ಮತ್ತಾಯ
8 ಅವನು ಬೆಟ್ಟದಿಂದ ಇಳಿದು ಬಂದ ಮೇಲೆ ಜನರು ಗುಂಪುಗುಂಪಾಗಿ ಅವನನ್ನು ಹಿಂಬಾಲಿಸಿದರು. 2 ಆಗ ಒಬ್ಬ ಕುಷ್ಠರೋಗಿಯು ಅಲ್ಲಿಗೆ ಬಂದು ಅವನಿಗೆ ಪ್ರಣಾಮಮಾಡಲಾರಂಭಿಸುತ್ತಾ, “ಕರ್ತನೇ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಹೇಳಿದನು. 3 ಅವನು ತನ್ನ ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು. ಶುದ್ಧನಾಗು” ಎಂದು ಹೇಳಿದನು. ಕೂಡಲೆ ಅವನ ಕುಷ್ಠವು ವಾಸಿಯಾಗಿ ಅವನು ಶುದ್ಧನಾದನು. 4 ಆಗ ಯೇಸು ಅವನಿಗೆ, “ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿ ಮೋಶೆಯು ನೇಮಿಸಿದ ಕಾಣಿಕೆಯನ್ನು ಸಮರ್ಪಿಸು. ಇದು ಅವರಿಗೆ ಸಾಕ್ಷಿಯಾಗಲಿ” ಎಂದು ಹೇಳಿದನು.
5 ಅವನು ಕಪೆರ್ನೌಮಿಗೆ ಬಂದಾಗ ಒಬ್ಬ ಶತಾಧಿಪತಿಯು ಅವನ ಬಳಿಗೆ ಬಂದು ಬೇಡಿಕೊಳ್ಳುತ್ತಾ, 6 “ಸ್ವಾಮಿ, ನನ್ನ ಗಂಡಾಳು ಪಾರ್ಶ್ವವಾಯು ರೋಗದಿಂದ ಬಹಳ ನರಳುತ್ತಾ ಮನೆಯಲ್ಲಿ ಮಲಗಿದ್ದಾನೆ” ಎಂದು ಹೇಳಿದನು. 7 ಅದಕ್ಕೆ ಅವನು, “ನಾನು ಅಲ್ಲಿಗೆ ಬಂದಾಗ ಅವನನ್ನು ವಾಸಿಮಾಡುವೆನು” ಎಂದನು. 8 ಆಗ ಶತಾಧಿಪತಿಯು, “ಸ್ವಾಮೀ, ನೀನು ನನ್ನ ಮನೆಯೊಳಗೆ ಬರುವುದಕ್ಕೆ ನಾನು ಯೋಗ್ಯನಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಗಂಡಾಳು ವಾಸಿಯಾಗುವನು. 9 ನಾನು ಸಹ ಅಧಿಕಾರದ ಕೆಳಗಿರುವವನು; ನನ್ನ ಕೆಳಗೆ ಸೈನಿಕರಿದ್ದಾರೆ. ನಾನು ಅವರಲ್ಲಿ ಒಬ್ಬನಿಗೆ ‘ಹೋಗು’ ಎಂದು ಹೇಳಿದರೆ ಹೋಗುತ್ತಾನೆ; ಇನ್ನೊಬ್ಬನಿಗೆ ‘ಬಾ’ ಎಂದು ಹೇಳಿದರೆ ಬರುತ್ತಾನೆ ಮತ್ತು ನನ್ನ ಸೇವಕನಿಗೆ ‘ಇದನ್ನು ಮಾಡು’ ಎಂದು ಹೇಳಿದರೆ ಅವನು ಮಾಡುತ್ತಾನೆ” ಎಂದು ಉತ್ತರಿಸಿದನು. 10 ಇದನ್ನು ಕೇಳಿ ಯೇಸು ಆಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದವರಿಗೆ, “ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲಿನಲ್ಲಿ ಯಾರಲ್ಲಿಯೂ ಕಂಡಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 11 ಪೂರ್ವದಿಂದಲೂ ಪಶ್ಚಿಮದಿಂದಲೂ ಅನೇಕರು ಬಂದು ಸ್ವರ್ಗದ ರಾಜ್ಯದಲ್ಲಿ ಅಬ್ರಹಾಮ, ಇಸಾಕ ಮತ್ತು ಯಾಕೋಬರೊಂದಿಗೆ ಊಟಕ್ಕೆ ಕುಳಿತುಕೊಳ್ಳುವರು ಎಂದು ನಿಮಗೆ ಹೇಳುತ್ತೇನೆ; 12 ಆದರೆ ರಾಜ್ಯದ ಪುತ್ರರು ಹೊರಗೆ ಕತ್ತಲೆಗೆ ಎಸೆಯಲ್ಪಡುವರು. ಅಲ್ಲಿ ಅವರ ಗೋಳಾಟವೂ ಹಲ್ಲುಕಡಿಯೋಣವೂ ಇರುವುದು” ಎಂದು ಹೇಳಿದನು. 13 ನಂತರ ಯೇಸು ಆ ಶತಾಧಿಪತಿಗೆ, “ಹೋಗು, ನೀನು ನಂಬಿದಂತೆಯೇ ನಿನಗಾಗಲಿ” ಎಂದನು. ಅದೇ ಗಳಿಗೆಯಲ್ಲಿ ಆ ಗಂಡಾಳಿಗೆ ವಾಸಿಯಾಯಿತು.
