಟು ಜೋರಾಗಿ ನಡುಗಿತೆಂದರೆ, ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಳ್ಳುತ್ತಿದ್ದವು. ಕೀರ್ತನೆಯಲ್ಲಿ ದಾವೀದನು ಯೆಹೋವನಿಗೆ ಸೂಚಿಸಿದ ಮಾತುಗಳು ಖಂಡಿತವಾಗಿಯೂ ಸತ್ಯವಾಗಿದ್ದವು: “ನೀನು ಹಮ್ಮಿನವರನ್ನು ಕಂಡುಹಿಡಿದು ತಗ್ಗಿಸಿಬಿಡುತ್ತೀ.”​—⁠2 ಸಮುವೇಲ 22:​1, 28; ಹೋಲಿಸಿರಿ ಜ್ಞಾನೋಕ್ತಿ 18:⁠12.

9. (ಎ) ಬೇಲ್ಶಚ್ಚರನ ಭಯವು ದೈವಿಕ ಭಯವಾಗಿರಲಿಲ್ಲವೇಕೆ? (ಬಿ) ಅರಸನು ಬಾಬೆಲಿನ ವಿದ್ವಾಂಸರಿಗೆ ಯಾವ ಬಹುಮಾನವನ್ನು ಕೊಡುವ ಪ್ರಸ್ತಾಪ ಮಾಡಿದನು?

9 ಬೇಲ್ಶಚ್ಚರನ ಭಯವು, ಸಕಲ ಜ್ಞಾನಕ್ಕೆ ಮೂಲನಾಗಿರುವ ಯೆಹೋವನ ಕಡೆಗೆ ಆಳವಾದ ಪೂಜ್ಯಭಾವವನ್ನು ತೋರಿಸುವಂತಹ ಒಂದು ಭಯವಾಗಿರಲಿಲ್ಲ ಎಂಬುದನ್ನು ಗಮನಿಸತಕ್ಕದ್ದು. (ಜ್ಞಾನೋಕ್ತಿ 9:10) ಇಲ್ಲ, ಇದು ಅಹಿತಕರವಾದ ಭಯವಾಗಿತ್ತು, ಮತ್ತು ಭಯದಿಂದ ಕಂಪಿಸುತ್ತಿದ್ದ ಈ ಸಾಮ್ರಾಟನಲ್ಲಿ ಅದು ಯಾವುದೇ ರೀತಿಯ ಅರಿವನ್ನು ಮೂಡಿಸಲಿಲ್ಲ.c ಸ್ವಲ್ಪ ಸಮಯದ ಹಿಂದೆಯಷ್ಟೇ ಅವನು ಯಾರನ್ನು ಅವಮಾನಗೊಳಿಸಿದ್ದನೋ ಆ ದೇವರ ಬಳಿ ಕ್ಷಮೆಯಾಚಿಸುವುದಕ್ಕೆ ಬದಲಾಗಿ, ಅವನು ಗಟ್ಟಿಯಾಗಿ ಕೂಗಿಕೊಂಡು “ಮಂತ್ರವಾದಿಪಂಡಿತಶಾಕುನಿಕರನ್ನು” ಕರೆಸಿದನು. ಅವರ ಮುಂದೆ ಹೀಗೆ ಘೋಷಣೆ ಮಾಡಿದನು: “ಯಾವನು ಈ ಬರಹವನ್ನು ಓದಿ ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ನಾನು ಧೂಮ್ರವಸ್ತ್ರವನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ [“ಮೂರನೆಯ ಮುಖ್ಯಾಧಿಕಾರಿಯಾಗಿ,” NW] ನೇಮಿಸುವೆನು.” (ದಾನಿಯೇಲ 5:⁠7) ಈ ರಾಜ್ಯದ ಮೂರನೆಯ ಮುಖ್ಯಾಧಿಕಾರಿಯು ಸಹ ಬಲಶಾಲಿಯಾಗಿರಲಿದ್ದನು; ಏಕೆಂದರೆ ನೆಬೊನೈಡಸ್‌ ಹಾಗೂ ಬೇಲ್ಶಚ್ಚರ ಎಂಬ ಇಬ್ಬರು ಆಳುವ ಅರಸರು ಮಾತ್ರ ಅವನಿಗಿಂತ ಮೊದಲಿನ ಸ್ಥಾನದಲ್ಲಿ ಇದ್ದರು. ಸಾಮಾನ್ಯವಾಗಿ ಇಂತಹ ಒಂದು ಸ್ಥಾನವು, ಬೇಲ್ಶಚ್ಚರನ ಹಿರಿಯ ಮಗನಿಗೆ ಮಾತ್ರ ಮೀಸಲಾಗಿಡಲ್ಪಡುತ್ತಿತ್ತು. ಆದರೆ, ಈ ಅದ್ಭುತ ಸಂದೇಶದ ವಿವರವನ್ನು ತಿಳಿದುಕೊಳ್ಳಲಿಕ್ಕಾಗಿ ಅರಸನು ಅಷ್ಟೊಂದು ಹಾತೊರೆಯುತ್ತಿದ್ದನು!

10. ಗೋಡೆಯ ಮೇಲಿನ ಕೈಬರಹದ ಅರ್ಥವನ್ನು ತಿಳಿಸುವ ಬಾಬೆಲಿನ ವಿದ್ವಾಂಸರ ಪ್ರಯತ್ನಗಳ ಫಲಿತಾಂಶವೇನಾಗಿತ್ತು?

10 ಬಾಬೆಲಿನ ಸಕಲ ವಿದ್ವಾಂಸರು ಈ ಔತಣಶಾಲೆಯೊಳಗೆ ತಂಡೋಪತಂಡವಾಗಿ ಬಂದರು. ಬಾಬೆಲಿನಲ್ಲಿ ವಿದ್ವಾಂಸರ ಕೊರತೆಯೇ ಇರಲಿಲ್ಲ, ಏಕೆಂದರೆ ಆ ಪಟ್ಟಣವು ಸುಳ್ಳು ಧರ್ಮದಲ್ಲಿ ಮುಳುಗಿಹೋಗಿತ್ತು ಮತ್ತು ಅಸಂಖ್ಯಾತ ದೇವಾಲಯಗಳಿಂದ ತುಂಬಿತ್ತು. ಶಕುನಗಳನ್ನು ಹಾಗೂ ಗೋಪ್ಯಲಿಪಿಯಲ್ಲಿ ಬರೆಯಲ್ಪಟ್ಟಿರುವ ರಹಸ್ಯಗಳನ್ನು ಓದುತ್ತೇವೆಂದು ಪ್ರತಿಪಾದಿಸುವ ಪುರುಷರು ಬಹಳಷ್ಟು ಸಂಖ್ಯೆಯಲ್ಲಿ ಇದ್ದರು ಎಂಬುದಂತೂ ಖಂಡಿತ. ತಮ್ಮ ಮುಂದೆ ಇರುವ ಅವಕಾಶವನ್ನು ನೋಡಿ ಈ ವಿದ್ವಾಂಸರು ರೋಮಾಂಚನಗೊಂಡಿದ್ದಿರಬೇಕು. ಪ್ರಸಿದ್ಧ ಜನರ ಮುಂದೆ ತಮ್ಮ ಕಲೆಯನ್ನು ತೋರಿಸಿ, ಅರಸನ ಅನುಗ್ರಹವನ್ನು ಪಡೆದುಕೊಂಡು, ಅತಿ ದೊಡ್ಡ ಅಧಿಕಾರ ಸ್ಥಾನಕ್ಕೆ ಏರಲು ಅವರಿಗೆ ಈಗ ಒಂದು ಅವಕಾಶ ಸಿಕ್ಕಿತ್ತು. ಆದರೆ ಅವರೆಷ್ಟು ಸೋಲನ್ನು ಅನುಭವಿಸಿದರು! “ಆ ಬರಹವನ್ನು ಓದುವದಕ್ಕೂ ಅದರ ಅರ್ಥವನ್ನು ರಾಜನಿಗೆ ತಿಳಿಸುವದಕ್ಕೂ ಅವರಲ್ಲಿ ಯಾರಿಂದಲೂ ಆಗಲಿಲ್ಲ.”d​—⁠ದಾನಿಯೇಲ 5:⁠8.

11. ಬಾಬೆಲಿನ ವಿದ್ವಾಂಸರು ಈ ಬರಹವನ್ನು ಓದಲು ಏಕೆ ಅಸಮರ್ಥರಾಗಿದ್ದಿರಬಹುದು?

