ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bt ಅಧ್ಯಾ. 11 ಪು. 85-92
  • ‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’
  • ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ‘ಒಂದು ಕೆಲಸಕ್ಕಾಗಿ ಆರಿಸ್ಕೊಂಡವರು’ (ಅ. ಕಾ. 13:1-12)
  • ‘ಪ್ರೋತ್ಸಾಹ ಕೊಡೋ ಮಾತು ಆಡಿದ್ರು’ (ಅ. ಕಾ. 13:13-43)
  • “ನಾವು ಬೇರೆ ಜನ್ರ ಹತ್ರ ಹೋಗ್ತಾ ಇದ್ದೀವಿ” (ಅ. ಕಾ. 13:44-52)
  • ಬಾರ್ನಬ—“ಸಾಂತ್ವನದ ಪುತ್ರ”
    ಕಾವಲಿನಬುರುಜು—1998
  • ಕ್ರೈಸ್ತ ಮಿಷನೆರಿ ಕೆಲಸದ ಒಂದು ಪ್ರೇರಿತ ಮಾದರಿ
    ಕಾವಲಿನಬುರುಜು—1992
  • ಯೆಹೋವನ ಜನರು ನಂಬಿಕೆಯಲ್ಲಿ ದೃಢಗೊಳಿಸಲ್ಪಟ್ಟರು
    ಕಾವಲಿನಬುರುಜು—1991
  • ‘ಯೆಹೋವನಿಂದ ಶಕ್ತಿ ಪಡ್ಕೊಂಡು ಧೈರ್ಯವಾಗಿ ಮಾತಾಡಿದ್ರು’
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
ಇನ್ನಷ್ಟು
ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
bt ಅಧ್ಯಾ. 11 ಪು. 85-92

ಅಧ್ಯಾಯ 11

‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’

ಸಿಹಿಸುದ್ದಿ ಕೇಳದೆ ದ್ವೇಷ ತೋರಿಸಿದ ಜನ್ರ ಜೊತೆ ಪೌಲ ನಡ್ಕೊಂಡ ರೀತಿಯಿಂದ ನಮಗಿರೋ ಪಾಠ

ಆಧಾರ: ಅಪೊಸ್ತಲರ ಕಾರ್ಯ 13:1-52

1, 2. (ಎ) ಬಾರ್ನಬ ಮತ್ತು ಸೌಲ ಹೋಗಲಿದ್ದ ಸ್ಥಳಗಳ ವಿಶೇಷತೆ ಏನು? (ಬಿ) ಅವರ ಕೆಲಸದಿಂದ ಅಪೊಸ್ತಲರ ಕಾರ್ಯ 1:8ರಲ್ಲಿರೋ ಮಾತು ಹೇಗೆ ನಿಜ ಆಗಲಿತ್ತು?

ಅಂತಿಯೋಕ್ಯದ ಸಭೆಗೆ ಅದೊಂದು ವಿಶೇಷ ದಿನ ಆಗಿತ್ತು. ಆ ಸಭೆಯಲ್ಲಿ ತುಂಬಾ ಪ್ರವಾದಿಗಳು ಮತ್ತು ಬೋಧಕರಿದ್ರೂ ದೂರದ ಸ್ಥಳಗಳಿಗೆ ಸಿಹಿಸುದ್ದಿಯನ್ನ ಸಾರೋಕೆ ದೇವರು ಪವಿತ್ರಶಕ್ತಿ ಮೂಲಕ ಬಾರ್ನಬ ಮತ್ತು ಸೌಲನನ್ನ ಆರಿಸ್ಕೊಂಡನು.a (ಅ. ಕಾ. 13:1, 2) ಈ ತರ ಕಳಿಸಿದ್ದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಇದೇ ತರ ಸಹೋದರರನ್ನ ಬೇರೆ ಕಡೆ ಕಳಿಸಿದ್ರು. ಆದ್ರೆ ಆ ಮಿಷನರಿಗಳು ಕ್ರೈಸ್ತರಿದ್ದ ಜಾಗಗಳಿಗೆ ಹೋಗಿ ಸೇವೆ ಮಾಡಿದ್ರು. (ಅ. ಕಾ. 8:14; 11:22) ಆದ್ರೆ ಈ ಸಲ ಪವಿತ್ರಶಕ್ತಿ ಬಾರ್ನಬ ಮತ್ತು ಸೌಲನನ್ನ ಅಷ್ಟಾಗಿ ಸಿಹಿಸುದ್ದಿ ಸಾರದಿದ್ದ ದೇಶಗಳಿಗೆ ಹೋಗೋಕೆ ಮತ್ತು ಅವರ ಸಹಾಯಕನಾಗಿ ಯೋಹಾನ ಮಾರ್ಕ ಹೋಗೋಕೆ ಮಾರ್ಗದರ್ಶಿಸ್ತು.

2 ಸುಮಾರು 14 ವರ್ಷಗಳ ಹಿಂದೆ ಯೇಸು ತನ್ನ ಶಿಷ್ಯರಿಗೆ “ನೀವು ಯೆರೂಸಲೇಮ್‌, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ಹೇಳಿದ್ದನು. (ಅ. ಕಾ. 1:8) ಈ ಭವಿಷ್ಯವಾಣಿ ಈಗ ನಿಜ ಆಗಲಿತ್ತು. ಯಾಕಂದ್ರೆ ಬಾರ್ನಬ ಮತ್ತು ಸೌಲ ಮಿಷನರಿಗಳಾಗಿ ಕೆಲಸ ಶುರು ಮಾಡಿದ್ರು.b

‘ಒಂದು ಕೆಲಸಕ್ಕಾಗಿ ಆರಿಸ್ಕೊಂಡವರು’ (ಅ. ಕಾ. 13:1-12)

3. ಒಂದನೇ ಶತಮಾನದಲ್ಲಿ ದೂರ ಪ್ರಯಾಣ ಮಾಡೋದು ಯಾಕೆ ಕಷ್ಟ ಆಗಿತ್ತು?

3 ಇವತ್ತು ಮನುಷ್ಯ ಮಾಡಿರೋ ವಾಹನ ಮತ್ತು ವಿಮಾನಗಳಿಂದಾಗಿ ಜನ ಒಂದೆರಡು ಗಂಟೆಯಲ್ಲೇ ತುಂಬಾ ದೂರದ ಜಾಗಗಳಿಗೆ ಹೋಗಬಹುದು. ಆದ್ರೆ ಕ್ರಿ.ಶ. ಒಂದನೇ ಶತಮಾನದಲ್ಲಿ ಹೀಗಿರಲಿಲ್ಲ. ಆಗ ನಡ್ಕೊಂಡೇ ಪ್ರಯಾಣ ಮಾಡಬೇಕಾಗಿತ್ತು. ಅದ್ರಲ್ಲೂ ಆ ಪ್ರದೇಶಗಳಲ್ಲಿ ಹಳ್ಳದಿಣ್ಣೆಗಳು ಇರ್ತಿತ್ತು. ಒಂದು ಇಡೀ ದಿನ ಪ್ರಯಾಣ ಮಾಡಿದ್ರೂ ಅಬ್ಬಬ್ಬಾ ಅಂದ್ರೆ ಸುಮಾರು 30 ಕಿ.ಮೀ. ಹೋಗಬಹುದಿತ್ತು, ಆದ್ರೆ ಸಕ್ಕತ್‌ ಸುಸ್ತಾಗ್ತಿತ್ತು.c ಬಾರ್ನಬ ಮತ್ತು ಸೌಲನಿಗೆ ಈ ನೇಮಕಕ್ಕೋಸ್ಕರ ತುಂಬಾ ಶ್ರಮ ಹಾಕಬೇಕು ಮತ್ತು ಸ್ವತ್ಯಾಗ ಮಾಡಬೇಕು ಅಂತ ಗೊತ್ತಿದ್ರೂ ಅದನ್ನ ಒಪ್ಕೊಂಡ್ರು.—ಮತ್ತಾ. 16:24.

ರಸ್ತೆ ಪ್ರಯಾಣ

ಹಿಂದಿನ ಕಾಲದಲ್ಲಿ ರಸ್ತೆ ಪ್ರಯಾಣ ಹಡಗಿನ ಪ್ರಯಾಣಕ್ಕಿಂತ ತುಂಬಾ ನಿಧಾನ ಆಗಿತ್ತು. ರಸ್ತೆಯಲ್ಲಿ ಪ್ರಯಾಣ ಮಾಡಿದ್ರೆ ತುಂಬಾ ದುಡ್ಡು ಖರ್ಚಾಗ್ತಿತ್ತು, ಅಷ್ಟೇ ಅಲ್ಲ ತುಂಬಾ ಸುಸ್ತಾಗ್ತಿತ್ತು. ಆದ್ರೂ ಎಷ್ಟೋ ಸ್ಥಳಗಳಿಗೆ ನಡ್ಕೊಂಡೇ ಹೋಗಬೇಕಾಗಿತ್ತು, ಬೇರೆ ದಾರಿ ಇರಲಿಲ್ಲ.

ಅಬ್ಬಬ್ಬಾ ಅಂದ್ರೆ ಒಬ್ಬ ಪ್ರಯಾಣಿಕ ದಿನಕ್ಕೆ ಸುಮಾರು 30 ಕಿ.ಮೀ. ನಡೀಬಹುದಿತ್ತು. ಹೀಗೆ ನಡೆಯೋವಾಗ ಬಿಸಿಲು, ಮಳೆ, ಚಳಿ ಎಲ್ಲಾನೂ ಸಹಿಸ್ಕೊಬೇಕಾಗಿತ್ತು. ಅಷ್ಟೇ ಅಲ್ಲ, ಕಳ್ಳರ ಕಾಟನೂ ಇತ್ತು. ಅಪೊಸ್ತಲ ಪೌಲ ಕೂಡ ತಾನು ಮಾಡಿದ ಪ್ರಯಾಣಗಳ ಬಗ್ಗೆ ಹೇಳ್ತಾ ‘ನದಿಗಳಿಂದ, ದರೋಡೆಕೋರರಿಂದ ಅಪಾಯಗಳು ಬಂದ್ವು’ ಅಂತ ಹೇಳಿದ್ದಾನೆ.—2 ಕೊರಿಂ. 11:26.

