ಅ. ಕಾರ್ಯ
19 ಈ ಮಧ್ಯೆ, ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಒಳನಾಡಿನ ಮಾರ್ಗವಾಗಿ ಎಫೆಸಕ್ಕೆ ಬಂದು ಕೆಲವು ಶಿಷ್ಯರನ್ನು ಕಂಡನು; 2 ಅವನು ಅವರಿಗೆ, “ನೀವು ವಿಶ್ವಾಸಿಗಳಾದಾಗ ಪವಿತ್ರಾತ್ಮವನ್ನು ಪಡೆದುಕೊಂಡಿರೊ?” ಎಂದು ಕೇಳಿದನು. ಅವರು ಅವನಿಗೆ, “ಪವಿತ್ರಾತ್ಮವು ಇದೆ ಎಂಬುದನ್ನು ನಾವು ಎಂದೂ ಕೇಳಿಸಿಕೊಂಡಿಲ್ಲ” ಎಂದರು. 3 ಅದಕ್ಕೆ ಅವನು, “ಹಾಗಾದರೆ ನೀವು ಯಾವ ದೀಕ್ಷಾಸ್ನಾನವನ್ನು ಪಡೆದುಕೊಂಡಿರಿ?” ಎಂದು ಕೇಳಿದಾಗ ಅವರು, “ಯೋಹಾನನ ದೀಕ್ಷಾಸ್ನಾನವನ್ನು” ಎಂದು ಹೇಳಿದರು. 4 ಪೌಲನು ಅವರಿಗೆ, “ಯೋಹಾನನು ತನ್ನ ಅನಂತರ ಬರುವವನಲ್ಲಿ ಅಂದರೆ ಯೇಸುವಿನಲ್ಲಿ ನಂಬಿಕೆಯಿಡುವಂತೆ ಜನರಿಗೆ ತಿಳಿಸುತ್ತಾ ಪಶ್ಚಾತ್ತಾಪದ ಸಂಕೇತವಾದ ದೀಕ್ಷಾಸ್ನಾನವನ್ನು ಮಾಡಿಸಿದನು” ಎಂದನು. 5 ಅವರು ಈ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು. 6 ಮತ್ತು ಪೌಲನು ಅವರ ಮೇಲೆ ಕೈಗಳನ್ನಿಟ್ಟಾಗ ಪವಿತ್ರಾತ್ಮವು ಅವರ ಮೇಲೆ ಬಂದು ಅವರು ವಿವಿಧ ಭಾಷೆಗಳಲ್ಲಿ ಮಾತಾಡಲಾರಂಭಿಸಿದರು ಮತ್ತು ಪ್ರವಾದಿಸಿದರು. 7 ಒಟ್ಟಿಗೆ ಸುಮಾರು ಹನ್ನೆರಡು ಮಂದಿ ಪುರುಷರು ಅಲ್ಲಿದ್ದರು.
8 ಅವನು ಸಭಾಮಂದಿರವನ್ನು ಪ್ರವೇಶಿಸಿ ಮೂರು ತಿಂಗಳ ವರೆಗೆ ಅಲ್ಲಿ ಭಾಷಣ ನೀಡುತ್ತಾ ದೇವರ ರಾಜ್ಯದ ಕುರಿತು ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತಾಡಿದನು. 9 ಆದರೆ ಕೆಲವರು ತಮ್ಮನ್ನು ಕಠಿಣಪಡಿಸಿಕೊಂಡು ನಂಬಿಕೆಯಿಡದೆ ‘ಆ ಮಾರ್ಗದ’ ಕುರಿತು ಜನಸಮೂಹದ ಮುಂದೆ ಕೆಟ್ಟದಾಗಿ ಮಾತಾಡಿದಾಗ ಅವನು ಅವರನ್ನು ಬಿಟ್ಟು ಶಿಷ್ಯರನ್ನು ಅವರಿಂದ ಬೇರ್ಪಡಿಸಿ ತುರನ್ನನ ಶಾಲೆಯ ಸಭಾಂಗಣದಲ್ಲಿ ಪ್ರತಿದಿನ ಭಾಷಣ ನೀಡುತ್ತಾ ಇದ್ದನು. 10 ಇದು ಎರಡು ವರ್ಷಗಳ ವರೆಗೆ ನಡೆಯಿತು; ಇದರಿಂದಾಗಿ ಏಷ್ಯಾ ಪ್ರಾಂತದಲ್ಲಿ ವಾಸಿಸುತ್ತಿದ್ದ ಯೆಹೂದ್ಯರೂ ಗ್ರೀಕರೂ ಕರ್ತನ ವಾಕ್ಯವನ್ನು ಕೇಳಿಸಿಕೊಂಡರು.