11 ಬಾಬೆಲಿನ ವಿದ್ವಾಂಸರಿಗೆ ಆ ಬರಹವನ್ನು​—⁠ಅಕ್ಷರಗಳನ್ನು​—⁠ಓದಲು ಸಾಧ್ಯವಾಯಿತೋ ಇಲ್ಲವೋ ಎಂಬುದು ನಮಗೆ ಸರಿಯಾಗಿ ಗೊತ್ತಿಲ್ಲ. ಒಂದುವೇಳೆ ಅಕ್ಷರಗಳನ್ನು ಗುರುತಿಸಲು ಅಸಮರ್ಥರಾಗಿರುತ್ತಿದ್ದಲ್ಲಿಯೂ, ಯಾವುದಕ್ಕೂ ಹೇಸದ ಈ ಪುರುಷರು, ತಪ್ಪರ್ಥವನ್ನು, ಬಹುಶಃ ಅರಸನಿಗೆ ಮೋಡಿಮಾಡುವಂತಹ ಒಂದು ಅರ್ಥವನ್ನು ಸೂಚಿಸಲು ಬಹಳಷ್ಟು ಅವಕಾಶವಿತ್ತು. ಇನ್ನೊಂದು ಸಾಧ್ಯತೆ ಏನೆಂದರೆ, ಈ ಅಕ್ಷರಗಳನ್ನು ಸುಮಾರಾಗಿ ಓದಸಾಧ್ಯವಿತ್ತು. ಮತ್ತು ಅರಮಾಯ ಹಾಗೂ ಹೀಬ್ರು ಭಾಷೆಗಳನ್ನು ಸ್ವರಾಕ್ಷರಗಳಿಲ್ಲದೇ ಬರೆಯಲಾಗುತ್ತಿದುದರಿಂದ, ಪ್ರತಿಯೊಂದು ಪದಕ್ಕೆ ಬೇರೆ ಬೇರೆ ಅರ್ಥಗಳು ಇದ್ದಿರಸಾಧ್ಯವಿತ್ತು. ಹಾಗಿರುವಲ್ಲಿ, ಇಲ್ಲಿ ಯಾವ ಪದಗಳನ್ನು ಉದ್ದೇಶಿಸಲಾಗಿತ್ತೆಂಬುದನ್ನು ನಿರ್ಧರಿಸಲು ಈ ವಿದ್ವಾಂಸರು ಅಸಮರ್ಥರಾಗಿದ್ದಿರಬಹುದು ಎಂಬುದು ಸಂಭವನೀಯ. ಒಂದುವೇಳೆ ಉದ್ದೇಶಿತ ಪದವನ್ನು ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಿದ್ದರೂ, ಅವುಗಳ ಅರ್ಥವನ್ನು ಗ್ರಹಿಸಲು ಅವರು ಅಶಕ್ತರಾಗಿದ್ದಿರಬಹುದು. ಏನೇ ಆಗಲಿ, ಒಂದು ವಿಷಯವಂತೂ ಖಂಡಿತ: ವಿಷಾದಕರವಾಗಿ ಬಾಬೆಲಿನ ವಿದ್ವಾಂಸರು ಪೂರ್ತಿಯಾಗಿ ಸೋತು​ಹೋದರು!

12. ವಿದ್ವಾಂಸರ ವೈಫಲ್ಯವು ಏನನ್ನು ರುಜುಪಡಿಸಿತು?

12 ಹೀಗೆ ಆ ವಿದ್ವಾಂಸರು ಬೂಟಾಟಿಗರು, ಮತ್ತು ಪೂಜ್ಯಭಾವದಿಂದ ಪರಿಗಣಿಸಲ್ಪಡುತ್ತಿದ್ದ ಅವರ ಧಾರ್ಮಿಕ ಪುರೋಹಿತವರ್ಗವು ಮೋಸವೆಂದು ಬಯಲಾಯಿತು. ಅವರು ಎಷ್ಟು ನಿರಾಶಾಜನಕರಾಗಿದ್ದರು! ಈ ಧಾರ್ಮಿಕ ವ್ಯಕ್ತಿಗಳಲ್ಲಿ ತಾನು ಇಟ್ಟಿದ್ದಂತಹ ನಂಬಿಕೆಯು ವ್ಯರ್ಥವಾಗಿತ್ತು ಎಂಬುದು ಬೇಲ್ಶಚ್ಚರನಿಗೆ ತಿಳಿದುಬಂದಾಗ, ಅವನು ಇನ್ನೂ ಕಳವಳಗೊಂಡನು. ಅವನ ಮುಖವು ಇನ್ನೂ ಕಳೆಗುಂದಿತು, ಮತ್ತು ಅವನ ಮುಖಂಡರು ಸಹ “ಬೆಪ್ಪಾದರು.”e​—⁠ದಾನಿಯೇಲ 5:⁠9.

ಒಳನೋಟವುಳ್ಳ ವ್ಯಕ್ತಿಯನ್ನು ಆಹ್ವಾನಿಸಲಾಗುತ್ತದೆ

13. (ಎ) ದಾನಿಯೇಲನನ್ನು ಕರೆಸುವಂತೆ ರಾಣಿಯು ಏಕೆ ಸಲಹೆ ನೀಡಿದಳು? (ಬಿ) ದಾನಿಯೇಲನು ಯಾವ ರೀತಿಯ ಜೀವನ ನಡೆಸುತ್ತಿದ್ದನು?

13 ಈ ಸಂಕಟದ ಸಮಯದಲ್ಲಿ, ಸ್ವತಃ ರಾಣಿಯೇ​—⁠ಬಹುಶಃ ರಾಜಮಾತೆ​—⁠ಔತಣ​ಶಾಲೆಯನ್ನು ಪ್ರವೇಶಿಸಿದಳು. ಔತಣದ ಸಮಯದಲ್ಲಿ ನಡೆದ ಗದ್ದಲವು ಅವಳ ಕಿವಿಗೂ ಮುಟ್ಟಿತ್ತು, ಮತ್ತು ಗೋಡೆಯ ಮೇಲಿನ ಕೈಬರಹದ ಗೋಪ್ಯಲಿಪಿಯ ಅರ್ಥವನ್ನು ತಿಳಿಸಸಾಧ್ಯವಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಅವಳಿಗೆ ಗೊತ್ತಿತ್ತು. ದಶಕಗಳ ಮುಂಚೆ ಅವಳ ತಂದೆಯಾದ ನೆಬೂಕದ್ನೆಚ್ಚರನು, ದಾನಿಯೇಲನನ್ನು ತನ್ನ ಎಲ್ಲ ವಿದ್ವಾಂಸರ ಮೇಲೆ ಅಧ್ಯಕ್ಷನನ್ನಾಗಿ ನೇಮಿಸಿದ್ದನು. ಅವನು “ಪರಮಬುದ್ಧಿಯೂ ಜ್ಞಾನವೂ . . . ಜಾಣತನವೂ” ಉಳ್ಳ ವ್ಯಕ್ತಿಯಾಗಿದ್ದನು ಎಂದು ರಾಣಿಯು ಜ್ಞಾಪಿಸಿಕೊಂಡಳು. ಬೇಲ್ಶಚ್ಚರನಿಗೆ ದಾನಿಯೇಲನ ಬಗ್ಗೆ ಏನೂ ಗೊತ್ತಿಲ್ಲದಿರುವಂತೆ ಕಾಣುವುದರಿಂದ, ನೆಬೂಕದ್ನೆಚ್ಚರನ ಮರಣಾನಂತರ ಪ್ರವಾದಿಯು ಬಾಬೆಲ್‌ ಸಂಸ್ಥಾನದಲ್ಲಿನ ಉಚ್ಚ ಸ್ಥಾನವನ್ನು ಕಳೆದುಕೊಂಡಿದ್ದನು ಎಂಬುದು ಸಂಭವನೀಯ. ಆದರೆ ಪ್ರಖ್ಯಾತಿಯನ್ನು ಪಡೆಯುವುದು ದಾನಿಯೇಲನಿಗೆ ಪ್ರಾಮುಖ್ಯವಾದ ವಿಷಯವಾಗಿರಲಿಲ್ಲ. ಈ ಸಮಯದಷ್ಟಕ್ಕೆ ಅವನು ತನ್ನ 90ಗಳ ಪ್ರಾಯದಲ್ಲಿದ್ದಿರಬಹುದು, ಆದರೆ ಅವನು ಇನ್ನೂ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿದ್ದನು. ಅವನು ಬಾಬೆಲಿನಲ್ಲಿ ಸುಮಾರು ಎಂಟು ದಶಕಗಳನ್ನು ಕಳೆದಿದ್ದನಾದರೂ, ಅವನು ಇನ್ನೂ ತನ್ನ ಇಬ್ರಿಯ ಹೆಸರಿನಿಂದಲೇ ಪ್ರಸಿದ್ಧನಾಗಿದ್ದನು. ರಾಣಿಯು ಸಹ, ಒಂದು ಕಾಲದಲ್ಲಿ ಅವನಿಗೆ ಕೊಡಲ್ಪಟ್ಟಿದ್ದ ಬಾಬೆಲಿನ ಹೆಸರನ್ನು ಉಪಯೋಗಿಸದೆ, ಅವನನ್ನು ದಾನಿಯೇಲನೆಂದೇ ಸಂಬೋಧಿಸಿದಳು. ಅಷ್ಟುಮಾತ್ರವಲ್ಲ, ಅವಳು ಅರಸನನ್ನು ಪ್ರಚೋದಿಸಿದ್ದು: “ಈ ದಾನಿಯೇಲನನ್ನು ಕರೆಯಿಸಿದರೆ ಅವನು ಬರಹದ ಅರ್ಥವನ್ನು ವಿವರಿಸುವನು.”​—⁠ದಾನಿಯೇಲ 1:7; 5:​10-12.

14. ಗೋಡೆಯ ಮೇಲಿನ ಕೈಬರಹವನ್ನು ನೋಡಿದ ಬಳಿಕ ದಾನಿಯೇಲನಿಗೆ ಯಾವ ರೀತಿಯ ಉಭಯಸಂಕಟವಾಯಿತು?