ರೋಮ್‌ ಸಾಮ್ರಾಜ್ಯದಲ್ಲೆಲ್ಲಾ ಕಲ್ಲುಹಾಸಿನ ರಸ್ತೆಗಳಿತ್ತು. ಮುಖ್ಯ ಹೆದ್ದಾರಿಗಳ ಉದ್ದಕ್ಕೂ ಪ್ರವಾಸಿಗೃಹಗಳು ಇರ್ತಿತ್ತು. ಇವು ಒಂದು ದಿನದ ಪ್ರಯಾಣದಷ್ಟು ಅಂತರದಲ್ಲಿ ಇರ್ತಿತ್ತು. ಮಧ್ಯೆ ಮಧ್ಯೆ, ಆಹಾರ ಅಥವಾ ಬೇರೆ ಸಾಮಾನುಗಳನ್ನ ಖರೀದಿ ಮಾಡೋಕೆ ಅಂಗಡಿಗಳು ಇರ್ತಿತ್ತು. ಆ ಕಾಲದ ಬರಹಗಾರರ ಪ್ರಕಾರ ಈ ಪ್ರವಾಸಿಗೃಹಗಳು ಮತ್ತು ಅಂಗಡಿಗಳು ತುಂಬಾ ಗಲೀಜಾಗಿ ಇರ್ತಿತ್ತು, ಜನ ತುಂಬಿತುಳುಕ್ತಿದ್ರು. ಅಷ್ಟೇ ಅಲ್ಲ ಅಲ್ಲಿ ತೇವ ಇದ್ದಿದ್ರಿಂದ ರಕ್ತ ಹೀರೋ ಚಿಗಟೆಗಳು ತುಂಬಿರುತ್ತಿದ್ವು. ಈ ಸ್ಥಳಗಳಿಗೆ ಒಳ್ಳೇ ಹೆಸ್ರೂ ಇರಲಿಲ್ಲ, ಯಾಕಂದ್ರೆ ಅಲ್ಲಿಗೆ ತುಂಬ ಕೆಟ್ಟ ಜನ ಬರ್ತಿದ್ರು. ಪ್ರವಾಸಿಗೃಹಗಳ ಮಾಲಿಕರು ಪ್ರಯಾಣಿಕರನ್ನ ದೋಚುತ್ತಿದ್ರು ಮತ್ತು ವೇಶ್ಯಾವಾಟಿಕೆ ನಡೆಸ್ತಿದ್ರು.

ಕ್ರೈಸ್ತರು ಈ ಸ್ಥಳಗಳಿಂದ ಆದಷ್ಟು ದೂರ ಇರ್ತಿದ್ರು. ಆದ್ರೆ ಕುಟುಂಬದವರು ಅಥವಾ ಸ್ನೇಹಿತರು ಇಲ್ಲದೇ ಇರೋ ಜಾಗಗಳಿಗೆ ಹೋಗೋವಾಗ ಅವರು ಅಲ್ಲಿ ಉಳ್ಕೊಳ್ಳಲೇಬೇಕಿತ್ತು.

4. (ಎ) ಬಾರ್ನಬ ಮತ್ತು ಸೌಲ ಆಯ್ಕೆ ಆಗಿದ್ದು ಹೇಗೆ? (ಬಿ) ಅವ್ರಿಗೆ ನೇಮಕ ಸಿಕ್ಕಾಗ ಸಭೆಯವ್ರು ಹೇಗೆ ನಡ್ಕೊಂಡ್ರು? (ಸಿ) ಪವಿತ್ರಶಕ್ತಿಯ ಮಾರ್ಗದರ್ಶನದಿಂದ ನೇಮಕ ಪಡೆದವ್ರಿಗೆ ನಾವು ಹೇಗೆ ಬೆಂಬಲ ಕೊಡಬಹುದು?

4 ದೇವರು ಪವಿತ್ರಶಕ್ತಿ ಮೂಲಕ ‘ಈ ಕೆಲಸಕ್ಕೆ’ ಬಾರ್ನಬ ಮತ್ತು ಸೌಲನನ್ನೇ ಯಾಕೆ ‘ಆರಿಸ್ಕೊಂಡನು?’ (ಅ. ಕಾ. 13:2) ಇದಕ್ಕೆ ಕಾರಣ ಏನಂತ ಬೈಬಲಲ್ಲಿ ಹೇಳಿಲ್ಲ. ಆದ್ರೆ ಪವಿತ್ರಶಕ್ತಿನೇ ಇವ್ರನ್ನ ಆರಿಸ್ಕೊಳ್ತು ಅನ್ನೋದಂತೂ ಗ್ಯಾರೆಂಟಿ. ಇದು ನಮ್ಗೆ ಹೇಗೆ ಗೊತ್ತು? ಈ ತೀರ್ಮಾನವನ್ನ ಅಂತಿಯೋಕ್ಯದಲ್ಲಿದ್ದ ಪ್ರವಾದಿಗಳು ಮತ್ತು ಬೋಧಕರು ಯಾರೂ ಪ್ರಶ್ನೆ ಮಾಡ್ಲಿಲ್ಲ, ಬದಲಿಗೆ ಅವ್ರೆಲ್ಲರೂ ಸಂಪೂರ್ಣವಾಗಿ ಬೆಂಬಲ ಕೊಟ್ರು. ಈ ಸಹೋದರರಿಗೆ ಬಾರ್ನಬ ಮತ್ತು ಸೌಲನ ಮೇಲೆ ಒಂಚೂರು ಹೊಟ್ಟೆಕಿಚ್ಚು ಇರಲಿಲ್ಲ. ಅದಕ್ಕೆ ಅವರು, “ಉಪವಾಸ ಮಾಡಿ ಪ್ರಾರ್ಥನೆ ಮಾಡಿದ್ರು. ಆಮೇಲೆ ಬಾರ್ನಬ ಮತ್ತು ಸೌಲನ ಮೇಲೆ ಕೈಯಿಟ್ಟು ನೇಮಿಸಿ ಕಳಿಸ್ಕೊಟ್ರು.” ಇದನ್ನ ನೋಡಿದಾಗ ಅವ್ರಿಬ್ಬರಿಗೂ ಹೇಗೆ ಅನಿಸಿರಬೇಕಲ್ವಾ? (ಅ. ಕಾ. 13:3) ನಾವು ಕೂಡ ಸಭೆಯಲ್ಲಿ ಪವಿತ್ರಶಕ್ತಿಯ ಮಾರ್ಗದರ್ಶನದಿಂದ ನೇಮಕ ಸಿಕ್ಕಿದ ಎಲ್ಲರನ್ನ ಮತ್ತು ಸಭಾ ಮೇಲ್ವಿಚಾರಕರನ್ನ ಬೆಂಬಲಿಸಬೇಕು. ಅವ್ರ ಬಗ್ಗೆ ಹೊಟ್ಟೆಕಿಚ್ಚುಪಡೋ ಬದಲು “ಅವರು ಮಾಡೋ ಕೆಲಸಕ್ಕಾಗಿ ಅವ್ರಿಗೆ ಪ್ರೀತಿಯಿಂದ ವಿಶೇಷ ಗೌರವ” ಕೊಡಬೇಕು.—1 ಥೆಸ. 5:13.

5. ಸೈಪ್ರಸ್‌ ದ್ವೀಪದಲ್ಲಿ ಸಾಕ್ಷಿಕೊಡೋಕೆ ಬಾರ್ನಬ ಸೌಲ ಏನೆಲ್ಲಾ ಮಾಡಿದ್ರು ಅಂತ ವಿವರಿಸಿ.

5 ಬಾರ್ನಬ ಮತ್ತು ಸೌಲ ಅಂತಿಯೋಕ್ಯದಿಂದ ಸೆಲೂಕ್ಯಕ್ಕೆ ನಡ್ಕೊಂಡು ಹೋದ್ರು. ಯಾಕಂದ್ರೆ ಅದು ಅಲ್ಲೇ ಹತ್ರದಲ್ಲಿದ್ದ ಬಂದರು ಪಟ್ಟಣ ಆಗಿತ್ತು. ಆಮೇಲೆ ಸೆಲೂಕ್ಯದಿಂದ ಹಡಗಲ್ಲಿ ಸುಮಾರು 200 ಕಿ.ಮೀ. ದೂರದಲ್ಲಿದ್ದ ಸೈಪ್ರಸ್‌ ದ್ವೀಪಕ್ಕೆ ಪ್ರಯಾಣ ಮಾಡಿದ್ರು.d ಬಾರ್ನಬ ಸೈಪ್ರಸ್‌ನವನೇ ಆಗಿದ್ರಿಂದ ತನ್ನ ಸ್ವಂತ ಊರಿನವರಿಗೆ ಸಿಹಿಸುದ್ದಿ ಸಾರೋಕೆ ತುದಿಗಾಲಲ್ಲಿ ಇದ್ದ ಅಂತ ಅನ್ಸುತ್ತೆ. ಅದಕ್ಕೆ ಆ ದ್ವೀಪದ ಪೂರ್ವ ತೀರದಲ್ಲಿನ ಸಲಮೀಸ್‌ ಅನ್ನೋ ಪಟ್ಟಣಕ್ಕೆ ಬಂದ ತಕ್ಷಣ ಇವರು ಸಮಯ ವ್ಯರ್ಥಮಾಡದೆ “ಯೆಹೂದ್ಯರ ಸಭಾಮಂದಿರಗಳಲ್ಲಿ ದೇವ್ರ ಸಂದೇಶ ಸಾರಿದ್ರು.”e (ಅ. ಕಾ. 13:5) ಇವರು ಸೈಪ್ರಸ್‌ ದ್ವೀಪದ ಒಂದು ತುದಿಯಿಂದ ಇನ್ನೊಂದು ತುದಿ ತನಕ ಹೆಚ್ಚುಕಮ್ಮಿ 220 ಕಿ.ಮೀ. ನಡ್ಕೊಂಡು ಪ್ರಯಾಣ ಮಾಡಿದ್ರು. ಹೀಗೆ ಹೋಗೋವಾಗ ದಾರಿಯಲ್ಲಿದ್ದ ಮುಖ್ಯ ಪಟ್ಟಣದ ಜನ್ರಿಗೆ ಖಂಡಿತ ಸಿಹಿಸುದ್ದಿ ಸಾರಿರ್ತಾರೆ!