14 ಬಳಿಕ ಯೇಸು ಪೇತ್ರನ ಮನೆಗೆ ಬಂದಾಗ ಅವನ ಅತ್ತೆ ಜ್ವರದಿಂದ ಅಸ್ವಸ್ಥಳಾಗಿ ಮಲಗಿರುವುದನ್ನು ಕಂಡನು. 15 ಅವನು ಅವಳ ಕೈಯನ್ನು ಮುಟ್ಟಿದಾಗ ಜ್ವರವು ಅವಳನ್ನು ಬಿಟ್ಟುಹೋಯಿತು ಮತ್ತು ಅವಳು ಎದ್ದು ಅವನನ್ನು ಉಪಚರಿಸತೊಡಗಿದಳು. 16 ಸಂಜೆಯಾದಾಗ ಜನರು ದೆವ್ವಹಿಡಿದಿದ್ದ ಅನೇಕರನ್ನು ಅವನ ಬಳಿಗೆ ಕರೆತಂದರು; ಅವನು ಒಂದೇ ಮಾತಿನಿಂದ ದೆವ್ವಗಳನ್ನು ಬಿಡಿಸಿ ಅಸ್ವಸ್ಥರಾಗಿದ್ದ ಎಲ್ಲರನ್ನೂ ವಾಸಿಮಾಡಿದನು; 17 ಹೀಗೆ ಪ್ರವಾದಿಯಾದ ಯೆಶಾಯನ ಮೂಲಕ ತಿಳಿಸಲ್ಪಟ್ಟ ಮಾತು ನೆರವೇರುವಂತಾಯಿತು. ಅದೇನೆಂದರೆ, “ಅವನು ನಮ್ಮ ಕಾಯಿಲೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು.”
18 ಯೇಸು ತನ್ನ ಸುತ್ತಲೂ ಇದ್ದ ಜನರ ಗುಂಪನ್ನು ಕಂಡು, ಆಚೇದಡಕ್ಕೆ ಹೋಗುವಂತೆ ತನ್ನ ಶಿಷ್ಯರಿಗೆ ಅಪ್ಪಣೆಕೊಟ್ಟನು. 19 ಆಗ ಒಬ್ಬ ಶಾಸ್ತ್ರಿಯು ಅವನ ಬಳಿಗೆ ಬಂದು, “ಬೋಧಕನೇ, ನೀನು ಎಲ್ಲಿಗೆ ಹೋಗಲಿರುವುದಾದರೂ ನಾನು ನಿನ್ನನ್ನು ಹಿಂಬಾಲಿಸುವೆ” ಎಂದನು. 20 ಅದಕ್ಕೆ ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದ ಪಕ್ಷಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ” ಎಂದು ಹೇಳಿದನು. 21 ಆಗ ಇನ್ನೊಬ್ಬ ಶಿಷ್ಯನು ಅವನಿಗೆ, “ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯನ್ನು ಹೂಣಿಟ್ಟು ಬರಲು ಅನುಮತಿ ಕೊಡು” ಎಂದನು. 22 ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸುತ್ತಾ ಇರು; ಸತ್ತವರೇ ತಮ್ಮ ಸತ್ತವರನ್ನು ಹೂಣಿಡಲಿ” ಎಂದು ಹೇಳಿದನು.