14 ದಾನಿಯೇಲನನ್ನು ಕರೆಸಲಾಯಿತು ಮತ್ತು ಅವನು ಬೇಲ್ಶಚ್ಚರನ ಸನ್ನಿಧಿಗೆ ಬಂದನು. ಸ್ವಲ್ಪ ಸಮಯದ ಹಿಂದೆಯಷ್ಟೇ ಅರಸನು ಯಾರ ದೇವರನ್ನು ಅವಮಾನಿಸಿದ್ದನೋ ಆ ಯೆಹೂದ್ಯನ ಸಹಾಯವನ್ನು ಬೇಡುವುದು ಪೇಚಾಟದ ಸಂಗತಿಯಾಗಿತ್ತು. ಆದರೂ, ಬೇಲ್ಶಚ್ಚರನು ದಾನಿಯೇಲನನ್ನು ಹೊಗಳಲು ಪ್ರಯತ್ನಿಸಿದನು, ಮತ್ತು ಒಂದುವೇಳೆ ಅವನು ರಹಸ್ಯಮಯವಾಗಿದ್ದ ಪದಗಳನ್ನು ಓದಿ, ಅವುಗಳ ಅರ್ಥವನ್ನು ವಿವರಿಸಲು ಸಮರ್ಥನಾಗುವಲ್ಲಿ, ಅವನಿಗೂ ಅದೇ ಬಹುಮಾನವನ್ನು​—⁠ರಾಜ್ಯದ ಮೂರನೆಯ ಸ್ಥಾನ​—⁠ಕೊಡುವ ಪ್ರಸ್ತಾಪ ಮಾಡಿದನು. (ದಾನಿಯೇಲ 5:​13-16) ಗೋಡೆಯ ಮೇಲಿದ್ದ ಕೈ​ಬರಹವನ್ನು ದಾನಿಯೇಲನು ಕಣ್ಣೆತ್ತಿ ನೋಡಿದನು, ಮತ್ತು ಅದರ ಅರ್ಥವನ್ನು ಗ್ರಹಿಸುವಂತೆ ಪವಿತ್ರಾತ್ಮವು ಅವನನ್ನು ಶಕ್ತನನ್ನಾಗಿ ಮಾಡಿತು. ಯೆಹೋವ ದೇವರಿಂದ ಬಂದ ದುರ್ಗತಿಯ ಸಂದೇಶ ಅದಾಗಿತ್ತು! ಅಹಂಕಾರಿಯಾಗಿದ್ದ ಈ ಅರಸನಿಗೆ, ಸ್ವತಃ ಅವನ ಮುಂದೆಯೂ, ಅವನ ಪತ್ನಿಯರು ಹಾಗೂ ಮುಖಂಡರ ಮುಂದೆಯೂ ದಾನಿಯೇಲನು ನ್ಯಾಯತೀರ್ಪನ್ನು ಹೇಗೆ ಪ್ರಕಟಿಸಸಾಧ್ಯವಿತ್ತು? ದಾನಿಯೇಲನ ಉಭಯಸಂಕಟವನ್ನು ಊಹಿಸಿಕೊಳ್ಳಿರಿ! ಅರಸನ ಹೊಗಳಿಕೆಯ ಮಾತುಗಳು ಹಾಗೂ ಅವನ ಐಶ್ವರ್ಯ ಹಾಗೂ ಪ್ರಖ್ಯಾತಿಯ ವಾಗ್ದಾನದ ಪ್ರಭಾವಕ್ಕೆ ದಾನಿಯೇಲನು ಒಳಗಾದನೋ? ಪ್ರವಾದಿಯು ಯೆಹೋವನ ಪ್ರಕಟನೆಯ ತೀಕ್ಷ್ಣತೆಯನ್ನು ಕಡಿಮೆಮಾಡಿದನೊ?

15, 16. ಇತಿಹಾಸದಿಂದ ಯಾವ ಅತ್ಯಾವಶ್ಯಕ ಪಾಠವನ್ನು ಕಲಿತುಕೊಳ್ಳಲು ಬೇಲ್ಶಚ್ಚರನು ತಪ್ಪಿಹೋಗಿದ್ದನು, ಮತ್ತು ಇಂದು ತದ್ರೀತಿಯ ವೈಫಲ್ಯವು ಎಷ್ಟು ಸರ್ವಸಾಮಾನ್ಯವಾಗಿದೆ?

15 ದಾನಿಯೇಲನು ಹೀಗೆ ಹೇಳುತ್ತಾ ಧೈರ್ಯದಿಂದ ಮಾತಾಡಿದನು: “ನಿನ್ನ ದಾನಗಳು ನಿನಗೇ ಇರಲಿ, ನಿನ್ನ ಬಹುಮಾನಗಳು ಮತ್ತೊಬ್ಬನಿಗಾಗಲಿ; ಆದರೆ ನಾನು ಈ ಬರಹವನ್ನು ಓದಿ ಇದರ ಅರ್ಥವನ್ನು ರಾಜನಿಗೆ ತಿಳಿಸುವೆನು.” (ದಾನಿಯೇಲ 5:17) ತದನಂತರ, ಒಬ್ಬ ಪರಾಕ್ರಮಿ ಅರಸನಾಗಿದ್ದು, ತನಗೆ ಇಷ್ಟಬಂದವರನ್ನು ಕೊಲ್ಲಿಸಲು, ಹೊಡೆಸಲು, ಮೇಲೇರಿಸಲು, ಅಥವಾ ಅವಮಾನಗೊಳಿಸಲು ಶಕ್ತನಾಗಿದ್ದ ನೆಬೂಕದ್ನೆಚ್ಚರನ ರಾಜಮಹತ್ವವನ್ನು ದಾನಿಯೇಲನು ಒಪ್ಪಿಕೊಂಡನು. ಆದರೂ, “ಪರಾತ್ಪರ ದೇವ”ರಾದ ಯೆಹೋವನೇ ನೆಬೂಕದ್ನೆಚ್ಚರನನ್ನು ಈ ಸ್ಥಾನಕ್ಕೆ ಏರಿಸಿದ್ದನು ಎಂಬುದನ್ನು ದಾನಿಯೇಲನು ಬೇಲ್ಶಚ್ಚರನಿಗೆ ಜ್ಞಾಪಕಹುಟ್ಟಿಸಿದನು. ಆ ಪರಾಕ್ರಮಿ ಅರಸನು ಅಹಂಕಾರ ತೋರಿಸಿದಾಗ, ಅವನು ಅವಮಾನವನ್ನು ಅನುಭವಿಸುವಂತೆ ಮಾಡಿದ್ದೂ ಯೆಹೋವನೇ. ಹೌದು, “ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಮೇಲೆ ತನಗೆ ಬೇಕಾದವರನ್ನು ನೇಮಿಸುತ್ತಾನೆ” ಎಂಬ ಪಾಠವನ್ನು ನೆಬೂಕದ್ನೆಚ್ಚರನಿಗೆ ಬಲ​ವಂತವಾಗಿ ಕಲಿಸಲಾಗಿತ್ತು.​—⁠ದಾನಿಯೇಲ 5:​18-21.

16 ಬೇಲ್ಶಚ್ಚರನು “ಇದನ್ನೆಲ್ಲಾ ತಿಳಿದುಕೊಂಡಿ”ದ್ದನು. ಆದರೂ, ಅವನು ಇತಿಹಾಸದಿಂದ ಪಾಠವನ್ನು ಕಲಿಯಲು ತಪ್ಪಿಹೋಗಿದ್ದನು. ಅಷ್ಟುಮಾತ್ರವಲ್ಲ, ನೆಬೂಕದ್ನೆಚ್ಚರನು ತಪ್ಪಾದ ರೀತಿಯಲ್ಲಿ ಅಹಂಕಾರ ತೋರಿಸುವ ಮೂಲಕ ಮಾಡಿದ ಪಾಪಕ್ಕಿಂತಲೂ ಗಂಭೀರ​ವಾದ ಪಾಪವನ್ನು ಬೇಲ್ಶಚ್ಚರನು ಮಾಡಿದ್ದನು ಮತ್ತು ಬಹಿರಂಗವಾಗಿ ಯೆಹೋವನ ವಿರುದ್ಧ ದುರಹಂಕಾರದ ಕೃತ್ಯವೆಸಗಿದ್ದನು. ದಾನಿಯೇಲನು ಅರಸನ ಪಾಪವನ್ನು ಬಯಲುಪಡಿಸಿದನು. ಇದಲ್ಲದೆ, ಸುಳ್ಳು ದೇವದೇವತೆಗಳು “ಬುದ್ಧಿ ಕಣ್ಣು ಕಿವಿ ಇಲ್ಲದ”ವುಗಳಾಗಿದ್ದವು ಎಂದು ಆ ವಿಧರ್ಮಿ ಜನಸಮೂಹದ ಮುಂದೆ ಅವನು ಬೇಲ್ಶಚ್ಚರನಿಗೆ ಧೈರ್ಯದಿಂದ ಹೇಳಿದನು. ಆ ನಿಷ್ಪ್ರಯೋಜಕ ದೇವದೇವತೆಗಳಿಗೆ ತದ್ವಿರುದ್ಧವಾಗಿ, ‘ಯಾರ ಕೈಯಲ್ಲಿ ನಿನ್ನ ಪ್ರಾಣವಿದೆಯೋ’ ಆ ದೇವರು ಯೆಹೋವನೇ ಆಗಿದ್ದಾನೆ ಎಂದು ಸಹ ದೇವರ ಧೈರ್ಯಶಾಲಿ ಪ್ರವಾದಿಯು ಹೇಳಿದನು. ಇಂದು ಸಹ ಜನರು ನಿರ್ಜೀವ ವಸ್ತುಗಳಿಂದ ದೇವರುಗಳನ್ನು ಮಾಡುತ್ತಾರೆ. ಅವರು ಹಣ, ಉದ್ಯೋಗ, ಘನತೆ ಹಾಗೂ ಸುಖಭೋಗಗಳನ್ನು ಪೂಜಿಸುತ್ತಾರೆ. ಆದರೆ ಈ ವಸ್ತುಗಳಲ್ಲಿ ಯಾವುದೂ ಜೀವವನ್ನು ಕೊಡಸಾಧ್ಯವಿಲ್ಲ. ನಮ್ಮ ಅಸ್ತಿತ್ವಕ್ಕಾಗಿ, ನಮ್ಮ ಪ್ರತಿಯೊಂದು ಉಸಿರಿಗಾಗಿ ನಾವು ಯಾರ ಮೇಲೆ ಅವಲಂಬಿಸಿದ್ದೇವೋ ಆತನು ಯೆಹೋವನೇ ಆಗಿದ್ದಾನೆ. ಈ ಕಾರಣಕ್ಕಾಗಿ ನಾವು ಆತನಿಗೆ ಮಾತ್ರ ಋಣಿಗಳಾಗಿದ್ದೇವೆ.​—⁠ದಾನಿಯೇಲ 5:​22, 23; ಅ. ಕೃತ್ಯಗಳು 17:24,⁠25.