ಯೆಹೂದ್ಯರ ಸಭಾಮಂದಿರ

“ಸಭಾಮಂದಿರ” (ಸಿನಗಾಗ್‌) ಅನ್ನೋ ಪದದ ಅರ್ಥ “ಸಭೆಸೇರೋದು.” ಮೊದಲು ಇದು ಯೆಹೂದ್ಯರು ಸೇರಿಬರೋದಕ್ಕೆ ಅಥವಾ ಯೆಹೂದ್ಯರ ಸಭೆಗೆ ಸೂಚಿಸ್ತಿತ್ತು. ಆಮೇಲೆ ಆ ಪದಕ್ಕೆ ಸಭೆ ಸೇರೋ ಸ್ಥಳ ಅಥವಾ ಕಟ್ಟಡ ಅನ್ನೋ ಅರ್ಥ ಬಂತು.

ಯೆಹೂದ್ಯರು ಬಾಬೆಲಿನಲ್ಲಿ 70 ವರ್ಷ ಕೈದಿಗಳಾಗಿದ್ದಾಗ ಅಥವಾ ಆ ಸೆರೆವಾಸ ಮುಗಿದ ಮೇಲೆ ಸಭಾಮಂದಿರಗಳ ಸ್ಥಾಪನೆ ಆಯ್ತು ಅನ್ನೋ ಅಭಿಪ್ರಾಯ ಇದೆ. ಸಭಾಮಂದಿರಗಳಲ್ಲಿ ಬೋಧನೆ ಮಾಡ್ತಿದ್ರು, ಆರಾಧನೆ ಮಾಡ್ತಿದ್ರು, ನಿಯಮ ಪುಸ್ತಕನ ಓದಿ ವಿವರಿಸ್ತಿದ್ರು. ಕ್ರಿ.ಶ. ಒಂದನೇ ಶತಮಾನದಲ್ಲಿ ಪ್ಯಾಲೆಸ್ತೀನ್‌ನ ಪ್ರತಿಯೊಂದು ಪಟ್ಟಣದಲ್ಲೂ ಒಂದೊಂದು ಸಭಾಮಂದಿರ ಇತ್ತು. ದೊಡ್ಡ ದೊಡ್ಡ ನಗರಗಳಲ್ಲಿ ಒಂದಕ್ಕಿಂತ ಜಾಸ್ತಿ ಸಭಾಮಂದಿರ ಇರ್ತಿತ್ತು. ಯೆರೂಸಲೇಮಿನಲ್ಲೂ ತುಂಬ ಸಭಾಮಂದಿರಗಳಿದ್ವು.

ಆದ್ರೆ ಬಾಬೆಲಿಂದ ಎಲ್ಲ ಯೆಹೂದ್ಯರು ಪ್ಯಾಲೆಸ್ತೀನ್‌ಗೆ ವಾಪಸ್‌ ಬರಲಿಲ್ಲ. ತುಂಬಾ ಜನ ವ್ಯಾಪಾರಕ್ಕೋಸ್ಕರ ಬೇರೆ ದೇಶಗಳಿಗೆ ಹೋದ್ರು. ಹಾಗಾಗಿ ಕ್ರಿ.ಪೂ. 5ನೇ ಶತಮಾನದಲ್ಲೇ ಪರ್ಷಿಯನ್‌ ಸಾಮ್ರಾಜ್ಯದ 127 ಸಂಸ್ಥಾನಗಳಲ್ಲಿ ಯೆಹೂದ್ಯರಿದ್ರು. (ಎಸ್ತೇ. 1:1; 3:8) ಹೋಗ್ತಾ ಹೋಗ್ತಾ ಮೆಡಿಟರೇನಿಯನ್‌ ಪ್ರದೇಶದಲ್ಲಿದ್ದ ನಗರಗಳಲ್ಲೂ ಯೆಹೂದ್ಯರ ಸಮುದಾಯಗಳು ನೆಲೆಯೂರಿದ್ವು. ಹೀಗೆ ಯೆಹೂದ್ಯರು ಚೆಲ್ಲಾಪಿಲ್ಲಿ ಆದ ಕಡೆಯೆಲ್ಲಾ ಸಭಾಮಂದಿರಗಳನ್ನ ಸ್ಥಾಪಿಸಿದ್ರು.

ಸಭಾಮಂದಿರಗಳಲ್ಲಿ ಪ್ರತಿ ಸಬ್ಬತ್‌ ದಿನ ನಿಯಮ ಪುಸ್ತಕವನ್ನ ಓದಿ ವಿವರಿಸ್ತಿದ್ರು. ಸ್ವಲ್ಪ ಎತ್ತರವಾದ ವೇದಿಕೆ ಮೇಲೆ ನಿಂತು ನಿಯಮ ಪುಸ್ತಕವನ್ನ ಓದ್ತಿದ್ರು, ವೇದಿಕೆಯ ಮೂರು ಕಡೆ ಆಸನಗಳಲ್ಲಿ ಕೂತು ಜನ ಅದನ್ನ ಕೇಳ್ತಿದ್ರು. ದೇವರ ಮೇಲೆ ಭಕ್ತಿಯಿರೋ ಯಾವ ಯೆಹೂದ್ಯ ಪುರುಷ ಬೇಕಾದ್ರೂ ನಿಯಮ ಪುಸ್ತಕವನ್ನ ಓದಬಹುದಿತ್ತು, ಅದನ್ನ ವಿವರಿಸಿ, ಬೇರೆವ್ರನ್ನ ಪ್ರೋತ್ಸಾಹಿಸಬಹುದಿತ್ತು.

6, 7. (ಎ) ಸೆರ್ಗ್ಯ ಪೌಲ ಯಾರು? (ಬಿ) ಅವನು ಸಿಹಿಸುದ್ದಿಯನ್ನ ನಂಬದ ಹಾಗೆ ತಡೆಯೋಕೆ ಬಾರ್‌ಯೇಸು ಯಾಕೆ ಪ್ರಯತ್ನ ಮಾಡಿದ? (ಸಿ) ಆಗ ಸೌಲ ಏನು ಮಾಡಿದ?

6 ಈ ಸೈಪ್ರಸ್‌ ದ್ವೀಪದಲ್ಲಿ ಸುಳ್ಳಾರಾಧನೆ ತುಂಬಿತುಳುಕ್ತಿತ್ತು. ಇದು ಬಾರ್ನಬ ಮತ್ತು ಸೌಲ ಆ ದ್ವೀಪದ ಪಶ್ಚಿಮ ಕರಾವಳಿಯಲ್ಲಿದ್ದ ಪಾಫೋಸ್‌ ಅನ್ನೋ ಜಾಗಕ್ಕೆ ತಲಪಿದಾಗ ಸ್ಪಷ್ಟವಾಗಿ ಗೊತ್ತಾಯ್ತು. ಅಲ್ಲಿ “ಬಾರ್‌ಯೇಸು ಅನ್ನೋ ಒಬ್ಬ ಯೆಹೂದಿ ಅವ್ರನ್ನ ಭೇಟಿ ಮಾಡಿದ. ಅವನೊಬ್ಬ ಮಂತ್ರವಾದಿ, ಸುಳ್ಳು ಪ್ರವಾದಿ ಆಗಿದ್ದ. ಅವನು ಸೆರ್ಗ್ಯ ಪೌಲ ಅನ್ನೋ ಪ್ರಾಂತ್ಯದ ರಾಜ್ಯಪಾಲನ ಹತ್ರ ಕೆಲಸ ಮಾಡ್ತಿದ್ದ. ಈ ರಾಜ್ಯಪಾಲ ಬುದ್ಧಿವಂತನಾಗಿದ್ದ.”f ಒಂದನೇ ಶತಮಾನದಲ್ಲಿ ಚೆನ್ನಾಗಿ ಓದ್ಕೊಂಡಿದ್ದ ರೋಮನ್ನರು ಕೂಡ, ಸೆರ್ಗ್ಯ ಪೌಲನ ತರ ಇರೋ “ಬುದ್ಧಿವಂತ” ವ್ಯಕ್ತಿಗಳು ಕೂಡ ಮುಖ್ಯವಾದ ತೀರ್ಮಾನಗಳನ್ನ ತಗೊಳ್ಳೋಕೆ ಮಂತ್ರವಾದಿ ಅಥವಾ ಜ್ಯೋತಿಷಿಗಳ ಸಹಾಯ ತಗೊಳ್ತಿದ್ರು. ಹಾಗಿದ್ರೂ ಸೆರ್ಗ್ಯ ಪೌಲನಿಗೆ ಸಿಹಿಸುದ್ದಿ ಕೇಳೋ ಕುತೂಹಲ ಇತ್ತು ಮತ್ತು “ದೇವ್ರ ಸಂದೇಶ ಕೇಳೋಕೆ ತುಂಬ ಆಸೆ ಇತ್ತು.” ಎಲುಮ (ಅಂದ್ರೆ “ಮಂತ್ರವಾದಿ”) ಅನ್ನೋ ಬಿರುದಿನಿಂದ ಪ್ರಸಿದ್ಧನಾಗಿದ್ದ ಬಾರ್‌ಯೇಸುಗೆ ಇದು ಹಿಡಿಸಲಿಲ್ಲ.—ಅ. ಕಾ. 13:6-8.

