ನಮ್ಮ ಕಾಲದ ಅತ್ಯಂತ ಉಪೇಕ್ಷಿತ ಕಲಾಕಾರ
“ನಿಸರ್ಗವು ದೇವರ ಕಲಾಕೃತಿ.”—ಸರ್ ಥಾಮಸ್ ಬ್ರೌನ್, 17ನೆಯ ಶತಮಾನದ ವೈದ್ಯ.
ಲೀಯೊನಾರ್ಡೊ ಡ ವಿಂಚಿ, ರೆಮ್ಬ್ರ್ಯಾಂಟ್, ವ್ಯಾನ್ ಗೋ—ಕೋಟ್ಯಂತರ ಜನರಿಗೆ ಜ್ಞಾತವಾದ ಹೆಸರುಗಳಿವು. ಅವರ ಮೂಲ ವರ್ಣಚಿತ್ರಗಳಲ್ಲಿ ಒಂದನ್ನು ನೀವು ಎಂದಾದರೂ ನೋಡದೆ ಇದ್ದರೂ, ಈ ಪುರುಷರು ಮಹಾ ಕಲಾಕಾರರೆಂದು ನೀವು ಬಲ್ಲಿರಿ. ಅವರ ಕಲಾಕೃತಿಯು ಒಂದರ್ಥದಲ್ಲಿ ಅವರನ್ನು ಅಮರರನ್ನಾಗಿ ಮಾಡಿದೆ.
ಅವರು ಕ್ಯಾನ್ವಸ್ನಲ್ಲಿ ಒಂದು ನಿಗೂಢ ನಸುನಗೆ, ಸೂಕ್ಷ್ಮಗ್ರಾಹಿಯಾದ ಒಂದು ಭಾವಚಿತ್ರ, ಸೃಷ್ಟಿಯಲ್ಲಿರುವ ಸೌಂದರ್ಯದ ಒಂದು ಕ್ಷಣದರ್ಶನವನ್ನು ಸೆರೆಹಿಡಿದರು—ಇವೆಲ್ಲ ಇನ್ನೂ ಪ್ರೇಕ್ಷಕನ ಕಲ್ಪನಾ ಶಕ್ತಿಯನ್ನು ಸ್ಪರ್ಶಿಸುತ್ತವೆ. ಶತಮಾನಗಳು ನಮ್ಮನ್ನು ಬೇರ್ಪಡಿಸಬಹುದಾದರೂ—ಅವರನ್ನು ಯಾವುದು ಮುಗ್ಧಗೊಳಿಸಿತೋ ಅದರಿಂದ ನಾವೂ ಮುಗ್ಧರಾಗಿ ಹೋಗಿದ್ದೇವೆ.
ನಾವು ಕಲಾಕಾರರಾಗಿರಲಿಕ್ಕಿಲ್ಲ, ಕಲೆಯ ಟೀಕಾಕಾರರೂ ಆಗಿರಲಿಕ್ಕಿಲ್ಲ, ಆದರೂ ಕಲಾ ಸೌಂದರ್ಯದ ಉತ್ಕೃಷ್ಟತೆಗಳನ್ನು ನಾವಿನ್ನೂ ಗ್ರಹಿಸಿಕೊಳ್ಳಬಲ್ಲೆವು. ಯಾರ ಕಲಾಕೃತಿಯನ್ನು ನಾವು ಮೆಚ್ಚುತ್ತೇವೂ ಆ ಕಲಾಕಾರನಂತೆ, ನಾವು ಸಹ ಸೌಂದರ್ಯದ ಒಂದು ಪ್ರಜ್ಞೆಯನ್ನು ಹೊಂದಿದ್ದೇವೆ. ಬಣ್ಣ, ರೂಪ, ನಮೂನೆಗಳು, ಮತ್ತು ಬೆಳಕಿನ ನಮ್ಮ ಸಂವೇದನಾಶೀಲತೆಯನ್ನು ನಾವು ಮಾಮೂಲಾಗಿ ತೆಗೆದುಕೊಳ್ಳಬಹುದು, ಅದರೆ ಅದು ನಮ್ಮ ಜೀವನಗಳ ಭಾಗವಾಗಿದೆ. ನಾವು ನಮ್ಮ ಮನೆಗಳನ್ನು ನಮ್ಮ ಕಣ್ಣಿಗೆ ಪ್ರಿಯವಾದ ವಸ್ತುಗಳಿಂದ ಅಥವಾ ವರ್ಣಚಿತ್ರಗಳಿಂದ ಶೃಂಗರಿಸಲು ಬಯಸುತ್ತೇವೆ ನಿಸ್ಸಂಶಯ. ಇಷ್ಟಗಳು ವಿಭಿನ್ನವಾಗಿದ್ದರೂ, ಈ ಸೌಂದರ್ಯ ಗ್ರಹಣಶಕ್ತಿಯು ಮಾನವ ಕುಲದ ಹೆಚ್ಚಿನವರು ಭಾಗಿಗಳಾಗಿರುವ ಒಂದು ಕೊಡುಗೆ. ಮತ್ತು ಆ ಕೊಡುಗೆ ನಮ್ಮನ್ನು ನಮ್ಮ ನಿರ್ಮಾಣಿಕನಿಗೆ ಹೆಚ್ಚು ಹತ್ತಿರವಾಗಿ ಎಳೆಯಬಲ್ಲದು.
ಸೌಂದರ್ಯದ ಕೊಡುಗೆ
ಮಾನವ ಕುಲವನ್ನು ಪ್ರಾಣಿಗಳಿಂದ ಪ್ರತ್ಯೇಕಿಸುವ ಅನೇಕ ಗುಣಗಳಲ್ಲಿ ಸೌಂದರ್ಯ ಗ್ರಹಣ ಶಕ್ತಿಯು ಒಂದು. ಸುಮಾ ಆರ್ಟಿಸ್—ಇಸ್ಟೋರ್ಯ ಹೆನರಾಲ್ ಡೆಲ್ ಆರ್ಟೆ (ಕಲೆಯ ಪ್ರಕರಣ ಗ್ರಂಥ—ಕಲೆಯ ಸಾಮಾನ್ಯ ಇತಿಹಾಸ) ಎಂಬ ಕೃತಿಯು ತಿಳಿಸುವುದೇನಂದರೆ, “ಮನುಷ್ಯನನ್ನು ಸೌಂದರ್ಯೋಪಾಸಕ ಶಕ್ತಿಯುಳ್ಳ ಪ್ರಾಣಿಯಾಗಿ ವಿವರಿಸ ಸಾಧ್ಯವಿದೆ.” ನಾವು ಪ್ರಾಣಿಗಳಿಂದ ಬೇರೆಯಾಗಿರುವುದರಿಂದ, ನಾವು ಸೃಷ್ಟಿಯನ್ನು ಭಿನ್ನವಾದ ಬೆಳಕಿನಲ್ಲಿ ನೋಡುತ್ತೇವೆ. ಒಂದು ನಾಯಿಯು ಒಂದು ಸುಂದರವಾದ ಸೂರ್ಯಾಸ್ತಮಾನವನ್ನು ಗಣ್ಯಮಾಡುತ್ತದೋ?