23 ಮತ್ತು ಅವನು ದೋಣಿಯನ್ನು ಹತ್ತಿದಾಗ ಅವನ ಶಿಷ್ಯರೂ ಅವನ ಹಿಂದೆ ಹೋದರು. 24 ಅವರು ಹೋಗುತ್ತಿರುವಾಗ ಸಮುದ್ರದಲ್ಲಿ ದೊಡ್ಡ ಅಲ್ಲೋಲಕಲ್ಲೋಲ ಉಂಟಾಗಿ ದೋಣಿಯು ಅಲೆಗಳಿಂದ ಆವೃತವಾಗುತ್ತಾ ಇತ್ತು; ಆದರೆ ಅವನು ನಿದ್ರೆಮಾಡುತ್ತಾ ಇದ್ದನು. 25 ಆಗ ಅವರು ಬಂದು ಅವನನ್ನು ಎಬ್ಬಿಸಿ, “ಕರ್ತನೇ ನಮ್ಮನ್ನು ರಕ್ಷಿಸು, ನಾವು ಮುಳುಗಿ ಸಾಯಲಿಕ್ಕಿದ್ದೇವೆ” ಎಂದರು. 26 ಆದರೆ ಅವನು ಅವರಿಗೆ, “ಅಲ್ಪವಿಶ್ವಾಸಿಗಳೇ, ನೀವೇಕೆ ಭಯಪಡುತ್ತೀರಿ?” ಎಂದು ಹೇಳಿ, ಎದ್ದುನಿಂತು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು; ಆಗ ಎಲ್ಲವೂ ಶಾಂತವಾಯಿತು. 27 ಆದುದರಿಂದ ಜನರು ಆಶ್ಚರ್ಯಪಟ್ಟು, “ಇವನು ಎಂಥ ವ್ಯಕ್ತಿಯಾಗಿರಬಹುದು! ಗಾಳಿಯೂ ಸಮುದ್ರವೂ ಇವನ ಮಾತುಗಳನ್ನು ಪಾಲಿಸುತ್ತವಲ್ಲಾ?” ಎಂದರು.
28 ಅವನು ಆಚೇದಡದಲ್ಲಿದ್ದ ಗದರೇನರ ಪ್ರಾಂತವನ್ನು ತಲಪಿದಾಗ, ದೆವ್ವಹಿಡಿದಿದ್ದ ಇಬ್ಬರು ಮನುಷ್ಯರು ಸ್ಮರಣೆಯ ಸಮಾಧಿಗಳ ಮಧ್ಯದಿಂದ ಬಂದು ಅವನನ್ನು ಎದುರುಗೊಂಡರು. ಅವರು ಅಸಾಧಾರಣವಾಗಿ ಕ್ರೂರಿಗಳಾಗಿದ್ದ ಕಾರಣ ಆ ದಾರಿಯಲ್ಲಿ ಹಾದುಹೋಗಲು ಯಾರಿಗೂ ಧೈರ್ಯವಿರಲಿಲ್ಲ. 29 ಅವರು “ದೇವರ ಪುತ್ರನೇ ನಮ್ಮ ಗೊಡವೆ ನಿನಗೇಕೆ? ನೇಮಿತ ಸಮಯಕ್ಕೆ ಮುಂಚೆಯೇ ನಮ್ಮನ್ನು ಕಾಡುವುದಕ್ಕೆ ಇಲ್ಲಿಗೆ ಬಂದೆಯಾ?” ಎಂದು ಕಿರಿಚಿದರು. 30 ಅವರಿಂದ ಬಹಳ ದೂರದಲ್ಲಿ ಹಂದಿಗಳ ಒಂದು ಹಿಂಡು ಮೇಯುತ್ತಿತ್ತು. 31 ಆಗ ದೆವ್ವಗಳು ಅವನಿಗೆ, “ನೀನು ನಮ್ಮನ್ನು ಬಿಡಿಸುವಲ್ಲಿ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಬಿಡು” ಎಂದು ಬೇಡಿಕೊಂಡವು. 32 ಅವನು ಅವುಗಳಿಗೆ “ಹೋಗಿ” ಎಂದನು. ಅವು ಹೊರಬಂದು ಹಂದಿಗಳೊಳಗೆ ಸೇರಿಕೊಂಡವು; ಆ ಹಂದಿಗಳ ಇಡೀ ಹಿಂಡು ಓಡಿ ಬೆಟ್ಟದ ಕಡಿದಾದ ಸ್ಥಳದಿಂದ ಸಮುದ್ರಕ್ಕೆ ಧುಮುಕಿ ನೀರಿನಲ್ಲಿ ಮುಳುಗಿ ಸತ್ತುಹೋಯಿತು. 33 ಅವುಗಳನ್ನು ಮೇಯಿಸುತ್ತಿದ್ದವರು ಅಲ್ಲಿಂದ ಊರೊಳಕ್ಕೆ ಓಡಿಹೋಗಿ ದೆವ್ವಹಿಡಿದಿದ್ದ ಮನುಷ್ಯರಿಗೆ ಸಂಭವಿಸಿದ್ದನ್ನು ಸೇರಿಸಿ ಎಲ್ಲ ಸಂಗತಿಯನ್ನು ತಿಳಿಸಿದರು. 34 ಆಗ ಊರಿನವರೆಲ್ಲರೂ ಯೇಸುವನ್ನು ಸಂಧಿಸಲು ಬಂದರು; ಅವರು ಅವನನ್ನು ನೋಡಿದ ಬಳಿಕ ತಮ್ಮ ಸೀಮೆಯನ್ನು ಬಿಟ್ಟುಹೋಗುವಂತೆ ಅವನನ್ನು ಬಹಳವಾಗಿ ಬೇಡಿಕೊಂಡರು.