7 ಸೆರ್ಗ್ಯ ಪೌಲ ಸಿಹಿಸುದ್ದಿನ ಕೇಳಿದ್ರೆ ತನ್ನ ಸಲಹೆನ ಅವನು ಕೇಳಲ್ಲ ಅಂತ ಬಾರ್‌ಯೇಸುಗೆ ಒಳಗೊಳಗೆ ಭಯ ಶುರುವಾಯ್ತು. ಅದಕ್ಕೆ ತನ್ನ ಕೆಲ್ಸ ಉಳಿಸ್ಕೊಳ್ಳೋಕೆ ‘ಸೌಲನ ಮಾತನ್ನ ರಾಜ್ಯಪಾಲ ನಂಬದ ಹಾಗೆ ಮಾಡೋಕೆ ಪ್ರಯತ್ನಿಸಿದ.’ ಇದನ್ನ ಬಿಟ್ರೆ ಅವನಿಗೆ ಬೇರೆ ದಾರಿ ಇರಲಿಲ್ಲ. (ಅ. ಕಾ. 13:8) ಹಾಗಂತ ಸೌಲ ಕೈಕಟ್ಟಿ ಕೂರಲಿಲ್ಲ. ಅವನೇನು ಮಾಡಿದ? ಇದ್ರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ: “ಆಗ ಪೌಲ ಅನ್ನೋ ಇನ್ನೊಂದು ಹೆಸ್ರಿದ್ದ ಸೌಲನಿಗೆ ಪವಿತ್ರಶಕ್ತಿ ಸಿಕ್ತು. ಅವನು ಎಲುಮನನ್ನೇ ನೋಡ್ತಾ ‘ನಿನ್ನ ಮನಸ್ಸಲ್ಲಿ ಬರೀ ಮೋಸ, ಕೆಟ್ಟದ್ದೇ ತುಂಬ್ಕೊಂಡಿದೆ. ನೀನು ಸೈತಾನನ ಮಗ. ಒಳ್ಳೇದನ್ನ ದ್ವೇಷಿಸ್ತೀಯ. ಯೆಹೋವನ ಸರಿಯಾದ ದಾರಿಗಳನ್ನ ಹಾಳುಮಾಡೋದು ನೀನು ನಿಲ್ಲಿಸಲ್ವಾ? ನೋಡು! ಯೆಹೋವ ನಿನಗೆ ಶಿಕ್ಷೆ ಕೊಡ್ತಾನೆ. ನೀನು ಕುರುಡನಾಗಿ ಸ್ವಲ್ಪ ಸಮಯದ ತನಕ ಬೆಳಕನ್ನ ನೋಡೋಕಾಗಲ್ಲ’ ಅಂದ. ತಕ್ಷಣ ಅವನ ಕಣ್ಣು ಮಂಜಾಗಿ ಕತ್ತಲಾಯ್ತು. ಯಾರಾದ್ರೂ ನನ್ನ ಕೈಹಿಡಿದು ನಡಿಸ್ತಾರಾ ಅಂತ ಆಕಡೆ ಈಕಡೆ ಹುಡುಕೋಕೆ ಶುರುಮಾಡಿದ.”g ಇದ್ರಿಂದ ಏನಾಯ್ತು? “ಆಗಿದ್ದನ್ನ ನೋಡಿ ಆ ರಾಜ್ಯಪಾಲ ಯೇಸು ಪ್ರಭು ಮೇಲೆ ನಂಬಿಕೆ ಇಟ್ಟ. ಯಾಕಂದ್ರೆ ಯೆಹೋವ ಕಲಿಸಿದ ರೀತಿ ನೋಡಿ ಅವನಿಗೆ ತುಂಬ ಆಶ್ಚರ್ಯ ಆಗಿತ್ತು.”—ಅ. ಕಾ. 13:9-12.

ಒಬ್ಬ ಸಹೋದರ ಕೋರ್ಟಲ್ಲಿ ನ್ಯಾಯಾಧೀಶನ ಮುಂದೆ ಬೈಬಲ್‌ ತೆರೆದು ತಾನು ನಂಬೋ ವಿಷ್ಯಗಳ ಬಗ್ಗೆ ಮಾತಾಡ್ತಿದ್ದಾರೆ.

ವಿರೋಧ ಇದ್ರೂ ನಾವು ಪೌಲನ ತರ ಧೈರ್ಯದಿಂದ ಸತ್ಯನ ಸಮರ್ಥಿಸಬೇಕು

8. ನಾವು ಪೌಲನ ತರ ಹೇಗೆ ಧೈರ್ಯ ತೋರಿಸಬಹುದು?

8 ಪೌಲ ಬಾರ್‌ಯೇಸುಗೆ ಹೆದರಲಿಲ್ಲ. ಅದೇ ತರ ನಾವು ವಿರೋಧಿಗಳಿಗೆ ಹೆದರಿಕೊಳ್ಳಬಾರದು. ಜನ ಸಿಹಿಸುದ್ದಿ ಕೇಳಿಸ್ಕೊಳ್ಳೋದನ್ನ ಅವರು ತಡೆದಾಗ ಅವ್ರ ಮುಂದೆ ನಾವು ಭಯದಿಂದ ಮುದುರಿಕೊಳ್ಳಬಾರದು, ಅವರ ಹತ್ರ ಧೈರ್ಯವಾಗಿ ಮಾತಾಡಬೇಕು. ಆ ತರ ಮಾತಾಡೋವಾಗ ನಮ್ಮ ಮಾತುಗಳು ‘ಯಾವಾಗ್ಲೂ ಮೃದುವಾಗಿ, ಮಧುರವಾಗಿ’ ಇರಬೇಕು ಅನ್ನೋದನ್ನ ಮನಸ್ಸಲ್ಲಿಡಬೇಕು. (ಕೊಲೊ. 4:6) ಆದ್ರೆ, ವಿರೋಧಿಗಳಿಗೆ ಹೆದರಿ ನಾವು ಆಸಕ್ತರಿಗೆ ಸಿಹಿಸುದ್ದಿ ಸಾರೋಕೆ ಹಿಂದೇಟು ಹಾಕಬಾರದು, ಸುಳ್ಳು ಧರ್ಮದ ಬಣ್ಣ ಬಯಲು ಮಾಡದೇನೂ ಇರಬಾರದು. ಯಾಕಂದ್ರೆ ಸುಳ್ಳು ಧರ್ಮ ಬಾರ್‌ಯೇಸು ತರ ‘ಯೆಹೋವನ ಸರಿಯಾದ ದಾರಿಗಳನ್ನ ಹಾಳುಮಾಡ್ತಿದೆ.’ (ಅ. ಕಾ. 13:10) ಪೌಲನ ತರ ನಾವು ಧೈರ್ಯದಿಂದ ಸತ್ಯವನ್ನ ಹೇಳ್ತಾ, ಒಳ್ಳೇ ಮನಸ್ಸಿನವರನ್ನ ಸತ್ಯದ ಕಡೆಗೆ ಸೆಳೆಯೋಣ. ಪೌಲ ಎದುರಿಸಿದ ಸನ್ನಿವೇಶದಲ್ಲಿ ದೇವರ ಬೆಂಬಲ ಅವನಿಗೆ ಸ್ಪಷ್ಟವಾಗಿ ಗೊತ್ತಾಯ್ತು. ಆದ್ರೆ ನಮ್ಮ ವಿಷ್ಯದಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗಿಲ್ಲ ಅಂದ್ರೂ ಯೆಹೋವ ಯೋಗ್ಯ ಜನ್ರನ್ನ ಸತ್ಯದ ಕಡೆ ಸೆಳೆಯೋಕೆ ತನ್ನ ಪವಿತ್ರಶಕ್ತಿಯನ್ನ ಬಳಸ್ತಾನೆ ಅನ್ನೋ ಭರವಸೆ ನಮಗಿದೆ.—ಯೋಹಾ. 6:44.

‘ಪ್ರೋತ್ಸಾಹ ಕೊಡೋ ಮಾತು ಆಡಿದ್ರು’ (ಅ. ಕಾ. 13:13-43)

9. ಇವತ್ತು ಸಭೆಯಲ್ಲಿ ಮೇಲ್ವಿಚಾರಣೆ ಮಾಡೋರಿಗೆ ಪೌಲ ಮತ್ತು ಬಾರ್ನಬ ಹೇಗೆ ಒಳ್ಳೇ ಮಾದರಿ ಆಗಿದ್ದಾರೆ?

9 ಈ ಸಹೋದರರು ಪಾಫೋಸ್‌ನಿಂದ ಪೆರ್ಗಕ್ಕೆ ಹೊರಟ್ರು. ಇದು ಏಷ್ಯಾ ಮೈನರ್‌ನ ಕರಾವಳಿಯಲ್ಲಿತ್ತು. ಅಲ್ಲಿಗೆ ಹೋಗೋಕೆ ಸಮುದ್ರಮಾರ್ಗವಾಗಿ 250 ಕಿ.ಮೀ. ಪ್ರಯಾಣ ಮಾಡಿದ್ರು. ಇಲ್ಲಿಂದ ಒಂದು ಬದಲಾವಣೆ ಆಯ್ತು. ಇಲ್ಲಿ ತನಕ ಈ ಮೂವರು ಸಹೋದರರ ಬಗ್ಗೆ ಹೇಳೋವಾಗೆಲ್ಲಾ ಬಾರ್ನಬನ ಹೆಸ್ರು ಮೊದಲು ಬರ್ತಿತ್ತು. ಆದ್ರೆ ಅಪೊಸ್ತಲರ ಕಾರ್ಯ 13:13ರಲ್ಲಿ “ಪೌಲ ಮತ್ತು ಅವನ ಜೊತೆಯಲ್ಲಿ ಇದ್ದವರು” ಅಂತ ಹೇಳಿದೆ. ಇದ್ರಿಂದ ಏನು ಗೊತ್ತಾಗುತ್ತೆ? ಅವತ್ತಿಂದ ಪೌಲ ಆ ಗುಂಪಿನ ಉಸ್ತುವಾರಿ ವಹಿಸಿದ ಅಂತ ಗೊತ್ತಾಗುತ್ತೆ. ಈ ಬದಲಾವಣೆ ಆಗಿದ್ರಿಂದ ಬಾರ್ನಬನಿಗೆ ಪೌಲನ ಮೇಲೆ ಹೊಟ್ಟೆಕಿಚ್ಚು ಆಯ್ತಾ? ಈ ತರ ಆಯ್ತು ಅಂತ ಬೈಬಲಲ್ಲಿ ಎಲ್ಲೂ ಹೇಳಿಲ್ಲ. ಬದಲಿಗೆ ಈ ಸಹೋದರರು ದೇವರ ಇಷ್ಟದ ಪ್ರಕಾರ ಕೆಲಸ ಮಾಡ್ತಾ ಮುಂದುವರಿದ್ರು. ಇವತ್ತು ಸಭೆಯಲ್ಲಿ ಮೇಲ್ವಿಚಾರಣೆ ಮಾಡುವವರಿಗೆ ಪೌಲ ಮತ್ತು ಬಾರ್ನಬ ಒಂದು ಒಳ್ಳೇ ಮಾದರಿ ಆಗಿದ್ದಾರೆ. ಅವರು ‘ನಾನು ಮುಂದಿರಬೇಕು’ ಅಂತ ಪೈಪೋಟಿ ಮಾಡೋ ಬದಲು ಯಾವಾಗ್ಲೂ “ನೀವೆಲ್ಲ ಸಹೋದರರು” ಅನ್ನೋ ಯೇಸು ಮಾತನ್ನ ಮನಸ್ಸಲ್ಲಿ ಇಡ್ತಾರೆ. ಆತನು ಮುಂದೆ ಹೇಳಿದ್ದು: “ತನ್ನನ್ನೇ ಹೆಚ್ಚಿಸ್ಕೊಂಡ್ರೆ ದೇವರು ಅವನನ್ನ ತಗ್ಗಿಸ್ತಾನೆ. ತನ್ನನ್ನೇ ತಗ್ಗಿಸ್ಕೊಂಡ್ರೆ ದೇವರು ಅವನನ್ನ ಮೇಲೆ ಎತ್ತುತ್ತಾನೆ.”—ಮತ್ತಾ. 23:8, 12.