ಒಂದು ಒಗಟು ಬಿಡಿಸಲ್ಪಟ್ಟದ್ದು!

17, 18. ಗೋಡೆಯ ಮೇಲೆ ಬರೆಯಲ್ಪಟ್ಟಿದ್ದ ನಾಲ್ಕು ಪದಗಳು ಯಾವುವು, ಮತ್ತು ಅವುಗಳ ಅಕ್ಷರಾರ್ಥವೇನು?

17 ಈ ವೃದ್ಧ ಪ್ರವಾದಿಯು ಈಗ, ಬಾಬೆಲಿನ ಎಲ್ಲ ವಿದ್ವಾಂಸರಿಗೆ ಯಾವುದು ಅಸಾಧ್ಯವಾಗಿತ್ತೋ ಅದನ್ನು ಮಾಡಲು ಮುಂದುವರಿದನು. ಗೋಡೆಯ ಮೇಲೆ ಬರೆಯಲ್ಪಟ್ಟಿದ್ದ ಕೈಬರಹವನ್ನು ಓದಿ ಅದರ ಅರ್ಥವನ್ನು ಅವನು ತಿಳಿಸಿದನು. ಆ ಪದಗಳು ಹೀಗಿದ್ದವು: “ಮೆನೇ, ಮೆನೇ, ತೆಕೇಲ್‌, ಉಫರ್ಸಿನ್‌.” (ದಾನಿಯೇಲ 5:​24, 25) ಇವುಗಳ ಅರ್ಥವೇನು?

18 ಅಕ್ಷರಾರ್ಥಕವಾಗಿ, ಈ ಪದಗಳ ಅರ್ಥ “ಒಂದು ಮೈನ, ಒಂದು ಮೈನ, ಒಂದು ಷೆಕ್‌ಲ್‌, ಮತ್ತು ಅರ್ಧ ಷೆಕ್‌ಲ್‌.” ಪ್ರತಿಯೊಂದು ಪದವು ಇಳಿಕ್ರಮದಲ್ಲಿ ಪಟ್ಟಿಮಾಡಿದ್ದ, ಹಣಕಾಸಿನ ಮೊತ್ತವಾಗಿತ್ತು. ಇದು ಎಷ್ಟೊಂದು ಗೊಂದಲಮಯವಾಗಿತ್ತು! ಒಂದುವೇಳೆ ಬಾಬೆಲಿನ ವಿದ್ವಾಂಸರು ಈ ಅಕ್ಷರಗಳನ್ನು ಗುರುತಿಸಲು ಶಕ್ತರಾಗಿದ್ದರೂ, ಅವುಗಳ ಅರ್ಥವನ್ನು ತಿಳಿಸಲು ಅಸಾಧ್ಯವಾದುದರಲ್ಲಿ ಆಶ್ಚರ್ಯವೇನೂ ಇಲ್ಲ.

19. “ಮೆನೇ” ಎಂಬ ಪದದ ಅರ್ಥವೇನಾಗಿತ್ತು?

19 ದೇವರ ಪವಿತ್ರಾತ್ಮದ ಸಹಾಯದಿಂದ ದಾನಿಯೇಲನು ವಿವರಿಸಿದ್ದು: “ಇದರ ಅರ್ಥವು ಹೀಗಿದೆ​—⁠ಮೆನೇ ಅಂದರೆ ದೇವರು ನಿನ್ನ ಆಳಿಕೆಯ ಕಾಲವನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾನೆ.” (ದಾನಿಯೇಲ 5:26) ಮೊದಲನೆಯ ಪದದ ವ್ಯಂಜನಾಕ್ಷರಗಳು, ಓದುಗನು ಯಾವ ಸ್ವರಾಕ್ಷರಗಳನ್ನು ಉಪಯೋಗಿಸುತ್ತಾನೋ ಅದರ ಆಧಾರದ ಮೇಲೆ, “ಮೈನ” ಎಂಬರ್ಥವನ್ನೂ ಕೊಡುತ್ತವೆ ಹಾಗೂ “ಎಣಿಸು” ಅಥವಾ “ಲೆಕ್ಕಿಸು” ಎಂಬುದಕ್ಕಿರುವ ಅರಮಾಯ ಪದದ ಒಂದು ರೂಪವನ್ನೂ ಒದಗಿಸುತ್ತವೆ. ಯೆಹೂದ್ಯರ ದೇಶಭ್ರಷ್ಟತೆಯು ಸ್ವಲ್ಪದರಲ್ಲೇ ಕೊನೆಗೊಳ್ಳಲಿದೆ ಎಂಬುದು ದಾನಿಯೇಲನಿಗೆ ಚೆನ್ನಾಗಿ ತಿಳಿದಿತ್ತು. ಅದರ ಮುಂತಿಳಿಸಲ್ಪಟ್ಟ 70 ವರ್ಷಗಳ ಅವಧಿಯಲ್ಲಿ, ಈಗಾಗಲೇ 68 ವರ್ಷಗಳು ಕಳೆದುಹೋಗಿದ್ದವು. (ಯೆರೆಮೀಯ 29:10) ಮಹಾ ಸಮಯಪಾಲಕನಾದ ಯೆಹೋವನು, ಲೋಕ ಶಕ್ತಿಯಾಗಿದ್ದ ಬಾಬೆಲಿನ ಆಳ್ವಿಕೆಯ ದಿನಗಳನ್ನು ಲೆಕ್ಕಿಸಿದ್ದನು. ಮತ್ತು ಅಂತ್ಯವು, ಬೇಲ್ಶಚ್ಚರನ ಔತಣಕ್ಕೆ ಹಾಜರಿದ್ದ ಯಾವುದೇ ವ್ಯಕ್ತಿಯು ಯೋಚಿಸಿದ್ದ ಸಮಯಕ್ಕಿಂತಲೂ ತುಂಬ ನಿಕಟವಾಗಿತ್ತು. ವಾಸ್ತವದಲ್ಲಿ, ಬೇಲ್ಶಚ್ಚರನಿಗೆ ಮಾತ್ರವಲ್ಲ, ಅವನ ತಂದೆಯಾಗಿದ್ದ ನೆಬೊನೈಡಸನಿಗೆ ಸಹ ಕಾಲಾವಧಿಯು ಮುಗಿಯುತ್ತಾ ಬಂದಿತ್ತು. ಈ ಕಾರಣದಿಂದಲೇ, ಅಂದರೆ ಈ ಇಬ್ಬರು ಅರಸರ ಆಳ್ವಿಕೆಯ ಅಂತ್ಯವನ್ನು ಪ್ರಕಟಿಸಲಿಕ್ಕಾಗಿಯೇ, “ಮೆನೇ” ಎಂಬ ಪದವು ಎರಡು ಬಾರಿ ಬರೆಯಲ್ಪಟ್ಟಿದ್ದಿರಬಹುದು.

20. “ತೆಕೇಲ್‌” ಎಂಬ ಪದದ ವಿವರಣೆ ಏನಾಗಿತ್ತು, ಮತ್ತು ಅದು ಬೇಲ್ಶಚ್ಚರನಿಗೆ ಹೇಗೆ ಅನ್ವಯವಾಯಿತು?