11 ದೇವರು ಪೌಲನ ಕೈಗಳಿಂದ ಅಸಾಧಾರಣವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದನು; 12 ಇದರಿಂದಾಗಿ ಜನರು ಅವನಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು ಮತ್ತು ದೆವ್ವಗಳು ಹೊರಗೆ ಬಂದವು. 13 ಆದರೆ ದೇಶಸಂಚಾರ ಮಾಡುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದ ಯೆಹೂದ್ಯರಲ್ಲಿ ಕೆಲವರು ಸಹ ದೆವ್ವಹಿಡಿದವರ ಮೇಲೆ ಕರ್ತನಾದ ಯೇಸುವಿನ ಹೆಸರನ್ನು ಉಪಯೋಗಿಸಿ, “ಪೌಲನು ಸಾರುವ ಯೇಸುವಿನ ಹೆಸರಿನಲ್ಲಿ ನಾನು ನಿಮಗೆ ಅಪ್ಪಣೆಕೊಡುತ್ತೇನೆ” ಎಂದು ಹೇಳುತ್ತಿದ್ದರು. 14 ಒಬ್ಬ ಯೆಹೂದಿ ಮುಖ್ಯ ಯಾಜಕನಾಗಿದ್ದ ಸ್ಕೇವನ ಏಳು ಮಂದಿ ಪುತ್ರರು ಹೀಗೆ ಮಾಡುತ್ತಿದ್ದರು. 15 ಆದರೆ ದೆವ್ವವು ಅವರಿಗೆ ಪ್ರತ್ಯುತ್ತರವಾಗಿ, “ನಾನು ಯೇಸುವನ್ನು ಬಲ್ಲೆ, ಪೌಲನ ಪರಿಚಯವೂ ನನಗಿದೆ; ಆದರೆ ನೀವು ಯಾರು?” ಎಂದಿತು. 16 ನಂತರ ದೆವ್ವಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಒಬ್ಬರ ಹಿಂದೆ ಇನ್ನೊಬ್ಬರನ್ನು ಸೋಲಿಸಿ ಅವರ ವಿರುದ್ಧ ಮೇಲುಗೈ ಪಡೆದುದರಿಂದ ಅವರು ಗಾಯಗೊಂಡು ಬೆತ್ತಲೆಯಾಗಿ ಆ ಮನೆಯಿಂದ ಓಡಿಹೋದರು. 17 ಇದು ಎಫೆಸದಲ್ಲಿ ವಾಸಿಸುತ್ತಿದ್ದ ಎಲ್ಲ ಯೆಹೂದ್ಯರಿಗೂ ಗ್ರೀಕರಿಗೂ ತಿಳಿದುಬಂತು; ಅವರೆಲ್ಲರೂ ತುಂಬ ಭಯಗೊಂಡರು ಮತ್ತು ಕರ್ತನಾದ ಯೇಸುವಿನ ಹೆಸರು ಮಹಿಮೆಹೊಂದುತ್ತಾ ಹೋಯಿತು. 18 ವಿಶ್ವಾಸಿಗಳಾಗಿದ್ದವರಲ್ಲಿ ಅನೇಕರು ಬಂದು ಪಾಪನಿವೇದನೆಮಾಡಿ ತಮ್ಮ ಕೃತ್ಯಗಳನ್ನು ಮುಕ್ತವಾಗಿ ತಿಳಿಸುತ್ತಿದ್ದರು. 19 ಇದಲ್ಲದೆ ಮಾಟಮಂತ್ರಗಳನ್ನು ಮಾಡುತ್ತಿದ್ದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಒಟ್ಟುಗೂಡಿಸಿ ಎಲ್ಲರ ಮುಂದೆ ಅವುಗಳನ್ನು ಸುಟ್ಟುಬಿಟ್ಟರು. ಅವರು ಅವುಗಳ ಒಟ್ಟು ಬೆಲೆಯನ್ನು ಲೆಕ್ಕಮಾಡಿದಾಗ ಅದು ಐವತ್ತು ಸಾವಿರ ಬೆಳ್ಳಿ ನಾಣ್ಯ ಆಗಿತ್ತೆಂದು ತಿಳಿದುಕೊಂಡರು. 20 ಈ ರೀತಿಯಲ್ಲಿ ಯೆಹೋವನ ವಾಕ್ಯವು ಪ್ರಬಲವಾಗಿ ಬೆಳೆಯುತ್ತಾ ಅಭಿವೃದ್ಧಿಹೊಂದಿತು.