10. ಪೆರ್ಗದಿಂದ ಪಿಸಿದ್ಯದ ಅಂತಿಯೋಕ್ಯಕ್ಕೆ ಮಾಡಿದ ಪ್ರಯಾಣ ಹೇಗಿತ್ತು?

10 ಪೆರ್ಗಕ್ಕೆ ಬಂದಾಗ ಯೋಹಾನ ಮಾರ್ಕ ಇದ್ದಕ್ಕಿದ್ದ ಹಾಗೆ ಪೌಲ ಮತ್ತು ಬಾರ್ನಬರನ್ನ ಬಿಟ್ಟು ಯೆರೂಸಲೇಮಿಗೆ ವಾಪಸ್‌ ಹೋಗ್ತಾನೆ. ಅವನು ಯಾಕೆ ಹೀಗೆ ಮಾಡಿದ ಅನ್ನೋದಕ್ಕೆ ಕಾರಣ ಕೊಟ್ಟಿಲ್ಲ. ಆದ್ರೆ ಪೌಲ ಮತ್ತು ಬಾರ್ನಬ ಪ್ರಯಾಣ ಮುಂದುವರಿಸಿ ಪೆರ್ಗದಿಂದ ಪಿಸಿದ್ಯದ ಅಂತಿಯೋಕ್ಯಕ್ಕೆ ಪ್ರಯಾಣ ಮಾಡಿದ್ರು. ಈ ಪಟ್ಟಣ ಗಲಾತ್ಯ ಪ್ರಾಂತದಲ್ಲಿ ಇದ್ದಿದ್ರಿಂದ ಪ್ರಯಾಣ ಸುಲಭ ಆಗಿರಲಿಲ್ಲ. ಯಾಕಂದ್ರೆ ಪಿಸಿದ್ಯದ ಅಂತಿಯೋಕ್ಯ ಸಮುದ್ರಮಟ್ಟಕ್ಕಿಂತ 3,600 ಅಡಿ ಎತ್ತರದಲ್ಲಿತ್ತು. ಅಷ್ಟೇ ಅಲ್ಲ, ಪರ್ವತಗಳ ಮಧ್ಯೆ ಇದ್ದ ಅಪಾಯಕಾರಿ ದಾರಿಗಳಲ್ಲಿ ಕಳ್ಳರ ಕಾಟನೂ ಇರ್ತಿತ್ತು. ಈ ತೊಂದರೆಗಳ ಮಧ್ಯೆ, ಪೌಲನಿಗೆ ಇದೇ ಸಮಯದಲ್ಲಿ ಆರೋಗ್ಯದ ಸಮಸ್ಯೆಗಳೂ ಶುರು ಆಗಿರಬೇಕು.h

11, 12. ಪಿಸಿದ್ಯದ ಅಂತಿಯೋಕ್ಯದಲ್ಲಿ ಪೌಲ ಜನ್ರಲ್ಲಿ ಆಸಕ್ತಿಯನ್ನ ಹುಟ್ಟಿಸೋಕೆ ಏನು ಮಾತಾಡಿದ?

11 ಪಿಸಿದ್ಯದ ಅಂತಿಯೋಕ್ಯದಲ್ಲಿದ್ದಾಗ ಪೌಲ ಮತ್ತು ಬಾರ್ನಬ ಸಬ್ಬತ್‌ ದಿನ ಸಭಾಮಂದಿರಕ್ಕೆ ಹೋದ್ರು. ಅದ್ರ ಬಗ್ಗೆ ವಚನ ಹೀಗೆ ಹೇಳುತ್ತೆ: “ನಿಯಮ ಪುಸ್ತಕ ಮತ್ತು ಪ್ರವಾದಿಗಳ ಪುಸ್ತಕಗಳನ್ನ ಓದಿದ ಮೇಲೆ ಸಭಾಮಂದಿರದ ಅಧಿಕಾರಿಗಳು ಅವ್ರಿಗೆ ‘ಸಹೋದರರೇ’ ಜನ್ರಿಗೆ ಪ್ರೋತ್ಸಾಹಿಸಲು ನೀವು ಮಾತಾಡೋಕೆ ಇಷ್ಟಪಡ್ತೀರಾ?” ಅಂತ ಕೇಳಿದ್ರು.” (ಅ. ಕಾ. 13:15) ಆಗ ಪೌಲ ಮಾತಾಡೋಕೆ ಎದ್ದುನಿಂತ.

12 ಅವನು ಅಲ್ಲಿದ್ದವರಿಗೆ “ಇಸ್ರಾಯೇಲ್ಯರೇ, ದೇವ್ರ ಮೇಲೆ ಭಯಭಕ್ತಿ ಇರೋ ಬೇರೆ ಜನ್ರೇ” ಅಂತ ಹೇಳಿದ. (ಅ. ಕಾ. 13:16) ಅಲ್ಲಿ ಯೆಹೂದ್ಯರೂ ಇದ್ರು, ಯೆಹೂದ್ಯರಾಗಿ ಮತಾಂತರ ಆದವರೂ ಇದ್ರು. ಇವರು ದೇವರ ಉದ್ದೇಶದಲ್ಲಿ ಯೇಸುಗಿರೋ ಪಾತ್ರವನ್ನ ಒಪ್ಕೊಳ್ತಾ ಇರಲಿಲ್ಲ. ಈ ಜನ್ರಲ್ಲಿ ಆಸಕ್ತಿಯನ್ನ ಪೌಲ ಹೇಗೆ ಹುಟ್ಟಿಸಿದ? ಮೊದಲು ಅವನು ಯೆಹೂದಿ ಜನಾಂಗದ ಇತಿಹಾಸದ ಸಾರಾಂಶ ಕೊಟ್ಟ. ಇಸ್ರಾಯೇಲ್ಯರು “ಈಜಿಪ್ಟಲ್ಲಿ ವಿದೇಶಿಯರಾಗಿ ಇದ್ದಾಗ ದೇವರು ಅವ್ರಿಗೆ ಸಹಾಯ” ಮಾಡಿದ್ದರ ಬಗ್ಗೆ ಮತ್ತು ಅಲ್ಲಿಂದ ಅವ್ರನ್ನ ಬಿಡುಗಡೆಮಾಡಿದ ಮೇಲೆ 40 ವರ್ಷಗಳ ತನಕ ‘ಕಾಡಲ್ಲಿ ದೇವರು ಅವ್ರನ್ನ ಸಹಿಸಿಕೊಂಡಿದ್ದರ’ ಬಗ್ಗೆ ವಿವರಿಸಿದ. ಇಸ್ರಾಯೇಲ್ಯರು ಮಾತು ಕೊಟ್ಟಿದ್ದ ದೇಶವನ್ನ ಸ್ವಾಧೀನ ಮಾಡ್ಕೊಂಡಿದ್ದರ ಬಗ್ಗೆ ಮತ್ತು ಯೆಹೋವ ದೇವರು ‘ದೇಶವನ್ನ ಆಸ್ತಿಯಾಗಿ ಕೊಟ್ಟಿದ್ದರ’ ಬಗ್ಗೆನೂ ಪೌಲ ಹೇಳಿದ. (ಅ. ಕಾ. 13:17-19) ಸಬ್ಬತ್‌ ದಿನದ ಆಚರಣೆಯ ಭಾಗವಾಗಿ ಕೆಲವೇ ಕ್ಷಣಗಳ ಹಿಂದೆ ಓದಲಾಗಿದ್ದ ಪವಿತ್ರಗ್ರಂಥದ ಭಾಗಗಳಿಗೆ ಸೂಚಿಸಿ ಪೌಲ ಮಾತಾಡಿರಬಹುದು ಅಂತ ಅನ್ಸುತ್ತೆ. ಇದು ಪೌಲನಿಗೆ ‘ಎಲ್ಲ ತರದ ಜನ್ರಿಗೆ ಎಲ್ಲ ಆಗೋದು’ ಹೇಗೆ ಅಂತ ಚೆನ್ನಾಗಿ ಗೊತ್ತಿತ್ತು ಅಂತ ತೋರಿಸುತ್ತೆ.—1 ಕೊರಿಂ. 9:22.

13. ಜನರ ಮನಮುಟ್ಟೋಕೆ ನಾವು ಏನು ಮಾಡಬೇಕು?

13 ನಾವು ಕೂಡ ಸಾರುವಾಗ ಜನ್ರಿಗೆ ಆಸಕ್ತಿ ಹುಟ್ಟೋ ಹಾಗೆ ಮಾತಾಡಬೇಕು. ಉದಾಹರಣೆಗೆ ಅವರು ಯಾವ ಧರ್ಮದವರು ಅಂತ ನಮಗೆ ಗೊತ್ತಾದ್ರೆ ಅವ್ರಿಗೆ ಆಸಕ್ತಿ ಹುಟ್ಟಿಸೋ ವಿಷ್ಯಗಳನ್ನ ಹೇಳಬಹುದು. ಅವ್ರಿಗೆ ಬೈಬಲಿನ ಪರಿಚಯ ಇದ್ರೆ ವಚನಗಳನ್ನ ಉಲ್ಲೇಖಿಸಿ ಮಾತಾಡಬಹುದು ಅಥವಾ ಅವ್ರ ಹತ್ರ ಬೈಬಲ್‌ ಇದ್ರೆ ಅವ್ರಿಂದನೇ ಆ ವಚನಗಳನ್ನ ಓದಿಸಬಹುದು. ಹೀಗೆ ಜನರ ಮನಮುಟ್ಟೋ ತರ ಮಾತಾಡೋಕೆ ನಾವು ಬೇರೆಬೇರೆ ವಿಧಾನಗಳನ್ನ ಹುಡುಕಬೇಕು.