ನಮ್ಮನ್ನು ಆ ರೀತಿಯಾಗಿ ಮಾಡಿದವನು ಯಾರು? “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು,” ಎಂದು ಬೈಬಲು ವಿವರಿಸುತ್ತದೆ. (ಆದಿಕಾಂಡ 1:27) ನಮ್ಮ ಮೊದಲನೆಯ ಹೆತ್ತವರು ದೇವರಂತೆ ತೋರುತ್ತಿದ್ದರು ಎಂದಲ್ಲ. ಬದಲಾಗಿ, ದೇವರು ಸ್ವತಃ ತಾನು ಹೊಂದಿರುವ ಗುಣಗಳನ್ನು ಅವರಿಗೆ ಅನುಗ್ರಹಿಸಿದನು. ಇವುಗಳಲ್ಲೊಂದು ಸೌಂದರ್ಯವನ್ನು ಗಣ್ಯಮಾಡುವ ಸಾಮರ್ಥ್ಯವೇ.
ಒಂದು ಗ್ರಹಿಸಲಾಗದ ಕಾರ್ಯವಿಧಾನದ ಮೂಲಕ ಮಾನುಷ ಮಿದುಳು ಸೌಂದರ್ಯವನ್ನು ಅವಲೋಕಿಸುತ್ತದೆ. ಮೊತ್ತಮೊದಲಾಗಿ, ನಮ್ಮ ಗಮನವನ್ನು ಆಕರ್ಷಿಸುವ ವಸ್ತುಗಳ ಶಬ್ದಗಳು, ವಾಸನೆಗಳು, ಬಣ್ಣಗಳು, ಮತ್ತು ಆಕಾರಗಳ ಮಾಹಿತಿಯನ್ನು ನಮ್ಮ ಜ್ಞಾನೇಂದ್ರಿಯಗಳು ನಮ್ಮ ಮಿದುಳಿಗೆ ತಲಪಿಸುತ್ತವೆ. ಆದರೆ ಸೌಂದರ್ಯ, ನಮ್ಮ ಸುತ್ತಲೂ ಏನು ಸಂಭವಿಸುತ್ತಿದೆಯೆಂದು ನಮಗೆ ಕೇವಲ ತಿಳಿಸುವ ವಿದ್ಯುದ್ರಸಾಯನ ಆವೇಗಗಳ ಒಟ್ಟು ಮೊತ್ತಕ್ಕಿಂತ, ಬಹಳ ಹೆಚ್ಚಿನದ್ದು. ನಾವು ಒಂದು ವೃಕ್ಷವನ್ನು, ಒಂದು ಪುಷ್ಪವನ್ನು, ಅಥವಾ ಒಂದು ಹಕ್ಕಿಯನ್ನು ಒಂದು ಪ್ರಾಣಿಯು ನೋಡುವ ರೀತಿಯಲ್ಲಿ ನೋಡುವುದಿಲ್ಲ. ಈ ವಸ್ತುಗಳು ತಕ್ಷಣದ ಯಾವ ಪ್ರಾಯೋಗಿಕ ಪ್ರಯೋಜನವನ್ನು ನಮಗೆ ನೀಡದಿರಬಹುದಾದರೂ, ಏನೇ ಆಗಲಿ, ಅವು ನಮಗೆ ಆನಂದವನ್ನು ಕೊಡುತ್ತವೆ. ಅವುಗಳ ಸೌಂದರ್ಯೋಪಾಸನೆಯ ಮೌಲ್ಯವನ್ನು ಗ್ರಹಿಸಿಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುವುದು ನಮ್ಮ ಮಿದುಳು.
ಈ ಸಾಮರ್ಥ್ಯವು ನಮ್ಮ ಭಾವಾವೇಶಗಳನ್ನು ಸ್ಪರ್ಶಿಸಿ, ನಮ್ಮ ಜೀವನಗಳನ್ನು ಸಂಪನ್ನಗೊಳಿಸುತ್ತದೆ. ಸ್ಪೆಯ್ನ್ನಲ್ಲಿ ವಾಸಿಸುವ ಮೇರಿ, ಹಲವಾರು ವರ್ಷಗಳ ಹಿಂದೆ ನವೆಂಬರ್ ತಿಂಗಳ ಒಂದು ಸಂಜೆಯಲ್ಲಿ, ಒಂದು ದೂರದ ಕೊಳದ ಪಕ್ಕದಲ್ಲಿ ನಿಂತು ಸೂರ್ಯಾಸ್ತಮಾನವನ್ನು ವೀಕ್ಷಿಸಿದ್ದನ್ನು ಸ್ಪಷ್ಟವಾಗಿಗಿ ಮರುಕಳಿಸುತ್ತಾಳೆ: “ಒಂದನ್ನೊಂದು ಕೂಗಿ ಕರೆಯುತ್ತಾ ಸಾಲಮೇಲೆ ಸಾಲಾಗಿ ಹಾರಿಕೊಂಡು ನನ್ನ ಕಡೆಗೆ ಬರುತ್ತಿದ್ದವು ಕೊಕ್ಕರೆಗಳು,” ಎನ್ನುತ್ತಾಳೆ ಆಕೆ. “ಆ ಸಾವಿರಾರು ಪಕ್ಷಿಗಳು ಕಡುಗೆಂಪು ಬಣ್ಣದ ಗಗನದಾಚೆ ಜೇಡನ ಕಾಲಿನಂಥ ವಿನ್ಯಾಸಗಳಲ್ಲಿ ಪೋಣಿಸಲ್ಪಟ್ಟಿದ್ದವು. ರಷ್ಯದಿಂದ ಸ್ಕ್ಯಾಂಡಿನೇವಿಯಕ್ಕೆ ಅವುಗಳ ವಾರ್ಷಿಕ ವಲಸೆಹೋಗುವ ಪ್ರಯಾಣವು ಈ ಸ್ಪ್ಯಾನಿಷ್ ವಿಶ್ರಾಂತಿ ಸ್ಥಳಕ್ಕೆ ಅವನ್ನು ತಂದಿತ್ತು. ಈ ಅನುಭವವು ಎಷ್ಟು ಮನೋಹರವಾಗಿತ್ತೆಂದರೆ ಅದು ನನ್ನನ್ನು ಅಳುವಂತೆ ಮಾಡಿತು.”