20 ಇನ್ನೊಂದು ಕಡೆಯಲ್ಲಿ, ತೆಕೇಲ್‌ ಎಂಬ ಪದವು ಒಂದೇ ಒಂದು ಬಾರಿ ಬರೆಯಲ್ಪಟ್ಟಿದ್ದು, ಏಕವಚನ ರೂಪದಲ್ಲಿತ್ತು. ಮೊದಲಾಗಿ ಇದು ಬೇಲ್ಶಚ್ಚರನಿಗೆ ನಿರ್ದೇಶಿತವಾಗಿತ್ತು ಎಂಬುದನ್ನು ಸೂಚಿಸಬಹುದು. ಮತ್ತು ಇದು ಯೋಗ್ಯವಾಗಿತ್ತು, ಏಕೆಂದರೆ ಅವನು ವೈಯಕ್ತಿಕವಾಗಿ ಯೆಹೋವನಿಗೆ ಸಂಪೂರ್ಣ ಅಗೌರವವನ್ನು ತೋರಿಸಿದ್ದನು. ತೆಕೇಲ್‌ ಪದದ ಅರ್ಥವು “ಷೆಕ್‌ಲ್‌” ಎಂದಾಗಿದೆ. ಆದರೆ ವ್ಯಂಜನಾಕ್ಷರಗಳು “ತೂಗಲ್ಪಟ್ಟು” ಎಂಬ ಪದವನ್ನೂ ಅನುಮತಿಸುತ್ತವೆ. ಆದುದರಿಂದ, ದಾನಿಯೇಲನು ಬೇಲ್ಶಚ್ಚರನಿಗೆ ಹೇಳಿದ್ದು: “ತೆಕೇಲ್‌ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡು ಬಂದಿದ್ದೀ.” (ದಾನಿಯೇಲ 5:27) ಯೆಹೋವನ ದೃಷ್ಟಿಯಲ್ಲಾದರೋ, ಎಲ್ಲ ಜನಾಂಗಗಳು ತ್ರಾಸಿನ ತಟ್ಟೆಗಳ ಮೇಲಿನ ಧೂಳಿನಷ್ಟು ಅಲ್ಪವಾಗಿವೆ. (ಯೆಶಾಯ 40:15) ಜನಾಂಗ​ಗಳು ಆತನ ಉದ್ದೇಶಗಳನ್ನು ಭಂಗಗೊಳಿಸಲು ಅಸಮರ್ಥವಾಗಿವೆ. ಹೀಗಿರುವಾಗ, ಒಬ್ಬ ದುರಹಂಕಾರಿ ಅರಸನು ಆತನ ಮುಂದೆ ಎಷ್ಟು ಮಾತ್ರದವನು? ಬೇಲ್ಶಚ್ಚರನು, ವಿಶ್ವದ ಪರಮಾಧಿಕಾರಿಗಿಂತಲೂ ತನ್ನನ್ನೇ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದನು. ಈ ಮನುಷ್ಯಮಾತ್ರದವನು ಯೆಹೋವನನ್ನು ಅವಮಾನಿಸಿ, ಶುದ್ಧಾರಾಧನೆಯ ಬಗ್ಗೆ ಅಪಹಾಸ್ಯಮಾಡುವ ಧೈರ್ಯಮಾಡಿದ್ದನಾದರೂ, “ಕಡಿಮೆಯಾಗಿ ಕಂಡು”ಬಂದಿದ್ದನು. ಹೌದು, ಬೇಗನೆ ಅವನ ಮೇಲೆ ಬರಲಿಕ್ಕಿದ್ದ ನ್ಯಾಯತೀರ್ಪನ್ನು ಅನುಭವಿಸಲು ಅವನು ಅರ್ಹನಾಗಿದ್ದನು!

21. “ಉಫರ್ಸಿನ್‌” ಎಂಬ ಪದವು ಹೇಗೆ ಮೂರು ಅರ್ಥಗಳನ್ನು ಕೊಡುವ ಪದವಾಗಿತ್ತು, ಮತ್ತು ಒಂದು ಲೋಕ ಶಕ್ತಿಯೋಪಾದಿ ಬಾಬೆಲಿನ ಭವಿಷ್ಯತ್ತಿನ ಕುರಿತು ಈ ಪದವು ಏನನ್ನು ​ಸೂಚಿಸಿತು?

21 ಗೋಡೆಯ ಮೇಲಿದ್ದ ಕೊನೆಯ ಪದವು “ಉಫರ್ಸಿನ್‌” ಎಂಬುದಾಗಿತ್ತು. ದಾನಿಯೇಲನು ಅದನ್ನು “ಪೆರೇಸ್‌” ಎಂದು ಏಕವಚನದಲ್ಲಿ ಓದಿದನು, ಏಕೆಂದರೆ ಅವನು ಒಬ್ಬನೇ ಒಬ್ಬ ಅರಸನನ್ನು ಸಂಬೋಧಿಸಿ ಮಾತಾಡುತ್ತಿದ್ದಿರಬಹುದು ಮತ್ತು ಇನ್ನೊಬ್ಬ ಅರಸನು ಅಲ್ಲಿರಲಿಲ್ಲ. ಈ ಪದವು ಮೂರು ಅರ್ಥಗಳನ್ನು ಕೊಡುತ್ತಾ, ಯೆಹೋವನ ಒಗಟನ್ನು ಪರಮಾವಧಿಗೇರಿಸಿತು. “ಉಫರ್ಸಿನ್‌” ಎಂಬ ಪದದ ಅಕ್ಷರಾರ್ಥ “ಅರ್ಧ ಷೆಕ್‌ಲ್‌” ಎಂದಾಗಿದೆ. ಆದರೆ ಅದರ ಅಕ್ಷರಗಳು, “ವಿಭಾಗಗಳು” ಮತ್ತು “ಪಾರಸಿಯರು” ಎಂಬ ಇನ್ನೂ ಎರಡು ಅರ್ಥಗಳನ್ನು ಕೊಡುತ್ತವೆ. ಹೀಗೆ ದಾನಿಯೇಲನು ಮುಂತಿಳಿಸಿದ್ದು: “ಪೆರೇಸ್‌ ಅಂದರೆ ನಿನ್ನ ರಾಜ್ಯವು ಭಿನ್ನವಾಗಿ ಮೇದ್ಯರಿಗೂ ಪಾರಸಿಯರಿಗೂ ಕೊಡಲ್ಪಟ್ಟಿದೆ.”​—⁠ದಾನಿಯೇಲ 5:⁠28.

22. ಒಗಟನ್ನು ಬಿಡಿಸಿದಾಗ ಬೇಲ್ಶಚ್ಚರನು ಹೇಗೆ ಪ್ರತಿಕ್ರಿಯಿಸಿದನು, ಮತ್ತು ಅವನು ಏನನ್ನು ನಿರೀಕ್ಷಿಸಿದ್ದಿರಬಹುದು?

22 ಹೀಗೆ ಒಗಟು ಬಿಡಿಸಲ್ಪಟ್ಟಿತು. ಸ್ವಲ್ಪದರಲ್ಲೇ ಬಲಿಷ್ಠ ಬಾಬೆಲು ಮೇದ್ಯಯಪಾರಸಿಯ ಸೈನ್ಯಗಳ ವಶವಾಗಲಿಕ್ಕಿತ್ತು. ಪ್ರಕಟಿಸಲ್ಪಟ್ಟ ದಂಡನೆಯ ಸಂದೇಶದಿಂದ ಖಿನ್ನನಾಗಿದ್ದರೂ, ಬೇಲ್ಶಚ್ಚರನು ತನ್ನ ಮಾತನ್ನು ಉಳಿಸಿಕೊಂಡನು. ತನ್ನ ಸೇವಕರನ್ನು ಕರೆದು, ದಾನಿಯೇಲನಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಇವನು ರಾಜ್ಯದ ಮೂರನೆಯ ಪ್ರಭುವೆಂದು ಪ್ರಕಟಿಸಿದನು. (ದಾನಿಯೇಲ 5:29) ದಾನಿಯೇಲನು ಈ ಸನ್ಮಾನವನ್ನು ನಿರಾಕರಿಸಲಿಲ್ಲ, ಏಕೆಂದರೆ ಇದೆಲ್ಲ ಯೆಹೋವನಿಗೆ ಸಲ್ಲತಕ್ಕ ಸನ್ಮಾನವನ್ನು ಪ್ರತಿಬಿಂಬಿಸಿತು ಎಂಬುದನ್ನು ಅವನು ಗ್ರಹಿಸಿದನು. ನಿಶ್ಚಯವಾಗಿಯೂ, ಯೆಹೋವನ ಪ್ರವಾದಿಯನ್ನು ಸನ್ಮಾನಿಸುವ ಮೂಲಕ, ತನ್ನ ಮೇಲೆ ಬರಲಿರುವ ಆತನ ಖಂಡನಾತ್ಮಕವಾದ ನ್ಯಾಯತೀರ್ಪು ಕಡಿಮೆಯಾಗಬಹುದು ಎಂದು ಬೇಲ್ಶಚ್ಚರನು ನಿರೀಕ್ಷಿಸಿದ್ದಿರಬಹುದು. ಹೀಗೆ ನಿರೀಕ್ಷಿಸಿದ್ದಲ್ಲಿ, ಇದರಿಂದ ಯಾವುದೇ ಪ್ರಯೋಜನವು ಉಂಟಾಗುವಂತಿರಲಿಲ್ಲ, ಏಕೆಂದರೆ ಕಾಲವು ಮಿಂಚಿಹೋಗಿತ್ತು.

ಬಾಬೆಲಿನ ಪತನ

23. ಬೇಲ್ಶಚ್ಚರನ ಔತಣವು ಇನ್ನೂ ನಡೆಯುತ್ತಿರುವಾಗಲೇ, ಯಾವ ಪುರಾತನ ಪ್ರವಾದನೆಯು ನೆರವೇರುತ್ತಾ ಇತ್ತು?