14. (ಎ) ಯೇಸು ಬಗ್ಗೆ ಸಿಹಿಸುದ್ದಿಯನ್ನ ಪೌಲ ಹೇಗೆ ಪರಿಚಯಿಸಿದ? (ಬಿ) ಅವನು ಯಾವ ಎಚ್ಚರಿಕೆ ಕೊಟ್ಟ? (ಸಿ) ಜನರು ಪೌಲನ ಭಾಷಣಕ್ಕೆ ಹೇಗೆ ಪ್ರತಿಕ್ರಿಯಿಸಿದ್ರು?

14 ಆಮೇಲೆ ಪೌಲ, ಇಸ್ರಾಯೇಲ್‌ ರಾಜರ ವಂಶದಲ್ಲಿ ‘ರಕ್ಷಕನಾದ ಯೇಸು’ ಹುಟ್ಟಿದ್ದರ ಬಗ್ಗೆ ಮಾತಾಡಿದ. ಯೇಸು ಬರ್ತಾನೆ ಅಂತ ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಭವಿಷ್ಯವಾಣಿ ಹೇಳಿದ್ದರ ಬಗ್ಗೆ ತಿಳಿಸಿದ. ಆಮೇಲೆ, ಯೇಸುನ ಹೇಗೆ ಕೊಂದ್ರು ಮತ್ತು ಹೇಗೆ ಆತನು ಮತ್ತೆ ಜೀವಂತವಾಗಿ ಎದ್ದು ಬಂದನು ಅಂತ ಪೌಲ ವಿವರಿಸಿದ. (ಅ. ಕಾ. 13:20-37) “ಯೇಸುವಿನ ಮೂಲಕ ಮಾತ್ರ ಪಾಪಗಳಿಗೆ ಕ್ಷಮೆ ಸಿಗುತ್ತೆ. ಅದನ್ನೇ ನಾನೀಗ ಹೇಳ್ತಾ ಇದ್ದೀನಿ . . . ಆದ್ರೆ ಈ ಮನುಷ್ಯ ಜೀವ ಕೊಟ್ಟಿದ್ರಿಂದ, ನಂಬುವವ್ರನ್ನೆಲ್ಲ ದೇವರು ನೀತಿವಂತ್ರು ಅಂತಾನೆ” ಅಂತ ಪೌಲ ಹೇಳಿದ. ಆಮೇಲೆ ಅಲ್ಲಿದ್ದ ಜನ್ರಿಗೆ ಒಂದು ಎಚ್ಚರಿಕೆನೂ ಕೊಟ್ಟ. ಅದೇನಂದ್ರೆ, “ಪ್ರವಾದಿಗಳು ಬರೆದಿರೋ ತರ ನಿಮಗೆ ಆಗದ ಹಾಗೆ ನೋಡ್ಕೊಳ್ಳಿ. ‘ತಿರಸ್ಕಾರ ಮಾಡೋದನ್ನ ಇಷ್ಟಪಡುವವ್ರೇ, ನಿಮ್ಮ ಕಾಲದಲ್ಲಿ ನಾನು ಮಾಡ್ತಿರೋ ಕೆಲಸವನ್ನ ನೋಡಿ. ನಿಮಗೆ ಮಾಡ್ತಾ ಇರೋ ಕೆಲಸದ ಬಗ್ಗೆ ಯಾರಾದ್ರೂ ವಿವರಿಸಿದ್ರೂ ನೀವು ಅದನ್ನ ನಂಬಲ್ಲ. ಆದ್ರೆ ನಿಮಗೆ ಆಶ್ಚರ್ಯ ಆಗುತ್ತೆ. ನೀವು ನಾಶ ಆಗ್ತೀರ.’” ಪೌಲ ಕೊಟ್ಟ ಭಾಷಣಕ್ಕೆ ಜನ ಒಳ್ಳೇದಾಗಿ ಪ್ರತಿಕ್ರಿಯಿಸಿದ್ರು. “ಜನ ಅವ್ರ ಹತ್ರ ಬಂದು ಮುಂದಿನ ಸಬ್ಬತ್‌ ದಿನದಲ್ಲೂ ಇದೇ ವಿಷ್ಯದ ಬಗ್ಗೆ ಮಾತಾಡಬೇಕು ಅಂತ ಕೇಳ್ಕೊಂಡ್ರು” ಅಂತ ಬೈಬಲ್‌ ಹೇಳುತ್ತೆ. ಅಷ್ಟೇ ಅಲ್ಲ, ಸಭಾಮಂದಿರದಲ್ಲಿ ಅವತ್ತು ಸಭೆ ಮುಗಿದ ಮೇಲೆ, “ತುಂಬ ಜನ ಯೆಹೂದ್ಯರು ಮತ್ತು ಯೆಹೂದ್ಯರಾಗಿ ಮತಾಂತರ ಆದವರು ಪೌಲ ಮತ್ತು ಬಾರ್ನಬನ ಹಿಂದೆನೇ ಹೋದ್ರು.”—ಅ. ಕಾ. 13:38-43.

“ನಾವು ಬೇರೆ ಜನ್ರ ಹತ್ರ ಹೋಗ್ತಾ ಇದ್ದೀವಿ” (ಅ. ಕಾ. 13:44-52)

15. ಪೌಲ ಭಾಷಣ ಕೊಟ್ಟ ಮೇಲೆ ಸಬ್ಬತ್‌ ದಿನದಲ್ಲಿ ಏನಾಯ್ತು?

15 ಮುಂದಿನ ಸಬ್ಬತ್‌ ದಿನ ಪೌಲ ಹೇಳೋದನ್ನ ಕೇಳಿಸ್ಕೊಳ್ಳೋಕೆ ‘ಹೆಚ್ಚುಕಡಿಮೆ ಪಟ್ಟಣದ ಎಲ್ಲಾ ಜನ ಬಂದಿದ್ರು.’ ಕೆಲವು ಯೆಹೂದ್ಯರಿಗೆ ಇದು ಇಷ್ಟ ಆಗಲಿಲ್ಲ. ಹಾಗಾಗಿ ಅವರು “ಪೌಲ ಹೇಳೋದನ್ನ ಒಪ್ಪಿಕೊಳ್ಳದೆ ದೇವ್ರ ವಿರುದ್ಧ ಮಾತಾಡ್ತಿದ್ರು.” ಆಗ ಅವನೂ ಬಾರ್ನಬನೂ ಧೈರ್ಯದಿಂದ ಆ ಯೆಹೂದ್ಯರಿಗೆ ಹೀಗಂದ್ರು: “ದೇವ್ರ ಸಂದೇಶವನ್ನ ಮೊದಲು ನಿಮಗೇ ಹೇಳಬೇಕಂತ ಬಂದ್ವಿ. ಆದ್ರೆ ನೀವು ಅದನ್ನ ಒಪ್ಕೊಳ್ಳಲಿಲ್ಲ. ಹೀಗೆ ಶಾಶ್ವತ ಜೀವ ಪಡ್ಕೊಳ್ಳೋ ಯೋಗ್ಯತೆ ನಿಮಗಿಲ್ಲ ಅಂತ ತೋರಿಸ್ಕೊಟ್ರಿ. ಹಾಗಾಗಿ ಈಗ ನಾವು ಬೇರೆ ಜನ್ರ ಹತ್ರ ಹೋಗ್ತಾ ಇದ್ದೀವಿ. ಯಾಕಂದ್ರೆ ಯೆಹೋವ ನಮಗೆ ಹೀಗೆ ಆಜ್ಞೆ ಕೊಟ್ಟಿದ್ದಾನೆ “ಭೂಮಿಯ ಮೂಲೆಮೂಲೆಗೂ ಹೋಗಿ ನಾನು ಜನ್ರನ್ನ ಹೇಗೆ ರಕ್ಷಿಸ್ತೀನಿ ಅಂತ ಹೇಳು. ಅದಕ್ಕೆ ನಾನು ನಿನ್ನನ್ನ ಎಲ್ಲ ದೇಶಗಳ ಜನ್ರಿಗೆ ಬೆಳಕಾಗಿ ನೇಮಿಸಿದ್ದೀನಿ.”—ಅ. ಕಾ. 13:44-47; ಯೆಶಾ. 49:6.

ಕೋಪ-ರೋಷದಿಂದ ಜನ್ರು ಪೌಲ ಮತ್ತು ಬಾರ್ನಬನನ್ನ ಪಿಸಿದ್ಯದ ಅಂತಿಯೋಕ್ಯದಿಂದ ಹೊರಗೆ ಹಾಕಿದ್ದಾರೆ.

‘ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ ಬಂದ್ರೂ, ಶಿಷ್ಯರಿಗೆ ಪವಿತ್ರಶಕ್ತಿ ಸಹಾಯ ಮಾಡ್ತಾನೇ ಇತ್ತು. ಅವರು ತುಂಬ ಖುಷಿಯಾಗಿದ್ರು.’—ಅಪೊಸ್ತಲರ ಕಾರ್ಯ 13:50-52

16. (ಎ) ಮಿಷನರಿಗಳ ಬಲವಾದ ಮಾತುಗಳಿಗೆ ಯೆಹೂದ್ಯರು ಹೇಗೆ ಪ್ರತಿಕ್ರಿಯಿಸಿದ್ರು? (ಬಿ) ವಿರೋಧ ಬಂದಾಗ ಪೌಲ ಮತ್ತು ಬಾರ್ನಬ ಏನು ಮಾಡಿದ್ರು?