21 ಈ ಸಂಗತಿಗಳು ನಡೆದ ಬಳಿಕ ಪೌಲನು ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಸಂಚರಿಸಿ ಯೆರೂಸಲೇಮಿಗೆ ಹೋಗಬೇಕೆಂದು ತನ್ನ ಮನಸ್ಸಿನಲ್ಲಿ ಉದ್ದೇಶಿಸುತ್ತಾ, “ಅಲ್ಲಿಗೆ ಹೋದ ನಂತರ ರೋಮ್ ಪಟ್ಟಣವನ್ನು ಸಹ ನೋಡಬೇಕು” ಎಂದುಕೊಂಡನು. 22 ಆದುದರಿಂದ ಅವನು ತನ್ನ ಸೇವೆಮಾಡುತ್ತಿದ್ದವರಲ್ಲಿ ಇಬ್ಬರಾದ ತಿಮೊಥೆಯ ಮತ್ತು ಎರಸ್ತನನ್ನು ಮಕೆದೋನ್ಯಕ್ಕೆ ಕಳುಹಿಸಿ ತಾನು ಸ್ವಲ್ಪ ಕಾಲದ ವರೆಗೆ ಏಷ್ಯಾ ಪ್ರಾಂತದಲ್ಲೇ ಉಳಿದನು.
23 ಅದೇ ಸಮಯದಲ್ಲಿ ಅಲ್ಲಿ ‘ಆ ಮಾರ್ಗದ’ ವಿಷಯವಾಗಿ ದೊಡ್ಡ ಗಲಭೆಯು ಉಂಟಾಯಿತು. 24 ಏಕೆಂದರೆ ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀದೇವಿಯ ಚಿಕ್ಕ ಗುಡಿಗಳನ್ನು ಮಾಡಿಸುತ್ತಾ ಅಕ್ಕಸಾಲಿಗರಿಗೆ ತುಂಬ ಆದಾಯ ಸಿಗುವಂತೆ ಮಾಡುತ್ತಿದ್ದನು; 25 ಅವನು ಅವರನ್ನೂ ಅಂಥ ಕೆಲಸಮಾಡುತ್ತಿದ್ದವರನ್ನೂ ಒಟ್ಟುಗೂಡಿಸಿ, “ಜನರೇ, ಈ ವ್ಯಾಪಾರದಿಂದ ನಮಗೆ ತುಂಬ ಆದಾಯವಿದೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. 26 ಆದರೆ ಕೈಯಿಂದ ಮಾಡಿದ ವಿಗ್ರಹಗಳು ದೇವತೆಗಳಲ್ಲವೆಂದು ಈ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಮೆ ಇಡೀ ಏಷ್ಯಾ ಪ್ರಾಂತದಲ್ಲಿ ಸಾಕಷ್ಟು ಜನರನ್ನು ಒಡಂಬಡಿಸಿ ಅವರ ಮನಸ್ಸನ್ನು ಬೇರೊಂದು ಅಭಿಪ್ರಾಯದ ಕಡೆಗೆ ತಿರುಗಿಸಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ ಮತ್ತು ಕೇಳುತ್ತಿದ್ದೀರಿ. 27 ಇದರಿಂದಾಗಿ ನಮ್ಮ ಈ ವೃತ್ತಿಗೆ ಅಪಕೀರ್ತಿ ಬರುವುದು ಮಾತ್ರವಲ್ಲ ಮಹಾದೇವಿಯಾದ ಅರ್ತೆಮೀಯ ದೇವಸ್ಥಾನವು ಪ್ರಯೋಜನಕ್ಕೆ ಬಾರದ್ದಾಗಿ ಎಣಿಸಲ್ಪಡುವ ಮತ್ತು ಇಡೀ ಏಷ್ಯಾ ಪ್ರಾಂತವೂ ನಿವಾಸಿತ ಭೂಮಿಯೂ ಆರಾಧಿಸುವಂಥ ಅವಳ ವೈಭವವು ಸಹ ಸಂಪೂರ್ಣವಾಗಿ ಇಲ್ಲದೆ ಹೋಗುವ ಅಪಾಯವಿದೆ” ಎಂದನು. 28 ಈ ಮಾತುಗಳನ್ನು ಕೇಳಿ ಆ ಪುರುಷರು ಕೋಪೋದ್ರಿಕ್ತರಾಗಿ, “ಎಫೆಸದವರ ಅರ್ತೆಮೀದೇವಿ ಮಹಾದೇವಿ!” ಎಂದು ಆರ್ಭಟಿಸತೊಡಗಿದರು.