23 ಬೇಲ್ಶಚ್ಚರನು ಹಾಗೂ ಅವನ ಆಸ್ಥಾನಿಕರು, ತಮ್ಮ ದೇವದೇವತೆಗಳ ಹೆಸರಿನಲ್ಲಿ ಕುಡಿಯುತ್ತಾ, ಯೆಹೋವನನ್ನು ಅಪಹಾಸ್ಯಮಾಡುತ್ತಾ ಇದ್ದಾಗಲೇ, ಅರಮನೆಯ ಹೊರಗಿನ ಕತ್ತಲೆಯಲ್ಲಿ ಬೇರೊಂದು ಸನ್ನಿವೇಶವು ರೂಪುಗೊಳ್ಳುತ್ತಿತ್ತು. ಸುಮಾರು ಎರಡು ಶತಮಾನಗಳಿಗೆ ಮೊದಲೇ ಯೆಶಾಯನ ಮೂಲಕವಾಗಿ ತಿಳಿಸಲ್ಪಟ್ಟಿದ್ದ ಪ್ರವಾದನೆಯು ಈಗ ನೆರವೇರಿಕೆಯನ್ನು ಪಡೆಯುತ್ತಿತ್ತು. ಬಾಬೆಲಿನ ಕುರಿತು ಯೆಹೋವನು ಹೀಗೆ ಮುಂತಿಳಿಸಿದ್ದನು: “ಅವಳಿಂದ ಉಂಟಾಗಿರುವ ನಿಮ್ಮ ನಿಟ್ಟುಸಿರನ್ನು ನಾನು ನಿಲ್ಲಿಸಿಬಿಟ್ಟಿದ್ದೇನೆ” (NW). ಹೌದು, ಆ ದುಷ್ಟ ಪಟ್ಟಣವು ದೇವರಾದುಕೊಂಡ ಜನರ ಮೇಲೆ ನಡೆಸಿರುವ ದಬ್ಬಾಳಿಕೆಯು ಇನ್ನೇನು ಕೊನೆಗೊಳ್ಳಲಿಕ್ಕಿತ್ತು. ಯಾವುದರ ಮೂಲಕ? ಅದೇ ಪ್ರವಾದನೆಯು ಹೇಳಿದ್ದು: “ಏಲಾಮೇ, ಏಳು! ಮೇದ್ಯವೇ, ಮುತ್ತು!” ಪ್ರವಾದಿಯಾದ ಯೆಶಾಯನ ಕಾಲದ ಬಳಿಕ, ಏಲಾಮ್‌ ಪರ್ಷಿಯದ ಭಾಗವಾಯಿತು. ಬೇಲ್ಶಚ್ಚರನ ಔತಣದ ಸಮಯದಷ್ಟಕ್ಕೆ, ಬಾಬೆಲಿನ ವಿರುದ್ಧವಾಗಿ ‘ಎದ್ದು . . . ಮುತ್ತಿಗೆ’ಹಾಕಲಿಕ್ಕಾಗಿ ಪಾರಸಿಯ ಹಾಗೂ ಮೇದ್ಯಯರ ಸೈನ್ಯಗಳು ಒಟ್ಟುಗೂಡಿದ್ದವು. ಈ ವಿಚಾರವು ಸಹ ಅದೇ ಪ್ರವಾದನೆಯಲ್ಲಿ ಯೆಶಾಯನ ಮೂಲಕ ಮುಂತಿಳಿಸಲ್ಪಟ್ಟಿತ್ತು.​—⁠ಯೆಶಾಯ ​21:​1, 2, 5, 6.

24. ಬಾಬೆಲಿನ ಪತನದ ಕುರಿತು ಯೆಶಾಯನ ಪ್ರವಾದನೆಯು ಯಾವ ವಿವರಗಳನ್ನು ಮುಂತಿಳಿಸಿತು?

24 ವಾಸ್ತವದಲ್ಲಿ, ಅವರ ಕದನದ ಸೇನಾವ್ಯವಸ್ಥೆಯ ವಿಷಯದಲ್ಲಿ ಕೆಲವು ಮುಖ್ಯಾಂಶ​ಗಳನ್ನು ಮುಂತಿಳಿಸಲಾಗಿದ್ದಂತೆಯೇ, ಈ ಸೈನ್ಯಗಳ ಮುಖಂಡನ ಹೆಸರು ಸಹ ಮುಂತಿಳಿಸಲ್ಪಟ್ಟಿತ್ತು. ಸುಮಾರು 200 ವರ್ಷಗಳಿಗೆ ಮುಂಚೆಯೇ, ಬಾಬೆಲಿಗೆ ವಿರುದ್ಧವಾಗಿ ಏಳುವಂತೆ ಕೋರೆಷ ಎಂಬ ಹೆಸರಿನ ಅರಸನನ್ನು ಯೆಹೋವನು ಅಭಿಷೇಕಿಸುವನು ಎಂದು ಯೆಶಾಯನು ಪ್ರವಾದಿಸಿದ್ದನು. ಅವನ ಆಕ್ರಮಣದ ಸಮಯದಲ್ಲಿ ಅಡ್ಡ​ಬರುವ ಎಲ್ಲ ವಿಘ್ನಗಳು ಮುಂಚಿತವಾಗಿಯೇ ನಿವಾರಿಸಲ್ಪಡಲಿದ್ದವು. ಬಾಬೆಲಿನ ನೀರು “ಒಣಗಿ”ಹೋಗಲಿತ್ತು, ಮತ್ತು ಅದರ ಹೆಬ್ಬಾಗಿಲುಗಳು ಮುಚ್ಚದೇ ಬಿಡಲ್ಪಟ್ಟಿರುವವು. (ಯೆಶಾಯ 44:27–45:⁠3) ಮತ್ತು ಹಾಗೆಯೇ ಆಯಿತು. ನೀರಿನ ಮಟ್ಟವನ್ನು ತಗ್ಗಿಸಿ, ನದೀತಳವನ್ನು ದಾಟಿಹೋಗಲು ಸಾಧ್ಯವಾಗುವಂತೆ, ಕೋರೆಷನ ಸೈನಿಕರು ಯೂಫ್ರೇಟೀಸ್‌ ನದಿಯನ್ನು ಬೇರೆ ಕಡೆಗೆ ತಿರುಗಿಸಿದರು. ಅಜಾಗರೂಕ ಕಾವಲುಗಾರರು ಬಾಬೆಲಿನ ಹೆಬ್ಬಾಗಿಲುಗಳನ್ನು ಮುಚ್ಚದೇ ಬಿಟ್ಟಿದ್ದರು. ಐಹಿಕ ಇತಿಹಾಸಕಾರರು ಒಪ್ಪಿಕೊಳ್ಳುವಂತೆ, ಬಾಬೆಲಿನ ನಿವಾಸಿಗಳು ಸುಖಸಂಭ್ರಮದಲ್ಲಿ ಮಗ್ನರಾಗಿದ್ದಾಗ ಆ ಪಟ್ಟಣದ ಮೇಲೆ ದಾಳಿಮಾಡಲಾಯಿತು. ಯಾವುದೇ ವಿರೋಧವಿಲ್ಲದೆ ಬಾಬೆಲು ಸುಲಭವಾಗಿ ವಶಪಡಿಸಿಕೊಳ್ಳಲ್ಪಟ್ಟಿತು. (ಯೆರೆಮೀಯ 51:30) ಆದರೂ, ಆಗ ಅಲ್ಲಿ ಕಡಿಮೆಪಕ್ಷ ಒಂದು ಗಮನಾರ್ಹ ಮರಣವು ಸಂಭವಿಸಿತು. ದಾನಿಯೇಲನು ವರದಿಸಿದ್ದು: “ಅದೇ ರಾತ್ರಿಯಲ್ಲಿ ಕಸ್ದೀಯ ರಾಜನಾದ ಬೇಲ್ಶಚ್ಚರನು ಕೊಲ್ಲಲ್ಪಟ್ಟನು. ಮೇದ್ಯಯನಾದ ದಾರ್ಯಾವೆಷನು ರಾಜ್ಯವನ್ನು ತೆಗೆದುಕೊಂಡನು. ಅವನ ವಯಸ್ಸು ಹೆಚ್ಚುಕಡಿಮೆ ಅರುವತ್ತೆರಡು.”​—⁠ದಾನಿಯೇಲ 5:​30, 31.

ಗೋಡೆಯ ಮೇಲಿನ ಕೈಬರಹದಿಂದ ಪಾಠವನ್ನು ಕಲಿತುಕೊಳ್ಳುವುದು

25. (ಎ) ಪುರಾತನ ಬಾಬೆಲು ಸುಳ್ಳು ಧರ್ಮದ ಭೌಗೋಲಿಕ ವ್ಯವಸ್ಥೆಗೆ ಯೋಗ್ಯ ಸಂಕೇತವಾಗಿದೆ ಏಕೆ? (ಬಿ) ಯಾವ ಅರ್ಥದಲ್ಲಿ ದೇವರ ಆಧುನಿಕ ದಿನದ ಸೇವಕರು ಬಾಬೆಲಿನಲ್ಲಿ ಬಂದಿವಾಸಿಗಳಾಗಿ ಇಡಲ್ಪಟ್ಟಿದ್ದರು?

