-
ನಿರರ್ಗಳವಾಗಿ ಭಾಷಣ ನೀಡುವುದುದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
-
-
ಅಧ್ಯಾಯ 4
ನಿರರ್ಗಳವಾಗಿ ಭಾಷಣ ನೀಡುವುದು
ಗಟ್ಟಿಯಾಗಿ ಓದುವ ಸಮಯದಲ್ಲಿ ಕೆಲವು ಅಭಿವ್ಯಕ್ತಿಗಳನ್ನು ಉಚ್ಚರಿಸುವಾಗ ನೀವು ಮುಗ್ಗರಿಸುತ್ತೀರೊ? ಅಥವಾ, ಭಾಷಣ ಕೊಡಲಿಕ್ಕಾಗಿ ನೀವು ಸಭಿಕರ ಮುಂದೆ ಹೋಗುವಾಗ, ಕೆಲವೊಮ್ಮೆ ಸರಿಯಾದ ಪದಕ್ಕಾಗಿ ಹುಡುಕಾಡುತ್ತಿದ್ದೀರೆಂದು ನಿಮಗನಿಸುತ್ತದೊ? ಹಾಗಿರುವಲ್ಲಿ, ನಿಮಗೆ ನಿರರ್ಗಳವಾಗಿ ಮಾತಾಡುವ ವಿಷಯದಲ್ಲಿ ಸಮಸ್ಯೆಯಿದೆ. ನಿರರ್ಗಳವಾಗಿ ಮಾತಾಡುವಂಥ ಒಬ್ಬ ವ್ಯಕ್ತಿಯು ಯಾವ ರೀತಿಯಲ್ಲಿ ಓದುತ್ತಾನೆ ಹಾಗೂ ಮಾತನಾಡುತ್ತಾನೆಂದರೆ, ಅವನ ಮಾತುಗಳೂ ಆಲೋಚನೆಗಳೂ ಸಾಕಷ್ಟು ಸರಾಗವಾಗಿ ಹರಿಯುತ್ತವೆ. ಅವನು ಸದಾ ಮಾತಾಡುತ್ತಾ ಇರುತ್ತಾನೆ, ಅತಿ ಶೀಘ್ರವಾಗಿ ಮಾತಾಡುತ್ತಾನೆ ಇಲ್ಲವೆ ಸ್ವಲ್ಪವೂ ಆಲೋಚಿಸದೆ ಮಾತಾಡುತ್ತಾನೆಂದು ಇದರ ಅರ್ಥವಲ್ಲ. ಅವನ ಭಾಷಣವು ಹಿತಕರವಾಗಿರುತ್ತದೆ ಮತ್ತು ಆಕರ್ಷಕವಾಗಿರುತ್ತದೆಂಬುದು ಇದರ ಅರ್ಥ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನಿರರ್ಗಳತೆಗೆ ವಿಶೇಷ ಗಮನವನ್ನು ಕೊಡಲಾಗುತ್ತದೆ.
ನಿರರ್ಗಳತೆಯ ಕೊರತೆಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಈ ಕೆಳಗಿನ ಅಂಶಗಳಲ್ಲಿ ಯಾವುದಕ್ಕಾದರೂ ನೀವು ವಿಶೇಷ ಗಮನವನ್ನು ಕೊಡಬೇಕಾಗಿದೆಯೋ? (1) ಇತರರ ಮುಂದೆ ಓದುವಾಗ, ಕೆಲವು ಪದಗಳು ಅಪರಿಚಿತವಾಗಿರುವುದು ಹಿಂಜರಿಕೆಯನ್ನು ಉಂಟುಮಾಡಬಹುದು. (2) ಅನೇಕ ಕಡೆಗಳಲ್ಲಿ ನಿಲ್ಲಿಸಿ ನಿಲ್ಲಿಸಿ ಮಾತಾಡುವುದು, ತುಂಡುತುಂಡಾದ ಮಾತಾಗಿ ಪರಿಣಮಿಸಬಹುದು. (3) ತಯಾರಿಯ ಕೊರತೆಯು ಈ ಸಮಸ್ಯೆಗೆ ಕಾರಣವಾಗಿರಬಹುದು. (4) ಒಂದು ಗುಂಪಿನ ಮುಂದೆ ಮಾತಾಡುವಾಗ, ನಿರರ್ಗಳತೆಯ ಕೊರತೆಗೆ ಕಾರಣವಾಗಿರುವ ಸಾಮಾನ್ಯ ಅಂಶವು, ಭಾಷಣದ ವಿಷಯವನ್ನು ತಾರ್ಕಿಕವಾಗಿ ಸಂಘಟಿಸದಿರುವುದೇ ಆಗಿದೆ. (5) ಮಿತವಾದ ಶಬ್ದಭಂಡಾರವು, ಒಬ್ಬ ವ್ಯಕ್ತಿಯು ಸರಿಯಾದ ಪದಗಳಿಗಾಗಿ ಹುಡುಕಾಡುವಾಗ ಅವನು ಸ್ವಲ್ಪ ಹಿಂಜರಿಯುವಂತೆ ಮಾಡಬಹುದು. (6) ತೀರ ಹೆಚ್ಚು ಪದಗಳನ್ನು ಒತ್ತಿಹೇಳುವಾಗ, ನಿರರ್ಗಳತೆಗೆ ತಡೆಯುಂಟಾಗಬಹುದು. (7) ವ್ಯಾಕರಣ ನಿಯಮಗಳ ಪರಿಚಯದ ಕೊರತೆಯು ಈ ಸಮಸ್ಯೆಗೆ ಹೆಚ್ಚನ್ನು ಕೂಡಿಸಬಹುದು.
ನಿಮ್ಮ ಭಾಷಣದಲ್ಲಿ ನಿರರ್ಗಳತೆಯ ಕೊರತೆ ಇರುವುದಾದರೆ, ರಾಜ್ಯ ಸಭಾಗೃಹದಲ್ಲಿರುವ ಸಭಿಕರು ಅಕ್ಷರಾರ್ಥವಾಗಿ ಎದ್ದು ಹೊರಗೆ ಹೋಗಲಿಕ್ಕಿಲ್ಲವಾದರೂ, ಅವರ ಮನಸ್ಸುಗಳು ಅಲೆದಾಡಬಹುದು. ಇದರ ಫಲವಾಗಿ, ನೀವು ಏನು ಹೇಳುತ್ತೀರೋ ಅದರಲ್ಲಿ ಹೆಚ್ಚಿನದ್ದು ನಷ್ಟವಾಗಬಹುದು.
ಇನ್ನೊಂದು ಕಡೆಯಲ್ಲಿ, ಬಲವತ್ತಾದದ್ದೂ ನಿರರ್ಗಳವಾದದ್ದೂ ಆಗಿರಬೇಕಾದ ಭಾಷಣವು ಉದ್ಧಟತನದ್ದು, ಪ್ರಾಯಶಃ ಸಭಿಕರನ್ನು ಪೇಚಾಟಕ್ಕೊಳಪಡಿಸುವಂತಹದ್ದು ಆಗಿ ಪರಿಣಮಿಸದಂತೆ ಜಾಗ್ರತೆ ವಹಿಸತಕ್ಕದ್ದು. ಸಾಂಸ್ಕೃತಿಕ ಹಿನ್ನೆಲೆಯಲ್ಲಿರುವ ವ್ಯತ್ಯಾಸದ ಕಾರಣ ನಿಮ್ಮ ಭಾಷಣವನ್ನು ಜನರು ಅಧಿಕಪ್ರಸಂಗದಂತೆ ಅಥವಾ ಯಥಾರ್ಥತೆಯ ಕೊರತೆಯುಳ್ಳದ್ದಾಗಿರುವಂತೆ ಪರಿಗಣಿಸುವುದಾದರೆ, ನಿಮ್ಮ ಭಾಷಣದ ಉದ್ದೇಶದಲ್ಲಿ ನೀವು ಸೋತುಹೋದಂತಾಗುವುದು. ಅಪೊಸ್ತಲ ಪೌಲನು ಒಬ್ಬ ಅನುಭವಸ್ಥ ಭಾಷಣಕರ್ತನಾಗಿದ್ದರೂ, ಅನಾವಶ್ಯಕವಾದ ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳದಂತೆ ಅವನು ಕೊರಿಂಥದವರನ್ನು “ಬಲಹೀನನೂ ಭಯಪಡುವವನೂ ಬಹು ನಡುಗುವವನೂ” ಆಗಿ ಸಮೀಪಿಸಿದ ವಿಷಯವು ಗಮನಾರ್ಹವಾಗಿದೆ.—1 ಕೊರಿಂ. 2:3.
ತ್ಯಜಿಸಬೇಕಾದ ಅಭ್ಯಾಸಗಳು. ಅನೇಕರು ಮಾತನಾಡುವಾಗ “ಮತ್ತು-ಅ. . .ಅ” ಎಂಬಂಥ ಅಭಿವ್ಯಕ್ತಿಗಳನ್ನು ಅತಿಯಾಗಿ ಒಳಗೂಡಿಸುವ ರೂಢಿಯುಳ್ಳವರಾಗಿರುತ್ತಾರೆ. ಇತರರು ಪದೇ ಪದೇ “ಈಗ” ಎಂಬ ಪದದಿಂದ ಒಂದು ವಿಷಯವನ್ನು ಆರಂಭಿಸುತ್ತಾರೆ ಅಥವಾ ಅವರು ಹೇಳುತ್ತಿರುವ ಪ್ರತಿಯೊಂದು ವಿಷಯಕ್ಕೂ “ನಿಮಗೆ ತಿಳಿದೇ ಇದೆ” ಅಥವಾ “ಗೊತ್ತೇ ಇದೆ” ಎಂಬ ಪದಗುಚ್ಛವನ್ನು ಸೇರಿಸಿಬಿಡುತ್ತಾರೆ. ನೀವು ಇಂತಹ ಪದಗಳನ್ನು ಎಷ್ಟು ಬಾರಿ ಉಪಯೋಗಿಸುತ್ತೀರೆಂಬ ಪ್ರಜ್ಞೆ ನಿಮಗಿರಲಿಕ್ಕಿಲ್ಲ. ಆದಕಾರಣ, ನೀವು ಒಂದು ಪ್ರ್ಯಾಕ್ಟಿಸ್ ಸೆಷನ್ ಅನ್ನು ಮಾಡಲು ಪ್ರಯತ್ನಿಸಿ, ಆ ಸಮಯದಲ್ಲಿ ಇನ್ನೊಬ್ಬರು ನೀವು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದು, ನೀವು ಅಂತಹ ಪದಗಳನ್ನು ಉಪಯೋಗಿಸಿದಾಗೆಲ್ಲ ಅದನ್ನು ಅವರು ಪುನರುಚ್ಚರಿಸುವಂತೆ ಕೇಳಿಕೊಳ್ಳಬಹುದು. ಆಗ ಅದನ್ನು ಎಷ್ಟು ಬಾರಿ ಉಪಯೋಗಿಸುತ್ತೀರೆಂಬುದನ್ನು ತಿಳಿದು ನಿಮಗೇ ಆಶ್ಚರ್ಯವಾಗಬಹುದು.
ಕೆಲವರು ಓದುವಾಗ ಮತ್ತು ಮಾತನಾಡುವಾಗ ಅನೇಕಾವರ್ತಿ ಹಿಂದಕ್ಕೆ ಹೋಗಿ, ಓದಿದ್ದನ್ನೇ ಪುನಃ ಓದುತ್ತಾರೆ ಇಲ್ಲವೆ ಹೇಳಿದ್ದನ್ನೇ ಪುನಃ ಹೇಳುತ್ತಾರೆ. ಅಂದರೆ, ಅವರು ಒಂದು ವಾಕ್ಯವನ್ನು ಆರಂಭಿಸಿದ ಬಳಿಕ, ಮಧ್ಯದಲ್ಲಿ ನಿಲ್ಲಿಸುತ್ತಾರೆ ಮತ್ತು ತಾವು ಈಗಾಗಲೇ ಹೇಳಿರುವ ವಿಷಯದಲ್ಲಿ ಒಂದು ಭಾಗವನ್ನಾದರೂ ಪುನಃ ಹೇಳುತ್ತಾರೆ.
ಇನ್ನು ಕೆಲವರು ಸಾಕಷ್ಟು ವೇಗವಾಗಿ ಮಾತಾಡುತ್ತಾರೆ ನಿಜ, ಆದರೆ ಅವರು ಒಂದು ವಿಚಾರವನ್ನು ಹೇಳುತ್ತಾ ಹೋಗುವಾಗ ವಾಕ್ಯದ ಮಧ್ಯದಲ್ಲಿ ನಿಲ್ಲಿಸಿ ಇನ್ನೊಂದು ವಿಚಾರಕ್ಕೆ ಹೋಗಿಬಿಡುತ್ತಾರೆ. ಮಾತುಗಳು ಸರಾಗವಾಗಿ ಹೊರಬರುತ್ತವಾದರೂ, ವಿಚಾರಗಳಲ್ಲಿ ಥಟ್ಟನೆ ಆಗುವ ಬದಲಾವಣೆಗಳು ನಿರರ್ಗಳತೆಯನ್ನು ಕುಂದಿಸುತ್ತವೆ.