29 ಆಗ ಆ ಪಟ್ಟಣದಾದ್ಯಂತ ಗಲಿಬಿಲಿ ಉಂಟಾಗಿ ಅವರೆಲ್ಲರೂ ಒಟ್ಟುಗೂಡಿ ಮಕೆದೋನ್ಯದವರೂ ಪೌಲನ ಪ್ರಯಾಣ ಸಂಗಡಿಗರೂ ಆಗಿದ್ದ ಗಾಯನನ್ನೂ ಅರಿಸ್ತಾರ್ಕನನ್ನೂ ಹಿಡಿದು ನಾಟಕಶಾಲೆಯೊಳಗೆ ಬಲವಂತವಾಗಿ ಎಳೆದುಕೊಂಡು ಹೋದರು. 30 ಪೌಲನು ನಾಟಕಶಾಲೆಯೊಳಗೆ ಜನರ ಬಳಿಗೆ ಹೋಗಲು ಸಿದ್ಧನಾಗಿದ್ದರೂ ಶಿಷ್ಯರು ಅವನನ್ನು ಹೋಗಲು ಬಿಡಲಿಲ್ಲ. 31 ಪೌಲನೊಂದಿಗೆ ಗೆಳೆತನದಿಂದಿದ್ದ ಹಬ್ಬಗಳ ಮತ್ತು ಕ್ರೀಡೆಗಳ ಅಧಿಕಾರಿಗಳಲ್ಲಿ ಕೆಲವರು ಸಹ ಅವನಿಗೆ ಸಂದೇಶವನ್ನು ಕಳುಹಿಸಿ ನಾಟಕಶಾಲೆಯೊಳಗೆ ಹೋಗಿ ತನ್ನನ್ನು ಅಪಾಯಕ್ಕೊಡ್ಡಿಕೊಳ್ಳದಂತೆ ಬೇಡಿಕೊಂಡರು. 32 ಏಕೆಂದರೆ ಅಲ್ಲಿ ಕೆಲವರು ಒಂದು ರೀತಿಯಲ್ಲಿ ಇತರರು ಬೇರೊಂದು ರೀತಿಯಲ್ಲಿ ಬೊಬ್ಬೆಹಾಕುತ್ತಾ ಇದ್ದರು; ಸಭೆಯು ಗಲಿಬಿಲಿಗೊಂಡಿತ್ತು ಮತ್ತು ಹೆಚ್ಚಿನವರಿಗೆ ತಾವು ಕೂಡಿಬಂದಿದ್ದ ಕಾರಣವು ತಿಳಿದಿರಲಿಲ್ಲ. 33 ಆದುದರಿಂದ ಅವರು ಒಟ್ಟಾಗಿ ಅಲೆಕ್ಸಾಂದ್ರನನ್ನು ಜನರ ಗುಂಪಿನಿಂದ ಹೊರತಂದರು ಮತ್ತು ಯೆಹೂದ್ಯರು ಅವನನ್ನು ಮುಂದಕ್ಕೆ ತಳ್ಳಿದರು; ಅಲೆಕ್ಸಾಂದ್ರನು ಜನರ ಮುಂದೆ ಪ್ರತಿವಾದಿಸಲು ಬಯಸುತ್ತಾ ಕೈಸನ್ನೆ ಮಾಡಿದನು. 34 ಆದರೆ ಅವನು ಯೆಹೂದ್ಯನೆಂದು ಅವರಿಗೆ ತಿಳಿದಾಗ ಅವರೆಲ್ಲರೂ ಒಟ್ಟಾಗಿ, “ಎಫೆಸದವರ ಅರ್ತೆಮೀದೇವಿ ಮಹಾದೇವಿ!” ಎಂದು ಸುಮಾರು ಎರಡು ತಾಸುಗಳ ವರೆಗೆ ಕೂಗಿದರು.