ಸೌಂದರ್ಯದ ಈ ಕೊಡುಗೆಯೇಕೆ?
ಈ ಸೌಂದರ್ಯ ಗ್ರಹಣ ಶಕ್ತಿಯು ಅನೇಕ ಜನರಿಗೆ, ತನ್ನ ಬುದ್ಧಿಯುಳ್ಳ ಸೃಷ್ಟಿಜೀವಿಗಳು ತನ್ನ ಕಲಾಕೃತಿಯಲ್ಲಿ ಆನಂದಿಸುವಂತೆ ಬಯಸುವ ಒಬ್ಬ ಪ್ರೀತಿಯುಳ್ಳ ನಿರ್ಮಾಣಿಕನ ಅಸ್ತಿತ್ವಕ್ಕೆ ಸ್ಫುಟವಾಗಿ ಕೈತೋರಿಸುತ್ತದೆ. ನಮ್ಮ ಸೌಂದರ್ಯ ಗ್ರಹಣ ಶಕ್ತಿಯನ್ನು ಒಬ್ಬ ಪ್ರೀತಿಯ ನಿರ್ಮಾಣಿಕನಿಗೆ ಅಧ್ಯಾರೋಪಿಸುವುದು ಅದೆಷ್ಟು ನ್ಯಾಯಸಮ್ಮತ ಮತ್ತು ಸಂತೃಪ್ತಿಕರ. “ದೇವರು ಪ್ರೀತಿಸ್ವರೂಪಿ,” ಎಂದು ವಿವರಿಸುತ್ತದೆ ಬೈಬಲು, ಮತ್ತು ಪ್ರೀತಿಯ ಸಾರವೇ ಪಾಲುಗಾರಿಕೆ. (1 ಯೋಹಾನ 4:8; ಅ. ಕೃತ್ಯಗಳು 20:35) ತನ್ನ ನಿರ್ಮಾಣ ಕಲೆಯಲ್ಲಿ ನಮಗೆ ಪಾಲುಕೊಡಲು ಯೆಹೋವನು ಆನಂದಿಸಿದ್ದಾನೆ. ಒಂದು ಸಂಗೀತದ ನಾಯಕ ಕೃತಿಯು ಎಂದೂ ಆಲೈಸಲ್ಪಡದಿದ್ದಲ್ಲಿ ಅಥವಾ ಅತ್ಯುತ್ಕೃಷ್ಟ ವರ್ಣಚಿತ್ರವು ಎಂದೂ ನೋಡಲ್ಪಡದಿದ್ದಲ್ಲಿ, ಅವುಗಳ ಸೌಂದರ್ಯವು ಕಳೆದುಹೋಗುವುದು. ಕಲೆಯು ಪಾಲುಗಾರಿಕೆಗಾಗಿ ಮತ್ತು ಅನುಭೋಗಿಸಲಿಕ್ಕಾಗಿ ನಿರ್ಮಿತವಾಗಿದೆ—ಸಭಿಕರಿಲ್ಲದ ಹೊರತು ಅದು ಬರಡು.
ಹೌದು, ಯೆಹೋವನು ಸುಂದರವಾದ ವಸ್ತುಗಳನ್ನು ಒಂದು ಉದ್ದೇಶಕ್ಕಾಗಿ—ಪಾಲಿಗರಾಗಲಿಕ್ಕಾಗಿ ಮತ್ತು ಆನಂದಿಸಲಿಕ್ಕಾಗಿ—ನಿರ್ಮಿಸಿದನು. ವಾಸ್ತವದಲ್ಲಿ, ನಮ್ಮ ಪ್ರಥಮ ಹೆತ್ತವರ ಬೀಡು ಒಂದು ವಿಸ್ತಾರವಾದ ಪ್ರಮೋದವನ್ಯ ಉದ್ಯಾನವಾಗಿದ್ದು ಏದೆನ್ ಎಂದು ಕರೆಯಲ್ಪಟ್ಟಿತು—“ಸುಖಾನುಭವ” ಎಂದೇ ಅದರ ಅರ್ಥ. ದೇವರು ಭೂಮಿಯನ್ನು ತನ್ನ ಕಲಾ ಕೌಶಲದಿಂದ ತುಂಬಿಸಿದ್ದಾನೆ ಮಾತ್ರವಲ್ಲ, ಮಾನವ ಕುಲವು ಅದನ್ನು ಗಮನಿಸಿ, ಗಣ್ಯಮಾಡುವಂತಹ ಸಾಮರ್ಥ್ಯವನ್ನೂ ಕೊಟ್ಟಿದ್ದಾನೆ. ಮತ್ತು ಗಮನಿಸಲು ಎಂತಹ ಸೌಂದರ್ಯ ಸಂಪತ್ತು ಇದೆ! ಪಾಲ್ ಡೇವಿಸ್ ಅವಲೋಕಿಸಿದಂತೆ, “ನಿಸರ್ಗವು ‘ವಿಶೇಷ ಪ್ರಯತ್ನವನ್ನು ಮಾಡಿ’ ಒಂದು ಆಸಕ್ತಿಭರಿತ ಮತ್ತು ಫಲಭರಿತ ವಿಶ್ವವನ್ನು ಉಂಟುಮಾಡುತ್ತದೋ ಎಂಬಂತೆ ಕೆಲವೊಮ್ಮೆ ತೋರುತ್ತದೆ.” ನಾವು ಈ ವಿಶ್ವವನ್ನು ಆಸಕ್ತಿಭರಿತವೂ ಫಲಭರಿತವೂ ಆಗಿ ಕಾಣುವುದು ನಿಖರವಾಗಿ ಯಾಕೆಂದರೆ ಅದನ್ನು ಅಧ್ಯಯನಿಸುವ ಮತ್ತು ಅನುಭೋಗಿಸುವ ಸಾಮರ್ಥ್ಯದೊಂದಿಗೆ ಯೆಹೋವನು ನಮ್ಮನ್ನು ನಿರ್ಮಿಸಲು ‘ವಿಶೇಷ ಪ್ರಯತ್ನವನ್ನು ಮಾಡಿದುದ್ದ’ರಿಂದಲೇ.