ಉತ್ತಮಗೊಳಿಸುವ ವಿಧ. ಸರಿಯಾದ ಪದಕ್ಕಾಗಿ ಹುಡುಕಾಡುವುದು ನಿಮ್ಮ ಸಮಸ್ಯೆಯಾಗಿರುವಲ್ಲಿ, ನಿಮ್ಮ ಶಬ್ದಭಂಡಾರವನ್ನು ಹೆಚ್ಚಿಸಲು ನೀವು ಬಹಳಷ್ಟು ಪ್ರಯತ್ನವನ್ನು ಮಾಡುವ ಅಗತ್ಯವಿದೆ. ನೀವು ಓದುತ್ತಿರುವ ಕಾವಲಿನಬುರುಜು, ಎಚ್ಚರ! ಪತ್ರಿಕೆಗಳಲ್ಲಿ ಮತ್ತು ಬೇರೆ ಸಾಹಿತ್ಯಗಳಲ್ಲಿ ನಿಮಗೆ ಅಪರಿಚಿತವಾಗಿರುವ ಪದಗಳನ್ನು ವಿಶೇಷವಾಗಿ ಗಮನಿಸಿರಿ. ಶಬ್ದಕೋಶವನ್ನು ತೆರೆದು ಇವುಗಳ ಉಚ್ಚಾರಣೆ ಮತ್ತು ಅರ್ಥವನ್ನು ನೋಡಿರಿ, ಮತ್ತು ಇವುಗಳಲ್ಲಿ ಕೆಲವು ಪದಗಳನ್ನು ನಿಮ್ಮ ಶಬ್ದಭಂಡಾರಕ್ಕೆ ಸೇರಿಸಿರಿ. ಒಂದು ಶಬ್ದಕೋಶವು ನಿಮಗೆ ಲಭ್ಯವಿಲ್ಲದಿರುವಲ್ಲಿ, ಭಾಷೆಯನ್ನು ಚೆನ್ನಾಗಿ ಬಲ್ಲವರಿಂದ ಸಹಾಯವನ್ನು ಕೇಳಿಕೊಳ್ಳಿ.
ಕ್ರಮವಾಗಿ ಗಟ್ಟಿಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಈ ಅಭಿವೃದ್ಧಿಗೆ ಸಹಾಯಮಾಡುವುದು. ಕಷ್ಟಕರವಾದ ಪದಗಳನ್ನು ಗಮನಿಸಿ, ಅವುಗಳನ್ನು ಅನೇಕಾವರ್ತಿ ಗಟ್ಟಿಯಾಗಿ ಉಚ್ಚರಿಸಿ.
ನಿರರ್ಗಳವಾಗಿ ಓದಬೇಕಾದರೆ, ಒಂದು ವಾಕ್ಯದಲ್ಲಿ ಪದಗಳು ಹೇಗೆ ಒಟ್ಟುಗೂಡಿ ಕೆಲಸಮಾಡುತ್ತವೆಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಲೇಖಕನಿಂದ ವ್ಯಕ್ತಪಡಿಸಲ್ಪಟ್ಟ ವಿಚಾರವನ್ನು ತಿಳಿಯಪಡಿಸಲಿಕ್ಕಾಗಿ, ಸಾಮಾನ್ಯವಾಗಿ ಪದಗಳನ್ನು ಒಟ್ಟುಗೂಡಿಸಿ ಗುಂಪಾಗಿ ಓದುವ ಅಗತ್ಯವಿದೆ. ಇಂಥ ಪದಸಮೂಹಗಳಿಗೆ ವಿಶೇಷವಾಗಿ ಗಮನಕೊಡಿರಿ. ನಿಮಗೆ ಸಹಾಯಕರವಾಗಿರುವಲ್ಲಿ, ಅವುಗಳಿಗೆ ಗುರುತು ಹಾಕಿರಿ. ಕೇವಲ ಪದಗಳನ್ನು ಸರಿಯಾಗಿ ಓದುವುದು ನಿಮ್ಮ ಉದ್ದೇಶವಾಗಿರುವುದಿಲ್ಲ, ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವುದೂ ನಿಮ್ಮ ಉದ್ದೇಶವಾಗಿದೆ. ನೀವು ಒಂದು ವಾಕ್ಯವನ್ನು ವಿಶ್ಲೇಷಿಸಿದ ಬಳಿಕ ಮುಂದಿನ ವಾಕ್ಯಕ್ಕೆ ಹೋಗಿ, ಹೀಗೆ ಇಡೀ ಪ್ಯಾರಗ್ರಾಫನ್ನು ಅಧ್ಯಯನ ಮಾಡಿರಿ. ಅದರಲ್ಲಿರುವ ವಿಚಾರಧಾರೆಯ ಪರಿಚಯ ಮಾಡಿಕೊಳ್ಳಿರಿ. ಬಳಿಕ ಅದನ್ನು ಗಟ್ಟಿಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ನೀವು ತಡವರಿಸದೆ ಓದುವ ತನಕ ಮತ್ತು ತಪ್ಪಾದ ಸ್ಥಳಗಳಲ್ಲಿ ನಿಲ್ಲಿಸದೆ ಓದುವ ತನಕ, ಇಡೀ ಪ್ಯಾರಗ್ರಾಫನ್ನು ಪದೇ ಪದೇ ಓದಿರಿ. ಆ ಬಳಿಕ ಇತರ ಪ್ಯಾರಗ್ರಾಫ್‌ಗಳಿಗೆ ಹೋಗಿರಿ.
ತದನಂತರ, ನಿಮ್ಮ ವೇಗವನ್ನು ಹೆಚ್ಚಿಸಿರಿ. ಒಂದು ವಾಕ್ಯದಲ್ಲಿರುವ ಪದಗಳು ಹೇಗೆ ಒಟ್ಟುಗೂಡಿ ಕೆಲಸಮಾಡುತ್ತವೆಂಬುದನ್ನು ನೀವು ಗಣ್ಯಮಾಡಲು ಆರಂಭಿಸಿರುವಲ್ಲಿ, ನೀವು ಒಂದು ಸಲಕ್ಕೆ ಒಂದೇ ಪದವನ್ನಲ್ಲ, ಬದಲಾಗಿ ಅದಕ್ಕಿಂತ ಹೆಚ್ಚು ಪದಗಳನ್ನು ನೋಡಲು ಮತ್ತು ಮುಂದೆ ಏನು ಬರಬಹುದೆಂಬುದನ್ನು ನಿರೀಕ್ಷಿಸಲು ಶಕ್ತರಾಗುವಿರಿ. ಇದು ನಿಮ್ಮ ವಾಚನವು ಪರಿಣಾಮಕಾರಿಯಾಗಿರಲು ಹೆಚ್ಚು ಸಹಾಯಮಾಡುವುದು.
ಮುನ್‌ತಯಾರಿಯಿಲ್ಲದೆ ಓದುವುದನ್ನು ಕ್ರಮವಾಗಿ ಅಭ್ಯಾಸ ಮಾಡುವುದು, ಅಮೂಲ್ಯವಾದ ತರಬೇತಿಯಾಗಿರಬಲ್ಲದು. ಉದಾಹರಣೆಗೆ, ಮುಂಚಿತವಾಗಿ ತಯಾರಿಸದೇ, ದಿನದ ವಚನವನ್ನು ಮತ್ತು ಹೇಳಿಕೆಗಳನ್ನು ಗಟ್ಟಿಯಾಗಿ ಓದಿರಿ; ಇದನ್ನು ಕ್ರಮವಾಗಿ ಪ್ರತಿ ದಿನ ಮಾಡಿರಿ. ನಿಮ್ಮ ಕಣ್ಣು ಒಮ್ಮೆಗೆ ಒಂದು ಪದವನ್ನು ನೋಡುವ ಬದಲಿಗೆ, ಪೂರ್ಣ ವಿಚಾರಗಳನ್ನು ವ್ಯಕ್ತಪಡಿಸುವ ಪದಗಳನ್ನು ಗುಂಪಾಗಿ ನೋಡುವಂತೆ ಅನುಮತಿಸುವ ರೂಢಿಮಾಡಿಕೊಳ್ಳಿರಿ.
ಸಂಭಾಷಣೆಯಲ್ಲಿ ನಿರರ್ಗಳತೆಯು, ನೀವು ಮಾತಾಡುವ ಮೊದಲು ಯೋಚಿಸುವುದನ್ನು ಅಗತ್ಯಪಡಿಸುತ್ತದೆ. ಇದನ್ನು ನಿಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ರೂಢಿಮಾಡಿಕೊಳ್ಳಿರಿ. ನೀವು ಯಾವ ವಿಚಾರಗಳನ್ನು ಮಾತಾಡಬೇಕೆಂದಿದ್ದೀರಿ ಮತ್ತು ಯಾವ ಕ್ರಮದಲ್ಲಿ ಅವುಗಳನ್ನು ತಿಳಿಸಲಿದ್ದೀರಿ ಎಂಬುದನ್ನು ನಿರ್ಣಯಿಸಿ; ಬಳಿಕ ಮಾತಾಡಲು ಆರಂಭಿಸಿರಿ. ಅವಸರದಿಂದ ಮಾತಾಡಬೇಡಿ. ಮಧ್ಯದಲ್ಲಿ ನಿಲ್ಲಿಸದೆ ಅಥವಾ ಮಧ್ಯದಲ್ಲಿ ವಿಚಾರವನ್ನು ಬದಲಾಯಿಸದೆ ಪೂರ್ತಿ ಆಲೋಚನೆಯನ್ನು ತಿಳಿಯಪಡಿಸಲು ಪ್ರಯತ್ನಿಸಿ. ಚಿಕ್ಕದಾದ, ಸರಳ ವಾಕ್ಯಗಳನ್ನು ಬಳಸುವುದನ್ನು ನೀವು ಸಹಾಯಕರವಾಗಿ ಕಂಡುಕೊಳ್ಳಬಹುದು.
ನೀವು ಏನು ಹೇಳಬೇಕೆಂದಿದ್ದೀರೊ ಅದು ನಿಮಗೆ ಸರಿಯಾಗಿ ತಿಳಿದಿರುವುದಾದರೆ, ಪದಗಳು ಸಹಜವಾಗಿಯೇ ಹೊರಬರುವವು. ಸಾಮಾನ್ಯವಾಗಿ ಹೇಳುವುದಾದರೆ, ನೀವು ಉಪಯೋಗಿಸಲಿರುವ ಪದಗಳನ್ನು ನೀವು ಆರಿಸಿಕೊಳ್ಳುವ ಅಗತ್ಯವಿಲ್ಲ. ವಾಸ್ತವದಲ್ಲಿ, ಪ್ರ್ಯಾಕ್ಟಿಸ್ ಮಾಡುವಾಗ, ನಿಮ್ಮ ಮನಸ್ಸಿನಲ್ಲಿ ವಿಚಾರವು ಸ್ಪಷ್ಟವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ; ಆ ಬಳಿಕ ನೀವು ಮಾತಾಡುತ್ತಾ ಇರುವಾಗ ಪದಗಳ ಕುರಿತಾಗಿ ಯೋಚಿಸಬಹುದು. ನೀವು ಹೀಗೆ ಮಾಡುವಲ್ಲಿ ಮತ್ತು ನೀವು ಮಾತಾಡುವ ಪದಗಳಿಗೆ ಬದಲಾಗಿ ವಿಷಯದ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸುವಲ್ಲಿ, ಪದಗಳು ಹೆಚ್ಚುಕಡಿಮೆ ತಮ್ಮಷ್ಟಕ್ಕೆ ತಾವೇ ಹೊರಬರುವವು ಮತ್ತು ನೀವು ನಿಮ್ಮ ಹೃದಯದಿಂದ ಮಾತಾಡುವಿರಿ. ಆದರೆ ವಿಚಾರಗಳ ಬದಲು ನೀವು ಪದಗಳ ಕುರಿತು ಯೋಚಿಸಲು ಆರಂಭಿಸಿದ ಕೂಡಲೆ, ನೀವು ತಡೆದು ತಡೆದು ಮಾತಾಡುವಂತಾಗಬಹುದು. ಪ್ರ್ಯಾಕ್ಟಿಸ್‌ನ ಫಲಿತಾಂಶವಾಗಿ, ಪರಿಣಾಮಕಾರಿಯಾದ ಭಾಷಣ ಮತ್ತು ವಾಚನದಲ್ಲಿ ಪ್ರಾಮುಖ್ಯ ಗುಣವಾಗಿರುವ ನಿರರ್ಗಳತೆಯನ್ನು ಬೆಳೆಸಿಕೊಳ್ಳುವುದರಲ್ಲಿ ನೀವು ಸಫಲರಾಗಬಲ್ಲಿರಿ.
ಇಸ್ರಾಯೇಲ್ ಜನಾಂಗಕ್ಕೆ ಮತ್ತು ಐಗುಪ್ತದ ಫರೋಹನ ಮುಂದೆ ಯೆಹೋವನನ್ನು ಪ್ರತಿನಿಧಿಸಲು ಮೋಶೆಯು ನೇಮಿಸಲ್ಪಟ್ಟಾಗ, ತಾನು ಸಮರ್ಥನಲ್ಲ ಎಂದು ಅವನಿಗನಿಸಿತು. ಏಕೆ? ಏಕೆಂದರೆ ಅವನು ನಿರರ್ಗಳವಾದ ಮಾತುಗಾರನಾಗಿರಲಿಲ್ಲ; ಅವನಿಗೆ ಮಾತಿನ ಅಡಚಣೆ ಇದ್ದಿರಬಹುದು. (ವಿಮೋ. 4:10; 6:12) ಮೋಶೆ ಕೆಲವು ನೆಪಗಳನ್ನು ಕೊಟ್ಟರೂ, ದೇವರು ಅವುಗಳಲ್ಲಿ ಯಾವುದನ್ನೂ ಒಪ್ಪಲಿಲ್ಲ. ಯೆಹೋವನು ಆರೋನನನ್ನು ವದನಕನಾಗಿ ಕಳುಹಿಸಿದರೂ ಮೋಶೆ ತಾನೇ ಮಾತಾಡುವಂತೆಯೂ ಯೆಹೋವನು ಸಹಾಯಮಾಡಿದನು. ಮೋಶೆಯು ಪದೇ ಪದೇ ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ಒಬ್ಬೊಬ್ಬರೊಂದಿಗೆ ಮತ್ತು ಚಿಕ್ಕ ಗುಂಪುಗಳೊಂದಿಗೆ ಮಾತ್ರವಲ್ಲ ಇಡೀ ಜನಾಂಗದೊಡನೆಯೂ ಮಾತನಾಡಿದನು. (ಧರ್ಮೋ. 1:1-4; 5:1; 29:2; 31:1, 2, 30; 33:1) ನೀವು ಯೆಹೋವನಲ್ಲಿ ಭರವಸೆಯನ್ನಿಟ್ಟು, ನಿಮ್ಮ ಮಾತಿನ ನಿರರ್ಗಳತೆಯನ್ನು ಉತ್ತಮಗೊಳಿಸಲಿಕ್ಕಾಗಿ ನಿಮ್ಮಿಂದಾದುದೆಲ್ಲವನ್ನೂ ಮಾಡುವಲ್ಲಿ, ದೇವರನ್ನು ಘನಪಡಿಸಲು ನೀವು ಸಹ ನಿಮ್ಮ ವಾಕ್ ಶಕ್ತಿಯನ್ನು ಉಪಯೋಗಿಸಬಲ್ಲಿರಿ.