35 ಕೊನೆಗೆ ಪಟ್ಟಣದ ದಾಖಲೆದಾರನು ಜನರ ಗುಂಪನ್ನು ಸುಮ್ಮನಿರಿಸಿ, “ಎಫೆಸದ ಜನರೇ, ಎಫೆಸದವರ ಪಟ್ಟಣವು ಮಹಾದೇವಿ ಅರ್ತೆಮೀಗೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ ದೇವಸ್ಥಾನವಾಗಿದೆ ಎಂಬುದನ್ನು ತಿಳಿಯದವನು ಮಾನವಕುಲದಲ್ಲಿ ಯಾರಿದ್ದಾನೆ? 36 ಈ ವಿಷಯಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲದ ಕಾರಣ ನೀವು ದುಡುಕಿ ಕ್ರಿಯೆಗೈಯದೆ ತಾಳ್ಮೆಯಿಂದಿರುವುದು ಒಳ್ಳೇದು. 37 ನೀವು ಕರೆದು ತಂದಿರುವ ಈ ಮನುಷ್ಯರು ದೇವಸ್ಥಾನಗಳ ಕಳ್ಳರೂ ಅಲ್ಲ ನಮ್ಮ ಮಹಾದೇವಿಯನ್ನು ದೂಷಿಸುವವರೂ ಅಲ್ಲ. 38 ಆದುದರಿಂದ ದೇಮೇತ್ರಿಯನಿಗೂ ಅವನೊಂದಿಗಿರುವ ಅಕ್ಕಸಾಲಿಗರಿಗೂ ಯಾರ ವಿರುದ್ಧವಾದರೂ ವ್ಯಾಜ್ಯವಿರುವುದಾದರೆ ನ್ಯಾಯವಿಚಾರಿಸುವ ದಿನಗಳಿವೆ ಮತ್ತು ಪ್ರಾಂತಾಧಿಪತಿಗಳಿದ್ದಾರೆ; ಅವರು ಹೋಗಿ ಒಬ್ಬರ ಮೇಲೊಬ್ಬರು ದೂರುಕೊಡಲಿ. 39 ನಿಮಗೆ ಇದಕ್ಕಿಂತಲೂ ಹೆಚ್ಚಿನ ವಿಚಾರಣೆ ಬೇಕಾದರೆ ಅದು ಕಾನೂನುಬದ್ಧ ಸಭೆಯಲ್ಲಿ ತೀರ್ಮಾನಿಸಲ್ಪಡಬೇಕು. 40 ಇಂದಿನ ಪರಿಸ್ಥಿತಿಯನ್ನು ನೋಡಿದರೆ ನಿಜವಾಗಿಯೂ ನಾವು ರಾಜದ್ರೋಹದ ಆಪಾದನೆಯನ್ನು ಹೊಂದುವ ಅಪಾಯದಲ್ಲಿದ್ದೇವೆ; ಈ ದೊಂಬಿಯ ಕುರಿತು ವಿಚಾರಣೆ ನಡೆದರೆ ನಮ್ಮಿಂದ ಉತ್ತರಕೊಡುವುದಕ್ಕೆ ಆಗುವುದೇ ಇಲ್ಲ” ಎಂದು ಹೇಳಿದನು. 41 ಈ ವಿಷಯಗಳನ್ನು ಹೇಳಿದ ಬಳಿಕ ಅವನು ಸಭೆಯನ್ನು ಚದರಿಸಿಬಿಟ್ಟನು.