ನೈಸರ್ಗಿಕ ಸೌಂದರ್ಯದ ಅಂಗೀಕಾರ—ಮತ್ತು ಅದನ್ನು ಅನುಕರಿಸುವ ಅಪೇಕ್ಷೆಯು—ಪುರಾತನ ಕಾಲದ ಗುಹೆ ಕಲಾಕಾರರಿಂದ ಹಿಡಿದು ಇಂದಿನ ಭಾವೂತ್ಪಾದಕ ಕಲಾಕಾರರ ತನಕ ಎಲ್ಲ ಸಂಸ್ಕೃತಿಗಳಿಗೆ ಸರ್ವಸಾಮಾನ್ಯವಾಗಿರುವುದು ಆಶ್ಚರ್ಯವಲ್ಲ. ಸಾವಿರಾರು ವರ್ಷಗಳ ಹಿಂದೆ, ಉತ್ತರ ಸ್ಪೆಯ್ನ್ನ ನಿವಾಸಿಗಳು ಕ್ಯಾಂಟೇಬ್ರೀಯದ ಆಲಮ್ಟಿರ ಪ್ರಾಂತದ ಗವಿಗಳಲ್ಲಿ ಸ್ಪಷ್ಟವೂ ಸವಿವರವೂ ಉಳ್ಳ ಪ್ರಾಣಿಗಳ ವರ್ಣಚಿತ್ರಗಳನ್ನು ಬರೆದರು. ಒಂದು ಶತಮಾನಕ್ಕೆ ಹಿಂದೆ ಭಾವೂತ್ಪಾದಕ ಚಿತ್ರಕಾರರು ತಮ್ಮ ಸ್ಟುಡಿಯೋಗಳಿಂದ ಹೊರಬಂದು, ಪುಷ್ಪಗಳ ಬಯಲಲ್ಲಿ ವರ್ಣಗಳ ಮೆರಸನ್ನು ಅಥವಾ ನೀರಿನ ಮೇಲೆ ಬೆಳಕಿನ ಬದಲಾಗುವ ಚಿತ್ರಾಕೃತಿಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದರು. ಚಿಕ್ಕ ಮಕ್ಕಳು ಸಹ ಸುಂದರವಾದ ವಸ್ತುಗಳ ತೀವ್ರವಾದ ಅರುಹುಳ್ಳವರಾಗಿದ್ದಾರೆ. ವಾಸ್ತವದಲ್ಲಿ, ಬಣ್ಣದ ಕಡ್ಡಿ ಮತ್ತು ಕಾಗದವನ್ನು ಕೊಟ್ಟಾಗ ಅವರಲ್ಲಿ ಹೆಚ್ಚಿನವರು ತಮ್ಮ ಕಲ್ಪನಾ ಶಕ್ತಿಯನ್ನು ಸೆರೆಹಿಡಿಯುವ, ತಾವು ನೋಡುವ ಏನನ್ನಾದರೂ ಬಿಡಿಸಲು ಇಷ್ಟಪಡುತ್ತಾರೆ.
ತಮ್ಮನ್ನು ಪ್ರಭಾವಿಸಿದ ಒಂದು ಸುಂದರವಾದ ದೃಶ್ಯವನ್ನು ಜ್ಞಾಪಿಸಿಕೊಳ್ಳಲಿಕ್ಕಾಗಿ ಇಂದಿನ ದಿನಗಳಲ್ಲಿ ಅನೇಕ ಪ್ರೌಢರು ಒಂದು ಛಾಯಾಚಿತ್ರವನ್ನು ತೆಗೆಯಲು ಇಷ್ಟಪಡುತ್ತಾರೆ. ಆದರೆ ಕ್ಯಾಮರದ ಹೊರತೂ, ದಶಮಾನಗಳ ಹಿಂದೆ ನೋಡಿರಬಹುದಾದ ಸುಂದರ ದೃಶ್ಯಗಳನ್ನು ನೆನಪುಮಾಡಿಕೊಳ್ಳಲು ನಮ್ಮ ಮನಸ್ಸುಗಳು ಶಕವ್ತಾಗಿವೆ. ಯಾವುದನ್ನು ದೇವರು ಉತ್ಕೃಷ್ಟವಾಗಿ ಅಲಂಕರಿಸಿದನೋ, ಆ ನಮ್ಮ ಭೂಮನೆಯನ್ನು ನಾವು ಆನಂದಿಸಲು ಶಕ್ತರಾಗುವಂತಹ ಸಾಮರ್ಥ್ಯದೊಂದಿಗೆ ಆತನು ನಮ್ಮನ್ನು ರಚಿಸಿದ್ದಾನೆಂಬುದು ಸ್ಫುಟ. (ಕೀರ್ತನೆ 115:16) ಆದರೂ ಸೌಂದರ್ಯ ಗ್ರಹಣ ಶಕ್ತಿಯನ್ನು ದೇವರು ನಮಗೆ ಕೊಟ್ಟದ್ದಕ್ಕೆ ಇನ್ನೊಂದು ಕಾರಣವೂ ಇದೆ.
‘ಆತನ ಗುಣಗಳು ಸ್ಪಷ್ಟವಾಗಿಗಿ ಕಾಣಬರುತ್ತವೆ’
ನಿಸರ್ಗದಲ್ಲಿರುವ ಕಲಾ ಕೌಶಲಕ್ಕಾಗಿ ನಮ್ಮ ಗಣ್ಯತೆಯನ್ನು ನಾವು ಆಳಗೊಳಿಸುವುದು, ಯಾರ ಕೈಕೆಲಸಗಳು ನಮ್ಮ ಸುತ್ತಲೂ ಇವೆಯೋ ಆ ನಮ್ಮ ನಿರ್ಮಾಣಿಕನನ್ನು ತಿಳಿದುಕೊಳ್ಳಲು ನಮಗೆ ನೆರವಾಗಬಲ್ಲದು. ಒಂದು ಸಂದರ್ಭದಲ್ಲಿ ಯೇಸು ತನ್ನ ಶಿಷ್ಯರಿಗೆ ಗಲಿಲಾಯದ ಸುತ್ತಲೂ ಬೆಳೆಯುತ್ತಿರುವ ಕಾಡುಹೂವುಗಳ ಕಡೆಗೆ ನಿಕಟ ದೃಷ್ಟಿಯಿಡುವಂತೆ ಹೇಳಿದನು. “ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ,” ಎಂದನವನು, “ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ.” (ಮತ್ತಾಯ 6:28, 29) ನಿಕೃಷ್ಟವಾದ ಒಂದು ಕಾಡು ಹೂವಿನ ಸೌಂದರ್ಯವು, ಮಾನವ ಕುಟುಂಬದ ಅಗತ್ಯಗಳನ್ನು ದೇವರು ಅಲಕ್ಷಿಸುವುದಿಲ್ಲವೆಂಬುದನ್ನು ನೆನಪಿಸಲು ನಮಗೆ ಸಾಧನವಾಗಿರಬಲ್ಲದು.