16 ಸ್ವಲ್ಪದ್ರಲ್ಲೇ ಯೆಹೋವನ ವಾಕ್ಯ ಆ ಪ್ರದೇಶದಲ್ಲಿ ತುಂಬಾ ಬೇಗ ಹಬ್ತು. ಇದನ್ನ ಕೇಳಿ ಅಲ್ಲಿದ್ದ ಬೇರೆ ಜನಾಂಗದವ್ರಿಗೆ ತುಂಬ ಖುಷಿ ಆಯ್ತು ಮತ್ತು “ಶಾಶ್ವತ ಜೀವ ಪಡೆಯೋ ಯೋಗ್ಯತೆ ಇದ್ದ ಒಳ್ಳೇ ಮನಸ್ಸಿನ ಜನ್ರೆಲ್ಲ ಶಿಷ್ಯರಾದ್ರು.” (ಅ. ಕಾ. 13:48) ಆದ್ರೆ ಅಲ್ಲಿದ್ದ ಯೆಹೂದ್ಯರಿಗೆ ಇಷ್ಟ ಆಗಿಲ್ಲ. ಈಗಾಗಲೇ ಆ ಮಿಷನರಿಗಳು, ದೇವರ ವಾಕ್ಯವನ್ನ ಯೆಹೂದ್ಯರಿಗೆ ಮೊದಲು ಹೇಳಿದ್ರೂ ಅವರು ಮೆಸ್ಸೀಯನನ್ನ ತಿರಸ್ಕರಿಸಿದ್ರಿಂದ ದೇವರ ನ್ಯಾಯತೀರ್ಪಿಗೆ ಅರ್ಹರಾಗಿದ್ದಾರೆ ಅಂತ ಹೇಳಿದ್ರು. ಹಾಗಾಗಿ ಕೋಪಗೊಂಡ ಆ ಯೆಹೂದ್ಯರು ಆ ಪಟ್ಟಣದ ಪ್ರಖ್ಯಾತ ಸ್ತ್ರೀಯರಿಗೆ ಮತ್ತು ಪ್ರಮುಖ ಗಂಡಸರಿಗೆ ಕುಮ್ಮಕ್ಕು ಕೊಟ್ಟು, “ಪೌಲ, ಬಾರ್ನಬರ ಮೇಲೆ ವಿರೋಧ-ಹಿಂಸೆ ತಂದು, ಅವ್ರನ್ನ ಆ ಪ್ರದೇಶದಿಂದನೇ ಹೊರಗೆ ಹಾಕಿದ್ರು.” ಆಗ ಪೌಲ ಮತ್ತು ಬಾರ್ನಬ ಏನು ಮಾಡಿದ್ರು? ಅವರು “ತಮ್ಮ ಕಾಲಿಗಿದ್ದ ಧೂಳನ್ನ ಝಾಡಿಸಿ ಇಕೋನ್ಯಕ್ಕೆ ಹೋದ್ರು.” ಹಾಗಾದ್ರೆ ಪಿಸಿದ್ಯದ ಅಂತಿಯೋಕ್ಯದಲ್ಲಿ ಕ್ರೈಸ್ತ ಧರ್ಮ ಇಲ್ಲದಂತಾಯ್ತಾ? ಇಲ್ಲವೇ ಇಲ್ಲ! ಅಲ್ಲಿದ್ದ ಶಿಷ್ಯರಿಗೆ “ಪವಿತ್ರಶಕ್ತಿ ಸಹಾಯ ಮಾಡ್ತಾನೇ ಇತ್ತು. ಅವರು ತುಂಬ ಖುಷಿಯಾಗಿದ್ರು.”—ಅ. ಕಾ. 13:50-52.

17-19. (ಎ) ಪೌಲ ಮತ್ತು ಬಾರ್ನಬನ ಒಳ್ಳೇ ಮಾದರಿಯನ್ನ ನಾವು ಹೇಗೆಲ್ಲ ಅನುಕರಿಸಬಹುದು? (ಬಿ) ಇದು ನಮ್ಮ ಆನಂದವನ್ನ ಹೇಗೆ ಹೆಚ್ಚಿಸುತ್ತೆ?

17 ವಿರೋಧ ಬಂದಾಗ ಈ ನಂಬಿಗಸ್ತ ಸಹೋದರರು ನಡ್ಕೊಂಡ ರೀತಿಯಿಂದ ನಾವು ಒಂದು ಅಮೂಲ್ಯ ಪಾಠ ಕಲಿಬಹುದು. ಅದೇನಂದ್ರೆ, ನಾವು ಸಾರೋದನ್ನ ತಡೆಯೋಕೆ ಲೋಕದ ಗಣ್ಯರು ಪ್ರಯತ್ನಿಸಿದ್ರೂ ನಾವು ಸಾರೋದನ್ನ ನಿಲ್ಲಿಸಬಾರದು. ಪೌಲ ಮತ್ತು ಬಾರ್ನಬ ಸಾರ್ತಿದ್ದ ಸಂದೇಶವನ್ನ ಅಂತಿಯೋಕ್ಯದ ಜನರು ತಿರಸ್ಕರಿಸಿದಾಗ ಏನು ಮಾಡಿದ್ರು? ಅವರು “ತಮ್ಮ ಕಾಲಿಗಿದ್ದ ಧೂಳನ್ನ ಝಾಡಿಸಿ” ಮುಂದೆ ಹೋದ್ರು. ಕೋಪಕ್ಕೆ ಅವರು ಹೀಗೆ ಮಾಡಿಲ್ಲ. ಆ ಜನ್ರಿಗೆ ಏನು ಹೇಳಬೇಕು ಅಂತ ಪೌಲ ಮತ್ತು ಬಾರ್ನಬರಿಗೆ ಯೆಹೋವ ದೇವರು ಹೇಳಿದನೋ ಅದನ್ನೇ ಅವರು ಮಾಡಿದ್ರು, ಆದ್ರೆ ಜನ ಕೇಳದೆ ಇದ್ದಿದ್ರಿಂದ ಅವ್ರಿಗೆ ಮುಂದಾಗೋ ವಿಷ್ಯಗಳಿಗೆ ತಾವು ಜವಾಬ್ದಾರರಲ್ಲ ಅಂತ ತೋರಿಸೋಕೆ ಹೀಗೆ ಮಾಡಿದ್ರು. ಆ ಮಿಷನರಿಗಳಿಗೆ ಬೇರೆಯವರು ಹೇಗೆ ಪ್ರತಿಕ್ರಿಯಿಸ್ತಾರೆ ಅನ್ನೋದು ನಮ್ಮ ಕೈಯಲ್ಲಿ ಇಲ್ಲ, ಆದ್ರೆ ನಾವು ಸಾರೋದನ್ನ ಮುಂದುವರಿಸಬೇಕಾ ಬೇಡ್ವಾ ಅನ್ನೋದು ನಮ್ಮ ಕೈಯಲ್ಲೇ ಇದೆ ಅಂತ ಗೊತ್ತಿತ್ತು. ಅದಕ್ಕೆ ಅವರು ಸಾರೋದನ್ನ ಮುಂದುವರಿಸಿದ್ರು. ಅದಕ್ಕೇ ಇಕೋನ್ಯಕ್ಕೆ ಮುಂದೆ ಸಾಗಿದ್ರು.

18 ಹಾಗಾದ್ರೆ ಅಂತಿಯೋಕ್ಯದಲ್ಲಿ ಹೊಸದಾಗಿ ಕ್ರೈಸ್ತರಾಗಿದ್ದ ಶಿಷ್ಯರಿಗೆ ಏನಾಯ್ತು? ಅವ್ರನ್ನ ಅಲ್ಲಿನ ಜನರು ವಿರೋಧಿಸ್ತಿದ್ರು, ಸಿಹಿಸುದ್ದಿನಾ ಕೇಳ್ತಿರಲಿಲ್ಲ. ಹಾಗಾದ್ರೆ ಅವರು ಖುಷಿಯಾಗಿ ಇರಲಿಲ್ವಾ? ಅವ್ರ ಖುಷಿ ಜನರು ಸಿಹಿಸುದ್ದಿಯನ್ನ ಕೇಳೋದ್ರ ಮೇಲೆ ಹೊಂದ್ಕೊಂಡಿರಲಿಲ್ಲ. ಯಾಕಂದ್ರೆ ಯೇಸು ಹೀಗೆ ಹೇಳಿದ್ದನು: “ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ.” (ಲೂಕ 11:28) ಯೇಸುವಿನ ಈ ಮಾತುಗಳನ್ನ ಕೇಳಬೇಕು ಅಂತ ಪಿಸಿದ್ಯದ ಅಂತಿಯೋಕ್ಯದಲ್ಲಿದ್ದ ಶಿಷ್ಯರು ತೀರ್ಮಾನ ಮಾಡಿದ್ರು.

19 ಪೌಲ ಮತ್ತು ಬಾರ್ನಬನ ತರ ನಾವು ಯಾವಾಗ್ಲೂ ನೆನಪಿಡಬೇಕಾದ ವಿಷ್ಯ ಏನಂದ್ರೆ, ಸಿಹಿಸುದ್ದಿ ಸಾರೋದು ನಮ್ಮ ಜವಾಬ್ದಾರಿ. ನಮ್ಮ ಸಂದೇಶ ಕೇಳಬೇಕಾ ಇಲ್ವಾ ಅನ್ನೋದು ಜನ್ರಿಗೆ ಬಿಟ್ಟಿದ್ದು. ನಾವು ಯಾರಿಗೆ ಸಾರ್ತಿವೋ ಅವರು ಒಳ್ಳೇ ಪ್ರತಿಕ್ರಿಯೆ ತೋರಿಸ್ತಿಲ್ಲ ಅಂತ ನಮಗೆ ಅನಿಸಿದ್ರೆ, ಒಂದನೇ ಶತಮಾನದ ಶಿಷ್ಯರಿಂದ ಪಾಠ ಕಲಿಯೋಣ. ಸತ್ಯವನ್ನ ತುಂಬ ಅಮೂಲ್ಯವಾಗಿ ನೋಡ್ತಾ ಪವಿತ್ರಶಕ್ತಿ ನಮ್ಮನ್ನ ನಡಿಸೋಕೆ ಬಿಟ್ಟುಕೊಡೋಣ. ಆಗ ಏನೇ ವಿರೋಧ ಬಂದ್ರೂ ಖುಷಿಯಾಗಿ ಇರ್ತೀವಿ.—ಗಲಾ. 5:18, 22.