25 ದಾನಿಯೇಲ ಪುಸ್ತಕದ 5ನೆಯ ಅಧ್ಯಾಯದಲ್ಲಿರುವ ಪ್ರೇರಿತ ವೃತ್ತಾಂತವು, ನಮಗೆ ತುಂಬ ಅರ್ಥಗರ್ಭಿತವಾದದ್ದಾಗಿದೆ. ಸುಳ್ಳು ಧಾರ್ಮಿಕ ಆಚರಣೆಗಳ ಒಂದು ಕೇಂದ್ರದೋಪಾದಿ, ಪುರಾತನ ಬಾಬೆಲು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯಕ್ಕೆ ಒಂದು ಯೋಗ್ಯ ಸಂಕೇತವಾಗಿದೆ. ಪ್ರಕಟನೆ ಪುಸ್ತಕದಲ್ಲಿ ಒಬ್ಬ ರಕ್ತದಾಹಿ ವೇಶ್ಯೆಯೋಪಾದಿ ಚಿತ್ರಿಸಲ್ಪಟ್ಟಿರುವ ಈ ಭೌಗೋಲಿಕ ವಂಚನೆಯ ಮಿಶ್ರಣವು, “ಮಹಾ ಬಾಬೆಲ್‌” ಎಂದು ಕರೆಯಲ್ಪಟ್ಟಿದೆ. (ಪ್ರಕಟನೆ 17:​5, NW) ದೇವರಿಗೆ ಅಗೌರವವನ್ನು ತರುವಂತಹ ಅವಳ ಸುಳ್ಳು ಸಿದ್ಧಾಂತಗಳು ಹಾಗೂ ಆಚರಣೆಗಳ ಕುರಿತು ಕೊಡಲ್ಪಟ್ಟಿರುವ ಎಲ್ಲ ಎಚ್ಚರಿಕೆಗಳನ್ನು ಅಲಕ್ಷಿಸಿ, ದೇವರ ವಾಕ್ಯದ ಕುರಿತಾದ ಸತ್ಯವನ್ನು ಸಾರುವವರನ್ನು ಅವಳು ಹಿಂಸಿಸಿದ್ದಾಳೆ. 1918ರಲ್ಲಿ ಪಾದ್ರಿಗಳಿಂದ ಪ್ರಚೋದಿತವಾದ ಹಿಂಸೆಯು ರಾಜ್ಯದ ಸಾರುವಿಕೆಯನ್ನು ಕಾರ್ಯತಃ ನಿಲ್ಲಿಸಿದಾಗ, ಪುರಾತನ ಯೆರೂಸಲೇಮ್‌ ಹಾಗೂ ಯೆಹೂದದ ನಿವಾಸಿಗಳಂತೆ, ಅಭಿಷಿಕ್ತ ಕ್ರೈಸ್ತರ ನಂಬಿಗಸ್ತ ಉಳಿಕೆಯವರು “ಮಹಾ ಬಾಬೆಲಿ”ನಲ್ಲಿ ವಾಸ್ತವದಲ್ಲಿ ದೇಶಭ್ರಷ್ಟರಾಗಿದ್ದರು.

26. (ಎ) “ಮಹಾ ಬಾಬೆಲ್‌” 1919ರಲ್ಲಿ ಹೇಗೆ ಪತನಗೊಂಡಿತು? (ಬಿ) ನಾವು ಯಾವ ಎಚ್ಚರಿಕೆಗೆ ಕಿವಿಗೊಡಬೇಕು ಹಾಗೂ ಇತರರನ್ನು ಎಚ್ಚರಿಸಬೇಕು?

26 ಆದರೂ, ಇದ್ದಕ್ಕಿದ್ದಂತೆ “ಮಹಾ ಬಾಬೆಲ್‌” ಬಿದ್ದುಹೋಯಿತು! ಅಬ್ಬಾ, ಖಂಡಿತವಾಗಿಯೂ ಅದು ನಿಶ್ಶಬ್ದವಾದ ಪತನವಾಗಿತ್ತು​—⁠ಸಾ.ಶ.ಪೂ. 539ರಲ್ಲಿ ಪುರಾತನ ಬಾಬೆಲ್‌ ಹೇಗೆ ನಿಶ್ಶಬ್ದವಾಗಿ ಬಿದ್ದುಹೋಯಿತೋ ಅದೇ ರೀತಿಯಲ್ಲಿ. ಆದರೆ ಈ ಸಾಂಕೇತಿಕ ಪತನವು ವಿನಾಶಕರವಾಗಿತ್ತು. ಸಾ.ಶ. 1919ರಲ್ಲಿ, ಯೆಹೋವನ ಜನರು ಬಾಬೆಲಿನ ಬಂದಿವಾಸದಿಂದ ಬಿಡುಗಡೆಗೊಂಡು, ದೈವಿಕ ಅಂಗೀಕಾರದಿಂದ ಆಶೀರ್ವದಿಸಲ್ಪಟ್ಟಾಗ ಇದು ಸಂಭವಿಸಿತು. ದೇವಜನರ ಮೇಲೆ “ಮಹಾ ಬಾಬೆಲಿ”ನ ಅಧಿಕಾರವನ್ನು ಇದು ಕೊನೆಗೊಳಿಸಿತು ಮತ್ತು ಅವಳನ್ನು ಒಂದು ಅವಿಶ್ವಾಸಾರ್ಹವಾದ ವಂಚನೆಯೋಪಾದಿ ಸಾರ್ವಜನಿಕವಾಗಿ ಬಯಲುಪಡಿಸುವುದರ ಆರಂಭವನ್ನು ಗುರುತಿಸಿತು. ಆ ಪತನವನ್ನು ಸರಿಪಡಿಸುವುದು ಅಸಾಧ್ಯವಾದದ್ದಾಗಿದೆ, ಮತ್ತು ಅವಳ ಅಂತಿಮ ವಿನಾಶವು ಸನ್ನಿಹಿತವಾಗಿದೆ. ಹೀಗೆ, ಯೆಹೋವನ ಸೇವಕರು ಈ ಎಚ್ಚರಿಕೆಯನ್ನು ಪ್ರತಿಧ್ವನಿಸುತ್ತಿದ್ದಾರೆ: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟುಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು.” (ಪ್ರಕಟನೆ 18:⁠4) ನೀವು ಸಹ ಈ ಎಚ್ಚರಿಕೆಗೆ ಕಿವಿಗೊಟ್ಟಿದ್ದೀರೊ? ನೀವು ಇತರರನ್ನೂ ಎಚ್ಚರಿಸುತ್ತಿದ್ದೀರೊ?f

27, 28. (ಎ) ಯಾವ ಅತ್ಯಾವಶ್ಯಕ ಸತ್ಯವನ್ನು ದಾನಿಯೇಲನು ಎಂದಿಗೂ ಮರೆಯಲಿಲ್ಲ? (ಬಿ) ಇಂದು ದುಷ್ಟ ಲೋಕದ ವಿರುದ್ಧ ಯೆಹೋವನು ಅತಿ ಬೇಗನೆ ಕಾರ್ಯವೆಸಗಲಿದ್ದಾನೆ ಎಂಬುದಕ್ಕೆ ನಮಗೆ ಯಾವ ಪುರಾವೆಯಿದೆ?

27 ಇಂದು ಕೂಡ ಕೈಬರಹವು ಗೋಡೆಯ ಮೇಲಿದೆ, ಆದರೆ ಅದು ಕೇವಲ “ಮಹಾ ಬಾಬೆಲ್‌”ಗೆ ಮಾತ್ರ ಅನ್ವಯಿಸುವುದಿಲ್ಲ. ದಾನಿಯೇಲ ಪುಸ್ತಕದ ಮುಖ್ಯ ವಿಷಯವಾಗಿರುವ ಒಂದು ಅತ್ಯಾವಶ್ಯಕ ಸತ್ಯವನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ: ಯೆಹೋವನೇ ವಿಶ್ವದ ಪರಮಾಧಿಕಾರಿಯಾಗಿದ್ದಾನೆ. ಮಾನವಕುಲದ ಮೇಲೆ ಒಬ್ಬ ಅರಸನನ್ನು ನೇಮಿಸುವ ಹಕ್ಕು ಕೇವಲ ಆತನಿಗಿದೆ. (ದಾನಿಯೇಲ 4:​17, 25; 5:21) ಯೆಹೋವನ ಉದ್ದೇಶಗಳಿಗೆ ವಿರುದ್ಧವಾಗಿರುವ ಎಲ್ಲ ವಿಷಯಗಳು ತೆಗೆದುಹಾಕಲ್ಪಡುವವು. ಯೆಹೋವನು ಕ್ರಿಯೆ​ಗೈಯಲು ಮುಂತೊಡಗುವ ಮುಂಚೆ ಸ್ವಲ್ಪ ಸಮಯ ಮಾತ್ರ ಬಾಕಿ ಇದೆ. (ಹಬಕ್ಕೂಕ 2:⁠3) ದಾನಿಯೇಲನಿಗಾದರೋ, ಅಂತಹ ಒಂದು ಸಮಯವು ಅವನ ಜೀವನದ ಹತ್ತನೆಯ ದಶಕ​ದಲ್ಲಿ ಬಂತು. ಆಗ, ದಾನಿಯೇಲನ ಬಾಲ್ಯಾವಸ್ಥೆಯಿಂದಲೂ ದೇವಜನರ ಮೇಲೆ ದಬ್ಬಾಳಿಕೆ ನಡಿಸುತ್ತಿದ್ದ ಒಂದು ಲೋಕ ಶಕ್ತಿಯನ್ನು ಯೆಹೋವನು ತೆಗೆದುಹಾಕುವುದನ್ನು ಅವನು ಕಣ್ಣಾರೆ ಕಂಡನು.