-
-
ಸೂಕ್ತವಾದಲ್ಲಿ ನಿಲ್ಲಿಸಿ ಮಾತಾಡುವುದುದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
-
-
ಅಧ್ಯಾಯ 5
ಸೂಕ್ತವಾದಲ್ಲಿ ನಿಲ್ಲಿಸಿ ಮಾತಾಡುವುದು
ಮಾತಾಡುವಾಗ, ತಕ್ಕ ಸ್ಥಳಗಳಲ್ಲಿ ಸ್ವಲ್ಪ ನಿಲ್ಲಿಸುವುದು ಪ್ರಾಮುಖ್ಯವಾಗಿದೆ. ನೀವು ಒಂದು ಭಾಷಣವನ್ನು ಕೊಡುತ್ತಿರಲಿ, ಅಥವಾ ಒಬ್ಬ ವ್ಯಕ್ತಿಯೊಂದಿಗೆ ಮಾತಾಡುತ್ತಿರಲಿ ಇದು ಪ್ರಾಮುಖ್ಯ. ಇಂತಹ ನಿಲ್ಲಿಸುವಿಕೆಗಳು ಇಲ್ಲದಿರುವಲ್ಲಿ, ನಿಮ್ಮ ಮಾತು ಸ್ಪಷ್ಟವಾದ ಯೋಚನೆಗಳನ್ನು ಹೊರತರುವ ಬದಲು, ಕೇವಲ ಗುಳುಗುಳು ಸದ್ದಾಗಿ ಕೇಳಿಬರಬಹುದು. ಸೂಕ್ತ ಸ್ಥಳದಲ್ಲಿ ನಿಲ್ಲಿಸುವುದು, ನಿಮ್ಮ ಭಾಷಣಕ್ಕೆ ಸ್ಪಷ್ಟತೆಯನ್ನು ನೀಡಲು ಸಹಾಯಮಾಡುತ್ತದೆ. ನಿಮ್ಮ ಮುಖ್ಯಾಂಶಗಳು ಮನಸ್ಸಿನ ಮೇಲೆ ಬಾಳುವ ಪರಿಣಾಮವನ್ನು ಉಂಟುಮಾಡುವ ರೀತಿಯಲ್ಲಿಯೂ ನೀವು ಇದನ್ನು ಉಪಯೋಗಿಸಸಾಧ್ಯವಿದೆ.
ಯಾವಾಗ ನಿಲ್ಲಿಸಬೇಕೆಂಬುದನ್ನು ನೀವು ಹೇಗೆ ನಿರ್ಣಯಿಸುವಿರಿ? ಈ ನಿಲ್ಲಿಸುವಿಕೆಗಳು ಎಷ್ಟು ದೀರ್ಘವಾಗಿರಬೇಕು?
ವಿರಾಮಚಿಹ್ನೆಗಳಿರುವಲ್ಲಿ ನಿಲ್ಲಿಸುವುದು. ವಿರಾಮಚಿಹ್ನೆಗಳು ಲಿಖಿತ ಭಾಷೆಯ ಒಂದು ಪ್ರಾಮುಖ್ಯ ಭಾಗವಾಗಿ ಪರಿಣಮಿಸಿವೆ. ಅವು ಒಂದು ಹೇಳಿಕೆಯ ಅಥವಾ ಒಂದು ಪ್ರಶ್ನೆಯ ಅಂತ್ಯವನ್ನು ಸೂಚಿಸಬಹುದು. ಕೆಲವು ಭಾಷೆಗಳಲ್ಲಿ, ಉದ್ಧರಣಗಳನ್ನು ಎದ್ದುಕಾಣುವಂತೆ ಮಾಡಲು ಅವನ್ನು ಉಪಯೋಗಿಸಲಾಗುತ್ತದೆ. ಕೆಲವು ವಿರಾಮಚಿಹ್ನೆಗಳು, ವಾಕ್ಯದ ಒಂದು ಭಾಗಕ್ಕೆ ಇತರ ಭಾಗಗಳೊಂದಿಗಿರುವ ಸಂಬಂಧವನ್ನು ಸೂಚಿಸುತ್ತವೆ. ತನ್ನಷ್ಟಕ್ಕೇ ಓದಿಕೊಳ್ಳುತ್ತಿರುವ ಒಬ್ಬ ವ್ಯಕ್ತಿಯು ವಿರಾಮಚಿಹ್ನೆಗಳನ್ನು ನೋಡಸಾಧ್ಯವಿದೆ. ಆದರೆ ಅವನು ಇತರರ ಪ್ರಯೋಜನಾರ್ಥವಾಗಿ ಓದುವಾಗ, ಆ ಲಿಖಿತ ಭಾಗದಲ್ಲಿ ಕಂಡುಬರುವ ಯಾವುದೇ ವಿರಾಮಚಿಹ್ನೆಯ ಅರ್ಥವನ್ನು ಅವನ ಸ್ವರವು ತಿಳಿಯಪಡಿಸಬೇಕಾಗಿದೆ. (ಹೆಚ್ಚಿನ ವಿವರಗಳಿಗಾಗಿ, “ನಿಷ್ಕೃಷ್ಟ ವಾಚನ” ಎಂಬ ಮುಖ್ಯ ವಿಷಯವಿರುವ 1ನೆಯ ಪಾಠವನ್ನು ನೋಡಿ.) ವಿರಾಮಚಿಹ್ನೆಗಳು ಅಗತ್ಯಪಡಿಸುವಂಥ ಸ್ಥಳಗಳಲ್ಲಿ ನಿಲ್ಲಿಸಲು ತಪ್ಪುವಾಗ, ಬೇರೆಯವರಿಗೆ ನೀವು ಓದುತ್ತಿರುವ ವಿಷಯದ ಅರ್ಥವನ್ನು ತಿಳಿಯಲು ಕಷ್ಟವಾದೀತು ಅಥವಾ ಇದು ವಿಷಯಕ್ಕೆ ಅಪಾರ್ಥವನ್ನೂ ಕೊಟ್ಟೀತು.
ವಿರಾಮಚಿಹ್ನೆಗಳಲ್ಲದೆ, ಒಂದು ವಾಕ್ಯದಲ್ಲಿ ವಿಚಾರಗಳು ವ್ಯಕ್ತಪಡಿಸಲ್ಪಟ್ಟಿರುವ ರೀತಿಯು, ನಿಲ್ಲಿಸುವಿಕೆಗಳು ಎಲ್ಲಿ ಸೂಕ್ತವಾಗಿವೆ ಎಂಬುದನ್ನು ನಿರ್ಧರಿಸುತ್ತದೆ. ಒಬ್ಬ ಪ್ರಸಿದ್ಧ ಸಂಗೀತಗಾರನು ಒಮ್ಮೆ ಹೇಳಿದ್ದು: “ಸ್ವರಚಿಹ್ನೆಗಳನ್ನು ನಾನು ಅನೇಕ ಪಿಯಾನೋ ವಾದಕರಿಗಿಂತ ಹೆಚ್ಚು ಉತ್ತಮವಾಗಿ ತಿಳಿದಿದ್ದೇನೆಂದು ಹೇಳೆನಾದರೂ, ಸ್ವರಚಿಹ್ನೆಗಳ ಮಧ್ಯೆ ಇರುವ ವಿರಾಮಚಿಹ್ನೆಗಳ ವಿಷಯದಲ್ಲಾದರೊ, ಆಹಾ! ಅಲ್ಲಿಯೇ ಇದೆ ಕಲೆಯ ಬೀಡು.” ಮಾತನಾಡುವ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಸೂಕ್ತವಾದ ಸ್ಥಳಗಳಲ್ಲಿ ನಿಲ್ಲಿಸುವುದು, ಚೆನ್ನಾಗಿ ತಯಾರಿಸಲ್ಪಟ್ಟಿರುವ ನಿಮ್ಮ ಭಾಷಣಕ್ಕೆ ಸೊಬಗನ್ನೂ ಅರ್ಥವನ್ನೂ ಕೂಡಿಸುವುದು.
ಸಾರ್ವಜನಿಕವಾಗಿ ಓದಲು ತಯಾರಿಸುವಾಗ, ನೀವು ಎಲ್ಲಿಂದ ಓದುತ್ತೀರೊ ಆ ಮುದ್ರಿತ ಭಾಗಕ್ಕೆ ಗುರುತು ಹಾಕುವುದು ನಿಮಗೆ ಸಹಾಯಕರವಾಗಿರಬಹುದು. ತುಸು ನಿಲ್ಲಿಸುವಿಕೆ, ಪ್ರಾಯಶಃ ಕೇವಲ ತುಸು ಹಿಂಜರಿಕೆಯ ಆವಶ್ಯಕತೆಯಿರುವಲ್ಲಿ, ಚಿಕ್ಕ ಲಂಬರೇಖೆಯನ್ನು ಎಳೆಯಿರಿ. ಇನ್ನೂ ದೀರ್ಘವಾಗಿ ನಿಲ್ಲಿಸಬೇಕಾಗುವಲ್ಲಿ, ಪರಸ್ಪರ ಹತ್ತಿರವಿರುವ ಎರಡು ಲಂಬರೇಖೆಗಳನ್ನು ಉಪಯೋಗಿಸಿರಿ. ಕೆಲವು ಪದಗಳು ನಿಮ್ಮನ್ನು ತೊಡಕಿನಲ್ಲಿ ಸಿಕ್ಕಿಸುತ್ತವೆಂದು ಕಂಡುಬರುವುದಾದರೆ, ಮತ್ತು ನೀವು ಪದೇ ಪದೇ ತಪ್ಪಾದ ಸ್ಥಳದಲ್ಲಿ ಓದನ್ನು ನಿಲ್ಲಿಸುವುದಾದರೆ, ಆ ಕಷ್ಟಕರವಾದ ಪದಗುಚ್ಛದಲ್ಲಿರುವ ಎಲ್ಲ ಪದಗಳನ್ನು ಒಂದಕ್ಕೊಂದು ಜೋಡಿಸಲಿಕ್ಕಾಗಿ ಅವುಗಳ ಮಧ್ಯದಲ್ಲಿ ಪೆನ್ಸಿಲ್ ಗುರುತುಗಳನ್ನು ಹಾಕಿರಿ. ಆ ಬಳಿಕ ಆ ಪದಗುಚ್ಛವನ್ನು ಆರಂಭದಿಂದ ಕೊನೆಯ ತನಕ ಓದಿರಿ. ಅನೇಕ ಅನುಭವಸ್ಥ ಭಾಷಣಕಾರರು ಹೀಗೆಯೇ ಮಾಡುತ್ತಾರೆ.
ದಿನನಿತ್ಯದ ಮಾತುಕತೆಯಲ್ಲಿ, ನಿಲ್ಲಿಸುವಿಕೆಯು ಸಾಮಾನ್ಯವಾಗಿ ಸಮಸ್ಯೆಯನ್ನು ಉಂಟುಮಾಡುವುದಿಲ್ಲ, ಏಕೆಂದರೆ ನೀವು ಹೇಳಲು ಬಯಸುವ ವಿಷಯಗಳು ಯಾವುವೆಂದು ನಿಮಗೆ ಗೊತ್ತಿರುತ್ತದೆ. ಆದರೂ, ವಿಚಾರವು ಅವಶ್ಯಪಡಿಸಲಿ ಇಲ್ಲವೇ ಅವಶ್ಯಪಡಿಸದಿರಲಿ, ಆಗಾಗ ನಿಲ್ಲಿಸುವ ರೂಢಿಯು ನಿಮಗಿರುವುದಾದರೆ, ನಿಮ್ಮ ಭಾಷಣದಲ್ಲಿ ಶಕ್ತಿ ಮತ್ತು ಸ್ಪಷ್ಟತೆಯ ಕೊರತೆಯಿರುವುದು. ಈ ವಿಷಯದಲ್ಲಿ ಪ್ರಗತಿಯನ್ನು ಮಾಡಲಿಕ್ಕಾಗಿರುವ ಸಲಹೆಗಳು, “ನಿರರ್ಗಳವಾಗಿ ಭಾಷಣ ನೀಡುವುದು” ಎಂಬ ಮುಖ್ಯ ವಿಷಯವಿರುವ 4ನೆಯ ಪಾಠದಲ್ಲಿವೆ.
ವಿಚಾರದಲ್ಲಿ ಬದಲಾವಣೆಗಾಗಿ ನಿಲ್ಲಿಸುವುದು. ನೀವು ಒಂದು ಮುಖ್ಯಾಂಶದಿಂದ ಇನ್ನೊಂದಕ್ಕೆ ಹೋಗುವಾಗ ಮಧ್ಯೆ ಸ್ವಲ್ಪ ನಿಲ್ಲಿಸುವುದು, ನಿಮ್ಮ ಸಭಿಕರಿಗೆ ಪರ್ಯಾಲೋಚಿಸುವ, ಹೊಂದಿಸಿಕೊಳ್ಳುವ, ವಿಷಯದ ದಿಕ್ಕು ಬದಲಾವಣೆಯನ್ನು ಗುರುತಿಸುವ ಮತ್ತು ಮುಂದೆ ಹೇಳಲ್ಪಡುವ ವಿಷಯವನ್ನು ಹೆಚ್ಚು ಸ್ಪಷ್ಟವಾಗಿ ಗ್ರಹಿಸುವ ಸಂದರ್ಭವನ್ನು ಕೊಡುವುದು. ನೀವು ಒಂದು ವಿಚಾರದಿಂದ ಇನ್ನೊಂದಕ್ಕೆ ಬದಲಾಯಿಸುವಾಗ ಮಧ್ಯೆ ಸ್ವಲ್ಪ ನಿಲ್ಲಿಸುವುದು, ಒಂದು ರಸ್ತೆಯಿಂದ ಇನ್ನೊಂದಕ್ಕೆ ಹೋಗಲಿಕ್ಕಾಗಿ ಆ ರಸ್ತೆಯ ತಿರುವಿನಲ್ಲಿ ನಿಧಾನಿಸುವಷ್ಟೇ ಪ್ರಾಮುಖ್ಯವಾದದ್ದಾಗಿದೆ.