ಬಾರ್ನಬ—“ಸಾಂತ್ವನದ ಪುತ್ರ”

ಯೆರೂಸಲೇಮಿನಲ್ಲಿ ಮೊದಲು ಶುರು ಆದ ಸಭೆಯ ಒಬ್ಬ ಪ್ರಮುಖ ಸದಸ್ಯ ಯೋಸೇಫ. ಅವನೊಬ್ಬ ಲೇವಿಯನಾಗಿದ್ದ, ಸೈಪ್ರಸ್‌ನವನಾಗಿದ್ದ. ಅಪೊಸ್ತಲರು ಅವನ ವ್ಯಕ್ತಿತ್ವವನ್ನ ವರ್ಣಿಸೋ ಒಂದು ಹೆಸ್ರನ್ನ ಅವನಿಗೆ ಕೊಟ್ರು. ಅದು ಬಾರ್ನಬ. ಇದರರ್ಥ “ಸಾಂತ್ವನದ ಪುತ್ರ.” (ಅ. ಕಾ. 4:36, ಪಾದಟಿಪ್ಪಣಿ) ಹೆಸ್ರಿಗೆ ತಕ್ಕಂತೆ ಬಾರ್ನಬ ಸಹೋದರರಿಗೆ ಏನಾದ್ರೂ ಅಗತ್ಯ ಇದೆ ಅಂತ ಗೊತ್ತಾದ್ರೆ ತಕ್ಷಣ ಅದನ್ನ ಮಾಡ್ತಿದ್ದ, ತಡ ಮಾಡ್ತಿರಲಿಲ್ಲ.

ಬಾರ್ನಬ ಎರಡು ಚೀಲ ನಾಣ್ಯಗಳನ್ನ ಕಾಣಿಕೆಯಾಗಿ ಕೊಡ್ತಿದ್ದಾನೆ.

ಕ್ರಿ.ಶ. 33ರ ಐವತ್ತನೇ ದಿನದ ಹಬ್ಬದಲ್ಲಿ 3,000 ಹೊಸ ಶಿಷ್ಯರು ದೀಕ್ಷಾಸ್ನಾನ ಪಡೆದ್ರು. ಇವ್ರಲ್ಲಿ ತುಂಬಾ ಜನ ಬೇರೆ ಸ್ಥಳಗಳಿಂದ ಯೆರೂಸಲೇಮಿಗೆ ಬಂದಿದ್ರು. ಆದ್ರೆ ಅವರು ಅಂದ್ಕೊಂಡಿದ್ದಕ್ಕಿಂತ ಜಾಸ್ತಿ ಸಮಯ ಯೆರೂಸಲೇಮಿನಲ್ಲಿ ಉಳೀಬೇಕಾಯ್ತು. ಇವ್ರ ಅಗತ್ಯಗಳನ್ನ ಪೂರೈಸೋಕೆ ಅಲ್ಲಿನ ಸಭೆಗೆ ಹಣ ಬೇಕಾಗಿತ್ತು. ಆಗ ಬಾರ್ನಬ ತನ್ನ ಒಂದು ಜಮೀನನ್ನ ಮಾರಿ ಬಂದ ಹಣವನ್ನ ಅಪೊಸ್ತಲರಿಗೆ ಕಾಣಿಕೆಯಾಗಿ ಕೊಟ್ಟ.—ಅ. ಕಾ. 4:32-37.

ಒಬ್ಬ ಪ್ರೌಢ ಕ್ರೈಸ್ತ ಮೇಲ್ವಿಚಾರಕನಾಗಿದ್ದ ಬಾರ್ನಬ ಬೇರೆಯವ್ರಿಗೆ ಸಹಾಯ ಮಾಡೋಕೆ ಕಾಯ್ತಿದ್ದ. ಹಿಂಸಕ ಅನ್ನೋ ಕುಖ್ಯಾತಿ ಪಡೆದಿದ್ದ ಸೌಲ ಕ್ರೈಸ್ತನಾದಾಗ ಬೇರೆ ಶಿಷ್ಯರು ಅವನನ್ನ ನೋಡಿ ಭಯಪಡ್ತಿದ್ರು. ಆಗ ಅವನ ಸಹಾಯಕ್ಕೆ ಬಂದವನೇ ಬಾರ್ನಬ. (ಅ. ಕಾ. 9:26, 27) ಯೆಹೂದಿ ಕ್ರೈಸ್ತರು ಮತ್ತು ಯೆಹೂದ್ಯರಲ್ಲದ ಕ್ರೈಸ್ತರ ಮಧ್ಯೆ ಒಳ್ಳೇ ಸಂಬಂಧ ಇರಬೇಕು ಅನ್ನೋದ್ರ ಬಗ್ಗೆ ಪೌಲ ಅವನಿಗೆ ಮತ್ತು ಪೇತ್ರನಿಗೆ ಬುದ್ಧಿವಾದ ಕೊಟ್ಟಾಗ ದೀನತೆಯಿಂದ ನಡ್ಕೊಂಡ. (ಗಲಾ. 2:9, 11-14) ಈ ವಿಷ್ಯಗಳನ್ನ ನೋಡ್ದಾಗ ಬಾರ್ನಬ “ಸಾಂತ್ವನದ ಪುತ್ರ” ಅನ್ನೋ ಹೆಸ್ರಿಗೆ ತಕ್ಕ ಹಾಗೆ ಜೀವಿಸ್ತಿದ್ದ ಅಂತ ಗೊತ್ತಾಗುತ್ತೆ.

a “ಬಾರ್ನಬ—‘ಸಾಂತ್ವನದ ಪುತ್ರ’” ಅನ್ನೋ ಚೌಕ ನೋಡಿ.

b ಈ ಸಮಯದಷ್ಟಕ್ಕೆ, ಯೆರೂಸಲೇಮಿಂದ ಸುಮಾರು 550 ಕಿ.ಮೀ. ದೂರದಲ್ಲಿದ್ದ ಸಿರಿಯದ ಅಂತಿಯೋಕ್ಯದಲ್ಲಿ ಸಭೆಗಳು ಸ್ಥಾಪನೆ ಆಗಿದ್ವು.

c “ರಸ್ತೆ ಪ್ರಯಾಣ” ಅನ್ನೋ ಚೌಕ ನೋಡಿ.

d ಒಂದನೇ ಶತಮಾನದಲ್ಲಿ ಒಂದು ಹಡಗು ದಿನಕ್ಕೆ ಸುಮಾರು 160 ಕಿ.ಮೀ. ದೂರ ಹೋಗ್ತಿತ್ತು. ಅದೂ ಹವಾಮಾನ ಚೆನ್ನಾಗಿದ್ರೆ ಮಾತ್ರ. ಇಲ್ಲಾಂದ್ರೆ ಅಷ್ಟು ದೂರ ಹೋಗೋಕೆ ಇನ್ನೂ ಜಾಸ್ತಿ ಸಮಯ ಹಿಡೀತಿತ್ತು.

e “ಯೆಹೂದ್ಯರ ಸಭಾಮಂದಿರ” ಅನ್ನೋ ಚೌಕ ನೋಡಿ.

f ಸೈಪ್ರಸ್‌ ರೋಮ್‌ ಸಾಮ್ರಾಜ್ಯದ ಕೆಳಗಿತ್ತು. ಸ್ಥಳೀಯ ರಾಜ್ಯಪಾಲ ಆ ದ್ವೀಪದ ಮುಖ್ಯ ಆಡಳಿತಗಾರನಾಗಿದ್ದ, ಅವನಿಗೆ ಪ್ರಾಂತಾಧಿಪತಿಯ ಸ್ಥಾನ ಇತ್ತು.

g ಈ ಘಟನೆ ಆದಮೇಲಿಂದ ಸೌಲನಿಗೆ ಪೌಲ ಅನ್ನೋ ಹೆಸ್ರು ಬಂತು. ಕೆಲವರು ಈ ರೋಮನ್‌ ಹೆಸ್ರನ್ನ ಸೆರ್ಗ್ಯ ಪೌಲನ ಸ್ಮರಣೆಗಾಗಿ ಸೌಲ ಸ್ವೀಕರಿಸಿದ ಅಂತ ಹೇಳ್ತಾರೆ. ಆದ್ರೆ ಸೈಪ್ರಸ್‌ನಿಂದ ಬಂದ ಮೇಲೂ ಅವನು ತನ್ನನ್ನ ಸೌಲ ಅಂತ ಕರೆಸ್ಕೊಳ್ತಿದ್ದ. ಇದ್ರಿಂದ ಅವನು ಸೆರ್ಗ್ಯನಿಗೆ ಗೌರವ ಕೊಡಬೇಕು ಅಂತ ಅವನು ಇದನ್ನ ಬಳಸಿಲ್ಲ ಅಂತ ಗೊತ್ತಾಗುತ್ತೆ. ಆದ್ರೆ ಅವನು “ಬೇರೆ ಜನಾಂಗಗಳವರಿಗೆ ಅಪೊಸ್ತಲನಾಗಿ ಇರೋದ್ರಿಂದ” ಪೌಲ ಅನ್ನೋ ರೋಮನ್‌ ಹೆಸ್ರನ್ನ ಬಳಸೋಕೆ ನಿರ್ಧಾರ ಮಾಡಿದ. ಇದನ್ನ ಬಳಸೋಕೆ ಇನ್ನೊಂದು ಕಾರಣನೂ ಇತ್ತು. ಅದೇನಂದ್ರೆ ಸೌಲ ಅನ್ನೋ ಅವನ ಹೀಬ್ರು ಹೆಸ್ರಿನ ಗ್ರೀಕ್‌ ಉಚ್ಚಾರಣೆ ಕೆಟ್ಟ ಅರ್ಥ ಇದ್ದ ಒಂದು ಗ್ರೀಕ್‌ ಪದಕ್ಕೆ ತುಂಬ ಹೋಲುತ್ತಿತ್ತು.—ರೋಮ. 11:13.

h ಗಲಾತ್ಯದವರಿಗೆ ಪೌಲ ತುಂಬ ವರ್ಷಗಳಾದ ಮೇಲೆ ಪತ್ರ ಬರೆದ. ಅದ್ರಲ್ಲಿ ಅವನು ಹೀಗೆ ಬರೆದ: “ನನಗೆ ಹುಷಾರಿಲ್ದೆ ಇದ್ದಿದ್ರಿಂದ ಮೊದಲ್ನೇ ಸಲ ನಿಮಗೆ ಸಿಹಿಸುದ್ದಿ ಸಾರೋ ಅವಕಾಶ ನನಗೆ ಸಿಕ್ತು.”—ಗಲಾ. 4:13.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