ಒಬ್ಬ ವ್ಯಕ್ತಿಯನ್ನು ಅವನ “ಫಲ”ಗಳಿಂದ ಅಥವಾ ಅವನ ಕೃತ್ಯಗಳಿಂದ ತಿಳಿದುಕೊಳ್ಳಲು ಸಾಧ್ಯವಿದೆಯೆಂದೂ ಯೇಸು ಹೇಳಿದನು. (ಮತ್ತಾಯ 7:16-20) ಹೀಗೆ, ದೇವರ ಸೃಷ್ಟಿಕ್ರಿಯೆಯು ಆತನ ವ್ಯಕ್ತಿತ್ವವನ್ನು ತಿಳಿಯುವ ಒಳನೋಟವನ್ನು ನಮಗೆ ನೀಡುವುದೆಂಬುದು ಕೇವಲ ಅಪೇಕ್ಷಿತ. ‘ಜಗದುತ್ಪತ್ತಿಗೆ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಸ್ಪಷ್ಟವಾಗಿಗಿ ಕಂಡುಬರುವ ಆತನ ಗುಣಗಳಲ್ಲಿ’ ಕೆಲವು ಯಾವುವು?—ರೋಮಾಪುರ 1:20.
“ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ,” ಎಂದು ಉದ್ಗರಿಸಿದನು ಕೀರ್ತನೆಗಾರನು. “ಅವುಗಳನ್ನೆಲ್ಲಾ ಜ್ಞಾನ [“ವಿವೇಕ,” NW]ದಿಂದಲೇ ಮಾಡಿದ್ದೀ.” (ಕೀರ್ತನೆ 104:24) ಭೂಮಿಯ ಸಸ್ಯಗಳಿಗೆ ಮತ್ತು ಪ್ರಾಣಿಜೀವಿಗಳಿಗೆ “ಬಣ್ಣ” ಬಳಿಯಲು ಆತನು ಬಳಸಿದ ಬಣ್ಣಗಳಲಿಯ್ಲೂ ದೇವರ ವಿವೇಕವನ್ನು ಗ್ರಹಿಸಿಕೊಳ್ಳಲು ಸಾಧ್ಯವಿದೆ. “ಬಣ್ಣವು ಆತ್ಮಕ್ಕೆ ಮತ್ತು ನೇತ್ರಗಳಿಗೆ ಬಹು ಆನಂದವನ್ನು ಕೊಡುತ್ತದೆ,” ಎಂದು ಹೇಳುತ್ತಾರೆ ಫಾಬ್ರೀಸ್ ಮತ್ತು ಜರ್ಮಾನಿ, ತಮ್ಮ ಪುಸ್ತಕವಾದ ಕೊಲೊರೆ, ಡೀಸೀನ್ಯೊ ಎಡ್ ಎಸ್ಟೇಲೀಕಾ ನೆಲಾರ್ಟೆ ಗ್ರಾಫೀಕ (ಬಣ್ಣ—ರೇಖಾಚಿತ್ರ ಕಲೆಯಲ್ಲಿ ರಚನೆ ಮತ್ತು ಸೌಂದರ್ಯೋಪಾಸನೆ)ದಲ್ಲಿ. ನೇತ್ರವನ್ನು ರಮ್ಯಗೊಳಿಸುವ ಮತ್ತು ಆತ್ಮವನ್ನು ಉತ್ಕರ್ಷಪಡಿಸುವ ಸಾಮರಸ್ಯವಾದ ಮತ್ತು ವೈದೃಶ್ಯತೋರಿಸುವ ಬಣ್ಣಗಳು ಎಲ್ಲೆಲ್ಲೂ ಇವೆ. ಆದರೆ ಪ್ರಾಯಶಃ ಅತ್ಯಂತ ಕಣ್ಸೆಳೆಯುವಂಥದು, ಒಂದು ವಿವೇಕಯುಕ್ತ ವಿನ್ಯಾಸಕ್ಕೆ ಗಮನಾರ್ಹ ಸಾಕ್ಷ್ಯವಾದ ವಿವಿಧ ವರ್ಷಸ್ಫುರಣ—ಹೊಳಪಿನ ಮುಗಿಲುಬಿಲ್ಲು ಸದೃಶ ಬಣ್ಣಗಳು—ದ ಮೂಲಕ ಉತ್ಪಾದಿಸಲ್ಪಡುವ ವರ್ಣಪರಿಣಾಮವೇ.
ವಿವಿಧ ವರ್ಣಸ್ಫುರಣದ ಬಣ್ಣಗಳು ವಿಶೇಷವಾಗಿ ಹಮಿಂಗ್ಬರ್ಡ್ಗಳಲ್ಲಿ ಸಾಮಾನ್ಯವಾಗಿವೆ.a ಅವುಗಳ ಗರಿಗಳನ್ನು ಅಷ್ಟು ಕೋರೈಸುವಂತೆ ಮಾಡುವಂಥದ್ದು ಯಾವುದು? ಅವುಗಳ ಅಸದೃಶ ಪುಕ್ಕಗಳಲ್ಲಿ ಮೇಲಿನ ಮೂರನೆಯದು, ಬೆಳಕನ್ನು—ಕೊಂಚ ಮಟ್ಟಿಗೆ ಪ್ರಿಸ್ಮ್ ಮಾಡುವಂತೆ—ವಿಶಿಷ್ಟ ಮುಗಿಲುಬಿಲ್ಲಿನ ಬಣ್ಣಗಳಾಗಿ ಒಡೆಯುತ್ತದೆ. ಈ ಹಮಿಂಗ್ಬರ್ಡ್ಗಳ ಸಾಮಾನ್ಯ ಹೆಸರುಗಳಾದ ಕೆಂಪು ಪದ್ಮರಾಗ, ನೀಲಮಣಿ, ಮತ್ತು ಪಚ್ಚೆಹಸುರುಗಳು, ಈ ರತ್ನದಂಥ ಪಕ್ಷಿಗಳನ್ನು ಸಿಂಗರಿಸುವ ಹೊಳಪಿನ ಕೆಂಪು, ನೀಲ ಮತ್ತು ಪಚ್ಚೆ ಬಣ್ಣಗಳಿಗೆ ಸೂಕ್ತವಾದ ಸಾಕ್ಷ್ಯವಾಗಿವೆ. “ಈ ಉತ್ಕೃಷ್ಟ ಜೀವಿಗಳ ಮನೋಹರವಾದ, ಶೋಭಾಯಮಾನ ಸೌಂದರ್ಯದ ಉದ್ದೇಶವೇನು?” ಎಂದು ಕೇಳುತ್ತಾಳೆ ಸೇರ ಗುಡ್ವಿನ್, ತನ್ನ ಹಮ್ಮಿಂಗ್ಬರ್ಡ್ಸ್ ಎಂಬ ಪುಸ್ತಕದಲ್ಲಿ. “ವಿಜ್ಞಾನವು ನಿರ್ಧರಿಸಬಲ್ಲ ಮಟ್ಟಿಗೆ, ಪ್ರೇಕ್ಷಕರ ಕಣ್ಣನ್ನು ಕೋರೈಸುವ ಹೊರತು ಅದಕ್ಕೆ ಭೂಮಿಯ ಮೇಲೆ ಬೇರೆ ಯಾವ ಉದ್ದೇಶವೂ ಇಲ್ಲ,” ಎಂದವಳು ಉತ್ತರಿಸುತ್ತಾಳೆ. ಯಾವ ಮಾನವ ಕಲಾಕಾರನೂ ಎಂದೂ ಅಂತಹ ಒಂದು ಬಣ್ಣವನ್ನು ಉಪಯೋಗಿಸಲಿಲ್ಲ ನಿಶ್ಚಯ!