ಕೆಲವು ಭಾಷಣಕಾರರು ಒಂದು ವಿಚಾರದಿಂದ ಇನ್ನೊಂದಕ್ಕೆ ಬದಲಾಯಿಸುವಾಗ ಮಧ್ಯೆ ನಿಲ್ಲಿಸದೆ ಧಾವಿಸಲು ಕಾರಣವೇನೆಂದರೆ, ಅವರು ತೀರ ಹೆಚ್ಚು ವಿಷಯಗಳನ್ನು ಆವರಿಸಲು ಪ್ರಯತ್ನಿಸುತ್ತಾರೆ. ಕೆಲವರಿಗಾದರೋ ಈ ಅಭ್ಯಾಸವು ಅವರ ದಿನನಿತ್ಯದ ಮಾತುಕತೆಯ ನಮೂನೆಯನ್ನು ಪ್ರತಿಬಿಂಬಿಸುತ್ತದೆ. ಪ್ರಾಯಶಃ ಅವರ ಸುತ್ತಲಿರುವವರೆಲ್ಲರೂ ಹಾಗೆಯೇ ಮಾತಾಡುತ್ತಿರಬಹುದು. ಆದರೆ ಇದು ಪರಿಣಾಮಕಾರಿಯಾದ ಬೋಧನೆಯನ್ನು ಫಲಿಸುವುದಿಲ್ಲ. ಆಲಿಸಲು ಮತ್ತು ಜ್ಞಾಪಕದಲ್ಲಿಟ್ಟುಕೊಳ್ಳಲು ಯೋಗ್ಯವಾಗಿರುವ ಯಾವುದೇ ವಿಷಯವನ್ನು ನೀವು ಹೇಳಲಿಕ್ಕಿರುವುದಾದರೆ, ಆ ವಿಷಯವು ಸ್ಪಷ್ಟವಾಗಿ ಎದ್ದುಕಾಣುವಂತೆ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿರಿ. ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವ ಒಂದು ಭಾಷಣದಲ್ಲಿ, ಮಧ್ಯೆ ಮಧ್ಯೆ ನಿಲ್ಲಿಸಿ ಮಾತಾಡುವುದು ಅತ್ಯಗತ್ಯವಾಗಿದೆ ಎಂಬುದನ್ನು ಗ್ರಹಿಸಿರಿ.
ನೀವು ಒಂದು ಹೊರಮೇರೆಯಿಂದ ಭಾಷಣವನ್ನು ಕೊಡಲಿರುವುದಾದರೆ, ಮುಖ್ಯಾಂಶಗಳ ಮಧ್ಯೆ ಎಲ್ಲಿ ನಿಲ್ಲಿಸಬೇಕೆಂಬುದು ಸುವ್ಯಕ್ತವಾಗುವಂಥ ರೀತಿಯಲ್ಲಿ ಆ ಭಾಷಣವನ್ನು ಸಂಘಟಿಸಬೇಕು. ನೀವು ಒಂದು ಹಸ್ತಪ್ರತಿ ಭಾಷಣವನ್ನು ಓದಲಿರುವಲ್ಲಿ, ಒಂದು ಮುಖ್ಯಾಂಶದಿಂದ ಇನ್ನೊಂದಕ್ಕೆ ಬದಲಾವಣೆಯಾಗುವ ಸ್ಥಳಗಳಲ್ಲಿ ಗುರುತನ್ನು ಹಾಕಿರಿ.
ಸಾಮಾನ್ಯವಾಗಿ ವಿಚಾರ ಬದಲಾವಣೆಯ ಸಮಯದಲ್ಲಿನ ನಿಲ್ಲಿಸುವಿಕೆಗಳು, ವಿರಾಮಚಿಹ್ನೆಗಳಿಗಾಗಿರುವ ನಿಲ್ಲಿಸುವಿಕೆಗಳಿಗಿಂತ ತುಸು ಹೆಚ್ಚು ದೀರ್ಘವಾಗಿರುತ್ತವೆ. ಆದರೆ ಅವು ಭಾಷಣವನ್ನು ತುಂಬ ನಿಧಾನಗೊಳಿಸುವಷ್ಟು ದೀರ್ಘವಾದ ನಿಲ್ಲಿಸುವಿಕೆಗಳಾಗಿರಬಾರದು. ನಿಲ್ಲಿಸುವಿಕೆಗಳು ತೀರ ದೀರ್ಘವಾಗಿರುವಾಗ, ನೀವು ಭಾಷಣವನ್ನು ಚೆನ್ನಾಗಿ ತಯಾರಿಸಿಲ್ಲ ಮತ್ತು ಮುಂದೆ ಏನು ಹೇಳಬೇಕೆಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದೀರಿ ಎಂಬ ಅಭಿಪ್ರಾಯವನ್ನು ಅದು ಕೊಡುತ್ತದೆ.
ಒತ್ತಿ ಹೇಳಲಿಕ್ಕಾಗಿ ನಿಲ್ಲಿಸುವುದು. ಒತ್ತಿ ಹೇಳಲಿಕ್ಕಾಗಿ ನಿಲ್ಲಿಸುವುದು ಅನೇಕವೇಳೆ ಅತಿ ಸ್ಪಷ್ಟವಾಗಿ ಎದ್ದುಕಾಣುವಂಥದ್ದಾಗಿರುತ್ತದೆ. ಇದು, ಸ್ವಲ್ಪ ಮಟ್ಟಿಗಿನ ತೀವ್ರತೆಯಿಂದ ಹೇಳಲ್ಪಡುವ ಒಂದು ಹೇಳಿಕೆ ಅಥವಾ ಪ್ರಶ್ನೆಯ ಮೊದಲೊ ನಂತರವೋ ಸ್ವಲ್ಪ ಹೊತ್ತು ನಿಲ್ಲಿಸುವುದಾಗಿದೆ. ಇಂತಹ ನಿಲ್ಲಿಸುವಿಕೆಯು, ಸಭಿಕರು ಆಗ ತಾನೇ ಏನು ಹೇಳಲ್ಪಟ್ಟಿತೊ ಅದರ ಕುರಿತು ಚಿಂತಿಸುವಂತೆ ಸಂದರ್ಭವನ್ನು ಒದಗಿಸುತ್ತದೆ, ಅಥವಾ ಮುಂದೆ ಬರಲಿರುವ ವಿಷಯವನ್ನು ಅವರು ನಿರೀಕ್ಷಿಸುವಂತೆ ಮಾಡುತ್ತದೆ. ಇವೆರಡೂ ಒಂದೇ ಆಗಿರುವುದಿಲ್ಲ. ಇವುಗಳಲ್ಲಿ ಬಳಸಲು ಸೂಕ್ತವಾದ ವಿಧಾನವು ಯಾವುದೆಂಬುದನ್ನು ನಿರ್ಧರಿಸಿರಿ. ಆದರೆ ಒತ್ತಿ ಹೇಳಲಿಕ್ಕಾಗಿ ನಿಲ್ಲಿಸುವುದು, ನಿಜವಾಗಿಯೂ ವಿಶೇಷವಾದ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿರಬೇಕೆಂಬುದನ್ನು ಮನಸ್ಸಿನಲ್ಲಿಡಿರಿ. ಇಲ್ಲದಿದ್ದರೆ, ಈ ಹೇಳಿಕೆಗಳ ಮಹತ್ವವೇ ಕೈತಪ್ಪಿಹೋಗುವುದು.
ಯೇಸು ನಜರೇತಿನ ಸಭಾಮಂದಿರದಲ್ಲಿ ಶಾಸ್ತ್ರವಚನಗಳಿಂದ ಗಟ್ಟಿಯಾಗಿ ಓದಿದಾಗ, ಈ ನಿಲ್ಲಿಸುವಿಕೆಯನ್ನು ಅವನು ಪರಿಣಾಮಕಾರಿಯಾಗಿ ಉಪಯೋಗಿಸಿದನು. ಪ್ರಥಮವಾಗಿ, ಅವನು ಯೆಶಾಯನೆಂಬ ಪ್ರವಾದಿಯ ಗ್ರಂಥದ ಸುರುಳಿಯಿಂದ ತನ್ನ ನೇಮಕವನ್ನು ಓದಿಹೇಳಿದನು. ಆದರೆ ಅದನ್ನು ಅನ್ವಯಿಸುವುದಕ್ಕೆ ಮೊದಲು, ಅವನು ಸುರುಳಿಯನ್ನು ಸುತ್ತಿ, ಸಭಾಮಂದಿರದ ಆಳಿನ ಕೈಗೆ ಅದನ್ನು ಕೊಟ್ಟು ಕುಳಿತುಕೊಂಡನು. ಬಳಿಕ, ಸಭಾಮಂದಿರದಲ್ಲಿದ್ದ ಎಲ್ಲರ ದೃಷ್ಟಿ ತನ್ನ ಮೇಲೆ ಕೇಂದ್ರೀಕೃತವಾಗಿದ್ದಾಗ ಅವನು ಹೇಳಿದ್ದು: “ಈ ಹೊತ್ತು . . . ಈ ವೇದೋಕ್ತಿ ನೆರವೇರಿದೆ.”—ಲೂಕ 4:16-21.
ಸನ್ನಿವೇಶಗಳು ಅಗತ್ಯಪಡಿಸುವಾಗ ನಿಲ್ಲಿಸುವುದು. ಕೆಲವೊಂದು ಅಡ್ಡಿತಡೆಗಳು ಸಹ ಒಮ್ಮೊಮ್ಮೆ ನಾವು ಮಾತಾಡುತ್ತಿರುವಾಗ ಮಧ್ಯದಲ್ಲಿ ನಿಲ್ಲಿಸುವಂತೆ ಅಗತ್ಯಪಡಿಸಬಹುದು. ಹಾದುಹೋಗುತ್ತಿರುವ ವಾಹನಗಳ ಸದ್ದು ಅಥವಾ ಅಳುತ್ತಿರುವ ಮಗುವಿನ ಧ್ವನಿಯು, ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಭೇಟಿಯಾಗಿರುವ ಮನೆಯವನೊಂದಿಗಿನ ನಿಮ್ಮ ಸಂಭಾಷಣೆಗೆ ತಡೆಯನ್ನೊಡ್ಡಬಹುದು. ಜನರು ಕೂಡಿಬಂದಿರುವ ಒಂದು ಸ್ಥಳದಲ್ಲಿ ನಡೆಯುವ ಒಂದು ಗದ್ದಲವು ವಿಪರೀತವಾಗಿರದಿದ್ದಲ್ಲಿ, ನೀವು ಸ್ವರವೆತ್ತಿ ಮಾತಾಡುತ್ತ ಮುಂದುವರಿಯಲು ಶಕ್ತರಾಗಿರಬಹುದು. ಆದರೆ ಗದ್ದಲವು ತುಂಬ ಜೋರಾಗಿಯೂ ದೀರ್ಘ ಸಮಯದ ತನಕವೂ ಇರುವಲ್ಲಿ, ನೀವು ಮಾತಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ನಿಮ್ಮ ಸಭಿಕರಿಗೆ ಹೇಗೂ ಕಿವಿಗೊಡಲು ಸಾಧ್ಯವಿರುವುದಿಲ್ಲ. ಆದಕಾರಣ, ನಿಲ್ಲಿಸುವಿಕೆಯನ್ನು ಫಲಕಾರಿಯಾದ ರೀತಿಯಲ್ಲಿ, ಅಂದರೆ ನೀವು ಹೇಳಲಿರುವ ಒಳ್ಳೇ ವಿಷಯಗಳ ಪೂರ್ಣ ಪ್ರಯೋಜನವನ್ನು ನಿಮ್ಮ ಸಭಿಕರು ಪಡೆಯುವಂತೆ ಸಹಾಯಮಾಡುವ ಉದ್ದೇಶದಿಂದ ಉಪಯೋಗಿಸಿರಿ.
ಸಭಿಕರ ಪ್ರತಿಕ್ರಿಯೆಗಾಗಿ ನಿಲ್ಲಿಸುವುದು. ಸಭಿಕರು ಭಾಗವಹಿಸುವ ಯಾವ ಏರ್ಪಾಡೂ ಇಲ್ಲದಿರುವ ಒಂದು ಭಾಷಣವನ್ನು ನೀವು ಕೊಡುತ್ತಿರಬಹುದಾದರೂ, ಸಭಿಕರು ಎಲ್ಲರಿಗೆ ಕೇಳಿಸುವಷ್ಟು ಗಟ್ಟಿಯಾದ ಧ್ವನಿಯಲ್ಲಿ ಅಲ್ಲ, ಬದಲಾಗಿ ಮಾನಸಿಕವಾಗಿ ಪ್ರತಿಕ್ರಿಯೆ ತೋರಿಸುವಂತೆ ಅವಕಾಶ ಮಾಡಿಕೊಡುವುದು ಪ್ರಾಮುಖ್ಯವಾಗಿದೆ. ನಿಮ್ಮ ಸಭಿಕರು ಯೋಚಿಸುವಂತೆ ಮಾಡತಕ್ಕ ಪ್ರಶ್ನೆಗಳನ್ನು ನೀವು ಕೇಳುವುದಾದರೂ, ತದನಂತರ ಸಾಕಷ್ಟು ಸಮಯ ನಿಲ್ಲಿಸದಿರುವಲ್ಲಿ, ಆ ಪ್ರಶ್ನೆಗಳ ಹೆಚ್ಚಿನ ಮಹತ್ವವೇ ನಷ್ಟವಾದಂತಾಗುವುದು.