28 ಯೆಹೋವ ದೇವರು ಮಾನವಕುಲಕ್ಕೋಸ್ಕರ ಒಬ್ಬ ಅರಸನನ್ನು ಸ್ವರ್ಗೀಯ ಸಿಂಹಾಸನದ ಮೇಲೆ ಸ್ಥಾಪಿಸಿದ್ದಾನೆ ಎಂಬುದಕ್ಕೆ ಸ್ಪಷ್ಟವಾದ ರುಜುವಾತು ಇದೆ. ಲೋಕವು ಈ ಅರಸನನ್ನು ತಿರಸ್ಕರಿಸಿ, ಅವನ ಆಳ್ವಿಕೆಯನ್ನು ವಿರೋಧಿಸಿರುವುದು, ಈ ರಾಜ್ಯದ ಎಲ್ಲ ವಿರೋಧಿಗಳನ್ನು ಯೆಹೋವನು ಅತಿ ಬೇಗನೆ ಸಂಪೂರ್ಣವಾಗಿ ನಿರ್ಮೂಲಮಾಡುವನು ಎಂಬುದಕ್ಕೆ ನಿಶ್ಚಿತ ಪುರಾವೆಯಾಗಿದೆ. (ಕೀರ್ತನೆ 2:​1-11; 2 ಪೇತ್ರ 3:​3-7) ನಮ್ಮ ಸಮಯ​ಗಳ ಜರೂರಿಗನುಸಾರ ಕ್ರಿಯೆಗೈಯುತ್ತಾ, ನೀವು ದೇವರ ರಾಜ್ಯದಲ್ಲಿ ನಿಮ್ಮ ದೃಢಭರವಸೆಯನ್ನು ಇಡುತ್ತಿದ್ದೀರೊ? ಹಾಗಿರುವಲ್ಲಿ, ಗೋಡೆಯ ಮೇಲಿನ ಕೈಬರಹದಿಂದ ನೀವು ನಿಜವಾಗಿಯೂ ಪಾಠವನ್ನು ಕಲಿತಿದ್ದೀರಿ!

[ಅಧ್ಯಯನ ಪ್ರಶ್ನೆಗಳು]

a ಒಂದು ಪುರಾತನ ಶಿಲಾಶಾಸನದಲ್ಲಿ, ಅರಸನಾದ ಕೋರೆಷನು ಬೇಲ್ಶಚ್ಚರನ ಕುರಿತಾಗಿ ಹೇಳಿದ್ದು: “ಒಬ್ಬ ಬಲಹೀನನು ತನ್ನ ದೇಶದ [ಅರಸ]ನಾಗಿ ನೇಮಿಸಲ್ಪಟ್ಟಿದ್ದಾನೆ.”

b ದಾನಿಯೇಲನ ವೃತ್ತಾಂತದ ಈ ಸಂಕ್ಷಿಪ್ತ ವಿವರವು ಸಹ ನಿಷ್ಕೃಷ್ಟವೆಂದು ರುಜುವಾಗಿದೆ. ಪುರಾತನ ಬಾಬೆಲಿನ ಅರಮನೆಯ ಗೋಡೆಗಳು, ಗಾರೆ ಹಚ್ಚಲ್ಪಟ್ಟಿದ್ದ ಇಟ್ಟಿಗೆಗಳಿಂದ ಮಾಡಲ್ಪಟ್ಟಿದ್ದವು ಎಂಬುದನ್ನು ಪ್ರಾಕ್ತನಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ.

c ಬಾಬೆಲಿನ ಮೂಢನಂಬಿಕೆಗಳು, ಈ ಅದ್ಭುತವನ್ನು ಇನ್ನೂ ಹೆಚ್ಚು ಭೀತಿದಾಯಕವಾದದ್ದಾಗಿ ಮಾಡಿದ್ದಿರಬಹುದು. ಬಾಬೆಲಿನ ಜೀವನ ಹಾಗೂ ಇತಿಹಾಸ (ಇಂಗ್ಲಿಷ್‌) ಎಂಬ ಪುಸ್ತಕವು ಹೀಗೆ ಟಿಪ್ಪಣಿಮಾಡುತ್ತದೆ: “ಬಾಬೆಲಿನವರು ಅಸಂಖ್ಯಾತ ದೇವದೇವತೆಗಳನ್ನು ಆರಾಧಿಸಿದರಲ್ಲದೆ, ದುರಾತ್ಮಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಸಹ ನಂಬಿದರು. ಮತ್ತು ಇದು ಯಾವ ಮಟ್ಟವನ್ನು ತಲಪಿತ್ತೆಂದರೆ, ಬಾಬೆಲಿನವರ ಧಾರ್ಮಿಕ ಸಾಹಿತ್ಯದ ಅಧಿಕಾಂಶ ಭಾಗವು, ಆ ದುರಾತ್ಮಗಳ ವಿರುದ್ಧವಾದ ಪ್ರಾರ್ಥನೆಗಳು ಹಾಗೂ ಮಾಟಮಂತ್ರಗಳಿಂದ ತುಂಬಿತ್ತು.”

d ಬೈಬಲಿನ ಪ್ರಾಕ್ತನಶಾಸ್ತ್ರ ಪುನರ್ವಿಮರ್ಶೆ (ಇಂಗ್ಲಿಷ್‌) ಎಂಬ ಪತ್ರಿಕೆಯು ಹೀಗೆ ಟಿಪ್ಪಣಿಮಾಡುತ್ತದೆ: “ಬಾಬೆಲಿನ ಪರಿಣತರು ಶಕುನಸಂಬಂಧವಾದ ಸಾವಿರಾರು ಸಂಕೇತಗಳ ವಿಷಯಾನುಕ್ರಮವಾದ ಸೂಚಿಯನ್ನು ತಯಾರಿಸಿದರು. . . . ಗೋಡೆಯ ಮೇಲಿನ ಬರಹದ ಅರ್ಥವೇನಾಗಿತ್ತು ಎಂಬುದನ್ನು ಹೇಳಲೇಬೇಕೆಂದು ಬೇಲ್ಶಚ್ಚರನು ತಗಾದೆಮಾಡಿದಾಗ, ಬಾಬೆಲಿನ ವಿದ್ವಾಂಸರು ಶಕುನಸಂಬಂಧವಾದ ಈ ವಿಶ್ವಕೋಶಗಳನ್ನು ತೆರೆದು ನೋಡಿದರು ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಅವು ನಿಷ್ಪ್ರಯೋಜಕವಾಗಿ ಪರಿಣಮಿಸಿದವು.”

e “ಬೆಪ್ಪಾದರು” ಎಂದು ಇಲ್ಲಿ ಉಪಯೋಗಿಸಲ್ಪಟ್ಟಿರುವ ಪದವು, ಇಡೀ ಔತಣ ಸಮೂಹವೇ ಗೊಂದಲಕ್ಕೆ ಒಳಗಾಗಿತ್ತೋ ಎಂಬಂತೆ, ಒಂದು ದೊಡ್ಡ ಗಲಭೆಯನ್ನು ಸೂಚಿಸುತ್ತದೆ ಎಂದು ನಿಘಂಟುಕಾರರು ದಾಖಲಿಸುತ್ತಾರೆ.

f ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಪ್ರಕಟನೆ​—⁠ಅದರ ಮಹಾ ಪರಮಾವಧಿಯು ಹತ್ತಿರ! ಎಂಬ ಪುಸ್ತಕದ 205-71ನೆಯ ಪುಟಗಳನ್ನು ನೋಡಿರಿ.

ನೀವೇನನ್ನು ಗ್ರಹಿಸಿದಿರಿ?

• ಸಾ.ಶ.ಪೂ. 539, ಅಕ್ಟೋಬರ್‌ 5/6ರ ರಾತ್ರಿಯಂದು, ಬೇಲ್ಶಚ್ಚರನ ಔತಣವು ಹೇಗೆ ಭಂಗಗೊಳಿಸಲ್ಪಟ್ಟಿತು?

• ಗೋಡೆಯ ಮೇಲಿನ ಕೈಬರಹದ ಅರ್ಥವು ಏನಾಗಿತ್ತು?

• ಬೇಲ್ಶಚ್ಚರನ ಔತಣವು ನಡೆಯುತ್ತಿರುವಾಗ, ಬಾಬೆಲಿನ ಪತನದ ಕುರಿತಾದ ಯಾವ ಪ್ರವಾದನೆಯು ನೆರವೇರುತ್ತಲಿತ್ತು?

• ಗೋಡೆಯ ಮೇಲಿನ ಕೈಬರಹದ ವೃತ್ತಾಂತಕ್ಕೆ, ಇಂದು ನಮ್ಮ ದಿನಗಳಲ್ಲಿ ಯಾವ ಸಂಬಂಧವಿದೆ?

[ಪುಟ 09 ರಲ್ಲಿ ಇಡೀ ಪುಟದ ಚಿತ್ರ]

[ಪುಟ 214 ರಲ್ಲಿ ಇಡೀ ಪುಟದ ಚಿತ್ರ]

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