ಭೋರ್ಗರೆಯುವ ಜಲಪಾತದಲ್ಲಿ, ಇಳಿತ ಭರತಗಳ ಮರುಳುವಿಕೆಯಲ್ಲಿ, ಅಪ್ಪಳಿಸುವ ತೆರೆನೊರೆಯಲ್ಲಿ, ಅಥವಾ ಚಂಡ ಮಾರುತದಲ್ಲಿ ಅರಣ್ಯದ ಉನ್ನತವಾದ ವೃಕ್ಷಗಳ ಒಲೆದಾಟದಲ್ಲಿ ದೇವರ ಶಕ್ತಿಯನ್ನು ನಾವು ಗ್ರಹಿಸಬಲ್ಲೆವು. ಈ ಪ್ರಚಂಡವಾದ ಕಲಾ ಕೌಶಲವು ಒಂದು ಪ್ರಶಾಂತ ದೃಶ್ಯದಷ್ಟೇ ಭಾವೂತ್ಪಾದಕವಾಗಿರಬಲ್ಲದು. ಪ್ರಖ್ಯಾತ ಅಮೆರಿಕನ್ ಪ್ರಕೃತಿ ಶಾಸ್ತ್ರಜ್ಞರಾದ ಜಾನ್ ಮ್ಯೂರ್, ಒಮ್ಮೆ ಸಿಯಾರ ನೆವಾಡದ ಡಗ್ಲಸ್ ಫರ್ (ಸದಾ ಹಸುರು ವೃಕ್ಷ)ನ ಸಮುದಾಯದ ಮೇಲೆ ಬಿರುಗಾಳಿಯ ಪರಿಣಾಮವನ್ನು ಹೀಗೆ ವಿವರಿಸಿದರು:
“ತುಲನಾತ್ಮಕವಾಗಿ ಎಳೆಯದಾಗಿದ್ದರೂ ಅವು ಸುಮಾರು 100 ಅಡಿ ಎತ್ತರವಿದ್ದವು, ಮತ್ತು ಅವುಗಳ ಬಳಕುವ, ಕುಂಚದಂತಿರುವ ತುದಿಗಳು ಪ್ರಚಂಡ ಹರ್ಷೋನ್ಮಾದದಿಂದ ಓಲಾಡುತ್ತಾ, ಸುಳಿಸುತ್ತುತ್ತಾ ಇದ್ದವು. . . . ಆ ತೆಳ್ಳನೆಯ ತುದಿಗಳು ಸೊಗಸಿನ ಉದ್ರೇಕದ ರಭಸದಲ್ಲಿ ಹಿಂದೆ ಮುಂದೆ ಬಡಿದಾಡುತ್ತಾ, ಫಳೀರನೇ ಬೀಸುತ್ತಾ, ಹಿಂದಕ್ಕೂ ಮುಂದಕ್ಕೂ ಬಾಗುತ್ತಾ, ಸುರುಳಿ ಸುತ್ತುತ್ತಾ, ಸಮಕೋನದ ಮತ್ತು ಸಮತಲದ ವಕ್ರಾಕೃತಿಗಳ ಅವರ್ಣನೀಯ ಸಂಯೋಗಗಳನ್ನು ರೂಪಿಸುತ್ತಿದ್ದವು.” ‘ಬಿರುಗಾಳಿಯೂ ಯೆಹೋವನನ್ನು ಸುತ್ತಿಸುತ್ತದೆ’ ಎಂದು ಕೀರ್ತನೆಗಾರನು ಸಾವಿರಾರು ವರ್ಷಗಳ ಹಿಂದೆ ಬರೆದಂತೆಯೇ—ಅದು ನಮಗೆ ಆತನ ಅಸಾಮಾನ್ಯ ಶಕ್ತಿಯ ಒಂದು ಮಾದರಿಯನ್ನು ಕೊಡುತ್ತದೆ.—ಕೀರ್ತನೆ 148:7, 8.
ಒಂದು ಪಕ್ಷಿಯು ಜಪಾನಿನವರಿಗೆ ಬಹಳ ಕಾಲದಿಂದ ಪ್ರೀತಿಯ ಪ್ರತೀಕವಾಗಿದೆ. ಅದು, ಯಾವುದರ ಪರಿಷ್ಕಾರವಾದ ಪ್ರಣಯ ನರ್ತನಗಳು ಯಾವುದೇ ಬ್ಯಾಲೆ ನರ್ತನದಷ್ಟೇ ಲಾವಣ್ಯಮಯವಾಗಿವೆಯೊ, ಆ ಸುಂದರವಾದ ಜ್ಯಾಪನೀಸ್ ಕೊಕ್ಕರೆಯಾಗಿದೆ. ಈ ಪಕ್ಷಿ ಪಾತ್ರಧಾರಿಗಳು ಎಷ್ಟು ಹೆಚ್ಚಾಗಿ ಗೌರವಿಸಲ್ಪಡುತ್ತವೆಂದರೆ ಅವು ಜಪಾನಿನಲ್ಲಿ ಒಂದು “ವಿಶೇಷ ಪ್ರಾಕೃತಿಕ ಸ್ಮಾರಕ”ವಾಗಿ ವರ್ಗೀಕರಿಸಲ್ಪಟ್ಟಿವೆ. ಕೊಕ್ಕರೆಗಳು ಅಜೀವ ಪರ್ಯಂತ ಜೊತೆಯಾಗಿ ಇರುವುದರಿಂದ ಮತ್ತು 50 ಅಥವಾ ಹೆಚ್ಚು ವರ್ಷ ಬದುಕಬಹುದಾದುದರಿಂದ, ಜಪಾನಿನವರು ಅವನ್ನು ದಾಂಪತ್ಯ ನಿಷ್ಠೆಯ ಮಾದರಿಯಾಗಿ ಪರಿಗಣಿಸುತ್ತಾರೆ.