ನಾವು ವೇದಿಕೆಯಿಂದ ಮಾತಾಡುವಾಗ ಮಾತ್ರವಲ್ಲ, ಇತರರಿಗೆ ಸಾಕ್ಷಿ ನೀಡುತ್ತಿರುವಾಗಲೂ ಮಧ್ಯೆ ಮಧ್ಯೆ ನಿಲ್ಲಿಸಿ ಮಾತಾಡುವುದು ಪ್ರಾಮುಖ್ಯ ಎಂಬುದಂತೂ ನಿಶ್ಚಯ. ಕೆಲವರು ಎಂದೂ ನಿಲ್ಲಿಸಿ ಮಾತಾಡುವುದೇ ಇಲ್ಲ ಎಂಬಂತೆ ತೋರುತ್ತದೆ. ಇದು ನಿಮ್ಮ ಸಮಸ್ಯೆಯಾಗಿರುವಲ್ಲಿ, ಭಾಷಣದ ಈ ಗುಣವನ್ನು ಬೆಳೆಸಿಕೊಳ್ಳಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಿರಿ. ಹಾಗೆ ಮಾಡುವಲ್ಲಿ, ನೀವು ಇತರರೊಂದಿಗೆ ನಡೆಸುವ ಸಂವಾದವನ್ನು ಉತ್ತಮಗೊಳಿಸುವಿರಿ ಮಾತ್ರವಲ್ಲ, ನಿಮ್ಮ ಕ್ಷೇತ್ರ ಶುಶ್ರೂಷೆಯಲ್ಲಿಯೂ ನೀವು ಪರಿಣಾಮಕಾರಿಯಾಗುವಿರಿ. ಮಾತು ನಿಲ್ಲಿಸುವಿಕೆಯು ಮೌನವಾಗಿರುವ ಒಂದು ಕ್ಷಣವಾಗಿದೆ. ಮತ್ತು ಮೌನವು ವಿರಾಮ ನೀಡುತ್ತದೆ, ಒತ್ತಿ ಹೇಳುತ್ತದೆ, ಗಮನ ಸೆಳೆಯುತ್ತದೆ ಮತ್ತು ಕಿವಿಯನ್ನು ಚೈತನ್ಯಗೊಳಿಸುತ್ತದೆ ಎಂಬ ಹೇಳಿಕೆಯು ಎಷ್ಟೋ ಸತ್ಯವಾಗಿದೆ.
ದಿನನಿತ್ಯದ ಸಂಭಾಷಣೆಯಲ್ಲಿ, ಇಬ್ಬರು ಅಥವಾ ಹೆಚ್ಚು ಜನರ ನಡುವಿನ ವಿಚಾರ ವಿನಿಮಯವು ಒಳಗೂಡಿರುತ್ತದೆ. ನೀವು ಇತರರಿಗೆ ಕಿವಿಗೊಡುವಲ್ಲಿ ಮತ್ತು ಅವರು ಏನು ಹೇಳುತ್ತಾರೋ ಅದರಲ್ಲಿ ಆಸಕ್ತಿಯನ್ನು ತೋರಿಸುವಲ್ಲಿ, ಅವರು ನಿಮಗೂ ಕಿವಿಗೊಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ನೀವು ಮಾತನಾಡುವಾಗ ಸಾಕಷ್ಟು ಸಮಯ ನಿಲ್ಲಿಸುವುದನ್ನು ಮತ್ತು ಹೀಗೆ ಅವರಿಗೆ ಮಾತನಾಡುವ ಅವಕಾಶವನ್ನು ಕೊಡುವುದನ್ನು ಇದು ಅಗತ್ಯಪಡಿಸುತ್ತದೆ.
ಕ್ಷೇತ್ರ ಶುಶ್ರೂಷೆಯಲ್ಲಿ, ಸಂಭಾಷಣಾ ರೂಪದಲ್ಲಿ ಮಾತಾಡುವಾಗ ನಮ್ಮ ಸಾಕ್ಷಿಕಾರ್ಯವು ಅನೇಕವೇಳೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ವಂದನೆಗಳ ವಿನಿಮಯವಾದ ಬಳಿಕ, ತಮ್ಮ ಸಂಭಾಷಣಾ ವಿಷಯವನ್ನು ಗುರುತಿಸಿ, ನಂತರ ಒಂದು ಪ್ರಶ್ನೆಯನ್ನು ಎಬ್ಬಿಸುವುದು ಪರಿಣಾಮಕಾರಿಯಾಗಿದೆ ಎಂದು ಅನೇಕ ಮಂದಿ ಸಾಕ್ಷಿಗಳು ಕಂಡುಕೊಂಡಿದ್ದಾರೆ. ಅವರು ಆ ವ್ಯಕ್ತಿಯು ಉತ್ತರ ಕೊಡುವಂತೆ ತಮ್ಮ ಮಾತನ್ನು ನಿಲ್ಲಿಸಿ, ಬಳಿಕ ಮನೆಯವನು ಕೊಟ್ಟ ಉತ್ತರಕ್ಕೆ ಪ್ರತಿಕ್ರಿಯಿಸುತ್ತಾರೆ. ಆ ಚರ್ಚೆಯ ಸಂದರ್ಭದಲ್ಲಿ, ಅವರು ಮನೆಯವನಿಗೆ ಉತ್ತರ ಕೊಡಲು ಅನೇಕ ಅವಕಾಶಗಳನ್ನು ಕೊಡಬಹುದು. ಚರ್ಚಿಸಲ್ಪಡುತ್ತಿರುವ ವಿಷಯದ ಕುರಿತು ಒಬ್ಬ ವ್ಯಕ್ತಿಯ ದೃಷ್ಟಿಕೋನವೇನೆಂದು ತಿಳಿದುಕೊಳ್ಳುವುದರಿಂದ, ಸಾಮಾನ್ಯವಾಗಿ ತಾವು ಆ ವ್ಯಕ್ತಿಗೆ ಹೆಚ್ಚು ಸಹಾಯ ನೀಡಬಲ್ಲೆವೆಂದು ಅವರಿಗೆ ತಿಳಿದಿದೆ.—ಜ್ಞಾನೋ. 20:5.
ಪ್ರಶ್ನೆಗಳಿಗೆ ಎಲ್ಲರೂ ಅನುಕೂಲಕರವಾಗಿ ಪ್ರತಿಕ್ರಿಯಿಸುವುದಿಲ್ಲವೆಂಬುದು ನಿಶ್ಚಯ. ಆದರೆ ಇದು ಯೇಸುವನ್ನು, ಅವನ ವಿರೋಧಿಗಳಿಗೂ ಮಾತಾಡಲು ಸಾಕಷ್ಟು ಸಮಯವನ್ನು ನೀಡಲಿಕ್ಕಾಗಿ ತನ್ನ ಮಾತನ್ನು ನಿಲ್ಲಿಸುವುದರಿಂದ ಅವನನ್ನು ತಡೆಯಲಿಲ್ಲ. (ಮಾರ್ಕ 3:1-5) ಇನ್ನೊಬ್ಬ ವ್ಯಕ್ತಿಯು ಮಾತಾಡುವಂತೆ ಅವಕಾಶವನ್ನು ಕೊಡುವುದು, ಅವನು ಆಲೋಚಿಸುವಂತೆ ಪ್ರೋತ್ಸಾಹಿಸುತ್ತದೆ ಮತ್ತು ಇದರ ಫಲವಾಗಿ ಅವನು ತನ್ನ ಹೃದಯದಲ್ಲಿ ಏನಿದೆಯೊ ಅದನ್ನು ತಿಳಿಯಪಡಿಸಬಹುದು. ನಮ್ಮ ಶುಶ್ರೂಷೆಯ ಉದ್ದೇಶಗಳಲ್ಲಿ ಒಂದು, ಯಾವುದರ ಆಧಾರದ ಮೇಲೆ ಜನರು ತೀರ್ಮಾನಗಳನ್ನು ಮಾಡಬೇಕೋ ಆ ದೇವರ ವಾಕ್ಯದ ಮಹತ್ವವುಳ್ಳ ವಿಷಯಗಳನ್ನು ಅವರಿಗೆ ನೀಡುವ ಮೂಲಕ, ಅವರ ಹೃತ್ಪೂರ್ವಕ ಪ್ರತಿಕ್ರಿಯೆಯನ್ನು ಉತ್ತೇಜಿಸುವುದೇ ಆಗಿದೆ.—ಇಬ್ರಿ. 4:12.
ನಮ್ಮ ಶುಶ್ರೂಷೆಯಲ್ಲಿ ಮಾತಾಡುತ್ತಿರುವಾಗ ಸೂಕ್ತವಾದ ನಿಲ್ಲಿಸುವಿಕೆಯನ್ನು ಉಪಯೋಗಿಸುವುದು ನಿಜವಾಗಿಯೂ ಒಂದು ಕಲೆಯಾಗಿದೆ. ಈ ನಿಲ್ಲಿಸುವಿಕೆಗಳನ್ನು ಫಲಕಾರಿಯಾಗಿ ಉಪಯೋಗಿಸುವಾಗ, ವಿಚಾರಗಳನ್ನು ಹೆಚ್ಚು ಸ್ಪಷ್ಟವಾಗಿ ವ್ಯಕ್ತಪಡಿಸುವಂತಾಗುತ್ತದೆ ಮತ್ತು ಅನೇಕವೇಳೆ ಇವು ಬಹು ಕಾಲ ಜ್ಞಾಪಕದಲ್ಲಿ ಉಳಿಯುತ್ತವೆ.
-
-
ಸರಿಯಾದ ಅರ್ಥಒತ್ತುದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
-
-
ಅಧ್ಯಾಯ 6
ಸರಿಯಾದ ಅರ್ಥಒತ್ತು
ನೀವು ಗಟ್ಟಿಯಾಗಿ ಮಾತನಾಡುವಾಗ ಅಥವಾ ಓದುವಾಗ, ಒಂದೊಂದು ಪದವನ್ನು ಸರಿಯಾಗಿ ಉಚ್ಚರಿಸುವುದು ಪ್ರಾಮುಖ್ಯವಾಗಿದೆ ಮಾತ್ರವಲ್ಲ, ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವಂಥ ರೀತಿಯಲ್ಲಿ ಮುಖ್ಯ ಪದಗಳನ್ನು ಮತ್ತು ಆಲೋಚನಾಭರಿತ ಅಭಿವ್ಯಕ್ತಿಗಳನ್ನು ಒತ್ತಿಹೇಳುವುದೂ ಪ್ರಾಮುಖ್ಯವಾಗಿದೆ.
ಸರಿಯಾದ ಅರ್ಥಒತ್ತಿನಲ್ಲಿ, ಕೆಲವು ಪದಗಳನ್ನು ಅಥವಾ ಅನೇಕ ಪದಗಳನ್ನು ಒತ್ತಿಹೇಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಸರಿಯಾದ ಪದಗಳನ್ನೇ ಒತ್ತಿಹೇಳಬೇಕು. ತಪ್ಪಾದ ಪದಗಳನ್ನು ಒತ್ತಿಹೇಳುವಲ್ಲಿ, ನೀವು ಏನು ಹೇಳುತ್ತೀರೋ ಅದರ ಅರ್ಥವು ನಿಮ್ಮ ಸಭಿಕರಿಗೆ ಅಸ್ಪಷ್ಟವಾಗಬಹುದು. ಆಗ ಅವರು, ತಮ್ಮ ಆಲೋಚನೆಗಳನ್ನು ಬೇರೆ ವಿಷಯಗಳ ಕಡೆಗೆ ತಿರುಗಿಸಬಹುದು. ಭಾಷಣದ ವಿಷಯಭಾಗವು ಒಳ್ಳೇದಾಗಿರಬಹುದಾದರೂ, ಅಸಮರ್ಪಕವಾದ ಹಾಗೂ ತಪ್ಪಾದ ಅರ್ಥಒತ್ತು, ಸಭಿಕರನ್ನು ಪ್ರಚೋದಿಸುವುದರಲ್ಲಿ ಕಡಿಮೆ ಪರಿಣಾಮಕಾರಿಯಾಗಿರುವುದು.
ಬೇರೆ ಬೇರೆ ರೀತಿಯಲ್ಲಿ ಒತ್ತಿಹೇಳುವಿಕೆಯನ್ನು ವ್ಯಕ್ತಪಡಿಸಸಾಧ್ಯವಿದೆ ಮತ್ತು ಹೆಚ್ಚಾಗಿ ಇದೆಲ್ಲವನ್ನು ಸಂಯೋಜಿತ ಸ್ಥಿತಿಯಲ್ಲಿ ಉಪಯೋಗಿಸಲಾಗುತ್ತದೆ: ಹೆಚ್ಚು ಗಟ್ಟಿಯಾದ ಸ್ವರ, ಗಾಢವಾದ ಭಾವನೆಯ ಮೂಲಕ, ನಿಧಾನವಾದ ಮತ್ತು ಸಾವಕಾಶವಾಗಿ ತೀರ್ಮಾನಿಸಿ ಹೇಳಿದ ಮಾತುಗಳಿಂದ, ಒಂದು ಹೇಳಿಕೆಯ ಮುಂಚೆ ಅಥವಾ ನಂತರ (ಇಲ್ಲವೆ, ಎರಡೂ ಸ್ಥಳಗಳಲ್ಲಿ) ನಿಲ್ಲಿಸುವುದರಿಂದ ಮತ್ತು ಭಾವಾಭಿನಯ ಹಾಗೂ ಮುಖಭಾವದ ಮೂಲಕ ಇದನ್ನು ವ್ಯಕ್ತಪಡಿಸಸಾಧ್ಯವಿದೆ. ಕೆಲವು ಭಾಷೆಗಳಲ್ಲಿ, ಧ್ವನಿಯನ್ನು ಕುಂದಿಸಿ ಅಥವಾ ಸ್ವರದ ಮಟ್ಟವನ್ನೇರಿಸಿ ಸಹ ಒತ್ತನ್ನು ತಿಳಿಯಪಡಿಸಬಹುದು. ಯಾವುದು ಹೆಚ್ಚು ಸೂಕ್ತವಾಗಿರುವುದು ಎಂಬುದನ್ನು ನಿರ್ಣಯಿಸಲಿಕ್ಕಾಗಿ, ಭಾಷಣದ ವಿಷಯಭಾಗವನ್ನೂ ಅದರ ಸಂದರ್ಭಗಳನ್ನೂ ಗಣನೆಗೆ ತೆಗೆದುಕೊಳ್ಳಿರಿ.
ಯಾವುದನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸುವಾಗ, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ. (1) ಒಂದು ವಾಕ್ಯದಲ್ಲಿ, ಯಾವ ಪದಗಳಿಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂಬುದನ್ನು, ಆ ವಾಕ್ಯದ ಉಳಿದ ಭಾಗದಿಂದ ಮಾತ್ರವಲ್ಲ ಅದರ ಪೂರ್ವಾಪರದ ಆಧಾರದ ಮೇಲೆಯೂ ನಿರ್ಧರಿಸಲಾಗುತ್ತದೆ. (2) ಒಂದು ಹೊಸ ವಿಚಾರವನ್ನು—ಅದು ಮುಖ್ಯಾಂಶವಾಗಿರಲಿ ಅಥವಾ ಕೇವಲ ತರ್ಕಸರಣಿಯಲ್ಲಿನ ಒಂದು ಬದಲಾವಣೆಯಾಗಿರಲಿ—ಒತ್ತಿಹೇಳಲಿಕ್ಕಾಗಿಯೂ ಅರ್ಥಒತ್ತನ್ನು ಉಪಯೋಗಿಸಬಹುದು. ಅದು ತರ್ಕಸರಣಿಯ ಸಮಾಪ್ತಿಗೂ ಗಮನವನ್ನು ಸೆಳೆಯಬಹುದು. (3) ಭಾಷಣಕಾರನು ಒಂದು ವಿಷಯದ ಕುರಿತಾದ ತನ್ನ ಅನಿಸಿಕೆಯನ್ನು ತೋರಿಸಲು ಅರ್ಥಒತ್ತನ್ನು ಉಪಯೋಗಿಸಬಹುದು. (4) ಭಾಷಣದ ಮುಖ್ಯಾಂಶಗಳನ್ನು ಎತ್ತಿ ತೋರಿಸಲಿಕ್ಕಾಗಿಯೂ ಸರಿಯಾದ ಅರ್ಥಒತ್ತನ್ನು ಉಪಯೋಗಿಸಸಾಧ್ಯವಿದೆ.
ಈ ವಿಧಗಳಲ್ಲಿ ಅರ್ಥಒತ್ತನ್ನು ಉಪಯೋಗಿಸಬೇಕಾದರೆ, ಒಬ್ಬ ಭಾಷಣಕಾರನು ಅಥವಾ ಸಾರ್ವಜನಿಕ ವಾಚಕನು ತನಗೆ ನೇಮಿಸಲ್ಪಟ್ಟಿರುವ ವಿಷಯಭಾಗವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ತನ್ನ ಸಭಿಕರು ಅದನ್ನು ಮೈಗೂಡಿಸಿಕೊಳ್ಳಬೇಕೆಂದು ಶ್ರದ್ಧಾಪೂರ್ವಕವಾಗಿ ಬಯಸುವವನಾಗಿರಬೇಕು. ಎಜ್ರನ ದಿನಗಳಲ್ಲಿ ಕೊಡಲ್ಪಟ್ಟಿದ್ದ ಮಾಹಿತಿಯ ಕುರಿತಾಗಿ ನೆಹೆಮೀಯ 8:8 ಹೇಳುವುದು: “ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಲು ಜನರು ಗ್ರಹಿಸಿದರು.” ಆ ಸಂದರ್ಭದಲ್ಲಿ ದೇವರ ಧರ್ಮಶಾಸ್ತ್ರವನ್ನು ಓದಿ ಅದರ ಅರ್ಥವನ್ನು ವಿವರಿಸಿದವರು, ತಮ್ಮ ಸಭಿಕರು ಆ ವಾಚನದ ಅರ್ಥವನ್ನು ಗ್ರಹಿಸುವಂತೆ, ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಮತ್ತು ಅದನ್ನು ಅನ್ವಯಿಸಿಕೊಳ್ಳುವಂತೆ ಅವರಿಗೆ ಸಹಾಯಮಾಡುವುದರ ಪ್ರಾಮುಖ್ಯತೆಯನ್ನು ಮನಗಂಡರೆಂಬುದು ಸುವ್ಯಕ್ತ.
ಸಮಸ್ಯೆಯನ್ನು ಉಂಟುಮಾಡಬಹುದಾದ ಸಂಗತಿ. ಹೆಚ್ಚಿನವರು ತಮ್ಮ ಸಾಮಾನ್ಯವಾದ ದೈನಂದಿನ ಸಂಭಾಷಣೆಯಲ್ಲಿ ಏನು ಹೇಳುತ್ತಾರೋ ಅದರ ಅರ್ಥವನ್ನು ಸ್ಪಷ್ಟಪಡಿಸಲು ಶಕ್ತರಾಗಿರುತ್ತಾರೆ. ಆದರೆ, ಇನ್ನೊಬ್ಬರಿಂದ ಬರೆಯಲ್ಪಟ್ಟಿರುವ ವಿಷಯವನ್ನು ಅವರು ಓದುವಾಗ, ಯಾವ ಪದಗಳನ್ನು ಅಥವಾ ಅಭಿವ್ಯಕ್ತಿಗಳನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸುವುದು ಅವರಿಗೆ ಸವಾಲನ್ನೊಡ್ಡಬಹುದು. ಇದಕ್ಕಿರುವ ಕೀಲಿ ಕೈ, ಆ ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದರಲ್ಲಿದೆ. ಇದು ಲಿಖಿತ ವಿಷಯವನ್ನು ಜಾಗರೂಕತೆಯಿಂದ ಅಧ್ಯಯನ ಮಾಡುವುದನ್ನು ಕೇಳಿಕೊಳ್ಳುತ್ತದೆ. ಆದುದರಿಂದ, ನೀವು ಸಭಾ ಕೂಟದಲ್ಲಿ ಏನನ್ನಾದರೂ ಓದುವಂತೆ ಕೇಳಿಕೊಳ್ಳಲ್ಪಟ್ಟಿರುವಲ್ಲಿ, ಅದನ್ನು ನೀವು ಶ್ರದ್ಧೆಯಿಂದ ತಯಾರಿಸಬೇಕು.
ಕೆಲವರು ಅರ್ಥಒತ್ತಿನ ಬದಲು “ಆವರ್ತಒತ್ತು” ಎಂದು ಕರೆಯಲ್ಪಡಬಹುದಾದ ಒತ್ತನ್ನು ಉಪಯೋಗಿಸುತ್ತಾರೆ. ಅವರು ಯಾವ ಪದಗಳಿಗೆ ಒತ್ತನ್ನು ನೀಡುತ್ತಾರೋ ಅದು ಅರ್ಥವತ್ತಾಗಿರಲಿ ಅಥವಾ ಇಲ್ಲದಿರಲಿ, ಸುಮಾರಾಗಿ ನಿರ್ದಿಷ್ಟ ಅವಧಿಗಳಲ್ಲಿ ಅವರು ಪದಗಳನ್ನು ಒತ್ತಿಹೇಳುತ್ತಿರುತ್ತಾರೆ. ಕೆಲವರು ಸಂಬಂಧಾರ್ಥಕ ಅವ್ಯಯಗಳನ್ನು ಒತ್ತಿಹೇಳುತ್ತಾರೆ, ಪ್ರಾಯಶಃ ಉಪಸರ್ಗ ಮತ್ತು ಸಮುಚ್ಚಯ ಸೂಚಕಾವ್ಯಯ ಪದಗಳ ಮೇಲೆ ವಿಪರೀತ ಒತ್ತನ್ನು ಹಾಕುತ್ತಾರೆ. ಒತ್ತಿಹೇಳುವಿಕೆಯು ವಿಷಯದ ಸ್ಪಷ್ಟತೆಗೆ ಸಹಾಯ ನೀಡದಿರುವಲ್ಲಿ, ಅದು ಅಪಕರ್ಷಿಸುವಂಥ ವಿಲಕ್ಷಣತೆಯಾಗುವುದು ಸುಲಭ.
ಅರ್ಥಒತ್ತನ್ನು ಉಪಯೋಗಿಸುವ ಪ್ರಯತ್ನದಲ್ಲಿ, ಕೆಲವು ಭಾಷಣಕಾರರು ತಮ್ಮ ಧ್ವನಿಯನ್ನು ತುಂಬ ಏರಿಸಿ ಮಾತಾಡುತ್ತಾರೆ. ಆದರೆ ಇದು ತಮ್ಮನ್ನು ಗದರಿಸಲಾಗುತ್ತಿದೆ ಎಂದು ಸಭಿಕರು ನೆನಸುವಂತೆ ಮಾಡಬಹುದು. ಇದು ಉತ್ತಮ ಫಲಿತಾಂಶವನ್ನು ತರುವುದು ವಿರಳ ಎಂಬುದಂತೂ ನಿಶ್ಚಯ. ಅರ್ಥಒತ್ತು ಸ್ವಾಭಾವಿಕವಾಗಿಲ್ಲದಿರುವಲ್ಲಿ, ಭಾಷಣಕಾರನು ಸಭಿಕರಿಗೆ ದಬಾಯಿಸಿ ಮಾತಾಡುತ್ತಿದ್ದಾನೆಂಬ ಅಭಿಪ್ರಾಯವನ್ನು ಕೊಡಬಹುದು. ಆದುದರಿಂದ, ಪ್ರೀತಿಯ ಆಧಾರದ ಮೇಲೆ ಅವರಿಗೆ ಮನವಿಮಾಡುವುದು ಮತ್ತು ಹೇಳಲ್ಪಡುತ್ತಿರುವ ವಿಷಯವು ಶಾಸ್ತ್ರಾಧಾರಿತವೂ ನ್ಯಾಯಸಮ್ಮತವೂ ಆಗಿದೆಯೆಂಬುದನ್ನು ತಿಳಿಯಲು ಅವರಿಗೆ ಸಹಾಯಮಾಡುವುದು ಎಷ್ಟು ಉತ್ತಮವಾದದ್ದಾಗಿದೆ!
ಅಭಿವೃದ್ಧಿಮಾಡುವ ವಿಧ. ಅನೇಕವೇಳೆ, ಅರ್ಥಒತ್ತಿನ ಸಂಬಂಧದಲ್ಲಿ ಸಮಸ್ಯೆ ಇರುವಂಥ ಒಬ್ಬ ವ್ಯಕ್ತಿಗೆ ಅದರ ಅರಿವೇ ಇರುವುದಿಲ್ಲ. ಆಗ ಇನ್ನೊಬ್ಬನು ಅದನ್ನು ಅವನ ಗಮನಕ್ಕೆ ತರಬೇಕಾಗಬಹುದು. ಈ ವಿಷಯದಲ್ಲಿ ನೀವು ಅಭಿವೃದ್ಧಿಮಾಡುವ ಅಗತ್ಯವಿರುವಲ್ಲಿ, ನಿಮ್ಮ ಶಾಲಾ ಮೇಲ್ವಿಚಾರಕನು ನಿಮಗೆ ಸಹಾಯ ನೀಡುವನು. ಇದಲ್ಲದೆ, ಉತ್ತಮ ಭಾಷಣಕಾರರಾಗಿರುವ ಯಾರಿಂದಲಾದರೂ ಸಹಾಯವನ್ನು ಕೇಳಲು ಹಿಂಜರಿಯಬೇಡಿ. ನಿಮ್ಮ ವಾಚನವನ್ನು ಮತ್ತು ಭಾಷಣವನ್ನು ಅವನು ಜಾಗರೂಕತೆಯಿಂದ ಕೇಳಿಸಿಕೊಂಡು, ಅಭಿವೃದ್ಧಿಯನ್ನು ಮಾಡಲಿಕ್ಕಾಗಿ ಸಲಹೆಗಳನ್ನು ನೀಡುವಂತೆ ಅವನನ್ನು ಕೇಳಿಕೊಳ್ಳಿರಿ.
ಆರಂಭದಲ್ಲಿ, ನೀವು ಪ್ರ್ಯಾಕ್ಟಿಸ್ ಮಾಡಲಿಕ್ಕಾಗಿ ಕಾವಲಿನಬುರುಜು ಪತ್ರಿಕೆಯ ಒಂದು ಲೇಖನವನ್ನು ಉಪಯೋಗಿಸುವಂತೆ ನಿಮ್ಮ ಸಲಹೆಗಾರನು ಸೂಚಿಸಬಹುದು. ಅರ್ಥವನ್ನು ಸುಲಭವಾಗಿ ಗ್ರಹಿಸುವಂತೆ ಮಾಡಲಿಕ್ಕಾಗಿ ಯಾವ ಪದಗಳನ್ನು ಅಥವಾ ಪದಗುಚ್ಛಗಳನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸಲಿಕ್ಕಾಗಿ, ಒಂದೊಂದು ವಾಕ್ಯವನ್ನೂ ವಿಶ್ಲೇಷಿಸುವಂತೆ ಅವನು ನಿಮಗೆ ಹೇಳುವನು ಎಂಬುದರಲ್ಲಿ ಸಂಶಯವೇ ಇಲ್ಲ. ಓರೆ ಅಕ್ಷರಗಳಲ್ಲಿರುವ ಪದಗಳಿಗೆ ವಿಶೇಷ ಗಮನವನ್ನು ಕೊಡುವಂತೆ ಅವನು ನಿಮಗೆ ಜ್ಞಾಪಕ ಹುಟ್ಟಿಸಬಹುದು. ಒಂದು ವಾಕ್ಯದಲ್ಲಿರುವ ಪದಗಳು ಕೂಡಿ ಕೆಲಸಮಾಡುತ್ತವೆಂಬುದು ನೆನಪಿನಲ್ಲಿರಲಿ. ಆಗಾಗ, ಒತ್ತಿಹೇಳಲ್ಪಡಬೇಕಾಗಿರುವುದು ಯಾವುದೊ ಒಂದು ಪದವನ್ನಲ್ಲ, ಬದಲಾಗಿ ಪದಗಳ ಸಮೂಹವನ್ನೇ. ಕೆಲವು ಭಾಷೆಗಳಲ್ಲಿ, ಸರಿಯಾದ ಅರ್ಥಒತ್ತಿನ ಸಂಬಂಧದಲ್ಲಿ ಉಚ್ಚಾರಣಾಚಿಹ್ನೆಗಳು ಏನನ್ನು ಸೂಚಿಸುತ್ತವೆ ಎಂಬುದಕ್ಕೆ ಹೆಚ್ಚು ಜಾಗರೂಕತೆಯ ಪರಿಗಣನೆಯನ್ನು ನೀಡುವಂತೆ ವಿದ್ಯಾರ್ಥಿಗಳು ಪ್ರೋತ್ಸಾಹಿಸಲ್ಪಡಬಹುದು.
ಯಾವುದನ್ನು ಒತ್ತಿಹೇಳಬೇಕೆಂಬುದನ್ನು ಕಲಿಯುವುದರ ಮುಂದಿನ ಹೆಜ್ಜೆಯಾಗಿ, ವಾಕ್ಯಕ್ಕಿಂತ ಹೆಚ್ಚು ವಿಶಾಲವಾಗಿರುವ ಪೂರ್ವಾಪರವನ್ನು ಪರಿಗಣಿಸುವಂತೆ ನಿಮ್ಮ ಸಲಹೆಗಾರನು ನಿಮ್ಮನ್ನು ಪ್ರೋತ್ಸಾಹಿಸಬಹುದು. ಇಡೀ ಪ್ಯಾರಗ್ರಾಫ್‌ನಲ್ಲಿ ಯಾವ ಕೇಂದ್ರೀಯ ವಿಷಯವನ್ನು ವಿಕಸಿಸಲಾಗುತ್ತಿದೆ? ಒಂದೊಂದು ವಾಕ್ಯದಲ್ಲಿ ನೀವು ಏನನ್ನು ಒತ್ತಿಹೇಳಬೇಕೆಂಬುದನ್ನು ಅದು ಹೇಗೆ ಪ್ರಭಾವಿಸಬೇಕು? ಆ ಲೇಖನದ ಶಿರೋನಾಮವನ್ನು ಮತ್ತು ನಿಮ್ಮ ವಿಷಯಭಾಗವು ಯಾವುದರ ಕೆಳಗಿದೆಯೊ ಆ ದಪ್ಪಕ್ಷರದ ಉಪಶಿರೋನಾಮವನ್ನು ನೋಡಿ. ಇವುಗಳಿಗೂ ಒತ್ತಿಹೇಳಲಿಕ್ಕಾಗಿ ನೀವು ಆರಿಸಿಕೊಂಡಿರುವ ಹೇಳಿಕೆಗಳಿಗೂ ಯಾವ ಸಂಬಂಧವಿದೆ? ಇವೆಲ್ಲವೂ ಪರಿಗಣಿಸಬೇಕಾದ ಅಂಶಗಳಾಗಿವೆ. ಆದರೆ, ತೀರ ಹೆಚ್ಚು ಪದಗಳನ್ನು ಬಲವಾಗಿ ಒತ್ತಿಹೇಳದಂತೆ ಜಾಗ್ರತೆ ವಹಿಸಿರಿ.
ನೀವು ಆಶುಭಾಷಣ ಮಾಡುತ್ತಿರಲಿ ಇಲ್ಲವೆ ಓದುತ್ತಿರಲಿ, ನಿಮ್ಮ ಅರ್ಥಒತ್ತಿನ ಉಪಯೋಗವನ್ನು ತರ್ಕಸರಣಿಯು ಪ್ರಭಾವಿಸುವಂತೆ ಬಿಡಲು ನಿಮ್ಮ ಸಲಹೆಗಾರನು ನಿಮ್ಮನ್ನು ಪ್ರೋತ್ಸಾಹಿಸಬಹುದು. ಆ ತರ್ಕಸರಣಿ ಎಲ್ಲಿ ಕೊನೆಗೊಳ್ಳುತ್ತದೆ, ಅಥವಾ ಭಾಷಣವು ಒಂದು ಪ್ರಮುಖ ವಿಚಾರದಿಂದ ಇನ್ನೊಂದು ವಿಚಾರಕ್ಕೆ ಎಲ್ಲಿ ಬದಲಾವಣೆಗೊಳ್ಳುತ್ತದೆ ಎಂಬ ಅರಿವು ನಿಮಗಿರುವ ಅಗತ್ಯವಿದೆ. ಈ ಸ್ಥಳಗಳಲ್ಲಿ ನಿಮ್ಮ ಭಾಷಣ ಶೈಲಿಯು ಸಭಿಕರನ್ನು ಎಚ್ಚರಿಸುವಲ್ಲಿ ಅವರು ಅದನ್ನು ಗಣ್ಯಮಾಡುವರು. ಇದನ್ನು ಪ್ರಥಮವಾಗಿ, ಮುಂದಕ್ಕೆ, ಅಂತಿಮವಾಗಿ, ಹೀಗೆ ಮತ್ತು ನ್ಯಾಯಸಮ್ಮತವಾಗಿ ಎಂಬ ಪದಗಳನ್ನು ಒತ್ತಿ ಉಚ್ಚರಿಸುವ ಮೂಲಕ ಮಾಡಬಹುದು.
ಯಾವ ವಿಚಾರಗಳನ್ನು ನೀವು ವಿಶೇಷವಾದ ಭಾವನೆಯಿಂದ ಹೇಳಬೇಕೊ ಅವುಗಳ ಕಡೆಗೂ ನಿಮ್ಮ ಸಲಹೆಗಾರನು ನಿಮ್ಮ ಗಮನವನ್ನು ಸೆಳೆಯುವನು. ಇದನ್ನು ಮಾಡಲಿಕ್ಕಾಗಿ ನೀವು ತುಂಬ, ಸಂಪೂರ್ಣವಾಗಿ, ಖಂಡಿತವಾಗಿಯೂ ಇಲ್ಲ, ಯೋಚಿಸಲಸಾಧ್ಯ, ಪ್ರಾಮುಖ್ಯವಾಗಿ ಮತ್ತು ಯಾವಾಗಲೂ ಎಂಬಂತಹ ಪದಗಳನ್ನು ಒತ್ತಿಹೇಳಬಹುದು. ನೀವು ಹಾಗೆ ಮಾಡುವಲ್ಲಿ, ನೀವು ಏನು ಹೇಳುತ್ತಿದ್ದೀರೋ ಅದರ ಕುರಿತು ಸಭಿಕರಿಗೆ ಹೇಗನಿಸಬೇಕೆಂಬುದನ್ನು ನೀವು ಪ್ರಭಾವಿಸಬಲ್ಲಿರಿ. ಇದರ ಕುರಿತಾದ ಹೆಚ್ಚಿನ ವಿಷಯವನ್ನು, “ಹಾರ್ದಿಕತೆ ಮತ್ತು ಭಾವಪೂರ್ಣತೆ” ಎಂಬ ಮುಖ್ಯ ವಿಷಯವಿರುವ 11ನೆಯ ಪಾಠದಲ್ಲಿ ತಿಳಿಸಲಾಗುವುದು.
ನೀವು ಅರ್ಥಒತ್ತಿನ ಉಪಯೋಗದಲ್ಲಿ ಅಭಿವೃದ್ಧಿಮಾಡಲಿಕ್ಕಾಗಿ, ನಿಮ್ಮ ಸಭಿಕರು ನೆನಪಿನಲ್ಲಿಟ್ಟುಕೊಳ್ಳುವಂತೆ ನೀವು ಬಯಸುವ ಮುಖ್ಯಾಂಶಗಳನ್ನು, ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿಟ್ಟುಕೊಳ್ಳುವಂತೆಯೂ ನಿಮ್ಮನ್ನು ಪ್ರೋತ್ಸಾಹಿಸಲಾಗುವುದು. ಇದನ್ನು ಸಾರ್ವಜನಿಕ ವಾಚನದ ದೃಷ್ಟಿಯಿಂದ, “ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು” ಎಂಬ ಮುಖ್ಯ ವಿಷಯವಿರುವ 7ನೆಯ ಪಾಠದಲ್ಲಿಯೂ, ಭಾಷಣ ನೀಡುವ ದೃಷ್ಟಿಯಿಂದ, “ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು” ಎಂಬ ಮುಖ್ಯ ವಿಷಯವಿರುವ 37ನೆಯ ಪಾಠದಲ್ಲಿಯೂ ಇನ್ನೂ ಹೆಚ್ಚಾಗಿ ಪರಿಗಣಿಸಲಾಗುವುದು.
ನಿಮ್ಮ ಕ್ಷೇತ್ರ ಸೇವೆಯಲ್ಲಿ ಪ್ರಗತಿಯನ್ನು ಮಾಡಲು ನೀವು ಪ್ರಯತ್ನಿಸುತ್ತಿರುವುದಾದರೆ, ನೀವು ಶಾಸ್ತ್ರವಚನಗಳನ್ನು ಹೇಗೆ ಓದುತ್ತೀರಿ ಎಂಬುದಕ್ಕೆ ವಿಶೇಷ ಗಮನವನ್ನು ಕೊಡಿರಿ. ‘ನಾನು ಈ ವಚನವನ್ನು ಏಕೆ ಓದುತ್ತಿದ್ದೇನೆ?’ ಎಂದು ಸ್ವತಃ ಕೇಳಿಕೊಳ್ಳುವುದನ್ನು ರೂಢಿಯಾಗಿ ಮಾಡಿಕೊಳ್ಳಿರಿ. ನೀವು ಬೋಧಕರಾಗಿರುವುದರಿಂದ, ಕೇವಲ ಪದಗಳನ್ನು ಸರಿಯಾಗಿ ಉಚ್ಚರಿಸುವುದಷ್ಟೇ ಯಾವಾಗಲೂ ಸಾಕಾಗಲಾರದು. ವಚನವನ್ನು ಭಾವಪೂರ್ಣವಾಗಿ ಓದುವುದು ಕೂಡ ಸಾಕಾಗಲಿಕ್ಕಿಲ್ಲ. ಒಬ್ಬನ ಪ್ರಶ್ನೆಗೆ ನೀವು ಉತ್ತರ ಕೊಡುತ್ತಿರುವುದಾದರೆ ಅಥವಾ ಮೂಲಭೂತ ಸತ್ಯವೊಂದನ್ನು ಕಲಿಸುತ್ತಿರುವುದಾದರೆ, ನೀವು ಏನನ್ನು ಚರ್ಚಿಸುತ್ತಿದ್ದೀರೊ ಅದನ್ನು ಸಮರ್ಥಿಸುವ ಪದಗಳನ್ನು ಅಥವಾ ಅಭಿವ್ಯಕ್ತಿಗಳನ್ನು ಆ ವಚನದಲ್ಲಿ ಒತ್ತಿಹೇಳುವುದು ಒಳ್ಳೇದು. ಇಲ್ಲದಿರುವಲ್ಲಿ, ನೀವು ಯಾರಿಗೆ ಓದಿಹೇಳುತ್ತಿದ್ದೀರೊ ಆ ವ್ಯಕ್ತಿಗೆ ಅದರ ಅಂಶವು ಅರ್ಥವಾಗಲಿಕ್ಕಿಲ್ಲ.
ಅರ್ಥಒತ್ತಿನಲ್ಲಿ, ಕೆಲವು ಪದಗಳಿಗೆ ಮತ್ತು ಪದಗಚ್ಛಗಳಿಗೆ ಹೆಚ್ಚು ಒತ್ತನ್ನು ನೀಡುವ ವಿಷಯವು ಒಳಗೂಡಿರುವುದರಿಂದ, ಅನನುಭವಿಯಾದ ಒಬ್ಬ ಭಾಷಣಕಾರನು ಆ ಪದಗಳನ್ನೂ ಪದಗುಚ್ಛಗಳನ್ನೂ ತೀರ ಹೆಚ್ಚು ಒತ್ತಿಹೇಳುವ ಪ್ರವೃತ್ತಿಯುಳ್ಳವನಾಗಿರುವ ಸಾಧ್ಯತೆಯಿದೆ. ಇದರ ಫಲಿತಾಂಶವು, ಸಂಗೀತೋಪಕರಣವನ್ನು ಕಲಿಯಲು ಈಗ ತಾನೇ ಆರಂಭಿಸಿರುವ ಒಬ್ಬನು ಸ್ವರಚಿಹ್ನೆಗಳನ್ನು ಒಂದೊಂದಾಗಿ ನುಡಿಸುವಂತಿರುವುದು. ಆದರೆ ಹೆಚ್ಚು ಪ್ರ್ಯಾಕ್ಟಿಸ್ ಮಾಡುವಲ್ಲಿ, ಆ ಒಂದೊಂದು “ಸ್ವರಚಿಹ್ನೆಗಳು” ಸೊಗಸಾಗಿ ವ್ಯಕ್ತಪಡಿಸಸಾಧ್ಯವಿರುವಂಥ “ಸಂಗೀತ”ದ ಭಾಗವಾಗಿ ಪರಿಣಮಿಸುವವು.
ನೀವು ಕೆಲವು ಮೂಲಭೂತ ವಿಷಯಗಳನ್ನು ಕಲಿತಾದ ಮೇಲೆ, ಅನುಭವಸ್ಥ ಭಾಷಣಕಾರರನ್ನು ಅವಲೋಕಿಸುವ ಮೂಲಕ ಪ್ರಯೋಜನ ಪಡೆಯುವ ಸ್ಥಾನದಲ್ಲಿರುವಿರಿ. ಆಗ ನೀವು ವಿವಿಧ ಮಟ್ಟಗಳ ಒತ್ತಿಹೇಳುವಿಕೆಯಿಂದ ಏನನ್ನು ಪೂರೈಸಸಾಧ್ಯವಿದೆ ಎಂಬುದನ್ನು ಬೇಗನೇ ಗ್ರಹಿಸುವಿರಿ. ಮತ್ತು ಏನು ಹೇಳಲ್ಪಟ್ಟಿತೋ ಆ ವಿಷಯದ ಅರ್ಥವನ್ನು ಸ್ಪಷ್ಟಪಡಿಸಲಿಕ್ಕಾಗಿ, ಒತ್ತಿಹೇಳುವುದನ್ನು ವಿವಿಧ ರೀತಿಯಲ್ಲಿ ಉಪಯೋಗಿಸುವುದರ ಮೌಲ್ಯವನ್ನು ನೀವು ಗಣ್ಯಮಾಡುವಿರಿ. ಸರಿಯಾದ ಅರ್ಥಒತ್ತನ್ನು ರೂಢಿಸಿಕೊಳ್ಳುವುದು, ನಿಮ್ಮ ಸ್ವಂತ ವಾಚನ ಮತ್ತು ಭಾಷಣಗಳ ಪರಿಣಾಮಕಾರಿತ್ವವನ್ನು ಅತಿಯಾಗಿ ವರ್ಧಿಸುವುದು.