ದೇವರ ಪ್ರೀತಿಯ ಕುರಿತಾಗಿ ಏನು? ರಸಕರವಾಗಿಯೇ ಬೈಬಲು, ಯೆಹೋವನು ತನ್ನ ನಿಷ್ಠಾವಂತರಿಗೆ ಕೊಡುವ ಪ್ರೀತಿಯ ಸಂರಕ್ಷಣೆಯನ್ನು, ತಾಯಿ ಹಕ್ಕಿ ತನ್ನ ಮರಿಗಳನ್ನು ಪ್ರಕೃತಿಶಕ್ತಿಗಳಿಂದ ಮರೆಮಾಡಲು ರೆಕ್ಕೆಯನ್ನು ಬಳಸುವುದಕ್ಕೆ ಹೋಲಿಸುತ್ತದೆ. “ತನ್ನ ಗೂಡನ್ನು ಕದಡಿಸಿ, ತನ್ನ ಮರಿಗಳ ಮೇಲೆ ಹಾರಾಡಿ, ತನ್ನ ರೆಕ್ಕೆಗಳನ್ನು ಹರಡಿ, ಅವನ್ನು ತೆಗೆದುಕೊಂಡು, ಹಾರುಗರಿಯ ಮೇಲೆ ಅವುಗಳನ್ನು ಹೊತ್ತುಕೊಳ್ಳು”ವ ಹದ್ದಿನ ಕುರಿತಾಗಿ ಧರ್ಮೋಪದೇಶಕಾಂಡ 32:11 (NW) ಮಾತಾಡುತ್ತದೆ. ಮರಿಯು ಗೂಡನ್ನು ಬಿಟ್ಟು ಹಾರುವಂತೆ ಪ್ರೋತ್ಸಾಹಿಸಲು ಜನ್ಮದಾತ ಹದ್ದು ಈ ಸಂಗತಿಗಳನ್ನು ಮಾಡುತ್ತದೆ. ಕಂಡಿರುವುದು ವಿರಳವಾಗಿರುವುದಾದರೂ, ಹದ್ದುಗಳು ಅವುಗಳ ಮರಿಗಳನ್ನು ತಮ್ಮ ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವ ಮೂಲಕ ಸಹಾಯ ಮಾಡಿರುವ ಸಂದರ್ಭಗಳ ವದಂತಿ ಇದೆ.—ಕೀರ್ತನೆ 17:8.
ನಮ್ಮ ಸುತ್ತಲಿನ ಪ್ರಾಕೃತಿಕ ಜಗತ್ತನ್ನು ನಾವು ನಿಕಟವಾಗಿ ದೃಷ್ಟಿಸುವಾಗ, ದೇವರ ವ್ಯಕ್ತಿತ್ವದ ವಿಷಯಾಂಶಗಳನ್ನು ಸಹ ಪ್ರಕಟಿಸುವ ನಿರ್ದಿಷ್ಟ ಮೂಲತತ್ವಗಳು ಕಾರ್ಯನಡಿಸುವುದನ್ನು ಗಮನಿಸುತ್ತೇವೆ.
ವೈವಿಧ್ಯವೇ ಜೀವನದ ಸಾರ್ವಸ್ಯ
ಕೂಡಲೆ ಸ್ಪಷ್ಟವಾಗಿಗುವ ದೇವರ ಕೈಕೆಲಸದ ಒಂದು ವಿಷಯಾಂಶವು ವೈವಿಧ್ಯತೆಯಾಗಿದೆ. ಸಸ್ಯಗಳು, ಪಕ್ಷಿಗಳು, ಪ್ರಾಣಿಗಳು, ಮತ್ತು ಕೀಟಗಳಲ್ಲಿರುವ ವೈವಿಧ್ಯವು ದಿಗ್ಭಮ್ರೆಗೊಳಿಸುವಂತಹದ್ದಾಗಿದೆ. ಕೇವಲ ಎರಡೂವರೆ ಎಕ್ರೆಯ ಉಷ್ಣವಲಯ ಅರಣ್ಯದಲ್ಲಿ 300 ವಿವಿಧ ಜಾತಿಯ ಮರಗಳು, 41,000 ಜಾತಿಯ ಕೀಟಗಳು ಅಡಕವಾಗಿರಬಹುದು; ಮೂರು ಚದರ ಕಿಲೊಮೀಟರ್ 1,500 ಜಾತಿಯ ಚಿಟ್ಟೆಗಳ ತವರಾಗಿರಬಹುದು; ಮತ್ತು ಒಂದು ಒಂಟಿ ಮರವು 150 ಜಾತಿಯ ಜೀರುಂಡೆಗಳಿಗೆ ಬೀಡಾಗಿರಬಲ್ಲದು! ಮತ್ತು ಸರಿಯಾಗಿ ಒಂದೇ ತೆರದ ಎರಡು ವ್ಯಕ್ತಿಗಳು ಹೇಗೆ ಇಲ್ಲವೋ, ಹಾಗೆಯೇ ಓಕ್ ಮರಗಳು ಅಥವಾ ಹುಲಿಗಳ ವಿಷಯದಲ್ಲೂ ಹೇಳಸಾಧ್ಯವಿದೆ. ಮಾನವ ಕಲಾಕಾರರಲ್ಲಿ ಗೌರವಿಸಲ್ಪಡುವ ಒಂದು ಗುಣವಾದ ಮೂಲಭೂತತೆಯು, ನಿಸರ್ಗದ ಸ್ವಾಭಾವಿಕವಾದ ಭಾಗವಾಗಿದೆ.
ನಿಶ್ಚಯವಾಗಿ, ನಿಸರ್ಗದ ಕಲೆಯ ಕೆಲವೇ ವಿಷಯಾಂಶಗಳನ್ನು ನಾವು ಸಂಕ್ಷೇಪವಾಗಿ ತಿಳಿಸಿದ್ದೇವೆ. ಅದನ್ನು ಅಧಿಕ ನಿಕಟವಾಗಿ ವೀಕ್ಷಿಸುವ ಮೂಲಕ, ದೇವರ ವ್ಯಕ್ತಿತ್ವದ ಬೇರೆ ಅನೇಕ ವಿಷಯಗಳನ್ನು ನಾವು ಗ್ರಹಿಸಬಲ್ಲೆವು. ಆದರೆ ಹಾಗೆ ಮಾಡುವುದಕ್ಕೆ ನಮ್ಮ ದೈವದತ್ತ ಕಲಾ ಸೌಂದರ್ಯದ ಗ್ರಹಣಶಕ್ತಿಯನ್ನು ಅನ್ವಯಿಸುವ ಅಗತ್ಯವಿದೆ. ಅತ್ಯಂತ ಮಹಾನ್ ಕಲಾಕಾರನ ಕಲೆಯನ್ನು ಉತ್ತಮವಾಗಿ ಗಣ್ಯಮಾಡಲು ನಾವು ಹೇಗೆ ಕಲಿಯಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
a ಅಮೆರಿಕದ ಉಷ್ಣವಲಯದ ಹೊಳೆಯುವ ನೀಲ ಮೋರ್ಫಸ್ನಂತಹ ಅನೇಕ ಚಿಟ್ಟೆಗಳಿಗೆ ಅವುಗಳ ರೆಕ್ಕೆಗಳ ಮೇಲೆ ವಿವಿಧ ವರ್ಣಸ್ಫುರಣದ ಪೊರೆಗಳಿವೆ.