ಅರ್ಥಒತ್ತಿನ ಕುರಿತು ತಿಳಿದುಕೊಂಡು ಅದನ್ನು ಉಪಯೋಗಿಸಲು ಸಾಕಾಗುವಷ್ಟನ್ನು ಮಾತ್ರ ಕಲಿಯಬೇಡಿರಿ. ಪರಿಣಾಮಕಾರಿಯಾಗಿ ಮಾತನಾಡುವ ಉದ್ದೇಶದಿಂದ, ಅರ್ಥಒತ್ತಿನಲ್ಲಿ ನಿಸ್ಸೀಮರಾಗುವ ತನಕ ಮತ್ತು ಬೇರೆಯವರ ಕಿವಿಗಳಿಗೆ ಇದು ಸ್ವಾಭಾವಿಕವಾದದ್ದಾಗಿ ಕೇಳಿಬರುವಂತಹ ರೀತಿಯಲ್ಲಿ ಉಪಯೋಗಿಸಸಾಧ್ಯವಾಗುವ ತನಕ ಇದನ್ನು ಅಭ್ಯಾಸ ಮಾಡುತ್ತಾ ಇರಿ.
-
-
ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದುದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
-
-
ಅಧ್ಯಾಯ 7
ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು
ಪರಿಣಾಮಕಾರಿಯಾದ ವಾಚಕನು ಒಂದೊಂದು ವಾಕ್ಯಕ್ಕಿಂತಲೂ ಹೆಚ್ಚಿನದ್ದನ್ನು ಪರಿಗಣಿಸುತ್ತಾನೆ ಮತ್ತು ಆ ವಾಕ್ಯವು ಕಂಡುಬರುವ ಪ್ಯಾರಗ್ರಾಫ್‌ಗಿಂತಲೂ ಮುಂದಕ್ಕೆ ನೋಡುತ್ತಾನೆ. ಅವನು ಓದುವಾಗ, ತಾನು ನೀಡುತ್ತಿರುವ ಪೂರ್ತಿ ಭಾಗದ ಪ್ರಧಾನ ವಿಚಾರಗಳು ಅವನ ಮನಸ್ಸಿನಲ್ಲಿರುತ್ತವೆ. ಇದು ಅವನ ಒತ್ತಿಹೇಳುವಿಕೆಯನ್ನು ಪ್ರಭಾವಿಸುತ್ತದೆ.
ಈ ವಿಧಾನವನ್ನು ಅನುಸರಿಸದಿರುವಲ್ಲಿ, ಭಾಷಣ ಶೈಲಿಯಲ್ಲಿ ಎದ್ದು ಕಾಣುವಂಥ ಅಂಶಗಳೇ ಇರುವುದಿಲ್ಲ. ಯಾವುದೂ ಸ್ಪಷ್ಟವಾಗಿ ಎದ್ದು ಕಾಣುವುದಿಲ್ಲ. ವಾಚನ ಮುಗಿದಾಗ, ಗಮನಾರ್ಹವಾದ ಯಾವುದೇ ಅಂಶವನ್ನು ನೆನಪಿಸಿಕೊಳ್ಳುವುದು ಕಷ್ಟಕರವಾಗಿದ್ದೀತು.
ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದಕ್ಕೆ ಕೊಡಲ್ಪಡುವ ಸರಿಯಾದ ಗಮನವು, ಅನೇಕವೇಳೆ ಬೈಬಲಿನಿಂದ ಯಾವುದಾದರೊಂದು ವೃತ್ತಾಂತದ ವಾಚನವನ್ನು ವರ್ಧಿಸಲು ಹೆಚ್ಚಿನದ್ದನ್ನು ಮಾಡಬಲ್ಲದು. ಇಂತಹ ಒತ್ತಿಹೇಳುವಿಕೆಯು, ಮನೆ ಬೈಬಲ್ ಅಧ್ಯಯನದಲ್ಲಿ ಅಥವಾ ಸಭಾ ಕೂಟದಲ್ಲಿ ಪ್ಯಾರಗ್ರಾಫ್‌ಗಳನ್ನು ಓದುವುದಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬಲ್ಲದು. ಮತ್ತು ನಮ್ಮ ಅಧಿವೇಶನಗಳಲ್ಲಿ ಕೆಲವೊಮ್ಮೆ ಕೊಡಲಾಗುವಂತೆ, ಹಸ್ತಪ್ರತಿಯ ಭಾಷಣವನ್ನು ಓದಿಹೇಳುವಾಗ ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ.
ಇದನ್ನು ಮಾಡುವ ವಿಧ. ದೇವಪ್ರಭುತ್ವಾತ್ಮಕ ಶಾಲೆಯಲ್ಲಿ ನಿಮಗೆ ಬೈಬಲಿನ ಒಂದು ಭಾಗವನ್ನು ಓದುವ ನೇಮಕವು ಸಿಗಬಹುದು. ಆಗ ಯಾವುದನ್ನು ಒತ್ತಿಹೇಳಬೇಕು? ನೀವು ಓದುವ ಭಾಗವು ಯಾವುದೊ ಕೇಂದ್ರೀಯ ವಿಚಾರ ಅಥವಾ ಪ್ರಮುಖ ಘಟನೆಯ ಸುತ್ತಲೂ ವಿಕಸಿಸಲ್ಪಟ್ಟಿರುವುದಾದರೆ, ಅದನ್ನು ಎದ್ದು ಕಾಣುವಂತೆ ಮಾಡುವುದು ಸೂಕ್ತವಾಗಿರುವುದು.
ನೀವು ಓದಲಿರುವ ಭಾಗವು ಪದ್ಯವಾಗಿರಲಿ ಗದ್ಯವಾಗಿರಲಿ, ಜ್ಞಾನೋಕ್ತಿಯಾಗಿರಲಿ ವೃತ್ತಾಂತ ನಿರೂಪಣೆಯಾಗಿರಲಿ, ಅದನ್ನು ಉತ್ತಮವಾಗಿ ಓದುವುದು ನಿಮ್ಮ ಸಭಿಕರಿಗೆ ಪ್ರಯೋಜನಕರವಾಗಿರುವುದು. (2 ತಿಮೊ. 3:16, 17) ಆದರೆ ಹಾಗೆ ಮಾಡಲಿಕ್ಕಾಗಿ, ನೀವು ಓದಲಿರುವ ಭಾಗಗಳನ್ನು ಮತ್ತು ನಿಮ್ಮ ಸಭಿಕರನ್ನು ಗಣನೆಗೆ ತೆಗೆದುಕೊಳ್ಳಲೇಬೇಕು.
ಒಂದು ಬೈಬಲ್ ಅಧ್ಯಯನದಲ್ಲಿ ಅಥವಾ ಸಭಾ ಕೂಟದಲ್ಲಿ ನೀವು ಒಂದು ಪುಸ್ತಕದಿಂದ ಗಟ್ಟಿಯಾಗಿ ಓದಲಿಕ್ಕಿರುವಲ್ಲಿ, ನೀವು ಒತ್ತಿಹೇಳಬೇಕಾಗಿರುವ ಪ್ರಧಾನ ವಿಚಾರಗಳಾವುವು? ಅಧ್ಯಯನದ ಮುದ್ರಿತ ಪ್ರಶ್ನೆಗಳಿಗೆ ಕೊಡಲ್ಪಟ್ಟಿರುವ ಉತ್ತರಗಳನ್ನು ಪ್ರಧಾನ ವಿಚಾರಗಳಾಗಿ ಪರಿಗಣಿಸಿರಿ. ಅಲ್ಲದೆ, ಈ ಭಾಗವು ಯಾವ ದಪ್ಪಕ್ಷರದ ಉಪಶಿರೋನಾಮದ ಕೆಳಗೆ ಕಂಡುಬರುತ್ತದೊ ಅದಕ್ಕೆ ಸಂಬಂಧಿಸುವ ವಿಷಯಗಳನ್ನೂ ಒತ್ತಿಹೇಳಿರಿ.
ಸಭೆಯಲ್ಲಿ ಭಾಷಣಗಳನ್ನು ಕೊಡುವಾಗ ಹಸ್ತಪ್ರತಿಯನ್ನು ಉಪಯೋಗಿಸುವುದನ್ನು ರೂಢಿ ಮಾಡಿಕೊಳ್ಳುವಂತೆ ಶಿಫಾರಸ್ಸು ಮಾಡಲಾಗುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ, ಎಲ್ಲ ಅಧಿವೇಶನಗಳಲ್ಲಿ ಒಂದೇ ರೀತಿಯ ವಿಚಾರಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗುವಂತೆ, ಕೆಲವು ಅಧಿವೇಶನ ಭಾಷಣಗಳಿಗೆ ಹಸ್ತಪ್ರತಿಗಳನ್ನು ಒದಗಿಸಲಾಗುತ್ತದೆ. ಇಂತಹ ಹಸ್ತಪ್ರತಿಗಳಲ್ಲಿರುವ ಪ್ರಧಾನ ವಿಚಾರಗಳನ್ನು ಒತ್ತಿಹೇಳಲಿಕ್ಕಾಗಿ, ಭಾಷಣಕಾರನು ಪ್ರಥಮವಾಗಿ ಭಾಷಣದ ವಿಷಯಭಾಗವನ್ನು ಜಾಗರೂಕತೆಯಿಂದ ವಿಶ್ಲೇಷಿಸಬೇಕು. ಅದರ ಮುಖ್ಯಾಂಶಗಳಾವುವು? ಅವನು ಇವುಗಳನ್ನು ಗುರುತಿಸಲು ಶಕ್ತನಾಗಿರಬೇಕು. ಅವನಿಗೆ ಆಸಕ್ತಿಕರವೆಂದು ಅನಿಸುವ ವಿಚಾರಗಳೇ ಮುಖ್ಯಾಂಶಗಳಾಗಿರುವುದಿಲ್ಲ. ಅವು, ಯಾವುದರ ಸುತ್ತಲೂ ಭಾಷಣದ ವಿಷಯಭಾಗವು ತಾನೇ ವಿಕಸಿಸಲ್ಪಟ್ಟಿದೆಯೊ ಆ ಮುಖ್ಯಾಲೋಚನೆಗಳಾಗಿವೆ. ಕೆಲವೊಮ್ಮೆ, ಹಸ್ತಪ್ರತಿಯಲ್ಲಿರುವ ಪ್ರಧಾನ ವಿಚಾರದ ಸಂಕ್ಷಿಪ್ತ ಹೇಳಿಕೆಯೊಂದು, ಒಂದು ನಿರೂಪಣೆಯನ್ನು ಅಥವಾ ವಾದಸರಣಿಯನ್ನು ಮುಂದಿಡುತ್ತದೆ. ಅನೇಕ ಬಾರಿ, ಸಮರ್ಥಿಸುವ ರುಜುವಾತನ್ನು ಪ್ರಸ್ತುತಪಡಿಸಿದ ನಂತರ, ಒಂದು ಬಲವಾದ ಹೇಳಿಕೆಯು ತಿಳಿಸಲ್ಪಡುತ್ತದೆ. ಈ ಪ್ರಧಾನ ಅಂಶಗಳನ್ನು ಕಂಡುಹಿಡಿದ ನಂತರ, ಭಾಷಣಕಾರನು ತನ್ನ ಹಸ್ತಪ್ರತಿಯಲ್ಲಿ ಅವುಗಳನ್ನು ಗುರುತುಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಇಂತಹ ಪ್ರಧಾನಾಂಶಗಳು ಕೇವಲ ಕೆಲವೇ ಇರುತ್ತವೆ, ಬಹುಮಟ್ಟಿಗೆ ನಾಲ್ಕು ಅಥವಾ ಐದಕ್ಕಿಂತ ಹೆಚ್ಚು ಇರುವುದಿಲ್ಲ. ಬಳಿಕ, ಸಭಿಕರು ಸುಲಭವಾಗಿ ಅವುಗಳನ್ನು ಗುರುತಿಸಸಾಧ್ಯವಿರುವಂಥ ರೀತಿಯಲ್ಲಿ ಅವನು ಓದುವುದನ್ನು ಪ್ರ್ಯಾಕ್ಟಿಸ್ ಮಾಡುವ ಅಗತ್ಯವಿದೆ. ಇವು ಭಾಷಣದ ಪ್ರಮುಖ ಹಂತಗಳಾಗಿವೆ. ಈ ಭಾಷಣದ ಭಾಗವನ್ನು ಸರಿಯಾದ ಒತ್ತಿನೊಂದಿಗೆ ನೀಡುವುದಾದರೆ, ಈ ಪ್ರಧಾನ ವಿಚಾರಗಳು ಜ್ಞಾಪಿಸಿಕೊಳ್ಳಲ್ಪಡುವುದು ಹೆಚ್ಚು ಸಂಭವನೀಯ. ಇದು ಭಾಷಣಕಾರನ ಗುರಿಯಾಗಿರಬೇಕು.
ಸಭಿಕರು ಮುಖ್ಯಾಂಶಗಳನ್ನು ಗುರುತಿಸುವಂತೆ ಸಹಾಯಮಾಡಲು ಭಾಷಣಕಾರನು ಅಗತ್ಯವಿರುವ ಒತ್ತಿಹೇಳುವಿಕೆಯನ್ನು ವ್ಯಕ್ತಪಡಿಸುವ ಅನೇಕ ವಿಧಗಳಿವೆ. ಹೆಚ್ಚಿನ ಉತ್ಸಾಹ, ವೇಗದಲ್ಲಿ ಬದಲಾವಣೆ, ಭಾವಪೂರ್ಣತೆಯ ಗಾಢತೆ ಅಥವಾ ಸೂಕ್ತವಾದ ಭಾವಾಭಿನಯಗಳು—ಇವು ಆ ವಿಧಗಳಲ್ಲಿ ಕೆಲವಾಗಿವೆ.
-