[ಪುಟ 33 ರಲ್ಲಿರುವ ಚೌಕ]
ನಮ್ಮನ್ನು ಇಲ್ಲಿ ಇಟ್ಟವರಾರೆಂದು ನಾವು ತಿಳಿಯುವ ಅಗತ್ಯವಿದೆ
ಬೈಬಲ್ ಭಾಷಾಂತರಕಾರ ರಾನಲ್ಡ್ ನಾಕ್ಸ್, ವಿಜ್ಞಾನಿ ಜಾನ್ ಸ್ಕಾಟ್ ಹಾಲ್ಡೇನ್ ಇವರೊಂದಿಗೆ ದೇವತಾಶಾಸ್ತ್ರದ ಒಂದು ಚರ್ಚೆಯಲ್ಲಿ ಒಮ್ಮೆ ಭಾಗಿಗಳಾಗಿದ್ದರು. “ವಿಶ್ವದಲ್ಲಿ ಲಕ್ಷಾಂತರ ಗ್ರಹಗಳು ಅಡಕವಾಗಿರುವಾಗ, ಕಡಿಮೆಪಕ್ಷ ಅವುಗಳಲ್ಲಿ ಒಂದರಲ್ಲಾದರೂ ಜೀವವು ಕಂಡುಬರಬೇಕೆಂಬುದು ಸಂಭವನೀಯವಲ್ಲವೋ?” ಎಂದು ತರ್ಕಿಸಿದರು ಹಾಲ್ಡೇನ್.
“ಸರ್,” ಉತ್ತರಿಸಿದರು ನಾಕ್ಸ್, “ಒಂದು ವೇಳೆ ಸ್ಕಾಟ್ಲೆಂಡ್ ಯಾರ್ಡ್ (ಲಂಡನ್ನಿನ ಪೊಲೀಸು ದಳ), ನಿಮ್ಮ ಕೋಣೆಯ ಟ್ರಂಕಿನಲ್ಲಿ ಒಂದು ಮೃತ ದೇಹವನ್ನು ಕಂಡುಕೊಂಡಲ್ಲಿ, ನೀವು ಅವರಿಗೆ: ‘ಜಗತ್ತಿನಲ್ಲಿ ಲಕ್ಷಾಂತರ ಟ್ರಂಕುಗಳಿವೆ—ನಿಶ್ಚಯವಾಗಿ ಅವುಗಳಲ್ಲೊಂದರಲ್ಲಿ ಒಂದು ಮೃತ ದೇಹವು ಇರಲೇಬೇಕು,’ ಎಂದು ಉತ್ತರಿಸುವಿರೋ? ಅದನ್ನು ಅಲ್ಲಿ ಇಟ್ಟವರಾರು ಎಂದು ಅವರು ಮತ್ತೂ ತಿಳಿಯಬಯಸುವರೆಂದು ನನ್ನೆಣಿಕೆ.”—ದ ಲಿಟ್ಲ್, ಬ್ರೌನ್ ಬುಕ್ ಆಫ್ ಆ್ಯನೆಕ್ಡೋಟ್ಸ್.
ನಮ್ಮ ಕುತೂಹಲವನ್ನು ತೃಪ್ತಿಗೊಳಿಸುವುದಲ್ಲದೆ, ನಮ್ಮನ್ನು ಇಲ್ಲಿ ಇಟ್ಟವರಾರು ಎಂದು ನಾವು ತಿಳಿಯಲೇಬೇಕಾದ ಇನ್ನೊಂದು ಕಾರಣವಿದೆ—ಇದರಿಂದ ನಾವು ಆತನಿಗೆ ತಕ್ಕದಾದ್ದ ಪ್ರಶಸ್ತಿಯನ್ನು ಕೊಡಬಲ್ಲೆವು. ಒಬ್ಬ ಜಂಬದ ಟೀಕಾಕಾರನು ಒಬ್ಬ ಕುಶಲ ಕಲಾಕಾರನ ಕೃತಿಯನ್ನು ಅದು ಬರೇ ಒಂದು ಬಣ್ಣದಂಗಡಿಯ ದುರಂತವೆಂದು ಬಣ್ಣಿಸಿದಲ್ಲಿ, ಅವನು ಹೇಗೆ ಪ್ರತಿಕ್ರಿಯಿಸುವನು? ತದ್ರೀತಿ, ವಿಶ್ವದ ನಿರ್ಮಾಣಿಕನ ಕಲಾ ಕೌಶಲವನ್ನು ಕುರುಡು ಆಕಸ್ಮಿಕ ಘಟನೆಯಾಗಿ ಅಧ್ಯಾರೋಪಿಸುವುದಕ್ಕಿಂತ ಹೆಚ್ಚಿನದಾದ ಬೇರೆ ಯಾವ ಮುಖಭಂಗವನ್ನು ನಾವು ಆತನಿಗೆ ಮಾಡಸಾಧ್ಯವಿದೆ?
[ಕೃಪೆ]
Courtesy of ROE/Anglo-Australian Observatory, photograph by David Malin
[ಪುಟ 34 ರಲ್ಲಿರುವ ಚಿತ್ರಗಳು]
ಕೊಕ್ಕರೆಗಳು ಹಾರಾಟದಲ್ಲಿ
ಸ್ಪೆಯ್ನ್ನ ಅಲಮ್ಟಿರದಲ್ಲಿ ಗುಹೆ ವರ್ಣಚಿತ್ರಗಳು
[ಪುಟ 35 ರಲ್ಲಿರುವ ಚಿತ್ರಗಳು]
ಹಂದಿಮೀನುಗಳು, ಹಮಿಂಗ್ಬರ್ಡ್ಗಳು, ಮತ್ತು ಜಲಪಾತಗಳು, ಎಲ್ಲವು ಆ ಮಹಾ ಕಲಾಕಾರನ ವ್ಯಕ್ತಿತ್ವದ ವಿಷಯಾಂಶಗಳನ್ನು ಪ್ರಕಟಿಸುತ್ತವೆ
[Credit Lines]
Godo-Foto
G. C. Kelley, Tucson, AZ
Godo-Foto